
ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ-9
ಆತ್ಮಾನುಸಂಧಾನ
ಪಂಪನ ಬನವಾಸಿಗೆ ಪಯಣ

ನಾನು ಎರಡನೆ ಇಯತ್ತೆ ಮುಗಿಸುವಾಗ ನಮ್ಮ ತಂದೆಯವರಿಗೆ ಶಿರ್ಶಿ ತಾಲೂಕಿನ ಬನವಾಸಿಗೆ ವರ್ಗವಾಯಿತು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಇಡಿಯ ಕೇರಿಯೇ ದಿಗಿಲುಗೊಂಡಿತು. ಅಂದಿನ ದಿನಮಾನಗಳಲ್ಲಿ ನಮಗೆಲ್ಲ ಬನವಾಸಿಯೆಂಬುದು ವಿದೇಶ ಪ್ರವಾಸದಷ್ಟೇ ದೂರದ ಅನುಭವವನ್ನುಂಟು ಮಾಡುವಂತಿತ್ತು. ಭಯಾನಕವಾದ ಪರ್ವತ ಶ್ರೇಣಿಗಳ ಆಚೆಗಿನ ಘಟ್ಟ ಪ್ರದೇಶ ಎಂಬುದು ಒಂದು ಕಾರಣವಾದರೆ, ನಮ್ಮೂರ ಪಕ್ಕದ ಹನೇಹಳ್ಳಿಯಿಂದ ಶಿರ್ಶಿಗೆ ಹೊರಡುವ ಒಂದೇ ಒಂದು ಬಸ್ಸು ನಸುಕಿನಲ್ಲಿ ಹನೇಹಳ್ಳಿಯನ್ನು ಬಿಟ್ಟರೂ ಗೋಕರ್ಣದ ಮೂಲಕ ಮಿರ್ಜಾನಿನಲ್ಲಿ ಜಂಗಲ್ ನೆರವಿನಿಂದ ಅಘನಾಶಿನಿ ನದಿಯನ್ನು ದಾಟಿ, ಕತಗಾಲ್ ಇತ್ಯಾದಿ ಮುನ್ನಡೆದು ಭಯಂಕರ ತಿರುವುಗಳುಳ್ಳ ದೇವಿಮನೆ ಘಟ್ಟವನ್ನು ಹತ್ತಿಳಿದು ಶಿರ್ಶಿಗೆ ತಲುಪುವಾಗ ಮಧ್ಯಾಹ್ನ ದಾಟಿ ಹೋಗುತ್ತಿತ್ತು. ಮತ್ತೆ ಅಲ್ಲಿಂದ ಬನವಾಸಿಯ ಬಸ್ಸು ಹಿಡಿದು ಅಲ್ಲಿಗೆ ತಲುಪುವಾಗ ರಾತ್ರಿಯೇ ಆಗುತ್ತಿತ್ತು. ನಾನು ನನ್ನ ತಮ್ಮ ತಂಗಿಯರೆಲ್ಲ ಬಸ್ ಪ್ರಯಾಣದ ತಲೆಸುತ್ತು, ವಾಂತಿ ಇತ್ಯಾದಿಗಳಿಂದ ಬಳಲಿ ನಮ್ಮನ್ನು ಯಾರಾದರೂ ಎತ್ತಿಕೊಂಡೆ ಮನೆಗೆ ತಲುಪಿಸಬೇಕಾದ ಹಂತಕ್ಕೆ ಬಂದಿರುತ್ತಿದ್ದೆವು. ಈ ದ್ರಾವಿಡ ಪ್ರಾಣಾಯಾಮದ ಕಾರಣದಿಂದಲೂ ಬನವಾಸಿಯೆಂಬುದು ನಮ್ಮ ಕಣ್ಣಳತೆಗೆ ಮೀರಿದ ಊರು ಎಂಬ ಭಾವನೆ ನಮ್ಮವರಲ್ಲಿ ಬೆಳೆದು ನಿಂತಿತ್ತು. ಹೀಗಾಗಿಯೇ ಅಪ್ಪ ಕುಟುಂಬ ಸಹಿತ ಬನವಾಸಿಗೆ ಹೊರಟು ನಿಂತಾಗ ಬಂಧುಗಳು ಆತಂಕಗೊಂಡಿದ್ದು ಸಹಜ. ನನಗೋ ಈ ಎರಡು ವರ್ಷಗಳಲ್ಲಿಯೇ ಗಾಢ ಸ್ನೇಹಿತರಾಗಿ ಹಚ್ಚಿಕೊಂಡಿದ್ದ ಕುಪ್ಪಯ್ಯ ಗೌಡ, ಚಹಾದಂಗಡಿಯ ಗಣಪತಿಗೌಡ, ಮುಕುಂದ ಪ್ರಭು, ಇತ್ಯಾದಿ ಗೆಳೆಯರನ್ನು ಬಿಟ್ಟು ಹೋಗಬೇಕಲ್ಲ? ಎಂಬ ಚಿಂತೆ ಕಾಡಿತು.

