ವಸುಂಧರಾ

ವಸುಂಧರಾ ಕಾದಂಬರಿ ಕುರಿತು

ಬಾಳೆಯ ಹಣ್ಣನ್ನು ತಿಂದವರೆಸೆವರು,

ಸಿಪ್ಪೆಯ ಬೀದಿಯ ಕೊನೆಗೆ

ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ.

ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ ರವರ ವಸುಂದರ ಕಾದಂಬರಿ ಮೂಢನಂಬಿಕೆಗೆ ಬೆಳಕು ಚೆಲ್ಲಿ ಇಡೀ ಸಮುದಾಯ ಕಲಂಕಿನಿ ಎಂದು ಅಪಮಾನ ತೇಜೋವಧೆ ಮಾಡಿ ನಿರ್ಲಕ್ಷ ಗೊಳಿಸಿ ಮಾತಿನಿಂದಲೇ ಕೊಂದು  ಜೀವಂತ ಹೆಣವನ್ನಾಗಿ ಮಾಡಿದಂತಹ ಸಂದರ್ಭದಲ್ಲಿ ನೊಂದ ಮನಕ್ಕೆ  ಸಾಂತ್ವನವಷ್ಟೇ  ಅಲ್ಲ ಎಲ್ಲಾ ಸಂಕೊಲೆಗಳಿಂದ ಬಿಡಿಸುವುದು ಅಷ್ಟೇ ಅಲ್ಲ ಇಡೀ ಸಮುದಾಯವನ್ನು  ಬದಲಾಯಿಸಿ ಮೂಢನಂಬಿಕೆಯಿಂದ ಹೊರಬರುವಂತೆ ಮಾಡಿ ಅವರೆಲ್ಲರೂ ಅವಳನ್ನು ಗೌರವದಿಂದ ಕಂಡು ಪಶ್ಚಾತ್ತಾಪ ಪಡುವಂತೆ  ಮಾಡುವ ಅಪೂರ್ವ ಅಸಾಧಾರಣ ನಿರೂಪಣಾ ಶೈಲಿ ಯ ಸುಂದರ ಕೃತಿಯೇ

” ವಸುಂಧರಾ”-ಕಾದಂಬರಿ ಎಂದು ಹೇಳಬಹುದು.

ಬಸವಣ್ಣನವರ ಒಂದು ಮಾತಿದೆ

 ಕೈಲಾಸ ದೊಡ್ಡದಲ್ಲ/ ಕಾಯಕ ದೊಡ್ಡದು

ಧರ್ಮ ದೊಡ್ಡದಲ್ಲ/ ದಯೆ ದೊಡ್ಡದು.

ಅರಿವು ದೊಡ್ಡದಲ್ಲ / ಆಚಾರ ದೊಡ್ಡದು

ಅಧಿಕಾರ ದೊಡ್ಡದಲ್ಲ  /ಅಭಿಮಾನ ದೊಡ್ಡದು

ಆಸ್ತಿ ದೊಡ್ಡದಲ್ಲ  / ಆರೋಗ್ಯ ದೊಡ್ಡದು

ಸನ್ಮಾನ ದೊಡ್ಡದಲ್ಲ / ಸಂಸ್ಕಾರ ದೊಡ್ಡದು

ಹಣ ದೊಡ್ಡದಲ್ಲ / ಗುಣ ದೊಡ್ಡದು

ವಿದ್ಯೆ ದೊಡ್ಡದಲ್ಲ  /ವಿನಯ ದೊಡ್ಡದು

ಅನುಭವ ದೊಡ್ಡದು ಎಂಬ ಮಾತುಗಳಂತೆ ಒಂದೊಂದು ಅಧ್ಯಾಯಗಳಲ್ಲೂ , ಸ್ನೇಹ ಪ್ರೀತಿ ಆಚಾರ ನಡವಳಿಕೆ ಸಂಪ್ರದಾಯ ಸಂಭ್ರಮ ಎಲ್ಲವನ್ನು ಸುಮಧುರ ಹದದಲ್ಲಿ ಹಾಕಿ  ಪಾಕಗೊಳಿಸಿ  ಅಚ್ಚಿಗೆ ಹಾಕಿ  ಎರಕಹೊಯ್ದ ಅಪೂರ್ವ ಕೃತಿಯೇ   ವಸುಂಧರ ಅನ್ನುವುದು ಕೈಗೆತ್ತಿಕೊಂಡ ಕೆಲವೇ  ನಿಮಿಷಗಳಲ್ಲಿ  ನಮಗೆ ಗೋಚರಿಸುತ್ತದೆ.  ಅಂತಹ ಅಸಾಧಾರಣವಾದ ಸಂಭಾಷಣೆ ವಿವರಣೆ ಅದರಲ್ಲಿ ಅಡಕವಾಗಿದೆ ಒಂದೇ ಗುಕ್ಕಿಗೆ ವಿರಾಮ ನೀಡದೆ ಓದಿಸಿಕೊಳ್ಳುವ ಅಯಸ್ಕಾಂತೀಯ ಶಕ್ತಿ ಇದರಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಪಾತ್ರಪೋಷಣೆ ಯ ಅಭಿವ್ಯಕ್ತಿಯ ಮಹಾಪೂರವೇ , ವಿಶೇಷ ತಿರುವುಗಳ ಚೈತನ್ಯವೇ ವಸುಂದರ ಕಾದಂಬರಿಯ ವಿಶೇಷ ಶಕ್ತಿಯಾಗಿದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಒಂದೊಂದು ಪಾತ್ರಕ್ಕೂ ಜೀವ ತುಂಬುತ್ತ ಕಣ್ಮುಂದೆಯೇ ನಡೆದಿದೆ ಎನ್ನುವಂತೆ ಎಷ್ಟೋ ಘಟನೆಗಳನ್ನು ಕಾಕತಾಳಿಯ ಎನ್ನಬಹುದಾದ ಸನ್ನಿವೇಶಸಂಗತಿಗಳನ್ನು, ಸೂಕ್ಷ್ಮಾತಿ  ಸೂಕ್ಷ್ಮವಾಗಿ , ವಿವರಿಸುತ್ತಾ ನಡೆದಿರುವ ರೀತಿ  ವಿಭಿನ್ನವಾಗಿದ್ದು , ಸೋಜಿಗವೆನಿಸುತ್ತದೆ.

