ರಾಮಕೃಷ್ಣ ಗುಂದಿ ಆತ್ಮಕತೆ–02
ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ
ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ.
ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ “ಗುಂದಿಹಿತ್ತಲ” ಎಂದೇ ಗುರುತಿಸುತ್ತಿದ್ದರು.
ನನಗೆ ಬುದ್ದಿ ಬಲಿತ ಸಂದರ್ಭದಲ್ಲಿ ನಾನು ಗುಂದಿಹಿತ್ತಲವನ್ನು ನೋಡಿದಾಗ ಎಂಟತ್ತು ತೆಂಗಿನ ಮರಗಳು ಗೊನೆಬಿಟ್ಟು ನಿಂತಿದ್ದವು. ಉಳಿದಂತೆ ಒಂದು ಅಮಟೆ ಮರ, ಎರಡು ಕರವೀರ ಹೂವಿನ ಗಿಡಗಳು, ಬೇಲಿಗುಂಟಿ ಹಾಲುಗಳ್ಳಿಯ ಗಿಡಗಳು ಇದ್ದವು. ತಲೆತಲಾಂತರದಿಂದ ಬಂದ ಮೂರು ಕುಟುಂಬಗಳಲ್ಲಿ ನಾನು ನನ್ನ ವಂಶವಾಹಿನಿಯ ಮೂಲವನ್ನು ಶೋಧಿಸಬೇಕಿತ್ತು…
ನಾನು ಮೊದಲ ಬಾರಿಗೆ ನೋಡಿದಾಗ ಗುಂದಿಹಿತ್ತಲಿನಲ್ಲಿ ಸುಕ್ರು , ವತ್ತು, ಬೇಡು ಎಂಬ ಹಿರಿಯ ಸಹೋದರರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಎರಡು ಪ್ರತ್ಯೇಕ ಮನೆಗಳಲ್ಲಿ ಅಲ್ಲಿ ನೆಲೆಸಿದ್ದರು. ಈ ಕುಟುಂಬಗಳಿಗೆ ಕಡ್ಲೆಮನೆತನ’ ಎಂಬ ಹೆಸರಿತ್ತು. ಬಹುಶಃ ಇವರ ಕುಟುಂಬದ ಹಿರಿಯರಲ್ಲಿ ಯಾರೋ ಕಡ್ಲೆ ಎಂಬ ಹೆಸರಿನವರಿದ್ದಿರಬೇಕು. ಅವನ ವಂಶಸ್ಥರೆಲ್ಲ ಕಡ್ಲೆಮನೆಮಂದಿ’ ಎಂದೇ ಗುರುತಿಸಿಕೊಂಡಿರಬಹುದು.
ಎರಡೂ ಕುಟುಂಬಗಳಲ್ಲಿ ನಾಲ್ಕು ನಾಲ್ಕು ಗಂಡು ಮತ್ತು ಹೆಣ್ಣು ಮಕ್ಕಳಿದ್ದು ತುಂಬಿದ ಮನೆತನವಾಗಿತ್ತು. ಗುಂದಿಹಿತ್ತಲ’ ಪಿತ್ರಾರ್ಜಿತ ಆಸ್ತಿಯೆಂಬುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಆದಾಯದ ಮೂಲವೇನೂ ಇರಲಿಲ್ಲ. ಎರಡೂ ಕುಟುಂಬಗಳ ಗಂಡಸರು ಹೆಂಗಸರೆಲ್ಲ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು, ಕಲ್ಲುಗಣಿಗಳಲ್ಲಿ ಕಲ್ಲು ತೆಗೆಯುವುದು, ನಾಡವರ ಮನೆಗಳಲ್ಲಿ ಕೃಷಿಕೂಲಿ ಇತ್ಯಾದಿ ಕೆಲಸಗಳಿಂದ ಹೊಟ್ಟೆ ಹೊರೆಯುತ್ತಿದ್ದರು. ಕುಚ್ಚಿಗೆ ಅಕ್ಕಿಯ ಗಂಜಿ ಇಲ್ಲವೆ ರಾಗಿ ಅಂಬಲಿ ಅವರ ಮುಖ್ಯ ಆಹಾರವಾಗಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳದಲ್ಲಿ ಗಾಳ ಹಾಕಿ ಅಥವಾ ಬಲೆ ಬೀಸಿ ಬಂದರೆ ಬುಟ್ಟಿ ಬುಟ್ಟಿ ತುಂಬ ಶಾಡಿ, ಕರ್ಶಿ, ಮಡ್ಲೆ, ಗರಗಟ್ಲೆ, ಏಡಿ, ಶೆಟ್ಲಿ ಇತ್ಯಾದಿ ಮೀನುಗಳನ್ನು ಹಿಡಿದು ತರುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲೂ ಗದ್ದೆ ಬೆಲಗುಗಳಲ್ಲಿ ಕೂಳಿ ಹಾಕಿ ಕೈಂಜಬ್ಬು’ಗಳನ್ನು ಹಿಡಿದು ತರುತ್ತಿದ್ದರು. ಹೀಗಾಗಿ ಮೀನು ಇತ್ಯಾದಿ ಹಣಕೊಟ್ಟು ಖರೀದಿಸುವ ತಾಪತ್ರಯ ಇರಲಿಲ್ಲ. ಶನಿವಾರ ಪನಿವಾರಗಳಲ್ಲಿ ನಾಡವರ ಹಿತ್ತಲಲ್ಲಿ ಅಥವಾ ಬೇರೆಲ್ಲಾದರೂ ಬೆಳೆದ ಕೆಸುವಿನ ಸೊಪ್ಪು, ನುಗ್ಗೆ ಸೊಪ್ಪುಗಳನ್ನು ತಂದು ಪುಡಿ ಹಾಕಿ ಗಂಜಿಯೊಟ್ಟಿಗೆ ಉಣ್ಣುತ್ತಿದ್ದರು.
ಮೂರು ಗುಂಟೆಯಷ್ಟಾದರೂ ಸ್ವಂತ ಆಸ್ತಿ ಹೊಂದಿದ ಕಡ್ಲೆಮನೆತನ ಎಂಬ ಬಿಂಕ ಒಂದುಕಡೆಯಾದರೆ ಕುಟುಂಬದ ಸದಸ್ಯರ ಸಂಖ್ಯೆಯ ಹೆಚ್ಚುಗಾರಿಕೆ ಇನ್ನೊಂದುಕಡೆ. ಒಟ್ಟಾರೆಯಾಗಿ ಸುತ್ತಲ ಗ್ರಾಮಗಳ ಇತರ ಆಗೇರರು ಕಡ್ಲೆಮನೆತನದ ಕುರಿತು ಹಗುರವಾಗಿ ಮಾತನಾಡಲು ಅಂಜುತ್ತಿದ್ದರು. ಇದರೊಡನೆ ಈ ಮನೆತನದ ಕುರಿತು ಒಂದಿಷ್ಟು ಭಯವೂ ಸೇರಿಕೊಳ್ಳಲು ಇನ್ನೊಂದು ಪ್ರಬಲ ಕಾರಣವೂ ಇತ್ತು. ಅದು ಕೋಳಿ ಅಂಕ.
