ಅಂಕಣ ಬರಹ

ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….5

ಅಪ್ಪ ಅವ್ವನ ಅದ್ಧೂರಿ ಮದುವೆ

Eighteen and over | The Indian Express

            ಜೋಯ್ಡಾದಲ್ಲಿ ಶಾನುಭೋಗಿಕೆಯ ಕೆಲಸ ತುಂಬಾ ಅನುಕೂಲಕರವಾಗಿತ್ತು. ತಿಂಗಳ ಸಂಬಳದಲ್ಲಿ ಒಂದು ಪೈಸೆಯನ್ನೂ ಖರ್ಚುಮಾಡಗೊಡದೆ ಹಳ್ಳಿಯ ರೈತಾಪಿ ಜನ ದವಸ-ಧಾನ್ಯ ತರಕಾರಿಗಳನ್ನೆಲ್ಲ ತಂದುಕೊಟ್ಟು ಸಹಕರಿಸುತ್ತಿದ್ದರಂತೆ. ಚಾವಡಿಯ ಒಂದು ಮೂಲೆಯಲ್ಲಿಯೇ ವಾಸ್ತವ್ಯಕ್ಕೆ ಅವಕಾಶವೂ ಇತ್ತು. ಬೆಟ್ಟದ ಹಳ್ಳಿಗಾಡಿನ ಹಳೆಯ ಕಟ್ಟಡವಾದ್ದರಿಂದ ಸಹಜವಾಗಿಯೇ ಕೋಣೆ ತುಂಬಾ ಬಿಲಗಳಿದ್ದವು. ಆ ಬಿಲಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇಲಿ ಹೆಗ್ಗಣ ಮತ್ತು ಅವುಗಳ ವಾಸನೆ ಹಿಡಿದು ಅಲ್ಲಿಗೆ ಬಂದು ಹೋಗುವ ವಿವಿಧ ಜಾತಿಯ ಹಾವುಗಳ ಉಪದ್ರವ ಬಿಟ್ಟರೆ ಊರಿನ ಜನ ತುಂಬ ಗೌರವದಿಂದ ಸಹಕರಿಸುತ್ತಿದ್ದರಂತೆ. ಆದರೆ, ಗಣಪು ಮಾಸ್ತರನಾಗಬೇಕೆಂದು ಬಯಸಿದ್ದರಿಂದ ಈ ಉದ್ಯೋಗ ಅಷ್ಟೇನೂ ತೃಪ್ತಿ ನೀಡಿರಲಿಲ್ಲ.

            ಎರಡು ತಿಂಗಳಲ್ಲೇ ಸರಕಾರಿ ಶಾಲೆಯೊಂದರಲ್ಲಿ ಮಾಸ್ತರಿಕೆಯ ಆದೇಶ ಬಂದಿದೆಯೆಂಬ ಸುದ್ದಿ ಊರಿಂದ ಬಂತು. ಗಣಪು ಹಿಂದೆಮುಂದೆ ನೋಡದೆ ಶಾನುಭೋಗ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿದ. ಆದರೆ ಈ ರಾಜೀನಾಮೆ ಪ್ರಕ್ರಿಯೆಯಲ್ಲಿ ಎಂಟುದಿನ ತಡವಾಗಿತ್ತು. ಗಣಪು ಊರಿಗೆ ಬಂದು ಆದೇಶವನ್ನು ಪಡೆಯುವಷ್ಟರಲ್ಲಿ ಶಿಕ್ಷಣ ಇಲಾಖೆ ತನ್ನ ಆದೇಶವನ್ನು ಬದಲಿಸಿ ಬೇರೊಬ್ಬ ಶಿಕ್ಷಕನನ್ನು ನೇಮಿಸಿಕೊಂಡಾಗಿತ್ತು.

