“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”

ಪುಸ್ತಕ ಸಂಗಾತಿ

ಮಧ್ಯಘಟ್ಟವೆಂಬ

ಒಂದು ಮೈಲಿಗಲ್ಲು

ಊರೂರು ಅಲೆಯುತ್ತಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿತ ಮನುಷ್ಯನಿಗೆ ವಲಸೆ ಎನ್ನುವುದು ಅವನ ಬದುಕಿನ ಅವಿಭಾಜ್ಯ ಅಂಗ. ತನ್ನ ಅಸ್ತಿತ್ವದ ಸಲುವಾಗಿ, ಹೊಟ್ಟೆ ಪಾಡಿನ ಸಲುವಾಗಿ ಆತ ಸೂಕ್ತ ಸ್ಥಳವೊಂದರ ಆಯ್ಕೆಗೆ ತೊಡಗುತ್ತಾನೆ. ಇದು ಮನುಷ್ಯ ಸಹಜ ಪ್ರಕ್ರಿಯೆ ಅವನ ಈ ಕ್ರಮದಿಂದಾಗಿಯೇ ರಾಜ್ಯ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ ಅಳಿಸಿಹೋಗುತ್ತವೆ. ಕೆಲವೊಂದು ಚರಿತ್ರೆಯಲ್ಲಿ ದಾಖಲಾಗುತ್ತವೆ ಮತ್ತೆ ಮುಖ್ಯವಲ್ಲದ್ದು ಎಲ್ಲಿಯೋ ಕಣ್ಮರೆಯಾಗಿ ಬಿಡುತ್ತವೆ. ಅಂತಹ ಒಂದು ಕಾಲಘಟ್ಟದ ಎಳೆಯನ್ನು ಹಿಡಿದು ಒಂದು ಶತಮಾನದ ಕತೆಯನ್ನು “ಮಧ್ಯಘಟ್ಟ” ಅನಾವರಣಗೊಳಿಸುತ್ತ ಹೋಗುತ್ತದೆ. ಇಲ್ಲಿ ರಾಜ ಮಹಾರಾಜರ ಕತೆಗಳಿಲ್ಲ. ಹೋರಾಡಿದ ಸೈನಿಕರ ಸಂಪುಟವು ಅಲ್ಲ. ಆದರೆ ಶುದ್ಧ ಮನುಷ್ಯ ಜೀವಿಗಳ ಜೀವನಕ್ರಮ ಅವರು ಬದುಕು ಕಟ್ಟಿಕೊಂಡ ರೀತಿ ಮತ್ತು ಅದರ ಸಲುವಾಗಿ ಅವರು ಪಡುವ ಪರಿಪಾಡಲು ಮತ್ತು ಇದ್ದಲ್ಲಿಯೇ ಬದುಕನ್ನು ಹಸನಾಗಿಸಿಕೊಳ್ಳುವ ಕ್ರಮ ಈ ಕಾದಂಬರಿಯ ಜೀವಾಳ.
