ಪುಸ್ತಕ ಸಂಗಾತಿ
ಕಲ್ಲಳ್ಳಿ ಗಜಲ್
ಸಂಕಲನದ ಹೆಸರು : ಕಲ್ಲಳ್ಳಿ ಗಜಲ್
ಲೇಖಕರು : ದೊಡ್ಡ ಕಲ್ಲಳ್ಳಿ ನಾರಾಯಣಪ್ಪ
ಬೆಲೆ : ೧೨೦/-
ದೊಡ್ಡ ಕಲ್ಲಳ್ಳಿ ನಾರಾಯಣಪ್ಪನವರು ವೃತ್ತಿಯಲ್ಲಿ ಪದವೀಧರ ಶಿಕ್ಷಕರಾಗಿದ್ದು, ಪ್ರವೃತ್ತಿಯಾಗಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆ.
ಇವರು ಈಗಾಗಲೇ ಉತ್ತತೀಯ ಹಾಡು, ಎದೆಯೊಳಗಿನ ಇಬ್ಬನಿ, ಬೆಂಗಾಡು ಎಂಬ ಮೂರು ಸಂಕಲನಗಳನ್ನು ಹೊರ ತಂದಿದ್ದು ಈ ಕಲ್ಲಳ್ಳಿ ಗಜಲ್ ನಾಲ್ಕನೇ ಸಂಕಲನವಾಗಿದೆ. ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ ಗೋವಿಂದ ದಾಸ್ ಪ್ರಶಸ್ತಿ, ಬೆಳಕು ಸಾಹಿತ್ಯ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ ಇವರ ಮುಡಿಗೇರಿದೆ. ಸೌಮ್ಯ ಸ್ವಭಾವದ, ಮಗು ಮನದ ದೊನಾ ರವರು ಎಂತಹವರನ್ನು ತನ್ನತ್ತ ಸೆಳೆಯುವ ಸ್ವಾಭಾವದವರಾಗಿದ್ದಾರೆ. ನಾನು ಗಜಲ್ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಇವರೇ ಪ್ರೇರಣೆ ಎಂದರೆ ತಪ್ಪಾಗಲಾರದು.
ಕಲ್ಲಳ್ಳಿ ಗಜಲ್ ಈ ಸಂಕಲನದ ಹೆಸರು, ಮುಖಪುಟದ ವಿನ್ಯಾಸ ಒಂದು ರೀತಿಯಲ್ಲಿ ವಿಭಿನ್ನವಾಗಿ ಮೂಡಿದ್ದು ಚಿತ್ತಾಕರ್ಷಕ ರೇಖಾ ಚಿತ್ರಗಳು ಅದರೊಳಗೆ ಹುದುಗಿಸಿಕೊಂಡಿರುವ ಜೀವದ ಉಸಿರು, ನೆಲೆ ಎಲ್ಲರ ಗಮ್ಯವನ್ನು ಬೇರೆ ಲೋಕದತ್ತ ಸೆಳೆಯುತ್ತದೆ. ನಮ್ಮ ಮಾಲೂರಿನ ಸಾಹಿತ್ಯ ಪರಿಚಾರಕರಾಗಿದ್ದ ನಮ್ಮೆಲ್ಲರ ಹಿರಿಯಣ್ಣನಂತಿದ್ದ ಉದಯೋನ್ಮುಖ ಕವಿಗಳಿಗೆ ನೆಲೆ ನಿಲ್ಲಲು ವೇದಿಕೆ ಕಲ್ಪಿಸಿ ಬೆನ್ನು ತಟ್ಟುತಿದ್ದ ” ಕುಂಚ ” ಅಂದರೆ ಕುಂತೂರು ಚಂದ್ರಪ್ಪನವರು ( ಇವರು ಈಗ ಇಲಿಲ್ಲ..!! ಪ್ರಪಂಚವನ್ನೇ ತಲ್ಲಣಗೊಳಿಸಿ ತನ್ನ ಭಾಹು ತೆಕ್ಕೆಗೆ ತೆಗೆದುಕೊಂಡು ಅಪೋಷಣ ಗೈದ ಮಹಾ ಮಾರಿ ಕರೋನಾ ಈ ಪುಣ್ಯಾತ್ಮನನ್ನು ತನ್ನ ಉದರದ ಹಸಿವಿಗೆ ಅಪೋಷಣ ಮಾಡಿದ್ದು ದುರ್ದೈವ. ನಮ್ಮನೆಲ್ಲ ಅಗಲಿ ಅನಾಥರನ್ನಾಗಿಸಿದ್ದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಯಾರು ಆ ಸ್ಥಾನ ತುಂಬಲಾರರು.) ಇಂತಹ ವ್ಯಕ್ತಿಗೆ ಈ ಸಂಕಲನ ಅರ್ಪಿಸಿ ತಮ್ಮ ಘನತೆಯನ್ನು ದೊನಾ ಹೆಚ್ಚಿಸಿಕೊಂಡಿದ್ದಾರೆ. ಕೃತಘ್ನರೇ ತುಂಬಿರುವ ಕಲಿಯುಗದಲ್ಲಿ ಕೃತಜ್ಞತೆಯ ಈ ಕರುಣಾಳುವಿನ ಈ ಕಾರ್ಯ ಖುಷಿಕೊಟ್ಟಿತು. ಲೇಖಕರ ಪರಿಚಯ ತುಸು ಹೆಚ್ಚೆನಿಸಿದರೂ ನಾನು ಪರಿಚಯಿಸುವುದು ಸಮಂಜಸವೂ , ಔಚಿತ್ಯ ವೂ ಎಂದು ಭಾವಿಸಿರುವೆ.
