ಬೇಲಿಯೊಳಗಿನ ಬೆಳೆ –

ಪುಸ್ತಕ ಸಂಗಾತಿ

ಬೇಲಿಯೊಳಗಿನ ಬೆಳೆ

ಒಂದು ಅವಲೋಕನ

ಬೇಲಿಯೊಳಗಿನ ಬೆಳೆ –

ಪ್ರಬಂಧ ಸಂಕಲನ – ಡಾ. ಕೆ.ಚಿನ್ನಪ್ಪ ಗೌಡ –

ಮದಿಪು ಪ್ರಕಾಶನ, ಮಂಗಳೂರು:

೨೦೨೦

ಪುಟ ೧೦೪,

ಬೆಲೆ  ೯೦ ರೂ. 

ಇದೊಂದು ‘ವಿಶಿಷ್ಟ’ ಸಪ್ತ ಪ್ರಬಂಧಗಳ ಸರಮಾಲೆ. ಯಾಕೆ ‘ವಿಶಿಷ್ಟ’ ಎಂದರೆ ಇಲ್ಲಿಯ ಏಳೂ ಲೇಖನಗಳು ‘ಪ್ರಬಂಧ’ ಎಂಬ ಒಂದೇ ಪ್ರಭೇದ ಸೂತ್ರಕ್ಕೆ ಒಳಪಡುವುದಿಲ್ಲ! ಇದನ್ನು ‘ಹರಟೆ’ ಎಂದು ಲೇಖಕರು ಕರೆದರೂ ಅದು ಹಳ್ಳಿ ಪಂಚಾಯ್ತಿಕಟ್ಟೆಯ ಸಮಯ ಕೊಲ್ಲುವ ಜಡಭರತರ ಹಾಳು ಹರಟೆಯಾಗದೆ ಓದುಗರ ಮನತಟ್ಟುವ, ಮುಟ್ಟುವ ಕಥನಗಳಾಗಿ ವಿಕಾಸಗೊಂಡಿದೆ. ಲೇಖಕರೇ ಹೇಳಿಕೊಳ್ಳುವಂತೆ “ಕೂಡೂರಿನ ನನ್ನ ಮನೆ ಮತ್ತು ವಿಟ್ಲದ ಆಸುಪಾಸಿನ ಜನರ ಬದುಕಿನ ಕೆಲವು ಸಾಂಸ್ಕೃತಿಕ ವಿವರಗಳನ್ನು ಈ ಬರಹಗಳಲ್ಲಿ ಸೃಜನಶೀಲವಾಗಿ ಸಂಘಟಿಸಿದ್ದೇನೆ…ನನ್ನ ಮನಸ್ಸಿನಲ್ಲಿ ಲುಪ್ತವಾಗದೆ ಸುಪ್ತವಾಗಿ ಅವಿತಿದ್ದ, ಆಗೊಮ್ಮೆ ಈಗೊಮ್ಮೆ ಜಿಗಿಯುತ್ತಿದ್ದ ನೆನಪುಗಳನ್ನು ಬಳಸಿ ಈ ಪ್ರಬಂಧಗಳನ್ನು ಕಟ್ಟಿದ್ದೇನೆ. ಈ ನೆನಪುಗಳು ನನಗೆ ಅಮೂಲ್ಯ…ನನ್ನ ಅನುಭವಗಳ ಮೇಲೆ ನನಗೆ ಪ್ರೀತಿ ಇದೆ, ವ್ಯಾಮೋಹವಿಲ್ಲ. ಹಿಂದಿನ ದಿನಗಳನ್ನು ವೈಭವೀಕರಿಸುವ ಉದ್ದೇಶ ನನಗಿಲ್ಲ.”

ಲೇಖಕರಿಗಿರುವ ಈ ಎಚ್ಚರ ಇಲ್ಲಿನ ಪ್ರಬಂಧಗಳನ್ನು ನಾಸ್ಟಾಲ್ಜಿಕ್ ಆಗದಂತೆ, ಅಂದರೆ ವೃಥಾ ಗತಕಾಲಕ್ಕೆ ಹಂಬಲಿಸುವ ಗೀಳು ಆಗದಂತೆ ಕಾಪಾಡಿದೆ. ನಾನೂ ಇದೇ ಪರಿಸರದಲ್ಲಿ ಹುಟ್ಟಿ ಬೆಳೆದವನಾದುದರಿಂದ, ಲೇಖಕರ ಕೂಡೂರು ನನಗೂ ಆಪ್ತವಾದುದರಿಂದ, ಇದೆಲ್ಲದರ ಒಡನಾಟವೂ ನನಗಿದ್ದುದರಿಂದ ಈ ಮಾತನ್ನು ಗಟ್ಟಿಯಾಗಿ ಹೇಳಬಲ್ಲೆ ಯಾಕೆಂದರೆ ಈ ಅನುಭವಗಳಲ್ಲಿ ಹಲವನ್ನು ನಾನೂ ಕಂಡವನೇ!       

ಶೀರ್ಷಿಕೆಯ ‘ಬೇಲಿ’ ಗತಕಾಲದ ನೆನಪುಗಳ ಬೆಳೆಯನ್ನು ಭದ್ರವಾಗಿ ಸಂರಕ್ಷಿಸಿಕೊಂಡು ಬಂದು ಕಟಾವಿಗೆ ಸಿದ್ಧವಾದ ಪಕ್ವತೆ ಸಾಧಿಸಿ ಪಾಕರಸಾಯನವಾಗಿ ನಮ್ಮ ಮುಂದೆ ತನ್ನನ್ನು ತಾನೇ ಅನಾವರಣಗೊಳಿಸಿಕೊಂಡಿದೆ. ಇಲ್ಲಿ ಗತಕಾಲವೆಂದರೆ ಬಾದರಾಯಣರಷ್ಟು ಹಿಂದೋಡದೆ ಕೇವಲ ‘ಸಂದ ಕಾಲ’ವಾಗಿ ಇಂದು-ನಿನ್ನೆಗಳನ್ನೂ ಒಳಗೊಂಡಿದೆ. ನಂಬಿದ ದೈವವೇ ‘ಬೇಲಿ’ಯಾಗಿ ನಂಬಿದವರನ್ನು ‘ಬೇಲಿಯೊಳಗಿನ ಬೆಳೆ’ಯಂತೆ ಪರಿಗಣಿಸಿ ದೈವ ಅಭಯ ನೀಡುವುದನ್ನು ಲೇಖಕರು ಹೀಗೆ ದಾಖಲಿಸುತ್ತಾರೆ: “ಬೇಲಿ ನಾನು. ಬೇಲಿಯೊಳಗಿನ ಬೆಳೆ ನೀವು. ಬಿತ್ತಿದ ಬೀಜ ನುಚ್ಚಾಗದಂತೆ ನೆಟ್ಟ ಸಸಿ ನಲುಗದಂತೆ ಕಂಬಳದ ಪೂಕರೆ ಮಾಲದಂತೆ ಬೋದಿಗೆ ಕಂಬ ಮುರಿಯದಂತೆ ನಂದಾದೀಪ ನಂದದಂತೆ ತೊಟ್ಟಿಲಿನ ಸರಪಳಿ ತುಂಡಾಗದಂತೆ ನಾನು ಸಾವಿರದ ಕಾಲದ ವರೆಗೆ ಕಾಯುತ್ತೇನೆ.” ಇದು ನಂಬಿದವರ ಪಾಲಿಗೆ ಒಂದು ಆಧಾರವಾಗಿ ಅವರ ಬಾಳನ್ನು ರೂಪಿಸಿದೆ ಎಂಬುದು ಸತ್ಯ.    