ಮಗಳನ್ನು ಮಧ್ಯಘಟ್ಟಕ್ಕೆ ಮದುವೆ ಮಾಡಿಕೊಡುವ ಭೂದೇವಿ ಕೇರಳದ ಕುಂಬಳೆಯಿಂದ ಮಧ್ಯಘಟ್ಟಕ್ಕೆ ಬರುವ ಜೊತೆಜೊತೆಗೆ ಕಾದಂಬರಿ ಆರಂಭವಾಗುತ್ತದೆ. ಅವಳ ಬರುವಿಕೆಯ ಜೊತೆಯಲ್ಲಿಯೇ ಮಧ್ಯಘಟ್ಟದ ದುರ್ಗಮ ಕಾಡು, ಮರ, ಅಲ್ಲಿನ ಕಠಿಣ ಜೀವನ ಪದ್ಧತಿ ಇವುಗಳು ತೆರೆದುಕೊಳ್ಳುತ್ತ ಹೋಗುತ್ತದೆ. ಭಾಷೆ ಬಾರದೆ ಪುಟ್ಟ ಮಕ್ಕಳ ಜೊತೆಗಿಟ್ಟುಕೊಂಡು ಒಂಭತ್ತು ನದಿಗಳನ್ನು ಹತ್ತು ದಿನಗಳವರೆಗೆ ಕಾಲ್ನಡಿಗೆಯಲ್ಲಿ ದಾಟಿ ಬರುವ ಆ ಕಾಲದ ಗಟ್ಟಿ ಹೆಣ್ಣುಮಗಳೊಬ್ಬಳನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ. ಯಾವ ಪರಿಚಯವು ಇಲ್ಲದೆ ಆಕೆಯ ಸಹಾಯಕ್ಕೆ ನಿಲ್ಲುವ ಅಪರಿಚಿತರು ಆ ಕಾಲಮಾನದ ಮನುಷ್ಯ ಸಂಬಂಧಗಳ ಕುರಿತಾಗಿ ಮಹತ್ವದ ಅಂಶವನ್ನು ಕಟ್ಟಿಕೊಡುತ್ತಾರೆ. ೬೦ ವರ್ಷದ ಹಿರಿಯರೊಬ್ಬರು ೧೮ ವರ್ಷದ ಹೆಣ್ಣುಮಗಳೊಬ್ಬಳನ್ನು ಮದುವೆಯಾಗುವುದು ಸ್ವಲ್ಪ ವಿಚಿತ್ರ ಎನ್ನಿಸಿದರೂ. ಕಾಲಘಟ್ಟದ ಅವಧಿಯಲ್ಲಿ ನೋಡಿದಾಗ, ಅಲ್ಲದೆ ಹೆಣ್ಣುಮಕ್ಕಳನ್ನು ಹೊರೆ ಎಂದು ಭಾವಿಸುವ ಮನಸ್ಥಿತಿ ಈಗಲೂ ಬದಲಾಗದೆ ಇರುವಾಗ ಆಗಿನ ಕಾಲಮಾನದಲ್ಲಿ ಇದು ಸರ್ವೇಸಾಮಾನ್ಯ ವಿಷಯವಾಗಿರಬಹುದು ಎಂದು ಅನ್ನಿಸುತ್ತದೆ. ಅದೇ ರೀತಿ ಯಾವ ಪ್ರಶ್ನೆಗಳು ಇಲ್ಲದೆ ಇದನ್ನು ಒಪ್ಪಿಕೊಳ್ಳುವ ಹೆಣ್ಣುಮಕ್ಕಳು ಕೂಡ ಬದುಕನ್ನು ಗೆದ್ದ ಉದಾಹರಣೆ ಶ್ರೀದೇವಿಯ ಮೂಲಕ ಅರಿಕೆಯಾಗುತ್ತದೆ.


