ಕವಿತೆ
ಗಾಂಧಾರಿ ಸಂತಾನ
ಕಾತ್ಯಾಯಿನಿ ಕುಂಜಿಬೆಟ್ಟು
ಆ ಸೂಯ೯ ಹೆರುತ್ತಾನೆ
ನೀಲಿ ನೀಲಿ ಮೋಡ ಪರದೆಗಳ
ಹೆರಿಗೆ ಮನೆಯಲ್ಲಿ
ನೀಳ ನೀಳ ಬೆಳಕು ಶಿಶುಗಳ
ಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡು
ಈ ಗಾಂಧಾರಿಯ ಹಾಗೆ!
ಹೊತ್ತದ್ದು ಹೆತ್ತು ವೀರಶತಜನನಿ
ಹೆತ್ತದ್ದು ಸತ್ತು ದುಃಖಶತಜನನಿ!
ಬಸಿರ ಹೊಸೆಹೊಸೆದು ಅತ್ತರೂ
ಈಗ ವೇದವ್ಯಾಸನಿಲ್ಲ ಮಡಕೆಯಿಲ್ಲ
ಮಹಾಭಾರತ ಮುಗಿದು ಹೋಗಿದೆ
ಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ!
ಆ ಸೂಯ೯ನದ್ದೋ ಅಕ್ಷಯ ಗಭ೯ !
ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆ
ತನ್ನ ಬೇನೆಯನ್ನೆಲ್ಲ ಭೂಮಿಯ
ಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆ
ಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿ
ಮುಳುಗುತ್ತಾನೆ
ಇರುಳಿಡೀ ಕಡಲಿಗೆ ಪ್ರಸವ ಬೇನೆ
ಅದರ ಕೊನೆಯ ಬಿಕ್ಕೊಂದು ಚಂದ್ರನಾಗುತ್ತದೆ
ಹೆತ್ತು ಕೊಡುತ್ತದೆ ಸೂಯ೯ನನ್ನು ಆಗಸಕ್ಕೆ
ಭೋಗ೯ರೆಯುತ್ತಿರುತ್ತದೆ ದಿನವಿಡೀ
ಬಾರೋ ಬಾರೋ…. ಎಂದು
ಅವ ಮತ್ತೆ ಮುಳುಗುತ್ತಾನೆ
ನಾಳೆ ಕಡಲ ಗಭ೯ದಿಂದ ಮುತ್ತಂತೆ ಎದ್ದು
ಕಿರಣಗಳನ್ನು ಹೆತ್ತು ಭೂಮಿಗೆ ಕೊಡಲು
ಭೂಮಿ ಪಡೆಯುತ್ತಾಳೆ ಹಡೆದು
ಕಳೆದುಕೊಳ್ಳಲು
ಅವ ಹೆತ್ತ ಕಿರಣಗಳು
ಗಂಡು ಹೆಣ್ಣು ಜೀವ ಸಂಕುಲಗಳ
ಗಭ೯ಗಳಲ್ಲಿ ಉರಿಯುವ ಅಂಡಾಣು ವೀರ್ಯಾಣುಗಳಾಗುತ್ತವೆ
ಭ್ರೂಣಗಳ ಎದೆಗಳಲ್ಲಿ ಜೀವ ದೀಪಗಳಾಗಿ ಬೆಳಗುತ್ತವೆ
ಕುಡಿದೀಪಗಳ ಆರದಂತೆ ಪೊರೆಯುತ್ತವೆ ತಾಯಿ ಹಣತೆ
ಗಭ೯ ಕೊಳಗಳಲ್ಲಿ ತೇಲುತ್ತವೆ ಭ್ರೂಣಗಳು ಕಂಗಳಲ್ಲಿ ಕಿರಣಗಳ ಚಿಮ್ಮಿಸುತ್ತ
ಬೆಳಕಿನ ಕಿರಣಗಳನ್ನು
ಬಲದ ಕೈಯಲ್ಲಿ ಕೊಡುತ್ತಲೇ
ಎಡದ ಕೈಯಲ್ಲಿ ಎಳೆದು ನುಂಗುತ್ತಲೇ ಇರುತ್ತಾನೆ ಅವ ಜೀವ ದೀಪಗಳನ್ನು
ಪ್ರಾಣಿ ಪಕ್ಷಿ ಕ್ರಿಮಿ ಕೀಟ ಮನು ಸಂಕುಲ
ಈ ಗಾಂಧಾರಿಯದ್ದೇ ಸಂತಾನ
ಹೊತ್ತದ್ದನ್ನು ಹೆತ್ತು ಭೂಮಿಗೆ ತೆತ್ತು ಕಾಡ್ಗಿಚ್ಚಲ್ಲಿ ಸುಟ್ಟು ಹೋಗುತ್ತಲೇ ಇರುತ್ತವೆ
ಆ ಸೂಯ೯ನ ಬೆಳಕಿನ ಕಿರಣವೊಂದು
ಬೆಂಕಿಕೊಳ್ಳಿಯಾಗಿ ಎದೆಹೊಕ್ಕ
ಮಸಣದ ಕ್ಷಣದಲ್ಲಿ
****************************
ಕವಿತೆ !!! ಅದ್ಭುತ. ಸೂರ್ಯ ಮತ್ತು ಭೂಮಿಯನ್ನು ಪ್ರಕೃತಿ ಪುರುಷನನ್ನಾಗಿ ನೋಡಿದ್ದು, ಗಾಂಧಾರಿಯ ಸಂತಾನಕ್ಕೆ ಹೋಲಿಸಿದ್ದು ಧ್ವನಿಪೂರ್ಣ.
ಅದ್ಭುತವಾದ ರೂಪಕ ಇಷ್ಟ ಆಯ್ತು
ಸುಂದರ ಪದಗಳ ಹೆಣಿಕೆಯೊಂದಿಗೆ ರವಿಯ ಹೋಲಿಕೆಯ ಗಾಂಧಾರಿ ಮಾತೆಗೆ ಅಮೋಘವಾಗಿದೆ. ಹಾಗೆಯೇ ಸೂರ್ಯನನ್ನು ಮೊದಲ ಬಾರಿಗೆ ಬಸಿರಾಗಿಸಿ ಹಡೆದ ತಾಯಿ ಮಾಡಿದ ಕವನ ಮೊದಲ ಬಾರಿ ಓದಿದ್ದು.