ಕೊನೆಯ ಪ್ರಬಂಧ “ನೀವೇ ಯೋಚಿಸಿ ನೋಡಿ,’ ಪ್ರಚಲಿತ ಕೊರೊನಾ ಸಂಕಷ್ಟದ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ನಡೆಸಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಮೇಲೆ ಹೇಳುವ ಮಾತುಗಳ ಮಾರ್ಮಿಕತೆ –- ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ (೧೮:೬೩) – ‘ನಾನು ಹೇಳಿದ್ದನ್ನೆಲ್ಲಾ ಚೆನ್ನಾಗಿ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು’ — ಎಂಬುದನ್ನು ಇಲ್ಲಿ ಓದುಗರಿಗೆ ಆರೋಪಿಸಿ ಅವರ ಜವಾಬ್ದಾರಿಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಕನ್ನಡದಲ್ಲಿ ಪ್ರಬಂಧ ಸಾಹಿತ್ಯದ ಹುಟ್ಟು, ಬೆಳವಣಿಗೆ, ಉತ್ಕೃಷ್ಟ ಮಾದರಿಗಳು ಇತ್ಯಾದಿಗಳ ಬಗ್ಗೆ ಇಲ್ಲಿ ಉಲ್ಲೇಖಿಸದೆ ನೇರವಾಗಿ ಪ್ರಬಂಧಗಳೊಂದಿಗೆ ಮುಖಾಮುಖಿಯಾಗುವ ಪ್ರಯತ್ನವಷ್ಟೇ ನನ್ನದು. ಈ ಪ್ರಬಂಧಗಳ ಬಗ್ಗೆ ಲೇಖಕರೇ ಒಂದಿಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. “ಬಹುಶಃ ನಾನು ನನ್ನದೇ ಪ್ರಬಂಧಗಳ ಬಗ್ಗೆ ಬರೆದದ್ದು ಹೆಚ್ಚಾಯಿತೋ ಏನೋ” ಎಂಬ ದಾಕ್ಷಿಣ್ಯವೂ ಅವರನ್ನು ಕಾಡಿದೆ! ‘ತರಂಗ’ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಈ ಸಂಕಲನದ ಮೊದಲ ಪ್ರಬಂಧ ‘ಕಾಗೆ ಕಾಲಿನ ಗೆಜ್ಜೆ’ಯ ಬಗ್ಗೆ ನಾನು ವೈಯಕ್ತಿಕವಾಗಿ ನೇರ ಚಿನ್ನಪ್ಪ ಗೌಡರಿಗೆ ಬರೆದ ಮಾತುಗಳನ್ನು, ಅಂತೆಯೇ ಇತರ ಓದುಗರ ಅಭಿಪ್ರಾಯಗಳನ್ನೂ ಲೇಖಕರು ಈ ಸಂಕಲನದಲ್ಲಿ ಉಲ್ಲೇಖಿಸುತ್ತಾರೆ. ಭೂತಕೋಲದ ಸಂದರ್ಭದಲ್ಲಿ ಭೂತ ಕಟ್ಟುವ ದೈವದ ಪಾತ್ರಿ ನೀಡುವ ಅಭಯ ಜನರು ನಂಬುವ ಭೂತದ್ದೋ, ಪಾತ್ರಿಯದ್ದೋ ಎಂಬ ಸಂದಿಗ್ಧ ಕೆಲವರನ್ನು ಕಾಡಿದೆ ಮತ್ತು ಈ ಕುರಿತು ಅವರು ಲೇಖಕರನ್ನು ಪ್ರಶ್ನಿಸಿಯೂ ಇದ್ದಾರೆ. ಇದಕ್ಕೆ ಭೂತಾರಾಧನೆಯ ಬಗ್ಗೆಯೇ ಕ್ಷೇತ್ರ ಕಾರ್ಯ ನಡೆಸಿ ಡಾಕ್ಟರೇಟ್ ಪದವಿ ಪಡೆದ ಜಾನಪದ ವಿದ್ವಾಂಸರೂ ಆಗಿರುವ ಚಿನ್ನಪ್ಪ ಗೌಡರು ಉತ್ತರಿಸುವುದು ಹೀಗೆ: “ಭೂತ ಇದೆ. ನಾನು ಎಷ್ಟೋ ಭೂತಗಳನ್ನು ನೋಡಿದ್ದೇನೆ. ಅವುಗಳನ್ನು ಕೆಲವರು ದೈವಗಳೆಂದೂ, ಈ ನೆಲದ ಸತ್ಯಗಳೆಂದೂ ಕರೆಯುತ್ತಾರೆ. ಅವುಗಳಿಗೆ ನಿತ್ಯ ಕೈಮುಗಿಯುತ್ತಾರೆ… ಇಷ್ಟೊಂದು ವಿಶ್ವಾಸವಿಟ್ಟು ಕಣ್ಣೆದುರಿನ ಭೂತಕ್ಕೆ ಕೈಮುಗಿಯುವಾಗ ಅದು ಇಲ್ಲ ಎಂದರೆ ಹೇಗೆ? … ಭೂತವನ್ನು ಪ್ರತಿನಿಧಿಸಿ, ಭೂತವೇ ಆಗಿಬಿಡುವ ಒಬ್ಬ ವ್ಯಕ್ತಿಯೇ ಇದ್ದಾನಲ್ಲ…ನೋಡಲು, ಮುಟ್ಟಲು, ಮಾತನಾಡಿಸಲು ಸಾಧ್ಯವಾಗುವ ‘ವ್ಯಕ್ತಿತ್ವ’ವನ್ನು ಅದಿಲ್ಲ, ಅದಲ್ಲ ಎಂದರೆ ಹೇಗೆ? ಹಾಗಾಗಿ ನನ್ನ ಮಟ್ಟಿಗೆ ಭೂತ ಇದೆ. ನಾನು ಆ ಸತ್ಯಗಳನ್ನು ಕಂಡಿದ್ದೇನೆ.” ನನ್ನ ವೈಯಕ್ತಿಕ ನಿಲುವೂ ಇದೇನೇ. ಈ ಕುರಿತು ನಾನು ಹೇಳಿದ್ದು: “ಅಗೋಚರ ಸತ್ಯದ ಸಾಕ್ಷಾತ್ಕಾರ ಭೂತದ ನಡೆಯಲ್ಲಿ, ನೇಮದ ಗುಂಗಿನಲ್ಲಿ ಕ್ಷಣಕಾಲ ವಿಜೃಂಬಿಸುವುದು ಸುಳ್ಳಲ್ಲ. ಸತ್ಯದರ್ಶನದ ವಿಧಿಯೇ ಹಾಗೆ… ಭಾವಕ್ಕೆ ತಿಳಿದರೂ, ಬುದ್ಧಿಗೆ ತರ್ಕಕ್ಕೆ ನಿಲುಕದ ಕಾರಣಿಕ ಅದು. ಒಂದು ಸಮುದಾಯಕ್ಕೆ, ಅದರ ಬದುಕಿಗೆ ಆಧಾರವಾಗಿ ನಿಂತು ಮುನ್ನೆಡೆಸುವ ಶಕ್ತಿ ಅದು. ಇದನ್ನು ಬೆರಗುಗಣ್ಣಿಂದ ನೋಡಿದರೇನೇ ಚೆಂದ… ದೈನಿಕದ ಬದುಕು ನಿಂತಿರುವುದು ನಂಬಿಕೆ, ವಿಶ್ವಾಸ, ಪ್ರೀತಿ, ಭಕ್ತಿ ಇತ್ಯಾದಿ ಸಂವೇದನೆಗಳ ಮೇಲೆ…” ಇಲ್ಲಿ ನಿಜವಾಗಿ ಕೆಲಸಮಾಡುವುದು ಕವಿ ಕೊಲೆರಿಜ್ ಹೇಳುವಂತೆ – willing suspension of disbelief – ಅಪನಂಬಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದರೆ ಮಾತ್ರ ಸತ್ಯ, ಸೌಂದರ್ಯ ದೃಗ್ಗೋಚರವಾಗುತ್ತದೆ. ಅದು ಅರಿವಾಗುವುದು ಅಂತರಂಗದ ಆರ್ದ್ರತೆಯಲ್ಲಿ, ತಲ್ಲೀನತೆಯಲ್ಲಿ ಹಾಗೂ ಭಾವಪರವಶತೆಯಲ್ಲಿ. ತರ್ಕದಿಂದ ಬದುಕನ್ನು ಅಳೆಯಲಾಗದು, ಅಳೆಯಬಾರದು. ಸ್ತ್ರೀರೂಪವನ್ನು ಮಜ್ಜೆ, ಮಾಂಸ, ರಕ್ತಗಳೆಂದು ವಿಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಎಷ್ಟು ಆಭಾಸವಾದೀತು! ನಾಗಚಂದ್ರ ಕವಿ ವರ್ಣಿಸಿದ್ದನ್ನು ಬುದ್ಧಿಯಿಂದಲ್ಲ, ಭಾವದಿಂದ, ರಸೈಕ ದೃಷ್ಟಿಯಿಂದ ಗ್ರಹಿಸಬೇಕು, ಅಲ್ಲವೇ?  

