ನುಡಿ ಕಾರಣ

ನುಡಿ ಕಾರಣ

ಗೋನವಾರ ಕಿಶನ್ ರಾವ್

[03:58, 10/04/2021] GONAVARA KISHAN: The Kannada language …..has hardly received from the Europian scholars the recognition and attention which it reserved. It is most mellifluous of all the Indian vernaculars, and the richest in capability and force of expression.

                                              –  F.Fleet

ಧನ ಸಂಪತ್ತು ಕೆಲವರಿಗೆ ಇರಬಹುದು,ಕೆಲವರಿಗೆ ಇರಲಿಕ್ಕಿಲ್ಲ.ಒಬ್ಬನು ಸಿರಿವಂತ ನಾಗಬೇಕಾದರೆ ಒಬ್ಬ ಬಡವನಾಗುತ್ತಾನೆ.( ರಾಜಕಾರಣಿ ಶ್ರೀಮಂತನಾದಾಗ,ಆದಾಯ ಕರ ಸಲ್ಲಿಸುವವನು ಬಡವನಾಗುವುದು)

ಅದರೆ ಶಬ್ದ ಸಂಪತ್ತಿನ ವಿಷಯವು ಹಾಗಲ್ಲ ಒಬ್ಬನ ಶಬ್ಬದ ಸಂಪತ್ತು ಹೆಚ್ಚಾದರೆ ಇನ್ನೊಬ್ಬನದು ಕಡಿಮೆಯಾಗಬೇಕಿಲ್ಲ.ಹೀಗಿದ್ದರೂ ನಾವೆಲ್ಲ ಶಬ್ದ-ದಾರಿದ್ರ್ಯ ರಾಗಿರುವುದು ಅತ್ಯಂತ ವಿಷಾದನೀಯ .ಕುಮಾರ ವ್ಯಾಸ ಭಾರತ ಓದಿದರೆ ಶಬ್ದ ದಾರಿದ್ರ್ಯ ಬರುವುದೇ ಇಲ್ಲ ಎಂದು ಕುವೆಂಪು ಅಪ್ಪಣೆ ಕೊಡಿಸಿದರು ಎಷ್ಟು ಜನ ಓದಿ ಶಬ್ದ- ಸಿರಿವಂತರಾಗಿದ್ದೇವೆ !  ಅಥವಾ ಎಷ್ಟು ಜನ ಇಡಿಯಾಗಿ ಓದಿದ್ದೇವೆ !! ಎನ್ನುವಂತಹ  ಅಂಕಿ ಅಂಶಗಳು ನಮ್ಮಲ್ಲಿ ಲಭ್ಯವಿದೆಯೇ ? ಗೊತ್ತಿಲ್ಲ ಅಥವಾ ಇಲ್ಲ. ಎಂದರೆ ನಮ್ಮ ಓದುವಿಕೆ ಅತೀ ಕಮ್ಮಿ ಅಥವಾ ಇಲ್ಲವೆಂದರೂ ನಡೆದೀತೇನೋ .

ಶಂ ಬಾ.ಜೋಷಿಯವರು ಹೇಳುವಂತೆ ” ಇಡೀ ದಿನದಲ್ಲಿ  ನಮ್ಮಲ್ಲಿಯ ಕೆಲವರು 40-50 ಕ್ಕಿಂತ ಹೆಚ್ಚಿನ ಶಬ್ಬ ಬಳಸುತ್ತಿದ್ದಾರೆಯೇ ? ಎಂಬುದೇ ಸಂದೇಹ.

