ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ20

ಆತ್ಮಾನುಸಂಧಾನ

ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು

ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು ಓದಿಕೊಂಡ ಬುದ್ಧಿವಂತರು ಎಂದು ಬಲವಾಗಿ ನಂಬಿಕೊಂಡಿದ್ದೆ. ಇದರಿಂದಾಗಿ ಸಂಸ್ಕೃತ ಭಾಷೆಯ ಕುರಿತು ಗಂಭೀರವಾದ ವ್ಯಾಮೋಹವೊಂದು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನನ್ನೊಳಗೆ ಜಾಗೃತವಾಗುತ್ತಿತ್ತು. ಮತ್ತು ಸಂಸ್ಕೃತ ಸುಲಭ ಓದಿಗೆ ದಕ್ಕುವ ವಿಷಯವಲ್ಲದೆಯೂ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವುದು ಸಾಧ್ಯ ಎಂಬ ಗೆಳೆಯರ ನಡುವಿನ ವದಂತಿಯನ್ನು ನಿಜವೆಂದು ನಂಬಿ ಎಂಟನೆ ತರಗತಿಗೆ ವಿಷಯ ಆಯ್ಕೆಯ ಸಂದರ್ಭದಲ್ಲಿ ಸಂಸ್ಕೃತವನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡೆ.

ಆದರೆ ತರಗತಿಗಳು ಆರಂಭವಾದ ಬಳಿಕ ಸಂಸ್ಕೃತ ವಿಷಯ ಆಯ್ಕೆಯ ನನ್ನ ಒಲವು ತಪ್ಪು ಎಂಬುದರ ಅರಿವಾಗತೊಡಗಿತು.

ನಾನು ನನ್ನೆಲ್ಲ ಪಠ್ಯಗಳ ಜೊತೆಯಲ್ಲಿ ಸಂಸ್ಕೃತ ಪಠ್ಯವನ್ನು ಖರೀದಿಸಿ ತರಗತಿಗೆ ಹೋಗಲಾರಂಭಿಸಿದೆ. ಆದರೆ ಅದು ಏಕೋ ಸಂಸ್ಕೃತ ತರಗತಿಯಲ್ಲಿ ನನ್ನ ಉಪಸ್ಥಿತಿ ನಮ್ಮ ತರಗತಿಯ ಸಂಸ್ಕೃತ ಮೇಷ್ಟ್ರಿಗೆ ಹಿತವಾಗಿ ಕಾಣಲಿಲ್ಲ. ಬಹುತೇಕ ಬ್ರಾಹ್ಮಣ, ಗೌಡ, ಸಾರಸ್ವತ ಬ್ರಾಹ್ಮಣ ಇತ್ಯಾದಿ ಮೇಲ್ಜಾತಿಯ ಬೆಳ್ಳುಂಬೆಳಗಿನ ವಿದ್ಯಾರ್ಥಿ ಸಮುದಾಯದ ನಡುವೆ ಕಪ್ಪು ಬಣ್ಣದ ಒಬ್ಬನೇ ಒಬ್ಬ ವಿದ್ಯಾರ್ಥಿ ಇಡಿಯ ತರಗತಿಗೆ ಕಳಂಕದ ‘ಕಪ್ಪು ಚುಕ್ಕೆ’ ಎಂಬಂತೆ ನಮ್ಮ ಗುರುಗಳ ಕಣ್ಣಿಗೆ ಕಂಡಿರಬೇಕು. ಅವರು ತರಗತಿಯಲ್ಲಿ ತುಂಬ ವಿಶಿಷ್ಟವೆನ್ನಿಸುವ ದೃಷ್ಟಿಯಲ್ಲಿ ನನ್ನನ್ನು ನೋಡತೊಡಗಿದರು. ಅವರು ನನ್ನೆಡೆಗೆ ಬೀರುವ ನೋಟದಲ್ಲಿಯೇ “ಎಲಾ ಶೂದ್ರ ಮುಂಡೇದೆ ನೀನೂ ಸಂಸ್ಕೃತವ ಕಲೀತಿಯೇನೋ…?” ಎಂಬ ತಿರಸ್ಕಾರದ ದೃಷ್ಟಿ ಇರುವುದು ನನ್ನ ಅರಿವಿಗೆ ನಿಲುಕಲಿಲ್ಲ. “ಈ ಶೂದ್ರನಿಗೆ ಸಂಸ್ಕೃತವನ್ನು ಹೇಳಿಕೊಟ್ಟು ತಾನು ಪೂಜ್ಯ ಮನು ಮಹರ್ಷಿಯ ಘನ ಶಾಪಕ್ಕೆ ಪಕ್ಕಾದೆನಲ್ಲಾ…” ಎಂಬ ಅವರೊಳಗಿನ ಚಡಪಡಿಕೆಯನ್ನು ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆಯೂ ಅಂದು ನನಗಿರಲಿಲ್ಲ. ಈ ಶ್ರೀಪಾದರೆಂಬ ಸಂಸ್ಕೃತ ಶಿಖಾಮಣಿಗಳು ನಾನು ಸಂಸ್ಕೃತವನ್ನು ಬಿಟ್ಟು ಬಿಡುವಂತೆ ಬಾಯಿಬಿಟ್ಟು ಹೇಳಲಾಗದ ಸಂಕಟಕ್ಕೆ ವಾಮ ಮಾರ್ಗವೊಂದನ್ನು ಹಿಡಿದರು.

