ಶರೀಫರ ನೆನೆಯುತ್ತಾ…


ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ

200ನೇ ವರ್ಷಾಚರಣೆ

ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ.
ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. ೨೦೧೯ ಅವರ ಜನನದ ದ್ವಿಶತಮಾನೋತ್ಸವ ವರ್ಷ.. ಯಾರೊಬ್ಬರಿಗೂ ಆ ನೆನಪಿಲ್ಲ. ಅಕ್ಕ ಅನುಪಮಾ (ಡಾ.ಎಚ್.ಎಸ್.ಅನುಪಮಾ) ಒಮ್ಮೆ ಈ ಕುರಿತು ಗಮನ ಸೆಳೆದರು.. ಅಷ್ಟೇ ಅಲ್ಲ, ತಮ್ಮ ಗಾಂಧಿ ೧೫೦ ಕಾರ್ಯಕ್ರಮದಲ್ಲಿ ಗಾಯಕರನ್ನು ಕರೆಸಿ ಶರೀಫರ ತತ್ವ ಪದಗಳನ್ನು ಹಾಡಿಸುವ ಮೂಲಕ ಅವರನ್ನು ನೆನೆಯುವ ಪ್ರಯತ್ನ ಮಾಡಿದರು. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನನ್ನನ್ನು ಅಪರಾಧಿ ಭಾವವೊಂದು ಸತಾಯಿಸತೊಡಗಿತು.. ಶರೀಫರ ನಾಡಲ್ಲೇ ಇದ್ದು ಏನೂ ಮಾಡಲಾರದವರಾದ ನಾವು ಉಪಕಾರಗೇಡಿ ಅಲ್ಲವೇ.. ಎಂಬ ಭಾವದಿಂದ ಹೊರಬರಲಾಗದೆ ಕೊನೆಗೆ ಸಮಾನ ಮನಸ್ಕರಲ್ಲಿ ಹಂಚಿಕೊಂಡಾಗ ಹುಟ್ಟಿದ್ದು ಶರೀಫ್ ಬಳಗ . ಅದು ದೀಪಾವಳಿ ಪ್ರತಿಪದೆಯ ದಿನವಾಗಿತ್ತು. ಆದಷ್ಟು ಬೇಗ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಯ್ತು.
ಒಂದೊಂದಾಗಿ ಕೆಲಸ ಆರಂಭಿಸಿದೆವು. ನಮಗಿದು ಮೊದಲ ಹೆಜ್ಜೆಯಾದ್ದರಿಂದ ಮನಸ್ಸು ಗೊಂದಲಗಳ ಗೂಡು.. ಎಲ್ಲವನ್ನೂ ಸರಿಸುತ್ತ ಸಾಗಿದಾಗ ಅಂತಿಮವಾಗಿ ರೂಪುಗೊಂಡ ಕಾರ್ಯಕ್ರಮ ಇದೇ ಶನಿವಾರ ದಿನಾಂಕ ೨೩/೧೧/೨೦೧೯ ರಂದು ಬನಹಟ್ಟಿಯಲ್ಲಿ ಜರುಗುವುದು.
ಈ ಪ್ರಯತ್ನವನ್ನು ಇನ್ನೂ ಬೇರೆ ಕಡೆಗಳಿಗೆ ಕೊಂಡೊಯ್ಯುವ ಹಂಬಲವೂ ಇದೆ.. ಅದೆಲ್ಲ ಕೂಡಿ ಬರಲು ಆಸಕ್ತರು ಮನಸ್ಸು ಮಾಡಬೇಕು.. ಜತೆಗೂಡಬೇಕು..

ಶರೀಫರ ಆಯ್ದ ೧೦ ಜನಪ್ರಿಯ ಗೀತೆಗಳನ್ನು ಗಾಯಕರು ಪ್ರಸ್ತುತ ಪಡಿಸುವರು. ಅದಕ್ಕೂ ಮುನ್ನ ಶರೀಫರ ಕುರಿತು ಸಂಕ್ಷೇಪವಾಗಿ ಮಾತು. ಪ್ರತಿಯೊಂದು ಗೀತೆಯನ್ನು ಆ ಗೀತೆಯ ಅರ್ಥ ವಿವರಣೆ ಹಿಂಬಾಲಿಸುವುದು. ನಮ್ಮದೇ ವಿಶಿಷ್ಟವಾದೊಂದು ರೀತಿಯಲ್ಲಿ ಸಂತರನ್ನು ನೆನೆಯುವ ಒಂದು ಪ್ರಯತ್ನ ಸಾಕಾರಗೊಳ್ಳುತಿರುವುದು ಹೀಗೆ..
ನೀವೂ ಬನ್ನಿ… ನಿಮ್ಮ ಬಳಗವನ್ನು ಕರೆ ತನ್ನಿ.. ಶರಣು ಶರಣಾರ್ಥಿ

ಚಂದ್ರ ಪ್ರಭ

ದಿನಾಂಕ:23-11-2019,ಶನಿವಾರ

ಸಮಯ:ಸಂಜೆ5.30

ಹಿರೇಮಠದ ಆವರಣ,ಬನಹಟ್ಟಿ

ಸರ್ವರಿಗೂ ಸ್ವಾಗತ


Leave a Reply

Back To Top