‘ಛಲೋ ‘ ಕೆಟ್ಟ’ ಎಂಬ ಎರಡು ಮಾತಿನಲ್ಲಿಯೇ ಇವರು ಲೋಕ ದೊಳಗಿನ ಎಲ್ಲಾ ಸಂಗತಿಗಳನ್ನು ವರ್ಣಿಸಿ ಹೇಳಿ ಬಿಡುವರು.”ಕುದುರೆ ಹೇಗಿದೆ ?”     “ಛಲೋ ಅದೆ ” ;  “ಪುಸ್ತಕ ” ?    “ಛಲೋಅದೆ “

“ಅಡಿಗೆ ?” “ಕೆಟ್ಟಿದೆ”  “ತಲೆ”? ” ಕೆಟ್ಟಿದೆ”.ಇದೇ ಬಗೆಯಾಗಿ ಉಳಿದ ಎಲ್ಲ ಮಾತುಗಳು  ಕೇವಲ ಸ್ಥೂಲ ! ” ಕುದುರೆ ಛಲೋ” ಎಂದರೇನು ? ರೂಪ-ಆಕಾರ ಗಳಿಂದಲೋ ? ಓಟ ನಡಿಗೆ ಗಳಿಂದಲೋ ? ಯಾವ ಬಗೆ ಯಿಂದ ? ಇದೇ ಮೇರೆಗೆ ಪಸ್ತಕ,ಅಡಿಗೆ, ತಲೆಗಳ ವಿಷಯವನ್ನು ಸೂಕ್ಷ್ಮವಾಗಿ ವಿಮರ್ಶಿಸಿ, ವಿಚಾರಿಸಿ  ವಿವರಿಸ ಬೇಡವೇ ?

ಇಂತಹ ಹತ್ತಾರು ಸಂಗತಿಗಳನ್ನು  ಬಹು ಸಂಸ್ಕೃತಿ ಕರ್ನಾಟಕ ಮರೆಯಬಾರದ ಸಂಶೋಧಕ  ಶಂ ಬಾ. ಜೋಷಿಯವರು, ತಮ್ಮ ‘ಕಂನುಡಿಯ ಹುಟ್ಟು’ ಪುಸ್ತಕದಲ್ಲಿ ಹೇಳುತ್ತ ಹೋಗುತ್ತಾರೆ.ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನಿಸಿದ ಶಂಕರ್ ರಾವ ಬಾಳಾ ದೀಕ್ಷಿತ ಜೋಷಿ(೧೮೯೬-೧೯೯೧) ಯವರ ಸಂಶೋಧನೆಗೆ ಒಂದು ನಿರ್ಧಿಷ್ಟ ಗುರಿಯಿತ್ತು.”ಸಂಶೋಧನೆಗಳು ಗತದ ಅವಿವೇಕದಿಂದಾದ ಗಾಯಗಳಿಗೆ ವರ್ತಮಾನದ ವಿವೇಕದ ಮದ್ದಾಗಬೇಕು ನಿನ್ನೆಯ ಕುರಿತು ಸಂಶೋಧನೆಯಿಂದ ಕಂಡು ಕೊಂಡದ್ದು ಒಂದಿಷ್ಟಾದರೂ ಬಾಳನ್ನು ಹಸನು ಮಾಡುವಂತಿರಬೇಕು” ಎನ್ನುವ ಆರೋಗ್ಯಕರ ಕಾಳಜಿಯಿತ್ತು. ಅಗ್ನಿ ವಿದ್ಯೆ, ಋಗ್ವೇದ ಸಾರ: ನಾಗ ಪ್ರತಿಮಾ ವಿಚಾರ ಕನ್ನಡದ ನೆಲೆ, ಮಕ್ಕಳ ಒಡಪುಗಳು, ಯಕ್ಷ ಪ್ರಶ್ನೆ ಅಥವಾ ಬರಲಿರುವ ಸಮಾಜ,  ಶಿವ ರಹಸ್ಯ ಮೊದಲಾದ ಮುವತ್ತೊಂದು  ಸಂಶೋಧನಾ  ಕೃತಿಗಳನ್ನು  ಅವರು ರಚಿಸಿದ್ದಾರೆ.