ಇನ್ನೂ ಸಂಕಲನದ ಸುತ್ತ ಸಮಚಿತ್ತ…
ಅರಬ್ಬೀ, ಪರ್ಷಿಯ ಉರ್ದು ಕಾವ್ಯ ಪ್ರಕಾರದ ಜನಪ್ರಿಯ ಸಾಹಿತ್ಯ ರೂಪ ಗಜಲ್. ಗಜಲ್ ತನ್ನ ಪ್ರೇಯಸಿಯೊಡನೆ ಸಂವಾದಿಸುವ , ಲಲ್ಲೆಯೊಡಿಯುವ ಕಾವ್ಯವೆಂದೇ ಹೆಸರುವಾಸಿ . ಹಾಡುಗಬ್ಬವೂ ಹೌದು. ನಾರಾಯಣಪ್ಪನವರ ನುಡಿಯಲ್ಲೇ ಹೇಳುವುದಾದರೆ ಗಜಲ್, ಎಲ್ಲಾ ರೀತಿಯ ಪ್ರಮಾಣಗಳನ್ನು ಧಿಕ್ಕರಿಸಿ ಗಡಿ ಮಡಿಗಳನ್ನು ಮೀರಿ ಬಹುತ್ವವನ್ನು ಸಾರುವ ಮತ್ತು ಜೀವನ ಪ್ರೀತಿಯನ್ನು ಹೆಚ್ಚಿಸುವ ಒಂದು ಚಿಕಿತ್ಸಕ ಕಾವ್ಯ ಪ್ರಕಾರವಾಗಿದೆ. ನಮ್ಮ ಅಂತರಂಗದಲ್ಲಿ ಒಲವಿನ ಕಿರುದೀಪ ಹಚ್ಚಿಡುವ ಮೂಲಕ ಸಮಚಿತ್ತ ಸಾಧಿಸಲು ನೆರವಾಗುತ್ತದೆ. ತಲ್ಲಣಿಸುವ ಜೀವಕ್ಕೆ ಸಾಂತ್ವನ ನೀಡುವ ಬೇಲಿಯ ಹೂ ! ಹತ್ತಾರು ಕವಲು ದಾರಿಗಳ ಮುಂದೆ ಗೊಂದಲದ ಗೂಡಾಗಿ ನಿಂತ ಸಾಮಾನ್ಯ ಪಯಣಿಗನ ಪಾಡು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ ನಾನಾ ವೈರುದ್ಯಗಳ ನಡುವೆಯೂ ಅನ್ನದ ಹಾಡು ಹಾಡುತ್ತಿರುವ ನೇಗಿಲ ಯೋಗಿಯ ಬೆವರು. ಇವೆಲ್ಲವೂ ಗಜಲ್ ನ ಬೇರುಗಳಾಗಬೇಕು. ಇತ್ತೀಚೆಗೆ ಗಜಲ್ ಕಾವ್ಯ ಪ್ರಕಾರ ಕನ್ನಡ ಸಾಹಿತ್ಯಕ್ಕೂ ಲಗ್ಗೆಯಿಟ್ಟು ತನ್ನ ಅರ್ಥ ವಿಸ್ತಾರ , ಬಹುಮುಖ ಆಯಾಮಗಳು ಕಾವ್ಯಸಕ್ತರನ್ನು ತನ್ನತ್ತ ಸೆಳೆದು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಜನಪ್ರಿಯತೆ ಪಡೆಯುತ್ತಿರುವ ಕಾವ್ಯ. ಕೇವಲ ಉತ್ತರ ಕರ್ನಾಟಕದ ಕಪ್ಪುನೆಲದ ಕವಿಗಳೇ ಹೆಚ್ಚಾಗಿ ದುಡಿಸಿಕೊಳ್ಳುತ್ತಿದ್ದ ಈ ಗಜಲ್ ಇತ್ತೀಚೆಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಗಜಲ್ ಕಾರರನ್ನು ಹುಟ್ಟು ಹಾಕಿ ನದಿ – ನಾಲೆಗಳಲ್ಲಿ ಹರಿಯುವಂತೆ ಕನ್ನಡದ ಗಜಲ್ ಕಂಪು ನಾಡಿನುದ್ದಗಲಕ್ಕೂ ಪಸರಿಸುತ್ತಿರುವುದು ಸಂತೋಷದ ಸಂಗತಿ. ನಾಡಿನ ಹೆಸರಾಂತ ಗಜಲ್ ಕವಿಗಳಾದ ಅಲ್ಲಾ ಗಿರಿರಾಜ್ ( ಈ ಸಂಕಲನದ ಮುನ್ನುಡಿಕಾರರು) ಗಿರೀಶ್ ಜಕಾಪುರೆ, ಪ್ರಭಾವತಿ ದೇಸಾಯಿ, ಅರುಣಾ ನರೇಂದ್ರ, ಶ್ರೀದೇವಿ ಕೆರೆಮನೆ, ಪ್ರೇಮ ಹೂಗಾರ್, ಹಾಗೂ ಪ್ರಭುದ್ದ ರಾದ ಸುಜಾತ ಲಕ್ಮನೆ ಶಮಾ ಜಮಾದಾರ್ , ಚಂಪೂ, ನೂರ್ ಅಹ್ಮದ್ ನಾಗನೂರ್ ಮುಂತಾದ ಹಲವಾರು ಕವಿಗಳ ಸಾಲಿನಲ್ಲಿ ನಮ್ಮ ಈ ಕೋಲಾರದ ಚಿನ್ನ ದೊನಾ ಹೊಳಪು ಕಾಣುತ್ತಿರುವುದು ಹೆಮ್ಮೆಯ ವಿಷಯ.
ಹುಟ್ಟು ಬಡತನ, ಶೋಷಣೆಯ ಬೇಗುದಿಯಲ್ಲಿ ಬೆಂದ ನಾರಾಯಣಪ್ಪನವರು ಸಮಾಜದಲ್ಲಿನ ಅಸಮಾನತೆ, ಅಂಧಾನುಕರಣೆ , ಜಾತೀಯತೆ, ಧರ್ಮ ರಾಜಕಾರಣ , ಬಡತನ, ಮುಂತಾದ ವಿಷಯಗಳ ಕಡೆ ತಮ್ಮ ಮೃದು, ಮಧುರ ಬಂಡಾಯದ ಬರಹಗಳಿಂದಲೇ ತಿದ್ದುವ ಬದಲಾವಣೆ ಬಯಸುವ ಮನಸ್ಸುಳ್ಳವರಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರೀತಿ ಪ್ರೇಮದ ಸೆಳೆತದ ಅತ್ತರಿನ ನೆಶೆಯಂತೆ ಮಧು ಬಟ್ಟಲೊಳಗೆ ಪ್ರೇಮಾಂಕುರದ ಜೀವ ದ್ರವ್ಯ ತುಂಬಿ ಈ ಸಂಕಲನದ ಮೂಲಕ ಉಣ ಬಡಿಸಲು ಶಕ್ತರಾಗಿದ್ದಾರೆ. ಈ ಸಂಕಲನವು ೪೦ ಗಜಲ್ ಗಳನ್ನು ಹೊಂದಿದೆ.
