ಅಂಕಣ ಬರಹ

ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ

ದೀಪ್ತಿ ಭದ್ರಾವತಿ

ಪರಿಚಯ:


ದೀಪ್ತಿ ಭದ್ರಾವತಿ ಕನ್ನಡದ ಕತೆಗಾರ್ತಿ. ಮೂಲತಃ ದಕ್ಷಿಣ ಕನ್ನಡದವರಾದರು, ದೀಪ್ತಿ ನೆಲೆ ನಿಂತದ್ದು ಭದ್ರಾವತಿಯಲ್ಲಿ.‌ ಆರೋಗ್ಯ ಇಲಾಖೆಯಲ್ಲಿ ನೌಕರಿ. ಕವಿತೆ ಬರೆಯುತ್ತಿದ್ದ ದೀಪ್ತಿ ಆರಂಭದಲ್ಲಿ ಕಾಗದದ ಕುದುರೆ, ಗ್ರೀನ್ ರೂಂನಲ್ಲಿ ಎಂಬ ಎರಡು ಕವಿತಾ ಸಂಕಲನ ಪ್ರಕಟಿಸಿದರು. ಆ‌ ಬದಿಯ ಹೂ, ಗೀರು ಇವರ ಕಥಾ ಸಂಕಲನಗಳು. ಆ ಬದಿಯ ಹೂ ಸಂಕಲನಕ್ಕೆ
ಕತೆಗಳಿಗೆ ಮಾಸ್ತಿ ಕಥಾ ಪ್ರಶಸ್ತಿ ಪಡೆದವರು‌, ಗೀರು ಕಥಾ ಸಂಕಲನಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತನ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸಹ ಈಚಿಗೆ ದಕ್ಕಿದೆ.
ಬಸವರಾಜ ಕಟ್ಟೀಮನಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ , ದೇವಾಂಗನ ಶಾಸ್ತ್ರಿ ಪ್ರಶಸ್ತಿ ಸಹ ಇವರಿಗೆ ಒಲಿದಿವೆ

ರಂಗಭೂಮಿ ಸಹ ಇವರ ಆಸಕ್ತಿ. ಕಲಾವಿದೆ. ಜೀವಪರ ಮನಸ್ಸುಳ್ಳವರು.‌ಕಷ್ಟಕ್ಕೆ ಮುಖಕೊಟ್ಟು ಮಾತಾಡಿಸುವವರು. ಬಡತನ ಮತ್ತು ಅಸಹಾಯಕತೆಯ ಜೊತೆ ಕುಳಿತು ಮಾತಾಡುವ ತಾಳ್ಮೆ ಕಾರಣ ಕತೆ ಬರೆದ ದೀಪ್ತಿ, ಬದುಕಿನ ವಿಶಾಲತೆಯ ಹುಡುಕಿ ಹೊರಟ ಕತೆಗಾರ್ತಿ. ನಿರ್ಲಕ್ಷ್ಯ ಎಂಬುದರ ಕಡೆಗೆ ತುಡಿದು ಅದನ್ನು ಅಕ್ಷರಗಳಲ್ಲಿ ಹಿಡಿದವರು. ಸೂಕ್ಷ್ಮ ಗ್ರಹಿಕೆ ಇವರ ಕತೆಗಳ ಜೀವಾಳ.
……………..

ಸಂದರ್ಶನ

ಕತೆ -ಕವಿತೆಗಳನ್ನು ಯಾಕೆ ಬರೆಯುತ್ತೀರಿ ?

            ಕತೆ ಕವಿತೆ ಬರೆಯುವುದು ನನಗೆ ಬಿಡುಗಡೆಯಂತೆ ಕಾಣಿಸುತ್ತದೆ. ಆ ಕ್ಷಣಗಳಲ್ಲಿ ನಾನು ನಾನಾಗಿರುತ್ತೇನೆ.

ಕವಿತೆ ಕತೆ ಹುಟ್ಟುವ ಕ್ಷಣ ಯಾವುದು ?

