ಅಂತರ್ಜಾಲ ಸಂಗಾತಿ
ಡಾ.ಸುಮತಿ ಪಿ.
“ಸಾಮಾಜಿಕ ಜಾಲತಾಣ ಹಾಗೂ ಮಕ್ಕಳು”


ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದಲ್ಲಿ ತಂತ್ರಜ್ಞಾನ ಬಹಳ ವೇಗವಾಗಿ ಪ್ರಗತಿಹೊಂದುತ್ತಿದೆ. ಬದಲಾವಣೆಯ ವೇಗದಲ್ಲಿ ಸಮಾಜವು ನಾಗಲೋಟದಿಂದ ಓಡುತ್ತಿದೆ. ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಪ್ರಗತಿಯಿಂದಾಗಿ ಪ್ರಬಲವಾದ ಜಗತ್ತೊಂದು ಸೃಷ್ಟಿಯಾಗುತ್ತಿದೆ ಎಂಬ ಭ್ರಮೆಯಲ್ಲಿ ನಾವಿಂದು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತ ಬದುಕುತ್ತಿದ್ದೇವೆ.ನಾವೀಗ ಸೋಶಿಯಲ್ ಮೀಡಿಯಾ ಯುಗದಲ್ಲಿ ಸಾಗುತ್ತಿದ್ದೇವೆ
ಒಂದಿಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನಾವು ಅವಲಂಬಿಸಿರುತ್ತೇವೆ. ಮಕ್ಕಳಂತೂ ಈಗೀಗ ಪ್ರತಿಯೊಂದುಕ್ಕೂ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ರೂಢಿಯಾಗಿಬಿಟ್ಟಿದೆ.ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಜಾಲತಾಣಗಳು ಮಕ್ಕಳನ್ನು ಜಗತ್ತಿಗೆ ತೆರೆದುಕೊಳ್ಳಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ, ಆದರೆ ಅವುಗಳನ್ನು ಅತಿಯಾಗಿ ಬಳಸುವುದರಿಂದ ನಿದ್ರಾಹೀನತೆ, ಮಾನಸಿಕ ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಮಕ್ಕಳ ಒಳಗೊಳ್ಳುವಿಕೆ ಬಹಳಷ್ಟು ಕಂಡು ಬರುತ್ತಿದೆ.ಈಗ ದೊಡ್ಡವರಷ್ಟೇ ಅಲ್ಲದೆ, ಸಣ್ಣ ಮಕ್ಕಳು ಸಹ ಸ್ಮಾರ್ಟ್ ಫೋನ್ ಚಟಕ್ಕೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ದಿನೆ ದಿನೆ ಹೆಚ್ಚಾಗುತ್ತಾ ಇದೆ. ದಿನದಲ್ಲಿ ಹೆಚ್ಚಿನ ಸಮಯವನ್ನು ಸಣ್ಣ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಕಳೆದು, ತಾವು ಮಾಡಬೇಕಾದ ಕೆಲಸವನ್ನು, ಓದಬೇಕಾದ ಪಾಠವನ್ನು ಮರೆತು ಬಿಡುತ್ತಿದ್ದಾರೆ.

ಪ್ರಸ್ತುತ ಪೀಳಿಗೆಯ ಮಕ್ಕಳು ಅಂತರ್ಜಾಲದ ಮಾಯೆಗೆ ಸಿಕ್ಕು ತಮ್ಮ ಸಹಜವಾದ ಸ್ವ ಸಾಮರ್ಥ್ಯವನ್ನು ಕಳೆದುಕೊಂಡು ತಾಂತ್ರಿಕ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳುವುದರ ಬದಲು, ಜಾಲತಾಣವನ್ನು ಜಾಲಾಡಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯ ಮಕ್ಕಳು ಸಹ ಮೊಬೈಲ್ಗಳ ಮೂಲಕ,ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದುಕೊಂಡು, ಜಾಲತಾಣಗಳ ಮೂಲಕ ಪರಿಚಯ, ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿ, ಮಾತಿನಲ್ಲಿ ಮುಳುಗಿ, ಓದುವುದನ್ನು ಬಿಟ್ಟು, ತಮ್ಮ ಜೀವನದ ಗುರಿಯನ್ನು ಮರೆತು, ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ನಾವಿಂದು ಕಾಣುವ ಕಳವಳಕಾರಿಯಾದ ಅಂಶವಾಗಿದೆ.ಹಾಗಾಗಿ ಜ್ಞಾನವನ್ನು ಗಳಿಸಿಕೊಳ್ಳಲು ಪೂರಕವಾದ ಸಾಮಾಜಿಕ ಜಾಲತಾಣವು ಇಂದು ಅಪಾಯಕಾರಿ ಹಂತವನ್ನು ತಲುಪಿರುವುದು ಯೋಚಿಸತಕ್ಕ ಗಂಭೀರ ವಿಚಾರವೇ ಆಗಿದೆ
