ಅಂಕಣ
ಚಳುವಳಿಗಳಿಗೆ ಸ್ಪಂದಿಸುವಂತಹ ಮನೋಭಾವ ಲೇಖಕನಲ್ಲಿ ಇರಬೇಕಾದ ಪ್ರಮುಖ ಗುಣ
ಜಹಾನ್ ಆರಾ .ಎಚ್ . ಕೋಳೂರು
ಪರಿಚಯ:
ಜಹಾನ್ ಆರಾ .ಎಚ್ . ಕೋಳೂರು. ಶಿಕ್ಷಕಿ, ಕವಯಿತ್ರಿ. ಎಚ್ ಷೌಕತ್ ಆಲಿ,
ಶ್ರೀಮತಿ ನೂರ್ ಜಹಾನ ಇವರ ಪುತ್ರಿ. ಎಂ.ಗುಡದೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಕೃತಿಗಳು :
ಭಾವ ಜೀವ (ಕವನ ಸಂಕಲನ)
ಅಜ್ಜಿಮನೆ (ಕಥಾ ಸಂಕಲನ)
ನಕ್ಷತ್ರ (ಶಿಶುಗೀತೆ ಸಂಕಲನ)
ಪ್ರಶಸ್ತಿ – ಗೌರವಗಳು :
ಶಾಲಾ ಕಾಲೇಜು, ವಿಶ್ವವಿದ್ಯಾಲಯ ಮತ್ತು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ಗೌರವ ಪ್ರಶಸ್ತಿಗಳು
ತಾಲ್ಲೂಕ, ಜಿಲ್ಲಾ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮತ್ತು ಚುಟುಕು ಕವಿತೆಗಳ ವಾಚನ
ವಿದ್ಯಾರ್ಥಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಅಖಿಲ ಕರ್ನಾಟಕ ಲೇಖಕಿಯರ ೬ನೇ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವ
ಕೊಪ್ಪಳ ಜಿಲ್ಲೆಯ “ಇಟಗಿ ಉತ್ಸವ”ದಲ್ಲಿ ಕಾವ್ಯವಾಚನಕ್ಕಾಗಿ ಗೌರವ ದೊರೆತಿದೆ.
೨೦೧೭ ನೇ ಸಾಲಿನ ಕಾವ್ಯಶ್ರೀ ಪ್ರಶಸ್ತಿ (ಮಂಡ್ಯ ಜಿಲ್ಲೆ) ಸಿಕ್ಕಿದೆ.
….……………….
* ಕವಿತೆ, ಕತೆಗಳನ್ನು ಯಾಕೆ ಬರೆಯುತ್ತೀರಿ ?
ಪ್ರಾರಂಭದಲ್ಲಿ ನಾನು ಕವಿತೆಗಳ ಕೈಹಿಡಿದೆ. ಮನೆಯಲ್ಲಿಯೇ ಸ್ವಲ್ಪ ಕಾವ್ಯಮಯ ವಾತಾವರಣವಿದ್ದ ರಿಂದ ಕಾವ್ಯ ನನಗೆ ಒಲಿದಿದೆ ಎಂದುಕೊಂಡಿದ್ದೆ. ಕನ್ನಡೇತರ ಮಾತೃಭಾಷೆಯನ್ನು ಹೊಂದಿದ್ದರು ನನಗೆ ಕನ್ನಡವೇ ಅಚ್ಚುಮೆಚ್ಚು. ಕನ್ನಡ ಸಾಹಿತ್ಯವನ್ನು ನಿಧಾನವಾಗಿ ವಿಸ್ತಾರವಾಗಿ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡುತ್ತಾ ಬಂದಾಗ ಅರಿವಿಗೆ ಬಂತು ನಾನು ಈವರೆಗೂ ಉತ್ತಮ ಕಥೆಯನ್ನು ಆಗಲಿ ಕವಿತೆಯನ್ನು ಆಗಲಿ ಬರೆದಿಲ್ಲ ವೆಂದು. ಆ ಹುಡುಕಾಟದಲ್ಲಿ ಜೊತೆಗೆ ಆತ್ಮ ದರ್ಶನದ ನಿಲುವಿನಲ್ಲಿ ನಾನು ಕಥೆ ಮತ್ತು ಕವನಗಳನ್ನು ಬರೆಯುತ್ತೇನೆ. ಅಲ್ಲಿ ನನ್ನನ್ನು ನಾನು ಪ್ರತಿಬಾರಿಯೂ ಪ್ರಯೋಗಕ್ಕೆ ಪಡಿಸಿಕೊಳ್ಳಲು ಕಥೆ-ಕವನಗಳನ್ನು ಬರೆಯುತ್ತೇನೆ. ಒಟ್ಟಿನಲ್ಲಿ ಸಾಹಿತ್ಯ ನನ್ನ ಪಾಲಿಗೆ ನನ್ನೊಳಗಿನ ಸತ್ಯವನ್ನು ಸಾಮರ್ಥ್ಯವನ್ನು ಪರೀಕ್ಷಿಸುವ ಬಹುಮುಖ್ಯವಾದ ಅಂತ ಸಾಧನ.
* ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು ?
ಕಥೆ ಕವಿತೆ ಹುಟ್ಟುವ ಕ್ಷಣ ಎಂದು ಸಮಯೋಚಿತವಾಗಿ ಮಾತನಾಡಲು ನನಗೆ ಗೊತ್ತಿಲ್ಲ. ನಿಜಕ್ಕೂ ಅದಕ್ಕೆ ಸಮಯದ ಹಂಗಿಲ್ಲ. ಕೆಲವೊಂದು ಸನ್ನಿವೇಶ ವಾಗಿರಬಹುದು ಅಥವಾ ವಸ್ತು ವಿಷಯವಾಗಿರಬಹುದು ಅಥವಾ ವ್ಯಕ್ತಿಯಾಗಿರಬಹುದು ಅನೇಕ ಸಲ ಅನೇಕ ರೀತಿಯಲ್ಲಿ ಕಾಡುತ್ತದೆ ಅವುಗಳ ಚಡಪಡಿಕೆಯೂ ಕೆಲವೊಮ್ಮೆ ಕವಿತೆ ಯಾಗುವುದು ಹೌದು. ನಾನು ನನ್ನಲ್ಲಿಯೇ ಧ್ಯಾನ ಸ್ಥಳ ಆದಾಗ ಅನೇಕ ಆಲೋಚನೆಗಳು ಹುಟ್ಟಿ ಅದು ಪದ್ಯದ ರೂಪ ಪಡೆದುಕೊಂಡಿದ್ದು ಇದೆ. ಸುಮಾರು ವರ್ಷಗಳ ಅಂತರದಲ್ಲಿ ಅನುಭವಿಸಿದ ಅನುಭವ ಕಥೆಯಾಗಿ ಪಾತ್ರಗಳ ಮೂಲಕ ಮಾತನಾಡಿದ್ದು ಇದೆ.
* ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?
ನನ್ನ ಕಥೆ ಮತ್ತೆ ಕವನಗಳಲ್ಲಿ ವಸ್ತು ವಿಷಯವು ಅನೇಕ ಬಾರಿ ಅನುಭವವೇ ಆಗಿದೆ. ಕೆಲವೊಂದು ಅನುಭವಗಳು ಬರೀ ನನಗಷ್ಟೇ ಸೀಮಿತ ಎಂದುಕೊಳ್ಳದೆ ಅದರ ವ್ಯಾಪ್ತಿ ವಿಸ್ತಾರವಾಗಿರುವ ಅಂತಹ ವಿಷಯಗಳು ನನ್ನ ಕವನದಲ್ಲಿ ಕಥೆಗಳಲ್ಲಿ ಬಿಂಬಿಸಲು ಪ್ರಯತ್ನಿಸುತ್ತೇನೆ. ಬಹಳಷ್ಟು ಬಾರಿ ವೈಜ್ಞಾನಿಕ ಯೋಜನೆಗಳು ಕಥೆಗಳಲ್ಲಿ ಒಳಹೊಕ್ಕುವುದು ಇದೆ. ಕೆಲವು ಅಲೌಕಿಕ ವಿಷಯಗಳನ್ನು ಮೂಡನಂಬಿಕೆಗಳ ಆಗಿ ನಡೆದುಕೊಂಡು ಬಂದಿರುವ ವಿಷಯಗಳು ನನಗೆ ಹೆಚ್ಚು ಕಾಡುತ್ತವೆ. ಇವುಗಳ ಜೊತೆಗೆ ಬೆಳೆಯುತ್ತಿರುವ ಮಕ್ಕಳ ಬದಲಾಗುತ್ತಿರುವ ಮನೋಭಾವ ನನ್ನ ಕುತೂಹಲದ ಇನ್ನೊಂದು ಮುಖವಾಗಿದೆ.
* ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?
ನನ್ನ ಆರಂಭಿಕ ಪದ್ಯಗಳು ಸಂಪೂರ್ಣವಾಗಿ ಬಾಲ್ಯವನ್ನು ಬಾಲ್ಯವನ್ನೇ ಪ್ರತಿನಿಧಿಸುತ್ತಿದ್ದವು ಈಗ ಅಧ್ಯಯನ ಬರಹವನ್ನು ಸಶಕ್ತ ಮಾಡಿದೆ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಬಾಲ್ಯ ಎನ್ನುವ ಕುತೂಹಲ ಭಾವ ಹರೆಯ ಎಂಬ ರಸಾಯನ ಮುಪ್ಪು ಎಂಬುವ ಭವಿಷ್ಯ ಈ ಮೂರು ಸಹ ನನ್ನ ಕಥೆ ಕವನ ಗಳಲ್ಲಿ ಇಣುಕುತ್ತಿರುತ್ತವೆ.
* ನೀವು ವೃತ್ತಿಯಿಂದ ಶಿಕ್ಷಕಿ . ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯೇ?
ಹೌದು. ಒಂದು ರೀತಿಯಲ್ಲಿ ಹೇಳಬೇಕಾದರೆ ನನ್ನ ವೃತ್ತಿ ನನ್ನ ಸೃಜನಶೀಲತೆಯನ್ನು ಇಮ್ಮಡಿಗೊಳಿಸಿದೆ. ಸಣ್ಣ ಮಕ್ಕಳ ಕಣ್ಣುಗಳಲ್ಲಿ ಉಕ್ಕಿ ಹರಿಯುವ ಉತ್ಸಾಹವನ್ನು ನೋಡಿದಾಗ ನಮ್ಮಲ್ಲಿಯೂ ಸಹ ಲವಲವಿಕೆ ಹುಟ್ಟಿಬರುತ್ತದೆ. ಬದುಕಿನ ಪ್ರತಿ ಕ್ಷಣಗಳನ್ನು ಅನುಭವಿಸಲು ಆನಂದಿಸಲು ನನಗೆ ನನ್ನ ವೃತ್ತಿ ಅವಕಾಶ ನೀಡಿದೆ. ನನ್ನಲ್ಲಿರುವ ಸೃಜನಶೀಲತೆಯನ್ನು ವಿಸ್ತರಿಸಲು ಒಂದು ಅವಕಾಶವೂ ನೀಡಿದೆ. ನಾನು ಹೆಚ್ಚು ಮಕ್ಕಳೊಂದಿಗೆ ಒಡನಾಟ ವಿರುವುದರಿಂದ ಅವರ ಭಾವನೆಗಳು ಆಸಕ್ತಿಗಳು ಆಲೋಚನೆಗಳ ಬಗ್ಗೆಯೂ ಅರಿಯಲು ನನಗೆ ಸಹಾಯವಾಗಿದೆ ಜೊತೆ ಜೊತೆಯಲ್ಲಿ ಅವರಿಗೂ ಸಾಹಿತ್ಯವನ್ನು ವಿಸ್ತರಿಸುವ ಅವಕಾಶ ಕೂಡ ನನಗೆ ನನ್ನ ವೃತ್ತಿ ನೀಡಿದೆ. ಹಾಗೆಯೇ ಬರೀ ಕಥೆ ಕವನ ಗಳಲ್ಲದೆ ನನ್ನ ಸೃಜನಶೀಲತೆಯ ವ್ಯಾಪ್ತಿಯನ್ನು ನನ್ನ ವೃತ್ತಿ ವಿಸ್ತರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು
* ವೃತ್ತಿ ಹಾಗೂ ಸೃಜನಶೀಲತೆ ಹಾಗೂ ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗೆ ?
