ಯುಗಾದಿ ವಿಶೇಷ ಬರಹ

ಯುಗಾದಿಯೆಂಬ

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ಹೇಳುವುದು ಪ್ರಮುಖವಾಗಿ ಭಾಷೆ,  ಆಚರಣೆ-ಸಂಪ್ರದಾಯಗಳು, ಉಡುಗೆ-ತೊಡುಗೆ, ಆಹಾರ ಮೊದಲಾದವುಗಳಿಗೆ ಸಂಬಂಧಿಸಿದಂತೆ . ಇಲ್ಲಿನ  ವೈವಿಧ್ಯತೆ ಎಷ್ಟೆಂದರೆ  ರಾಜ್ಯ ರಾಜ್ಯಗಳ ನಡುವಿನ ಮಾತಿರಲಿ, ಅಕ್ಕಪಕ್ಕದ ತಾಲೂಕುಗಳಲ್ಲಿ, ಊರುಗಳಲ್ಲೇ ಭಿನ್ನತೆಯನ್ನು ಕಾಣಬಹುದು.  

ಆದರೆ ಕಳೆದ 2 ದಶಕಗಳಿಂದ ಇಂಥ ಪ್ರಾದೇಶಿಕ ಭಿನ್ನತೆಗಳು ಬದಲಾಗುತ್ತಿವೆ  ಅಥವಾ  ಕೆಲವು  ಇಲ್ಲವಾಗಿವೆ. ಇದಕ್ಕೆ ಬಹುಮುಖ್ಯ ಕಾರಣ ದೊಡ್ಡ ಪಟ್ಟಣ ಹಾಗೂ ಶಹರಗಳಿಗೆ ಉದ್ಯೋಗ ಹಾಗೂ  ಜೀವನ ನಿರ್ವಹಣೆಯ ದಾರಿಗಳನ್ನು ಅರಸುತ್ತ ನಡೆದಿರುವ  ನಿರಂತರ ವಲಸೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತದ ಮಹಾನಗರಗಳಿಗೆ ಲಗ್ಗೆ ಇಟ್ಟ ಐಟಿಬಿಟಿ ಕಂಪನಿಗಳು ಈ ನಗರಗಳ ಬದುಕನ್ನು ಅನಾಮತ್ತಾಗಿ ಎತ್ತಿ ಪಲ್ಟಿ ಮಾಡಿದವು.  ವಿದೇಶಿ ಮೂಲದ ಕಂಪನಿಗಳ ಮೂಲಕ  ಹಣದ ಹೊಳೆ  ಇಲ್ಲಿ ಹರಿಯಲಾರಂಭಿಸಿದಂತೆ ಅದರ ಉಪ ಉತ್ಪನ್ನವಾಗಿ ಹಳ್ಳಿಯ, ಸಣ್ಣ ಪಟ್ಟಣಗಳ ಯುವಜನತೆ ನಗರಗಳಿಗೆ ಗುಳೆ ಬಂದಿತು. ಅವರ ಮೂಲ ಊರುಗಳಲ್ಲಿ ಮಧ್ಯವಯಸ್ಸು ಮೀರಿದವರಷ್ಟೇ ಇರುವುದು ಅಂದಿನ ವಾಸ್ತವವಾಗಿತ್ತು.

 ಇದರಿಂದ ದೊಡ್ಡ ಪ್ರಮಾಣದಲ್ಲಿ  ಆರ್ಥಿಕ, ರಾಜಕೀಯ ಬದಲಾವಣೆಗಳಾದರೆ, ಅದಕ್ಕಿಂತ ತೀವೃ ಪರಿಣಾಮಗಳು ಸಾಮಾಜಿಕವಾಗಿ ಕಂಡು ಬಂದವು. ಅದರಲ್ಲಿ ವಿಶೇಷವಾಗಿ  ನಮ್ಮ ಹಬ್ಬ- ಹರಿದಿನಗಳ ಆಚರಣೆಯಲ್ಲಾದ ಬದಲಾವಣೆಗಳು.

