ಗಜಲ್

ಗಜಲ್

pink heart multicolored

ಮರುಳಸಿದ್ದಪ್ಪ ದೊಡ್ಡಮನಿ

ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿ
ಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ

ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕು
ಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ

ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆ
ಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ

ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದು
ಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ


ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿ
ನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ

******************************************

Leave a Reply

Back To Top