ಸ್ತ್ರೀ ರೂಪಮೆ ರೂಪಂ ಶೃಂ

ಗಾರಮೆ ರಸಮತುಳ ಸುರತ ಗಂಧಮೇ ಗಂಧಂ l

ಸಾರಸ್ಪರ್ಶಂ ಗುರುಕುಚ

ಭಾರಸ್ಪರ್ಶಂಗಳಪ್ರಶಬ್ದಮೇ ಶಬ್ದಂ ll

“ಕಟ್ಟುವುದಾದರೆ ಕಾಗೆ ಕಾಲಿಗೆ ಗೆಜ್ಜೆ ಕಟ್ಟಬೇಕು. ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ಮನೆಹಿತ್ತಿಲು ಸುತ್ತು ಬಂದೀತು. ನಿನ್ನ ಕಾಲಿಗೆ ಗೆಜ್ಜೆ ಕಟ್ಟಿದ್ದೇನೆ. ನಾಲ್ಕು ಊರು ಹಾರಾಡು” ಎಂದು ತಾಯಿ ಉಳ್ಳಾಲ್ತಿ ದೈವ ಲೇಖಕರಿಗೆ ಬೂಳ್ಯ (ಪ್ರಸಾದ) ಕೊಟ್ಟು ಹರಸುವುದು ಒಂದು ರೋಚಕ ಘಟನೆ. ಇದು ವಾಸ್ತವ ಹಾಗೂ ದೈವದ ಮಾಯಕದ ಲೋಕದ ನಡುವಿನ ಸೇತುವಾಗಿ ಚಿನ್ನಪ್ಪ ಗೌಡರ ನಿಜಜೀವನದಲ್ಲೂ ನಡೆದದ್ದು ಕೇವಲ ಕಾಕತಾಳೀಯವಲ್ಲ ಎಂಬುದು ನನ್ನ ದೃಢ ನಂಬಿಕೆ. ಇದರ ವಿವರಗಳಿಗೆ ನೀವು ಪ್ರಬಂಧವನ್ನೇ ಓದಬೇಕು.

‘ಪಾಚಕ್ಕನ ಗಂಡಾಂತರ’ದಲ್ಲಿ ಲೇಖಕರು ‘ಕೆಟ್ಟ ದೃಷ್ಟಿ’ಯ ಬಗ್ಗೆ ಬರೆಯುತ್ತಾರೆ. ಇಲ್ಲಿಯೂ ನಂಬಿಕೆ-ಅಪನಂಬಿಕೆಗಳ ಮಧ್ಯೆ ಒಂದು ತೆಳು ರೇಖೆ ಮಾತ್ರ ಇದೆ. ಮಗುವಿಗೆ ದೃಷ್ಟಿಯಾಗುವುದು, ದೃಷ್ಟಿ ತೆಗೆಯುವುದು ಇತ್ಯಾದಿ ನಮ್ಮ ಸಾಮಾಜಿಕ ಜೀವನದಲ್ಲಿ ಜಾತಿ, ಮತಗಳ ಭೇದವಿಲ್ಲದೆ ಅನೂಚಾನವಾಗಿ ಲಾಗಾಯ್ತಿಂದ ನಡೆದು ಬಂದಿರುವುದು ಸತ್ಯ ತಾನೇ? ಇಲ್ಲಿ ಪಾಚಕ್ಕನ ಕೆಟ್ಟ ದೃಷ್ಟಿಯನ್ನು ಅವಳು ಅನುಭವಿಸಿರಬಹುದಾದ ಸಂಕಟಗಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಚಿನ್ನಪ್ಪ ಗೌಡರು ಗ್ರಹಿಸಿರುವುದು ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿ ಎಂದು ನಾನು ತಿಳಿಯುತ್ತೇನೆ. ಈ ಸಂವೇದನೆಯೇ ಲೇಖಕರ ಬಾಯಿಯಿಂದ ಈ ಮಾತುಗಳನ್ನು ಹೇಳಿಸಿದೆ: “ಪಾಚಕ್ಕನ ಮಾತುಗಳನ್ನು ಕೇಳಿದ ಮೇಲೆ ನನಗೆ ಅವಳು ಕೆಟ್ಟವಳು ಅಂತ ಅನಿಸಲಿಲ್ಲ. ಅವಳ ಮನಸ್ಸನ್ನು ಕೆಡಿಸಿ ಅವಳನ್ನು ಕೆಟ್ಟವಳನ್ನಾಗಿ ಮಾಡಿದ್ದು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿದೆ. ಅವಳ ಒಳದನಿಗೆ ಸಮಾಜ ಕಿವಿಗೊಡಲಿಲ್ಲ. ಲಿಂಗ ತಾರತಮ್ಯ ಅವಳ ಸಂವೇದನೆಯನ್ನು ಕೊಂದಿದೆ. ಜಾತಿ, ಹೆಣ್ಣು, ಬಡತನ ಮೊದಲಾದ ನೆಲೆಗಳ ಸಾಮಾಜಿಕ ಅಸಮಾನತೆಗಳು ಪಾಚಕ್ಕನನ್ನು ತೀವ್ರವಾಗಿ ಕಾಡಿವೆ. ಅವಳದಲ್ಲದ ತಪ್ಪಿಗೆ ಅವಳನ್ನು ಹೊಣೆಗಾರಳನ್ನಾಗಿ ಸಮಾಜ ಮಾಡಿದೆ. ಅವಳ ಸ್ವಾತಂತ್ರ್ಯವನ್ನು ಸಮಾಜ ಕಸಿದಿದೆ. ಅವಳ ಮನಸ್ಸನ್ನು ಕೆಡಿಸಿದ ಕೆಟ್ಟ ಸಮಾಜವನ್ನು ದುರಸ್ತಿಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಅಂತ ನನಗನ್ನಿಸಿದೆ ಪಾಚಕ್ಕನ ಮಾತುಗಳನ್ನು ಕೇಳಿ.” ಇಂತಹ ಒಂದು ಸಮಾಜಶಾಸ್ತ್ರೀಯ ದೃಷ್ಟಿ ಇನ್ನೂ ಅನೇಕ ಪ್ರಚಲಿತವಿರುವ ಸಾಮಾಜಿಕ ಅನಿಷ್ಟಗಳ ನಿವಾರಣೋಪಾಯವಾಗಿ ಇಂದಿನ ತುರ್ತು ಹಾಗೂ ಇಂದಿಗೂ ಪ್ರಸ್ತುತ ಕೂಡಾ ಎಂದು ನನಗೆ ಅನಿಸುತ್ತದೆ.

ಇದಕ್ಕೆ ಪೂರಕವಾಗಿ ಒಂದು ಮಾತು. ನಾನು ಬಾಲ್ಯಕಾಲದಲ್ಲಿ ಕೇಳಿದಂತೆ ವಿಟ್ಲ ಪೇಟೆಯಿಂದ ಅನತಿದೂರದಲ್ಲಿ ‘ಅಪ್ಪೇರಿಪಾದೆ’ ಎಂಬ ಬೃಹತ್ ಶಿಲಾಹಾಸುಬಂಡೆ ಇತ್ತಂತೆ. ಅದಕ್ಕೆ ವಿಶಾಲವಾದ ಬಿಳಿ ಬಟ್ಟೆಯನ್ನು ಮುಚ್ಚಿ, ಪಾಚಕ್ಕನಂತೆ ಬಿರುದೃಷ್ಟಿಗೆ ಹೆಸರುವಾಸಿಯಾದ ಮಹಿಳೆಯೊಬ್ಬರಿಗೆ ತೋರಿಸಿದಾಗ ‘ಬೆಳಗಾಗಿ ಇಷ್ಟು ಹೊತ್ತಾದರೂ ಇವನಿನ್ನೂ ಎದ್ದಿಲ್ಲವೇ?’ ಎಂದು ಕುಚೋದ್ಯದ ಮಾತನಾಡಿದಾಗ ಅವಳ ಬಿರುನುಡಿಗೆ ಇಡೀ ಹಾಸುಬಂಡೆಯೇ ಚಿಟಿ ಚಿಟಿಲೆಂದು ಸಾವಿರ ಹೋಳಾಗಿ ಹೋಯಿತಂತೆ ಎಂಬುದನ್ನು ನಾನು ಕೇಳಿ ಬಲ್ಲೆ! ಇದು ಸತ್ಯವೋ ಸುಳ್ಳೋ ಎನ್ನುವುದಕ್ಕಿಂತಲೂ ಅಂತಹ ಒಂದು ಸಾಧ್ಯತೆಯನ್ನು ಗುರುತಿಸಿದ ಜನಮಾನಸಕ್ಕೆ ‘ಕಲ್ಪನಾ ದಾರಿದ್ರ್ಯ’ ಎಂದೂ ಬಾರದು ಎಂಬುದಷ್ಟೇ ಮುಖ್ಯ ಎಂದು ನನಗನಿಸುತ್ತದೆ. ಸೃಜನಶೀಲ ಮನಸ್ಸು ಕಲ್ಪನೆ-ವಾಸ್ತವಗಳ ನಡುವಿನ ವ್ಯಾವಹಾರಿಕ ರೇಖೆಯನ್ನು ನಿರಾಕರಿಸುತ್ತದೆ, ಅಥವಾ ನಿವಾರಿಸುತ್ತದೆ ಎಂದರೆ ಹೆಚ್ಚು ಸಮಂಜಸವಾಗಬಹುದೇನೋ! ‘ಪಾಚಕ್ಕನ ಗಂಡಾಂತರ’ ಈ ಮಾತಿಗೆ ಪುರಾವೆ ಇದ್ದಂತಿದೆ.

