ನಾನು ಓದಿದ ಪುಸ್ತಕ

ಮಣ್ಣಿಗೆ ಬಿದ್ದ ಹೂಗಳು

ಬಿದಲೋಟಿ ರಂಗನಾಥ್

ಅರುಣ್ ಕುಮಾರ್ ಬ್ಯಾತ

ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ…

ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ ಹೇಳಿದಂತಿದ್ದವು..,ಬುಡ್ಡಿಯ ಬೆಳಕ ಕಳೆದುಕೊಂಡು ಬೆಳದಿಂಗಳ ಬೆಳಕಲ್ಲಿ ಗೂಡಿರಿಸಿ ಮಲಗಿದ್ದ ತಣ್ಣನೆಯ ನೆನಪುಗಳನ್ನು ಕರ ಜೋಡಿಸಿ ಕಣ್ಣಲ್ಲಿ ಕರೆದ ದಾರಿಯಲ್ಲಿ ಬಂದ ಕಾವ್ಯಗಳಿಗೆ ಜೋಕಾಲಿ ಕಟ್ಟಿದೆ..! ನಾನು ನಾನಗದೇ ಭಾವ ಬಿಂದುವಿಗೆ ಹೂ ಮುಡಿಸಿ ಅಂದ ತುಂಬಿಕೊಂಡು ಕುಣಿಯುತ್ತಿದ್ದೆ…! ಅಲ್ವಾ…

ಕೊಂಚ ಶಾಂತಿ ಸಿಗಲು
ನಾ, ಅಡವಿಟ್ಟ ಮೊದಲ ಎಸಳ
ಕವಿತೆಯ ಸಾಲು ಕೊಡು
ಅದರಿಂದ ನೂರು ಭಾವ ತುಂಬಿದ
ಕವಿತೆ ಬರೆದು ಕೊಡುವೆ ನಾನು…!
ಕವಿಯೊಬ್ಬನ ಅಂತರಂಗದಲ್ಲಿ ಮಂಥನ ಮಾಡಬಲ್ಲ ಭಾವಯಾನ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲೂ ಕವಿಗಳು ತಮ್ಮದೇ ನಿಲುವಿನಲ್ಲಿ ಜಾತಿಯನ್ನು ನಿಂದಿಸುತ್ತಾರೆ, ಒಳಗಿನ‌ ಸೇಡ ನಿರ್ಭೀತಿಯಿಂದ ಹೊರಹಾಕುತ್ತಾರೆ..”ನಾನು ನಾನಗಿರುವುದಿಲ್ಲ , ನಿನ್ನ ಜಾತಿ ಯಾವುದೆಂದರೆ ಮೈ ಕೈ ಪರಚಿಕೊಳ್ಳುತ್ತೇನೆ ಎಂದು ಒಳಗಿನ‌ ಒಡಬಾಗ್ನಿಯನ್ನು ರಾಚುತ್ತಾರೆ…!

ಆಕಾಶ ಮಡಿಕೆ ತೂತು ಬಿದ್ದ ರಾತ್ರಿ ಕವಿತೆಯಲ್ಲಿ ಬಡತನದ ಅನಾವರಣ ತರೆದಿಟ್ಟಿದ್ದಾರೆ., ಹೌದು ನಾನು ಆ ತರಹದ ನಡುರಾತ್ರಿ ಬಡಿಸ ಮಳೆಗೆ ತಡಕಾಡಿದ ಅಪ್ಪನನ್ನು, ಬಡಿದಾಡಿದ ಅಮ್ಮನನ್ನು, ಮಿಸುಕಾಡದೇ ಕೂತ ನಮ್ಮನ್ನು ನಮಗೆ ನೆನಪಿಸಿದವು…ಅಸಹಾಯಕತೆಗೆ ಎಷ್ಟು ಸೇಡು…! ಅಂದು ತೊಟ್ಟಿಕ್ಕಿದ ಆ ತೂತಾದ ಸೂರಿನಲ್ಲಿ ಬಿದ್ದ ಹನಿಗಳ ಕಲರವ ಇನ್ನೂ ಕಿವಿಗಳಲ್ಲಿದೆ.. ಒಳಗೆ ನುಗ್ಗಿದ ನೀರು ಒಲೆಯ ಮೆದು ಮಾಡಿ ಎನ್ನುವಾಗ ಹಪಹಪಿಸಿದ ಹಸಿವು ಕಾಣುತ್ತದೆ…!

ಕಾಲದೊಟ್ಟಿಗೆ ಪ್ರೀತಿಯನ್ನು ಅದರ ಬದಲಾವಣೆಯಲ್ಲಿ ತನ್ನನ್ನೂ ತಿರುಗಿಸುತ್ತಾ ಕವಿ ನನ್ನಿಂದಿಲ್ಲದ ಕಾಲ ಎಂಬ ಕವಿತೆಯಲ್ಲಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.. ಸಾಲುಗಳು ಎಷ್ಟು ಚಂದ…, ” ಪ್ರೀತಿ ಬದುಕಿದ್ದ ಕಾಲದಲ್ಲಿ ಭಾವ ಸುರುಳಿಯಾಗಿತ್ತು, ಅಕ್ಕ ಪಕ್ಕದ ಗುಳ್ಳೆಯ ಹಂಗಿರಲಿಲ್ಲ ಮನಸ್ಸು ತಿಳಿಯಾಗಿತ್ತು…ಕದಡಿರಲಿಲ್ಲ…! ಕನಸುಗಳನ್ನು ಹಾರಿ ಬಿಟ್ಟಿದ್ದೇನೆ ಎಲ್ಲಿದ್ದರೂ ಹಿಡಿದುಕೋ ಎಂಬ ಸಾಲು ಎಷ್ಟು ಸತ್ಯವಾಗಿವೆ…! ಮೂಕ ಹಕ್ಕಿಯ ಮಾತು ಕವಿತೆಯಲ್ಲಿ ” ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ,‌ ನನಗೆ ನಾನೇ ಅರ್ಥವಾಗದ ಹಾಗೆ, ಸದ್ದು ಗದ್ದಲದ ನಡುವೆ ಒಬ್ಬನೇ ಕೂತು” ಎಂದು ಒಂಟಿತನದ ಸಂಕಟದಲ್ಲೇ ತನ್ನೊಳಗಿನ‌ ತನ್ನನ್ನು ಸಮಾಧಾನಿಸುತ್ತಾ ನೋಡುವ ಬಗೆಯ ಬರೆಯುತ್ತಾರೆ.