ಆದರೆ ಬನವಾಸಿಯಲ್ಲಿ ನೆಲೆನಿಂತ ಬಳಿಕ ಹೊಸತೊಂದು ಲೋಕವೇ ನಮ್ಮೆದುರು ತೆರೆದುಕೊಂಡ ಅನುಭವವಾಯಿತು. ಬಹಳ ಮುಖ್ಯವಾಗಿ ನಾಡುಮಾಸ್ಕೇರಿಯಲ್ಲಿನ ಜಾತೀಯತೆಯ ಕಹಿ ಅನುಭವಗಳಾಗಲಿ, ಕೀಳರಿಮೆಯಾಗಲೀ ನಮ್ಮನ್ನು ಎಂದಿಗೂ ಬಾಧಿಸಲಿಲ್ಲ. ನಾನು, ನನ್ನ ತಮ್ಮ ತಂಗಿಯರೆಲ್ಲ ಮಧುಕೇಶ್ವರ ದೇವಾಲಯದ ಆವರಣದಲ್ಲಿಯೇ ಯಾವ ಮುಜುಗರವೂ ಇಲ್ಲದೇ ಆಡಬಹುದಿತ್ತು. ಹನೇಹಳ್ಳಿಯವರೇ ಆಗಿದ್ದ ಕುಚಿನಾಡ ವೆಂಕಟ್ರಮಣ ಶಾನುಭೋಗರ ಕುಟುಂಬ, ಗಾಂವಕಾರ ಮಾಸ್ತರರು, ಅಗ್ಗರಗೋಣದ ಮೋಹನ ಮಾಸ್ತರರು, ರಾಮಚಂದ್ರ ಮಾಸ್ತರರು ಮೊದಲಾದವರ ಕುಟುಂಬಗಳು ಊರಿನವರೆಂಬ ಕಾರಣದಿಂದ ಸಹಜವಾಗಿಯೇ ಆಪ್ತವಾಗಿದ್ದವು. ಕುಚಿನಾಡ ಶಾನುಭೋಗರ ಮಕ್ಕಳೂ ನಮ್ಮ ಆಪ್ತ ಸ್ನೇಹಿತರಾಗಿಯೇ ದೊರೆತುದರಿಂದ ಅವರ ಕುಟುಂಬದೊಡನೆ ನಾವು ಅತಿ ಸಲಿಗೆ ಹೊಂದಿದ್ದೆವು. ಅಪ್ಪ ಬನವಾಸಿಯ ಒಡಿಯರ್’ ಮುಳಗುಂದ’ ಮುಂತಾದ ಶ್ರೀಮಂತ ಕುಟುಂಬದ ಮಕ್ಕಳಿಗೆ ರಾತ್ರಿಯ ಮನೆಪಾಠ ಹೇಳಲಾರಂಭಿಸಿದ ಬಳಿಕ ಅಂಥ ಮಕ್ಕಳ ಒಡನಾಟವೂ ನಮಗೆ ಸೌಹಾರ್ದಯುತವಾಗಿತ್ತು.
ಬನವಾಸಿಯಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಅಪ್ಪನ ಕೆಲವು ವಿಶಿಷ್ಟ ಪ್ರತಿಭೆಯಿಂದಾಗಿ ಅಲ್ಲಿನ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶ ದೊರಕಿಸಿಕೊಂಡ. ಬನವಾಸಿಯ ಹವ್ಯಾಸಿ ನಾಟಕ ಮಂಡಳಿಯಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸುವ ಅವಕಾಶ ಪಡೆದು ಅಂದಿನ ದಿನಗಳಲ್ಲಿ ಮಹಿಳೆಯರು ರಂಗಪ್ರವೇಶಕ್ಕೆ ಹಿಂದೇಟು ಹಾಕುವುದರಿಂದ ಪುರುಷರೇ ಸ್ತ್ರೀಯರಪಾತ್ರ ನಿರ್ವಹಿಸಬೇಕಿತ್ತು. ಸಿನಿಮಾ ನಟರಂತೆ ಆಕರ್ಷಕ ವ್ಯಕ್ತಿತ್ವದ ಪಿ.ಜಿ. ಪ್ರಾತಃಕಾಲ ಎಂಬ ನಮ್ಮ ಹಿಂದಿ ಮೇಷ್ಟ್ರು ಯಾವುದೇ ನಾಟಕದ ಕಥಾ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದರೆ ಅಪ್ಪ ಕಥಾನಾಯಕಿಯಾಗಿ ಪಾತ್ರ ನಿರ್ವಹಿಸಿ ಅವರಿಗೆ ಸರಿಜೋಡಿಯೆನಿಸುತ್ತಿದ್ದ.
ಅಪ್ಪನಿಗೆ ಉತ್ತಮ ಬರಹದ ಕೌಶಲ್ಯವೂ ಇದ್ದಿತ್ತು. ಬನವಾಸಿಯ ಅನೇಕ ಅಂಗಡಿ ಮುಂಗಟ್ಟುಗಳಿಗೆ ನಾಮಫಲಕಗಳನ್ನು ಬರೆದುಕೊಟ್ಟು ಎಲ್ಲರಿಗೂ ಬೇಕಾದವನಾದ. ಮಧುಕೇಶ್ವರ ದೇವಾಲಯದ ಆವರಣದೊಳಗೆ ಇರುವ ಎಲ್ಲ ಸಣ್ಣ ಪುಟ್ಟ ಗುಡಿಗಳಿಗೆ, ಕಲ್ಲಿನ ಮಂಟಪ ಇತ್ಯಾದಿಗಳಿಗೆ ಆಕರ್ಷಕವಾದ ನಾಮಫಲಕಗಳನ್ನು ಬರೆದು ಅಂಟಿಸಿ ದೇವಾಲಯದ ಆಡಳಿತ ಮಂಡಳಿಯ ಗೌರವಕ್ಕೂ ಪಾತ್ರನಾಗಿದ್ದ. ಹೀಗೆ ಅಪ್ಪ ಬನವಾಸಿಯಲ್ಲಿ ಪರಿಚಿತನಾಗುತ್ತಿದ್ದುದು ನಮಗೆಲ್ಲ ತುಂಬಾ ಅನುಕೂಲವಾಯಿತು. ಇಂಥವರ ಮಕ್ಕಳು ಎಂದು ಬಹುತೇಕ ಜನ ನಮ್ಮನ್ನು ಅಕ್ಕರೆಯಿಂದಲೇ ಕಾಣುತ್ತಿದ್ದರು.
ಬನವಾಸಿಯ ಮಧುಕೇಶ್ವರ ದೇವರ ರಥೋತ್ಸವ, ದಸರಾ ಉತ್ಸವ, ನೆರೆಯ ಗುಡ್ನಾಪುರ ಜಾತ್ರೆ, ಬಂಕಸಾಣ ಜಾತ್ರೆಗಳು ಇತ್ಯಾದಿ ಮರೆಯಲಾಗದಂಥಹ ಸಾಂಸ್ಕೃತಿಕ ಸಂದರ್ಭಗಳು ನಮ್ಮ ಅನುಭವಕ್ಕೆ ದಕ್ಕಿದುದು ಬನವಾಸಿಯ ವಾಸ್ತವ್ಯದಲ್ಲಿಯೇ ಶೈಕ್ಷಣಿಕವಾಗಿ ಕೂಡಾ ನಮಗೆ ಉತ್ತಮ ತಳಪಾಯ ದೊರೆತುದು ಇದೇ ಊರಿನಲ್ಲಿ. ಬನವಾಸಿಯ ಹಿರಿಯ ಪ್ರಾಥಮಿಕ ಶಾಲೆ ಸುತ್ತಲಿನ ಪರಿಸರದಲ್ಲಿ “ಉತ್ತಮ ಶಾಲೆ” ಎಂಬ ಕೀರ್ತಿಗೆ ಪಾತ್ರವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಳ್ಳುತ್ತಿದ್ದರು. ಶಾಲೆಗೆ ಸಮೀಪವೇ ಇದ್ದ ಸರಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದರು.
