ಗಜಲ್
ಅರುಣಾ ನರೇಂದ್ರ
ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರು
ನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು
ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆ
ನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು
ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆ
ಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು
ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆ
ನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ ಸರಿಸದಿರು
ರಸಿಕತೆ ರಂಗೇರಿದಾಗ ಕೋಣೆಯ ದೀಪ ನಾಚಿ ಮುಖ ಮುಚ್ಚಿಕೊಳ್ಳುತ್ತದೆ
ಅರುಣಾ ನೀ ಕೊಟ್ಟ ಹಿಡಿ ಪ್ರೀತಿ ಉಣ್ಣಬೇಕೆಂದಿರುವೆ ದೂರ ಸರಿಸದಿರು
*******************************************
ಪ್ರೇಮ ಪ್ರಲಾಪದ ಗಝಲ್ ರಸಿಕತೆಯಿಂದ ಕೂಡಿದೆ ಮೇಡಂ. ಚೆಂದದ ಭಾವ.
ಸಹಜ ಭಾವ ಪೂರ್ಣ ,ನವಿರೇರೀಸುವ ,ನೇವರಿಸುವ ಗಜಲ್ ಉಗಾದಿ ಕೊಡುಗೆ
ನವಿರು ಪ್ರೇಮ..ಗಜಲ್ ಸೊಗಸಾಗಿದೆ..ಮೇಡಂ..
ಮಹಿಪಾಲರೆಡ್ಡಿ
ಸುಂದರವಾದ ರಚನೆ ಅಕ್ಕ
ಸೊಗಸಾಗಿದೆ ಗಜಲ್ ಮೇಡಂ