ಹೀಗೆ ಒಂದೈವತ್ತು ಕವಿತೆಗಳು ಈ ಪುಸ್ತಕದಲ್ಲಿವೆ, ಅವರೇ ಹೇಳುವಂತೆ ದಿಕ್ಕೆಟ್ಟವರ ಅಸಹಾಯಕರ ನಿರ್ಗತಿಕರ ಕೈ ಹಿಡಿದು ಮೇಲುತ್ತವ ಕವಿತೆಗಳು ಹೆಚ್ಚು ಕಿವಿ ತಟ್ಟುತ್ತವೆ.. ನೆಲದ ಜೀವಗಳ ಅಂತಃಕರಣ ಕವಿಯನ್ನು ಹೆಚ್ಚಾಗಿ ಕಾಡಿವೆ..ಬದುಕನ್ನೇ ಅಕ್ಷರಗಳಿಗೆ ಕಟ್ಟಿಕೊಟ್ಟ ಕವಿತೆಗಳು ನಮ್ಮವೇ ಎಂಬ ಹಳೆಯ ನೆನಪುಗಳ ಮತ್ತೆ ನೆನಪಿಸುತ್ತವೆ. ಹಳ್ಳಿ ದಾಟಿ ಕವಿತೆಗಳ ವಸ್ತು ಹೊರಗೆ ಹೋಗಿಲ್ಲ…! ಅಪ್ಪ ಅಮ್ಮ ಸಂಸಾರ ಬಡತನ, ಜಾತಿ, ಬಣ್ಣ, ಹಸಿವು ಅಸಹಾಯಕತೆ, ಹೊಟ್ಟೆ ಚುರುಕಿನ ಹೊಯ್ದಾಟಗಳ ಇಲ್ಲಿ ಕಾಣಬಹುದು..!

ಕವಿತೆ ಬರೆಯಲು ಹಪಹಪಿಸುವ ನಮಗೆ ಸಿಕ್ಕದ್ದನ್ನೇ ಗೀಚಾಡುವ ಸಮಯಕ್ಕೆ ಬರೆಯಲು ಇಷ್ಟು ನಮ್ಮವೇ ವಿಷಯ ಇದ್ದಾವಲ್ಲ ಎಂಬ ಅಚ್ಚರಿಯೂ ಈ ಪುಸ್ತಕ ಓದಿದ ಮೇಲೆ ಅನಿಸದೇ ಇರದು.. ಕವಿತೆಗಳಲ್ಲಿ ಕಣಬಹುದಾದ ಬಳಸಿದ ಪದಗಳಂತು ಅವರೆಕಾಯಿ ಸೊಗಡಿನಂತವು, ದಾರಿ ಬದಿಯ ಹೂಗಳ ಘಮದಂತವು, ಬಿದ್ದ ಗಾಯದ ಗುರುತಿನಂಥವು…! ಹಾಗೇ ನಮ್ಮನ್ನು ಮುಟ್ಟಿ ಹೋಗಿ ಮರೆಯಾಗಿ ಮತ್ತೆ ಬಂದು ಬಡಿದೆಬ್ಬಿಸುವಂತಹ ಪದಗಳ ಕೈ ಚಳಕವಿದೆ…!

ಓದುತ್ತಾ ನನ್ನ ಬಾಲ್ಯವೂ ಮರುಕಳಿಸಿತು. ಅಗಾಧ ಶ್ರೀಮಂತಿಕೆಗೆ ಬಡತನದ ಹಸಿವಿನ ನೋವು ಅರ್ಥವಾಗುವುದಿಲ್ಲ..ನಾವು ಹಸಿದವರು ಅನ್ನದ ಬೆಲೆಯೂ ಅಕ್ಷರಗಳ ಅಕ್ಕರೆಯೂ ನನ್ನ ಹಸಿವಿಗೆ ತುತ್ತನಿಟ್ಟು ಸಂತೈಸಿದವು… ಇಂತಹದ್ದೊಂದು ಪುಸ್ತಕ ಕೈಯಲ್ಲಿ ಇರಿಸಿದ ನಿಮಗೆ ಹೃದಯ ಪೂರ್ವ ಧನ್ಯವಾದಗಳು ಸರ್..ಮತ್ತಷ್ಟು ಮಣ್ಣಿನ‌ ಸೊಗಡಿನ ಪುಸ್ತಕಗಳು ನಮ್ಮೊಳಗೆ ಉಸಿರಾಡಲಿ…. ಪ್ರೀತಿಯಿಂದ
——————————–

Leave a Reply

Back To Top