ಕಡ್ಲೆ ಮನೆತನದ ಸುಕ್ರು ಮತ್ತು ಬೇಡು ಎಂಬ ಇಬ್ಬರೂ ಹಿರಿಯರಿಗೆ ಕೋಳಿ ಅಂಕದ ಹವ್ಯಾಸವಾಗಿತ್ತು. ಅಲ್ಲದೆ ಈ ಇಬ್ಬರೂ ಕೋಳಿಗಳ ಬಣ್ಣ ಮತ್ತು ಆಕಾರಗಳಿಂದಲೇ ಅವುಗಳ ಸಾಮರ್ಥ್ಯವನ್ನು ಅಳೆಯಬಲ್ಲ ಪ್ರತಿಭೆಯುಳ್ಳವರಾಗಿದ್ದರು. ಅವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ಮಾಡದೆ ತಮ್ಮ ಮಲಗುವ ಅಥವಾ ಅಡಿಗೆ ಕೋಣೆಯ ಒಂದು ಮೂಲೆಯಲ್ಲಿಯೆ ಅಂಕದ ಕೋಳಿಗಳನ್ನು ಕಟ್ಟಿ ಸಾಕುತ್ತಿದ್ದರು. ಹದವಾಗಿ ಬೆಳೆದ ಅಂಕದ ಕೋಳಿಗಳಿಗೆ ಹೋರಾಟದ ತರಬೇತಿ ನೀಡುವುದರಲ್ಲಿ ಅವುಗಳ ಕಾಲಿಗೆ ಕತ್ತಿಕಟ್ಟಿ ಬಿಡುವುದರಲ್ಲಿ, ಗಾಯಗೊಂಡ ಕೋಳಿಗಳ ಗಾಯಕ್ಕೆ ಹೊಲಿಗೆ ಹಾಕಿ ಉಪಚರಿಸುವುದರಲ್ಲಿ ಇಬ್ಬರೂ ನಿಪುಣರಾಗಿದ್ದರು. ಹೀಗಾಗಿ ಸುತ್ತಮುತ್ತ ಎಲ್ಲಿಯೇ ಅಂಕಗಳು ನಡೆಯಲಿ ಸುಕ್ರು ಮತ್ತು ಬೇಡು ಸಹೋದರರು ಅನಿವಾರ್ಯವಾಗಿದ್ದರು. ಅನ್ಯರು ತಮ್ಮ ಕೋಳಿಗಳನ್ನು ಅಂಕಕ್ಕೆ ಒಡ್ಡುವಾಗಲೂ ಇವರನ್ನೆ ಅವಲಂಬಿಸುತ್ತಿದ್ದರು. ಈ ಸಹೋದರರಲ್ಲಿ ಯಾರಾದರೊಬ್ಬರು ತಮ್ಮ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಬೆನ್ನು ನೇವರಿಸಿ ಬಿಟ್ಟರೆ ಅವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಅವರ ಈ ಬಗೆಯ ನಂಬಿಕೆಗೆ ಇನ್ನೂ ಒಂದು ಪ್ರಬಲ ಕಾರಣವೂ ಇತ್ತು. ಅದು ಏನೆಂದರೆ, ಇಬ್ಬರಿಗೂ ಇರುವ ಭೂತ ಬೆಂಬಲ:
ಸುಕ್ರು ಮತ್ತು ಬೇಡು ಸಹೋದರರು ಅಂಕದಲ್ಲಿ ಕೋಳಿಗಳನ್ನು ಒಡ್ಡುವ ಮುನ್ನ ಸ್ಮಶಾನದಲ್ಲಿ ಬಂಧಿಯಾಗಿರುವ ತಮ್ಮ ಮನೆತನದ ಹಿರಿಯರ ಪ್ರೇತಾತ್ಮಗಳನ್ನು ಜಾಗೃತಗೊಳಿಸಿ ಬರುತ್ತಿದ್ದರಂತೆ: ಕೋಳಿ ಅಂಕದ ಸೀಸನ್ ಆರಂಭವಾಗುವುದೇ ಗದ್ದೆ ಕೊಯ್ಲಿನ ಬಳಿಕ. ಇಷ್ಟು ಹೊತ್ತಿಗೆ ಅಂಕದ ಕೋಳಿಗಳೂ ಬೆಳೆದು ಯುದ್ಧಕ್ಕೆ ಸಜ್ಜಾದ ಯೊಧರಂತೆ ನಿಗುರಿ ನಿಂತಿರುತ್ತಿದ್ದವು. ಅಂಥ ಸಮಯದಲ್ಲಿ ಸುಕ್ರು ಮತ್ತು ಬೇಡು ಸಹೋದರರು ಅಗ್ರಗೋಣದ ಹೊಲೆವಟ್ರ ಎಂಬ ಗ್ರಾಮ ದೇವತೆಯಲ್ಲಿ ಬಾಗಿಲುಕಟ್ಟಿ’ ಹರಕೆ ಮಾಡಿಕೊಂಡು ಸ್ಮಶಾನದಲ್ಲಿರುವ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಂಕದಲ್ಲಿ ಕೋಳಿ ಗೆದ್ದು ಬಂದರೆ, ಸೋತ ಕೋಳಿಯ ಮಾಂಸವನ್ನು ಬಂಧು ಬಳಗದೊಂದಿಗೆ ಹಂಚಿ ತಿನ್ನುವ ಮುನ್ನ ಭಯ ಭಕ್ತಿಯಿಂದ ಪ್ರೇತಾತ್ಮಗಳಿಗೆ ಮೀಸಲು ನೀಡುತ್ತಿದ್ದರು. ಈ ರಹಸ್ಯವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಹೇಗೋ ತಿಳಿದುಕೊಂಡಿದ್ದರು. ಹೀಗಾಗಿ ಜಾತಿಬಾಂಧವರಾದ ಆಗೇರರು ಮಾತ್ರವಲ್ಲದೆ ಕೋಳಿ ಅಂಕದಲ್ಲಿ ಆಸಕ್ತಿಯಿರುವ ಹಾಲಕ್ಕಿಗಳು, ನಾಮಧಾರಿಗಳು, ನಾಡವರೆಲ್ಲಾ ಕಡ್ಲೆ ಮನೆತನದ ಈ ಸಹೋದರರನ್ನು ಪರಿಣತ “ಜೂಂಜುಕಾರ” ರೆಂದು ವಿಶಿಷ್ಟವಾದ ಗೌರವದಿಂದ ಗುರುತಿಸುತ್ತಿದ್ದರು.
ಬೇಡು ಮತ್ತು ಸುಕ್ರು ಇಬ್ಬರಿಗೂ ಕೋಳಿ ಅಂಕದ ಕಾರಣದಿಂದ ಸಿಕ್ಕ ಸಾಮಾಜಿಕ ಗೌರವ ಮತ್ತು ಪಿತ್ರಪ್ರೇತಾತ್ಮದ ಬೆಂಬಲದ ನಂಬಿಕೆ ಯಿಂದಾಗಿ ನಮ್ಮ ಆಗೇರ ಜಾತಿಯಲ್ಲಿ ನಮ್ಮ ಕಡ್ಲೆಮನೆತನಕ್ಕೆ ಒಂದಿಂಚು ಹೆಚ್ಚಿನ ಗೌರವವಿತ್ತು. ಅಗ್ರಗೋಣ, ಹೆಗ್ರೆ, ನಾಡುಮಾಸ್ಕೇರಿ ಮೂರು ಗ್ರಾಮಗಳ ಆಗೇರರೊಡನೆ ಗದ್ದೆ ಬಯಲ ನಡುವಿನ ಗುಂದಿಹಿತ್ತಲದ ಕಡ್ಲೆಮನೆ’ ಕುಟುಂಬದ ಸಂಬಂಧ ಸಹಜವಾಗಿಯೇ ಸೌಹಾರ್ದದಿಂದ ಕೂಡಿತ್ತು. ಜಾತಿ ಕೂಟಗಳು, ಹಬ್ಬ ಹರಿದಿನಗಳು, ಯಕ್ಷಗಾನ ಪ್ರಸಂಗಗಳು (ಬೈಟಕ್) ನಡೆಯುವಾಗ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಆಚರಿಸಿ ಆನಂದಿಸುತ್ತಿದ್ದವು. ಪರಸ್ಪರ ಕಷ್ಟಸುಖ ಏನೇ ಇದ್ದರೂ ಈ ಮೇಲಿನ ಮೂರೂ ಗ್ರಾಮಗಳ ಆಗೇರರಲ್ಲಿ ಭೇದ ಭಾವವಿಲ್ಲದ ಅನೋನ್ಯತೆ ಸಾಧ್ಯವಾಗಿತ್ತು. ಹಲವಾರು