ಅತಿ ಮಧುರಾ ಅನುರಾಗ

ಕಥೆ

ಅತಿ ಮಧುರಾ ಅನುರಾಗ

ಚಂದಕಚರ್ಲ ರಮೇಶ ಬಾಬು

Image result for photos of couples in arts

ಅಂದಿನ ರಾತ್ರಿ ನಮ್ಮ ಮನೆಯ ಡೈನಿಂಗ್ ಟೇಬಲಲ್ಲಿ ನಮ್ಮ ರಾತ್ರಿ ಊಟ ಎಂದಿನಂತೇ ಮೊದಲಾಗಿತ್ತು. ನಮ್ಮ ಹಿರಿಯ ಮಗಳು ಅಂಜನಾ, ಅವರ ತುಂಬಾ ಸಾಧಾರಣ ರೀತಿಯಲ್ಲಿ ಹೇಳುವ ಹಾಗೆ ನಮಗೆ ಹೇಳಿದಳು. “ ಅಮ್ಮಾ ! ಅಪ್ಪಾ! ನಾನು, ನನ್ನ ಕಲೀಗ್ ವಿಶ್ವನಾಥ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಮದುವೆ ಸಹ ಮಾಡಿಕೊಳ್ಳಬೇಕೆಂದಿದ್ದೇವೆ. ನಿಮ್ಮ ಆಶೀರ್ವಾದ ಬೇಕು “ ಅಂತ.

ಮಧ್ಯ ತರಗತಿ ಸಂಸಾರಗಳಲ್ಲಿ ಇದಕ್ಕಿಂತ ದೊಡ್ಡ ಬಾಂಬ್ ಸ್ಫೋಟ ಬೇರೊಂದಿರುವುದಿಲ್ಲ ಅಂತ ನನ್ನ ಅಭಿಪ್ರಾಯ. ಹೊರಗಡೆ ನಮ್ಮ ಸರ್ಕಲ್ ಗಳಲ್ಲಿ ಈ ತರದ ಪ್ರೇಮ ಕತೆಗಳೆಷ್ಟು ಕೇಳಿದ್ದರೂ, ಅದು ನಮ್ಮ ಮನೆಯಲ್ಲಿ ಆಗ ಬಹುದು ಅಂತ ಯಾವ ದಂಪತಿಯೂ ಎಣಿಸುವುದಿಲ್ಲ. ಅದೇನೋ ತಮ್ಮ ಸಂಸಾರಕ್ಕೆ ಬಂದು ಬಡಕೊಳ್ಳುವ ಶಾಪ ಅಂತ ತುಂಬಾ ಕುಟುಂಬಗಳ ಅನಿಸಿಕೆ. ತಾವು ಬೆಳೆಸಿದ ಮಕ್ಕಳು ಆ ತರದ ಕೆಲಸ ಮಾಡುವುದಿಲ್ಲ, ತಾವು ನೋಡಿದ ಹುಡುಗನನ್ನೇ ಮದುವೆಯಾಗ್ತಾಳೆ ಎನ್ನುವ ಅತಿ ಗಟ್ಟಿ ನಂಬಿಕೆ ಅವರಿಗೆ. ಆದರೆ ಈ ಎರಡು ದಶಕಗಳಲ್ಲಿ ನಮ್ಮ ಸಮಾಜ ತುಂಬಾ ಬದಲಾವಣೆಗಳನ್ನು ಕಂಡಿದೆ.. ಬದಲಾಗಿದೆ ಎನ್ನುವದಕ್ಕಿಂತ ಯುವ ಪೀಳಿಗೆ ಅದನ್ನು ಬದಲಾಯಿಸಿದೆ ಎನ್ನುವುದು ಸರಿಯೇನೋ !