ನಮ್ಮ ಬಹುತೇಕ ಹಬ್ಬಗಳನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತ ಈಗ ದಶಕಗಳೇ ಕಳೆದಿವೆ. ನಗರಗಳಲ್ಲಿ   ಒದಗುವಿಕೆ, ಸಮಯಾವಕಾಶ, ರಜೆ, ಬಿಡುವು ಮೊದಲಾದ ವೈಯುಕ್ತಿಕವಾಗಿ ಮನೆಯ ಸದಸ್ಯರ ಅನುಕೂಲತೆಗಳಿಗೆ ತಕ್ಕಂತೆ ಹಿಗ್ಗುವ, ಕುಗ್ಗುವ ಅಥವಾ ಇಲ್ಲವಾಗುವ ಒಂದು ವಿಶೇಷ ದಿನ ಹಬ್ಬದ ದಿನ.  ಗ್ರಾಮೀಣ ಭಾಗಗಳಲ್ಲಿ ಅದು ಕಟ್ಟುನಿಟ್ಟಿನ  ಆಚರಣೆ , ಸಂಪ್ರದಾಯ, ರೀತಿ-ರಿವಾಜು, ಪರಂಪರೆಗಳ ಒಟ್ಟೂ ಮೊತ್ತ. ಅನೇಕ ಬಾರಿ  ಊರಿಗೆ ಊರೇ ಭಾಗವಹಿಸಿ ಸಂಭ್ರಮಿಸುವ ಊರ 

ಹಬ್ಬ. 

       ನಮ್ಮ ಸಂವಿಧಾನ  ‘ ಇಂಡಿಯಾ ದಟ್ ಈಸ್ ಭಾರತ್ ‘ ಎಂದು ನಮ್ಮ ದೇಶವನ್ನು ಗುರುತಿಸಿದೆಯಷ್ಟೇ. ಅದರಂತೆ ಇಂಡಿಯಾ ಆಧುನಿಕ, ನಗರ ಕೇಂದ್ರಿತ  ದೇಶವನ್ನು ಪ್ರತಿನಿಧಿಸಿದರೆ ಭಾರತ ಅದಕ್ಕೆ ತದ್ವಿರುದ್ಧವಾದ ಹಿಂದುಳಿದ, ಗ್ರಾಮೀಣ ದೇಶವನ್ನು ಪ್ರತಿನಿಧಿಸುತ್ತದೆಯೋ ಎಂಬಷ್ಟು ಕಂದಕ ಈ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಇತ್ತೀಚೆಗೆ  ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನಗರಗಳಲ್ಲಿ ಹಬ್ಬಗಳೆಂದರೆ ಜೋರಾದ ಹೂ-ಹಣ್ಣುಗಳ ಮಾರಾಟ, ಬೇಕರಿಗಳಲ್ಲಿ ತರಹೆವಾರು ಸಿಹಿತಿನಿಸುಗಳ ಜೋಡಣೆ, ಅಂಗಡಿಗಳಲ್ಲಿ ಭರಾಟೆಯ ಸೇಲ್, ಡಿಸ್ಕೌಂಟುಗಳ ಆಕರ್ಷಣೆ, ಹೊಟೆಲ್ಲುಗಳಲ್ಲಿ ಹಬ್ಬದಡಿಗೆಯ ಊಟ…ಎಲ್ಲವೂ ದುಬಾರಿ.  ಇಲ್ಲಿಗೆ ನಿಲ್ಲದೆ ಈ ಹಬ್ಬಗಳ ಸಡಗರ ದೇವಾಲಯಗಳಿಗೂ ವಿಸ್ತರಿಸಿದೆ. ಮೊದಲಾದರೆ ಕೆಲ ಹಬ್ಬಗಳಲ್ಲಿ ಮಾತ್ರ   ಅಭಿಷೇಕ, ಹೋಮಗಳು   ದೇವಾಲಯಗಳಲ್ಲಿ ನಡೆಯುತ್ತಿದ್ದವು. ಇಂದು ಹೆಚ್ಚವರಿ  ಗಳಿಕೆಗಾಗಿ  ಎಲ್ಲ ಹಬ್ಬಗಳಿಗೂ ಅವು ನಡೆಯುತ್ತವೆ.  ನಗರಗಳ ಹಬ್ಬಗಳೆಂದರೆ ದುಂದು, ಖರ್ಚು, ಹೆಚ್ಚು ಕಸ, ಮಾಲಿನ್ಯ ಎಂಬಂತಾಗಿದೆ  ಪರಿಸ್ಥಿತಿ. ಇದಕ್ಕೆ ಹಬ್ಬಗಳ ಮಾರನೇ ದಿನ ಬೀದಿಗಳನ್ನು  ಸ್ವಚ್ಛಗೊಳಿಸಲು ಹೆಣಗುವ  ಪೌರಕಾರ್ಮಿಕರ ಬವಣೆಯೇ ಸಾಕ್ಷಿ. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ಸರಳ,  ನೆಲಮೂಲ ಸಂಸ್ಕೃತಿಯ. ಆಚರಣೆಯಾದ,  ಪರಿಸರ ಸ್ನೇಹಿ ಹಬ್ಬಗಳು ನನಗಿಷ್ಟ. 