ಶಿಕ್ಷಣ ಕ್ರಮ ಮತ್ತು ಆಡಳಿತ ಶಿಸ್ತಿಗೆ ಬಹುಮುಖ್ಯ ಕಾರಣರೆನಿಸಿದವರು ಈ ಶಾಲೆಯ ಮುಖ್ಯಾಧ್ಯಾಪಕರಾದ ಖಾಜಿ ಮಾಸ್ತರರು. ವೈಯಕ್ತಿಕವಾಗಿಯೂ ತುಂಬಾ ಕಟ್ಟುನಿಟ್ಟಾದ ಶಿಸ್ತಿನ ಮನುಷ್ಯ. ಸ್ವಲ್ಪ ಕುಳ್ಳನೆಯ ವ್ಯಕ್ತಿಯಾದರೂ ಬಿಳಿಯ ಪಾಯಿಜಾಮಾ, ಬಿಳಿಯ ಶರ್ಟು, ಅದರಮೇಲೋಂದು ಕಪ್ಪನೆಯ ಓವರ್ ಕೋಟ್, ತಲೆಯ ಮೇಲೊಂದು ಕರಿಯ ಟೊಪ್ಪಿಗೆ, ಕಾಲಲ್ಲಿ ಚರಮರಿ ಜೋಡು ಮೆಟ್ಟ ಬಂದರೆಂದರೆ ಕಟೆದು ನಿಲ್ಲಿಸಿದಂಥ ಪರಸನ್ಯಾಲಿಟಿ. ಸದಾ ಘನ ಗಾಂಭೀರ್ಯದಲ್ಲಿ ಮುಖವನ್ನು ಗಂಟು ಹಾಕಿಕೊಂಡಂತಿರುವ ಖಾಜಿ ಮಾಸ್ತರರು ತಮ್ಮ ಕಣ್ಣುಗಳಿಂದಲೇ ಎಲ್ಲರನ್ನೂ ಕಂಟ್ರೋಲು ಮಾಡುವ ರೀತಿಯೇ ಅದ್ಭುತವಾಗಿತ್ತು!. ಎಲ್ಲ ಅಧ್ಯಾಪಕರನ್ನು ಹದ್ದು ಬಸ್ತನಲ್ಲಿಟ್ಟು ನಡೆಸುವ ಮಾಸ್ತರರ ಆಡಳಿತ ವ್ಯವಸ್ಥೆಯೇ ಶಾಲೆಯನ್ನು ಶಿಸ್ತು ದಕ್ಷತೆಗೆ ಹೆಸರುವಾಸಿಯಾಗುವಂತೆ ಮಾಡಿತ್ತು.
ಶಾಲೆಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಸದಾ ಗಂಭೀರ ನಿಲುವಿನಲ್ಲಿರುವ ಖಾಜಿ ಮಾಸ್ತರರು ಅಂತರಂಗದಲ್ಲಿ ಅಪಾರವಾದ ಪ್ರೀತಿ-ಅಂತಃಕರಣವುಳ್ಳವರಾಗಿದ್ದರೆಂಬುದು ನನಗೆ ಮುಂದಿನ ದಿನಗಳಲ್ಲಿ ವೇದ್ಯವಾಯಿತು.