ಸಣ್ಣ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ,ಅಷ್ಟೇ ಮೃದು ಹಾಗೂ ಚಂಚಲವಾದದ್ದು. ಸಾಮಾಜಿಕ ಜಾಲತಾಣಗಳು
ಮಕ್ಕಳ ಆಲೋಚನೆ ಮತ್ತು ಸ್ವಭಾವವನ್ನು ಬಹಳ ಬೇಗನೆ ಸುಲಭವಾಗಿ ಬದಲಾಯಿಸಬಹುದು. ಮಕ್ಕಳನ್ನು ಸೆಳೆಯಬಹುದು. ಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ,ಜೀವನ ಎಲ್ಲವೂ ಪರಿವರ್ತನೆಯ ಹಾದಿಯಲ್ಲಿಯೇ ಸಾಗುತ್ತಿದೆ.ಸ್ವಾಭಾವಿಕವಾದ ಅಧ್ಯಯನದಿಂದ ತಮ್ಮತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳು ಕಾರಣವಾಗುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳ ಮನಸ್ಸು ಘಾಸಿಗೊಳ್ಳುತ್ತಿದೆ, ವಿದ್ಯಾಭ್ಯಾಸದ ಮೇಲೂ ಪ್ರಭಾವ ಬೀರುತ್ತಿದೆ. ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಾನಸಿಕವಾಗಿಯೂ ಒತ್ತಡವನ್ನು ಅನುಭವಿಸಿ ಕೆಲವೊಮ್ಮೆ ವಿಪರೀತವಾದಾಗ, ಆತ್ಮಹತ್ಯೆಯ ಹಾದಿಯನ್ನು ಮಕ್ಕಳು ಹಿಡಿಯುತ್ತಿದ್ದಾರೆ ಎಂಬುದು ಬಹಳ ಗಂಭೀರವಾಗಿ ಯೋಚಿಸಲೇಬೇಕಾದ ವಿಷಯವಾಗಿದೆ.
ಸಣ್ಣ ಮಕ್ಕಳಿಗೆ ಸೋಶಿಯಲ್ ಮೀಡಿಯಾಗಳನ್ನು ಬಳಸುವುದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿರುವುದರಿಂದ ಅದರಿಂದ ಅನೇಕ ಅಪಾಯಗಳು ಉಂಟಾಗುವ ಸಂಭವವೇ ಜಾಸ್ತಿ. ತಮಗೆ ಅರಿವು ಇಲ್ಲದಂತೆ ತಾವೇ
ಲೈಂಗಿಕ ವಿಷಯಗಳ ಕಡೆಗೆ ಸೆಳೆಯಲ್ಪಡಬಹುದು. ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಬಹುದು.
ಸಣ್ಣ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಬೆಳೆಸಿ, ಯೌವ್ವನದ ಹಾದಿಯಲ್ಲಿ ದಾರಿ ತಪ್ಪಿ, ಬದುಕನ್ನು ಹಾಳು ಮಾಡಿಕೊಳ್ಳುವ ಸಾಕಷ್ಟು ಉದಾಹರಣೆಗಳನ್ನು ನಾವಿಂದು ಕಾಣುತ್ತೇವೆ, ಕಾಣುತ್ತಿದ್ದೇವೆ . ಪುಸ್ತಕ ಓದಿ, ಮನಸ್ಸು ಬುದ್ಧಿಯನ್ನು ವಿಕಸನಗೊಳಿಸಬೇಕಾದ ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ಹದಿಹರೆಯದವರಂತೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿ, ತಮ್ಮ ಬಾಳನ್ನು ಹಾಳು ಮಾಡಿಕೊಂಡಂತಹ ಎಷ್ಟೋ ದುರ್ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ನೋಡಿದಾಗ ಮನಸ್ಸಿಗೆ ಆಘಾತವಾಗುತ್ತದೆ.
