ಅಂಕಣ ಬರಹ

ರಂಗರಂಗೋಲಿ-5

ಪಾತ್ರೆ ತುಂಬಿದ ಇನ್ನೆರಡು

ಪಾತ್ರಗಳು

ಪೂರ್ಣ… ಪೂ..ರ್ಣ..

ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು.

ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು.

ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.

 ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. ಪುಟ್ಟ ಆಮ್ಲೇಟಿನ ತುಂಡು ಆ ಕಿಟಕಿಯ ಸಂದಿನಿಂದ ಹೊರಬರುತ್ತಿತ್ತು. ತಾನು ಬಾಯಿ ತೆರೆದು ನನಗೆ “ಆಂ..” ಎನ್ನುತ್ತಿದ್ದರು. ನನ್ನ ಬಾಯಿಗೆ ಅವರ ಪಾಲಿನ ಆಹಾರ. ನಿನ್ನ ಅಜ್ಜಿಗೆ ಹೇಳಬೇಡ. ಇದೆಲ್ಲ ತಿಂದರೆ ಅವಳು ಬಯ್ಯಬಹುದು. ನಾನು ಬಾಯಿ ಒರೆಸಿ ಆ ಹೊಸ ರುಚಿಗೆ ತವಕಿಸುತ್ತಿದ್ದೆ. ಒಂದು- ಎರಡು ತುಂಡು ನನಗೆ. ಉಳಿದದ್ದು ಅವರಿಗೆ. ಜೊತೆಗೆ ಅವರ ಬಳಿ ಒಂದು ಪಾರದರ್ಶಕ ಗ್ಲಾಸ್. ಅದರಲ್ಲಿ ಎಂತದೋ ಪಾನೀಯ. ತುಸು ಘಾಟು ವಾಸನೆ. ಸಂಜೆಗೆ ಅವರ ಆಹಾರ ಅಷ್ಟೆ ಇದ್ದ ಹಾಗೆ ನೆನಪು. ಮತ್ತೆ ಮೌನಿಯಾಗಿ ತನ್ನ ಕೊಠಡಿ ಸೇರುತ್ತಿದ್ದರು.

Wallpaper : blue, performing arts, stage, entertainment, dancer, light,  musical theatre, performance art, scene, drama, darkness, acting, fun,  opera, event, girl, choreography, concert dance 3971x2642 - - 905808 - HD  Wallpapers - WallHere

ಅಜ್ಜಮ್ಮನ ವಠಾರದ ಮತ್ತೊರ್ವ ಅಜ್ಜಿಯೇ ಅವರು. ನನ್ನ ಪ್ರೀತಿಯ ಸಣ್ಣಜ್ಜಿ. ಬಾಲ್ಯದಲ್ಲಿ ಸಿಹಿ ಅನುಬಂಧಗಳನ್ನು ಜೋಡಿಸಿದ ಹಿರಿ ಮನಸ್ಸುಗಳು ಅದೆಷ್ಟೋ ಇದ್ದವು. ಅವರಲ್ಲಿ ಈ ಸಣ್ಣಜ್ಜಿಯೂ ಒಬ್ಬರು.

ಆ ವಠಾರ ನನ್ನ ನಾಟಕದ ಅವ್ಯಕ್ತ ಪಾಠಶಾಲೆಯಾಗಿತ್ತು.

ಅಜ್ಜಮ್ಮ ಅನ್ನುತ್ತಿದ್ದರು: ನನ್ನ ಖಾಸ ತಂಗಿಯಲ್ಲ,ಆದರೆ ಅವಳು ತಂಗಿ. ಅವಳ ಜವಾಬ್ದಾರಿ ನನ್ನದು”  ಈ ಸಣ್ಣಜ್ಜಿ ಅಜ್ಜಮ್ಮನಷ್ಟು ಮಾತನಾಡುವವರಲ್ಲ. ಮೌನಿ. ಆ ಉದ್ದದ ಮನೆಯ ಮುಕ್ತಾಯ ಹಂತದಲ್ಲಿ ಇರುವ ಕೋಣೆಯಲ್ಲಿ ವಾಸ. ಎದುರು ಭಾಗಕ್ಕೆ ಬರುವುದೇ ಕಮ್ಮಿ. ಹಿತ್ತಲ ಬದಿ ಇರುವ ಬಾಗಿಲಿನ ಸಮೀಪ ಮನೆಯ ಒಳಗಡೆ ಒಂದು ಸಿಮೆಂಟಿನ ಕುರ್ಚಿಯ ತರಹ ಇತ್ತು ಅದಕ್ಕೆ ಹೊಂದಿಕೊಂಡಂತೆ ಮರಗಳ ದಳಿ ಇರುವ ಉದ್ದನೆಯ ಕಿಟಕಿ. ಅಲ್ಲಿ ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಹೊತ್ತಿಗೆ  ಬಂದು ಕೂರುತ್ತಿದ್ದರು. ಕೈಯಲ್ಲಿ ಒಂದು ಪುಸ್ತಕ. ಯಾವ ಪುಸ್ತಕ, ಯಾವ ವಿಷಯಗಳ ಬಗ್ಗೆ ಅವರ ಆಸಕ್ತಿ ನನಗೆ ತಿಳಿಯುತ್ತಿರಲಿಲ್ಲ. ಬಹುಶಃ ಯಾರಿಗೂ ತಿಳಿದಿರಲಿಲ್ಲ. ಆ ಪುಸ್ತಕಗಳು ಅವರ ಕೋಣೆಯೊಳಗೆ ಇರುತ್ತಿದ್ದವು. ಆ ಕೋಣೆ ಆ ದೊಡ್ಡ ಮನೆಯೊಳಗಿನ ಅವರ ಮನೆ.

