ಮದರಂಗಿ (ಮೆಹೆಂದಿ)

ಮದರಂಗಿ (ಮೆಹೆಂದಿ)

ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ.

ಆಶಾ ಸಿದ್ದಲಿಂಗಯ್ಯ

ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ.

ಮದರಂಗಿ ತಯಾರಿಕೆ

ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ.

 ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ…

ಮದರಂಗಿ ಬ‍ಣ್ಣದ ಗುಟ್ಟು

ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು ಹಲವು ವಿಧಾನಗಳಿವೆ.

ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು.

ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು.

ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು.

ಔಷಧೀಯ ಗುಣ

ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು.

 ಗೋರಂಟಿಯ ಹೂವನ್ನು ಆವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ.

ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು.

ಗೋರಂಟಿಯ ಉಪಯೋಗಗಳು

ಅಂಗೈ ಅಂಗಾಲು ಉರಿ

ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು.

ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ

ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.

ಬಿಳಿ ಕೂದಲು ಕಪ್ಪಾಗಲು (ಬಾಲನೆರೆ)

ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ 25 ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು.

ಕಾಮಾಲೆಯಲ್ಲಿ

ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ 7 ದಿನಗಳು ಕುಡಿಯುವುದು.

ಮೂಲವ್ಯಾಧಿಯಲ್ಲಿ

ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು.

ತಲೆ ಸುತ್ತು

ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು.

ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ

ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು.

ಬೆವರು ಸೆಲೆ

ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು.

ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ

ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. 20ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸರಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. 2ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು.

ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ

ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು.

ಮದರಂಗಿ ಕೈಯ ಮೇಲೆ ಹೇಗೆ ರಂಗು ಮೂಡಿಸುತ್ತದೆಯೋ ಹಾಗೆಯೇ ಪ್ರಾಕೃತಿಕ ಔಷಧವು ಹೌದು..

ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ…



*******************

Leave a Reply

Back To Top