ಅದಕ್ಕು ಮುಂಚೆ ಗಂಡು ಮಕ್ಕಳಿಗೆ ಕೆಲಸ ಸಿಗದೇ ಇರುವುದು ಶಾಪವಾದರೆ, ಹೆಣ್ಣು ಮಕ್ಕಳಿಗೆ ಮದುವೆ ಯಾಗದಿರುವುದು ಶಾಪವಾಗಿತ್ತು. ಹುಡುಗಿಯರು ಅಲ್ಲಲ್ಲಿ ಕೆಲಸ ಮಾಡುತ್ತಿದ್ದರೂ ತಂದೆ ತಾಯಿಗಳ ಮರೆಯ ಮಗಳಾಗೇ ಇರುತ್ತಿದ್ದಳು. ಸ್ವಯಂ ನಿರ್ಣಯಗಳು ತೊಗೊಳ್ಳುವುದು ತುಂಬಾ ಕಡಿಮೆಯಾಗಿತ್ತು. ಆದರೆ ಈ ಎರಡು ದಶಕಗಳಲ್ಲಿ ನಮ್ಮ ಭಾರತಕ್ಕೆ ಬಂದ ತಾಂತ್ರಿಕ ಕ್ರಾಂತಿ ತಂದ ಉದಾರ ನೀತಿಯಿಂದ ಹುಡುಗಿಯರಿಗೆ ಕೆಲಸ ಸಿಗೋದು, ಆ ಕೆಲಸಗಳಲ್ಲಿ  ಕೈ ತುಂಬಾ ಸಂಬಳ ಬರೋದು, ಎಲ್ಲ ತರದ ಸೌಲಭ್ಯ ಸಿಗೋದು ಶುರುವಾದ ಮೇಲೆ ಯುವ ಜನರ ಬದುಕಿನ ರೀತಿಯೇ ಬದಲಾಯಿತು. ಎಲ್ಲರ ಮನೆಯ ಹುಡುಗಿಯರು ಒಳ್ಳೆಯ ಓದುಗಳನ್ನು ಮುಗಿಸೋದು, ಕ್ಯಾಂಪಸ್ ಆಯ್ಕೆ, ಕೆಲಸಕ್ಕೆ ಸೇರೋದು, ದೊಡ್ಡ ದೊಡ್ಡ ಸಂಬಳ, ಅದಕ್ಕೆ ತಕ್ಕಂತ ಸೌಲಭ್ಯ ಒದಗಿಸಿಕೊಳ್ಳೋದು, ಮನೆ, ಕಾರು ತೊಗೊಳ್ಳೋದು ನಡೆದವು. ಅವುಗಳ ಜೊತೆಗೆ ಗಂಡು, ಹೆಣ್ಣು ಅಂತ ಇಲ್ಲದೇ ಎಲ್ಲರೂ ಸೇರಿ ರಾತ್ರಿ ಹಗಲು ಕೆಲಸ ಮಾಡ ಬೇಕಾಗಿ ಬಂದು ಅವರ ನಡುವೆ ಸಾನ್ನಿಹಿತ್ಯ ಬೆಳೆಯಲಾರಂಭಿಸಿತು. ಎಲ್ಲಿಂದಲೋ ಬಂದು ಇಲ್ಲಿ ಕೆಲಸ ಮಾಡುವ ವಾತಾವರಣದಲ್ಲಿ ಯಾರಿಗೆ ಯಾವ ಗುಣ ಇಷ್ಟವಾಗುತ್ತದೋ, ಯಾರು ಯಾರನ್ನು ಪ್ರೀತಿಸುತ್ತಾರೋ, ಅವರ ಕುಟುಂಬದ ಹಿನ್ನೆಲೆಗಳು ಗೌಣವೆನಿಸಿ ಮದುವೆಗೆ ತಯಾರಾಗುತ್ತಾರೋ ಅರ್ಥವಾಗದ ಸಮಸ್ಯೆಯಾಗಿ ಉಳಿದಿತ್ತು ತಂದೆ ತಾಯಿಗಳಿಗೆ. ಕ್ರಮೇಣ ಹುಡುಗಿಯರು ದೊಡ್ಡವರು ಏರ್ಪಾಡು ಮಾಡುವ ಹೆಣ್ಣು ತೋರಿಸುವ ಕಾರ್ಯಕ್ರಮಕ್ಕೆ ಕೂರುವುದೇ ಬಿಟ್ಟಿದ್ದು, ಅರೇಂಜ್ಡ್ ಮದುವೆಗಳೆಂದರೆ  ಮೂಗು ಮುರಿಯುವುದು ಸಾಮಾನ್ಯವಾಗಿ ಹೋಯಿತು. ಅದೇ ತರ ಸಂಪ್ರದಾಯ ದಿರಿಸುಗಳಾದ ಸೀರೆ,ದಾವಣಿಗಳು ಸಹ. ಇದರಿಂದ ಆದ ಪರಿಣಾಮ ಅಂತರ್ಜಾತಿ ಅಂತರ್ಧರ್ಮ ಅಂತರ್ಭಾಷಾ ವಿವಾಹಗಳು. ಅದಕ್ಕೆ ನನ್ನ ಮಗಳು ಅತಿ ಸಾಮಾನ್ಯವೆಂಬಂತೆ ತನ್ನ ಪ್ರೀತಿಯ ಬಗ್ಗೆ ನಮಗೆ ತಿಳಿಸಿದ್ದಳು. ಆದರೆ ನಮಗೆ ಅದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ನನ್ನವಳಿಗಂತೂ ತೀರ ಹಿಡಿಸಲಿಲ್ಲವೆಂದು ಅವಳ ಮುಖಚರ್ಯೆಯೇ ಹೇಳುತ್ತಿತ್ತು.