ಬಾರಿ ಗುಂದಿಹಿತ್ತಲಿನ ಕಡ್ಲೆಮನೆ ಸಂಕಷ್ಟಕ್ಕೆ ಸಿಲುಕಿದಾಗ ನೆರೆಯ ಈ ಮೂರು ಗ್ರಾಮದವರೆ ನೆರವಿಗೆ ಬಂದು ನಿಲ್ಲುತ್ತಿದ್ದರು. ಗದ್ದೆ ಬಯಲಿನ ನಟ್ಟನಡುವೆ ಇರುವ ಗುಂದಿಹಿತ್ತಲ ಪ್ರಚಂಡ ಮಳೆಗಾಲದಲ್ಲಿ ಒಂದು ಪುಟ್ಟ ದ್ವೀಪದಂತೆ ಗೋಚರಿಸುತ್ತಿತ್ತು. ಹಳ್ಲದಲ್ಲಿ ನೆರೆ ಬಂದರೆ ಗುಂದಿಹಿತ್ತಲವಿಡೀ ಮುಳುಗಿ ಮರೆಯಾಗಿಬಿಡುವ ಸಂದರ್ಭಗಳೂ ಇರುತ್ತಿದ್ದವು. ಇಂಥ ಸಮಯದಲ್ಲಿ ಅಗ್ಗರಗೋಣ, ಹೆಗ್ರೆ ಅಥವಾ ನಾಡುಮಾಸ್ಕೇರಿಯ ಜಾತಿ ಜನರು ಗುಂದಿಹಿತ್ತಲಿನ ಎರಡೂ ಕುಟುಂಬಗಳನ್ನು ತಮ್ಮಲ್ಲಿಗೆ ಕರೆದೊಯ್ದು ಆಶ್ರಯ ನೀಡುತ್ತಿದ್ದರು. ಹೀಗೆ ನೆರವಾಗುವ ಸಂದರ್ಭದಲ್ಲೂ ಈ ಕುಟುಂಬದ ಘನತೆಗೆ ಕುಂದು ಬಾರದಂತೆ ಗೌರವದಿಂದ ನಡೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ.
ಜೋಡಿ ಸಹೋದರರಲ್ಲಿ ಕಿರಿಯವನು ಬೇಡು. ಮೂವರು ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳ ತಂದೆ. ಮಕ್ಕಳಲ್ಲಿ ಯಾರೂ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಮೂಲ ಕಸುಬುಗಳನ್ನು ಆಶ್ರಯಿಸಿ ಮದುವೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋದರು. ಹಿರಿಯವನಾದ ಸುಕ್ರುವಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿ ನಡುವಯಸ್ಸಿನಲ್ಲಿ ತೀರಿಕೊಂಡಳಾದರೂ ಅದಾಗಲೇ ಅವಳಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎರಡನೆಯ ಹೆಂಡತಿ ಸುಕ್ರುವಿನಿಂದ ಓರ್ವ ಗಂಡುಮಗುವನ್ನು ಪಡೆದಳಾದರೂ ಸಂಸಾರ ನಡೆಸಲಾಗದೇ ಗಂಡ ನಿಂದ ಬೇರೆಯಾಗಿ ತನ್ನ ತವರೂರು ಅಂಕೋಲೆಗೆ ಹೊರಟವಳು ಅಲ್ಲಿಯೇ ನೆಲೆಸಿದ್ದಳು. ಕಡ್ಲೆ ಮನೆತನದ ಸಂಬಂಧದಿಂದ ಹೊರಗೇ ಉಳಿದುಬಿಟ್ಟಳು.