  ಭಾರತೀಯ ಋತುಮಾನಕ್ಕೆ ಅನುಗುಣವಾಗಿ ಬರುವ ಯುಗಾದಿ  ವರ್ಷದ ಮೊದಲ ಹಬ್ಬ. ಪ್ರಕೃತಿಯ ನಲಿವಿನಲ್ಲಿ  ನಾವೂ ಜೊತೆಯಾಗುವ ಹಬ್ಬ. ನಮ್ಮ ಎಲ್ಲ ಹಬ್ಬಗಳೂ ಪ್ರಕೃತಿಗೆ ಪೂರಕವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.  ಇದಕ್ಕೆ ಯುಗಾದಿಯೂ ಹೊರತಲ್ಲ. ವಸಂತನ ಆಗಮನವನ್ನು ಪ್ರಕೃತಿಯು ಹೊಸ ಹೂ-ಹಣ್ಣುಗಳನ್ನು ಒದಗಿಸುವುದರ ಮೂಲಕ ಸಂಭ್ರಮಿಸಿದರೆ,  ಅವುಗಳನ್ನು ಬಳಸಿ,  ವ್ಯಂಜನಗಳನ್ನು ತಯಾರಿಸಿ ಮನೆ-ಮಂದಿ, ಊರು-ಕೇರಿ ಸವಿದು ಸಂಭ್ರಮ ಪಡುತ್ತವೆ. ಅಂದು ತಯಾರಾಗುವ ಪದಾರ್ಥಗಳಾದರೂ ಎಂಥವು! 

 ನಾವು ಚಿಕ್ಕವರಿದ್ದಾಗ  ಮಾವಿನಕಾಯಿ ಚಿತ್ರಾನ್ನ,  ಮಾವಿನ ಉಪ್ಪಿನಕಾಯಿ, ಅಮಟೆಕಾಯಿಯ ಹುಳಿಸಿಹಿಪಲ್ಯ,  ಹೋಳಿಗೆ, ಕಡಲೆ ಬೇಳೆಯ ಸಿಹಿತಿನಿಸು ಮಾಲ್ದಿ, ಉದ್ದಿನ ಕಾಳಿನ ಷಂಡಿಗೆ ಇತ್ಯಾದಿ. ಜೊತೆಗೆ ಹದಮಜ್ಜಿಗೆ ಎಂದು ಕರೆಯಲ್ಪಡುವ ಮಸಾಲೆ ಮಜ್ಜಿಗೆ ಇವು ಮುಖ್ಯವಾದ ಕೆಲವು. ಇವನ್ನೆಲ್ಲ ಸಾಂಪ್ರದಾಯಿಕ ರುಚಿಕಟ್ಟಿನಲ್ಲೇ ಮಾಡುತ್ತಿದ್ದ ಅಮ್ಮನ ಕೈ ಅಡುಗೆಯ ರುಚಿಯೇ ರುಚಿ. ಇದನ್ನು ಅಪ್ಪ-ಅಮ್ಮ, ಅಕ್ಕ-ಅಣ್ಣಂದಿರೊಂದಿಗೆ  ಜೊತೆಯಾಗಿ  ನೆಲದ ಮೇಲೆ ಮಣೆಯಲ್ಲಿ ಕೂತು  ಹಿತ್ತಲ  ಬಾಳೆ ಎಲೆಯಲ್ಲಿ  ಉಂಡರೆ ಹಬ್ಬದ ಮಜವೇ ಬೇರೆ. 