ಇಲ್ಲಿ ಬರುವ ಮುಖ್ಯ ಪಾತ್ರಗಳೆಂದರೆ ಕಥಾನಾಯಕಿ ವಸುಂದರ

ಕಥಾನಾಯಕ ದಿನಕರ್ ಅವನ  ಊರು ಗುರಪುರ

 ಇವನ ಸಹೋದರ ಸುಧಾಕರ , ಸಹೋದರಿ ,ತಾಯಿ ,

ದಿನಕರನ ಸ್ನೇಹಿತ ರಮಾನಾಥ ತಾಯಿ ಸುಂದರಮ್ಮ ಅಜ್ಜಿ ,ಹೆಂಡತಿ ಜಲಜ ,ಮಕ್ಕಳಾದ ಸರಿತ ಸವಿತಾ ಸಹೋದರ ಸೂರ್ಯ ಗಿರಿಜಾ ಮನೆಕೆಲಸದ ಹುಡುಗಿ

ರಮಾನಾಥ ನ ಅತ್ತಿಗೆಯೇ ವಸುಂಧರಾ .

ಜ್ಞಾನಮೂರ್ತಿ ಅರ್ಚಕರು ಮತ್ತು ಅವರ ಸಂಸಾರ

ಊರ ಗೌಡ ರು ಹಾಗೂ ಊರಿನ ಗ್ರಾಮಸ್ಥರು , ಬಂಧು ಬಳಗದವರು .

   ಹೀಗೆ ಇವುಗಳ ನಡುವೆ ಹೆಣೆದುಕೊಂಡ ಕರುಳುಬಳ್ಳಿ ಸಂಬಂಧಿತ  ಪಾತ್ರಗಳೆಂಬ  ದಾರಕ್ಕೆ ಅಕ್ಷರಗಳನ್ನು, ಭಾವನೆಗಳನ್ನು ,ಪೋಣಿಸುತ್ತ ಸಾಗಿದ ಬರವಣಿಗೆಯು ನಗುವಿನ ಅಳುವಿನ ನೋವಿನ ಏಳಿಗೆಯ ಕಾನೂನಿನ ಆಡಳಿತದ ಹಳ್ಳಿಯ ಹಟ್ಟಿಯ ಆಡಳಿತದ ಭಾವನೆಗಳನ್ನು ತಿರುವುಗಳ ನೋಟವನ್ನು ನಯ ನಡತೆ ವಂಚನೆ ದುರಾಸೆ ಬಾಯಾಳಿತನ   ಬೈಗುಳ ಎಲ್ಲವನ್ನೂ ಪ್ರಬುದ್ಧವಾಗಿ ಲಯಬದ್ಧವಾಗಿ ಕಟ್ಟುತ್ತಾ ಮನಮುಟ್ಟಿ  ತಟ್ಟಿ ಅಬ್ಬಾ ಶಬ್ಬಾಸ್ ಎಂದು ಉದ್ಗಾರ ತೆಗೆಯುವಂತೆ ಇದ್ದು , ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಆಕರ್ಷಣೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದೆ.

ಪರಂಪರೆ ಮತ್ತು ವರ್ತಮಾನ ಎರಡನ್ನು ಬಳಸಿಕೊಳ್ಳುತ್ತಾ ಇಂದಿನ ಸಂವೇದನೆಗೆ ಹಿಂದಿನದನ್ನು ಬೆರೆಸಿ ಸಮಕಾಲೀನ ಸ್ಪಂದನೆಗೆ ಹಾಗೂ ಅಕಾಡೆಮಿಕ್ ಶಿಸ್ತಗೆ , ಒಳಗೊಂಡು ವಿಷಯವನ್ನು ಹೆಣೆಯುವಾಗ ಪಾತ್ರಗಳಿಗೆ ಸೊಗಸಾದ ಸನ್ನಿವೇಶದ ಬೆಳಕನ್ನು ನೀಡುತ್ತಾ ಪಾತ್ರಗಳಿಗೆ ,ಕೃತಿಗೆ ,ಓದುಗರಿಗೆ ,ಆಕರ್ಷಣೀಯ ಹಿಡಿತವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಸ್ತ್ರೀಪಾತ್ರಗಳು ಸಮುದಾಯದಲ್ಲಿ ಸಾಮಾಜಿಕವಾಗಿ ಕೌಟುಂಬಿಕವಾಗಿ ಸಾಂಸ್ಕೃತಿಕವಾಗಿ ಅನುಭವಿಸುವ ಅಪಮಾನ ನಿರ್ಲಕ್ಷ ದೌರ್ಜನ್ಯ ಹಾಗೂ ಮೂಢನಂಬಿಕೆಗಳಿಗೆ ಸಿಲುಕಿ ನರಳುವ, ನೋಯುವ,ಬೇಯುವ,  ಜೀವ ಪರಿಯನ್ನು  ದೃಶ್ಯಗಳು ಕಣ್ಣೆದುರೇ ಮೂಡಿರುವಂತೆ ಚಿತ್ರಿಸುವುದರ , ಜೊತೆಗೆ ಜಾತ್ಯಾತೀತ ಧರ್ಮನಿರಪೇಕ್ಷವಾ ದ ಬಾಂಧವ್ಯವನ್ನು ಕಟ್ಟುವ ತುಡಿತ ಇವರಲ್ಲಿ ಇದ್ದು ಅದು ಪರೋಕ್ಷವಾಗಿ ಇವರ ರಚನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಇಡೀ ಕೃತಿಯ ಉದ್ದಕ್ಕೂ ಸಮಕಾಲೀನ ತೊಡಕು ನಂಬಿಕೆಗಳೊಂದಿಗೆ ಜೀವದ್ರವ್ಯ ಆದರ್ಶ, ಸತ್ಯ ,ಪ್ರಾಮಾಣಿಕತೆ ಪ್ರೀತಿ ಮಾನವೀಯ ಸಂಬಂಧಗಳ ಚೌಕಟ್ಟನ್ನು ಎಲ್ಲಿಯೂ ಸಡಿಲಗೊಳಿಸ ದಂತೆ ಮುನ್ನಡೆಸಿಕೊಂಡು ಸಾಗಿರುವ ವಿಶಿಷ್ಟ ಹಿಡಿತ ಈ ಕಾದಂಬರಿಯಲ್ಲಿದೆ

ಅಪಕ್ವ ಮನಸ್ಸುಗಳಿಗೆ ತಿಳಿವಳಿಕೆ ಹೇಳುತ್ತಾ ಪ್ರತಿಯೊಂದು ಸನ್ನಿವೇಶದಲ್ಲೂ ಸಮಕಾಲೀನ ಸಂಬಂಧವನ್ನು ಅರ್ಥವಿಲ್ಲದ ಆಚರಣೆಯನ್ನು,

ಟೀಕಿಸುತ್ತಾ ಕಾರಣ ಪರಿಣಾಮಗಳನ್ನು ತಿಳಿಸುತ್ತಾ ವಿಮರ್ಶಿಸುತ್ತಾ, ಅದರೊಂದಿಗೆ ಬೆರೆಯುತ್ತಾ ಹರಿಯುತ್ತಾ ಸಾಗಿ ನಿನ್ನೆಯ ಮೂಲಕವೇ ಇಂದಿನ ನಾಳಿನ ಬದುಕನ್ನು ಹೆಣೆದಿದ್ದಾರೆ.  ಈ ಕಲೆ ಅತ್ಯಂತ ಆಕರ್ಷಣೀಯವಾಗಿ ಯೂ ಸೋಜಿಗವಾಗಿ ಯೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು.

ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ  ನಾವು ಮೌನವೇ ಶ್ರೇಷ್ಠ ಎಂದು ವ್ಯಾಖ್ಯಾನ ಮಾಡುತ್ತೇವೆ . ಆದರೆ ಕೆಲವೊಮ್ಮೆ ಕೆಲವು  ಸನ್ನಿವೇಶಗಳಲ್ಲಿ  ಉತ್ತಮ ,ಉತ್ತರ, ಸಾಧನವು ಆದರೆ   ಕೆಲವೊಮ್ಮೆ ಅದೇ ಮೌನ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದೆ .ಕೋಪವನ್ನು ತರಿಸುತ್ತದೆ . ಕೆಲವರ ಮೌನ ಎಷ್ಟು ಕೋಪವನ್ನು ಉಂಟುಮಾಡಿ ವಿರಸಕ್ಕೂ ಸಂಬಂಧಗಳ ಕಳಚುವಿಕೆಗೂ

ದಾರಿಮಾಡಿಕೊಡುತ್ತದೆ ಎಂದ.ನಮ್ಮನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದು. ಇಲ್ಲಿಯೂ  ಸುಧಾಕರ ಮತ್ತು ಜ್ಞಾನಮೂರ್ತಿ ಅವರ ಎದುರು ಮನೆಯವರೊಂದಿಗೆ ಮಾತನಾಡದೆ ಮೌನವಾಗಿದ್ದು ಮುಂದಿನ ಈ ಎಲ್ಲಾ ಘಟನೆಗಳಿಗೆ  ಕಾರಣವಾಗುತ್ತದೆ ಎಂಬುದನ್ನು ಕಾದಂಬರಿಯನ್ನು ಓದಿದಾಗ ಕಂಡುಬರುತ್ತದೆ .