ಅಜ್ಜಮ್ಮನ ಪ್ರತಿಯೊಂದು ಚರ್ಯೆ ಅನಾವರಣಗೊಂಡು ಕಣ್ಣೆದುರು ಕಾಣುತ್ತಿದ್ದರೆ ಇವರು ಎಲ್ಲ ವಿಷಯಗಳಲ್ಲೂ ಅಂತರ್ಮುಖಿ. ಸಣ್ಣಜ್ಜಿಯ ಕೋಣೆಯೊಳಗೆ ಹಗಲಲ್ಲೂ ಮಂದ ಬೆಳಕು. ನಾನು ಅಂಜಿಕೊಂಡು ಒಳಗೆ ಇಣುಕುತ್ತಿದ್ದೆ.  ಅವರು ಆ ಅರೆಕತ್ತಲಿನ ಕೋಣೆಗೆ ಇರುವ ಒಂದು ಕಿಟಕಿಯ ಬಳಿ ಕೂತಿರುತ್ತಿದ್ದರು. ತಿಂಡಿ,ಊಟ ಅಲ್ಲೇ. ತಟ್ಟೆಯಲ್ಲಿ ನೀರು ಕೊಡಬೇಕು. ಅಲ್ಲೇ ಕೈ ತೊಳೆಯುವುದು. ನಾನು ಅಡಗಿಕೊಂಡು ಅವರ ಚರ್ಯೆಗಳನ್ನು ಗಮನಿಸುತ್ತಿದ್ದೆ.  ಏನೋ ಯೋಚನೆ ಮಾಡುವ ರೀತಿ ಕೂತಿರುತ್ತಿದ್ದರು. ನಂತರ ಅಲ್ಲೇ ಓದು. ಪುಟ್ಟದೊಂದು ಗೋಡೆಗೆ ಹೊಂದಿಕೊಂಡ ಕಪಾಟು. ಅದರಲ್ಲೇ ಅವರ ಪುಸ್ತಕ,ಪೌಡರ್ ಡಬ್ಬ, ಬಿಳೀ ಪುಟ್ಟ ಡಬ್ಬದಲ್ಲಿ ಪೊಂಡ್ಸ ಕ್ರೀಂ.  ಯಾವುದೂ ಹೊರ ಬಾರದು.

ಅವರ ಊಟವೂ ಅಷ್ಟೆ ಮಾತಿಗಿಂತಲೂ ಮಿತ. ಬರೀ ಒಂದು ಮುಷ್ಠಿ ಅನ್ನ,ಒಂದು ಲೋಟ ಹಾಲು,ಒಂದಿಷ್ಟು ಪಲ್ಯ. ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಅವರಾಗಿ ಊಟದ ಬಗ್ಗೆ ವಿಚಾರಿಸಿದ್ದು ಕಂಡಿಲ್ಲ. ಬೆಳಗ್ಗೆ ಬೇಗನೆ ಸ್ನಾನ. ಅವರ ದೇವರ ಪೂಜೆಯೂ ಬಹಿರಂಗವಾಗಿ ಕಾಣುತ್ತಿರಲಿಲ್ಲ. ಭಜನೆ,ಹಾಡು ಹಾಡಿದವರಲ್ಲ. ಅವರ ಮನೆಗೆ ಬಹಳಷ್ಟು ಜನ ಬರುತ್ತಿದ್ದರು. ಅಜ್ಜಮ್ಮ ಅವರೊಡನೆ, ಮಾತು ಚರ್ಚೆ ನಡೆಸುತ್ತಿದ್ದರು. ಸಣ್ಣಜ್ಜಿ ಯಾವುದರಲ್ಲೂ ಪಾಲ್ಗೊಂಡ ನೆನಪಿಲ್ಲ. ಭೇಟಿಗೆ ಬಂದವರೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು.

ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ.

ಅಜ್ಜಮ್ಮನ ಜೊತೆ ಮಾತು ಮೀರಿ ನಾನು ಸಣ್ಣಜ್ಜಿ ಬಳಿ ಹೋಗಲು ಎದ್ದರೆ ಗದರುತ್ತಿದ್ದರು. ಅವಳು ಯಾಕೆ? ಅವಳಿಗೆ ಗಂಡೂ ಬೇಡ,ಹೆಣ್ಣೂ ಬೇಡ.  ಸಣ್ಣಜ್ಜಿಯ ಪುಸ್ತಕಗಳು, ಅವರ ಕಣ್ಣಲ್ಲಿ ಒಸರುವ ವಾತ್ಸಲ್ಯ ಅದೊಂದು ಅಮೂರ್ತ ಭಾವ ನಿಧಿಯನ್ನು ದೇಣಿಗೆ ನೀಡಿತ್ತು. ಮುಂದೆ ನಾಟಕಗಳಲ್ಲಿ ರಾಮಾಯಣದ ಶಬರಿ, ರಾಮಾಶ್ವಮೇಧದ ಊರ್ಮಿಳಾ, ಮಂದಾರ ರಾಮಾಯಣದ ಅಹಲ್ಯೆ ಪಾತ್ರಗಳು ಮನಸ್ಸಿನಲ್ಲಿ ಚಿತ್ರಿತಗೊಂಡಾಗ ಆ ಪಾತ್ರದ ಮೂರ್ತ ರೂಪದಂತೆ ಅಯಾಚಿತವಾಗಿ ಸಣ್ಣಜ್ಜಿಯ ಕಾಯ ನಿಲ್ಲುತ್ತಿತ್ತು. ಅವರೂ ಯಾರದ್ದೋ ನಿರೀಕ್ಷೆಯಲ್ಲಿದ್ದರೇ ಎಂಬ ಪ್ರಶ್ನೆಯಿಂದ ಈಗಲೂ ಮನಸ್ಸು ತಳಮಳಿಸುತ್ತದೆ.

ಈಗ ಅನಿಸುತ್ತದೆ. ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ. ತಪಸ್ವಿನಿಯಂತೆ ಬದುಕಿದರು. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ. ನನ್ನ ಬಾಳ ರಂಗಸ್ಥಳದಲ್ಲಿ ಕಂಡ ಅಪರೂಪದ ಪಾತ್ರ.

ಅದೊಂದು ದಿನ ಮಲಗಿದ್ದಲ್ಲಿಯೇ ಕಾಯ ತೊರೆದಿದ್ದರು. ನಂತರದ ದಿನಗಳಲ್ಲಿ ನನ್ನೊಳಗೊಂದು ಭಯ ಹುಟ್ಟಿಕೊಂಡಿತ್ತು. ಅಡುಗೆ ಮನೆ ಹೋಗಬೇಕಾದರೆ ಅವರ ಕೊಠಡಿ ದಾಟಿ ಹೋಗಬೇಕಿತ್ತು. ಬೇಡವೆಂದರೂ ದೃಷ್ಟಿ ತೆರೆದ ಆ ಕೊಠಡಿಯತ್ತ ಓಡುತ್ತಿತ್ತು. ಆ ಪುಟ್ಟ ದೇಹ ಅಲ್ಲಿ ಇದ್ದ ಹಾಗೆ ಅನಿಸಿ ಗಾಬರಿಗೊಳ್ಳುತ್ತಿದ್ದೆ. ಅಜ್ಜಮ್ಮ ಏನಾದರೂ ತರಲು ಹೇಳಿದರೆ ಅಲ್ಲಿಯವರೆಗೆ ಸಹಜವಾಗಿ ಬಂದರೆ ನಡಿಗೆ ನಿಲ್ಲುತ್ತಿತ್ತು. ಮನಸ್ಸಿನಲ್ಲಿ ದೇವರ ನಾಮಸ್ಮರಣೆಯೊಂದಿಗೆ ಕಣ್ಣುಮುಚ್ಚಿ ಓಟದ ನಡಿಗೆಯಲ್ಲಿ  ಆ ಕೊಠಡಿ ದಾಟುತ್ತಿದ್ದೆ.

