ಕವಿತೆ
ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!?
ಶೀಲಾ ಸುರೇಶ್
ಕೊರಳುಬ್ಬಿಸಿ ಬಿಕ್ಕುತ್ತಲೇ
ಕಾಯಬೇಕು ಸೆರಗೆಳೆವ
ಸಖನಿಗಾಗಿ…
ಬಂದವನೆದುರು ನಾಚಿಕೆಯ
ಸೋಗಾಕಿ
ಬಿನ್ನಾಣದ ನಡೆಹೊತ್ತು
ಬೆನ್ನಾಕಿ ನಿಂತಿದ್ದು
ಜಿನುಗಿದ ಹನಿ ಕಾಣದಿರಲೆಂದು
ತಡಮಾಡಲೇ ಇಲ್ಲ
ಮುಖತಿರುಗಿಸಿ
ತಡಕಾಡಿದ್ದು ದೀಪವಾರಿಸಲೆಂದು
ಹುಚ್ಚಾಟಗಳ ಸಹಿಸಿಯೂ
ಕಾದಿದ್ದು ಪೂರೈಸಿದ
ಬಯಕೆ ತಂದ ಹಣವೆಷ್ಟೆಂದು
ಬೆತ್ತಲಾದ ದೇಹಕ್ಕೆ
ಮುಚ್ಚಲಾರದ ನೋಟುಗಳು
ಗಹಗಹಿಸಿ ನಕ್ಕಗಂತೂ
ಮಡುಗಟ್ಟಿದ ಮೌನ
ಕದತೆರೆದು ಬೀದಿ
ಬದಿಯ ಕೊನೆಯಲ್ಲಿ
ಮತ್ತೆ ಬೆಂಕಿಯಾಗಿತ್ತು
ಸುಕ್ಕುಗಟ್ಟಿದ ನೆರಿಗೆ
ಹಾಸಿಗೆ ಹೊದಿಕೆ
ಸರಿಪಡಿಸಿ
ನಡುಗುವ ಮೈಯನ್ನೊಮ್ಮೆ
ಕೊಡವಿ ಬಿಗಿಯಾಗಿಸಿ
ನಗೆಯಾದಳು ಸೆರಗಚಾಚಿ….
ಹೋಗಿಬರುವ ನಾಲ್ಕು
ಗಾಲಿಗಳು ಬೆಳಕನಾರಿಸಲೆ ಇಲ್ಲ..ತೂರಾಡುತ್ತಲೇ ಬಂದು
ಗಪ್ಪೆಂದು ಬಡಿದ ವಾಸನೆ
ಎಸೆದ ಕಾಸು ಮಡಿಲು
ತುಂಬಲಿಲ್ಲ
ಹಸಿವನೀಗಿಸಲೂ ಇಲ್ಲ
ಸೋತ ದೇಹ ಕುಸಿದು
ಕಣ್ಣೀರಾದದ್ದು ಕಂದನ
ಕನಸಿಗೆ ನೀರಾಕುವುದೇಗೆಂದು ತಿಳಿಯದೆ.
ಕೆಂಪು ಹೂವಿಗೆ ಸೋತು
ಹರಿಸಿದ್ದು ಕೆಂಪು ಓಕುಳಿ
ಒಂದೊಂದೆ ದಳ ಉದುರಿ
ಮುಡಿಯೇರುವ ಮುನ್ನವೇ
ಮಣ್ಣಾಗಿದ್ದು ಹೂವಿಗೂ
ತಿಳಿಯಲಿಲ್ಲ…
***************************************************
ನೋವಿಗೆ ಮುಖಾಮುಖಿ……
ಶತಮಾನಗಳ ಮುಗಿಯದ ನೋವಿಗೆ ,ದುಃಖಕೆ ತಟ್ಟಿ ಬರುವ ಕವಿತೆ..
ನೈಸ್
ಆಂತರ್ಯದ ಆಕ್ರಂದನ.
ಶಬ್ದಗಳ ಪೋಣಿಸಿದ ಪರಿ, ಬಿಂಬಗಳ ದೃಶ್ಯಾವಳಿ ಅಮೋಘ