ಸುಕ್ರುವಿನ ಹಿರಿಯ ಹೆಂಡತಿಯ ಇಬ್ಬರು ಗಂಡುಮಕ್ಕಳು ಮುರ್ಕುಂಡಿ ಮತ್ತು ಗಣಪು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ. ಸುಕ್ರುವಿನ ಎರಡನೆಯ ಗಂಡುಮಗ ಗಣಪುವಿನ ಹೊರತಾಗಿ ಉಳಿದ ಮೂವರು ಶಾಲೆ ಕಲಿಯಲು ಆಸಕ್ತಿ ತೋರಿಸಲಿಲ್ಲ. ಆದರೆ ಗಣಪು ಎಂಬ ಹುಡುಗ ಶಾಲೆ ಕಲಿಯಲು ಹಠ ಮಾಡಿದ್ದೇ ಅಪರಾಧವಾಗಿತ್ತು. ಕೂಲಿ ಮಾಡಿದರೆ ತುತ್ತು ಅನ್ನ ಸಿಗುತ್ತದೆ, ಶಾಲೆ ಕಲಿತರೆ ಉಪವಾಸವೇ ಗತಿ ಎಂದು ನಂಬಿದ ಪಾಕಲರ ನಡುವೆ ಅಕ್ಷರದ ಬೆನ್ನು ಹತ್ತಿದ ಗಣಪು ಪಟ್ಟ ಕಷ್ಟ ನಡೆಸಿದ ಹೋರಾಟ ಅಷ್ಟಿಷ್ಟಲ್ಲ! ಅಂದು ಆತ ಆ ಬಗೆಯ ಹೋರಾಟ ನಡೆಸಿ ನಾಲ್ಕು ಕಾಳಿನಷ್ಟಾದರೂ ಅಕ್ಷರಗಳನ್ನು ಆಯ್ದು ತನ್ನ ಜೋಳಿಗೆಯಲ್ಲಿ ತುಂಬಿಕೊಳ್ಳದಿದ್ದರೆ ಇಂದು ನಾನು ಹೀಗಿರುತ್ತಿರಲಿಲ್ಲ. ಏಕೆಂದರೆ ಅಂದು ಅಕ್ಷರ ಪ್ರೀತಿಯಲ್ಲಿ ಅರೆಹೊಟ್ಟೆ ಉಂಡು ಮನೆಯನ್ನೇ ಬಿಟ್ಟು ಹೊರ ನಡೆದ ಛಲಗಾರ ಬೇರೆ ಯಾರೂ ಅಲ್ಲ, ನನ್ನ ತಂದೆ ಗಣಪು ಮಾಸ್ತರ!
ಡಾ.ರಾಮಕೃಷ್ಣ ಗುಂದಿಯವರ ಹಳೆಯ ಪೋಟೊಗಳು
*********************************************************
ಡಾ.ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಹೌದು ಸರ್, ತಮ್ಮ ತಂದೆ ಗಣಪು ಮಾಸ್ತರ ರವರ ಅಕ್ಷರ ಪ್ರೀತಿ ತಮ್ಮಂಥ ಗುರುಗಳನ್ನು ನನಗೆ ನೀಡಿತು. ಅಲ್ದೇ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡಿಗೆ ಹೆಮ್ಮೆಯ ಸುಪುತ್ರರನ್ನು ನೀಡಿದ ಛಲಗಾರ ಗಣಪು ಮಾಸ್ರ್ ಕುಟುಂಬ ಧನ್ಯ ತಮ್ಮ ಶಿಷ್ಯಳಾದ ನಾನು ನನ್ನಂತಹ ಅದೆಷ್ಟೋ ಶಿಷ್ಯವೃಂದ ಧನ್ಯ. ಆತ್ಮಕತೆ ಓದಿ ಕಣ್ಣಾಲಿಗಳು ತೇವವಾದವು ಸರ್. ಶುಭವಾಗಲಿ
ತಮ್ಮ ಶಿಷ್ಯೆ
ಶುಭಲಕ್ಷ್ಮಿ. ನಾಯಕ.
ಧನ್ಯವಾದಗಳು
ಮುಂದಿನ ಸಂಚಿಕೆಗೆ ಕಾಯುತ್ತಿರುವೆ
ವಿಷಯ ಚೆನ್ನಾಗಿ ಬರೆದಿದ್ದೀರಿ.ಧನ್ಯವಾದಗಳು
ಸರ್ ತುಂಬಾ ಚೆನ್ನಾಗಿ ಮುಂದುವರಿಯುತ್ತಿದೆ. ಓದಲು ತುಂಬಾ ಖುಷಿ ಆಗ್ತಿದೆ.
ಥ್ಯಾ0ಕ್ಯೂ
ಸುಪರ್ ಸರ್
ಮೊದಲನೆಯ ಮತ್ತು ಈಗಿನ ಅಂಕವನ್ನು ಓದಿದೆ; ಮನತುಂಬುವಂತಿದೆ. ಮುಂದಿನ ಅಂಕಗಳು ಸಿಗುವುದು ಹೇಗೆ? ಲಿಂಕ್ ಇದ್ದರೆ ದಯಮಾಡಿ ತಿಳಿಸಿ. I am your ardent fan sir.