   ಯುಗಾದಿ  ಹಬ್ಬದಲ್ಲಿ  ಮೊದಲು ಮನೆಯಲ್ಲಿ ಮಾಡುತ್ತಿದ್ದುದು ಹಿರಿಯರ ಪೂಜೆ. ಇದೊಂದು ಭಾವನಾತ್ಮಕ ಸಂದರ್ಭ. ನಾವು ಕಾಣದ ನಮ್ಮ ಅಜ್ಜ, ಮುತ್ತಜ್ಜಂದಿರನ್ನು ಸಾಂಕೇತಿಕವಾಗಿ ಹೊಸ ಬಟ್ಟೆ ಇಟ್ಟು, ಅವರಿಗೆ ದೊಡ್ಡ ಬಾಳೆ ಎಲೆಯಲ್ಲಿ ಎಡೆ ಇಟ್ಟು ಮನೆಯ ಎಲ್ಲರೂ ಆರತಿ ಮಾಡಿ ಕೈಮುಗಿಯುವಾಗ ಗಂಟಲುಬ್ಬಿ ಬರುವಂತೆ ದುಃಖ. ಕಣ್ಣರಿಯದಿದ್ದರೂ ಕರುಳು ಅರಿಯುವ ಬಾಂಧವ್ಯ. ಆ ಕ್ಷಣಕ್ಕೆ ಸಂಭ್ರಮವೆಲ್ಲ  ಮರೆಯಾಗಿ ಅಲ್ಲಿ ನೆಲೆಸುತ್ತಿದ್ದುದು ಗಂಭೀರ ಮೌನ.  ಇಂಥ ಆಚರಣೆಗಳು ನನ್ನನ್ನು ಸೋಲಿಸುತ್ತವೆ. ಬದುಕಿನ ವಿರಾಟ್ ದರ್ಶನವಾಗುವುದು ಇಂಥ ನಾಜೂಕಿನ ಸಂದರ್ಭದಲ್ಲಿ. ಆಗ ಚಿಕ್ಕವರಾದ ನಾವು ಧರಿಸುತ್ತಿದ್ದ ಹೊಸ ಬಟ್ಟೆಯ ಮೋಹಕ್ಕೂ ಮೀರಿ ಕಾಣದ ಹಿರಿಯರ ಅವ್ಯಕ್ತ ಇರುವು ನಮ್ಮನ್ನು ಹಿಡಿದು ಕಂಪಿಸುತ್ತಿತ್ತು. ಅಂದಿನ ದಿನವಿಡೀ ಕೆಲಸದ ಹೈರಾಣು ಬದುಕಿನಲ್ಲಿ ಇಂಥ ಒಂದು ದಿನ ಮರೆಯದೇ ಹಿರಿಯರನ್ನು ನೆನೆಯುವ ಆ ನಿರಾಡಂಬರ ಸಂಪ್ರದಾಯದಲ್ಲಿ  ನನಗೆ ಅಳಿದ ಮೇಲೂ ಉಳಿದ, ಉಳಿಯಲೇಬೇಕಾದ ಪ್ರೀತಿಯ  ದ್ಯೋತಕವಷ್ಟೇ ಕಾಣುತ್ತದೆ.  ದೇವರ  ಕೋಣೆಯಲ್ಲಿ  ಇಷ್ಟು ನಡೆದು ಬಾಗಿಲಾಚೆ ದಾಟಿದರೆ ಮತ್ತೆ ನಾವು ಚಿಮ್ಮುವ ನಡಿಗೆಯ ಮಕ್ಕಳೇ. ನನ್ನ ಅಮ್ಮ,” ಅಜ್ಜ- ಅಮ್ಮನಿಗೆ ಪೂಜೆ ಮಾಡ್ರಿ” ಎಂದು ಮೆಲುದನಿಯಲ್ಲಿ ನೀಡುತ್ತಿದ್ದ ಹುಕುಂ ಹಿಂದೆ ಅವರ ಬಗ್ಗೆ ಇದ್ದ ಗೌರವಾದರಗಳ ಭಾವ ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ. 

ಇಂಥ ಅಮ್ಮ ನಮಗೆಂದೂ ಕಹಿ ಬೇವನ್ನು ತಿನ್ನಿಸಿಯೇ ಇರಲಿಲ್ಲ. ಮಾಲ್ದಿಯಲ್ಲಿ ಬೇವಿನ ಹೂಗಳನ್ನು ಹಾಕಿ ತಿನ್ನಲು ಕೊಡುತ್ತಿದ್ದರು. ಮಕ್ಕಳ  ಬದುಕಲ್ಲಿ ಸಿಹಿಯ ಪಾಲೇ ಹೆಚ್ಚಿರಲಿ ಎಂಬುದು ಎಲ್ಲ ತಾಯಂದಿರ ಹಾರೈಕೆಯಲ್ಲವೇ?