 ಆ ಮನೆಯಲ್ಲಿದ್ದ ಮೂರನೆಯವರೇ ಹೆಣ್ಣು ರೂಪದ ಗಂಡು ಪಾತ್ರದ ವತ್ಸಲ ಚಿಕ್ಕಿ. ಅವರು ನಡೆದಾಡುವ ಶೈಲಿಯೂ ಹಾಗೆ. ಉದ್ದಕ್ಕಿದ್ದರು. ಎದೆಸೆಟೆಸಿ ನಡೆದಂತೆ ನಡೆಯುತ್ತಿದ್ದರು. ದಪ್ಪ ಸ್ವರ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಮ್ಮ ಬಳಿ ಇದ್ದ ಕೆಜಿಗಟ್ಟಲೆ ಬಂಗಾರ, ನಗದು ಎಲ್ಲ ಗಂಟು ಕಟ್ಟಿ ಗಾಂಧೀಜಿಯವರನ್ನು ಭೇಟಿ ಮಾಡಿ ಅವರಿಗೆ ಒಪ್ಪಿಸಿದ್ದರಂತೆ.

ತನಗಿಷ್ಟವಾದಾಗ ತಿಂಡಿ, ಇಷ್ಟವಾದರೆ ಊಟ. ಯಾರನ್ನೂ ಕೇಳಿ ಉಪಚರಿಸಿಕೊಂಡವರಲ್ಲ. ಬೇಕಾದಾಗ ಅಡುಗೆ ಮನೆಗೆ ನುಗ್ಗಿ ಪಟಪಟ ಸದ್ದು ಮಾಡಿ ತನಗಿಷ್ಟವಾದುದ್ದನ್ನು ತಯಾರಿಸಿ ಉಣ್ಣುತ್ತಿದ್ದರು. ಮನೆಯೊಳಗೂ ಸ್ಲಿಪ್ಪರ್ ಚಪ್ಪಲು ಹಾಕಿ ಓಡಾಟ. ದಿನದಲ್ಲಿ ಮೂರು ನಾಲ್ಕು ಸಲ ಉಡುಪು ಬದಲಿಸುತ್ತಿದ್ದರು. ಎಲ್ಲವೂ ಶಿಸ್ತುಬದ್ಧ. ಬೆಳಗ್ಗೆದ್ದು ಎಲ್ಲಿಗೋ ಹೋಗುತ್ತಿದ್ದರು. ಥಟ್ಟೆಂದು ಪ್ರತ್ಯಕ್ಷವಾಗುತ್ತಿದ್ದರು.

ಏನನ್ನೋ ಹೇಳಲಿರುವಂತೆ ಸದಾ ತುಟಿಗಳ ಚಲನೆ. ಖಾದಿ ಉಡುತ್ತಿದ್ದರು. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಮನಸ್ಸಾದರೆ  ದೇವಾಲಯಕ್ಕೆ ಹೊರಡುತ್ತಿದ್ದರು. ಅಗೆಲ್ಲ ನನ್ನ ಕರೆದುಕೊಂಡು ಹೋಗುವುದು. ಎದುರಾದ ಗಿಡ, ಮರ, ಕಲ್ಲು ಎಲ್ಲದಕ್ಕೂ ನಮಸ್ಕರಿಸುತ್ತಿದ್ದರು. ಕಾಲಿಗೆ ಕಲ್ಲು ಎಡವಿದರೆ ಆ ಕಲ್ಲಿಗೆ ಎರಡೂ ಕೈಗಳನ್ನು ಬಾಗಿಸಿ ನಮಸ್ಕರಿಸುತ್ತಿದ್ದರು.

 “ಎಲ್ಲದರೊಳಗೂ ದೇವರಿದ್ದಾನೆ”

ಸ್ವಗತದಂತೆ ಮಾತನಾಡುತ್ತಿದ್ದರು. ನನ್ನ ಕೈ ಹಿಡಿದೇ ಇರುತ್ತಿದ್ದರು. ಪ್ರಹ್ಲಾದ ಕಥೆ ಇವರೊಳಗಿಂದಲೇ ಚಿಗುರಿದಂತೆ. 