ಇನ್ನು ಕಾದಂಬರಿಯುದ್ದಕ್ಕೂ ಬಳಸಿರುವ ಪರಂಪರೆಯ ಕೊಂಡಿಗಳ ಬಗ್ಗೆ ಹೇಳಲೇಬೇಕು ಉದ್ದಕ್ಕೂ ಉತ್ತಮವಾದ ಬದುಕಿನ ಮಾರ್ಗದರ್ಶಕ ಸೂತ್ರಗಳನ್ನು ಇವರದೇ ಆದ ಶೈಲಿಯಲ್ಲಿ ಹೇಳುತ್ತಾ ಹೇಳುತ್ತಾ ಪರಂಪರೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು ಎಂಬ ಆದರ್ಶದ ನುಡಿಗಳನ್ನು ಕಥಾನಾಯಕನ ಬಾಯಿಯಲ್ಲಿ ಹೇಳಿಸುತ್ತಾ ಸಾಗಿರುವುದು  ಅತ್ಯಂತ  ಸುಂದರವಾಗಿದ್ದು ಕಿರಿಯರಿಗೆ , ಮಾರ್ಗದರ್ಶಕವಾಗಿ, ಅನುಕರಣೀಯವೂ  ಆಗಿದೆ.

ಉದಾ, ನಾವು ಬದುಕನ್ನ ಬದಲಾಯಿಸಬೇಕು

          ಬದುಕು ನಮ್ಮನ್ನು ಬದಲಾಯಿಸಬಾರದು. ಪುಟ 62

ನಾವು ಎಷ್ಟೇ ಸಾಧನೆ ಮಾಡಿದರೂ ನಮ್ಮ ಉತ್ತಮ ನಡವಳಿಕೆಗಳು ಆಚರಣೆಗಳು ಗೌರವ ಪ್ರೀತಿ ಆಧಾರಗಳು ಉಳಿಯಬೇಕು ಆಗಲೇ ನಾವು ನಾವು. ಎಷ್ಟೇ ಅಡೆತಡೆಗಳು ಬಂದರೂ ಭಾವನೆಗಳು ಬದಲಾಗಬಾರದು ಎಂದು ಹೇಳುವಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಆದರ್ಶದ ನಡೆನುಡಿಗಳು ಸಮಾಜಕ್ಕೆ ಮಾರ್ಗದರ್ಶಕವೂ ಪ್ರೇರಕವಾಗಿವೆ ಎಂದರೆ ತಪ್ಪಿಲ್ಲ ಜೊತೆಗೆ ರಥೋತ್ಸವದ ಸನ್ನಿವೇಶ, ಬಂಧುಗಳ ಆಗಮನ ಸಂತೋಷ ಸಂಭ್ರಮ ಕೆಲಸಗಳ ಒತ್ತಡ ಎಲ್ಲವನ್ನೂ ಎಳೆಎಳೆಯಾಗಿ ನಾಜೂಕಾಗಿ ಪೋಷಿಸಿರುವ ಪೋಷಣೆ ಅಸಾಧಾರಣವಾಗಿದೆ.

 ವಿವಾಹವಾಗಿ ಪತಿಯ ಮನೆಗೆ ತನ್ನ ಹೆತ್ತವರನ್ನು ಬಂಧುಬಳಗವನ್ನು ತನ್ನ ಒಡನಾಡಿಯಾದ ಸ್ನೇಹಿತರನ್ನು ಸಕಲ ಪರಿಸರಕ್ಕೂ ವಿದಾಯ ಹೇಳಿ ಹೋಗುವ ಸಂದರ್ಭದಲ್ಲಿ, ಹೆಣ್ಣುಮಕ್ಕಳು ಬಾಣಂತಿ ಆರೈಕೆಯನ್ನು ಮುಗಿಸಿ  ಗಂಡನ ಮನೆಗೆ  ಹೊರಟು ನಿಂತಾಗ ಊರಿಗೆ ಊರೇ ಕರೆದು ಮಡಿಲಕ್ಕಿ ಹುಯ್ಯುವುದು ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಾಕಿ ತವರಿನ ನೆನಪು ಸದಾ ಇರಲಿ ತವರಿಗೆ ಶುಭ ಹಾರೈಕೆಯಿಂದ ತೆರಳಲಿ ತನ್ನ ಕೊಟ್ಟಮನೆಯಲ್ಲಿ ಕೀರ್ತಿಯನ್ನು ತರಲಿ , ಎಂದು ಶುಭ ಹಾರೈಸಿ ಕಳಿಸಿ ಕೊಡುವುದು ಈ ನಾಡ ,ಪರಂಪರೆ  ಸಂಪ್ರದಾಯ . ಆದರೆ  ಇತ್ತೀಚಿಗೆ ಇದು  ಕಡಿಮೆಯಾಗುತ್ತಿದೆ ಮರೆಯಾಗುತ್ತಿದೆ..ಈ ಒಂದು ಆಚರಣೆಯ  ಆಪ್ತತೆ  ,ಅನುಬಂಧ ಅವರ್ಣನೀಯ .