ಅತ್ತೆಯ ಮನೆಯಲ್ಲಿ ಹಬ್ಬದ ಆರಂಭ ಕಹಿಬೇವು- ಬೆಲ್ಲವನ್ನು ತಿನ್ನುವುದರೊಂದಿಗೆ! ಇದನ್ನು ವಿಧಿಯೆನ್ನಿ ಬೇಕಾದರೆ. ಬದುಕಲ್ಲಿ ಕಹಿ- ಸಿಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ತತ್ವದ ಈ ಆಚರಣೆ ನನಗೆ ಇಷ್ಟವಾಗಿ ಮುಂದುವರೆಸಿದೆ. ಪ್ರತಿ ವರ್ಷ ಬೇವಿನ ಎಲೆಯ ಚಿಕ್ಕ ತುಣುಕನ್ನು ತಿಂದು ಮೈ ಮುಖ ಹಿಸುಕುವ ಮಗನಿಗೆ ಜೀವನ ಹೀಗೆ. ಕಹಿಯನ್ನು ಅನುಭವಿಸಲೇಬೇಕು ಎಂದು ಹೆಳುತ್ತೇನೆ. ಈ ಸಂಪ್ರದಾಯ ಬಿಟ್ಟರೆ ಅಂಥ ಮುತ್ತಿನಂಥ ಮಾತು ಹೇಳುವ ಪ್ರಮೇಯವೆ ಬರದಲ್ಲ! 

ನಮಗೆ ಯುಗಾದಿಯ ಇನ್ನೊಂದು    ವಿಶೇಷವೆಂದರೆ ಸಂಜೆಯ  ಚಂದ್ರದರ್ಶನ. ನಮ್ಮ ಮನೆಯಿದ್ದ ಉದ್ದನೆಯ ಮುಖ್ಯ ರಸ್ತೆಯ ಉದ್ದಕ್ಕೂ ಕೈಯಲ್ಲಿ ಊದಿನಕಡ್ಡಿ ಹಚ್ಚಿ ಹಿಡಿದುಕೊಂಡು ಪೂರ್ವ ಆಗಸದತ್ತ ಮುಖ ಮಾಡಿ ನಿಂತ ಸಾಲು ಸಾಲು ಜನ. ಪಾಡ್ಯದಂದು ತೆಳು ಗೆರೆಯಂತಿರುವ ಚಂದ್ರ ಸುಲಭವಾಗಿ ಗೋಚರಿಸಲಾರ. ಶುಭ್ರ ಆಕಾಶವಿದ್ದರೆ ಚುರುಕು ಕಣ್ಣುಗಳು ಬೆಳ್ಳಿಯ ಕೂದಲೆಳೆಯನ್ನು  ಗುರುತಿಸಿದಾಕ್ಷಣ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಲ್ಲಿ ಮಿಂಚಿನ ಸಂಚಾರ ವಾಗುತ್ತಿತ್ತು. ಆಗ ಎಲ್ಲರ ತೋರು ಬೆರಳುಗಳೂ ಅದೇ ದಿಕ್ಕಿಗೆ ಚಾಚಿರುತ್ತಿದ್ದವು. ಕಂಡವರ ಮುಖದಲ್ಲಿ ಅರಳುತ್ತಿದ್ದ ಸಂತಸಕ್ಕೆ ಪಾರವಿರಲಿಲ್ಲ. ಕಾಣದಿದ್ದವರಲ್ಲಿ ಕೆಲವರು ಸಪ್ಪಗಾಗಿ ಒಪ್ಪಿಕೊಂಡರೂ ಕೆಲವರಿಗೆ ಕಾಣದಿದ್ದನ್ನು ಒಪ್ಪಿಕೊಳ್ಳಲಾಗದ ಬಿಗುಮಾನ. ಬೀದಿಯಲ್ಲಿ ಪರಸ್ಪರ  ಮಾತನಾಡದವರೂ ಚಂದ್ರನ  ಕಾಣಲು, ಕಾಣಿಸಲು ಒಂದಾಗುತ್ತಿದ್ದ ಅಪರೂಪದ ಕ್ಷಣವದು. ಬಹಳ ಹೊತ್ತಿನವರೆಗೂ ಅಲ್ಲಿ ಚಂದ್ರದರ್ಶನದ ಸುತ್ತಲೇ ಮಾತುಕತೆಗಳು ನಡೆಯುತ್ತಿದ್ದವು. ಕಳೆದ ಕೆಲ ವರ್ಷಗಳ ಚಂದ್ರದರ್ಶನದ ನೆನಪುಗಳು ತಾಜಾ ಆಗುತ್ತಿದ್ದವು. ಮತ್ತೆ ಇಂಥ ಭೇಟಿಗೆ ಒಂದು ವರ್ಷ ಕಾಯಬೇಕಲ್ಲ ಎಂಬ ಕಾರಣಕ್ಕೋ ಏನೋ ಯಾರಿಗೂ ಬೇಗನೇ ಅಲ್ಲಿಂದ ಕದಲಲು ಆಗುತ್ತಿರಲಿಲ್ಲ. ಕೊನೆಗೆ ಹಿರಿಯರೊಬ್ಬರು ನಡೀರಿ ದೇವರಿಗೆ ದೀಪ ಹಚ್ಚಬೇಕು ಎಂದಾಗ ಮತ್ತೊಮ್ಮೆ ಗಡಿಬಿಡಿ ಶುರುವಾಗುತ್ತಿತ್ತು. ಹಕ್ಕಿಗಳು ಗೂಡು ಸೇರುವಾಗಿನ ಕಲಕಲ  ಮನೆಯವರೆಗೂ ಸಂಚರಿಸಿ ನಿಧಾನಕ್ಕೆ ಬೀದಿ ಮೊದಲಿನಂತಾಗುತ್ತಿತ್ತು. ಸಂಜೆ ಮನೆಯ ಹಿರಿಯರಿಗೆ ನಮಸ್ಕರಿಸುವುದರೊಂದಿಗೆ  ಹಬ್ಬ ಮುಗಿಯುತ್ತಿತ್ತು. 