ಚಡಪಡಿಕೆ ಸಂಕಟಗಳ ನಡುವೆಯೇ ಸಂಸ್ಕೃತ ವಚನ ವಿಭಕ್ತಿಗಳ ಕುರಿತು ಪಾಠ ಆರಂಭಿಸಿ ಸಂಸ್ಕೃತದಲ್ಲಿರುವ ಏಕವಚನ, ದ್ವಿವಚನ, ಬಹುವಚನಗಳನ್ನು ತಿಳಿಸಿ ನಾಮಪದ, ಸರ್ವನಾಮಗಳನ್ನು ಮೂರು ವಚನಗಳಲ್ಲಿ ಮತ್ತು ಸಂಸ್ಕೃತದ ಎಂಟು ವಿಭಕ್ತಿಗಳಲ್ಲಿ ರೂಪಾಂತರಿಸಿ ನಡೆಸಲು ಶ್ರುತಿ ಸ್ಮೃತಿ ಪರಂಪರೆಯ ಮೂಲಕ ಗುರುಕುಲದ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಬಳಸಿದ,“ರಾಮಃ ರಾಮೌ ರಾಮಾಃ…” (ರಾಮ, ಇಬ್ಬರು ರಾಮರು, ಅನೇಕ ರಾಮರು) ಇತ್ಯಾದಿ ಉದಾಹರಣೆಯ ಶ್ಲೋಕ ಮಾದರಿಯೊಂದನ್ನು ಕಂಠಪಾಠ ಮಾಡಲು ತಿಳಿಸಿದರು. ಮತ್ತು ಮರುದಿನವೇ ಪಾಠ ಒಪ್ಪಿಸಲು ತಾಕೀತು ಮಾಡಿದ್ದರು.

ವಸತಿ ನಿಲಯದ ನಿರ್ಜನ ಮೂಲೆಯಲ್ಲಿ, ಆಟದ ಬಯಲಿನಲ್ಲಿ, ಸ್ನಾನಕ್ಕೆ ನಿಂತಾಗಲೂ ಈ “ರಾಮಃ ರಾಮೌ…” ಪಠ್ಯ ಹಿಡಿದು ಕಂಠಪಾಠ ಮಾಡಿದೆ. ಆದರೆ ತರಗತಿಯಲ್ಲಿ ಗುರುಗಳು ನನ್ನನ್ನೆ ಎದ್ದು ನಿಲ್ಲಿಸಿ ಪಾಠ ಒಪ್ಪಿಸಲು ತಿಳಿಸಿದಾಗ ಒಂದಕ್ಷರವೂ ನನ್ನ ಬಾಯಿಂದ ಹೊರ ಬಾರದೆ ನಗೆಪಾಟಲಾದೆ.