ಸಾಮಾಜಿಕ ಜಾಲತಾಣ ಎಂಬುದು ಒಂದು ಅಂಟುರೋಗದಂತೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಮತ್ತು ವಿವಿಧ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು. ಇದಲ್ಲದೆ ಸಮಾಜದ
ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. ಅದೇ ರೀತಿಯಲ್ಲಿ ಜಾಲತಾಣಗಳ ಅತಿಯಾದ ಬಳಕೆಯು ನಿಜ ಜೀವನದ ಸಂವಹನವನ್ನು ಕಡಿಮೆ ಮಾಡುತ್ತದೆ,
ಶಾಲೆಗೆ ಹೋಗುತ್ತಿರುವ ಮಕ್ಕಳು ಅಂತರ್ಜಾಲದ ಮೇಲೆ ಅವಲಂಬಿತವಾಗಿ, ಮಾನಸಿಕ ಖಿನ್ನತೆ, ಆತಂಕ,ಒತ್ತಡಕ್ಕೆ ಒಳಗಾಗಿ ಇಡೀ ರಾತ್ರಿ ನಿದ್ರೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ಬಚಾವ್ ಮಾಡಬೇಕಾದರೆ ಪೋಷಕರು ಹಾಗೂ ಮಕ್ಕಳ ತಂದೆ ತಾಯಿ ಪ್ರತಿನಿತ್ಯ ತಮ್ಮ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಗಮನ ಹರಿಸುತ್ತಾ ಇರಬೇಕು. ಮಕ್ಕಳು ಹೆಚ್ಚಾಗಿ ಮೊಬೈಲನ್ನು ಬಳಸದಂತೆ ನಿಗಾ ವಹಿಸಬೇಕು.ಮಕ್ಕಳು ಅಂತರ್ಜಾಲದ ಮೇಲೆ ಸಂಪೂರ್ಣ ಅವಲಂಬಿತವಾಗಿ, ಕೊನೆಗೆ ಅದು ಗೀಳಾಗಿ,ಮಾನಸಿಕ ಖಿನ್ನತೆ, ಆತಂಕ,ಒತ್ತಡಕ್ಕೆ ಒಳಗಾಗಿ ಇಡೀ ರಾತ್ರಿ ನಿದ್ರೆ ಹಾಳು ಮಾಡಿಕೊಳ್ಳುತ್ತಾರೆ.ಮಾನಸಿಕ ಖಿನ್ನತೆಯ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡುತ್ತಿದ್ದಾರೆ ಎಂದಾದರೆ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.ಆದ್ದರಿಂದ ಪೋಷಕರು ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತ, ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನು ಮಕ್ಕಳ ಕೈಗೆ ಸಿಗದಂತೆ ದೂರ ಇಟ್ಟು.
ಮಕ್ಕಳ ಜೊತೆ ಸಮಯ ಕಳೆಯಲೇಬೇಕು. ಮಕ್ಕಳಿಗೂ ಕೂಡ ಅವರು ಬಳಕೆ ಮಾಡುವ ಫೋನ್ ಪಕ್ಕಕ್ಕೆ ಇಟ್ಟು ತಮ್ಮ ಜೊತೆ ಮಾತನಾಡುವಂತೆ ಮಾಡಬೇಕು.
ಪೋಷಕರು ಸಹ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು, ಮಕ್ಕಳು ಯಾವ ಜಾಲತಾಣಗಳನ್ನು ನೋಡುತ್ತಿದ್ದಾರೆ, ಯಾವ ಗೇಮ್ ಆಡುತ್ತಿದ್ದಾರೆ ಎನ್ನುವುದರ ಬಗ್ಗೆ ಅರಿತು, ತಪ್ಪು ದಾರಿ ತುಳಿಯುತ್ತಿದ್ದಾರೆ ಎಂದು ಅನ್ನಿಸಿದ ತಕ್ಷಣದಲ್ಲಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು.ಮಕ್ಕಳನ್ನು ಹೆಚ್ಚು ಹೊತ್ತು ಆನ್ಲೈನ್ ನಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ,ತಮ್ಮ ಜೊತೆ, ಕುಟುಂಬದವರ ಜೊತೆ, ಗೆಳೆಯರ ಜೊತೆ ಬೆರೆತು,ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು.ಹೆಚ್ಚು ಹೊತ್ತು ಆನ್ಲೈನ್ನಲ್ಲಿ ಕಾಲ ಕಳೆದರೆ ಮಕ್ಕಳಿಗೆ ಎದುರಾಗುವ ಆರೋಗ್ಯದ ಅಡ್ಡ ಪರಿಣಾಮಗಳನ್ನು ತಿಳಿಸಿ ಹೇಳಿ, ಮಕ್ಕಳು ಹೆಚ್ಚು ಜಾಗರೂಕರಾಗಿರುವಂತೆ ಮಾಡಬೇಕು. ಒಟ್ಟಿನಲ್ಲಿ ಪೋಷಕರು ಹಾಗೂ ಹೆತ್ತವರು, ಜೊತೆಗೆ ಶಿಕ್ಷಕರು ಕೂಡ ಸಾಮಾಜಿಕ ಜಾಲತಾಣಗಳ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದು, ಮಕ್ಕಳ ಮೇಲೆ ಸದಾ ಹದ್ದಿನ ಕಣ್ಣುಗಳನ್ನಿಟ್ಟು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಇನ್ನಾದರೂ ನಾವು ಎಚ್ಚೆತ್ತು ನಮ್ಮ ಅತ್ಯಮೂಲ್ಯ ಆಸ್ತಿಯಾದ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳದಂತೆ ಎಚ್ಚರವಹಿಸೋಣವೇ !!!
ಡಾ.ಸುಮತಿ ಪಿ



