ಕ್ರಿಸ್ತನಿಗೆ ಒಂದು ಪ್ರಶ್ನೆ
ಅಕ್ಷತಾ ರಾಜ್
ನೀನಂದು ನೋಡಿದೆಯೆಂದರು….
ಯಾವ ಹೊಸರೂಪವಿತ್ತು ಬಾನಿನಲ್ಲಿ?
ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!
ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?
ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರು
ಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ?
ನೀನಂದು ಅತ್ತೆಯೆಂದರು….
ಯಾವ ತಾಪದ ಹನಿ ತೋಯ್ದಿತ್ತು ನೆಲ ?
ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!
ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?
ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರು
ಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ?
ನೀನಂದು ನಕ್ಕೆಯೆಂದರು
ಮತ್ತೆ ಮೂರು ದಿನದೊಳಗೆ ಎದ್ದು ಬಂದಾಗ
ಯಾವ ಸಂತಸಕ್ಕಾಗಿ ಮುಖ ಅರಳಿತ್ತು?
ತೆರೆದ ಪೆಟ್ಟಿಗೆಗಾಗಿ ! ಅಥವಾ ಮಾಸು ಗಾಯಕ್ಕಾಗಿ !
ಅಲ್ಲವೆಂದರೆ ಎದುರಿದ್ದವರಿಗಾಗಿ ?
ಅರಿವಾಗದೆಯೇ ಮತ್ತೆ ಹುಟ್ಟಿಬಂದ ಸಂತಸವೆಂದರು
ಹೌದೇ ! ನಿನ್ನ ನಗು ಅಷ್ಟು ಅಪರೂಪವೇ ಕುರುಂಜಿಹೂವಿನಂತೆ ?
ತಿಳಿಯಲೇ ಇಲ್ಲ, ನೀನು ಬಂದು ಹೋಗಿರುವುದು
ಆದರೂ ಚರಿತ್ರೆಯಾಯಿತು ನೀನಿದ್ದ ಆ ಮಧ್ಯಕಾಲ
ಪೂರ್ವಾರ್ಧವೋ ! ಉತ್ತರಾರ್ಧವೋ ! ಶಕೆಯಾಯಿತು ಕಾಲ
ನಾವೂ ಇದ್ದೇವೆ ಅರ್ಥವಾಗದ ಅದೇ ಅರ್ಧದೊಳಗೆ
**********************************