   ಅಂತಹ ಒಂದು ಉತ್ತಮ ಪರಂಪರೆಯನ್ನು  ಇಲ್ಲಿ  ತಲೆತಲಾಂತರಕ್ಕೂ ಉಳಿಯುವಂತೆ ಮಾಡಲಾಗಿದೆ..

      ಇಲ್ಲಿ ಯಾವ ಸಮುದಾಯದಿಂದ ಕಳಂಕಿತ ಎಂದು ಘೋಷಿಸಲ್ಪಟ್ಟಿದ್ದಳೋ ಅದೇ ಸಮುದಾಯ ಅವಳನ್ನು ಆಧರಿಸಿ ಪಶ್ಚಾತಾಪದಿಂದ ನೊಂದು   ಮನೆಗೆ ಆಹ್ವಾನಿಸಿ ಮಡ್ಲಕ್ಕಿ ಹುಯ್ದು , ತಿಲಕವಿಟ್ಟು , ನೆತ್ತಿಗೆ ಎಣ್ಣೆ ಹಾಕಿ ,ಅರಿಯದ ತಮ್ಮ ತಪ್ಪಿಗೆ  ಕ್ಷಮೆಯಾಚಿಸಿ ಬೀಳ್ಕೊಡುವುದು .

ಆ ಸಂದರ್ಭದಲ್ಲಿ  ನಿಮ್ಮ ಪ್ರೀತಿಗೆ ನಾನೇನು ಕೊಡಲಿ ಎಂದು ಎಲ್ಲರಿಗೂ ಒಂದೊಂದು ರೂಪಾಯಿ ನಾಣ್ಯ ಕೊಡ್ತಾಳೆ ಹೆಣ್ಣುಮಕ್ಕಳು ಗೆಳತಿಯರು ಅದನ್ನು ಕೆಲವರು ಸೆರಗಿಗೆ ಕಟ್ಟಿಕೊಂಡರು ಕೆಲವರು ಅರಿಶಿನ ಜೀರಿಗೆ ಡಬ್ಬಿಗಳಿಗೆ ಹಾಕಿದರು ಇನ್ನು ಕೆಲವರು ಚೀಲಕ್ಕೆ ಹಾಕಿಕೊಂಡರು, ದಿನನಿತ್ಯ ಅರಿಶಿಣ ಜೀರಿಗೆ ಡಬ್ಬಿಗಳನ್ನು ಉಪಯೋಗಿಸುವಾಗ ಹಾಗೂ ಚೀಲದಲ್ಲಿ ಎಲೆಯಡಿಕೆ ಮೆಲ್ಲುವಾಗ ಅದನ್ನು ನೋಡುತ್ತ ಅವರನ್ನು ನೆನೆಸಿಕೊಳ್ಳಲು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ ಇದೊಂದು ಅಪೂರ್ವ ವಾದಂತಹ  ವಿವರಣೆಯಾಗಿದೆ. ಹಾಗೆಯೇ ಮರೆಯಾಗುತ್ತಿರುವ ಅಜ್ಜಿಯರ ಎಲೆ ಅಡಿಕೆ ಚೀಲ ಅದರೊಳಗಿನ 2/3 ಕಂಪಾರ್ಟ್ಮೆಂಟ್ ಗಳು ಅದರೊಳಗೆ ಒಂದು ಹಣ ಇಡುವ ಗುಪ್ತ ಪ್ಯಾಕೆಟ್ ನಾಣ್ಯಗಳನ್ನು ಇಡುತ್ತಿದ್ದ ಕಿರು ಪತ್ರ ಇವೆಲ್ಲವೂ ನನಗೆ ನೆನಪಿಸಿ ನನಗೆ ನನ್ನ ಅಜ್ಜಿ ಅವರ  ಪ್ರೀತಿ  ಅನುಭೂತಿ  ನನ್ನ ಕಣ್ಣನ್ನು  ತೇವಗೊಳಿಸಿದವು

ನಾನು ಶಾಲೆಗೆಂದು ಹೋಗುತ್ತಿದ್ದಾಗ ನನ್ನಜ್ಜಿ  ನನ್ನನ್ನು  ಹೇ ಮಗಾ ಬಾ ಇಲ್ಲಿ ನನ್ನ ಎಲೆ ಅಡಿಕೆ ಚೀಲದ ಕಿರು ಪತ್ರದಲ್ಲಿ ಎಂಟಾಣೆ ಇದೆ ಅದನ್ ತಗೊಂಡು ನಾಕಾಣೆ ಕಾಚು ಇನ್ ನಾಲ್ಕಾಣೆ ನೀನೇನಾದ್ರೂ ತಗೋ ಎಂದು ಕೈಯಲ್ಲಿ ಕೊಟ್ಟು  ಕಳುಹಿಸುತ್ತಿದ್ದುದು ನೆನಪಾಗಿ ಕ್ಷಣ ಮನಸ್ಸು ಎಲ್ಲಿಗೂ ಹೋದಂತಾಯಿತು. ಹೀಗೆ ಕಾದಂಬರಿ ಹಲವು ಮರೆತ ಬಾಂಧವ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಡವಂತಿದೆ . ಎಂದು ನನಗನ್ನಿಸಿತು .