ನಾನು ಹುಶಾರಾಗಿ “ ಪುಟ್ಟಾ ! ಊಟವಾದ ಮೇಲೆ ಇದರ ಬಗ್ಗೆ ಮಾತಾಡೋಣ ! ಹೇಗೂ ವಿಷಯ ಹೇಳಿದೆಯಲ್ಲ “ ಎಂದೆ. ನನ್ನವಳು ನನ್ನತ್ತ ಕೆಂಗಣ್ಣು ಹಾಯಿಸಿದಳು. ಆ ನೋಟ ನನ್ನ ಮಗಳ ಕಡೆಗೆ ಆಗಲೇ ಹೋಗಿಯಾಗಿತ್ತು. ನಮ್ಮ ಎರಡನೆಯ ಮಗಳು ಅರ್ಚನಾ ತುಂಬಾ ಕುತೂಹಲದಿಂದ ನೋಡುತ್ತಿದ್ದವಳು ನಾನು ವಾಯಿದೆ ಹಾಕಿದ್ದು ಕೇಳ ನಿರಾಶೆಯ ಮುಖವಿಟ್ಟಳು. ಎಷ್ಟಾದರೂ ತನ್ನ ಪಾತ್ರವಿಲ್ಲದ ನಾಟಕ ನೋಡಲು ಎಲ್ಲರಿಗೂ ಇಷ್ಟಾನೇ ಅಲ್ಲ !

ಅಂಜನಾಳು ಮಾತ್ರ “ ಯಾಕಪ್ಪಾ ! ಈಗ ಎಲ್ಲರೂ ಇದ್ದೀವಲ್ಲ. ಮಾತಾಡೋಣ.ತಪ್ಪೇನು ? “ ಎಂದಳು. ನಾನಾಗ

“ ನೋಡು ಪುಟ್ಟಾ ! ನಾವೆಲ್ಲ ಒಂದು ಕುಟುಂಬ ಅಂತಾದರೂ ದೊಡ್ಡವರು, ಚಿಕ್ಕವರು ಅಂತ ವ್ಯತ್ಯಾಸ ಇದೆಯಲ್ಲಾ! ನನಗೆ ಅರ್ಚನಾ ಈ ಚರ್ಚೆಯಲ್ಲಿ ಭಾಗವಹಿಸೋದು ಇಷ್ಟ ಇಲ್ಲ. ನೀನು ನಿನ್ನ ಮುಂದಿನ ಬದುಕಿನ ಬಗ್ಗೆ   ತೊಗೊಂಡ ನಿರ್ಣಯ ನಮಗೆ ಹೇಳಿದಿಯಾ. ಇದಕ್ಕೆ ನಾನು, ನಿಮ್ಮಮ್ಮ ಮತ್ತು ನೀನು ಮೂವರೇ ಬಾಧ್ಯಸ್ತರು. ಅರ್ಚನಾ ಬರೀ ಪ್ರೇಕ್ಷಕಳು ಮಾತ್ರ. ಎಲ್ಲ ಮುಗಿದಮೇಲೆ ತಿಳಿದುಕೊಳ್ಳ ಬಹುದು. ಅದೂ ಅಲ್ದೇ ಇದು ಅಷ್ಟು ಸಲೀಸಾಗಿ ಬಗೆ ಹರಿಯೋ ವಿಷಯವೂ ಅಲ್ಲ ಅಂತ ನಿಂಗೂ ಗೊತ್ತು. ಊಟ ಆದ ಮೇಲೆ ಮಾತಾಡಿದರೆ ವಿಷಯವೇನೂ ಬದಲಾಗಲ್ಲಲ್ಲ “ ಅಂದೆ. ನನ್ನವಳು ಸಹ “ ನಂತರ ಮಾತಾಡೋಣ. ಎಲ್ಲರ್ನ ಹೊಟ್ಟೆ ತುಂಬ ಊಟ ಮಾಡಲು ಬಿಡು “ ಅಂದಳು ನಿಷ್ಟೂರ ತುಂಬಿದ ಧ್ವನಿಯಲ್ಲಿ.  ಚರ್ಚೆ ಮುಂದೂಡಲಾಯಿತು. ಆದರೆ ಯಾದವರಲ್ಲಿ ಮುಸಲ ಹುಟ್ಟಿದ ಹಾಗೆ, ಮನಸ್ಸಿನಲ್ಲಿಯ ತುಮುಲ ಒಬ್ಬೊಬ್ಬರಲ್ಲಿ ಒಂದೊಂದು ತರ ಮೊದಲಾಯಿತು.

