ಅಪ್ಪನೊಡನೆ ಒಂದಿಷ್ಟು
ಮೋಹನ ಗೌಡ ಹೆಗ್ರೆ
ಒರಿಗೆಯವರೆಲ್ಲ ಬಾಲ್ಯಕ್ಕೆ
ಬಣ್ಣ ತುಂಬುವಾಗ ನನ್ನ
ಪಂಜರದ ಗಿಳಿಯಾಗಿ ಮಾಡಿದ ಸದಾ ನಾ ಶಪಿಸುವವ ನೀನಾಗಿದ್ದೆ
ಊರ ಜಾತ್ರೆಯಲಿ ಅಮ್ಮ
ಕೈ ಹಿಡಿದು ನಿಂತರೂ
ದೂರದ ಕಣ್ಣುಗಳ ಕಾವಲುಗಾರನಾದ
ನಿನ್ನ ಶಪಿಸುವವಳು ನಾನಾಗಿದ್ದೆ.
ಎಲ್ಲೋ ಯಾರೋ ಓಡಿಹೋದ
ಸುದ್ದಿಗೆಲ್ಲಾ ಸುಮ್ಮನೆ
ಮುಂದಾಲೋಚನೆಯಿಂದ
ಅಮ್ಮನ ಬೈಯುವಾಗ
ನಾ ಕಂಡ ನಕ್ಸಲೈಟ್ ನೀನಾಗಿದ್ದೆ….
ನಿನ್ನಿಷ್ಟದಂತೆ ಓದಿದೆ
ಕೆಲಸಕ್ಕೂ ಸೇರಿದೆ
ಇಷ್ಟು ವರ್ಷ ಬೆವರಿಳಿಸಿದ ನೀನು
ನಾ ಮೆಚ್ಚಿದ ಗಂಡಿಗೆ ನನ್ನ
ಒಪ್ಪಿಸಿದೆ…..
ಅಂದು ನಿನ್ನ ಕಣ್ಣಲ್ಲಿದ್ದ ಸಂತೃಪ್ತಿ
ಎಲ್ಲವನ್ನೂ ಒಂದೇ ನೋಟ
ಪ್ರೀತಿಯ ಕಣ್ಣೀರಲ್ಲಿ ಹೇಳಿದ
ಪಾಠೋಪಕರಣ ನನಗೆ
ಪ್ರಶ್ನಾರ್ಥಕವಾಗಿತ್ತು…
ಅಂದು ನೀನು ನನಗೆ
ಕ್ರೂರಿ, ಕೋಪಿಷ್ಟ, ಸ್ವಾರ್ಥಿ,
ಎಲ್ಲವೂ ಆಗಿದ್ದೆ..
ನಿನ್ನ ದ್ವೇಷಿಸಿ ತಿರಸ್ಕರಿಸಿದಾಗಲೆಲ್ಲ
ಅದೆಷ್ಟು ಕಣ್ಣೀರಿಟ್ಟಿರುವೆಯೋ
ಆದರೆ ಇಂದು ನಾನು
ತಾಯಿಯಾಗಿರುವೆ
ನನ್ನ ಮಗಳಿಗೆ ಮತ್ತೆ
ಕ್ರೂರಿಯಾಗಲು……