ಈ ಒಂದು ದಿನಕ್ಕಾಗಿ ವಾರಗಳಿಂದ ಆರಂಭವಾಗುತ್ತಿದ್ದ ಮನೆಯ ಸ್ವಚ್ಛತೆ, ಅಟ್ಟದ ಧೂಳು ಕೊಡವುವುದು, ತಿಂಡಿ- ತಿನಿಸುಗಳನ್ನು ಮಾಡಲು, ತುಂಬಲು ಬೇಕಾದ ಪಾತ್ರೆಗಳನ್ನು ತೊಳೆಯುವುದು, ಸಾಮಾನುಗಳನ್ನು ಪಟ್ಟಿ ಮಾಡಿಕೊಂಡು ಶಾನಭಾಗರ ಅಂಗಡಿಗೆ ಹೋಗಿ ಕೊಟ್ಟು ಬರುವುದು, ನಸುಕಿನಲ್ಲೇ ಬಂದು ಬಾಗಿಲಿಗೆ ಹೂ ಸಿಕ್ಕಿಸಿ ಅದೃಶ್ಯವಾಗುವ   ವರ್ತನೆಯ ಹೂ ಮಾರುವವಳಿಗೆ ಹಬ್ಬಕ್ಕೆ ಎಲ್ಲರಿಗೂ ಒಂದೊಂದು ದಂಡೆ ಮಲ್ಲಿಗೆ ಹೂ ಇರಬೇಕು ಎಂದು ಹೇಳಲು  ಹಬ್ಬಕ್ಕೆ ಎರಡು ದಿನ ಮೊದಲು ಬೇಗ ಎದ್ದು  ಕಾದು ಕುಳಿತುಕೊಳ್ಳುವುದು, ಮನೆಯ ಮುಂಭಾಗದ ಅಂಗಳ ಸಾರಿಸಿ ಯಾವ ರಂಗೋಲಿ ಇಡಬೇಕು ಎಂದು ರಂಗೋಲಿ  ಬಿಡಿಸಿ ಸಂಗ್ರಹಿಸಿಟ್ಟುಕೊಂಡ ಪುಸ್ತಕವನ್ನು ಗಣಿತವೋ, ವಿಜ್ಞಾನವೋ ಅಭ್ಯಾಸ ಮಾಡಿದಂತೆ ಬಿಡಿಸಿ ಬಿಡಿಸಿ ಕಲಿತುಕೊಳ್ಳುವುದು….ಮುಂತಾಗಿ ಮನೆಯ ಎಲ್ಲರಿಗೂ ಕೆಲಸವೋ ಕೆಲಸ !! 