‘ಕಳೆಂಜಿಮಲೆ’ ವಿಟ್ಲದ ಸರಹದ್ದಿನ ಕಾಡು. ಇದು ವಿಟ್ಲವಾಸಿಗಳ ಭಾವಕೋಶದ ಒಂದು ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ನಾನೂ ಚಿಕ್ಕವನಾಗಿದ್ದಾಗ ಗೆಳೆಯರೊಂದಿಗೆ ಕಳೆಂಜಿಮಲೆಗೆ ಲಗ್ಗೆ ಇಟ್ಟವನೇ! ಅಲ್ಲಿಯ ಕಾಟು ಮಾವಿನ ಮರದ ಹಣ್ಣುಗಳನ್ನು, ಬೆಟ್ಟದ ನೆಲ್ಲಿಕಾಯಿ, ಪುನರ್ಪುಳಿ, ನೇರಳೆ, ಕುಂಟಲ ಹಣ್ಣುಗಳನ್ನು ಧಾರಾಳವಾಗಿ ತಿಂದವನೇ!! ಅಲ್ಲಿಯ ಬಕಾಸುರನ ಗುಹೆ, ನೆತ್ತರಕೆರೆ, ವಿಟ್ಲವೇ ಮಹಾಭಾರತದ ‘ಏಕಚಕ್ರ ನಗರ’ ಎಂಬ ನಂಬಿಕೆ ಇತ್ಯಾದಿಗಳಲ್ಲಿ “ಪುರಾಣ ಕಾವ್ಯಗಳು ಸ್ಥಳೀಯವಾಗುವ – ಥಿಯರಿ ಆಫ್ ಲೋಕಲೈಸೇಷನ್”ನ ಅದ್ಭುತವನ್ನು ಕಂಡವನೇ. ಚಿನ್ನಪ್ಪ ಗೌಡರು ಇವೆಲ್ಲವನ್ನೂ ಮನಮುಟ್ಟುವಂತೆ, ಅತಿರಂಜಕತೆಯ, ಅತಿಭಾವುಕತೆಯ ಅಪಾಯದ ಸೆಳೆತವನ್ನು ಮೀರಿ ವರ್ಣಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಡು ಮತ್ತು ಮನುಷ್ಯ ಸಮಾಜದ ನಡುವಿನ ಅವಿನಾಭಾವದ ನೆಂಟಿನ ಗಂಟನ್ನು ಸುಕ್ಕುಗಟ್ಟದಂತೆ ಬಿಡಿಸಲು ಚಿನ್ನಪ್ಪ ಗೌಡರು ಶಕ್ತರಾಗಿದ್ದಾರೆ. ಕಳೆಂಜಿಮಲೆ ಒಂದು ರಕ್ಷಿತಾರಣ್ಯ. ಇಲ್ಲಿ ಹೆಚ್ಚಾಗಿ ಹೆಂಗಸರು ಒಣಸೌದೆ ಆರಿಸಿ ಗಂಟು ಕಟ್ಟಿ ತಲೆಯ ಮೇಲೆ ಹೊತ್ತು ತಂದು ಮಾರಾಟ ಮಾಡುವುದೋ, ಸ್ವಂತಕ್ಕೆ ಬಳಸುವುದೋ ಸದಾ ನಡೆದೇ ಇತ್ತು. ಅಂತೆಯೇ ಕರ್ನಾಟಕದಿಂದ ಸಮೀಪದ ಕೇರಳಕ್ಕೆ ಅಕ್ಕಿ ಸಾಗಾಟ ನಿರ್ಬಂಧ ಇದ್ದ ಕಾಲದಲ್ಲಿ ಹಲವು ಸಾಹಸಿಗರು ರಾತ್ರಿ ಕಳೆಂಜಿಮಲೆ ದಾರಿಯಾಗಿ ಕೇರಳಕ್ಕೆ ಅಕ್ಕಿ ಸಾಗಾಟ ಮಾಡಿ ದುಡ್ಡು ಮಾಡಿದ್ದೂ, ಕಾನೂನುಪಾಲಕರೊಂದಿಗೆ ಎಗರಾಡಿದ್ದೂ  ಗೊತ್ತು. ಇದೆಲ್ಲಾ ನನ್ನ ಬಾಲ್ಯಕಾಲದ ನೆನಪುಗಳಲ್ಲಿ ಹುದುಗಿವೆ. ಕಳೆಂಜಿಮಲೆ ಒಂದು ರೀತಿಯಲ್ಲಿ ನಿಗೂಢವೂ ಆಗಿ ಜನಜೀವನಕ್ಕೆ ಸಹಾಯಕವಾಗಿಯೂ ಒದಗಿದ ಕಾಲವೊಂದಿತ್ತು. “ಈ ಕಳೆಂಜಿಮಲೆಯ ಒಡಲಲ್ಲಿ ಏನಿದೆ, ಏನಿಲ್ಲ ಎಂಬುದು ಸರಿಯಾಗಿ  ಯಾರಿಗೂ ಗೊತ್ತಿಲ್ಲ. ನಮ್ಮ ಊರಿನ ಸಂಸ್ಕೃತಿ ಮತ್ತು ಈ ಕಾಡಿನ ಪ್ರಕೃತಿಯ ನಡುವೆ ಸಂಘರ್ಷ ಮತ್ತು ಸಮನ್ವಯ ನಡೆಯುತ್ತಾ ಬಂದಿರುವುದಂತೂ ನಿಜ” ಎಂದು ಚಿನ್ನಪ್ಪ ಗೌಡರು ಗುರುತಿಸುತ್ತಾರೆ. ಇಂತಹ ಕಳೆಂಜಿಮಲೆಗೆ ಈಗ ಬಂದಿರುವ ದುಸ್ಥಿತಿಯನ್ನು ಲೇಖಕರು ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ಅವರೊಂದಿಗೆ ಓದುಗರೂ ವಿಷಾದಯೋಗಕ್ಕೆ ಜಾರುತ್ತಾರೆ: “ರಕ್ಷಿತಾರಣ್ಯವಾಗಿದ್ದ ಈ ಕಳೆಂಜಿಮಲೆ ಈಗ ರಕ್ಷಣೆಯಿಲ್ಲದೆ ಬಳಲುತ್ತಿದೆ. ಪಶ್ಚಿಮ ಘಟ್ಟವೇ ಸೂರೆಹೋಗಿರುವಾಗ ಈ ಪುಟ್ಟ ಕಳೆಂಜಿಮಲೆ ಏನು ತಾನೇ ಮಾಡಲು ಸಾಧ್ಯ. ಬಕಾಸುರನ ಗುಹೆಯ ಬದಿಯಿಂದಲೇ ಜನರು ರಾಜಾರೋಷವಾಗಿ ಈಗ ಓಡಾಡುತ್ತಿದ್ದಾರೆ… ಇಂದಿನ ದಿನಗಳಲ್ಲಿ ಈ ಸೀಮೆಯ ಜನರು ಕಳೆಂಜಿಮಲೆ ಕಳೆದುಹೋಗುತ್ತಿರುವುದಕ್ಕೆ ಪರಿತಪಿಸುತ್ತಿದ್ದಾರೆ. ಗದ್ದೆ ಬೇಸಾಯವನ್ನು ಪೊರೆಯುತ್ತಾ ಬಂದ ಈ ಕಾಡು ತನ್ನ ಮಾಂತ್ರಿಕ ಶಕ್ತಿಯನ್ನು ಕಳೆದುಕೊಂಡಿದೆ.” ಇದು ಕೇವಲ ಕಳೆಂಜಿಮಲೆಯ ದುರಂತವಲ್ಲ. ಇಂತಹ ಅನೇಕ ದುರಂತಗಳ ಸಾಕ್ಷೀಪ್ರಜ್ಞೆಯಾಗಿ, ಒಂದು ರೂಪಕವಾಗಿ ಈ ಕಳೆಂಜಿಮಲೆ ನಮ್ಮನ್ನು ಕಾಡುತ್ತದೆ. ಬದುಕಿನ ಚಕ್ರದ ನಿರಂತರ ಉರುಳುವಿಕೆಯಲ್ಲಿ ಕಳೆದದ್ದೇನು, ಉಳಿದದ್ದೇನು ಎಂಬ ಲೆಕ್ಕಾಚಾರ ಮಾಡಲು ಇದು ಸಕಾಲ ಎಂಬುದನ್ನು ಬೋಳು ಬೋಳಾಗಿರುವ ಕಳೆಂಜಿಮಲೆ ನೆನಪಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.