ನಾನು ನಾಲ್ಕನೆಯ ತರಗತಿ ಓದುತ್ತಿರುವಾಗ ಬನವಾಸಿಯ ತುಂಬ ಭಯಂಕರವಾದ ಸಿಡುಬು ರೋಗ ವ್ಯಾಪಿಸಿತ್ತು. ನಮ್ಮ ಮನೆಯಲ್ಲೂ ನಮ್ಮ ತಾಯಿಯೊಬ್ಬಳನ್ನುಳಿದು ನಾನು, ಅಪ್ಪ ಮತ್ತು ತಮ್ಮ ತಂಗಿಯರೆಲ್ಲ ಸಿಡುಬು ರೋಗದಿಂದ ಹಾಸಿಗೆ ಹಿಡಿದಿದ್ದೆವು. ಮೈತುಂಬ ಸಿಡುಬಿನ ನೀರುಗುಳ್ಳೆಗಳೆದ್ದು ಬಾಳೆಎಲೆ ಹಾಸಿಗೆಯ ಮೇಲೆ ನಮ್ಮನ್ನೆಲ್ಲ ಮಲಗಿಸಿದ್ದರು. ಅತಿಯಾದ ನಿಶ್ಯಕ್ತಿ ಮತ್ತು ಮೈ ಉರಿಯಿಂದ ನಾವು ನರಳುತ್ತಿದ್ದರೆ ಅವ್ವ ನಮ್ಮ ಯಾತನೆಗೆ ಸಂಕಟ ಪಡುತ್ತಾ ಉಪಚರಿಸುತ್ತಾ ಓಡಾಡುತ್ತಿದ್ದಳು. ಅಪ್ಪನ ಸಹೋದ್ಯೋಗಿ ಶಿಕ್ಷಕರೆಲ್ಲಾ ಬಂದು ಸಾಂತ್ವನ ಹೇಳಿ ಹೋಗುತ್ತಿದ್ದರು. ಈ ಸಮಯದಲ್ಲಿ ಖಾಜಿ ಮಾಸ್ತರರು ತೋರಿದ ಕಾಳಜಿ, ಮಾಡಿದ ಉಪಕಾರ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇದೆ. ನಿತ್ಯವೂ ನಮಗೆ ಗಂಜಿ ಮತ್ತು ಹಣ್ಣು ಹಂಪಲುಗಳ ವ್ಯವಸ್ಥೆ ಮಾಡಿ ನಾವು ಸಂಪೂರ್ಣ ಗುಣಮುಖರಾಗುವವರೆಗೆ ತುಂಬಾ ಕಳಕಳಿಯಿಂದ ನೋಡಿಕೊಂಡರು. ಅವರು ಮತ್ತು ಅವರ ಸಹೋದ್ಯೋಗಿ ಶಿಕ್ಷಕರು ತೋರಿದ ಪ್ರೀತ್ಯಾದರಗಳೇ ನಮ್ಮನ್ನು ಖಾಯಿಲೆಗೆ ಬಲಿಯಾಗದಂತೆ ಬದುಕಿಸಿದ್ದವು ಅಂದರೆ ಉತ್ಪೆಕ್ಷೆಯಲ್ಲ!
ಬಹುಶಃ ಖಾಜಿ ಮಾಸ್ತರರಂಥ ಮಹನಿಯರೇ ಸಮಾಜದಲ್ಲಿ ಮನುಷ್ಯರಾಗಿ ಮುಖವೆತ್ತಿ ಬಾಳಲು ಪೋಷಕ ದೃವ್ಯವಾಗಿ ಹೊರತೆರೆಂದು ನಾನೀಗಲೂ ದೃಢವಾಗಿ ನಂಬಿದ್ದೇನೆ
***********************************
ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಸರ್, ಬನವಾಸಿ ಅಂತಹ ಇತಿಹಾಸಿಕ ಸ್ಥಳದಲ್ಲಿ ನಿಮ್ಮ ಅನುಭವದ ಲೇಖನ ಓದಿ ತುಂಬಾ ಸಂತೋಷವಾಯಿತು. ಎರಡನೇ ತರಗತಿಯಿಂದ ಅನುಭವದ ಮಾತುಗಳು ವಿವರಿಸಿದ್ದಿರಿ ಇದೇ ಕವಿಯ ಕಲ್ಪನೆ.
ಅಂದು ಸಿಡುಬು ರೋಗದಿಂದ ಬಳಲುತ್ತಿದ್ದನ್ನು ಓದುವಾಗ ಸ್ವಲ್ಪ ಹೊತ್ತು ಬೇಸರವಾಯಿತು, ಕೊನೆತನಕ ಓದಿದಾಗ ಎಲ್ಲವು ಆನಂದವಾಯಿತು.
ಧನ್ಯವಾದಗಳು,
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ ಮನುಜ
ನಿಮ್ಮ ಈ ಅಂಕಣದಲ್ಲಿ ಖಾಜಿ ಮಾಸ್ತರರ ವ್ಯಕ್ತಿತ್ವ ಆದರ್ಶ ನನಗೆ ತುಂಬಾ ಹಿಡಿಸಿತು
ಧನ್ಯವಾದಗಳು ಸರ್