ಅಂಕಣ

ಕವಿತೆ

ಅಂಕಣ

ಮಹಾದೇವ ಕಾನತ್ತಿಲ

ಅಂಕಣದೊಳಗೆ ಆಟ
ಕಬಡ್ಡಿ ಚಕ್ರಬಡ್ಡಿ
ಮಧ್ಯ ಗೆರೆ ಆಂಕಣವನ್ನು
ಇಬ್ಬಾಗಿಸಿ ಈಕಡೆ ಆಕಡೆ
ಎರಡರ್ಧ ಕಣ
ಎಡಕಣದಲ್ಲಿ ಆರು
ಬಲಕಣದಲ್ಲಿ ಆರು
ಧಾಂಡಿಗರು ಬಲಿತ ತೊಡೆ
ತಟ್ಟಿ ನೆಲಕುಟ್ಟಿ
ಆಡಿದರು ನೋಡಿ!

ಎಡದ ರೈಡರು ಪುಪ್ಪಸ
ಉಸಿರು ತುಂಬಾ ಉಸಿರು
ಕ..ಬಡ್ಡಿ..ಕ..ಬಡ್ಡಿ..
ಅದೋ ಹಿಡಿದರು ಒಬ್ಬ ಹಿಂದಿಂದ, ಮತ್ತೊಬ್ಬ ಮುಂದಿಂದ ಹನ್ನೆರಡು ತೋಳುಗಳು ರೆಫ್ರೀ
ಔಟು..ಅಂದ
ಆತ ಅಂಗಣದಿಂದ ಹೊರಗೆ..

ಬಲಾರ್ಧ ಕಣದ ರೈಡರ್ರು
ಶ್ವಾಸಕೋಶದ ತುಂಬಾ
ಅದೇ ಆಕ್ಸೀಜನ್
ಕ..ಬಡ್ಡಿ..ಕ..ಬಡ್ಡಿ..
ತೊಡೆ ತಟ್ಟಿ ಎದೆಯುಬ್ಬಿ
ನುಗ್ಗಿದಾಗ ಹಿಡಿದೆಳೆದರು
ಹಾರಿ ಬಿದ್ದ ಮಧ್ಯದ ಗೆರೆ ಮುಟ್ಟಿ.. ಎರಡು ಎಡದರ್ಧದ
ಅಂಕಣದ ಆಟಕರು ಔಟ್..

ಹೀಗೇ ಒಮ್ಮೆ ಎಡ ಒಮ್ಮೆ ಬಲ
ಆಟಗಾರ ಒಳಗೆ ಆಟಗಾರ ಹೊರಗೆ
ಆಡಿದ ರಭಸಕ್ಕೆ ಮಧ್ಯದ ಗೆರೆ
ಅಳಿಯುತ್ತಿತ್ತು..ರೆಫ್ರೀ
ಪುನಃ ಹೊಸ ಗೆರೆಯೆಳೆದು
ಆಟ ರಂಗೇರಿತು..

ನೋಡುತ್ತಾ ನಿಂತ
ನನ್ನ ನೇರ ದೇಹ
ಒಮ್ಮೆ ಎಡಕ್ಕೆ ಬಾಗಿ
ಒಮ್ಮೆ ಬಲಕ್ಕೆ ಬಾಗಿ
ನೇರ ನಿಲ್ಲಲು ಮರೆಯುವಷ್ಟು!
ತೊಡೆ ತಟ್ಟೀ ತಟ್ಟೀ
ಎಡಬಲದ ತೊಡೆಗಳು ಕೆಂಪಡರಿದ್ದವು..
ಅಂಗಣದ ಹೊರಗೆ ಒಳಗೆ ಆಟಗಾರರೇ ತುಂಬಿ
ನನ್ನ ಎಡಗಾಲು ಎಡಕ್ಕೆ
ಬಲಗಾಲು ಬಲಕ್ಕೆ
ಸೊಂಟ ಎಡಕ್ಕೆ
ಎದೆ ಬಲಕ್ಕೆ
ತಲೆ ಎಡಕ್ಕೆ..ಅಯ್ಯೋ
ಅಷ್ಟಾವಕ್ರನಂತೆ ನಿಂತಿದ್ದೆ
ಆಟ ನಡೆಯತ್ತಲೇ ಇತ್ತು.

****************************

8 thoughts on “ಅಂಕಣ

  1. ಒಳ್ಳೆಯ ಕವಿತೆ. ಆಟವೊಂದು ಚಿತ್ರಕದಂತೆ ಕಣ್ಣ ಮುಂದೆ ಸುಳಿಯುತ್ತಲೇ, ನೇರ ನಿಂತ ಪ್ರೇಕ್ಷಕನ ಎಡಕ್ಕೂ,ಬಲಕ್ಕೂ ತುಯ್ಯುತ್ತಾ ಅಷ್ಟಾವಕ್ರ ನಂತಾಗಿ ಬಿಡುವ ಸ್ಥಿತಿ,ಓದುತ್ತಾ ಹೋದಂತೆ ಚಕ್ಕನೆ ಹೊಸ ಆಯಾಮದೆಡೆಗೆ ಕೊಡಾಯ್ಯುತ್ತತಾ ಹೊಸ ಅರ್ಥ್ಯವನ್ನ ಹೊಳೆಯಿಸಿ ಬಿಡುತ್ತದೆ. ಸರಳವಾಗಿಯೂ ಗಹನತೆಯಿಂದಕೂಡಿದ ಕವಿತೆ ಇಷ್ಟವಾಯಿತು ಕಾನತ್ತಿಲ ಸರ್