            ಆರು ತಿಂಗಳ ಕಾಲ ಕೈಗೆ ಸಿಕ್ಕ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಗಣಪುವಿನ ಚಡಪಡಿಕೆಯ ದಿನಗಳಲ್ಲಿ ನಾಡುಮಾಸ್ಕೇರಿಯ ರಾಕು ಬೆನ್ನಿಗೆ ನಿಂತು ಧೈರ್ಯ ತುಂಬುತ್ತಿದ್ದನಂತೆ. ಆರು ತಿಂಗಳ ಬಳಿಕ ಮತ್ತೆ ಮಾಸ್ತರಿಕೆಯ ಆದೇಶ ಬಂತು. ಹೆಗ್ರೆ ಗ್ರಾಮದ ಶಾಲೆಗೆ ಗಣಪು ಮಾಸ್ತರನಾದ.

            ಮಾಸ್ತರಿಕೆ ದೊರೆತು ಜೀವನದ ದಾರಿ ಭದ್ರವಾದ ಬಳಿಕ ಗಣಪು ಮದುವೆಗೆ ಯೋಗ್ಯ ವರ’ ಎಂಬ ಭಾವನೆ ಜಾತಿ ಬಾಂಧವರಲ್ಲಿ ಮೂಡಿತು. ಈ ನಡುವೆ ಗುಂದಿಹಿತ್ತಲಿನ ಸಂಪರ್ಕದಿಂದ ದೂರವೇ ಉಳಿಯುತ್ತಿದ್ದ ಗಣಪು ತನ್ನ ಗೆಳೆಯ ರಾಕುವಿನ ಕುಟುಂಬಕ್ಕೆ ಸಹಜವಾಗಿಯೇ ಹತ್ತಿರವಾಗಿದ್ದ. ಹೀಗಾಗಿ ಗಣಪುವಿನ ಮದುವೆಯ ಜವಾಬ್ದಾರಿಯನ್ನು ರಾಕುವೇ ಕೈಗೆತ್ತಿಕೊಂಡು ಕನ್ಯಾ ಶೋಧಕ್ಕೆ ತೊಡಗಿದ.

            ರಾಕುವಿನ ಅಣ್ಣನ ಮಗಳು ತುಳಸಿ ಹನ್ನೆರಡರ ಎಳೆಯ ಮಗು. ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ರಾಕುವಿಗೆ ಅದೇ ವಯಸ್ಸಿನ ಸ್ವಂತ ಮಗಳೊಬ್ಬಳಿದ್ದಾಳೆ. ಅವಳು ಶಾಲೆ ಕಲಿಯುತ್ತಿಲ್ಲ. ಹಾಗಾಗಿ ರಾಕು ಅಣ್ಣನ ಮಗಳು ತುಳಸಿಯನ್ನು ಗಣಪುವಿಗೆ ಮದುವೆ ಮಾಡಲು ಸಂಕಲ್ಪ ಮಾಡಿದ. ಜಾತಿ ಬಾಂಧವರು ಕೂಡ “ಕಲಿತ ಹುಡುಗಿ ಯೋಗ್ಯವಧು” ಎಂದು ಅನುಮೋದನೆ ನೀಡಿದರು. ಹುಡುಗಿಯ ವಯಸ್ಸು ಚಿಕ್ಕದು ಎಂಬ ಸಣ್ಣ ಅಪಸ್ವರವೊಂದು ಕೇಳಿ ಬಂತಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಗಣಪು ಮತ್ತು ತುಳಸಿಯರ ಮದುವೆ ನಿಶ್ಚಯವಾಯಿತು.