‘ಶಿವರಹಸ್ಯ’ ಕೃತಿ ರಚನಾ ಸಂದರ್ಭದಲ್ಲಿ ನಡೆದ ಘಟನೆಯನ್ನು ಶಾಸನ ವಿದ್ವಾಂಸರು ಮತ್ತು ನನ್ನ ನೆಚ್ಚಿನ ಸ್ನೇಹಿತರೂ ಆಗಿದ್ದ  ಆರ್ ಶೇಷ ಶಾಸ್ತ್ರಿಗಳು ತಮ್ಮ ‘ಪಾತಳಿ’ ಎನ್ನುವ ಕೃತಿಯಲ್ಲಿ ಉಲ್ಲೇಖಸಿದ್ದಾರೆ.  ‘ಶಿವ – ರಹಸ್ಯ’ ಬರೆಯುತ್ತಿದ್ದ ಕಾಲದಲ್ಲಿ ಅವರ ಮಗನಿಗೆ ಟೈಫಾಯಿಡ ಬಂದಿತು.ಇದೇ ಪುಸ್ತಕ ಪ್ರಕಾಟವಾಗುವ ಕಾಲದಲ್ಲಿ ಇದೇ ಕಾಯಿಲೆ ಮತ್ತೆ ಮರುಕಳಿಸಿತು.ಆಗ ಶಂ.ಬಾ. ಅವರ ಆಪ್ತವಲಯದವರು,ಶಿವನ ರಹಸ್ಯವನ್ನು ಹೊರಗೆಡಹಿದರ ಫಲ ಇದು ಎಂದುಕೊಂಡರಂತೆ.ಅವರ ಈ ಭಾವನೆ ಮತ್ತು ಮಾತುಗಳು ಶಂಬಾ ಅವರನ್ನು ಕೆಲಕಾಲ ದಂಗುಬಡಿಸಿತು. ಆಗ ಶಂಬಾ ಅವರು ಸ್ವ  ವಿಮರ್ಶೆಗೆ ತೊಡಗಿದರು.” ನಾನು ಬರೆದಿರುವುದು ಸತ್ಯ.ಈ ಸತ್ಯ ಹೊರಗೆಡಹುದರಿಂದ,’ಶಿವ’ ನನ್ನ ಮಗನನ್ನು ಕೊಂದರೂ ಅಡ್ಡಿಯಿಲ್ಲ ನನಗೆ ಸತ್ಯವೆಂದು ತೋರಿದ್ದನ್ನು ಹೇಳಿಯೇ ಇದ್ದೇನೆ” ಎಂದು ಸಮಾಧಾನ ಹೊಂದಿದರು . ಇದು ಅವರಿಗೆ ಸತ್ಯದ ಸಂಶೋಧನೆಯ ಮೇಲಿದ್ದ ನಿಷ್ಠೆ.

ಅವರ ‘ಕಂನುಡಿಯ ಹುಟ್ಟು’ ಪುಸ್ತಕದ ಅರಿಕೆ/ ಮುನ್ನುಡಿ   ಯಲ್ಲಿ ನಮ್ಮ ಶಬ್ದ ಸಂಗ್ರಹ ಎಷ್ಟೋ, ಅಷ್ಟೇ, ನಮ್ಮ ಮನಸಿನ ಆಳವೂ ಇರುವುದು. ಶಬ್ದ-ದಾರಿದ್ರ್ಯವು ನಮ್ಮ ಮನಸಿನ ಬಡತನವನ್ನು ಸೂಚಿಸುತ್ತದೆ.ಮಾತಿನ ವೈಖರಿ ಇಲ್ಲದ ಸಾಧು-ಸಜ್ಜನರೂ ಉದಾರ ಮನಸ್ಕರೂ ಇರುವದಿಲ್ಲವೇ ?ಎಂದು ಕೇಳಬಹುದು.ಇಂತಹವರು ಉಂಟೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹವರೆಲ್ಲ ಸುಮಾರಾಗಿ ಬಾಲ ಭಾವದವರು ಮುಗ್ಧರು  ಮತ್ತು ಮೊದ್ದುಗಳು ಎಂದು ಹೇಳುವದರಲ್ಲಿ ಸಂದೇಹವೇ ಇಲ್ಲ.ಏಕೆಂದರೆ ವಿಧ ವಿಧ ವಾದ ಸಿಹಿ ಕಹಿ ಅನುಭವ ಗಳನ್ನು ಪಡೆದಾಗಲೇ ಮನಸ್ಸು ವಿಶಾಲವಾಗುವುದು.ಸೂಕ್ಷ್ಮವೂ ಕೋಮಲವೂ ಆದ ವಿಚಾರ ಮತ್ತು ಭಾವನೆಗಳ  ಅನುಭವ ಬಂದರೇನೇ ಮಾತುಗಳು ಹೊಳೆಯವವು.ಹೀಗಾಗಿ ಮಾತೆಂದರೆ ಅವ್ಯಕ್ತ  ಮನಸಿನ ವ್ಯಕ್ತ ರೂಪ !!