    1. ಸ್ಮಿತಾ ಅವರೇ
      ನಾನು ನಿಮ್ಮ ಕವಿತೆಗಳ, ಅವುಗಳೊಳಗೆ ಅಬ್ಸ್ಟ್ರಾಕ್ಟ್ ಆಗಿ ನೀವು ತುಂಬುವ ಅರ್ಥಗಳ ಅಭಿಮಾನಿ.
      ನಿಮ್ಮ ಆತ್ಮೀಯ ಪ್ರತಿಕ್ರಿಯೆ, ಬರೆಯುವ ಮನಸ್ಸಿಗೆ ಶಕ್ತಿ.
      ತುಂಬಾ ಧನ್ಯವಾದಗಳು

  2. ಆಟವನ್ನಲ್ಲದೇ ಆ ಆಟದ ಪ್ರೇಕ್ಷಕ ಕೂಡಾ ಆಟಗಾರರೊಂದಿಗೆ ಹಾಗೂ ಆಟದೊಂದಿಗೆ ತಾದಾತ್ಮ್ಯಹೊಂದಿದಾಗ ತಾನೂ ಕೂಡ ಒಬ್ಬ
    ಆಟಗಾರನಾಗಿಯೇ ಆ ಆಟವನ್ನು ಆನಂದಿಸುತ್ತಾನೆ ಎಂಬುದನ್ನು ಆಟದ ಓಘದೊಡನೆ ಬದಲಾಗುವ ಅವನ ಚಲನವಲನಗಳೊಂದಿಗೆ ತುಂಬಾ ರೋಚಕವಾಗಿ ಬರೆದಿದ್ದೀರಿ

    1. ಮೀರಾ ಜೋಶಿ ಅವರೇ, ನನ್ನ ಒಣ ಕವಿತೆಯಿಂದ ಅರ್ಥ ರಸ ಸೃಜಿಸುವ ಸೃಜನಶೀಲ ಪ್ರತಿಕ್ರಿಯೆಗೆ ನೂರು ನಮನ. ಮನಸ್ಸು ಅಂಗಣವೇ. ದಿನ ನಿತ್ಯದ ಸಮಾಜದಾಟದಲ್ಲಿ ತನ್ನನ್ನೂ ವಿಲಯಿಸಿ, ತಾನೂ ಆಟಗಾರನಾಗುವ ಬಗ್ಗೆ ನೀವು ಬರೆದದ್ದು ಕವನಕ್ಕೆ ಹೊಸ ಕವಲು ಚಿಗುರಿಸಿದೆ.

  3. ಉಸಿರು ತುಂಬಿ ಕಬಡ್ಡಿ ಕಬಡ್ಡಿ ಎಂದು ಓಡುತ್ತಿರುವ ಆಟಗಾರ, ಪ್ರತಿಸ್ಪರ್ಧಿಗಳ ಕಣದಿಂದ ದಾಟಿ ಬರುವಾಗ, ಆ ಕಣದ ಆಟಗಾರರ ಹಿಡಿತಕ್ಕೆ ಸಿಕ್ಕು ‘ ಗೆರೆ’ ಮುಟ್ಟಿದರೆ ಹಿಡಿದವರು ಆಟದಿಂದ ಔಟು; ಒಮ್ಮೆ ಇವರು ಔಟು, ಒಮ್ಮೆ ಅವರು ಔಟು! ಹೀಗೆ ಕಬಡ್ಡಿ ಆಟ ಬಾಳಿನ ಸಂಘರ್ಷಕ್ಕೆ ರೂಪಕವಾಗುತ್ತದೆ.ಅಷ್ಟೇ ಅಲ್ಲ, ಆಟ ರೋಚಕವಾಗುತ್ತ ಹೋದಂತೆ ಪ್ರೇಕ್ಷಕರೂ ಆಟದ ಅವಿಭಾಜ್ಯ ಅಂಗವಾಗುತ್ತಾರೆ.ಆಟದಲ್ಲಿ ಸಕ್ರಿಯವಾಗಿ ಭಾಗವಹಿಸುವದು ಒಂದು ಕ್ರಿಯೆಯಾದರೆ, ನೋಡುವುದೂ ಒಂದು ಕ್ರಿಯೆಯಾಗಿ ಪರಿವರ್ತನೆಗೊಳ್ಳುತ್ತದೆ. ಆಕ್ಸೀಜನ್ ( ಪ್ರಾಣವಾಯು) ತುಂಬಿಕೊಂಡು ಆಡುವ ಆಟದ ವಿಧಾನ ಕವಿತೆಯ ‘ ಥೀಮಿಗೆ’ ಪೂರಕವಾಗಿದೆ. ಮೂಕ ಪ್ರೇಕ್ಷಕರಾದ ಸಾಮಾನ್ಯ ಮನುಷ್ಯರು ಸಹ ಸುತ್ತಲಿನ ವಿದ್ಯಮಾನಗಳನ್ನು ನೋಡಿ ಉತ್ತೇಜಿತರಾಗಿ ಅಷ್ಟಾವಕ್ರರಾಗುವದು ತಪ್ಪಿದ್ದಲ್ಲ.
    ಮಹಾದೇವ್ ಅವರು ಉತ್ತಮ ಕವಿತೆಯನ್ನು ರಚಿಸಿದ್ದಾರೆ. ಹಾರ್ದಿಕ ಅಭಿನಂದನೆಗಳು