************

ಊಟ ಮುಗಿಸಿ  ನಾನು ಅಂಜನಾ ಹಾಲ್ ಎಂದು ಕರೆದುಕೊಳ್ಳುವ ಚಿಕ್ಕ ಮುಂದಿನ ಕೋಣೆಗೆ ಬಂದು ಕುಳಿತೆವು.  ವರಾಂಡಾ,ಪಡಸಾಲೆ, ನಡುಮನೆ, ಅಡಿಗೆಮನೆ, ಬಚ್ಚಲು ಎಂಬ ಪದಗಳೇ ಈಗ ಕೇಳದಾಗುತ್ತಿವೆ. ಹಾಲ್, ಬೆಡ್ರೋಮ್, ಕಿಚೆನ್ ಗಳ ಜೊತೆಗೆ ವಿಧವಿಧವಾಗಿ ಕರೆಯಲ್ಪಡುವ ( ವಾಶ್ ರೂಮ್, ರೆಸ್ಟ್ ರೂಮ್, ಟಾಯ್ಲೆಟ್)  ಬಾತ್ರೂಂ ಇವುಗಳೇ ವಾಡಿಕೆಯಾಗಿವೆ. ಸರಿ. ಇನ್ನು ವಿಷಯಕ್ಕೆ ಬರೋಣವೆಂದುಕೊಂಡು ನನ್ನವಳನ್ನು ಕೂಗಿದೆ.

“ಅಡುಗೆ ಮನೆ ಕೆಲಸ ಮುಗಿಸಿ ಬರುತ್ತೇನೆ. ನೀವು ಶುರು ಮಾಡಿ” ಎಂದಳು. ರಾಜಕಾರಣಿಗಳು ಸಭೆಗೆ ತಡವಾಗಿ ಬರುವಾಗ ಹೇಳುವ ಹೇಳಿಕೆ ತರ ಎನಿಸಿತು. ಆದರೆ ಅವಳಿಲ್ಲದೇ ಚರ್ಚೆ ಶುರು ಮಾಡಿ ಅವಳು ಬಂದ ಮೇಲೆ ಮತ್ತೆ ಚರ್ವಿತ ಚರ್ವಣ ಮಾಡುವುದು ಬೇಡ ಎನಿಸಿ “ ಇವಳೇ! ಇವತ್ತೊಂದು ದಿನ ರಜೆ ಘೋಷಿಸಿ ಬಂದು ಬಿಡು” ಎಂದೆ. ಕೈ ಒರೆಸಿಕೊಳ್ಳುತ್ತಾ ಬಂದು ಕೂತು, ಇನ್ನು ಶುರುಮಾಡಿ ಎನ್ನುವ ಹಾಗೆ ಮಗಳ ಕಡೆಗೆ ನೋಡಿದಳು. ಅವಳೇ ಅಲ್ಲ ಈ ನಾಟಕದ ಮುಂದಾಳು !  ಅಂಜನಾಳು ತಯಾರಾಗೇ ಇದ್ದಳು.” ಆಗ್ಲೆ ಹೇಳಿದ್ನಲ್ಲ. ನಾನು ನನ್ನ ಕಲೀಗ್ ವಿಶ್ವನಾಥ್ ಪರಸ್ಪರ ಪ್ರೀತಿಕೊಳ್ತಾ ಇದ್ದೇವೆ. ಮದುವೆ ಮಾಡ್ಕೊಬೇಕು ಅಂತ ಇದ್ದೀವಿ. “ ಅಂತ ಹೇಳ್ತಾ ಮಾತು ಮುಗಿಸೋಕೆ ಮುಂಚೆನೇ “ ಇದೇನ್ ಆಟಾನೇ ನಿಂದು ! ನಾವು ನಿಂಗೆ ಮದುವೆ ಮಾಡ್ಲಿಕ್ಕಾಗಲ್ಲ ಅಂತ ತಿಳ್ಕೊಂಡ್ಯಾ ನೀನೇ ಹುಡುಕ್ಕೊಂಬಂದೆ” ಎಂದಳು ಸಿಟ್ಟಿನಿಂದ. ನಾನು ಅವಳನ್ನು ತಡೆದು “ ಮುಂಚಿತವಾಗಿ ವಿವರಗಳನ್ನ ತಿಳಿ. ಮತ್ತೆ ಮಾತಾಡುವಂತೆ “ ಎನ್ನುತ್ತ ಅಂಜನಾಳ ಕಡೆಗೆ ತಿರುಗಿ ’ ವಿವರಗಳು ಹೇಳು ಪುಟ್ಟಾ”  ಅಂದೆ. “ವಿವರಗಳಿಗೇನಿದೆ ಅಪ್ಪಾ! ನನ್ನ ಜೊತೆ ಕೆಲಸ ಮಾಡುತ್ತಾನೆ. ಹಿಂದೀ ಹುಡುಗ. ಇಲ್ಲಿಗೆ ಬಂದು ಕನ್ನಡ ಕಲಿತಿದ್ದಾನೆ. ನಾವೆಲ್ಲ ಮಾತಾಡಿಕೊಳ್ಳೋದು ಇಂಗ್ಲೀಷೇ ಅಲ್ಲ. ಹಾಗಾಗಿ ಭಾಷೆ ಅಡ್ಡ ಅಗಲ್ಲ. ಮತ್ತೆ ಅವರು ನಮ್ಮವರೇ. ಉತ್ತರಾದಿಯವರಷ್ಟೇ. ಶಾಕಾಹಾರಿಗಳು. ಅವರಪ್ಪಂದು ಬಿಜಿನೆಸ್ ಇದೆಯಂತೆ. ಇಬ್ಬರು ಅಣ್ಣ ತಮ್ಮಂದಿರು. ದೊಡ್ಡವನಿಗೆ ಮದುವೆಯಾಗಿ ಒಬ್ಬಮಗ ಇದ್ದಾನೆ. ಅವರ ಕಡೆಯಿಂದ ಯಾವ ತರದ ಆಕ್ಷೇಪಣೆ ಇಲ್ಲಾಂತ ವಿಶ್ವನಾಥ್ ಹೇಳಿದ್ದಾನೆ. ನೀವು ಸಹ ಒಪ್ಪಿದರೆ ದೊಡ್ಡವರೆಲ್ಲ ಸೇರಿ ಮಾತಾಡಿ ಮುಂದಕ್ಕೆ ಹೋಗ ಬಹುದು. “ ಎಂದಳು.

