ಪುಸ್ತಕ ಸಂಗಾತಿ
ದುಗುಡದ ಕೆಂಡ – ಕೈಲಿ ಹಿಡಿದು
ರಾಯಬಾಗದ ಯುವ ಕವಿ ಮಿತ್ರ ರಾಜು ಸನದಿಯವರ ಕವನಸಂಕಲನ “ದುಗುಡದ ಕುಂಡ ಕೈಲಿ ಹಿಡಿದು ಕಾವ್ಯ ಪ್ರೀತಿಯ ಸಂಭ್ರಮ ಸಂತೋಷ ಅನುಭವಿಸುತ್ತ ಈ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ( ಸನದಿ ಪ್ರಕಾಶನ ರಾಯಬಾಗ -೨೦೧೯) ಈ ಸಂಕಲನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕಪ್ರಾಧಿಕಾರದ ಧನ ಸಹಾಯ ಪಡೆದು ಮುದ್ರಣವಾಗಿರುವದೂ ವಿಶೇಷವೇ.ಹೊಸ ಕಾಲದ ಕವಿಗಳ ಕವಿತೆಗಳನ್ನು ಓದುವದೇ ಒಂದು ಸೊಗಸು. ಬರುತ್ತಿರುವ ಕವನ ಸಂಕಲನಗಳಿಗೇನೂ ಬರವಿಲ್ಲ. ಆದರೆ ಎದೆಯ ಕಾವು ತಣಿಸುವ ಕವಿತೆಯನ್ನು, ಓದುವದೇ ಒಂದು ಸೊಗಸು. ಹೊಸ ಹೊಸ ವಿನ್ಯಾಸದಲ್ಲಿ ಮುರಿದು ಕಟ್ಟುವ ಕವಿತೆಗಳನ್ನು ಅವು ಬಂದಾಗ ಆಗುವ ಎದುರುಗೊಳ್ಳುವ ಸಂತೋಷ ,ಭವಿಷ್ಯದ ಕಾವ್ಯ ದ ಬಗ್ಗೆ ಇರಿಸಿಕೊಳ್ಳಬಹುದಾದ ಭರವಸೆ ಇವು ಸಂತೋಷಗೊಳಿಸುತ್ತವೆ. ಅದೇ ಅದೇ ಚರ್ವಿತ ಚರ್ವಣ ರೂಪಕಗಳ ನಡುವೆ ಕಾವ್ಯ ಮುಳುಗಿ ಹೋಗಿದ್ದಾಗ ರಾಜು ಅವರ ಸಂಕಲನ ತನ್ನ ಹೊಸ ಇಡಿಯಮ್ಮುಗಳಿಂದಾಗಿ ತುಂಬ ಖುಷಿ ಕೊಟ್ಟದ್ದನ್ನು ಮೊದಲೇ ಹೇಳಿ ಮುಂದೆ ಹೋಗುತ್ತೇನೆ.
ರಾಜು ಅವರ ಈ ಸಂಕಲನದ ಬಹುಮುಖ್ಯ ಕವಿತೆ “ಅಕ್ಕ ಕಾಣೆಯಾಗಿದ್ದಾಳೆ “ಎನ್ನುವ ಹೆಸರಿನ ಎರಡು ಕವಿತೆಗಳು.ಮಹಿಳಾಸ್ವಾತಂತ್ರ್ಯದ ಬಗೆಗೆ ಬರೆದ ಕವಿತೆಗಳು ಇವು. ಹನ್ನೆರಡನೆಯ ಶತಮಾನದ ಅಕ್ಕನಿಗಾದರೋ ಎಲ್ಲವನ್ನು ದಿಕ್ಕರಿಸಿ ಹೊರಬರುವ ಸ್ವಾತಂತ್ರ್ಯವಿದ್ದಿತು. ಈ ಕಾಲದ ತನ್ನ ಅಕ್ಕ ಈ ಬಗೆಯ ಸ್ವಾತಂತ್ರ್ಯ ಅನುಭವಿಸುವದು ಯಾವಾಗ? ಎಂದು ಪ್ರಶ್ನಿಸುವ ಕವಿ ಅಕ್ಕ ಜಡ ಸಂಪ್ರದಾಯಗಳ ವಿರುದ್ಧ ಬಂಡೆದ್ದು ದಿಗಂಬರೆಯಾಗಿ ಹೊರಬಂದಳು.ಆದರೆ ತನ್ನ ಅಕ್ಕ
ಅಪ್ಪ ಅವ್ವನ ಬಂಗಾರ ಸರಪಳಿಯ ಸಂಪ್ರದಾಯದ ಮಾತು
ಬಾಜುಮನೆಯ ಗಂಡಸರ ಆಚಾರದ ಗಡಸು ದ್ವನಿಗಳ ಗಸ್ತು!
