ರೈತ ಗಜಲ್
ನಾವು ಬದುಕಿದ್ದೇವೆ ಕೇವಲ ಮೂಳೆ ಚಕ್ಕಳಗಳನು ಹೊತ್ತು
ಎಂದೂ ಮುಗಿಯದ ಹಸಿವಿಗೆ ಜೀವದ ಆಯುಷ್ಯವನು ತೆತ್ತು
ಬೇಸಾಯವೆಂದರೆ ಸುಮ್ಮನೆಯಲ್ಲ ನೆತ್ತರ ಬೆವರಾಗಿಸಬೇಕು
ಸಂಯಮದಿ ಕಾಯಬೇಕು ಕಾಲದೆದುರು ನೆಲದಿ ಬೀಜ ಬಿತ್ತು
ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ
ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು
ಬಿಸಿಲು ಮಳೆ ಗಾಳಿ ಚಳಿ ಎನ್ನದೆ ಕಲ್ಲಾಗಿ ದುಡಿಯಬೇಕು
ಕಾಯಬೇಕು ಹಗಲಿರುಳೆನ್ನದೆ ಬೇಲಿ ಹಾಕಿ ಹೊಲಕೆ ಸುತ್ತು
ಎಷ್ಟು ಸಂಪತ್ತಿದ್ದರೇನಂತೆ ಅನ್ನದ ಮುಂದೆ ಎಲಾ ನಿರ್ಜಿವವೆ
ಜಗದಿ ಸಾಯುತ್ತಿಹರು ಇಂದಿಗೂ ಮಂದಿ ಸಿಗದೆ ಒಂದು ತುತ್ತು
ಪಟ್ಟ ಶ್ರಮಕೆ ಪ್ರತಿಫಲವಿಲ್ಲದೆ ವಿಫಲವಾಗಿದೆ ಕೃಷಿಯ ಬದುಕು
ಭರವಸೆಲಿ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಬಂದಿದೆ ಜೀವಕ್ಕೆ ಕುತ್ತು
ಎಲ್ಲಿಂದ ಹೊರಟಿದ್ದೆವೋ ಇನ್ನೂ ಅಲ್ಲೇ ನಿಂತಿದ್ದೇವೆ ಅಸದ್
ನೇಗಿಲಯೋಗಿ ಇರುವುದೆ ಹಾಗೆ ಲೋಕದಿ ಬದುಕಿಯೂ ಸತ್ತು
***************************
ಜಬೀವುಲ್ಲಾ ಎಮ್. ಅಸದ್
ಅನ್ನವೇ ಧೈವ ಅನ್ನವೇ ಮಾನ್ಯ
ಜಗದೊಳಗೆ ರೈತನೇ ಪೂಜ್ಯ..