            ಇಂತದ್ದೇ ಎನ್ನುವ ಕ್ಷಣ ಇರುವುದಿಲ್ಲ. ಅದು ಯಾವಾಗ ಬೇಕಿದ್ದರೂ ನಮ್ಮೊಳಗೆ ಬಂದು ಕೂತು ಬಿಡುತ್ತದೆ. ಒಂದು ನಿರ್ದಿಷ್ಟ ಕಾಲದಲ್ಲಿ ಬರೆಸಿಕೊಳ್ಳುತ್ತದೆ.

ನಿಮ ಕತೆ ಕವಿತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?

            ಯಾವುದಕ್ಕು ಸೀಮಿತಗೊಂಡಿಲ್ಲ. ಆದರೂ ನನಗೆ ನೋವು, ಬಡತನ,

ಸ್ತ್ರೀಯರ ಸಮಸ್ಯೆಗಳು ಹೆಚ್ಚು ಕಾಣಿಸುತ್ತದೆ. ಮಾನವೀಯ ನೆಲಗಟ್ಟುಗಳು ಮುಖ್ಯ ಎನ್ನಿಸುತ್ತವೆ.

ನೀವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದೆಯೇ ?

            ಹೌದು. ಆಸ್ಪತ್ರೆ ಎನ್ನುವುದು ಸಂತನ ಹಾಗೆ ನನಗೆ ಕಾಣಿಸುತ್ತದೆ. ಇಲ್ಲಿ ಹುಟ್ಟು ಮತ್ತು ಸಾವು ಎರಡೂ ಮುಖಾಮುಖಿಯಾಗುತ್ತಲೆ ಇರುತ್ತದೆ. ನನಗೆ ವಿನಯತೆ, ಮನುಷ್ಯತ್ವ ಮತ್ತು ಮನುಷ್ಯರನ್ನು ನಿಷ್ಕಾರಣವಾಗಿ ಪ್ರೀತಿಸುವುದನ್ನು, ಬದುಕಿನ ಮತ್ತೊಂದು ಮಗ್ಗಲನ್ನು ಅರಿವುದಕ್ಕೆ  ಮತ್ತು ನಿರ್ಲಿಪ್ತವಾಗಿ ಎಲ್ಲವನ್ನು ನೊಡುವುದು ಸಾಧ್ಯವಾಗಿರುವುದು ನನ್ನ ವೃತ್ತಿಯಿಂದಲೆ.

ವೃತ್ತಿ ಮತ್ತು ಸೃಜನಶೀಲತೆ ಹಾಗೂ ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು ? ಹೇಗೆ ನಿಭಾಯಿಸುವಿರಿ?

            ನನಗಿದು ಸವಾಲಿನದ್ದೆ. ಆದರೆ ಅನಿವಾರ‍್ಯ. ಎಷ್ಟೋ ಖಾಸಗಿ ಕಾರ‍್ಯಕ್ರಮವನ್ನು, ಸಾಹಿತ್ಯದ ಚಟುವಟಿಕೆಗಳನ್ನು ತಪ್ಪಿಸಿಕೊಂಡಿದ್ದೇನೆ. “ಎಲ್ಲೂ ಬರಲ್ಲ” ಎನ್ನುವ ದೂರನ್ನು ಕೇಳಿಸಿಕೊಂಡಿದ್ದೇನೆ. ಕೋವಿಡ್ನ ಕಾರಣಕ್ಕೆ ಕಳೆದ ಒಂಭತ್ತು ತಿಂಗಳಿಂದ ಹೆಚ್ಚು ಓದಿಲ್ಲ ಬರೆದಿಲ್ಲ. ಹೇಗೆಲ್ಲ ಸಮಯ ಸಿಗುತ್ತದೆಯೋ ಹಾಗೆ ಹೊಂದಿಸಿಕೊಳ್ಳುವ ಯತ್ನದಲ್ಲಿರುತ್ತೇನೆ.

ನಿಮ್ಮ ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ?