ಇವುಗಳಿಗೆ ಹೆದರಿ ಅಕ್ಕ ಮನೆಯೊಳಗಡೆಯೆ ಅಡಗಿ ಕುಳಿತು ಕವಿಯ ಬಾಜುವೆ ಇದ್ದರೂ ” ಮೋಡದ ಮರೆಯ ಚಂದಿರನಂತೆ” ಮುಸುಕಿನಲ್ಲಿ ಮರೆಯಾಗಿದ್ದಾಳೆ. ಮುಚ್ಚಿಹೋಗಿದ್ದಾಳೆ. ಕಾಳು ಹಾಕಲು ಹೊರಗೆ ಅವಳು ಬರುವಳೆಂದು ಕಾದ ಪಾರಿವಾಳಗಳು ಮೋಸ ಹೋಗಿವೆ.ಕವಿ ಅದಕ್ಕೇ ಕೇಳುತ್ತಾನೆ ,
ಮತ್ತೆಂದು ಹುಟ್ಟುತ್ತಾರೆ ಅಲ್ಲಾಹುವಿನ ಕರುಣೆಯಿಂದ
ಬಸವ ಅಲ್ಲಮ ಪೈಗಂಬರರು
ನಮ್ಮಕ್ಜನ ಎದೆಯೊಳಗಿದ್ದ ದುಗುಡದ ಕುಂಡವನ್ನು
ಹೊರಗಿಳಿಸಲು?
ಹೀಗೆ ಪ್ರಶ್ನಿಸುವ ಕವಿ ಸಮಸ್ತ ಮನುಕುಲಕ್ಕೆ ಪ್ರಶ್ನೆ ಎಸೆಯುತ್ತಾರೆ .ಇದೇ ಹೆಸರಿನ ಇನ್ನೊಂದು ಕವಿತೆ ಇದರದೆ ಮುಂದುವರಿದ ಭಾಗವಾಗಿದೆ.ಅಕ್ಕನ ಸೌಂದರ್ಯ ಯಾವ ದೇವಲೋಕದ ಸುಂದರಿಗೂ ಕಡಮೆಯಲ್ಲದ್ದು.
ಅಕ್ಕ ಸುಂದರ ಚಂದ್ರಬಿಂಬದಂತೆ
ಬಿನ್ನಾಣವಿಲ್ಲದ ಖೂಬಸೂರತ್ ಚೆಲುವೆ
ಆಕೆಗೂ ತನ್ನ ಚಲುವಿನೊಂದಿಗೆ ಹೊರಬರುವ ಆಸೆ.ತನ್ನ ಸೌಂದರ್ಯದೊಡನೆ ಆದರೆ ಸುತ್ತಲಿನ ಕಣ್ಣುಗಳೇ ಕುರುಡು. ಅದನ್ನೆ ಕವಿತೆ
ಕಪ್ಪು ಬಟ್ಟೆಯೊಂದಿಗೆ
ಧಪನ್ ಆಗಿದೆ ಅಕ್ಕನ ಚಲುವು
ಎಂದು ವಿಷಾದಿಸುತ್ತದೆ. ಆಕೆಗೂ ಆಸೆಯಿದೆ. ತಮ್ಮನಿಗೆ ಆಕೆ ಹೇಳಿದ್ದೂ ಇದೆ”.ನಾನು ನಿನ್ನಂತೆ ಬಣ್ಣ ಉಡಬೇಕು ,ಜಿಂದಗಿ ಬಾಳಬೇಕು”, ಎಲ್ಲ ಬಣ್ಣ ಉಟ್ಟರೂ ಹೊರಗೆ ಬರುವಾಗ ಮಾತ್ರ ಕಪ್ಪು ಕಪ್ಪಾಗಿ ಬಿಡುತ್ತಾಳೆ. ಆ ಕಪ್ಪು ಬಟ್ಟೆ ಅವಳ ನಗು,ನೋಟ, ನಡೆ,ನಲಿವನ್ನೆಲ್ಲಾ ನುಂಗಿ ಹಾಕಿರುವದರ ವಿರುದ್ದ ತಣ್ಣನೆಯ ಆಕ್ರೋಶವಿದೆ.ಕವಿತೆ ಸ್ವಲ್ಪ ವಿವರಣಾ ತ್ಮಕವಾಗಿದೆ ಎನಿಸಿದರೂ ಅದು ಕವಿತೆಯ ಸಂವಿಧಾನ ಕ್ಕೆ ಏನೂ ಅಂತಹ ಬಂಗ ತಂದಿಲ್ಲ. ಇಡೀ ಮಹಿಳಾ ಕುಲದ ಎದೆಯೊಳಗಿರುವ ದುಗುಡದ ಕುಂಡವ ಆರಿಸುವ ಆಸೆ ಕವಿಗೆ ಇರುವದು ಸ್ಪಷ್ಟವಾಗಿ ವ್ಯಕ್ತವಾಗಿದೆ. “ಬೆಳಕು “ನಂತಹ ಕವಿತೆಗಳು ಅವರ ಸಮಾಜಮುಖಿ ಚಿಂತನೆಯಿಂದ ಗಮನ ಸೆಳೆದಿವೆ.