ನನ್ನವಳು ಸರ್ರಂತ ಎದ್ದಳು “ ಇದೇನೇನೇ ನೀನು ಆಫೀಸ್ ನಲ್ಲಿ ಮಾಡೋ ಕೆಲ್ಸ ? ಕೆಲಸ ಮಾಡಿ ಸಂಬಳ ಬಂದರೆ ಕುಟುಂಬಕ್ಕೆ ಸ್ವಲ್ಪ ಸಹಾಯ ಆಗತ್ತೆ ಅಂತ ಸಂತೋಷ ಪಟ್ವು ಅಷ್ಟೆ. ಹೀಗೆ ಮನೆ ಮೇಲೆ ತರ್ತೀಯ ಅಂದುಕೊಂಡಿರ್ಲಿಲ್ಲ. ನಾವು ನಿನಗೆ ವಿದ್ಯೆ, ಬುದ್ಧಿಯ ಜೊತೆಗೆ ನಮ್ಮ ಸಂಪ್ರದಾಯ ಸಹ ಕಲಿಸಿಲ್ವಾ ? ಅವೆಲ್ಲ ಗಾಳಿಗೆ ತೂರಿ ಅವನ್ಯಾವನೋ ಉತ್ತರಾದಿಯವನ್ನ ಕಟ್ಟಿಕೊಳ್ತೀಯಾ ? ನಾಚಿಕೆ ಯಾಗಲ್ವಾ ? ಅದೂ ಹೇಳೋದ್ ನೋಡು ! ಮಾಡಿಕೊಳ್ಳಾ ಅಂತ ಕೇಳೋದೇನೂ ಇಲ್ಲ, ಬರೀ ಮಾಡಿಕೊಳ್ತೀವಿ ಅಂತ ಎಷ್ಟು ನೇರವಾಗಿ ಹೇಳ್ತಾ ಇದಾಳೆ ನೋಡಿ. ಇದೇನೇನು ನೀನು ನಮ್ಮಿಂದ ನಮ್ಮ ಮನೆಯಿಂದ ಕಲಿತದ್ದು “ ಎಂದು ಹಾರಾಡಿದಳು.

ನನ್ನ ಮಗಳ ನನ್ನಷ್ಟೇ ಪ್ರಶಾಂತ ಚಿತ್ತದವಳು. ಅವಳು ತನ್ನ ಮೃದು ದನಿಯಲ್ಲೇ ಅಮ್ಮನಿಗೆ ಹೇಳಿದಳು. “ ಅಮ್ಮಾ! ನಿಮಗೆ ಹೇಳದೇ ನಾವೇ ಮದುವೆ ಮಾಡಿಕೊಂಡರೆ ತಪ್ಪು. ನಿಮಗೆ ತಿಳಿಸ್ತಾ ಇದ್ದೀನಲ್ಲ. ಇನ್ನೇನು ?

 ಅಮ್ಮಾ ! ದುನಿಯಾ ಬದಲಾಗ್ತಿದೆ. ಈಗ ಇಷ್ಟಪಟ್ಟವರ ಜೊತೆಯಲ್ಲೇ ಮದುವೆಗಳು ಆಗ್ತಿರೋದು. ಇವು ತಪ್ಪು ಸಹ ಅಲ್ಲ. ಅದೆಲ್ಲ ಸರಿ. ನಿಮಗಿಷ್ಟಾನಾ ಇಲ್ಲಾ ಅದ್ ಹೇಳಿ “ ಎಂದಳು.