ಇಲ್ಲ. ನಾನು ಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುವುದಿಲ್ಲ. ಕತೆ ಹೇಗೆ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತದೆಯೋ ಅದನ್ನು ಕುತೂಹಲದಿಂದ ಗಮನಿಸುತ್ತೇನೆ. ಪಾತ್ರಗಳ ಆಯ್ಕೆಯೂ ಹಾಗೆಯೇ ಕತೆಗೆ ತಕ್ಕಂತಹ ಪಾತ್ರಗಳು ಅವಾಗಿಯೇ ರೂಪುಗೊಳ್ಳುತ್ತವೆ. ಕೆಲವೊಂದು ಕತೆ ಬರೆದಾಗ ಈ ಕತೆ ನನ್ನೊಳಗೆ ಎಲ್ಲಿತ್ತು ಅಂತ ಅಚ್ಚರಿ ಪಟ್ಟಿದ್ದೇನೆ.

ಕನ್ನಡ ವಿಮರ್ಶಾಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ ?

            ನನ್ನ ಮೊದಲ ಕಥಾ ಸಂಕಲನ ಬಂದಾಗ ಅಂತಹ ಯಾವ ಗುರುತಿಸುವಿಕೆಯೂ ಸಿಗಲಿಲ್ಲ. ಆದರೆ ಓದಿದ ಎಲ್ಲರೂ ಹಿರಿಯರನ್ನು ಸೇರಿದಂತೆ ಒಳ್ಳೆಯ ಮಾತಾಡಿದ್ದರು. ಎರಡನೇ ಸಂಕಲನಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂತು. ಬಹಳಷ್ಟು ಜನ ಇಲ್ಲಿನ ಕತೆಗಳ ಬಗ್ಗೆ ಮಾತಾಡಿದ್ರು. ಬರೆದ್ರು. ಅದು ಖುಷಿ ಕೊಟ್ಟಿದೆ.

ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸಮಸ್ಯೆ, ಸವಾಲುಗಳೇನು ?

             ನಾನೊಬ್ಬಳೆ ಅಲ್ಲ,  ಬಹುತೇಕ ಎಲ್ಲಾ ಬರಹಗಾರ್ತಿಯರ ಸಮಸ್ಯೆಯೂ ಕೂಡ ಇದೆ ಆಗಿರುತ್ತದೆ. ಬರಹದೊಳಗೆ ಬರಹಗಾರ್ತಿಯರನ್ನೆ ಹುಡುಕುವ ಮನಸ್ಥಿತಿಯೊಂದು ಬೆಳೆದು ಬಂದಿದೆ. ಪುರುಷರ ಬರವಣಿಗೆ ಲೋಕಕ್ಕೆ ಸಂಬಂಧಿಸಿದ್ದು ಮಹಿಳೆಯರು ಬರೆದರೆ, ಅದು ಸ್ವಂತದ್ದು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಆ ಎಚ್ಚರದಲ್ಲಿಯೇ ಬರೆಯಬೇಕಾಗುತ್ತದೆ. ಮನೆ, ಸಂಸಾರ ಸಮಾಜದ ಚೌಕಟ್ಟುಗಳು ಒಮ್ಮೊಮ್ಮೆ ಹೇಳಬೇಕಾದದ್ದು ಹೇಳುವಲ್ಲಿ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಹೀಗಾಗಿ ಹೇಳಬೇಕಾದ್ದು ಕೆಲವೊಮ್ಮೆ ಉಳಿದು ಬಿಡುವ ಸಾಧ್ಯತೆಗಳು ಹೆಚ್ಚು. ನನ್ನ ಮೊದಲ ಕಥಾ ಸಂಕಲನ ಬಂದಾಗ ಅದರಲ್ಲಿ ಸ್ತ್ರೀ ಕೇಂದ್ರಿತ ಕತೆಗಳು ಇರಲಿಲ್ಲ. ಕವನ ಸಂಕಲನದಲ್ಲಿಯೂ ಕೂಡ . ಆಗ ಕೆಲವೊಬ್ಬರು ನೀವು ಮಹಿಳೆಯಾಗಿ ಮಹಿಳೆಯರ ನೋವು ಬರೆಯಲ್ವಾ ಎಂದಿದ್ದರು. ನೀವು ಈ ರೀತಿ ಯಾರದ್ದೋ ಕತೆಯನ್ನು ಹೇಳಿದ್ರೆ ಅದರಲ್ಲಿ ಪ್ರಾಮಾಣಿಕತೆ ಎಲ್ಲಿರತ್ತೆ ಎಂದಿದ್ರು. ಮಹಿಳೆ ವೈಯಕ್ತಿಕ ನೋವು, ದಾಂಪತ್ಯ, ಲೈಂಗಿಕತೆಯ ಬಗ್ಗೆ ಬರೆದರೆ ಮಾತ್ರ ಅದು ಪ್ರಾಮಾಣಿಕ ಬರಹ ಅಂದುಕೊಳ್ಳುವುದು ತಪ್ಪು. ಮಹಿಳೆಯರಿಗೆ ಹೊರ ಪ್ರಪಂಚದ ಅರಿವು ಇರುವುದಿಲ್ಲ ಎಂದುಕೊಳ್ಳುವುದೇ ಮಿತಿ. ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ಮತ್ತು ಆಕೆ ಕಾಣುವ ಲೋಕವನ್ನು ದಾಖಲಿಸುವುದು ಕೂಡ ಇಂದಿನ ತುರ್ತು.