ಈ ಚೀಲದ ಸಂಬಂಧ ಸನ್ನಿವೇಶ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂಬುದು ಸಂತೋಷದ ಸಂಗತಿಯಾಗಿದೆ

ಇನ್ನು ಕಾದಂಬರಿಯ ತುಂಬಾ ಉಪಯೋಗಿಸಿ ರುವಂತಹ ಸಾಂಪ್ರದಾಯಿಕ ಅಡುಗೆಗಳು ಹೆಸರುಕಾಳು ಮೆಂತ್ಯ ಸೊಪ್ಪಿನ ತೊವೆ ರಾಗಿಕೀಲ್ಸ  ಕಡುಬು ನಿಂಬೆ ಹುಳಿ ಚಿತ್ರಾನ್ನ,  ಹುಳಿಯನ್ನ  ಇವುಗಳ ಸೊಗಸಾದ ನಿರೂಪಣೆ ಇದೆ

 ಕೂಡುಕುಟುಂಬದ ಸಾಮರಸ್ಯ ಕಣ್ಮರೆಯಾಗಿರುವ ಕಾಲಘಟ್ಟದಲ್ಲಿ ನಾವಿದ್ದು ಇಂದು ಯಾರು ಯಾರ ಮನೆಯಲ್ಲಿ ಉಳಿಯುವ ಪರಿಪಾಠವೇ ಇಲ್ಲವಾಗಿದೆ ಹಾಗೂ ಕಡಿಮೆಯಾಗಿದೆ ಹಿಂದೆ ಊರ ಜಾತ್ರೆ ಮದುವೆ ರಥೋತ್ಸವ ಸಮಾರಂಭಗಳಲ್ಲಿ ನಾಲ್ಕೈದು ದಿನ ವಾರದವರೆಗೂ ಉಳಿದುಕೊಂಡಿದ್ದ ಸಾಮರಸ್ಯ ಈಗ ಮರೆಯಾಗಿದೆ ಆನಂದವು ಮರೆಯಾಗಿದೆ ಈಗ ನಾನು ನನ್ನ ಸಂಬಂಧ ಕೇವಲ ಮೊಬೈಲಿಗೆ ಅಥವಾ ನಾನು ನನ್ನ ಕುಟುಂಬ ಅಷ್ಟೇ ಆಗುತ್ತಿದೆ ಎಂಬುದು ವಿಷಾದಕರ . 

ರಥೋತ್ಸವದ ಸಮಾರಂಭಕ್ಕೆ ಬಂಧುಗಳು ಚಿಕ್ಕಮ್ಮ-ಚಿಕ್ಕಪ್ಪ ದೊಡ್ಡಮ್ಮ ದೊಡ್ಡಪ್ಪ ಅಜ್ಜಿ ,ಭಾವ ಮೈದುನ ಅತ್ತಿಗೆ ಮಕ್ಕಳು ಸ್ನೇಹಿತರು ಹೀಗೆ ಎಲ್ಲರೂ ಒಂದೆಡೆ ಸೇರಿಕೊಂಡು ಸಂಭ್ರಮಿಸುವ ಸಾಮರಸ್ಯದ ಸಂಬಂಧಕ್ಕೆ ಮಾದರಿಯಾಗಿದೆ

ಇನ್ನು ಕಾದಂಬರಿಯಲ್ಲಿ ಬರುವ ಆಡಳಿತಾತ್ಮಕ ಚಾಣಕ್ಯನ ನಡಿಗೆಗಳು ಬಹಳ ನಯವಾಗಿ ನಾಜೂಕಿನಿಂದ ಬೆಣ್ಣೆಯ ಮೇಲಿನ ಕೂದಲು ತೆಗೆದಂತೆ ತೊಡಕುಗಳನ್ನು ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ ಸಾಗುವ ತಂತ್ರಗಾರಿಕೆ ಅತ್ಯಂತ ಸೂಕ್ಷ್ಮ ಹಾಗೂ ಉದಾರವಾಗಿದೆ . ತೊಂದರೆ ಮಾಡಿದ ಯಾವ ಪಾತ್ರವೂ ಸೆಟೆದು ನಿಂತು ಕೋಪಿಸಿಕೊಳ್ಳದಂತೆ ಅವರೇ ಪಶ್ಚಾತ್ತಾಪವಾಗುವಂತೆ  ಮಾಡಿ ಅವರಿಗೂ ಒಂದೊಂದು ಬದುಕಿನ ಹೊಸ ತಿರುವನ್ನು ಕೊಟ್ಟು ,ಆ ಆಯ್ಕೆಯಲ್ಲಿಯೇಅವರೂ ಖುಷಿಯಾಗ ಇವರನ್ನು ಸಂತೋಷದಿಂದ ಹಾರೈಸುವಂತೆ ಮಾಡಿರುವುದು ಕಾದಂಬರಿಕಾರರ ಹಿರಿಮೆಯಿಂದೇ ಹೇಳಬೇಕ ಅಂತಹ ಅಮೋಘ ನೈಪುಣ್ಯತೆ,  ವಸುಂಧರಾ ಕಾದಂಬರಿಯಲ್ಲಿ ಬಿಂಬಿತವಾಗಿದ್ದು , ಇವರೊಬ್ಬ ಉತ್ತಮ ನೀತಿಶಾಸ್ತ್ರ ವಿಶಾರದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ.