ಮೊದಲೇ ಹೇಳಿದಂತೆ ನನ್ನ ಮನೆಯಲ್ಲಿರುವ ಸಾಹಿತ್ಯ ವಾತಾವರಣ ನನಗೆ ಪ್ರೇರಣೆಯಾದರೆ, ಸುತ್ತ ಇರುವ ಸೃಜನಶೀಲ ಕಲಾ ವಾತಾವರಣವು ನನ್ನಲ್ಲಿ ಆತ್ಮ ಧೈರ್ಯವನ್ನು ತುಂಬುತ್ತದೆ.. ವೃತ್ತಿ ಮತ್ತು ಸೃಜನಶೀಲತೆಯನ್ನು ನಾನು ಯಾವತ್ತಿಗೂ ಬೇರೆಬೇರೆಯಾಗಿ ನೋಡಿಲ್ಲ. ಹೊಸತನವನ್ನು ಕಲಿಯುವುದು ಕಲಿಸುವುದು ಎಂದರೆ ನನಗೆ ಅಚ್ಚುಮೆಚ್ಚು. ಕೆಲವೊಂದು ಕ್ಲಿಷ್ಟಕರ ಸಮಯದಲ್ಲಿ ನನಗೆ ವೃತ್ತಿ ಮತ್ತು ಸೃಜನಶೀಲತೆ ಎದುರುಬದುರಾಗಿ ನಿಂತಿರುವ ಸಂದರ್ಭಗಳು ಕೂಡ ಬಂದಿವೆ . ಅಂತಹ ಸಂದರ್ಭಗಳಲ್ಲಿ ವೃತ್ತಿಯನ್ನು ಮೊದಲು ಗೌರವಿಸಿ ಸೃಜನಶೀಲತೆಯನ್ನು ಅದರ ಜೊತೆಯಲ್ಲಿ ಪ್ರೀತಿಸಲು ಕಲಿತಿದ್ದೇನೆ.
ನಿಮ್ಮ ಕವಿತೆ , ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ?
ಸಾಹಿತ್ಯ ಎಂಬುದು ಬೇರೇನು ಅಲ್ಲ ಅದು ಬದುಕು. ಬದುಕಿನಲ್ಲಿ ಸಕಾರಾತ್ಮಕತೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅದರ ಜೊತೆಜೊತೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಬರುತ್ತದೆ. ನಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕತೆಯನ್ನು ಹೊರಹಾಕಬೇಕು ಎಂದು ಹೇಳಿದರೆ ಸಾಲದು ಅದನ್ನು ಬದುಕಿ ತೋರಿಸಬೇಕು ಅದೇ ಬದುಕಿನ ದಾರಿಯಲ್ಲಿ ನಡೆಯುತ್ತಿರುವ ನನ್ನ ಕಥೆ ಕವನಗಳಲ್ಲಿಯೂ ಸಹ ಅನೇಕ ಪಾತ್ರಗಳಲ್ಲಿ ಸಕಾರಾತ್ಮಕ ತೆಯನ್ನುತುಂಬಲು ಪ್ರಯತ್ನಿಸುತ್ತೇನೆ. ಇದೇ ನಿಟ್ಟಿನಲ್ಲಿ ಕವಿತೆ ಕಥೆಗಳಲ್ಲಿ ತಾನಾಗಿಯೇ ಪ್ರಜ್ಞಾಪೂರ್ವಕ ನಿರೂಪಣೆ ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
* ಕನ್ನಡ ವಿಮರ್ಶಾ ಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ?
ಹೌದು, ಸಂಪೂರ್ಣವಾಗಿ ಬರೆದಂತಹ ಎಲ್ಲಾ ಕಥೆಗಳು ವಿಮರ್ಶಾಲೋಕ ರವಾನಿಸಿದೆ ಎಂದು ಹೇಳಲಾರೆ ಆದರೆ ಕೆಲವೊಂದು ಕಥೆಗಳು ಮಾತ್ರ ಅವುಗಳದೇ ಆದಂತಹ ಛಾಪು ಮೂಡಿಸಿದೆ ಅವಳೊಂದಿಗೆ ನಾನು, ಪಂಪಣ್ಣನ ಕಥೆ, ಬಳ್ಳಾಪುರ ಕ್ರಾಸ್, ಹೀಗೆ ಕೆಲವು ಕಥೆಗಳಿಗೆ ವಿಮರ್ಶಕರ ಹಿತ ಮಾರ್ಗದರ್ಶನ ಕೂಡ ಸಿಕ್ಕಿದೆ.
* ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸವಾಲು ,ಸಮಸ್ಯೆಗಳೇನು?
ಇನ್ನೂ ತನಕ ಈ ಸವಾಲುಗಳು ನಾನು ಎದುರಿಸಿಲ್ಲ ಎಂಬುದು ಸಬಲೀಕರಣದ ಒಂದು ಮುಖ ಎಂದು ಕೂಡ ಹೇಳಬಹುದು. ಕೌಟುಂಬಿಕ ಸಹಕಾರ ಪ್ರೋತ್ಸಾಹ ಆರೋಗ್ಯಪೂರ್ಣವಾದ ನನ್ನ ವಾತಾವರಣ ಇದಕ್ಕೆ ಕಾರಣ.
* ಸಾಹಿತ್ಯಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ, ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ?
ಅನೇಕ ಹಿರಿಯ ಸಾಹಿತಿಗಳು ಬಹಳ ಪ್ರೀತಿಯಿಂದ ನನ್ನ ಬೆಳವಣಿಗೆ ನಿರೀಕ್ಷಿಸುತ್ತಿದ್ದಾರೆ ಅಂತಹದರಲ್ಲಿ ಅಸಮಾನತೆಯ ಪ್ರಶ್ನೆಯೇ ಬರುವುದಿಲ್ಲ
* ಎಡ , ಬಲಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ಸಾಹಿತ್ಯ ಲೋಕದಲ್ಲಿ ಈ ಗುಂಪುಗಳ ವಾದವಿವಾದಗಳು ಯಾವಾಗ್ಲೂ ನಡೆಯುತ್ತಲೇ ಬಂದಿವೆ. ಯಾವುದೋ ಒಂದು ಪಂಥಕ್ಕೆ ಸೀಮಿತವಾಗುವ ಬದಲು , ನಾನು ಸಮಾಜ ಮುಖಿ ಆಲೋಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಬಯಸುತ್ತೇನೆ. ಇದರ ಮುಂದೆ ಪಂಥಗಳ ಬಗ್ಗೆ ನನ್ನ ಅನಿಸಿಕೆ ಏನು ಇಲ್ಲ.
* ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ಕವಿಮನಸ್ಸು ಹೊಂದಿರುವವರು ಬರಿಯ ಭಾವನಾಲೋಕದಲ್ಲಿ ಅಥವಾ ಕಲ್ಪನೆಗಳಲ್ಲಿ ಬೆಳೆಯುವಲ್ಲಿ ಸಾಧ್ಯವಿಲ್ಲ ಅವರಿಗೆ ರಾಜಕೀಯದ ಜ್ಞಾನ ಕೂಡ ಅವಶ್ಯಕ. ಸುತ್ತಮುತ್ತ ವಾತಾವರಣದಲ್ಲಿ ಆಗುತ್ತಿರುವ ಅಂತಹ ಬದಲಾವಣೆಗಳು, ಚಳುವಳಿಗಳಿಗೆ ಸ್ಪಂದಿಸುವ ಸ್ಪಂದಿಸುವಂತಹ ಮನೋಭಾವ ಕೂಡ ಒಬ್ಬ ಲೇಖಕನಲ್ಲಿ ಇರಬೇಕಾದ ಪ್ರಮುಖ ಗುಣ. ಏಕೆಂದರೆ ಲೇಖನಿಗೆ ಖಡ್ಗದ ಶಕ್ತಿ ಇದೆ. ಆ ಶಕ್ತಿ ರಾಜಕೀಯದ ಜ್ಞಾನದೊಂದಿಗೆ ಮುಂದುವರೆದರೆ ಅದಕ್ಕೆ ತನ್ನದೇ ಆದಂತಹ ಮೌಲ್ಯ ದೊರಕುತ್ತದೆ.
* ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ಒಬ್ಬ ಮುಸ್ಲಿಂ ಹೆಣ್ಣು ಮಗಳಾಗಿ ನಾನು ಸೌಹಾರ್ದಯುತವಾದ ವಾತಾವರಣದಲ್ಲೇ ಬೆಳೆದವಳು. ಮೌಲ್ಯಗಳು ಉತ್ತಮ ಸಂದೇಶಗಳು ಎಲ್ಲಿ ಸಿಗುತ್ತದೆ ಅಲ್ಲಿಂದ ಕಲಿಯುವುದು ಹಿರಿಯರು ನನಗೆ ಹೇಳಿಕೊಟ್ಟ ಮಾರ್ಗ. ಈ ದಾರಿಯಲ್ಲಿ ನಡೆಯುವಾಗ ಧರ್ಮಸಹಿಷ್ಣುತೆ ನನ್ನಲ್ಲಿ ಮನೆಮಾಡಿತ್ತು. ಹೈಸ್ಕೂಲ್ ಹಂತದಲ್ಲಿ ಕ್ರೈಸ್ತ ಧರ್ಮ ಅನೇಕ ಬಾರಿ ಆಕರ್ಷಣೆ ಕೂಡ ಮಾಡಿದ್ದು. ಹಿಂದೂ ಧರ್ಮದಲ್ಲಿ ಬರುವಂತಹ ಅನೇಕ ತತ್ವಗಳನ್ನು ಉಪದೇಶಗಳನ್ನು ಹಾಗೂ ಉಪಕಥೆಗಳನ್ನು ಸಾಹಿತ್ಯದ ದೃಷ್ಟಿಯಲ್ಲಿ ಅನೇಕಬಾರಿ ಪ್ರಭಾವ ಬೀರುತ್ತವೆ ಹಾಗೂ ಭಾರತೀಯ ಕಲಾ ಪರಂಪರೆಯಲ್ಲಿ ವಾಸ್ತುಶಿಲ್ಪದ ಬಗ್ಗೆ ಮಾತಾಡುವುದಾದರೆ ಹಿಂದೂಧರ್ಮ ತನ್ನದೇ ಆದಂತಹ ಒಂದು ಅದ್ಭುತವಾದಂತಹ ಕೊಡುಗೆ ನೀಡಿದೆ. ಧರ್ಮ ಮತ್ತು ದೇವರ ವಿಚಾರದಲ್ಲಿ ನನ್ನದು ಒಂದೇ ನಿಲುವು ನಾನು ಭಾರತೀಯ ಎಂಬುದಷ್ಟೇ ಅದಕ್ಕೆ ಉತ್ತರ.
* ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?
ಪ್ರಸ್ತುತ ದಿನಮಾನಗಳಲ್ಲಿ ಸಾಂಸ್ಕೃತಿಕ ವಾತಾವರಣ ಪೂರ್ಣ ಆರೋಗ್ಯಕರವಾಗಿಯೂ ಇಲ್ಲ ರೋಗಪೀಡಿತ ವಾಗಿಯೂ ಇಲ್ಲ. ತೋರಿಕೆಯ ಮೆರಗು ಅದುಕು ಅಂಟಿದೆ ಎಂದರೆ ತಪ್ಪಾಗಲಾರದು.
* ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?
ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ. ದೇಶ ಅದರ ಆಲೋಚನೆಗಳ ಜೊತೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಚಲನೆಯು ಸಮಾನಾಂತರದಲ್ಲಿ ನಡೆದಾಗ ಅದು ಉತ್ತಮ ಬೆಳವಣಿಗೆ ಎಂದು ಹೇಳಬಹುದು ಆದರೆ ಅದು ನಡೆಯುತ್ತಿರುವುದು ಅಷ್ಟು ಕಾಣಸಿಗುತ್ತಿಲ್ಲ.
* ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಮಾನವೀಯತೆಯನ್ನು ಬೆಸೆಯುವಂತಹ ಸಾಹಿತ್ಯ ಸೃಷ್ಟಿಯಾಗುವುದು.
* ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?
ಕುವೆಂಪು ಬೇಂದ್ರೆ ಅಡಿಗರು ನಿಸಾರ್ ಅಹಮದ್ ಇಷ್ಟದ ಕವಿಗಳು. ಮಾಸ್ತಿಯವರ ಕಥೆಗಳು ವೈದೇಹಿ ಮತ್ತು ಸಾರಾ ಅಬೂಬಕರ್ ಅವರ ಕಥೆಗಳು ಇಷ್ಟ.