ಸಾಹಿತ್ಯ ಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ ?

             ಇಲ್ಲ ಹಾಗೇನು ಇಲ್ಲ. ಬಹುತೇಕರು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ. ಆದರೆ ಕೆಲವು ಸಂಘ ಸಂಸ್ಥೆಗಳಲ್ಲಿ ಅನುಭವಿಸಿದ್ದೇನೆ. ಪುರುಷರೆಲ್ಲ ವೇದಿಕೆಯಲ್ಲಿ ಕೂರುವ ಮತ್ತು ಮಹಿಳೆಯರನ್ನು ಹೂ ಗುಚ್ಛ ನೀಡುವುದಕ್ಕೆ ನಿಲ್ಲಿಸುವ ಕ್ರಮವನ್ನು ವಿರೋಧಿಸಿದ್ದೇನೆ. ಕೆಲವೊಂದು ಕಡೆ ಬಿಟ್ಟು ಬಂದಿದ್ದೇನೆ.

ಎಡ ಪಂಥೀಯ, ,ಬಲ ಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

             ಎರಡು ಕಲ್ಲು ಉಜ್ಜಿದಾಗ ಬೆಳಕು ಬರತ್ತೆ ಅಲ್ವಾ. ಎಡ ಮತ್ತು ಬಲದ ನಡುವೆ ತಿಕ್ಕಾಟವಿದ್ದಾಗಲೇ ಹೊಸದಾದ ಮೈಲಿಗಲ್ಲೊಂದು ಎದುರಾಗತ್ತೆ. ಅದಿಲ್ಲದಿದ್ದರೆ ಹರಿವು ಎನ್ನೋದು ಎಲ್ಲಿರತ್ತೆ. ಆದರೆ ಯಾವುದು ಅತಿಯಾದರೆ, ಪ್ರಶ್ನಾತೀತವಾದರೆ ಅದರಿಂದ ಹೊಸದೇನು ಉದ್ಭವಿಸುವುದಿಲ್ಲ. ಬದಲಾಗಿ ಅವನತಿ ಶುರುವಾಗತ್ತೆ. ಯಾವುದರಿಂದ ಮನುಷ್ಯರ ಬದುಕು ಹಸನಾಗತ್ತೊ ಅದಾಗಲಿ ಬಿಡಿ. ಅದರಲ್ಲೇನಿದೆ.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?

            ರಾಜಕೀಯದ ಕುರಿತು ಏನನ್ನು ಹೇಳಲಾರೆ.

ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು?

            ಧರ್ಮ ಯಾವತ್ತು ಮನುಷ್ಯನನ್ನು ರೂಪಿಸುವ ಮಾರ್ಗವಾಗಬೇಕು. ಅದು ಹೇರಿಕೆಯಾಗಬಾರದು. ಯಾವುದೇ ಧರ್ಮಕ್ಕು ಮನುಷ್ಯತ್ವ ಎನ್ನುವುದು ಮೂಲ ರೂಪವಾಗಬೇಕು. ಮತ್ತದು ಮನುಷ್ಯರ ಬದುಕನ್ನು ಹಸನುಗೊಳಿಸಲು ಯತ್ನಿಸಬೇಕೆ ಹೊರತು ಸಂಘರ್ಷ ಹುಟ್ಟು ಹಾಕಬಾರದು. ದೇವರು ಕೂಡ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹುಟ್ಟು ಹಾಕಿಕೊಂಡಿರುವಂತದ್ದು. ನಾನು  ದೇವರನ್ನು ನಂಬುವುದಿಲ್ಲ. ಆದರೆ ನಂಬುವವರನ್ನು ನಿರಾಕರಿಸುವುದಿಲ್ಲ.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