‘ಒಕ್ಕಲು ಬಲಿ’ ಜಮೀನ್ದಾರಿ ಪದ್ಧತಿಯ ಕ್ರೌರ್ಯವನ್ನು ಹೇಳುತ್ತದೆ. ಒಕ್ಕಲು ಎಂದರೆ ಧಣಿಗಳ ಭೂಮಿಯನ್ನು ಗೇಣಿಗೆ ಪಡೆದು, ನೆಲವನ್ನು ಒಕ್ಕಿ ಕೃಷಿ ಕಾಯಕದಲ್ಲಿ ಬೆವರು ಸುರಿಸಿ ದುಡಿಯುವ, ಜೊತೆಗೆ ಧಣಿಗಳು ಕರೆದಾಗಲೆಲ್ಲಾ ಆವರ ಅನುಕೂಲಕ್ಕೂ ಒದಗಿಬರುವ ಅನಿವಾರ್ಯತೆಯುಳ್ಳ ಶ್ರಮಜೀವಿಗಳ ಒಂದು ಕುಟುಂಬ. ಇವರ ಬದುಕು ಧಣಿಗಳ ಔದಾರ್ಯದ ಮೇಲೆ ಅವಲಂಬಿತವಾಗಿ, ಅವರ ಮನೋಧರ್ಮಕ್ಕನುಗುಣವಾಗಿ, ಅವರಿಗೆ ಅಧೀನವಾಗಿ ಸಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ಸನ್ನಿವೇಶ ಒದಗಿದರೆ ತಾನು ಬೆವರು ಸುರಿಸಿದ ನೆಲ, ವಾಸ್ತವ್ಯದ ಮನೆಯನ್ನು ತೊರೆದು ಗಂಟುಮೂಟೆ ಕಟ್ಟಿ ಇನ್ನೊಂದು ಆಶ್ರಯವನ್ನು ಹುಡುಕಿ ನಡೆಯಬೇಕು. ಬೇರು ಕಿತ್ತ ಸಸಿಯಂತೆ ಮಾನಸಿಕವಾಗಿ ಕುಗ್ಗಿ ಹೊಸತೊಂದು ನೆಲದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ತಯಾರಿಲ್ಲವಾದರೆ ಧಣಿಗಳ ಬಂಟರ ಹಿಂಸೆ, ಬಲಾತ್ಕಾರದ ಒಕ್ಕಲೆಬ್ಬಿಸುವಿಕೆಯ ದಬ್ಬಾಳಿಕೆಗೆ ಬಲಿಯಾಗಬೇಕು. “ದೈವ ದೇವರುಗಳ ಪ್ರೀತ್ಯರ್ಥವಾಗಿ ಬಲಿ ಕೊಡುವ ಪದ್ಧತಿ ಬಹಳ ಹಿಂದಿನ ಕಾಲದಿಂದಲೂ ನಮ್ಮಲ್ಲಿ ನಡೆದುಬಂದಿದೆ. ಪ್ರಾಣ ತೆಗೆಯುವ ಬಲಿ ಪದ್ಧತಿಗೆ ಈಗ ನಿಷೇಧವಿದೆ. ಆದರೆ ತಲೆ ಕಡಿಯದೆ ಪ್ರಾಣ ಹಿಂಡುವ ಒಂದು ಕಾಲದಲ್ಲಿ ನಡೆಯುತ್ತಿದ್ದ ‘ಒಕ್ಕಲು ಬಲಿ’ಯ ಬಗ್ಗೆ ತಿಳಿಸುವ ಬಯಕೆ ನನ್ನದು” ಎಂದು ಲೇಖಕರು ಹೇಳಿಕೊಳ್ಳುತ್ತಾರೆ. ಪುಣ್ಯವಶಾತ್ ಇಂದಿಗೆ ಈ ಒಕ್ಕಲು ಬಲಿ ಪದ್ಧತಿ ಇಲ್ಲವಾದರೂ, ಇದರ ರೂಪಾಂತರಗೊಂಡ ದಬ್ಬಾಳಿಕೆ, ದುರ್ಬಲರ ಶೋಷಣೆಯ ಪ್ರವೃತ್ತಿ ಇಂದಿಗೂ ನಡೆಯುತ್ತಿದೆಯಲ್ಲವೇ? ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಅಭಿವೃದ್ಧಿಯ ಹೆಸರಿನಲ್ಲಿ – ಬೃಹತ್ ಕೈಗಾರಿಕೆಗಳ ಸ್ಥಾಪನೆ, ಅಣೆಕಟ್ಟುಗಳ ನಿರ್ಮಾಣ ಇತ್ಯಾದಿಗಳ ಸಂದರ್ಭದಲ್ಲಿ ನಡೆಯುವ ಜನರ ‘ಸ್ಥಳಾಂತರದ ಪ್ರಕ್ರಿಯೆ’ ಎಂಬುದನ್ನು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ: “ಅಭಿವೃದ್ಧಿಯ ಹೆಸರಿನಲ್ಲಿ ಮಂಡಿಸಲಾಗುವ ಯೋಜನೆಗಳ ಲಾಭ ನಷ್ಟಗಳ ಲೆಕ್ಕ ಹಾಕುವಾಗ ಮೇಲ್ನೋಟಕ್ಕೆ ಕಾಣುವ ಲಾಭಗಳನ್ನು ಅತಿಶಯಗೊಳಿಸಲಾಗುತ್ತದೆ. ನಷ್ಟಗಳ ಬಗ್ಗೆ ತಪ್ಪು ಮತ್ತು ಸುಳ್ಳು ಲೆಕ್ಕಾಚಾರವಿರುತ್ತದೆ. ಕಾಡು ಮುಳುಗುತ್ತದೆ ಎಂದು ಹೇಳುವಾಗ ಕಾಡಿನೊಳಗಿನ ಪ್ರಾಣಿ ಪಕ್ಷಿ ಸಸ್ಯ ಸಂಕುಲ ಕ್ರಿಮಿ ಕೀಟಗಳ ಜೀವಗಳಿಗೆ ಯಾವುದೇ ಬೆಲೆ ಕಟ್ಟುವುದಿಲ್ಲ, ಕಟ್ಟಲಾಗುವುದಿಲ್ಲ. ಮನೆ ಜಾಗ ಖಾಲಿ ಮಾಡಿ, ನಿಮಗೆ ಪರಿಹಾರ ನೀಡಲಾಗುತ್ತದೆ ಎಂದು ಸರಕಾರ ಸಲೀಸಾಗಿ ಹೇಳಿಬಿಡುತ್ತದೆ… ಮನೆ ಬಿಟ್ಟು ಒಕ್ಕಲು ಹೋಗಬೇಕಾದ ಕುಟುಂಬಗಳ ಮಾನಸಿಕ ಸ್ಥಿತಿ ಮತ್ತು ಯಾತನೆಯನ್ನು ಪರಿಹಾರದ ಮೊತ್ತ ಅಳೆದು ಶಮನಗೊಳಿಸಬಲ್ಲುದೆ?…ಮನೆಮಾರು ಕಳೆದುಕೊಳ್ಳುವಾಗ ಮತ್ತು ಒಕ್ಕಲು ಹೋಗುವಾಗ ಅಲ್ಲಿ ನಡೆಯುವುದು ಕೇವಲ ಸ್ಥಳಾಂತರವಲ್ಲ. ಬಹಳ ಕಾಲವನ್ನು ತೆಗೆದುಕೊಂಡು ಕಟ್ಟಿದ ಒಂದು ಬದುಕನ್ನು ಕಳೆದುಕೊಳ್ಳಬೇಕಾಗುತ್ತದೆ. ಉದ್ದಕ್ಕೂ ಉಸಿರಾಡಿದ ಪರಿಸರದ ಸಂಬಂಧವನ್ನು ಮುರಿದುಕೊಳ್ಳಬೇಕಾಗುತ್ತದೆ. ಹೃದಯಕ್ಕೆ ಹತ್ತಿರವಾದ ನೆಲದ ನೆಂಟನ್ನು ಕಿತ್ತೆಸೆಯಬೇಕಾಗುತ್ತದೆ. ಸ್ಥಳೀಯ ಸಂಸ್ಕೃತಿಯ ಬೇರುಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಸುತ್ತಲಿನ ಜೊತೆ ವ್ಯವಹರಿಸಲು ಬಳಸುತ್ತಾ ಬಂದ ಭಾಷೆಯನ್ನು ಮರೆಯಬೇಕಾಗುತ್ತದೆ. ಪರಿಚಿತ ಪ್ರಾಣಿ ಮತ್ತು ಸಸ್ಯವರ್ಗಗಳ ಪ್ರಪಂಚವನ್ನು ದೂರಮಾಡಬೇಕಾಗುತ್ತದೆ. ಕಳೆದುಕೊಳ್ಳುವುದು ಕಣ್ಣಿಗೆ ಕಾಣುವ ಭೌತಿಕ ವಸ್ತುಗಳನ್ನಷ್ಟೇ ಅಲ್ಲ. ಸಂಬಂಧಗಳನ್ನು, ಭಾವನೆಗಳನ್ನು, ಸಂವೇದನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ…ಮಾರ್ಕೆಟ್ ವಾಲ್ಯೂ ಅಥವಾ ಅದಕ್ಕಿಂತ ಎರಡುಪಟ್ಟು ಪರಿಹಾರ ನೀಡಲಾಗಿದೆ ಎಂದು ಹೇಳಿ ಅದೇನೋ ಮಹಾಕಾರ್ಯ ಮಾಡಿದ್ದೇವೆ ಎಂದು ಉಬ್ಬಬೇಕಾಗಿಲ್ಲ. ಹಲವು ಪಟ್ಟು ಹೆಚ್ಚು ಕೊಟ್ಟರೂ ಅದು ಕಡಿಮೆಯೇ. ಬಲ್ಲವನೇ ಬಲ್ಲ ಹಾಗಲಕಾಯಿ ಕಹಿಯನ್ನು, ಕಾಸರಕನದ ವಿಷವನ್ನು!”

