ಕಾಫಿಯಾನ ಗಝಲ್
ಜಬೀವುಲ್ಲಾ ಎಂ. ಅಸದ್
ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆ
ಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ
ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋ
ನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ
ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದು
ಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ
ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರು
ಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ
ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನು
ಒಡಲ ಕಾವು ಜೀವದ ಹಾಡಾಗಿ ಕಲ್ಲು ಕರಗುವ ಸಮಯವಾಗಿದೆ
ಚಿಗುರುವ ಲತೆಗೆ ಬಳಸಿ ಹಬ್ಬಲು ಮರವೊಂದು ಅಸರೆ ಬೇಕಿದೆ
ಯಮುನಲೆಗಳ ಮೇಲೆ ನಾವೆಯೊಂದು ತೇಲುವ ಶವವಾಗಿದೆ
ನನ್ನ ನಿನ್ನ ನಡುವಿನ ಮೌನ ಅಲಾಪಗೊಂಡು ಕಡಲಾಗಿ ಮೊರೆಯುತ್ತಿದೆ
ಅಸದ್ ಹೆಪ್ಪುಗಟ್ಟಿದ ನೋವು ತಾಜ್ ಮಹಾಲಿನ ದಟ್ಟ ನೆರಳಾಗಿದೆ
ಚೆಂದ ಭಾವ