ನಾನು ಬಹಳ ಕಾಲ ಅವರ ಈ ಅಭ್ಯಾಸ, ಹವ್ಯಾಸ ನನ್ನೊಳಗೆ ಇಳಿಸಿಕೊಂಡು ಅನುಸರಿಸುತ್ತಿದ್ದೆ. ವ್ಯಕ್ತಿಯ ಹಾವ ಭಾವದ ಅನುಕರಣೆ, ಸ್ವಭಾವದ ಅನುಕರಣೆ ಅಭಿನಯ ಮಂಟಪದ ಕಂಭಗಳು ತಾನೇ.

ರಂಗದ ರಂಗೋಲಿಯೇ ಪ್ರೀತಿ,ತನ್ನಯತೆಯಿಂದ ನಮ್ಮನ್ನು ಸಮೀಕರಿಸಿ ಸಮರ್ಪಿಸಿಕೊಳ್ಳುವ ದೈವೀಕತೆ. ಪ್ರತೀ ಒಂದರ ಸೂಕ್ಷ್ಮತೆ, ಆಗುಹೋಗುಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ಎದೆಗಿಳಿಸಿಕೊಳ್ಳುವ ಜಾದೂ. ಅದರ ಮೊದಲ ಅಕ್ಷರಾಭ್ಯಾಸ ಬಾಲ್ಯ.  ನೆನಪಿಗೆ ತಾಲೀಮು, ಉಸಿರಿಗೆ ರಾಗ, ಮಾತಿಗೆ ಕೌಶಲ್ಯ, ದೇಹದ ಚಲನೆ, ಚೈತನ್ಯ ಎಲ್ಲವನ್ನೂ ನಿರಾಳತೆಯಿಂದ ಸ್ವೀಕರಿಸಲು ವೇದಿಕೆ ಕಟ್ಟಿದ್ದರು ಆ ಮೂವರು ದೇವಕನ್ನಿಕೆಯರು.

ಅಜ್ಜಮ್ಮ ಹಾಡಿಸಿದ ಹಾಡುಗಳು, ಪ್ರಶ್ನೋತ್ತರಗಳು, ನೃತ್ಯ, ವ್ಯಕ್ತಿಗಳ ಮಾತು, ನಡೆಯ ಅನುಕರಣೆ ಎಲ್ಲವೂ ನನ್ನೊಳಗೆ ಒಬ್ಬ ಕಲಾವಿದೆ ಅಂಕುರಿಸಲು,ರಂಗದಲ್ಲಿ ಕಾಣಿಸಲು ದೀವಿಗೆಯಾಗಿ ಕಂಡಿದೆ.

 ಬದುಕಿನ ಹಲವು ಅವಸ್ಥೆಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆ ಮತ್ತು ಪ್ರತಿಯೊಂದು ಪಾತ್ರಗಳಲ್ಲಿ ಅನುಭವಿಸುವ ತಾದಾತ್ಮ್ಯ ಭಾವ ಮನಸ್ಸಿನೊಳಗೆ ಸದಾ ಹಸಿರಾಗಿದೆ.

***********************************************************************

ಪೂರ್ಣಿಮಾಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

2 thoughts on “

  1. ಅನುಭವ, ಮನಸ್ಸಾಗಿ, ನೆನಪಾಗಿ, ಅರಿವಿಗೆ ಬೀಜವಾಗಿ, ಚಿಂತನೆಗೆ ವಸ್ತುವಾಗಿ ಒಳಗೊಳಗೇ ಮಾಗಿ ವ್ಯಕ್ತಿಯ ಅಂತಃಸತ್ವವಾಗುವ ಪ್ರಕ್ರಿಯೆಯ ಮಗುಗಣ್ಣಿನ ಚಿತ್ರಣ. ಚಂದ ಮೂಡಿದೆ

  2. ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ.

    ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ.

    ಇವೆಲ್ಲ ಓದಿದಾಗ ಬಹಳಷ್ಟು ಸಾರಿ ಅನಿಸುತ್ತದೆ – ಇಂಥ ಅದೆಷ್ಟೋ ಜೀವಗಳು ನಮ್ಮ ನಡುವೆ ಬದುಕಿಯೂ ಬದುಕದಂತೆ ಇದ್ದು ಹೋದವಲ್ಲ… ಚಿಟ್ಟೆಗಳಾಗಬಹುದಾಗಿದ್ದವರು ಬದುಕಿನ ಬಣ್ಣಗಳನ್ನೇ ಕಾಣದೇ ಹಾಗೇ ಅಳಿದು ಹೋದರೇ?

    ಹೀಗೆ ಚಿಂತನೆಗೆ ಒರೆ ಹಚ್ಚುವುದೇ ನಿನ್ನ ಬರಹದ ಸಾರ್ಥಕತೆ.

Leave a Reply

Back To Top