ಗುರುಗಳು ಇದನ್ನೇ ಅಸ್ತçವಾಗಿ ನಿತ್ಯವೂ ಬಳಸತೊಡಗಿದರು. ಅದೇನೋ ಹೇಳುವಂತೆ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸುವಂತೆ ನಿಷ್ಕುರಣೆಯಿಂದ ಅಸ್ತ್ರ ಪ್ರಯೋಗ ಮಾಡಿದರು. ಅಷ್ಟಕ್ಕೆ ನಿಲ್ಲದೆ ವೈಷ್ಣವಾಸ್ತ್ರ,  ನೀಲಕಂಠಾಸ್ತ್ರಗಳನ್ನೂ ನೆರವಿಗೆ ತೆಗೆದುಕೊಂಡವರಂತೆ ಬೇರೆ ಬೇರೆ ದೃಷ್ಟಾಂತಗಳನ್ನು ಹೇಳಿ ನನ್ನನ್ನು ಹಿಂಸೆಗೀಡು ಮಾಡಿದರು. ಗುರುಗಳ ವ್ಯಂಗ್ಯೋಕ್ತಿಗಳು, ಸಹಪಾಠಿಗಳ ಅಪಹಾಸ್ಯದ ನಗುವಿನೊಡನೆ ಹತ್ತೆಂಟು ದಿನಗಳ ಕಾಲ ತೀವೃವಾದ ಹಿಂಸೆಯನ್ನು ಅನುಭವಿಸಿದೆ. ತರಗತಿ ಆರಂಭ ಆಗುತ್ತಿದ್ದಂತೆಯೇ ನನ್ನನ್ನು ಮೊದಲು ಎದ್ದು ನಿಲ್ಲಿಸುವುದು, ಹಲವು ಪ್ರಶ್ನೆಗಳನ್ನು ನನ್ನೊಬ್ಬನಿಗೇ ಕೇಳುವುದು… ಇತ್ಯಾದಿ ಆಕ್ರಮಣಗಳಿಂದ ಭಯ ನಾಚಿಕೆಯಲ್ಲಿ ನಾನು ನಿತ್ಯವೂ ಸಂಸ್ಕೃತ ತರಗತಿಯಲ್ಲಿ ಬೆವರಿಳಿದು ಬಸವಳಿಯುತಿದ್ದೆ. ಇದನ್ನು ನೋಡಿ ನೋಡಿ ಗುರುಗಳು ಹಿಂಸಾರತಿಯ ಆನಂದವನ್ನು ಅನುಭವಿಸುತ್ತಿದ್ದರು.

ನನಗೆ ಸಂಸ್ಕೃತದ ಸಹವಾಸ ಸಾಕು ಅನಿಸಿತು. ಕೊಂಡು ತಂದ ಪುಸ್ತಕವನ್ನು ಸಹಪಾಠಿಯೊಬ್ಬನಿಗೆ ಅರ್ಧ ಬೆಲೆಗೆ ಮಾರಿ ಕೈತೊಳೆದುಕೊಂಡೆ. ಸಂಸ್ಕೃತವನ್ನು ಬಿಟ್ಟು ‘ಎಡಿಷನಲ್ ಕನ್ನಡ’ ಆಯ್ದುಕೊಂಡೆ ಗುರುಗಳು ನಿರಾಳವಾದರು.

ಆದರೆ ಸಂಸ್ಕೃತದ ಕುರಿತಾದ ನನ್ನ ಪ್ರೀತಿ ನನ್ನೊಳಗೆ ಸುಪ್ತವಾಗಿ ಉಳಿದುಕೊಂಡಿತ್ತು. ಮುಂದೆ ಜಿ.ಸಿ. ಕಾಲೇಜಿನಲ್ಲಿ ಪದವಿ ತರಗತಿಯನ್ನು ಓದುವಾಗ ಪ್ರೊ.ಎಂ.ಪಿ.ಭಟರಲ್ಲಿ ವಿನಂತಿಸಿಕೊಂಡು ಸಂಸ್ಕೃತವನ್ನು ಮೈನರ್ ವಿಷಯವಾಗಿ ಆಯ್ದುಕೊಂಡೆ. ಮತ್ತು ಮೂರು ವರ್ಷಗಳಲ್ಲಿಯೂ ಸಂಸ್ಕೃತದಲ್ಲಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. ಹಾಗೆಂದು ಸಂಸ್ಕೃತದ ವಿಶೇಷ ಪಾಂಡಿತ್ಯವೇನೂ ದಕ್ಕಲಿಲ್ಲ. ಪರೀಕ್ಷೆಯಲ್ಲಿ ಕನ್ನಡದಲ್ಲಿಯೇ ಉತ್ತರಿಸುವ ಅವಕಾಶವಿದ್ದುದರಿಂದ ಹೆಚ್ಚಿನ ಅಂಕ ಗಳಿಕೆಗೆ ಪೂರಕವಾಯಿತು ಅಷ್ಟೆ. ಆದರೂ ಸಂಸ್ಕೃತದ ಒಂದಿಷ್ಟು ಕಾವ್ಯಾಭ್ಯಾಸ, ಅರಿವಿನ ವಿಸ್ತಾರವನ್ನು ಹೆಚ್ಚಿಸಿದ್ದು ನಿಜವೇ. ಯಕ್ಷಗಾನ ಕಲಾವಿದನಾಗಿ ಪಾತ್ರ ನಿರ್ವಹಿಸುವಾಗ ಒಂದಿಷ್ಟು ಶ್ಲೋಕಗಳನ್ನು ನಿರರ್ಗಳವಾಗಿ ಮಾತಿನ ಮಧ್ಯೆ ಪ್ರಯೋಗಿಸಲು ಅನುಕೂಲವಾದದ್ದು ಕೂಡ ಸಂಸ್ಕೃತದ ಕಲಿಕೆಯ ಪ್ರಯೋಜನ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನನ್ನ ಪ್ರೀತಿಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಪಿ.ಭಟ್ ಅವರಿಗೆ ನಾನು ಸದಾ ಋಣಿಯಾಗಿರುವೆ.