ಈ ಸಾಲುಗಳು ನೋಡಿ.
ರೈತ ನೀರುಣಿಸುವಾಗ
ಲಾಂದ್ರವಾಗುವ ಆಸೆ
ಯೋಧ ಹೋರಾಡುವಾಗ
ದೀವಟಿಗೆಯಾಗುವ ಆಸೆ
ಈ ಸಾಲುಗಳುಕವಿಯ ಕವಿತಾ ಶಕ್ತಿಗೆ ನಿದರ್ಶನವಾಗಿವೆ.ಪ್ರೇಮ ಬಾವದ ಕವಿತೆಗಳಲ್ಲೂ ಕವಿ ಶಕ್ತಿವತ್ತಾಗಿ ಭಾವ ಸೂಸುವ ಸಾಲು ಬರೆದಿದ್ದಾರೆ
ಎದೆಯ ಬ್ಯಾನಿಗೆ ನಿನ್ನ ಸ್ವಾತಿ ಮಳೆಯ
ತಂಪಿನ ಜರೂರತ್ತಿನಲ್ಲಿದ್ದೇನೆ..
ಸಾದ್ಯವಿದ್ದರೆ ಸವುಡು ಮಾಡಿ
ಚಂದಿರನ ನಗುವ ತೆಗೆದುಜೊಂಡು ಇತ್ತ ಬಾ
ಎನ್ನು ಅಹವಾಲು ವ್ಯಕ್ತಮಾಡುತ್ತಾರೆ” ಕಣ್ಣೀರ ರಕ್ತ” ಎನ್ನುವ ಕವಿತೆಯ
ಪ್ರೀತಿಯನ್ನು
ನಾ ದೈವವೆಂದು ನಂಬಿದ್ದೆ
ದೈವದ ಎದುರು ವಾದಿಸಲಿಕ್ಕಾಗದು
ಕೈಯೊಡ್ಡಿ ಕಣ್ಣೀರ ಸುರಿಸಿ
ಪ್ರಾರ್ಥಿಸಬಹುದಷ್ಟೇ..
ಇಂತಹ ಸಾಲುಗಳ ಅಭಿವ್ಯಕ್ತಿ ಸಂತಸ ಉಕ್ಕಿಸುತ್ತದೆ.” “ಪ್ರಳಯವಾಗಬೇಕಿದೆ” ,”ನಮ್ಮ ನಿಮ್ಮ ನಡುವೆ” “ಬದಲಾಗಲಿ” ಇತ್ಯಾದಿ ಕವಿತೆಗಳ ಸಾಲುಗಳ ಪ್ರಾಮಾಣಿಕತೆ ಮೆಚ್ಚುವಂತಿದೆ.
ಬುದ್ದ, ಬಸವ,ಅಂಬೇಡ್ಕರ್
ಹಿಲಾಲುಗಳನ್ನು ಹಚ್ಚಿಕೊಂಡು
ಸಾವಿರಾತು ಹೆಜ್ಜೆ ಮುಂದೆ
ಸಾಗುತ್ತೇವೆ.ಧರ್ಮದ ಹೆಸರಿನ
ಮೋಸಗಳ ಹುಗಿದು
ಎನ್ನುವ ಸಾಲುಗಳ ಸಂಖ್ಯೆ ಹೆಚ್ಚಬೇಕಿರುವದು ಇಂದಿನ
ಅಗತ್ಯವಾಗಿದೆ. ಕವಿಯ
ಹಕ್ಕಿಯ ಹಾಡಿಗೆ
ನಗುವ ಮಗುವಿಗೆ
ಯಾವ ಧರ್ಮದ ಮುದ್ರೆಯಿದೆ
ದಯೆಯಿಲ್ಲದ ಧರ್ಮಕ್ಕೆ ಯಾವ ಎದೆ ಅರಳುತ್ತದೆ
ನೂರಾರು ನದಿಗಳ ದಾರಿ
ಸಾಗಿಸಿದ ಸಂವಿಧಾನ ರಥದ
ಕೀಲುಗಳ ಸಡಿಲಿಸುವ
ನಂಜಿನ ನಾಗರಗಳ ನಾಲಿಗೆಗಳು
ಬದಲಾಗಬೇಕಿದೆ
ಇಂತಹ ಸಾಲುಗಳನ್ನು ಓದಿದಾಗ ಹಿಂಬದಿಯ ಪುಟಗಳಲ್ಲಿ ಆಶಾ ಜಗದೀಶ್ ರವರು ಬರೆದಿರುವ ಮಚ್ಚಿಕೆಯ ಸಾಲುಗಳು ನಿಜಕ್ಕೂ ಸಾರ್ಥಕ ವಾಗುತ್ತವೆ.