            ಎಲ್ಲರಿಗಿಂತ ಹೆಚ್ಚು ಸಂತಸ ಸಂಭ್ರಮ ಪಟ್ಟವಳು ತುಳಸಿಯ ಅವ್ವ ನಾಗಮ್ಮಜ್ಜಿ. ಮಾಸ್ತರಿಕೆಯಲ್ಲಿರುವ ಅಳಿಯ ದೊರೆತಿರುವುದು ಅಂದಿನ ಕಾಲಕ್ಕೆ, ಅದರಲ್ಲಿಯೂ ಅಪರೂಪವಾಗಿ ಶಿಕ್ಷಣ ಸಂಸ್ಕಾರ ಪಡೆಯುತ್ತಿರುವ ಆಗೇರ ಜನಾಂಗದಲ್ಲಿ ಸಾಮಾನ್ಯ ಸಂಗತಿಯಾಗಿರಲಿಲ್ಲ. ಗಂಡ ಗತಿಸಿದ ಬಳಿಕ ಮಗಳ ಭವಿಷ್ಯವೊಂದನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಹಿಲ್ಲೂರಿಗೆ ಹೊರಟು ಬೇಸಾಯಕ್ಕೆ ಬಯಸಿದ ನಾಗಮ್ಮಜ್ಜಿ ಅಲ್ಲಿಯ ವೈಫಲ್ಯದಿಂದಾಗಿ ಮರಳಿ ನಾಡುಮಾಸ್ಕೇರಿಗೆ ಬಂದಿದ್ದಳು. ಇಲ್ಲಿ ಕೂಲಿ ಮಾಡುತ್ತ ಮಗಳನ್ನು ಮತ್ತೆ ಶಾಲೆಗೆ ಸೇರಿಸಿದ್ದಳು. ಅಂಥ ಛಲಗಾರ್ತಿಯಾದ ಹೆಂಗಸಿಗೆ ಮಾಸ್ತರನೊಬ್ಬ ಅಳಿಯನಾಗುತ್ತಾನೆ ಎಂಬುದೇ ಸ್ವರ್ಗದಂಥ ಖುಷಿಯ ಸಂಗತಿ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದೇ ಸಂಕಲ್ಪ ಮಾಡಿದಳು.

            ಲಂಕೇಶರು ಹೇಳಿದ ಹಾಗೆ ಬನದ ಕರಡಿಯಂತೆ ನಾಗಮ್ಮಜ್ಜಿ ಅಕ್ಕಿ, ಬೆಲ್ಲ, ಬಾಳೆ, ಹಲಸು, ಬಾಳೆಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದಳು. ಹಿಲ್ಲೂರಿನಂಥ ಬೆಟ್ಟದಲ್ಲಿ ಬೇಸಾಯ ಮಾಡಿ ಬಂದ ದುಡಿಮೆಯ ಅನುಭವ ಅವಳದು. ಅದಾಗಲೇ ಅಲ್ಲಿಯ ನೆಂಟರೆಲ್ಲ ಭತ್ತ, ಕಬ್ಬು ಬೆಳೆಯುತ್ತ, ಬೆಲ್ಲದ ಕೊಡಗಳನ್ನೂ, ಅಕ್ಕಿಮೂಡೆಗಳನ್ನು ದಾಸ್ತಾನು ಮಾಡುವ ಹಂತ ತಲುಪಿದ್ದರು. ನಾಗಮ್ಮಜ್ಜಿ ಸ್ವತಃ ಹಿಲ್ಲೂರಿಗೆ ಹೋಗಿ ಅಕ್ಕಿ, ಬೆಲ್ಲ, ಬಾಳಿಗೊನೆ, ಹಲಸು ಇತ್ಯಾದಿಗಳನ್ನು ಸಾಕು ಸಾಕೆಂಬಂತೆ ಸಂಗ್ರಹಿಸಿ ಅವುಗಳನ್ನು ದೋಣಿಯಲ್ಲಿ ತುಂಬಿ ಗಂಗಾವಳಿ ನದಿಯ ಮೂಲಕವೇ ಊರಿಗೆ ಸಾಗಿಸಿದಳು. ಹಿಲ್ಲೂರಿನ ಎಲ್ಲ ಜಾತಿಬಂಧುಗಳಿಗೆ ಮದುವೆಗೆ ತಪ್ಪದೇ ಬರುವಂತೆ ವೀಳ್ಯ ನೀಡಿದ್ದಲ್ಲದೆ, ಊರಿಗೆ ಬರುತ್ತ ನದಿಯ ದಂಡೆಗುಂಟ ಇರುವ ಗುಂಡಬಾಳಾ, ಮೊಗಟಾ, ಸಗಡಗೇರಿ, ಅಗ್ಗರಗೋಣ ಮುಂತಾದ ಊರುಗಳ ಒಳಹೊಕ್ಕು ನೆಂಟರಿಷ್ಟರ ಪ್ರತಿಯೊಂದು ಮನೆಯಲ್ಲೂ ಅಳಿಯ ಮಾಸ್ತರನಿದ್ದಾನೆ’ ಎಂದು ಅಭಿಮಾನದಿಂದ ಹೇಳಿಕೊಂಡು ವೀಳ್ಯ ನೀಡಿ ಬಂದಳು.