**********************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

8 thoughts on “

  1. ಸರ್, ಸಂಸ್ಕೃತದ ವ್ಯಾಮೋಹ ಅದರಿಂದ ಅವಮಾನ ಮತ್ತೆ
    ಎಮ್. ಪಿ.ಭಟ್ಟರಿಂದ ಉತ್ತೇಜನ. ಮನಮಿಡಿದ ವ್ಯಥೆಯ ಕಥನ
    ಓದುತ್ತಿದ್ದಂತೆ ಬೇಸರವಾಯಿತು.

  2. ಸಂಸ್ಕೃತ ಗುರುಗಳು ನಡೆದುಕೊಂಡ ರೀತಿ ಬೇಜಾರು ಅನಿಸಿತು.

  3. ಎಷ್ಟಾದರೂ ಎದೆಗುಂದದೇ ಸಂಸ್ಕೃತಿ ಕುರಿತು ಒಳ್ಳೆ ಯಕ್ಷಗಾನ ಪಟುವಾದಲ್ಲ. ಅಲ್ಲದೇ ಅಕಾಡೆಮಿಯಲ್ಲಿಯೂ ಸೇವೆ ಸಲ್ಲಿಸಿದಿರಲ್ಲ. ಇದಕ್ಕಿಂತ ಬೇರೆ ಸಾಧನೆ ಬೇಕೇ? ಒಬ್ಬ ಯಶಸ್ವಿ ಕನ್ನಡ ಪ್ರಾಧ್ಯಾಪಕರಾಗಿಯೂ, ಬರೆಹಗಾರರಾಗಿಯೂ ಹೆಸರು ಇಸಿದ್ದೀರಿ. ನಿಮ್ಮ ಆತ್ಮ ಕಥನವನ್ನು ಓದುವೆ. ಶುಭವಾಗಲಿ

  4. ಹಟ ಬಿಡದ ತ್ರಿವಿಕ್ರಮನಂತೆ ಸಂಸ್ಕೃತ ಭಾಷೆಯ ಮೇಲೆ ಹಿಡಿತ ಸಾಧಿಸಲು ತಾವು ಪಟ್ಟ ಶ್ರಮ ಫಲಪ್ರದವಾದುದು ಪ್ರಶಂಸನೀಯ.

  5. ಗುರೂಜಿ,
    ಓದಿದೆ ಆದರೆ……. ಇದಕ್ಕೆ ನನ್ನ ಅನಿಸಿಕೆಗಳು ಹೇಗೆ ಬರೆಯಬೇಕು ಎಂದು ತುಂಬಾ ಯೋಚಿಸಿದೆ. ಸಂಸ್ಕೃತ ವಿಷಯ ಕಲಿಯಲು ಹೋಗಿ ಏನೆಲ್ಲ ಆಗಿಹೋಗಿದೆ, ಆದರೂ ನೀವು ಸಾಂಸ್ಕೃತಿಕ ವಿಷಯ ಬಿಡಲಿಲ್ಲ. ನಿಮಗೊಂದು ದೊಡ್ಡ ನಮಸ್ಕಾರ……
    ಛಲ ಬಿಡದೆ ಮುಂದೆ ಸಾಗಿ ಜೈಸಿದಿರಿ. ಹೈ ಸ್ಕೂಲ್ ಆವಾಗ ಮೈಂಡ್ ಇನ್ನೂ ಮ್ಯಾಚ್ವವರಡ ಆಗಿರಲ್ಲ ಮನಸ್ಸಿಗೆ ನೋವು ಆಗಿರಲ್ಲ ಅದನ್ನು ಈಗ ನೆನೆದು ಮನಸ್ಸಿಗೆ ನೋವು ಅನಿಸುತ್ತದೆ….

    ಮುಂದುವರಿದ

Leave a Reply

Back To Top