ಹಬ್ಬದ ದಿನ  ಬೆಳಿಗ್ಗೆ ಬೇಗನೇ ಎದ್ದು   ಕೊಟ್ಟಿಗೆಯಲ್ಲಿದ್ದ ಸಗಣಿಯನ್ನು ಬಾಚಿ  ಹಳೆಯ ಬಕೀಟಿಗೆ ತುಂಬಿ ನೀರು ಸುರುವಿ ಕೈಯಾಡಿಸುತ್ತ ಅಂಗಳ ಸಾರಣೆಗೆ ಬೇಕಾಗುವ ಹದಕ್ಕೆ ಗಂಜಲ ತಯಾರಿಸುವುದನ್ನು ನಿಷ್ಠೆಯಿಂದಲೇ ಮಾಡುವುದು. ಅದರ ವಾಸನೆಗೆ ಯಾವತ್ತೂ ‘ ಇಶ್ಯಿ’  ಎನಿಸಲೇ ಇಲ್ಲ. ಅಂಗಳದ ಒಂದು ತುದಿಯಿಂದ ತಂಬಿಗೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕುತ್ತ ಕಡ್ಡಿಹಿಡಿಯಲ್ಲಿ  ನಯವಾಗಿ ಕಸಬರಿಗೆಯ ಒಂದು ಕಡ್ಡಿಯ ಗುರುತೂ ಬರದಂತೆ  ಹರಡುತ್ತ ಅಂಗಳ ಪೂರ್ತಿ ಬಳಿದರೆ ನನಗೂ, ಅಮ್ಮನಿಗೂ ಖುಷಿ. ಇವೆಲ್ಲ ನಾವು ನೋಡಿ ಕಲಿತ ಪುಟ್ಟ ಜವಾಬ್ದಾರಿಗಳು. ಅದಕ್ಕಾಗಿ ಅಮ್ಮನ ಮುಖದಲ್ಲಿ ಆ ಸಂತಸದ ನಗು ಉಕ್ಕುತ್ತಿತ್ತು ಎಂದು ಈ ತಾಯಿಗೆ ಈಗ  ಅರಿವಾಗಿದೆ. 

ಅದೆಂಥ ತುಂಬು ಬದುಕು!!

ಈಗ ಬದಲಾಗಿದೆ ಎಂದೆನಲ್ಲವೇ? ಅಡುಗೆಗಳು ಬಹುತೇಕ  ಹಾಗೇ ಇವೆ. ಮಾಲ್ದಿ ಹೆಚ್ಚು ಇಷ್ಟ ಪಡದ ಕಾರಣ ಮೆನುವಿನಿಂದ ಕಣ್ಮರೆಯಾಗಿದೆ. ಹೊಸತಾಗಿ ಕೆಲವು ಸೇರ್ಪಡೆಯಾಗಿವೆ.  ಈಗಲೂ ಸಂಜೆ ಊದಿನಕಡ್ಡಿ ಹಚ್ಚಿಕೊಂಡು  ಟೆರೇಸಿನ ಮೇಲೆ ಹೋಗಿ ಚಂದ್ರನನ್ನು ಹುಡುಕುತ್ತೇನೆ. ಕಂಡರೆ ಎಲ್ಲ ಮೊದಲಿನಂತೆ..ಮಗ ಅಣಕಿಸಿದಾಗ ಹೇಳುತ್ತೇನೆ. ಇದು ನಮ್ಮ ಪರಂಪರೆಯ ಭಾಗ. ಬಿಟ್ಟರೆ ಕಳೆದು ಹೋಗಿಬಿಡುತ್ತದೆ. ಅನುಸರಿಸಿದರೆ ಕಳೆದ ಕಾಲವನ್ನು ಕಟ್ಟಿ ಹಾಕಿದ ಸಂತೋಷ ಆ ಕ್ಷಣಕ್ಕೆ ಆಗುತ್ತದೆ.  ಹೆಚ್ಚೇನಿಲ್ಲ.  ಇದನ್ನು ವ್ಯಾಮೋಹವೆನ್ನಿ. ಗೊಡ್ಡು ಎಂದು ಮೂಗು ಮುರಿಯಿರಿ. ಬೇಸರವಿಲ್ಲ. ಹೊಟೆಲ್ಲುಗಳಲ್ಲಿ ದುಬಾರಿ ಬಿಲ್ ತೆತ್ತು ಬೀಗುವ ಹಬ್ಬಕ್ಕಿಂತ ಇಂಥ ಬಾಗುವ ಹಬ್ಬವೇ ನನಗೆ ಪ್ರಿಯ.

