ಕವಿತೆ
ಕೊಡಲಾಗದ್ದು – ಪಡೆಯಲಾಗದ್ದು
ಎಂ. ಆರ್. ಅನಸೂಯ
ಮರೆತಿದ್ದೇನೆಂದರೆ ಆತ್ಮವಂಚನೆಯಾದೀತು
ನೀನಿಲ್ಲವಾದರೂ ಸಹಪಯಣದಲಿ
ತಲುಪಿದ್ದೇನೆ ಗಮ್ಯವನ್ನು
ಅಳಿಸಿಬಿಡಬಹುದಿತ್ತು ಹೆಜ್ಜೆ ಗುರುತುಗಳು
ಮರಳು, ಮಣ್ಣಿನ ಮೇಲಿದ್ದರೆ
ಅಳಿಸಲಾಗದು
ತನುಮನಗಳಲಿ ಊರಿ ಹೋದ
ನಿನ್ನ ಹೆಜ್ಜೆ ಗುರುತುಗಳ.
ಕೊಟ್ಟು ಪಡೆಯಬಹುದಿತ್ತು
ಕೊಡು ಕೊಳ್ಳುವ
ಸರಕು ಸರಂಜಾಮುಗಳಾಗಿದ್ದರೆ
ಕೊಟ್ಟದ್ದನ್ನ ಪಡೆಯಲಾಗದ
ಪಡೆದಿದ್ದನ್ನ ಕೊಡಲಾಗದ
ತನುಮನಗಳು
ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ
ದೂರ ಸರಿದವರಿಗಾಗಿ ಬೇಡುವಿಕೆಯೋ
ಪ್ರಶ್ನಿಸಿದ ಮನಕೆ
ಅವಳದು ನಿರುತ್ತರ
ಮುಮ್ಮಖವೊಂದೆ ಕಾಲದ ಚಲನೆ
ಮರಳಿ ಬರಲಾರವು
ನಿನ್ನೊಂದಿಗಿನ ಬಾಳಪಯಣಕ್ಕೂ ಹಿಂದಿನ ದಿನಗಳು
ನಿಂತಲ್ಲಿಂದಲೇ ನಾಂದಿಯಾಗಿದೆ
ನನಗಾಗಿ ನನ್ನ ಬದುಕಿನ ಪಯಣಕೆ
ಮೃಗಜಲವ ನೀರೆಂದು ತಿಳಿದ
ಮರುಳತನ ಕಲಿಸಿದೆ ಜೀವನ ಪಾಠಗಳ
**************************************
Very nice