  ಕಥಾ ನಾಯಕಿಯನ್ನು ಮದುವೆಯಾಗಲು ಹವಣಿಸಿದ್ದ ಊರ ಗೌಡ್ರಿಗೆ ರಾಜಕೀಯಕ್ಕೆ ಟಿಕೆಟ್ ಕೊಡಿಸುವುದು ಊರಿನ ರಥ  ಮುರಿಯಲು ಕಾರಣ ನೂರಾರು ವರ್ಷ ಹಳೆಯದಾಗಿದ್ದುದು , ಸೂರ್ಯ ಸಾಯಲು ಕಾರಣ ಅವನಿಗಿದ್ದ ಹಳೆಯ ರೋಗ ಅವನು ಮರದಿಂದ ಬಿದ್ದಾಗ ಮೆದುಳಿಗಾದ  ಗಾಯ ಇವೆಲ್ಲವನ್ನು ಸಮಾಧಾನವಾಗಿ ಎಲ್ಲರಿಗೂತಿಳಿಯ ಹೇಳುತ್ತಾ, ಇದರಲ್ಲಿ ವಸುಂಧರ ಳ ಯಾವ ತಪ್ಪು ಇಲ್ಲ ಇದೆಲ್ಲವೂ ಕಾಕತಾಳಿಯ  ಇದೆಲ್ಲವೂ ನಮ್ಮ ಭ್ರಮೆ ಅನುಮಾನ ಎಂಬುದನ್ನು ಇಡೀ ಸಮುದಾಯಕ್ಕೆ ತಿಳಿಸಿಕೊಡುತ್ತಾ ವಸುಂದರ ಮನಸ್ಸಿನಲ್ಲಿಯೂ ಅಪರಾಧಿ ಪ್ರಜ್ಞೆಯನ್ನು , ಕೀಳರಿಮೆಯನ್ನು ಹೋಗಲಾಡಿಸಿ  ತಾನೇ ಅವಳನ್ನು ವಿವಾಹವಾದೆ ನನಗೇನಾಗಿದೆ , ಇಂದು ಅವಳೇ ಕಳಿಸ ಪೂಜೆ ಮಾಡಿದಳು , ದೇವರಿಗೇನಾಗಿದೆ  . ಎಲ್ಲವೂ ಚೆನ್ನಾಗಿಯೇ ಇದೆಯಲ್ಲವೆ  ಎಂದು ದಿನಕರ ನುಡಿದಾಗ ಇಡಿ ಊರಿನ ಜನ ಪಶ್ಚಾತ್ತಾಪ ದಿಂದ ನೋಯುವಂತಾಗುತ್ತದೆ .ಮಾಢನಂಬಿಕೆಯೊಂದನ್ನು ನಿರ್ಮೂಲನೆ ಗೊಳಿಸಿರುವ ಪರಿ ಅತ್ಯಂತ ಸೂಕ್ಷ್ಮವೂ ಪ್ರಗತಿಪರವಾದುದಾಗಿದೆ  ,

ಅಜ್ಜಿಯ ಬಾಯಿಂದ ನಾನೇ ಮೂಲ ನಕ್ಷತ್ರದಲ್ಲಿ ಹುಟ್ಟಿದವಳು ನನಗೆ ಏನಾಗಿದೆ ಮಕ್ಕಳು-ಮರಿ ಸಂಸಾರ ಎಲ್ಲಾ ಚೆನ್ನಾಗಿಯೇ ಆಗಿ ಅಭಿವೃದ್ಧಿ ಆಗಿಲ್ಲವೇ ಎಂದು ಹೇಳುತ್ತಾ ಮೂಲನಕ್ಷತ್ರ ಎಂಬ ಗುಂಗಿನಿಂದ ಹೊರ ಬರುವಂತೆ ಮಾಡಿರುವ  ಕಥಾ ಹಂದರ ಅತ್ಯಂತ ಮನೋಜ್ಞವಾಗಿದ್ದು ಸಮಾಜ ಸುಧಾರಣಾ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ಆ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ಹೀಗೆಯೇ ಹೇಳುತ್ತ ಹೋದರೆ ಸಾಕಷ್ಟು ಹೇಳಬಹುದಾಗಿದೆ . ಆದರೆ ಮುಗಿಸುವ ಮುನ್ನ ಜಯಂತಿ ರವರ ಬಗ್ಗೆ ಹೇಳಲೇಬೇಕು ಕೃಷ್ಣಮೂರ್ತಿ ನರಸಮ್ಮ ಇವರ ಪುತ್ರಿಯಾದ