    1. ಪ್ರಹ್ಲಾದ ಜೋಶಿ ಸರ್
      ನಿಮ್ಮ ವಿವರವಾದ ಅರ್ಥ ಪ್ರಸ್ತುತಿ ಕವನಕ್ಕೆ ವಜನ್ ಕೊಟ್ಟಿದೆ.
      ನಾನು ಈ ಕವನ ಬರೆಯುವಾಗ ನನ್ನ ಮನಸ್ಸಲ್ಲಿದ್ದದ್ದು ಇದು..

      ಸಮಾಜದಲ್ಲಿ, ಎಡ ಮತ್ತು ಬಲ ಎಂಬ ಅಥವಾ ಇನ್ನಾವುದೋ ಸೈದ್ಧಾಂತಿಕ ತಾಕಲಾಟ, ಕಬಡ್ಡಿಯಾಗಿದೆ

      ನೋಡುವವನಿಗೆ ಕನ್ಫ್ಯೂಷನ್,ಯಾವ ಕಡೆ ವಾಲಲಿ ಎಂದು.
      ಆತನ ದೇಹದ ಭಾಗಗಳು ಎಡ ಬಲಕ್ಕೆ ವಾಲಿ,ಆತ ಅಷ್ಟಾವಕ್ರನಾಗುತ್ತಾನೆ

      ನಿಮ್ಮ‌ವಿಚಾರಗಳು ಕವನದ ವಿಸ್ತಾರ ಹೆಚ್ಚಿಸಿತು. ನಮಿಪೆ

  4. ಕಬಡ್ಡಿ ಎಂಬ ಆಟ, ಆಟದ ಅಂಕಣ,ಮೈದಾನ, ಆಟದ ಓಘ, ಎರಡು ಬಣಗಳು, ಪೈಪೋಟಿ, ಉಸಿರಿನ ಹಿಡಿತ, ರೆಫರಿ,ಅಬ್ಬಬ್ಬಾ..‌…ಆಟ ಕ್ರಿಯೆ ಒಂದು ಕಡೆ, ಭಾಗವಹಿಸುವವರ ಜೊತೆಗೆ ನೋಡುವವರ ಪ್ರತಿಕ್ರಿಯೆ ಒಂದು ಕಡೆ..‌.. ಕೊನೆಗೆ ಎಡ ಬಲ ಎಂದು ವಾಲುತ್ತಾ ನೆಟ್ಟಗಿದ್ದವ ಕೂಡಾ ಅಷ್ಟಾವಕ್ರನಾಗುವ ಪರಿ…..ಕವಿತೆ ಅನುಭವದ ಕನ್ನಡಿಯಾಗಿ ಇಂದಿನ ಬದುಕನ್ನು ನಿಚ್ಚಳವಾಗಿ ಕಾಣಿಸಿತು… ತುಂಬಾ ಇಷ್ಟವಾಯ್ತು.. ತುಂಬಾ ಚೆನ್ನಾಗಿದೆ ಕಾನತ್ತಿಲ ಸರ್….

    1. ಮಮತಾ ಶಂಕರ್ ಅವರೇ, ಅಂಕಣ, ಅದರ ಅಂಚುಗಳು, ಎಡ ಬಲವಾಗಿ ವಿಭಜಿಸುವ ಗೆರೆ, ಎಡ ಬಲದ ನಡುವಿನ‌ ಪಂದ್ಯ, ಪ್ರೆಕ್ಷಕನ ದೇಹ ಮತ್ತು ಮನದ ಎಡಬಲ ವಾಲುವಿಕೆಗಳು ಈ ಎಲ್ಲವನ್ನೂ ನೀವು ಗ್ರಹಿಸಿದ ರೀತಿ ಅನನ್ಯ. ಒಟ್ಟಾರೆಯಾಗಿ, ಕವನದ ನಾಡಿಯೇ ಧ್ವನಿ. ನಿಮ್ಮ ಪ್ರತಿಕ್ರಿಯೆ ನನಗೆ ತುಂಬಾ ಪ್ರೋತ್ಸಾಹ ನೀಡಿದೆ.
      ನಿಮ್ಮ ಚೇತನ ಸದಾ ಜಯಿಸಲಿ.
      ಧನ್ಯವಾದಗಳು

Leave a Reply

Back To Top