ನಮ್ಮ ಹೋಂ ಡಿಪಾರ್ಟ್ ಮೆಂಟ್ ಮತ್ತೆ ರೇಗೋಕ್ ಮುಂಚೆ ನಾನು “ ಅಂಜನಾ ! ಒಂದ್ಕೆಲ್ಸ ಮಾಡು. ಆ ಹುಡುಗನ್ನ ಒಮ್ಮೆ ಮನೆಗೆ ಕರ್ಕೊಂಬಾ. ಪರಿಚಯ ಮಾಡಿಸು. ಮತ್ತೆ  ಮುಂದಿನದು ಮಾತಾಡೋಣ. “ ಎಂದೆ. ಅವಳು “ ಸರಿ ಅಪ್ಪಾ ! “ ಅಂತ ಎದ್ದು ಹೋದಳು. ಅಕ್ಕ ತಂಗಿ ಗುಸು ಗುಸು ಕೇಳಿಸಿತು. ಎಷ್ಟಾದರೂ ಅರ್ಚನಾಗೆ ಅವರಕ್ಕ ಹೀರೋಯಿನ್ ಅನಿಸುವುದು ತಪ್ಪಲ್ಲ. ಸಿನಿಮಾದಲ್ಲಿ ನೋಡೋ ಪ್ರೇಮ ಕಥೆ ಕಣ್ಣ ಮುಂದೆ ನಡೀತಿದ್ರೆ ಹೇಗಿರುತ್ತೆ ! ಆ ಥ್ರಿಲ್ ಅವಳಿಗೆ !

ನಾನು ನನ್ನವಳು ನಮ್ಮ ಮಂಚದ ಮೇಲೆ ಉರುಳಿದೆವು. ನನ್ನಾಕೆ “ ಇದೇನ್ರೀ ಇದು  ಇವಳು ಮಾಡಿದ್ದು?  ನಾಲ್ಕು ಜನ ಏನಂತಾರೆ ? ನಾಳೆ ನಾವು ನಮ್ಮ ಬಳಗದಲ್ಲಿ ತಲೆ ಎತ್ತಿಕೊಂಡು ತಿರಗಲಿಕ್ಕೆ ಆಗ್ತದಾ ? ಸುತ್ತ ಮುತ್ತಲಿನವರೆಲ್ಲ ಆಡಿಕೊಳ್ಳೋದಿಲ್ಲಾ? ಅರ್ಚನಾಳ ಮದುವೆ ಹೇಗೆ? ನೀವೇನೋ ನಾಗೇಂದ್ರ ರಾಯರ ತರಾ ಹುಡುಗನ್ನ ಕರ್ಕೊಂಬಾ ಅಂದ್ರಿ. ಅಂದ್ರೇನು ಹುಡುಗ ಎಲ್ಲಾ ಸರಿ ಇದ್ರೆ ಮದುವೆಗೆ ಒಪ್ತೀರಾ ಹೇಗೆ “ ಅಂದ ನನಗೆ ಸವಾಲು ಹಾಕಿದಳು.

