ಸಂಕ್ರಾಂತಿ ಕಾವ್ಯ ಸುಗ್ಗಿ
ಹುಡುಕಾಟ
ಮಾಲತಿ ಶಶಿಧರ್
ನಾವು ಬಂದದ್ದಾರೂ ಯಾವಾಗ?
ಹುಡುಗಿಯರ ಜಡೆ ಎಳೆದು
ಬೈಯಿಸಿಕೊಳ್ಳುತ್ತಿದ್ದ ತರಗತಿಯಿಂದ ಇಲ್ಲಿಗೆ
ಮಿಸ್ಸಿನ ಬೆನ್ನಿಗೆ ರಾಕೆಟ್ ಬಿಟ್ಟು
ಕಿವಿ ಹಿಂಡಿಸಿಕೊಂಡ ಕಾರಿಡಾರ್ನಿಂದ ಇಲ್ಲಿಗೆ..
ನಾವು ಮರೆತದ್ದಾದರೂ ಯಾವಾಗ?
ಉಗುರುಗಳ ಮೇಲೆ ಬಿಳಿ ಚುಕ್ಕಿ ಇಟ್ಟು
ಪುರ್ರೆಂದು ಹಾರಿ ಹೋಗುತ್ತಿದ್ದ ಬೆಳ್ಳಕ್ಕಿಗಳ
ಹಿಡಿದು ಬೆಂಕಿಪೊಟ್ಟಣದಲಿ ಬಂಧಿಸುತ್ತಿದ್ದ
ಮಿಂಚುಹುಳಗಳ
ನಾವು ಬೆಳೆದದ್ದಾದರೂ ಯಾವಾಗ?
ನಮ್ಮ ಕನಸುಗಳು ಚಿಕ್ಕದಾಗಲು ಬಿಡುತ್ತಾ
ಮನಸುಗಳಿಗೆ ಮಾತಿನಲೇ ಬೆಂಕಿ ಇಡುತ್ತಾ
ಒಂದೇ ಒಂದು ಬಾರಿ ಹತ್ತಾರು ವರ್ಷ ಹಳೆಯ
ಕ್ಯಾಲೆಂಡರ್ ತೆಗೆದು
ಬಾಲ್ಯದಾಟವನ್ನೇ ಆಡದ ದಿನಾಂಕದ ಮೇಲೆ
ಬೆರಳಿಡುವ ಆಟವಾಡೋಣವೇ??
ಹೊಚ್ಚ ಹೊಸ ಕ್ಯಾಲೆಂಡರ್ ತೆಗೆದು
ಮನಸ್ಸು ಬಿಚ್ಚಿ ನಕ್ಕ ದಿನವ
ಹುಡುಕುವ ಆಟವಾಡೋಣವೇ??
***************************************