            ಬದಲಾವಣೆ ಎನ್ನುವುದು ಎಲ್ಲ ಕಾಲಘಟ್ಟದ ಸಹಜ ಕ್ರಿಯೆ. ಪ್ರತಿಯೊಂದಕ್ಕು ಒಂದೊಂದು ಹೊರಳು ಇದ್ದೇ ಇರುತ್ತದೆ. ಅದೇ ಸ್ಥಿತಿಯಲ್ಲಿ ಇವತ್ತು ಸಾಂಸ್ಕೃತಿಕ ವಾತಾರವಣ ಇದೆ. ಪುಸ್ತಕಕ್ಕೆ ಮೀಸಲಾದ ಸಾಹಿತ್ಯ, ಆಡಿಯೋ, ವಿಡಿಯೋಗಳಾಗಿ, ವೆಬಿನಾರ್‌ಗಳು ಹೆಚ್ಚಿ ಎಲ್ಲೆಲ್ಲೋ ಇರುವವರನ್ನ ತಲುಪುತ್ತಿದೆ. ಜಗತ್ತು ಕೈಗೆಟುಕುತ್ತಿದೆ. ಸಾಹಿತ್ಯ ತಲುಪುವ ವ್ಯಾಪ್ತಿ ಹೆಚ್ಚಾಗುತ್ತಿದೆ.

ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ತುಸು ಹೆಚ್ಚೇ ಇದೆ ಎಂದು ಕೆಲವು ವಿದ್ಯಮಾನಗಳನ್ನು ನೋಡಿದಾಗ ಅನ್ನಿಸೋದಕ್ಕೆ ಶುರುವಾಗಿದೆ. ಮತ್ತು ಮನುಷ್ಯರು ಇದ್ದಲ್ಲಿ ಇವೆಲ್ಲ ಸಹಜ ಕೂಡ. ಬೇಕಾದವರಿಗೆ ಅತೀ ಒತ್ತು ಕೊಡುವ. ಅಲ್ಲದವರನ್ನು ಗಮನಿಸದಂತೆ ನಟಿಸುವ ಪ್ರಕ್ರಿಯೆಗಳು ಇದ್ದೇ ಇವೆ. ಬಹುಶ: ಹಿಂದೆಯು ಹೀಗೆ ಇದ್ದಿರಬಹುದು. ನಾವು ಏನೆಲ್ಲ ಸರ್ಕಸ್ ಮಾಡಿದರೂ ಕೊನೆಗೆ ಉಳಿಯುವುದು ಸಾಹಿತ್ಯ ಮಾತ್ರ ಎನ್ನುವುದಷ್ಟನ್ನೆ ಮನಗಂಡಿದ್ದೇನೆ.

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ?

            ಚಲನೆ ಸ್ವಾಭಾವಿಕ ಪ್ರಕ್ರಿಯೆ. ಯಾವುದನ್ನು ಅಡಗಿಸಲಾಗಿರುತ್ತದೆಯೊ ಅದು ಒಂದು ಕಾಲಕ್ಕೆ ಮುನ್ನೆಲೆಗೆ ಬರುತ್ತದೆ. ಯಾವುದು ಮುಂಚೂಣಿಯಲಿ ನಿಂತಿರುತ್ತದೆಯೋ ಅದು ಹಿಂಸರಿಯುತ್ತದೆ. ದೇಶದ, ದೇಶಿಗರ ಮನಸ್ಥಿತಿಯು ಈಗ ಹೀಗೆ ಇದೆ. ಕುಸಿದಿರುವ ಆರ್ಥಿಕತೆ, ನಿರುದ್ಯೋಗ, ರೈತರ ಸಮಸ್ಯೆಗಳು, ಈ ಕುರಿತು ಹೆಚ್ಚು ಹೆಚ್ಚು ಆಲೋಚಿಸಬೇಕಾದ ಅವಶ್ಯಕತೆ ಇದೆ. ದೇಶ ಸ್ವಾವಲಂಬಿಯಾದಾಗ ಮಾತ್ರ ಜನರ ಮತ್ತು ದೇಶದ ಅಭಿವೃದ್ಧಿ ಸಾಧ್ಯ.