 ಅಡುಗೆಯನ್ನು ಹಂಚಿ ತಿನ್ನುವುದು ಹಳ್ಳಿಗಳ, ಸಣ್ಣ ಪಟ್ಟಣಗಳ ಸುಂದರ ಅಭ್ಯಾಸ. ಅದೇ ನೆವದಲ್ಲಿ ಹಾಲು- ಹೈನು ಸಮೃದ್ಧವಾಗಿ ನೀಡುವ ಆಕಳಿಗೆ ಒಂದು ಎಡೆ, ಮನೆ ದೇವರಿಗೆ ಒಂದು, ಹಿತ್ತಲಲ್ಲಿರುವ ಭೂತನ/ ಚೌಡಿ ಕಟ್ಟೆಗೆ ಒಂದು, ಊರು ದೇವರಿಗೆ ಒಂದು, ಹಿರಿಯರಿಗೆ ಒಂದು, ಹೊಸ್ತಿಲುಗಳಿಗೆ ಒಂದು..ಹೀಗೆ ಎಲ್ಲರನ್ನೂ- ಎಲ್ಲವನ್ನೂ ನೆನೆಯುವ ಸತ್ಸಂಪ್ರದಾಯವನ್ನು ಅಮ್ಮ ಅನುಸರಿಸಿಕೊಂಡು ಬಂದಿದ್ದರು.. ಇದನ್ನು ಬಿಡಲಾರದ ನಾನು ಮನೆಗೆ ಹಾಲು ಕೊಡುವವರಿಗೆ, ಅವರ ಮನೆಯ ಆಕಳಿಗೆ, ಎದುರು ಇರುವ ದೇವಸ್ಥಾನಕ್ಕೆ ಕೊಡುತ್ತೇನೆ. ಅಂದು ದೇವಾಲಯ ತುಂಬಿ ತುಳುಕುವುದರಿಂದ ಪಾಪ ಭಟ್ಟರಿಗೆ ಮನೆಗೆ ಹೋಗಲೂ ಪುರಸೊತ್ತಿರುವುದಿಲ್ಲ. ಪ್ರತಿ ಹಬ್ಬದಲ್ಲೂ ಅವರಿಗೆ ನಮ್ಮ ಮನೆಯದೇ ಊಟ. ಜೊತೆಗೆ ದೇವಾಲಯದ ಸುತ್ತಲೂ ಇರುವ ಉದ್ಯಾನ ನೋಡಿಕೊಳ್ಳುವ ಮಾಲಿಗಳಿಗೂ.

 ಸಂಪ್ರದಾಯ ಗೊಡ್ಡಲ್ಲ. ಅದನ್ನು ನಾವು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗಬಹುದು. ಹಬ್ಬದ ನೆವದಲ್ಲಿ ಇಷ್ಟೆಲ್ಲ ನೆನಪಾಗಿ ಮನಸ್ಸು ಒದ್ದೆಯಾಯಿತು. ಹೊಸ ವರ್ಷ ದುಡಿಯುವ ಕೈಗಳಿಗೆ ಬಲವನ್ನೂ, ಉಣ್ಣುವ ಹೊಟ್ಟೆಗೆ ತಂಪನ್ನು, ತುತ್ತಿಡುವ ಕೈಗೆ ಸಮೃದ್ಧಿಯನ್ನು ನೀಡಲಿ.

****** ***************************************************************

ನೂತನ ದೋಶೆಟ್ಟಿ

4 thoughts on “

  1. ಒಳನೋಟದ ಬರಹ.

    ಇಂಡಿಯಾ, ಭಾರತ…ಹಾಗೂ ಹಬ್ಬಗಳು..

    ಇಂಡಿಯಾ ನಗರ ಹಬ್ಬದ ಸಂಭ್ರಮ ಕಳೆದುಕೊಂಡಿದೆ.‌
    ಗ್ರಾಮೀಣ ಭಾರತ ಹಬ್ಬಗಳನ್ನು ಉಸಿರಾಡುತ್ತಿದೆ.

    ….ಹಲವು ಚಿತ್ತಗಳನ್ನು ಹರಡಿ , ಬಿಡಿಸಿಟ್ಟ ಭಾರತ ಈ ಲೇಖನದಲ್ಲಿದೆ.

Leave a Reply

Back To Top