ಒಟ್ಟಾರೆ ಹೇಳಬಹುದಾದರೆ ನಮ್ಮ ಮನಸಿನ ಭಾವನೆ ಮತ್ತು ವಿಚಾರಗಳ ಆಳವು ಹೆಚ್ಚಾಗಬೇಕೆಂಬ ತುಡಿತ ಹೆಚ್ಚಾದಾಗಲೇ ಅಂತರಂಗ, ನುಡಿಯ ಹುಟ್ಟು ಆದೀತು.ಹಾಗಾಗಿಸಿಕೊಂಡಾಗ ನುಡಿ-ಜೇನು  ಸಂಗ್ರಹ ಹೆಚ್ಚಾಗುತ್ತದೆ!!

ಕಂ ನುಡಿಯ ಹುಟ್ಟು ಪುಸ್ತಕ ಸಮಾಸಗಳು,ನುಡಿಯ ಗುಟ್ಟು, ಮೇಳ- ನುಡಿ,ದೇಸೀ ನುಡಿ, ಕಂನುಡಿಯ ಒಳ್ಗಂಪು ಮೊದಲಾದ ಒಂಬತ್ತು ಅಧ್ಯಾಯಗಳನ್ನು ಚರ್ಚಿಸುತ್ತದೆ.

ಅವರ ಮುಂದುವರಿದ ಸಿದ್ಧಾಂತವನ್ನು ನೋಡುವಾಗ,

‘ಕಂ ನುಡಿಯ ಹುಟ್ಟು ‘   ಕನ್ನಡಕ್ಕೆ ಸಂಬಂಧಿಸಿದ ಬಹು ಆಸಕ್ತಿಕರ ಸಂಗತಿಗಳನ್ನು ಬಿಡಿಸುತ್ತ ಹೋಗುತ್ತದೆ.ಶಂ.ಬಾ. ಅವರ ಸಂಶೋಧನಾ ಸಿದ್ಧಾಂತದ ಪ್ರಕಾರ ” ಕನ್ನಡ=ಕನ್ನ ಡ =ಕಂ ನಾಡು; ಕಂ ನಾಡು ಎಂದರೆ ಕಂ ಎಂಬ ಜನಾಂಗದ ನಾಡು.ಆದುದರಿಂದ ‘ಕಂ ನಡ’ ಸ್ಥಳವಾಚಕ =ದೇಶವಾಚಕ ಹೆಸರೆಂಬುದನ್ನು ನೆನಪಿನಲ್ಲಿ ಇಟ್ಟು  ಔಚಿತ್ಯ ಮೀರದಂತೆ ಇದನ್ನು ಬಳಸುವುದೇ ತಿಳಿದವರಿಗೆ ತಕ್ಕುದಲ್ಲವೆ? “