ರಾಜು ಅವರ ಕೆಲವು ಕವಿತೆಗಳು ವಿವರಣಾತ್ಮಕ ವಾಗಿವೆ .ಅಲ್ಲಿ ಒಂದಿಷ್ಟು ಸಂಯಮ ಬೇಕಿತ್ತು. ಸಂಕ್ಷಿಪ್ತತೆ ಕಾವ್ಯದ ಶ್ರೇಷ್ಠ ಗುಣ ಎನ್ನುವದನ್ನು ಈ ಯುವ ಕವಿಗಳು ರೂಢಿಸಿಕೊಂಡರೆ ಅವರ ಕಾವ್ಯಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಇದು ಅವರಿಂದ ಸಾಧ್ಯವಿದೆ ಎಂಬ ನಂಬಿಕೆ ನನಗಿದೆ. ಕಾವ್ಯ ಬೋದನಾತ್ಮಕವಾದಾಗ ಮನುಷ್ಯ ದಂತಹ ಕವಿತೆ ಬಂದಿವೆ. “ಮನುಷ್ಯ” ಕವಿತೆ ಓದಿದಾಗ ಇದು ವ್ಯಕ್ತವಾಗುತ್ತದೆ.
ನೀ ಹೀಗೇಕಾದೆ?
ಪ್ರೀತಿ ,ಕರುಣೆ ದಯೆ,ಎಲ್ಲ ಮರೆತು
ಎಲ್ಲವನ್ನು ಹಣದಿಂದ ಅಳೆಯುವ
ಬುದ್ದಿಯನ್ನು ಕಲಿತು ಬುದ್ದುವಾದೆ!
ನೀ ಮತ್ತೊಮ್ಮೆ “ಮನುಷ್ಯ “ಎಂದಾಗುವೆ?
ಇಂತಹ ಕವಿತೆಗಳು ಇನ್ನು ಹೆಚ್ಚು ಸಾವಯವ ಗೊಳ್ಳಬೇಕು. “ಪ್ರಜಾಪ್ರಭುತ್ವ” ದಂತಹ ಕವಿತೆಗಳಿಗೂ ಇದೆ ಮಾತು ಅನ್ವಯವಾಗುತ್ತದೆ..
ರಾಜು ಅವರ ಹಿಂದೆ ಇರುವ ಶ್ರಮ ಸಂಸ್ಕೃತಿ , ಮೂಲ ಸೆಲೆಯಾಗಿರುವ ಹಳ್ಳಿ ಬದುಕು ಅವರನ್ನು ಗಟ್ಟಿ ಗೊಳಿಸಿವೆ.ಮುನ್ನುಡಿ ಬರೆದ ಹಿರಿಯ ಕವಿ ಸತೀಶ ಕುಲಕರ್ಣಿಯವರು ಹೇಳಿರುವ ” ಕವಿ ರಾಜು ಎಸ್ ಸನದಿ ಕಾವ್ಯ ಲೋಕದಲ್ಲಿ ಬಹಳ ದೂರ ಸಾಗಬೇಕಿದೆ.ಸವಾಲುಗಳ ನಡುವೆ ಉತ್ತರಗಳನ್ನು ಹುಡುಕುವ ದಾರಿ ಕಾಣಬೇಕಾಗಿದೆ” ಎನ್ನುವ ಸಾಲುಗಳು ಇಂದಿನ ಎಲ್ಲ ಕವಿಗಳಿಗೂ ಎಚ್ಚರಿಕೆಯಾಗಿದೆ. ಮೊದಲ ಸಂಕಲನದಲ್ಲಿ ತೋರಿರುವ ಉತ್ಸಾಹವನ್ನುಮುಂದಿನ ಸಂಕಲನಗಳಲ್ಕಿಯೂ ನಿರೀಕ್ಷಿಸುತ್ತ ಅವರಿಗೆ ಶುಭ ಹಾರೈಸುತ್ತೇನೆ.
*********************************
ಯ.ಮಾ ಯಾಕೊಳ್ಳಿ