ನಾವೆಲ್ಲಾ ಒಂದಲ್ಲ ಒಂದು ವಿಧದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು, ವಿದ್ಯಾಭ್ಯಾಸ ಹಾಗೂ ನೌಕರಿಗಾಗಿ ಈ ‘ವಲಸೆ, ಸ್ಥಳಾಂತರ’ವನ್ನು ಅನಿವಾರ್ಯವಾಗಿ ಅನುಭವಿಸಿದವರೇ. ಈ ನೋವನ್ನು ಮಾನಸಿಕವಾಗಿಯಾದರೂ  ಕಂಡುಂಡುವರೇ. ಈ ಹಿನ್ನೆಲೆಯಲ್ಲಿ ಚಿನ್ನಪ್ಪ ಗೌಡರು ಆಡುವ ಮಾತುಗಳು ನೇರವಾಗಿ ನಮ್ಮ ಹೃದಯಕ್ಕೆ ನಾಟುವಂತಿವೆ. ಹೀಗೆ ಯಾವುದೋ ಒಂದು ಕಾಲಘಟ್ಟದಲ್ಲಿ ನಡೆದ ನಿರ್ದಿಷ್ಟ ಸಾಮಾಜಿಕ ಘಟನೆ ಒಂದು ಸಾರ್ವತ್ರಿಕ ರೂಪಕವಾಗಿ ಒದಗುವ ಈ ಪ್ರಕ್ರಿಯೆ ಬದುಕಿನ ಒಂದು ಸೋಜಿಗವೂ ಹೌದು, ದುರಂತವೂ ಹೌದು. ಇದನ್ನು ತಮ್ಮ ಪ್ರಬಂಧಗಳ ಮೂಲಕ ಸಾಧಿಸಿ ತೋರಿಸುವಲ್ಲಿ ಚಿನ್ನಪ್ಪ ಗೌಡರು ನಿಜಕ್ಕೂ ಯಶಸ್ವಿಯಾಗಿದ್ದಾರೆ. ಈ ಪ್ರಬಂಧದ ಅಂತರಾಳ ಧ್ವನಿಸುವುದು ಇದನ್ನೇ. ಅಂದರೆ ಕ್ರೌರ್ಯ ಮಾನವನ ಮೂಲಭೂತ ಗುಣ, ಹಿಂಸೆ ಅದರ ಲಕ್ಷಣ.  ವ್ಯಕ್ತಿ ತಾನು ಪಡೆದ ಸಂಸ್ಕಾರದಿಂದ ಈ ಗುಣವನ್ನು ಮೆಟ್ಟಿ ನಿಲ್ಲಬೇಕು ಅಷ್ಟೇ. ಇದನ್ನು ಸಾಧಿಸಲು ಅಸಮರ್ಥರಾದವರೆಲ್ಲರೂ ರಾಕ್ಷಸರೇ ಸರಿ! ರೂಕ್ಷತೆ ತೊಲಗಬೇಕು ಎಂದರೆ ವ್ಯಕ್ತಿ ಸಂವೇದನಾಶೀಲನಾಗಬೇಕು, ಮಾನವೀಯತೆಯ ಸೆಲೆ ವ್ಯಕ್ತಿಯ ಅಂತರಾಳದಲ್ಲಿ ಪಡಿಮೂಡಬೇಕು. ಈ ಆಶಯ ಉದಾತ್ತವಾದುದು, ಮತ್ತು ಬದುಕನ್ನು ಸಹ್ಯಗೊಳಿಸುವ ಸಾಮರ್ಥ್ಯವುಳ್ಳದ್ದು ಎಂಬುದರಿಂದ ಮಹತ್ವದ್ದಾಗುತ್ತದೆ. ತಮ್ಮ ಕನ್ನಡದ ಬರೆಹದಲ್ಲಿ ತುಳು ಶಬ್ದ ಹಾಗೂ ಗಾದೆಗಳನ್ನೂ ಚಿನ್ನಪ್ಪ ಗೌಡರು ಬಳಸಿಕೊಳ್ಳುವುದು ತನ್ನ ಅನನ್ಯ ಅಸ್ಮಿತೆಯನ್ನು ದಾಖಲಿಸುವ ಪ್ರಕ್ರಿಯೆಯ ಒಂದು ವಿಧಾನವೆಂದೇ ನಾನು ಗ್ರಹಿಸುತ್ತೇನೆ.

‘ಕಟ್ಟೆ ನೇಮದ ಕಟ್ಟು ಕಟ್ಟಳೆ’ಯಲ್ಲಿ ಲೇಖಕರು ತಾನು ವಾಸಿಸುತ್ತಿದ್ದ ಕೂಡೂರಿನ ಮುದಿ ಮಾವಿನ ಮರದ ಕಟ್ಟೆಯ ಕುರಿತು ಹೀಗೆ ಹೇಳುತ್ತಾರೆ: “ಕೂಡೂರಿನಲ್ಲಿ ಒಂದು ಕಟ್ಟೆ ಇದೆ. ಹಳೆಯ ಮುದಿ ಮಾವಿನಮರದ ಬುಡದ ಸುತ್ತ ಇರುವ ಕಟ್ಟೆ. ಇದನ್ನು ಯಾರು ಯಾವಾಗ ಕಟ್ಟಿದರು ಎಂಬ ಬಗ್ಗೆ ಯಾವುದೇ ಚರ್ಚೆ ನಡೆದದ್ದನ್ನು ನಾನು ಕೇಳಿಲ್ಲ. ಈ ಮಾವಿನಮರಕ್ಕೆ ಮಾತ್ರ ನೂರೈವತ್ತು ವರ್ಷ ತುಂಬಿರಬಹುದು…ಕೂಡೂರಿನ ಈ ಮಾವಿನ ಮರಕ್ಕೆ ಕಟ್ಟೆ ಕಟ್ಟಿದ್ದರಾದರೂ ಅದಕ್ಕೆ ನೀರೆರೆದವರಿಲ್ಲ. ಆದರೂ ಈ ಮರ ಊರಿನ ಜನರನ್ನು ಕಾಯುತ್ತಾ ಬಂದಿದೆ. ಬಿಸಿಲಿನಿಂದ ದಣಿದವರನ್ನು ಕಾದಿದೆ. ಭೂತಗಳ ನೇಮದ ಸಮಯದಲ್ಲಿ ಈ ಮರ ಬಿಡಿಸಿದ ದೊಡ್ಡ ಹಸಿರ್ಗೊಡೆಯಂತೆ ಕಾಣುತ್ತದೆ. ದೈವಗಳ ನೇಮವನ್ನು, ನೇಮ ನಡೆಯುವ ಕಟ್ಟೆಯನ್ನು, ಊರಿನ ಜನರನ್ನು ಕಾಯುವ ಈ ಮರ ಕೂಡೂರಿನ ಭೀಷ್ಮ! ಇಚ್ಚಾಮರಣಿ!”

ಹೀಗೆ ಒಂದು ಮರ ಒಂದು ಊರಿನ ಜನರನ್ನು ಭೀಷ್ಮ ಕುರುಸಿಂಹಾಸನವನ್ನು ರಕ್ಷಿಸಿದೋಪಾದಿಯಲ್ಲಿ ಕಾಪಾಡುತ್ತದೆ ಎಂದಾದರೆ ಇಂದು ನಾವು ಅಂತಹ ಮರಗಳನ್ನೇ ಅಭಿವೃದ್ಧಿ ಹೆಸರಿನಲ್ಲಿ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕುತ್ತಿದ್ದೇವೆ ಎಂಬುದು ನಮ್ಮ ರೂಕ್ಷತೆಯಲ್ಲದೆ ಮತ್ತೇನು? ಬದುಕಿನ ಸಮಗ್ರತೆಯ ಅರಿವೇ ಇಲ್ಲದಂತೆ ನಾವು ಇಂದು ವರ್ತಿಸುತ್ತಿದ್ದೇವೆ. ಸಮಷ್ಟಿಯ ಕಲ್ಪನೆಯೇ ಕಮರಿಹೋಗುತ್ತಿದೆ. ‘ನಾನು, ನನ್ನದು’ ಎಂಬಷ್ಟಕ್ಕೇ ಬದುಕು ಸೀಮಿತವಾದಾಗ  ‘ನಾವು’ ಎಂಬ ಸಮಷ್ಟಿ ಪ್ರಜ್ಞೆ ಸತ್ತುಹೋಗುತ್ತದೆ.