*ನನ್ನ ಎದೆಗೆ ಬಿದ್ದ ನಾಣಿಯ ಗಜಲ್ ನ ಕೆಲವು ಸಾಲುಗಳು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ನನ್ನ ಕೇರಿ ಗಾಯಗೊಂಡವರ ಶಾಶ್ವತ ದವಾಖಾನೆ
ಒಂದೇ ಒಂದು ಗಾಯಕ್ಕಾದರೂ ನಾನು ಔಷಧಿಯಾಗಬೇಕು. ಗ..೨
ಇಲ್ಲಿ ನೋಡಿ ಬಂಡಾಯದ ಬಂಡ ! ಈ ಒಂದು ದ್ವಿಪದಿ ಇವರ ಹುಟ್ಟು ಶೋಷಣೆಯ ಅನಾವರಣ ಮಾಡಿಸುತ್ತದೆ. ಇವರದಷ್ಟೇ ಅಲ್ಲ ; ಸಮಾಜದ ಕೆಳಸ್ತರದ ಪ್ರತಿಯೊಬ್ಬರ ನೋವು ಇಲ್ಲಿದೆ. ಜಾತಿ , ಸಮುದಾಯದ ಹೆಸರಲ್ಲಿ ಸಾಮಾನ್ಯರ ಮುಂದೆ ಅಧಿಕಾರಕ್ಕಾಗಿ ಮಂಡಿಯುರುವ ಮಂದಿ ಮುಂದೆ ಸಾಮ್ರಾಜ್ಯ ಆಳುವರು . ಆದರೆ ಕತ್ತಲಾಗಿದ್ದ ಕೇರಿಯ ಗೂಡಿನ ಜನರ ನೋವು ಇಂಗುವುದೇ ಇಲ್ಲ.. !! ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.
ಹೃದಯಗಳಿಲ್ಲದ ಕಣಿವೆಯಲ್ಲಿ ಒಂದೇ ಸಮನೆ ಕಿರುಚುತಿದ್ದಾಳೆ
ಬಾಯಿಗೆ ತುರುಕಿದ ಬಟ್ಟೆಯ ಮೇಲೆ ಕಸೂತಿಯ ಹಾಕುತ್ತಿದ್ದಾಳೆ . ಗ…೫
ಬಯಲ ಎದೆಯ ತುಂಬಾ ಬೆಳದಿಂಗಳೆಂಬ ಹಾಲು ಒಸರುವ ಹೊತ್ತಿನಲ್ಲಿ
ಯಾರೋ ಇಲ್ಲಿ ಸತ್ತ ಹಸುಳೆಯನ್ನು ಬಟ್ಟೆಯಲ್ಲಿ ಸುತ್ತಿ ಎಸೆದು ಹೋಗಿದ್ದಾರೆ.. ಗ..೧೬.
ಎಷ್ಟು ದುರಂತ ಅಲ್ವಾ ? ಅವಿದ್ಯಾವಂತರಿಗಿಂತಲೂ ವಿದ್ಯಾವಂತ ನಮ್ಮ ಸಮಾಜ.. ಮನುಷ್ಯತ್ವದ ಬಗ್ಗೆ ಮಾತಾನಾಡುವ ನಾವು ಸಮಾಜದಲ್ಲಿ ನೆಲೆಯೂರಿ ನೆಡೆಯುತ್ತಿರುವ ಸ್ತ್ರೀ ಶೋಷಣೆ (ಹೆಣ್ಣು ಶಿಶು ಹತ್ಯೆ , ಅತ್ಯಾಚಾರ, ದೌರ್ಜನ್ಯ ) ದ ವಿರುದ್ಧ ಮೌನವಹಿಸಿರುವುದರ ವ್ಯಂಗ್ಯ ವಾಡಿದ್ದಾರೆ.