ಇದೇ ಕಾಲಘಟ್ಟದಲ್ಲಿ ಬರುವ ಶಕುಂತಲೆ, ಗಿರಿಜಮ್ಮ, ಆ ಕಾಲಮಾನದ ದುರಂತ ನಾಯಕಿಯರ ಪ್ರತಿ ರೂಪದಂತೆ ಕಾಣಿಸುತ್ತಾರೆ. ಬ್ರಾಹ್ಮಣ ವರ್ಗದಲ್ಲಿದ್ದ ವಿಧವಾ ಸಮಸ್ಯೆಯ ಪ್ರತಿಬಿಂಬದ ಹಾಗೆ ಇಬ್ಬರು ಕಾಣಿಸುತ್ತಾರೆ.


ತನ್ನ ಹನ್ನೆರಡನೆ ಸಣ್ಣ ವಯಸ್ಸಿಗೆ ಮದುವೆಯಾಗಿ ಗಂಡನನ್ನು ಕಳೆದುಕೊಂಡ ಶಕುಂತಲೆ ಕೇಶಮುಂಡನ ಮಾಡಿಸಿಕೊಂಡು ಮನೆಯಿಂದ ಹೊರದಬ್ಬಿಸಿಕೊಳ್ಳುತ್ತಾಳೆ. ತುತ್ತು ಅನ್ನಕ್ಕೆ ಗತಿ ಇಲ್ಲದೆ ಯರ್ಯಾರದ್ದೋ ಕೈ ಕಾಲು ಹಿಡಿದು ಮಠ ಸೇರುತ್ತಾಳೆ. ಮಠದ ಚಾಕರಿಯಲ್ಲಿದ್ದ ಅರ್ಚಕನೊಬ್ಬನಿಂದ ಬಸಿರಾಗುತ್ತಾಳೆ. ವಿಧವೆ ಬಸಿರಾಗುವುದು ಸಹಿಸಲು ಸಾಧ್ಯವೇ ಇಲ್ಲದಂತಹ ಅಪಚಾರವಾದ್ದರಿಂದ ತಕ್ಷಣ ಪಂಚಾಯ್ತಿ ನಡೆದು ಶಕುಂತಲೆಯನ್ನು ದಾರಿ ತಪ್ಪಿದವಳು ಎಂದು ನಿರ್ಣಯಿಸಿ ಹೊರ ಹಾಕಲಾಗುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅರ್ಚಕ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ದೇವರಿಗೆ ಆರತಿ ಎತ್ತುವುದರಲ್ಲಿ ತಲ್ಲೀನನಾಗಿರುತ್ತಾನೆ. “ತಪ್ಪು ನಡೆಯುವುದು ಬರಿ ಹೆಂಗಸರಿಂದಲೇ” ಎನ್ನುವ ಸಿದ್ಧ ಮಾದರಿಯ ಮನಸ್ಥಿತಿಯ ಕೈಗನ್ನಡಿಯಂತೆ ಕಾಣಿಸುತ್ತದೆ. ಆದರೆ ಅಸಹಾಯಕ ಹೆಂಗಸರಿರುವ ಹಾಗೆ ಹೃದಯವಂತ ಗಂಡಸರೂ ಇರುತ್ತಾರೆ ಎನ್ನುವುದಕ್ಕೂ ಈ ಘಟನೆಯೆ ಸಾಕ್ಷಿಯಾಗುತ್ತದೆ. ಹೊರದಬ್ಬಿಸಿಕೊಂಡ ಬಸುರಿ ಹೆಂಗಸರನ್ನು ಸಮಾಜದದ ವಿರೋಧದ ನಡುವೆಯು ನಾಗಪ್ಪ ಭಟ್ಟರು ಮದುವೆಯಾಗುತ್ತಾರೆ. ತನ್ನ ಸಂಬಂಧಿಕರ ಜಾತಿಯವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಕೊನೆಗೆ ಅದು ಅವರ ಬಹಿಷ್ಕಾರದವರೆಗೆ ಬಂದು ನಿಲ್ಲುತ್ತದೆ. ಬಹಿಷ್ಕಾರಕ್ಕೆ ಒಳಗಾಗಿ ಕೊನೆಗೆ ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಹೆಂಡತಿ ಮಗನ ಸಲುವಾಗಿ ಊರನ್ನೇ ಬಿಟ್ಟು ಬಂದು ತಾವು ನಂಬಿದ ಧ್ಯೇಯಗಳ ಬದುಕಿಸಿಕೊಳ್ಳುತ್ತಾರೆ. ಅಂತೆಯೇ ಜೀವನ ಪರ್ಯಂತ ಬಹಿಷ್ಕಾರಕ್ಕೆ ಒಳಗಾದ ಶಕುಂತಲೆ ಮಗ ಗಣಪತಿ ಭಟ್ಟ ತನ್ನ ಶ್ರಮದಿಂದಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಇಲ್ಲಿ ಶಕುಂತಲೆ ಗೆಲ್ಲುತ್ತಾಳೆ.


ಆದರೆ ಇದೇ ಪರಿಸ್ಥಿತಿಗೆ ಸಿಲುಕಿಕೊಳ್ಳುವ ಗಿರಿಜಮ್ಮ ಊರ ಮುಖಂಡನೊಬ್ಬನಿಗೆ ಬಸಿರಾಗುತ್ತಾಳೆ. ಆದರೆ ತನ್ನ ಬಸುರಿಗೆ ಕಾಣವಾದವನ ಹೆಸರನ್ನು ಮುಚ್ಚಿಡುವ ಸಲುವಾಗಿ ಅವನ ಆಜ್ಞೆಯಂತೆಯೇ ಊರಿನ ಹಲವರ ಹೆಸರು ಹೇಳಿ ಕೊನೆಗೆ ಗುರುಗಳೊಬ್ಬರ ಹೆಸರನ್ನು ಹೇಳಿ ಅವರ ಉರಿಗಣ್ಣಿಗೆ ಗುರಿಯಾಗಿ ಕೊನೆಗೆ ತನಗಿನ್ನು ಬದುಕು ಇಲ್ಲ ಎನ್ನುವ ನಿರ್ಣಯಕ್ಕೆ ಬಂದು ಹುಚ್ಚಿ ಎನ್ನುವ ಪಟ್ಟ ಕಟ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾಳೆ.


