ಕವಿತೆ
ಮಳೆ
ಮಾಲತಿ ಶಶಿಧರ್
ಆಗಿಂದಲೂ ಮಳೆಯೆಂದರೆ
ಎಲ್ಲಿಲ್ಲದ ಹುಚ್ಚು
ಬರುತ್ತಿದ್ದ ಹಾಗೆ
ಮೈಮೇಲಿನ ಪ್ರಜ್ಞೆ
ಕಳೆದುಕೊಂಡು
ತೋಳುಗಳ ಚಾಚಿ
ನನ್ನುದ್ದ ಅಗಲ
ಆಳಕ್ಕೆ ಇಳಿಸಿಕೊಳ್ಳುವಷ್ಟು
ಈ ಮಳೆಯದ್ದೊಂತರ
ತಕರಾರು
ಬಂದರೆ ಪ್ರವಾಹ
ಬರದಿರೆ ಬರ
ಉಕ್ಕಿದ ಪ್ರವಾಹಕ್ಕೆ
ಸಿಕ್ಕಿದ ಕಾರಿನ ಟೈರ್ ನಂತೆ ತೇಲುವುದು
ಬರದಲ್ಲಿ ಬರಡು ನೆಲದಂತೆ
ಬಿರುಕು ಬಿಡುವುದು ಹೃದಯ
ಎಂದೋ ಒಂದು ದಿನ
ಸಮಾಧಾನದಲಿ ಬಂದ ಮಳೆ
ತುಟಿ ಕಟಿ, ಎದೆ ಬೆನ್ನು
ಹೊಟ್ಟೆ ಹೊಕ್ಕಳು
ಮೀನಖಂಡ ತೊಡೆಗಳನ್ನೆಲ್ಲಾ
ಹಾಗೆ ಮೃದುವಾಗಿ ಸೋಕಿ
ಹೊರಟುಬಿಡುತ್ತದೆ
ಆಮೇಲೆ ಅದು ಬಾನು ನಾ ಭೂಮಿ
ಆದರೂ ಸೆಳೆತ
ಅಯಸ್ಕಾಂತ
ದಗೆ ಚಳಿ ಯಾವುದರಲ್ಲೂ
ಸಮಯ ಸರಿಯುವುದೇ ಇಲ್ಲಾ
ಸದಾ ಅದಕ್ಕಾಗೇ ಕಾಯೋ
ನನ್ನೆದೆಯ ಕೇರಿ ಕೇರಿಯಲ್ಲೂ
ಅದರದ್ದೇ ಜಾತ್ರೆ..
******************************
ಚೆನ್ನಾಗಿ ಬರೆದಿರುವಿರಿ.