ನೆಲ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಕವಿಗಳನ್ನು ನೇಮಿಸಿದೆಯಂತೆ ಕಲ್ಲಳ್ಳಿ
ವಿಪರ್ಯಾಸ ಅಲ್ವಾ ಈಗೀಗ ಕವಿತ್ವವು ಕೀರ್ತೀಗಾಗಿ ಮಾರಲ್ಪಡುತ್ತಿದೆ. ಗ…೨೧
ನೋಯುವಷ್ಟು ನಿಂದಿಸಿದವರು ನೊಣ ಕೂರದಂತೆ ನೋಡಿಕೊಳ್ಳುತ್ತಾರೆ
ನನ್ನ ಹೆಣದ ಮೇಲೆ ಮತ್ತೆ ಅತ್ತರು ಚೆಲ್ಲುತ್ತಾರೆ ನೀನು ಸುಮ್ಮನೆ ನಗಬೇಕು… ಗ.೩೬
ಈ ಎರಡು ಗಜಲ್ ನ ಪ್ರತಿ ಶೇರ್ ಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗುತ್ತೆ. ಸಮಾಜದಲ್ಲಿನ ಜನರ ವಾಸ್ತವಿಕತೆಯ ಮನಸ್ಥಿತಿ, ಗೋಮುಖ ವ್ಯಾಘ್ರತೆಯ ಕರಾಳ ರೂಪವನ್ನು ಸಮಯ ಸಾಧಕತನದ ಸಾಚಾತನವನ್ನೂ ! ಕವಿ ವಿಡಂಬನಾತ್ಮಕ ರೂಪಕಗಳಲ್ಲಿ ಚಿತ್ರಿಸಿ ಓದಗನ್ನು ಅಲ್ಲೇ ಹಿಡಿದಿಡುವಂತ್ತೆ ಮಾಡಿದ್ದಾರೆ.
ಇವಿಷ್ಟು ಕೇವಲ ಉದಾಹರಣೆ ಮಾತ್ರ ಸಂಕಲನದಲ್ಲಿ ಇನ್ನೂ ಹಲವಾರು ಬಗೆಯ ಬಹುಮುಖ ವಸ್ತು , ವಿಷಯಗಳ ಮೇಲೆ ಬೆಳಕು ಚೆಲ್ಲುವ , ಪ್ರತಿರೋದಿಸುವ ಸಂವೇದನಾಶೀಲ ಕೆಲಸ ಮಾಡಿದ್ದಾರೆ.
ಕಲ್ಲಳ್ಳಿಯವರು ಒಬ್ಬ ಪ್ರತಿಭಾನ್ವಿತ , ಗಟ್ಟಿ ಗಜಲ್ ಕಾರರು . ಇವರ ಕಾವ್ಯದ ಭಾಷೆ, ಸರಳ ಸಾಮಾನ್ಯನು ಎದೆಗವಿಚಿಕೊಳ್ಳುವಷ್ಟು ಸುಂದರ ಸಶಕ್ತ. ಪ್ರಾಂತೀಯ ಭಾಷೆಯ ಸೊಗಡನ್ನು ಮೈಗೂಡಿಸಿಕೊಂಡಿರುವ ಈ ಸಂಕಲನದ ಕೆಲವು ಗಜಲ್ ಗಳ ಮಿಸ್ರಗಳು ಸ್ವತಂತ್ರತೆಯ ಲಯ ತಪ್ಪಿದಂತೆ , ಭಾವಾಭಿವ್ಯಕ್ತಿಯ ಏಕತಾನತೆಯನ್ನು ಹೊಂದಿರುವಂತೆ ಕಂಡು ಬಂತು ಇದು ನನ್ನ ಊಹೆಗೂ ನಿಲುಕದ ಮುದ್ರಾ ದೋಷವೋ ಅಥವಾ ತಿದ್ದುವಾಗ ಆದ ದೋಷವೋ ಇರಬೇಕು ಎಂದೆನಿಸಿತು. ಓದುಗನಾದ ನನ್ನ ದೃಷ್ಠಿಯಲ್ಲಿ ಭಿನ್ನತೆಯೂ ಇರಬಹುದು.!! ಕವಿ ಭಾವಕ್ಕೆ ದಕ್ಕೆಯಾಗದಿರಲಿ. ಮುಂದೆ ಇದರತ್ತ ಗಮ್ಯ ನೀಡಲಿ. ಇವರ ಈ ಸಂಕಲನ ಕನ್ನಡ ಸಾರಸ್ವತ ಲೋಕದಲ್ಲಿ ದಾಪುಗಾಲಿಟ್ಟು ಕೀರ್ತಿ ಪತಾಕೆಯ ಶಿಖರವೇರಲಿ. ಇನ್ನಷ್ಟು ಮತ್ತಷ್ಟು ಕೃತಿಗಳು ಇವರಿಂದ ಹೊರ ಬರಲಿ ಎಂದು ಪ್ರೀತಿಯಿಂದ ಶುಭ ಹಾರೈಸುತ್ತೇನೆ.
*********************************************
ಅಶೋಕ ಬಾಬು ಟೇಕಲ್.