ಕವಿತೆ
ಬೀಜವೊಂದನು ಊರಬೇಕು
ವಿಜಯಶ್ರೀ ಹಾಲಾಡಿ
ಕಣ್ಣೀರಿಗೆ ದಂಡೆ ಕಟ್ಟಿ
ಬೀಜವೊಂದನ್ನು ಊರಬೇಕು
ಬೇರೂರಿ ಮಳೆ ಗಾಳಿ ಬಿಸಿಲಿಗೆ
ಮೈಯ್ಯೊಡ್ಡಿ ಚಿಗುರುವುದ
ಕಾಣುತ್ತ ಮೆಲು ನಗಬೇಕು
ಬಿಕ್ಕುಗಳ ಬದಿಗೊತ್ತಿ
ಹಕ್ಕಿ ನಾಯಿ ಬೆಕ್ಕುಗಳಿಗೆ
ತುತ್ತುಣಿಸಿ ಮುದ್ದಿಸಬೇಕು
ತಿಂದು ತೇಗಿ ಆಕಳಿಸಿ
ನಿದ್ದೆ ತೆಗೆವಾಗ ನೇವರಿಸಿ
ಎದೆಗವಚಿಕೊಳಬೇಕು
ನೋವುಂಡ ಜೀವಗಳ
ಕೈ ಹಿಡಿದು ನಡೆಯಬೇಕು
ಹೆಗಲಿಗೆ ಹೆಗಲಾಗಿ ಕರುಳಾಗಿ
ಮಮತೆ ತೇಯುತ್ತ
ಗಂಧ ಚಂದನವಾಗಬೇಕು
ಕಡು ಇರುಳುಗಳ ತೆರೆದಿಡುವ
ಹಿತ ಬೆಳಗುಗಳ ನೇಯುವ
ಬುವಿಗೆ ಮಂಡಿಯೂರಿ
ಹಸಿರಾಗಿ ತರಗೆಲೆಯಾಗಿ
ಮಣ್ಣಾಗಿ ಕೆಸರಾಗಿ ಕರಗಬೇಕು
ಕೊನೆ ಉಸಿರೆಳೆದ ದೇಹ
ಗೊಬ್ಬರವಾಗಿ ಹೂ ಅರಳಬೇಕು!
*********************************************************
ಚೆನ್ನಾಗಿದೆ ಕವಿತೆ