ಕಂ ನರ ನಾಡು  ಕಂನಾಡು ಆದಂತೆ ಕಂ ನರ ನುಡಿ  ‌ಕಂನುಡಿ ಅದಕ್ಕೆಂದೇ ಈ ಪುಸ್ತಕದ ಹೆಸರು ‘ ಕಂನುಡಿಯ ಹುಟ್ಟು ‘

 ಕನ್ನಡ ಪದವೇ ಒಂದು ಹೊಸ ಅರ್ಥ ಪಡೆಯುತ್ತದೆ ಕನ್ನಡ ಎಂದರೆ ಅದು  ಭಾಷೆಯಲ್ಲ ಅದು ಒಂದು ದೇಶ, ನಾಡು. ಅಥವಾ  ಇಂದಿನ  ಸ್ವತಂತ್ರ ಭಾರತದ, ಒಂದು ರಾಜ್ಯ.  ಕರ್ನಾಟಕ ರಾಜ್ಯ.ಬಿ.ಎಂ ಶ್ರೀ ಯವರ ಆಳ್ ಕನ್ನಡ ತಾಯೆ ಬಾಳ್ ಕನ್ನಡ ತಾಯೆ ಎಂದರೆ ಕನ್ನಡ ನಾಡು ಕನ್ನಡ ತಾಯಿ. ‘ಕನ್ನಡಕ್ಕಾಗಿ ಕೈ ಎತ್ತು’ ‌ಎಂದರೆ ಕನ್ನಡ ಭಾಷೆಗೆ ಅಲ್ಲ ಕನ್ನಡ ನಾಡಿಗೆ !!

1981 ರ ವರೆಗೆ ನಾಲ್ಕು ಮುದ್ರಣಗಳನ್ನು ಕಂಡಿರುವ, ‘ಕಂನುಡಿಯ ಹುಟ್ಟು’  ಕೃತಿ ಯ ಕೊನೆಯ ಭಾಗ ಕಂನುಡಿಯ ಒಳ್ಗಂಪು ಅಧ್ಯಾಯದಲ್ಲಿ ನಾಡು- ನುಡಿಯ ಬಗೆಗಿನ ಅನೇಕ ಒಳ್ನುಡಿಗಳು,  ಅಂದೂ – ಇಂದೂ ಪ್ರಸ್ತುತ ಎನಿಸುತ್ತವೆ.

* ಕಂನುಡಿಯಲ್ಲಿ ಹುರುಳಿದೆ.ಅದನ್ನು ಅರಿತು ಅರಗಿಸಿಕೊಳ್ಳುವವರು ಬೇಕಾಗಿದ್ದಾರೆ.ಸಂಸ್ಕೃತ, ಪ್ರಾಕೃತ, ಮರಾಠಿ,ಹಿಂದೀ ಮೊದಲಾದ ಭಾಷೆಗಳು ಕಂ ನುಡಿಯನ್ನು ಸ್ಥಾನ ಭ್ರಷ್ಟ ಮಾಡಲು ಒಂದೊಂದು ಕಾಲಕ್ಕೆ ಯತ್ನಿಸಿವೆ.ಯತ್ನಿಸುತ್ತಲೂ ಇವೆ.ಪರಭಾಷೆಗಳ ಮಾಯಾಜಾಲದಲ್ಲಿ ಸಿಲುಕಿ ಕಂನಾಡು ಹೇಳಹೆಸರಿಲ್ಲದಂತಾಗುವ ಹೆದರಿಕೆಯೂ ಉಂಟಾಗಿದೆ.ಈ ಕುತ್ತಿನೊಳಗಿಂದ ಪಾರಾಗುವದಕ್ಕೆ ಕಂ ನುಡಿಯ ಆಳವಾದ ಅಭ್ಯಾಸ ಮತ್ತು ಸದಭಿಮಾನಗಳು ನಮ್ಮಲ್ಲಿ ಬೆಳೆಯಬೇಕು. ಅದೇ ಬದುಕು ಬಲುಹಿನ ನಿಧಿಯ ಸದಭಿಮಾನದ ಬೀಡು .