ನಮ್ಮ ಹಳ್ಳಿಯ ಚಿತ್ರಣ ‘ಕೋರಿ ಕಟ್ಟ’ ಅರ್ಥಾತ್ ‘ಕೋಳಿ ಅಂಕ = ಕುಕ್ಕುಟ ಕಾಳಗ’ ಪ್ರಸಂಗದ ವಿನಾ ಪೂರ್ಣವಾದೀತೇ? ಎಂದಿಗೂ ಇಲ್ಲ! “ಕೂಡೂರು ಕಟ್ಟೆ ಮತ್ತು ಈ ಕಟ್ಟೆ ನೇಮದಲ್ಲಿ ನಡೆಯುತ್ತಿದ್ದ ಕೋಳಿಅಂಕದಲ್ಲಿ ನಮ್ಮೂರಿನ ಜನರು ಎಷ್ಟು   ಕೋಳಿಗಳ ರಕ್ತ ಈ ನೆಲಕ್ಕೆ ಚೆಲ್ಲಿದ್ದಾರೋ ದೈವಗಳಿಗೇ ಗೊತ್ತು…ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಸೇನಾಪತಿ ಸೇನಾಪತಿಯ ಎದುರು, ಖಡ್ಗಧಾರಿ ಖಡ್ಗಧಾರಿಯ ಎದುರು, ಮಹಾರಥಿ ಮಹಾರಥಿಯ ಎದುರು, ಸೈನಿಕರು ಸೈನಿಕರ ಎದುರು ಹೋರಾಟ ಮಾಡಬೇಕೆಂಬ ನಿಯಮ ಇರುವಂತೆ ಕೋಳಿ ಯುದ್ಧದಲ್ಲೂ ನಿಯಮಗಳಿವೆ (ಇದು ನೀಚೋಪಮೆಯೆಂದು ಯಾರೂ ಭಾವಿಸಬಾರದು. ಇದೇನಿದು ಯಃಕಶ್ಚಿತ್ ಎಂದು ‘ಮೇಲ್ವರ್ಗದವರು’ ಭಾವಿಸಬಹುದಾದ ‘ಕೋಳಿ ಅಂಕ’ವೂ ಜನಪದರ ಬಾಳಿಗೆ ಕುರುಕ್ಷೇತ್ರ ಯುದ್ಧದಷ್ಟೇ ಗಂಭೀರವಾದ ಒಂದು ಪ್ರಸಂಗ ಎಂಬುದನ್ನು ನೆನಪಿಸುವುದಷ್ಟೇ ಲೇಖಕರ ಉದ್ದೇಶ ಎಂದು ನಾನು ಭಾವಿಸಿದ್ದೇನೆ). ಈ ನಿಯಮಗಳನ್ನು ಮೀರಿದರೆ ಕೋಳಿಗಳನ್ನು ಬಿಟ್ಟು ಅವುಗಳನ್ನು ಬೆಂಬಲಿಸುವವರ ತಂಡದವರು ಕಾದಾಡಿದ ಪ್ರಸಂಗಗಳಿವೆ. ಕೂಡೂರು ಕಟ್ಟದಲ್ಲಿ ಅಂತಹ ಮೋಸ, ದುರ್ಘಟನೆ ನಡೆಯದಂತೆ ದೈವಗಳು ನೋಡಿಕೊಂಡಿವೆ. ಮಾವಿನ ಮರ ಕಣ್ಗಾವಲಿಟ್ಟಿದೆ! ಪ್ರತೀ ಬಾರಿ ಕಟ್ಟೆ ನೇಮದ ಕಟ್ಟದಲ್ಲಿ ನನ್ನ ‘ಬಂಟ’ ಕೋಳಿ ವಿಜಯಶಾಲಿಯಾಗುತ್ತಿತ್ತು. ಬಹುಶಃ ಹಲವು ವರ್ಷ ಕದನ ಗೆದ್ದ ಸಾಹಸ ನನ್ನ ಕೋಳಿಗಳದು. ಕೀರ್ತಿ ಅದರ ಯಜಮಾನ ನನ್ನದು. ಸೋತ/ಸತ್ತ ‘ಒಟ್ಟೆ’ ಕೋಳಿಯ ಮಾಂಸದ ಊಟದ ಸಂಭ್ರಮ ಮನೆಯವರದು! ನಾನು ಊರು ಬಿಟ್ಟು ಪುತ್ತೂರಿಗೆ ಹೋದ ಮೇಲೆ ನನ್ನ ಈ ಅಂಕಕ್ಕೆ ಪರದೆ ಬಿತ್ತು”

ನೋಡಿ, ಈ ಅನಿವಾರ್ಯ ವಲಸೆಯ/ಸ್ಥಳಾಂತರದ ಪರಿಣಾಮ! ಜೀವನದ ಒಂದು ಅಂಗವೇ ಲುಪ್ತವಾಗುವ ಸ್ಥಿತಿ. ಇದು ಬದುಕು ಬದಲಾಗುವ ರೀತಿಯೂ ಹೌದು! ಮುಂದಿನ ಜನಾಂಗಕ್ಕೆ ಇದು ವಿಸ್ಮ್ರುತಿಯಾಗುವ ಕ್ರಿಯೆಯೂ ಹೌದು. ಗತದ ಬದುಕು ಹೀಗೆ ಪಳೆಯುಳಿಕೆಯಾಗುತ್ತಾ, ಈ ರೀತಿ ಹೊರಬರುವ ತನಕ ನೆನಪುಗಳ ಭದ್ರಕೋಟೆಯಲ್ಲಿ ಬಂಧಿಯಾಗಿರುತ್ತದೆ. ಇದು ದೈನಿಕದ ಬದುಕಿನ ಭಾಷ್ಯ ಎಂದೇ ಅನಿಸುತ್ತದೆ. ಪ್ರಬಂಧದ ಕೊನೆಯೂ ಇದನ್ನೇ ಧ್ವನಿಸುವಂತಿದೆ: “ಇತ್ತೀಚೆಗೆ ಬಂದ ಸುದ್ದಿ. ಮೊನ್ನೆಯ ಸಿಡಿಲಿಗೆ ಕಟ್ಟೆ ಬಿರುಕು ಬಿಟ್ಟಿದೆಯಂತೆ! ಗಾಳಿ ಮಳೆಗೆ ಮಾವಿನ ಹಲವು ಕೊಂಬೆಗಳು ನೆಲಕ್ಕುರುಳಿವೆಯಂತೆ! ಹೀಗಾಗಿ ಕಟ್ಟೆ ನೇಮದ ಕಟ್ಟುಕಟ್ಟಳೆ….?” ಈ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಿದ್ದಂತಿಲ್ಲ. ಕಾಲಚಕ್ರಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ!! ಕಾಲಾಯ ತಸ್ಮೈ ನಮಃ ಎಂದು ಕೈಮುಗಿಯುವುದಷ್ಟೇ ನಮ್ಮ ಕೆಲಸ.

‘ಶಾಸ್ತ್ರ ಬಿಡಲಿಕ್ಕೆ ಆಗ್ತದಾ?’ ನವಿರು ಹಾಸ್ಯದಿಂದ ತೊಡಗಿ ಘನ ಗಂಭೀರವಾಗಿ ಮುಂದುವರಿದು ತಿಳುವಳಿಕೆಯ ಸಮನ್ವಯತೆಯಲ್ಲಿ ಮುಗಿಯುವುದು ಕುತೂಹಲ ಹುಟ್ಟಿಸುತ್ತದೆ. ಶಾಸ್ತ್ರ ಶಬ್ದ ಹೇಗೆ ಬಳಕೆಯಾಗುತ್ತಿದೆ ಎಂಬುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ:

೧. “ನೀವು ಊಟ ಮಾಡಿ ಬಂದಿರಬಹುದು. ಹೇಗೂ ನಮ್ಮ ಊಟದ ಹೊತ್ತಿಗೆ ಬಂದಿದ್ದೀರಿ. ನಮ್ಮ ಒಟ್ಟಿಗೆ ಕುಳಿತು ಊಟದ ಶಾಸ್ತ್ರ ಒಂದು ಮಾಡಿ, ಬನ್ನಿ.”