ಅಮೃತಾ ಪ್ರೀತಮ್ ಪ್ರೇಮಚಂದ್ ಸುಭದ್ರ ಕುಮಾರಿ ಚೌಹಾನ್ ಹೆಚ್ಚು ಕಾಡುವಂತಹ ಸಾಹಿತಿಗಳು. ರೂಮಿ ಗಾಲಿಬ್, ಲೂಯಿಸ್
ಗ್ಲಿಕ್ , ಕೀಟ್ಸ್ ಇಷ್ಟವಾಗುತ್ತಾರೆ .
* ಈಚೆಗೆ ಓದಿದ ಕೃತಿಗಳಾವವು?
ದ ಸೆಕೆಂಡ್ ಸೆಕ್ಸ್, ಗೊಂದಲಿಗ್ಯಾ. ವೀರ ಕೇಸರಿ ಅಮಟೂರು ಬಾಳಪ್ಪ .
* ನಿಮಗೆ ಇಷ್ಟವಾದ ಕೆಲಸ ಯಾವುದು?
ಹೊಸತನ್ನು ಕಲಿಯುವುದು ಮತ್ತು ಕಲಿಸುವುದು .
* ನಿಮಗೆ ಇಷ್ಟವಾದ ಸ್ಥಳ ಯಾವುದು ?
ನಾನು ಕೆಲಸ ಮಾಡುತ್ತಿರುವ ಶಾಲೆ
* ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು?
ಕಸ್ತೂರಿ ನಿವಾಸ, ಸಾಕ್ಷಾತ್ಕಾರ, ಮೇರಾ ನಾಮ್ ಜೋಕರ್.
* ನೀವು ಮರೆಯಲಾರದ ಘಟನೆ ಯಾವುದು?
ಸೇವೆಗೆ ಸೇರಲು ಮಾಡಿದ ಮೊದಲ ರೈಲು ಪ್ರಯಾಣ
* ಇನ್ನು ಕೆಲ ಹೇಳಲೇ ಬೇಕಾದ ಸಂಗತಿಗಳಿದ್ದರೂ ಹೇಳಿ….
ಹೇಳಲೇಬೇಕಾದ ಒಂದು ಮತ್ತೊಂದು ಸಂಗತಿಯೆಂದರೆ ನನ್ನ ಸಂಶೋಧನಾತ್ಮಕ ಪ್ರಯೋಗ ನನ್ನೂರ ಕೌದಿ
ಇದು ಐಎಫ್ಎ ಸಂಸ್ಥೆಯಿಂದ ಅನುದಾನಿತ ವಾಗಿರುವ ಅಂತಹ ಒಂದು ಕಾರ್ಯಕ್ರಮ. ಈ ಒಂದು ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ವಿದ್ಯಾರ್ಥಿಗಳು ಸೇರಿ ಕೌದಿಯ ಮೇಲೆ ಒಂದು ಅಕ್ಷರಗಳ ನೆರಳನ್ನು ಹಾಕುವ ಪ್ರಯತ್ನ ನಡೆಸಿದ್ದೇವೆ ಜೊತೆಯಲ್ಲಿ ಕೌದಿಯ ಬಗ್ಗೆ ಇರುವಂತಹ ಭಾವ ಬೇಸಿಗೆಯನ್ನು ಎಲ್ಲರಿಗೂ ಪರಿಚಯಿಸಲು ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಜನಪದ ಸಂಸ್ಕೃತಿಯನ್ನು ಕಲೆಯನ್ನು ಪ್ರೋತ್ಸಾಹಿಸುವ ಉಳಿಸುವ ಬೆಳೆಸುವ ಪ್ರಯತ್ನ ಇದಾಗಿದೆ. ಜೊತೆಜೊತೆಯಲ್ಲಿಯೇ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಮೂಡಿಸಿ ಅವರಲ್ಲಿ ಅವರಿಂದಲೇ ಕಥೆ-ಕವನ ಬರೆಯಲು ತರಬೇತಿಯನ್ನು ಹೇಳುತ್ತಿದ್ದೇನೆ
*********************************
ನಾಗರಾಜ ಹರಪನಹಳ್ಳಿ
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