ಕವಿತೆ
ನಿರುತ್ತರ
ಅಬ್ಳಿ,ಹೆಗಡೆ
ಒಂದು ಮುಂಜಾನೆ,
ಹೊತ್ತು,ಹುಟ್ಟುವದನ್ನು
ನೋಡುವ’ಕೆಟ್ಟ”ಕುತೂಹಲ,
ಮೂಡಣಕೆ ಮುಖಮಾಡಿ,
ಕುಳಿತಿದ್ದೆ,ಅಂಗಳದಲ್ಲಿ,
‘ಮಂಗಳ ಮುಖಿಯಾಗಿ.’
ಉಷೆಗೆ ಪ್ರಸವ ವೇದನೆ,
ಹಕ್ಕಿಗಳಿಗೆ ಸಂಬ್ರಮ.
ಗಂಟಲಿಗೆ ಶ್ರುತಿಹಿಡಿಯುತಿದ್ದವು
ಹರ್ಷದ ಹಾಡಿಗೆ.
ಗಿಡದಲ್ಲಿಯ ಹೂವಿಗೆ
ಹುಟ್ಟುವ ಚಡಪಡಿಕೆ
ಸಂಜೆ ಸಾಯುವದಕ್ಕೆ.
ದೂರ,,,ಆಗಸದಂಚಿಗೆ
ಕೆನ್ನೆತ್ತರ ಹೊಳೆ,
ಈಜಾಡಿ,ಮಿಸುಕಾಡಿ,
ಮೈತಳೆಯುತಿತ್ತು,
ಒಂದೊಂದೆ,ಅಂಗಾಂಗ,
ಪರಿಪೂರ್ಣವಾಗಿ
ಸಂಜೆ ಸಾಯಲು.
ಸ್ರಷ್ಟಿವಿಸ್ಮಯಕ್ಕೆ,
ವಿಭ್ರಮೆಗೊಂಡು,
ಬೆರಗಾಗಿ,ಕುಳಿತಿರಲು,
ಪುಟ್ಟಮಗ ಓಡೋಡಿ
ಹತ್ತಿರಬಂದು ಕೇಳಿದನನಗೆ
“ಏಕೆ ಕುಳಿತಿಹೆ ಇಲ್ಲಿ?”
ನಗುತ ಹೇಳಿದೆ ನಾನು
“ನೋಡಲಿಕೆ,ಸೂರ್ಯನಹುಟ್ಟ”.
ತಿರುತಿರುಗಿಬಂತೊಂದು ಪ್ರಶ್ನೆ.
“ನನ್ನ ಹುಟ್ಟು ಹೇಗೆ?.”
ನಾನು ನಿರುತ್ತರ.
“ನಾಳೆ ಹೇಳುವೆ”ನೆಂದು
ಮನೆಗೆ ಕರೆದೊಯ್ದೆ.
ಮನವು ಹೇಳುತಲಿತ್ತು
ಒಳಗೊಳಗೆ,,,,,,,
“ನಾಳೆ ಬಾರದಿರಲೆಂದು
************************************