“ಕಿರೀಟ ತೊಟ್ಟವು ರಾಜರಾದ, ಪತ್ನಿ ಉಪಪತ್ನಿಯರನ್ನು ಸಂಪಾದಿಸಿದ, ಶ್ರೀಮಂತರು ತಾವು ರಾಜರ ಹಾಗೇಯ ಹೇಳಿ ತೋರಿಸಲೆ ತಲೆಮೇಲೆ ಮುಂಡಾಸ ಸುತ್ತಿದ. ಕಂಡವರನ್ನು ಬೇಕಾದ್ಹಂಗೆ ಬಳಸಿದ ಗರ್ಭಿಣಿಯಾಗಿದ್ದು ಗಿರಿಜಮ್ಮನ ತಪ್ಪು ಎಂದು ಎಲ್ಲರೂ ಹೇಳಿದವೇ ಹೊರತೂ ಅಂತ ಹಳಕಟ್ಟು ಕೆಲಸ ಮಾಡಿದ್ದು ಯಾವ ಗಂಡಸು ಹೇಳಿ ಗೊತ್ತಿದ್ದರೂ ಮಾತಾಡಿದ್ದಿಲ್ಲೆ ಪಂಚಾಯ್ತಿ ಸೇರಿಸಿ, ಗುರುಗಳೆದುರು ವಿಷಯ ಇಟ್ಟ ಮುಖ್ಯಸ್ಥನೇ ಈ ಕೆಲಸ ಮಾಡಿದ್ದಾದ್ರೂ ಬಡ ವಿಧವೆ ಗಿರಿಜಮ್ಮಂಗೆ ಸತ್ಯ ಹೇಳಲೇ ಉಸಿರು ಕಟ್ಟಿ ಹೋಯಿತು” ಈ ಸಾಲುಗಳು ಎಲ್ಲ ಕಾಲಕ್ಕು ಸಲ್ಲಬಹುದಾದ ಸಾಲುಗಳ ಹಾಗೆ ಕಾಣಿಸುತ್ತವೆ.
ಮದುವೆ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ತನ್ನ ಮೂಲಭೂತ ಹಕ್ಕಿನಿಂದ, ಪ್ರಕೃತಿದತ್ತ ಆಸೆ ಆಸಕ್ತಿಗಳಿಂದ ವಂಚಿತಳನ್ನಾಗಿಸುವ ಈ ಹುನ್ನಾರಗಳಿಗೆ ಈ ಇಬ್ಬರು ಸಣ್ಣ ಸಾಕ್ಷಿಯಷ್ಟೆ. ಈ ಇಬ್ಬರ ನೆರಳ ಅಡಿಯಲ್ಲಿ ಕಳೆದುಹೋದವರೆಷ್ಟೊ.
ಇನ್ನು ಈ ಇದಕ್ಕಿಂತ ತುಸು ಹೊರತಾಗಿ ಮಂಜಮ್ಮ ನಿಲ್ಲುತ್ತಾಳೆ. ಬಹುಶ: ಅದು ಬದಲಾದ ನಾಗರೀಕತೆಯ ಪರಿಣಾಮ ಮತ್ತು ಇಡೀ ಮಧ್ಯಘಟ್ಟ ನಿಧಾನವಾಗಿ ಹೊರಜಗತ್ತಿಗೆ ತೆರೆದುಕೊಂಡ ಪರಿಣಾಮವೂ ಇರಬಹುದು. ಆ ಹೊತ್ತಿಗೆ ಹೆಂಗಸರ ಯೋಚನಾಕ್ರಮವೂ ತುಸು ಬದಲಾಗುವುದನ್ನು ನಾವು ಕಾಣಬಹುದು. ಗಂಡ ಸತ್ತ ಮೇಲೆ ಮಂಜಿ ಸುಮ್ಮನೆ ಮನೆಯಲ್ಲಿ ಉಳಿಯುವುದಿಲ್ಲ. ಆಕೆಗೆ ಬದುಕಲೇ ಬೇಕಾದ ಅನಿವಾರ್ಯ. ಹೀಗಾಗಿ ಅವಳು ಗಂಡಸಿನ ಬಟ್ಟೆ ಧರಿಸಿ ಪೇಟೆಗೆ ಹೋಗುತ್ತಾಳೆ. ಮನೆಯ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ತನ್ನ ಪೇಟೆ ಅನುಭವವನ್ನು ಊರ ಹೆಂಗಸರಿಗೆಲ್ಲ ಹೇಳುತ್ತಾಳೆ. ಉಳಿಕೆ ಹೆಂಗಸರು ಅದನ್ನು ಸಾಹಸ ಎಂಬಂತೆ ಬಣ್ಣಿಸಿದರು ಪುರುಷ ಸಮಾಜದ ಪ್ರತಿರೂಪದಂತೆ ಕಾಣಿಸುವ ವಾಸುದೇವನಿಗೆ ಮಾತ್ರ ಇರುಸುಮುರುಸಾಗುತ್ತದೆ. “ಹೆಂಗಸ್ರಿಗೆ ಇಷ್ಟು ಧೈರ್ಯ ಇಪ್ಪಲಾಗ” ಎನ್ನುತ್ತಾನೆ. ಆದರೆ ಅವನ ಅಕ್ಕ ಶ್ರೀದೇವಿಗೆ ಸರಿಕಾಣುವುದಿಲ್ಲ. ಹೀಗಾಗಿಯೇ “ಮಂಜಿ ಪ್ಯಾಟಿಗೆ ಹೋಗಿ ವ್ಯವಹಾರ ಮಾಡದಿದ್ದರೆ ಮತ್ಯಾರು ಆ ಮನೆಗೆ ದಿಕ್ಕು ಆಗ್ತಿದ್ದ? ನೀನು ಆ ಮಕ್ಕಳಿಗೆ ಕೂಳು ಹಾಕ್ತಿದ್ಯ? ಎನ್ನುತ್ತ ಪ್ರಶ್ನಿಸುತ್ತಾಳೆ.
ಹೀಗೆ ಮಧ್ಯಘಟ್ಟ ಇಡಿಯಾಗಿ ಕೆಲವೊಮ್ಮೆ ಹೆಣ್ಣು ಮಕ್ಕಳ ಬದುಕಿನ ಹಸೆಯ ಹಾಡಂತೆ ಕಾಣಿಸುತ್ತದೆ. ಸಂಸಾರದ ಜವಬ್ದಾರಿಯನ್ನೆ ಬಯಸದೆ ಊರೂರು ಸುತ್ತುತ್ತ ವರ್ಷಕ್ಕೊಂದು ಬಾರಿ ಮರೆಯದೆ ಬಂದು ಮಗುವ ಹುಟ್ಟಿಸಿ ಹೋಗುವ ಉಡಾಳ ಗಂಡನಿಂದಾಗಿ ರೋಸಿಟ್ಟು ಮಗಳ ಮದುವೆಯನ್ನು ಅಣ್ಣ ಕೈಕಾಲು ಹಿಡಿದು ಒಂದು ಹಂತಕ್ಕೆ ತಲುಪಿಸಿ ಇಲ್ಲಿಯೇ ಉಳಿದುಕೊಳ್ಳುವ ಭೂದೇವಿ.
ಭಾಷೆಯೇ ಬಾರದ ಅಪರಿಚಿತ ಹಿರಿಯನೊಬ್ಬನ ಕೈ ಹಿಡಿದು ಸುಸೂತ್ರ ಸಂಸಾರ ನಡೆಸುತ್ತ ಹೋಗುವ ಶ್ರೀದೇವಿ. ಮಧ್ಯಘಟ್ಟಕ್ಕೂ ಕೇರಳಕ್ಕೂ ಕೊಂಡಿಯಾಗಿ ನಿಂತು ಬದುಕನ್ನು ಒಪ್ಪಗೊಳಿಸಲು ಯತ್ನಿಸುವ ಪುಡಿಯಮ್ಮ. ಪುರುಷ ಸಮಾಜದ ದಳ್ಳುರಿಗೆ ಬೆಂದು ನಿಡುಸುಯ್ಯುವ ಮತ್ತು ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಶಕುಂತಲೆ, ಮಂಜಮ್ಮ, ಕತೆಯಾಗಿ ಉಳಿದುಕೊಳ್ಳುವ ಗಿರಿಜೆ ಹೀಗೆ ಸಾಲು ಸಾಲು ಹೆಣ್ಣು ಮಕ್ಕಳ ಗಾಥೆಯೇ ಸಿಕ್ಕುತ್ತದೆ.