* ಸವಿ,ಸಿಹಿ, ಕಹಿ ಇಸ್ಸಿ(ಹೇಸಿ) ನುಡಿಗಳನ್ನು ಸರಿಯಾಗಿ ಉಚ್ಛರಿಸದೆ ಇದ್ದರೆ, ಇವುಗಳೊಳಗಿನ ಅರ್ಥದ ಸೊಗಸು ಅನುಭವಕ್ಕೆ ಬರುವದಿಲ್ಲ.ಸವಿ ಸಿಹಿ ಇದರೊಳಗಿನ ‘ಸ’ ಇದು ಬಹಳ ಅರ್ಥವತ್ತಾದ ಭಾಗವು. ಒಳ್ಳೆಯ ಸವಿಯಾದ ಪದಾರ್ಥವು ನಾಲಗೆ ಚಪ್ಪರಿಸಿ ಒಳಗೆ ಉಸಿರೆಳೆದು ಸೀಪುವಾಗ ಆಗುವ ಶಬ್ದವನ್ನು ಅದು ಸೂಚಿಸುತ್ತದೆ.ಇದರ ವಿರುದ್ಧವಾಗಿ ತಮ್ಮ ರುಚಿಗೆ ಸರಿ ಹೋಗದುದನ್ನು  ಕಹ್ ಇಸ್  ಎಂದು ಧ್ವನಿ ಮಾಡಿ ಹೊರಗೆ ಹಾಕುವುದುಂಟು.ಅದುವೆ ಕಹಿ ಇಸ್ಸಿ(ಹೇಸಿ)

* ಹೋರಿ ತಗರು ಮತ್ತು ಮೇಕೆ  ಈ ಮೂರು ಪ್ರಾಣಿಗಳ ಹೆಸರನ್ನೇ ತೆಗೆದುಕೊಳ್ಳಿ. ಇದರಲ್ಲಿ ಎಷ್ಟು ಅರ್ಥ ಹುದುಗಿದೆ.

ಹೋರುವ ಸ್ವಭಾವ ಇದ್ದುದೇ ಹೋರಿ: ಮುಂದಿನ ದಿನಗಳಲ್ಲಿ ಅದು ಎತ್ತು ಎನಿಸುವುದು.ತಗರು ಧಾತುವಿಗೆ ನಿಲ್ಲಿಸು,ತಡೆ ಎಂಬರ್ಥ ಇರುವದೆಂದು ಕೇಶಿರಾಜಹೇಳಿದ್ದಾನೆ. ತಗರುವ ಸ್ವಭಾವವುಳ್ಳುದೆ ತಗರು(ಟಗರು).ಮೇ ಮೇ ಎಂದು ಎಡಬಿಡದೆ ಕೂಗುವ ಪ್ರಾಣಿ  ‘ಮೇಕೆ’ : ಇದನ್ನು  ಸಂಸ್ಕೃತ  ‘ ಮೇಷ ‘ ದೊಡನೆ ಹೋಲಿಸಿ ನೋಡಿ.

* ಕಳವು ಮತ್ತು ತುಡುಗು ಶಬ್ದ ಗಳಲ್ಲಿರುವ ಅರ್ಥಭೇದದ ಅರಿವೆ ಈಗ ಉಳಿದಿಲ್ಲ. ಆದುದು –  ತಿಳಿಯದೆ ಹೋದುದು ಕಳವು.ಮೈ ಮೇಲೆ ಏರಿಬಂದು ತುಡುರಿ,ತುಡುಕಿ(ಕಸಿದು) ಒಯ್ದುದು ತುಡುಗು.ಇಂಗ್ಲಿಷ್ ಭಾಷೆಮಾತನಾಡುವಲ್ಲಿಯ Theft ಮತ್ತು Robery  ಗಳಲ್ಲಿರುವ  ವ್ಯತ್ಯಾಸವೇ ಮೇಲಣ ಎರಡು ನುಡಿಗಳಲ್ಲಿದೆ. ವ್ಯಕ್ತಿತ್ವ ಇಲ್ಲದವನು ಹೇಗೆ ಮನುಷ್ಯ ನಾಗಲಾರನೋ ಹಾಗೇ ದೇಸಿ ಇಲ್ಲದ ಭಾಷೆ ಭಾಷೆಯಾಗಲಾರದು..