೨. “ಪ್ರಯಾಣ ಮಾಡಿ ಸಾಕಾಯ್ತು. ಹಸಿವಾಗ್ತಿದೆ, ನಿದ್ದೆ ಬರ್ತಿದೆ. ಒಟ್ಟಾರೆ ಒಂದು ಸ್ನಾನದ ಶಾಸ್ತ್ರ ಮುಗಿಸಿ  ಬಂದೆ.”

೩. “ಹೆಚ್ಚು ಜನರಿಗೆ ಆಮಂತ್ರಣ ಕೊಟ್ಟಿಲ್ಲ. ಸಣ್ಣ ಮಟ್ಟಿಗೆ ಮನೆ ಒಕ್ಕಲು ಅಂತ ಇಟ್ಟಿದ್ದೇವೆ. ಪುರೋಹಿತರಿಗೂ ಹೇಳಿದ್ದೇವೆ. ಅವರು ಮತ್ತು ಅವರ ಸಹಾಯಕ್ಕೆ ಒಬ್ಬರು ಬಂದರೆ ಸಾಕು. ಸಣ್ಣಕ್ಕೆ ಶಾಸ್ತ್ರ ಮಾಡಿದರೆ ಸಾಕು ಎಂದು. ಈ ಕಷ್ಟಕಾಲದಲ್ಲಿ ಎಂಥದ್ದು ಶಾಸ್ತ್ರ.”

ಹೀಗೆ ನಿರ್ವಚಿತಗೊಂಡ ಬಳಿಕ ಮುಂದಕ್ಕೆ ‘ಜಾನಪದ’ದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಾ ‘ಶಾಸ್ತ್ರ’ ಇಲ್ಲಿ ‘ಸಂಪ್ರದಾಯ’ವಾಗಿ ವಿಧಿ-ನಿಷೇಧಗಳ ಕೋಶವಾಗಿ ಪುನರಪಿ ‘ಶಾಸ್ತ್ರ’ವೇ ಆಗಿ ರೂಪುಗೊಳ್ಳುವುದನ್ನು ಲೇಖಕರು ಗುರುತಿಸುವುದು ಹೀಗೆ: “ಯಾವ ಭೂತಕ್ಕೆ ಯಾವ ವಿಧಿ, ಯಾವ ಸ್ಥಳದಲ್ಲಿ ಏನೇನು ಸಂಪ್ರದಾಯ, ಯಾವ ಆಚರಣೆಗಳನ್ನು ಯಾರು ನಿರ್ವಹಿಸಬೇಕು, ಆರಾಧನೆಯ ಯಾವ ಪ್ರಭೇದಕ್ಕೆ ಯಾವ ವಿಧಿ ವಿಧಾನಗಳು ಹೀಗೆ ಆರಾಧನೆಯನ್ನು ರೂಪಿಸುವ, ನಿರ್ಣಯಿಸುವ, ನಿಯಂತ್ರಿಸುವ ಸಂಪ್ರದಾಯಗಳಿವೆ. ಲಿಖಿತ ಶಾಸ್ತ್ರಗಳ ನಿಯಮಗಳಿಗಿಂತ ಈ ಅಲಿಖಿತ ಸಂಪ್ರದಾಯಗಳು ಯಾವ ರೀತಿಯಿಂದ ನೋಡಿದರೂ ಕಳಪೆಯಲ್ಲ, ದುರ್ಬಲವಲ್ಲ…” ಎಂದು ಪ್ರತಿಪಾದಿಸುತ್ತಲೇ ತನ್ನ ಬಾಳಸಂಗಾತಿಯ ಆಯ್ಕೆಗೆ ‘ಹೆಣ್ಣು ನೋಡುವ ಶಾಸ್ತ್ರ’ವನ್ನು ಅಸಂಪ್ರದಾಯಿಕವಾಗಿ ಮುಗಿಸಿ “ಹೊಂದಿಕೆಗೆ ಒಗ್ಗುವ, ಜೀವಕ್ಕೆ ಸರಸ ತುಂಬುವ, ಬಾಳುವೆಗೆ ಸಮರಸ ತರುವ ಸಂಪ್ರದಾಯಗಳನ್ನು ಇಟ್ಟುಕೊಂಡಷ್ಟು ಒಳ್ಳೆಯದು” ಎಂದು ‘ಮದಿಪು’ ನುಡಿದು ಗೆಲುವಿನ ನಗೆ ನಕ್ಕು ಹಗುರಾಗುತ್ತಾರೆ ನಮ್ಮ ಚಿನ್ನಪ್ಪ ಗೌಡರು!

ಈ ಸಂಕಲನದ ಕೊನೆಯ ಪ್ರಬಂಧ ‘ನೀವೇ ಯೋಚಿಸಿ ನೋಡಿ!’ಯ ಕುರಿತು ನಾನು ಮೊದಲಿಗೇ ಪ್ರಸ್ತಾಪ ಮಾಡಿದ್ದೇನೆ. ಒಟ್ಟಿನಲ್ಲಿ ಈ ಸಪ್ತ ಪ್ರಬಂಧಗಳು ಜೀವನದ ಸಪ್ತ ಸ್ವರಗಳಂತೆ ಭಾಸವಾಗುತ್ತಿದೆ. ಕೀ-ಬೋರ್ಡಿನ ಯಾವ ಕೀಲಿಯನ್ನು ಒತ್ತಿದರೂ ಒಂದು ಸುಸ್ವರ ಹೊರಡುವಂತೆ ಇಲ್ಲಿನ ಪ್ರಬಂಧಗಳು ಕಾಣಿಸಿಕೊಳ್ಳುತ್ತವೆ, ಮತ್ತು ಅಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯದ   ಕುರಿತು ಯೋಚಿಸುವಂತೆ ಆಗ್ರಹಿಸುತ್ತವೆ ಎಂಬುದರಿಂದಾಗಿ ಈ ಪ್ರಬಂಧಗಳ ಮೌಲಿಕತೆ ಸ್ಥಾಪಿತವಾಗುತ್ತದೆ. ಕೊರೊನಾ ವಿರಾಮದಲ್ಲಿ ಈ ಬರೆಹಗಳು ಹುಟ್ಟಿಕೊಂಡಿವೆ ಎಂಬುದರಿಂದಲೂ, ಎಂಥಾ ನೇತ್ಯಾತ್ಮಕ ದುರ್ಘಟನೆಯ ನಡುವೆಯೂ  ಒಂದು ಇತ್ಯಾತ್ಮಕ ಸೃಜನಶೀಲತೆ ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿಯೋ ಎಂಬಂತೆ ಈ ಬರೆಹಗಳು ಇರುವುದರಿಂದಲೂ     ಕೊರೋನಾಕ್ಕೊಂದು ಸಲಾಂ ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ನಮಸ್ಕಾರ.

************************************************

ಲಕ್ಷ್ಮಿನಾರಾಯಣ ಭಟ್

3 thoughts on “ಬೇಲಿಯೊಳಗಿನ ಬೆಳೆ –

  1. ಕೃತಿಯ ವಸ್ತುನಿಷ್ಠ ವಿಮರ್ಶೆ ಇಲ್ಲಿ ನಡೆದಿದೆ‌ . ಯಕ್ಷ/ ದೈವ. ಈ ಆರಾಧನಾ ರಂಗದ ಸೂಕ್ಷ್ಮ ವನ್ನಾಧರಿಸಿ ಕಥನ‌ಕಟ್ಟುವುದಕ್ಕೆ ವಿಪುಲ ಅವಕಾಶಗಳಿವೆ ‘ ಎಂಬ ಮಾತನ್ನು ಪ್ರೊಫೆಸರ್ ಚಿನ್ನಪ್ಪ ಸರ್ ವಿಚಾರ ಸಂಕಿರಣಗಳಲ್ಲ್ಲಿ ಹೇಳುತ್ತಿದ್ದರು. ಇದೀಗ ಅವರೆ ಸಾಧ್ಯ ವಾಗಿಸಿದ್ದಾರೆ( ಡಾ ಯೋಗೀಶ ಕೈರೋಡಿ)

    1. ಲಕ್ಷ್ಮೀ ನಾರಾಯಣ ಭಟ್ಟರ ಕೃತಿವಿಮರ್ಷೆಯಲ್ಲಿ ಇಡೀ ಕೃತಿಯ ಒಂದು ಸ್ಥೂಲನೋಟದ ದರ್ಶನವಾಯಿತು

  2. ಕೃತಿವಿಮರ್ಷೆ ಇಡೀ ಕೃತಿಯ ಸ್ಥೂಲನೋಟದ ಚಿತ್ರಣವನ್ನು ತೆರೆದಿಡುತ್ತದೆ

Leave a Reply

Back To Top