ಅದಕ್ಕೆ ನಾನು “ ಬದಲಾಗುತ್ತಿರುವ ಕಾಲಕ್ಕೆ ತಕ್ಕ ಹಾಗೆ ನಾವು ನಮ್ಮ ಆಲೋಚನೆಗಳು ಬದಲಾಗ ಬೇಕು ಕಾತ್ಯಾ ! ಈಗ ಪ್ರೇಮ ಮದುವೆಗಳು ತುಂಬಾ ಸಾಮಾನ್ಯವಾಗಿವೆ. ಈ ಸಾಫ್ಟ್ ವೇರ್ ಕೆಲಸಗಳಿಗೆ ಹುಡುಗಿಯರು ಸೇರುವುದಕ್ಕೆ ಮೊದಲಾದ ಮೇಲೆ ಪ್ರತಿ ಮನೆಯಲ್ಲೂ ಈ ತರದ ಅವಾಂತರ ಎದುರಾಗುತ್ತಿದೆ. ನೀನೊಂದು ವಿಷಯ ಆಲೋಚಿಸು. ನಾವು ನೋಡುವ ಗಂಡು ಎಲ್ಲಾ ತರ ಒಳ್ಳೆಯವನಾಗಿರುತ್ತಾನೆ ಅಂತ ಖಾತ್ರಿ ಇದೆಯಾ ? ಅವನ ಬಗ್ಗೆ ಅವರ ಕುಟುಂಬದ ಬಗ್ಗೆ ಎಷ್ಟು ವಿಚಾರಿಸಿ ತಿಳಿದರೂ ಎಲ್ಲಾ ಸತ್ಯಗಳೂ ಗೊತ್ತಾಗುತ್ತವೆಂದು ನಂಬಲಿಕ್ಕಾಗುವುದಿಲ್ಲ. ನಮ್ಮ ಹುಡುಗರ ಮೇಲೆ ನಾವು ನಂಬಿಕೆ ಇಡಬೇಕು. ಅವರ ನಿರ್ಣಯಗಳನ್ನು ಗೌರವಿಸ ಬೇಕು. ನೋಡೋಣ. ಹುಡುಗನ್ನ ಮನೆಗೆ ಕರ್ಕೊಂಬರ್ತೀನಿ ಅಂತ ಹೇಳಿದ್ದಾಳಲ್ಲ. ಬರ್ತಾನೋ ಇಲ್ಲೋ ನೋಡೋಣ. ಬಂದವನ ನಡಾವಳಿ ಹೇಗಿರುತ್ತೋ ನೋಡೋಣ. ಅವನ ಬಗ್ಗೆ ನನಗೆ ತಿಳಿದವರಿಂದ ಮಾಹಿತಿ ತೊಗೋತೀನಿ. ಎಲ್ಲ ತರಾ ವಿವರ ತಿಳಿದಮೇಲೆ ನಮ್ಮವಳಿಗೆ ಹೇಳೋಣ. ನೀನು ಹೇಳೋ ನಾಲ್ಕುಮಂದಿಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ.  ಅವರಲ್ಲಿ ಯಾವನೊಬ್ಬನೂ ನಮ್ಮ ಕಷ್ಟಕ್ಕೆ ಆಗಿ ಬರಲ್ಲ.  ಮದುವೆಗೆ ಕರೆದ್ರೆ ಬಂದು ಅಕ್ಷತೆ ಕಾಳು ಹಾಕಿ ಊಟ ಮಾಡ್ಕೊಂಡು ಹೋಗ್ತಾರೆ ಅಷ್ಟೇ. ಕೆಲವು ದಿನ ಈ ಮದುವೆ ಬಗ್ಗೆ ಮಾತಾಡ್ಕೊತಾರೆ. ಮತ್ತೆ ಮರೆತು ಬಿಡ್ತಾರೆ. ನಮಗೆ ಬೇಕಾದ್ದು ನಮ್ಮ ಮಕ್ಕಳ ಯೋಗ ಕ್ಷೇಮ. ಆ ಹುಡುಗನ ಜೊತೆ ಮದುವೆ ಯಾದರೆ ನಮ್ಮ ಹುಡುಗಿಯ ಬಾಳು ಚೆನ್ನಾಗಿರುತ್ತಾ ಅಂತ ನಾವು ಯೋಚನೆ ಮಾಡ ಬೇಕು. ಈ ಸಮಸ್ಯೆಯನ್ನ ಈ ಕೋನದಲ್ಲಿ ಆಲೋಚಿಸೋಣ. ಅದು ಬಿಟ್ಟು ಬರೀ ಸುತ್ತ ಇರೋ ನಾಲ್ಕು ಜನರ ಬಗ್ಗೆ ತಲೆಗೆ ಹಚ್ಚಿಕೊಂಡು ನಮ್ಮವರನ್ನೇ ನಾವು ಕಳೆದುಕೊಳ್ಳೋದು ಬೇಡ.” ಅಂತ ಒಂದು ದೊಡ್ಡ ಭಾಷಣ ಮಾಡಿದೆ.

ನನ್ನವಳು ಸಹ ನನ್ನ ಮಾತಿಗೆ ಒಪ್ಪುತ್ತಾ “ ಅದೇನೋ ನಿಜ. ಆದರೆ ಹೆಂಗಸರ ನಡುವೆ ಓಡಾಡೋ ನನಗೆ ಅವರ ಕೊಂಕು ಮಾತು ಕೇಳಿಸಿಕೊಳ್ಳೋದು ಕಷ್ಟ ಅಂತ ಅಂದೆ. ಅವರ ಮನೆಗಳಲ್ಲಿ ಇಂಥದು ನಡೆಯೋದೇ ಇಲ್ಲೇನೋ ಅನ್ನೋವ್ರ ತರಾ ಮಾತಾಡ್ತಾರೆ. ಅದಕ್ಕೆ ಆ ತರಾ ಮಾತಾಡಿದೆ ಅಷ್ಟೇ. ನನಗೆ ಮಾತ್ರ ನನ್ನ ಮಗಳು ತಾನು ಇಷ್ಟ ಪಟ್ಟವನ ಜೊತೆ ಇರಬೇಕು ಅಂತ ಇರಲ್ಲಾ ಏನು ? ಅದೂ ಅಲ್ದೇ ಪ್ರೇಮ ವಿವಾಹಗಳ ಬಗ್ಗೆ ನಿಮ್ಮ ಧೋರಣೆ ಗೊತ್ತಿಲ್ಲದವಳೇ ನಾನು !” ಎಂದು ನಕ್ಕಳು.