ನಮ್ಮ ದುರ್ದೈವ ಎಂದರೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯವರಂತೆ  ನಾವು ನಮ್ಮ ಭಾಷೆಯೊಳಗಿನ ಕಸುರಿ(craft) ಯನ್ನು ಉಳಿಸಿಕೊಳ್ಳುವ ಪ್ರಯತ್ನ ವನ್ನೇ ಮಾಡಿಲ್ಲವಲ್ಲ !

ದೇಸೀ ನುಡಿ ಅಧ್ಯಾಯದಲ್ಲಿ, ಕಂನುಡಿಯ ಅದ್ಭುತವೇ ನಿಮಗೆ ದಕ್ಕುತ್ತದೆ.ಶಂ.ಬಾ ಅವರ ಪ್ರಕಾರ, ಪಂಪನ ವಿಕ್ರಮಾರ್ಜುನ ವಿಜಯ, ನಯಸೇನನ ಧರ್ಮಾಮೃತ,ಅಂಡಯ್ಯನ ಕಬ್ಬಿಗರ ಕಾವ ಕುಮಾರ ವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ದೇಸೀ ಭಾಷೆಯನ್ನೇ ಬುನಾದಿಯನ್ನಾಗಿಸಿಕೊಂಡಿವೆ. ಒಂದು ವಿಸ್ಮಯದ ಸಂಗತಿ ಎಂದರೆ ದೇಸಿ ನುಡಿಯ ಲಕ್ಷಣಗಳನ್ನು ಹೇಳುವದು ಸಾಧ್ಯವೇ ಇಲ್ಲ.ದೇಸೀ ನುಡಿಯನ್ನು ಬೇರೊಂದು ಭಾಷೆಗೆ ಅನುವಾದ ಮಾಡುವುದಂತೂ  ಸಾಧ್ಯವಿಲ್ಲ.ಉದಾಹರಣೆಗೆ ‘ಈ ರೂಪಾಯಿ ಈಗ ನಡೆಯವದಿಲ್ಲ ‘ , ಇನ್ನು ನನ್ನ ಕೈಯಿಂದ ನಡೆಯಲಿಕ್ಕಾಗುವದಿಲ್ಲ ‘  ಕೈ ಇಂದ ನಡೆಯುವುದು !!    ಎಂದೆನುವ ವಾಕ್ಯಗಳನ್ನು ಅನುವಾದ ಮಾಡಲಾಗುವ ದಿಲ್ಲ.  ‘ಶಿವಾಜಿಯ ಕಾಲದಲ್ಲಿ ಔರಂಗಜೇಬನ ಆಟ ನಡೆಯಲಿಲ್ಲ ‘ ಎನ್ನುವ ವಾಕ್ಯವನ್ನು In the legs of Shivaji,  Aurangzeb’s play didn’t walk ಎಂದು ಅನುವಾದ ಮಾಡಿದಂತಾಗುತ್ತದೆ !!

ಭಾಷೆಯ ವೈಚಿತ್ರ್ಯಗಳೆಲ್ಲ ಒಂದುಗೂಡುವಿಕೆಯೇ ದೇಸೀ ಭಾಷೆ.ದೇಸೀ ನುಡಿಯ ಮುಂದೆ ವ್ಯಾಕರ್ಣ ತರ್ಕಶಾಸ್ತ್ರ ಗಳ ಆಟ ನಡೆಯುವದಿಲ್ಲ.

