ಕವಿತೆ
ಮುನ್ನುಡಿ ಬರೆಯುವೆ
ನಾಗರಾಜ್ ಹರಪನಹಳ್ಳಿ
ಸೂರ್ಯ ದಿಕ್ಕು ಬದಲಿಸುತ್ತಾನೆಂತೆ
ನಾನು ?
ಪ್ರಕೃತಿ ಮೈಮುರಿದು ಮಗ್ಗಲು ಬದಲಿಸುತ್ತಿದೆ
ನಾನು?
ನಾನೇನು ಮಾಡಲಿ ??
ಆಧುನಿಕ ಕೌಶಿಕ, ಮುಖವಾಡದ ರಾಮ,
ಹೊಸ ನಮೂನಿ ಪಂಜರದೊಳಗೆ ನನ್ನ ಬಂಧಿಸಿರುವಾಗ
ನಾನೇಗೆ ಪಥ ಬದಲಿಸಲಿ ?
ಸೂರ್ಯನೇ ನಿನ್ನ ಬೆಳಕು
ನನಗೆ ಬೆಳಕಾಗಲಿಲ್ಲ
ನದಿಯೇ ನಿನ್ನ ಸ್ವಾತಂತ್ರ್ಯ ನನ್ನದಾಗಲಿಲ್ಲ
ಸುಳಿದು ಬೀಸುವ ಗಾಳಿಯೇ
ನಿನ್ನ ಮೈ ನನ್ನ ದಾಗಲಿಲ್ಲ
ನದಿಯೇ ನಿನ್ನ ಕಾಲುಗಳು
ನನ್ನವಾಗಲಿಲ್ಲ
ಆಗ್ನಿಯೇ ನಿನ್ನ ನಾಲಿಗೆಯು
ನನ್ನದಾಗಲಿಲ್ಲ
ಪ್ರಕೃತಿಯೇ ನಿನ್ನಂತೆ ನಾನು
ಬದುಕಿ ಬಾಳಲಾಗಲಿಲ್ಲ
ಕೊನೆಯ ಪಕ್ಷ ಮರದಂತೆ
ಮೌನಿಯಾಗಲು ಬಿಡಲಿಲ್ಲ
ಚಲಿಸುವ ಚಲನೆಗೂ
ಬಂದ ಬಂಧನ
ಬದುಕೇ ಬಂಧನವಾಗಿರಲು
ನದಿ, ಅಗ್ನಿ, ಗಾಳಿ, ಪ್ರಕೃತಿಯ ಎದುರು ಬೇಡಿಕೊಳ್ಳುವುದಷ್ಟೇ ಉಳಿದದ್ದು …
ಹೇಳು ಸೂರ್ಯ ನಿನ್ನಂತೆ ಪಥ ಬದಲಿಸಲಿ ಯಾವಾಗ?
ಹರಿವ ನದಿಯೇ ನಿನ್ನಂತೆ
ಸ್ವಚ್ಚಂದವಾಗಿ ಹರಿಯಲಿ ಯಾವಾಗ?
ಸುಳಿವ ಗಾಳಿಯೇ ಯಾವಾಗ
ನಿನ್ನಂತೆ ಇತರರಿಗೆ ಕಿವಿಯಾಗಲಿ?
ಹೇಳು ಬೆಳಕಿನ ಬೆಳಕೆ
ಕತ್ತಲಿಗೆ ಯಾವಾಗ ದನಿಯಾಗಲಿ?
ಪಥಬದಲಿಸಲು ಮನಸ್ಸಿತ್ತು
ಬಲವೂ ಇತ್ತು
ಬಂಧನದ ಬೇಲಿಯ ದಾಟಲು
ಬೇಕಾದ ಹಠ, ಛಲವ
ಕಸಿದುಕೊಳ್ಳಲಾಗಿತ್ತು ; ವ್ಯವಸ್ಥೆಯ
ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿತ್ತು ;
ನದಿಯಾಗಲು, ಗಾಳಿಯಾಗಲೂ
ಕೊನೆಯ ಪಕ್ಷ ಬೆಂಕಿಯಾಗಲೂ ಬಿಡಲಿಲ್ಲ ನನ್ನ
ದಾರಿಯೇ ವಿಷಮವಾದೊಡೆ
ಹೇಗೆ ಬದಲಿಸಲಿ ಪಥವ ಸೂರ್ಯದೇವಾ ?
ಆದರೂ ….
ಕರುಣೆಯ ಆಶಾಕಿರಣ ತಬ್ಬುವ ಆಶಾವಾದ ಚಿಗುರೊಡೆದಿದೆ ನನ್ನೆದೆಯಲಿ
*********************************************
ಕವಿತೆ ಅರ್ಥಪೂರ್ಣವಾಗಿದೆ.ಸಾಲುಗಳು ಸುಂದರ,.
Beautifully presented..