ನಮ್ಮೆಲ್ಲರ ಜೀವನಗಳಲ್ಲಿ ಸಂಚಲನವನ್ನೆಬ್ಬಿಸಿದ ಆ ದಿನಕ್ಕೆ ವಿದಾಯ ಹೇಳುತ್ತಾ ನಿದ್ರಾದೇವಿಯ ಮಡಿಲಿಗೆ ಜಾರಿದೆವು.

***************

 ಅವಳು ಹೇಳಿದ್ದು ನಿಜ. ಪ್ರೀತಿ, ಪ್ರೇಮಗಳ ಬಗ್ಗೆ ನನ್ನ ನಿಲುವು ಅವುಗಳ ಕಡೆಗೇ ಇತ್ತು. ನನ್ನಲ್ಲಿಯ ಬರಹಗಾರ ತನ್ನ ಪ್ರಗತಿ ಪರ ಭಾವನೆಗಳಿಂದ ನನ್ನನ್ನು ಬಡಿದೆಬ್ಬಿಸುತ್ತಿದ್ದ. “ಪ್ರೀತಿ ಎನ್ನುವುದು ವಿಶ್ವ ಜನನೀಯ. ಅದು ತಂತಾನೇ ಹುಟ್ಟಿಕೊಳ್ಳುವ ನವಿರಾದ ಭಾವನೆ. ಒಬ್ಬರು ಹೇಳಿದರು ಅಂತ ಹುಟ್ಟಲ್ಲ. ಬೇಡ ಎಂದರೆ ನಿಲ್ಲದು” ಎನ್ನುವ ಈ ಅಭಿಪ್ರಾಯಗಳಿಗೆ ನನ್ನ ಮತವಿದ್ದಿತು. ಇವೆಲ್ಲವುಗಳ ಜೊತೆಯಲ್ಲಿ ನನ್ನ ಸಹೋದ್ಯೋಗಿಯ ತಂಗಿಯ ಈ ತರದ ಮದುವೆಗೆ ನಾನೇ ಮುಂದಾಗಿ ಅವರಿಗೆ ಬೇಕಾದ ಕಾನೂನು ಪರವಾದ ಸವಲತ್ತುಗಳನ್ನೆಲ್ಲ ಒದಗಿಸಿ, ಅವರ ಮದುವೆಗೆ ಹಾಜರಾಗಿ, ಆಫೀಸಲ್ಲಿ ಸಹಿ ಹಾಕಿ ಹರಿಸಿದ್ದೆ. ನನ್ನ ಮಗಳ ಮದುವೆ ವಿಷಯ ಬಂದಾಗ ನಾನು ಹಿಂದೆ ಸರಿಯುವುದು ಹಿಪೊಕ್ರಸಿ ಆಗುತ್ತೆ ಅಂತ ನನಗ್ಗೊತ್ತು. ಇದೆಲ್ಲ ಗೊತ್ತಿದ್ದ ನನ್ನಾಕೆ ಅದಕ್ಕೇ ಹಾಗೆಂದಿದ್ದಳು.

ಇದಾದ ಮೇಲೆ ಅಂಜನಾ ವಿಶ್ವನಾಥನನ್ನು ಮನೆಗೆ ಕರೆದುಕೊಂಡು ಬಂದು ಪರಿಚಯ ಮಾಡಿಸಿದ್ದಳು. ಹುಡುಗ ನಮ್ಮಿಬ್ಬರಿಗೂ ಹಿಡಿಸಿದ. ಸಿಂಪಲ್ಲಾಗಿ ಮದುವೆ ನಡೆಯಿತು. ಅವರ ಮನೆಗೆ ಅವರು ಹೋದರು.

ನಮ್ಮ ಬಂಧುಗಳಲ್ಲಿ ನಾವು ಮಾಡಿದ ಈ ಮದುವೆ ಇಷ್ಟವಾಗಲಿಲ್ಲ.  ನಾವು ಸಹ ಒಂದೆರಡು ವರ್ಷ ಅವರ ಮನೆಗಳಿಗಾಗಲಿ, ಕಾರ್ಯಕ್ರಮಗಳಿಗಾಗಲಿ ಹೋಗಲಿಲ್ಲ. ಮತ್ತೆ ಎಲ್ಲ ಸದ್ದು ಮಣಗಿತು. ಸಮಯ ಯಾರಿಗೆ ಕಾಯುತ್ತದೆ ! ಅದೂ ಅಲ್ಲದೇ  ಈ ತರದ ಮದವೆಗಳು ಸಮಾಜದಲ್ಲಿ ತುಂಬಾ ನಡೆಯುತ್ತಿರುವಾಗ ನಮ್ಮದೇ ಬೇರೇ ಹೇಗೆ ಆಗುತ್ತದೆ !

2 thoughts on “ಅತಿ ಮಧುರಾ ಅನುರಾಗ

Leave a Reply

Back To Top