ಜೋಡು ನುಡಿ, ಮಾರು ನುಡಿ, ಕಿರುನುಡಿ, ಪಡೆನುಡಿ ನಾಣ್ಣುಡಿಗಳೆಂಬ ಪ್ರಭೇದಗಳಿವೆ.ಇವು ಒಂದೊಂದು ಸುದೀರ್ಘವಾದ,  ಅಧ್ಯಾಯವನ್ನು ಆಪೇಕ್ಷಿಸುತ್ತವೆ. ಆಧುನಿಕ ಕನ್ನಡದಲ್ಲಿಯೂ ಸಹ ಕೆಲವೊಂದು ಸಾಹಿತಿಗಳು ದೇಸೀ ಭಾಷೆಯ ಸೊಗಡನ್ನು ನೀಡಿರುವದು ಗಮನಿಸಬೇಕಾದ ಸಂಗತಿ.ಶಿವರಾಮ ಕಾರಂತರು, ಬೇಂದ್ರೆ, ರಾವ್ ಬಹಾದೂರ್, ಶಂಕರ ಮೊಕಾಶಿ ಪುಣೇಕರ್,ಜಿ.ಪಿ.ರಾಜರತ್ನಂ ಕೈಲಾಸಂ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ, ಶೀನಿವಾಸ ವೈದ್ಯ ಮೊದಲಾದವರು ದೇಸೀ ಭಾಷೆಯಲ್ಲಿಯೇ ರಚನಾ ಕಾರ್ಯ ಕೈಕೊಂಡಿರುವುದು ಸ್ತುತ್ಯಾರ್ಹ.

ಶಂ.ಬಾ. ಅವರ ಮಾತನ್ನೇ ಮಂಗಳ ವಾಕ್ಯ ವನ್ನಾಗಿ ಬಳಸುವುದು ಸರಿ ಎನಿಸುತ್ತಿದೆ :

” ನಮ್ಮ ಬಾಳು ಇಂಬುಳ್ಳುದು ಆದರೆ,ನಮ್ಮ ನುಡಿಯೂ ಇಂಬುಳ್ಳುದು ಆಗುತ್ತದೆ….ನಾವು ಹಿಗ್ಗಿದರೆ ನುಡಿ ಹಿಗ್ಗುವುದು. ನಾವು ಕುಗ್ಗಿದರಿಂದ ನುಡಿ ಕುಗ್ಗಿದೆ. ‘ಕುಣಿಯಲು  ಬಾರದವನಿಗೆ ನೆಲ ಡೊಂಕು.’ ಕಂನುಡಿಗೆ ಹೆಸರಿಡದೆ,ಕಂನುಡಿಗೆ ಗೆಸರು ತನ್ನಿರಿ.ಕಂನಾಡಿಗೆ ಹೆಸರ ಬರಬೇಕಾಗಿದ್ದರೆ ನೀವು ಹೆಸರಾಗಿರಿ “.

“… ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ” – ರತ್ನನ ಪದಗಳು

                         ———————-

ಆಕರ:

ಕಂನುಡಿಯ ಹುಟ್ಟು: ಡಾ.ಶಂ.ಬಾ.ಜೋಷಿ.

ಡಾ.ಸರ್ಜಾಶಂಕರ ಹರಳೀಮಠ – ವಾರ್ತಾಭಾರತಿ.

‘ಪಾತಳಿ’ – ಡಾ.ಆರ್ ಶೇಷಶಾಸ್ತ್ರಿ.

ರತ್ನನ ಪದಗಳು – ಜಿ.ಪಿ.ರಾಜರತ್ನಂ.

ಹುಯಿಲಗೋಳ ನಾರಾಯಣರಾಯರು.

*************************************************************

4 thoughts on “ನುಡಿ ಕಾರಣ

Leave a Reply

Back To Top