ಮೂಲಕತೆ ಗೋಪಯ್ಯ ಶ್ರೀದೇವಿಯವರದ್ದು ಅದಕ್ಕೆ ಪೂರಕವಾದ ಭೂದೇವಿಯರದ್ದು ಎನ್ನಿಸಿದರು. ಇದು ಪೂರ್ತಿ ಮಧ್ಯಘಟ್ಟದ ತಲೆಮಾರುಗಳ ಕತೆ. ದಟ್ಟ ಕಾಡುಗಳ ನಡುವೆ ಬದುಕಿ ಕಟ್ಟಿಕೊಂಡವರ ಕತೆ. ಬಡತನದ ನಡುವೆಯು ಬಾಳೆಕಾಯಿಯನ್ನು ಬೇಯಿಸಿ ತಿಂದು ಬದುಕು ಕಟ್ಟಿಕೊಂಡವರ ಕತೆ. ಉಣ್ಣುವ ಗಂಜಿ ಉರುಳಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅಡುಗೆ ಮನೆಯಲ್ಲಿ ಕುಳಿ ತೆಗೆದು ಉಂಡವರ ಕತೆ.ಕಾಡಿನ ಕತೆ. ನೆಲದ ಬೇರುಗಳ ಕತೆ. ಬದುಕನ್ನು ಬಂದಂತೆಯೆ ಬದುಕಿ ಹೋದವರ ಕತೆ. ತಮ್ಮ ನೂರು ಛಾಪುಗಳ ಒತ್ತಿ ಮುಂದಿನ ತಲೆಮಾರಿಗೆ ವರ್ಗಾಯಿಸಿದವರ ಕತೆ. ಹೊರಳಿಕೊಳ್ಳುವ ಬದುಕಿಗೆ ಸಾಕ್ಷಿಯಾದವರ ಕತೆ. ಕತೆಯಾಗದವರ ಕತೆ. ಈ ಕಾದಂಬರಿಯ ಅಲ್ಲಲ್ಲಿ ಕಾಣಿಸಿಕೊಳ್ಳುವ ತಮ್ಮ ನೋವುಗಳನ್ನು ಹಾಡಾಗಿಕೊಳ್ಳುವ ಹೆಣ್ಣುಮಕ್ಕಳ ಕತೆ.
ಲೇಖಕರ ಅಗಾಧ ಪರಿಸರ ಪ್ರಜ್ಞೆ ಅದನ್ನು ಕತೆಗೆ ಪೂರಕವಾಗಿ ಬಳಸಿಕೊಂಡ ರೀತಿ ಮತ್ತು ಅದನ್ನು ಓದುಗನ ಎದೆಗೆ ಇಳಿಸುವ ಕ್ರಮ. ಈ ಎಲ್ಲವೂ ಈ ಹೊತ್ತಿಗೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ.ಇನ್ನು ನವಿರಾದ ಹವ್ಯಕ ಭಾಷೆ. ಮಿಂಚು ಸುಳಿಯಂತೆ ಕಾಡುವ ರೂಪಕಗಳು, ಮಧ್ಯಘಟ್ಟದ ಮೂಲಕ ಒಂದು ಇಡೀ ಕಾಲಮಾನವನ್ನು ಅದರ ಹೊರಳುವಿಕೆಯನ್ನು ಸಶಕ್ತವಾಗಿ ಕಟ್ಟಿಕೊಡುತ್ತವೆ.

**************************************

ದೀಪ್ತಿ ಭದ್ರಾವತಿ

3 thoughts on ““ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”

  1. ಒಳ್ಳೆಯ ವಿಮರ್ಶೆ.
    ಬಹಳ ದಿನಗಳ ನಂತರ ಸಂಗಾತಿಯಲ್ಲಿ ಒಳ್ಳೆಯ ವಿಮರ್ಶೆ

Leave a Reply

Back To Top