            ನಾಡುಮಾಸ್ಕೇರಿ ಮತ್ತು ಆಸುಪಾಸಿನ ಎಲ್ಲ ಜಾತಿ ಬಂಧುಗಳನ್ನು, ಪರಜಾತಿಯ ಹಿತೈಷಿಗಳನ್ನು ಕರೆಸಿಕೊಂಡು ಅದ್ದೂರಿಯಾದ ಹಂದರದಲ್ಲಿ ಮಗಳನ್ನು ಗಣಪು ಮಾಸ್ತರನಿಗೆ ಧಾರೆಯೆರೆದ ನಾಗಮ್ಮಜ್ಜಿ, ತಂದೆಯಿಲ್ಲದ ಕೊರತೆಯನ್ನೇ ತೋರಗೊಡದ ಚಿಕ್ಕಪ್ಪ ರಾಕು, ತುಳಸಿಯನ್ನು ದಾಂಪತ್ಯಜೀವನದ ಹೊಸ್ತಿಲಲ್ಲಿ ನಿಲ್ಲಿಸಿದರು. ಹಿರಿಯರ ಸಂಭ್ರಮ ಸಡಗರಗಳನ್ನು ಬೆರಗುಗಣ್ಣುಗಳಿಂದ ನೋಡುವುದನ್ನು ಬಿಟ್ಟರೆ ಹನ್ನೆರಡರ ಹರೆಯದ ಮುಗ್ಧ ತುಳಸಿಗೆ “ವಿವಾಹ ಏನು? ಏಕೆ?” ಎಂಬ ಅರ್ಥವೂ ತಿಳಿದಿರಲಿಲ್ಲ.

            ನಾಡುಮಾಸ್ಕೇರಿಯಿಂದ ಗದ್ದೆ ಬಯಲಿಗೆ ಇಳಿದರೆ ಮಾರು ದೂರದಲ್ಲಿ ಸಿಗಬಹುದಾದ ವರನ ಮನೆಯಿರುವ ಗುಂದಿಹಿತ್ತಲಿಗೆ ಸೇರಬೇಕಾದ ದಿಬ್ಬಣ ನಾಗಮ್ಮಜ್ಜಿಯ ಸೂಚನೆಯ ಮೇರೆಗೆ ಹನೇಹಳ್ಳಿಯ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟು ಬಾವಿಕೊಡ್ಲ, ಬಂಕಿಕೊಡ್ಲ, ಹನೇಹಳ್ಳಿ, ಹೆಗ್ರೆಗಳಲ್ಲಿ ಹಾದು ನಡುವೆ ಸಿಕ್ಕ ಬಂಧುಗಳ ಮನೆಯಲ್ಲಿ ಆರತಿ ಆಶೀರ್ವಾದ ಸ್ವೀಕರಿಸುತ್ತಾ ಗುಂದಿಹಿತ್ತಲಿನ ವರನ ಮನೆಯನ್ನು ಪ್ರವೇಶಿಸುವಾಗ ನಡುರಾತ್ರಿ ಸಮೀಪಿಸಿತ್ತಂತೆ.

            ಹೀಗೆ ನಡೆಯಿತು ನಮ್ಮ ಅಪ್ಪ ಅಮ್ಮನ ಅದ್ದೂರಿ ಮದುವೆ.

********************************

One thought on “

Leave a Reply

Back To Top