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?

            ಕನಸು ಅಂತೇನು ಇಲ್ಲ. ಸಾಹಿತ್ಯದ ಮೂಲಕ ಎಲ್ಲರನ್ನು ಪ್ರೀತಿಸುವಂತಾದರೆ ಅದಕ್ಕಿಂತ ಬೇರೇನು ಬೇಕು?.

ನಿಮ್ಮ ಇಷ್ಟದ ಲೇಖಕರು ಯಾರು ?

            ಬೇಂದ್ರೆ, ಮಹಾಶ್ವೇತಾದೇವಿ, ಓ ಹೆನ್ರಿ.

ನೀವು ಈಚೆಗೆ ಓದಿದ ಕೃತಿಗಳು ಯಾವವು?

            ಈಚೆಗೆ ಬಂದ ಹೊಸಬರ ಕೃತಿಗಳು. ಈಗ ದುರ್ಗಾಸ್ತಮಾನದ ಮರು ಓದು

ನಿಮಗೆ ಇಷ್ಟದ ಕೆಲಸ ಯಾವುದು ?

            ಏಕಾಂಗಿ ಸುಮ್ಮನೆ ಅಲೆಯುವುದು

ನಿಮಿಗೆ ಇಷ್ಟವಾದ ಸ್ಥಳ ಯಾವುದು?

            ಕಡಲಿರುವ ಯಾವುದೇ ಊರು

ನಿಮ್ಮ ಪ್ರೀತಿಯ ಸಿನಿಮಾ ,ಇಷ್ಟದ ಸಿನಿಮಾ ಯಾವುದು ?

            ಕಾನೂರು ಸುಬ್ಬಮ್ಮ ಹೆಗ್ಗಡತಿ, ತಮಿಳಿನ ಪ್ರಕಾಶ್ ರೈ ಅಭಿನಯದ ಕಾಂಜೀಪುರಂ

ನೀವು ಮರೆಯಲಾರದ ಘಟನೆ ಯಾವುದು ?

            ನನ್ನ ಮೊದಲ ಕಥಾ ಸಂಕಲನಕ್ಕೆ ಮಾಸ್ತಿ ಪ್ರಶಸ್ತಿ ಪಡೆದ ಕ್ಷಣ

ಕನ್ನಡದಲ್ಲಿ ಬರೆಯುವವರಿಗೆ ಏನು ಹೇಳಲು ಬಯಸುವಿರಿ ?

  ಹೇಳುವುದು ಅಂತೇನು ಇಲ್ಲ. ಎಲ್ಲ ಹಿರಿಯರ ಹೇಳಿದ್ದನ್ನೇ ಹೇಳುವೆ. ಬರಹಗಾರರಿಗೆ ಒಂದು ಸ್ಪಷ್ಟತೆ ಇರಬೇಕು. ಪರಂಪರೆಗಳ ಅರಿವು ಇರಬೇಕು. ಮುಖ್ಯವಾಗಿ ಕನ್ನಡದ ಕುರಿತಾಗಿ ಗೌರವದ ಜೊತೆಗೆ ಮಮತೆ ಇರಬೇಕು. ಇದು ನನ್ನದು ಎನ್ನುವ ಆಪ್ತತೆ ಇರಬೇಕು. ಸದಾ ಹೀಗಳೆಯುತ್ತ ಕೂತರೆ ಯಾವುದು ಸಾಧ್ಯವಾಗುವುದಿಲ್ಲ. ಬರಹ ಮತ್ತು ಬದುಕು ಬೇರೆ ಬೇರೆ ಅಂದುಕೊಂಡು ಬದುಕುವುದಾದರೆ ಮತ್ತೊಬ್ಬರಿಗೆ ಬೋಧಿಸುವ ಅಗತ್ಯ ಏನಿದೆ?.


ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Leave a Reply

Back To Top