ಜಯಂತಿಯವರು ಚಿಕ್ಕಮಗಳೂರಿನ ದೊಡ್ಡ ಮಗಳು

ಮಲೆನಾಡಿನ ಮಾಚಗೊಂಡನಹಳ್ಳಿಯ, ಮಹಾನ್ ಮನೋ ,ಸಾಮರ್ಥ್ಯದ  ಸದ್ಗುಣವಂತೆ

ಕಲ್ಪನಾ ವಿಲಾಸ ಕಾಯಕ ಬದ್ಧತೆಯ ಶಾಂತಚಿತ್ತೆ.

ಅಭಿವ್ಯಕ್ತಿಯ ಅಸಾಧಾರಣ ಪ್ರತಿಭಾವಂತೆ

ಶಾಂತಿ ಪ್ರೇಮ ಸಂಪ್ರೀತೆ

  ನಿಮ್ಮನ್ನು ನಿಮ್ಮ ವಸುಂದರ ಹಾಡನ್ನು ಓದುತ್ತಾ ಓದುತ್ತಾ ನನ್ನಲ್ಲಿ ಮೂಡಿತೊಂದು ಪ್ರಶ್ನೆ ಗಾನವೊಂದು ನೆನಪಾಯಿತು.

ನೀನು ಶಾಂತ ನಿನ್ನಲೇ ಸಮುದ್ರರಾಜ

ತೆರೆತೆರೆಯಾಗಿ ಹಾಯ್ದು ಮೇಘ ನಾದವ ಗೈವ

ನೀನು  ಕ್ಷುಬ್ರ  ನೆನ್ನಲೇ ಸಮುದ್ರರಾಜಾ.  …

ಮಾನವನಂತೆ ಸಮಾಧಾನ ರಹಿತ

ದೇವನಂತೆ ಏ ಶಾಂತಿ ಪೂರಿತ.

ಭದ್ರ, ಭದ್ರ ರುದ್ರ ನೀನು ಓ ಸಮುದ್ರ ರಾಜ–ಎನ್ನುವಂತೆ ಸಮುದ್ರವನ್ನು ಶಾಂತಸಾಗರ ಅನ್ನುತ್ತೇವೆ ಹಾಗೆಯೇ.

ನೀವು ಶಾಂತವಾಗಿ ಕಾಣುತ್ತೀರಾ ನೆಮ್ಮಲ್ಲಿಯೂ  ಎಂದೂ ಅಹಂಕಾರ ಕೋಪ ಬೇಸರ ಆಡಂಬರ ತೋರಿಕೆ ಇವನ್ನು ನಿಮ್ಮ ನಡೆ-ನುಡಿಯಲ್ಲಿ ಕಂಡಿಲ್ಲ ಹಾಗೆಯೇ ಯಾವ ಪಾತ್ರದಲ್ಲಿ ಯೂ ಕೂಡ ಅದು ಬಿಂಬಿತವಾಗಿಲ್ಲ.

: ಆದ್ದರಿಂದ ಹೇಳುವುದೇನೆಂದರೆ ನಮ್ಮ ಮನೋಧರ್ಮ ಕೃತಿಯ ಮನೋಧರ್ಮ ವಾಗಿಯೂ ಹೊರಹೊಮ್ಮುತ್ತದೆ ಎಂಬುದಕ್ಕೆ ನೀವು ಸಾಕ್ಷಿಯಾಗಿ ಇದ್ದೀರಿ ನೀವು ಸಮುದ್ರದಂತೆ ಶಾಂತ, ನಿಮ್ಮಲ್ಲಿ ಅಗಾಧತೆ ನೋವಿನ ಗಾಂಭೀರ್ಯ ಅಲೆಗಳ ಏರಿಳಿತ , ಸಂಪದ್ಭರಿತ ಭಾವನೆಗಳ ಮಹಾಪೂರ ಮಹಾಪ್ರವಾಹ ಎಲ್ಲವೂ ಆಗಿ ಕಾಣುತ್ತಿದ್ದೀರಾ

 ಹಾಗೆಯೇ ಮತ್ತೊಂದು ವಿಶೇಷವೆಂದರೆ ಉತ್ತಮ ಗಾಯಕಿಯೂ ಗಾಯನ ಪ್ರಿಯೆಯೂ ಆದ ಇವರು ಸನ್ನಿವೇಶಕ್ಕೆ ತಕ್ಕಂತೆ ಅಲ್ಲಲ್ಲಿ ಸುಂದರವಾದ ಭಾವಗೀತೆಗಳನ್ನು ಅಳವಡಿಸಿಕೊಂಡಿದ್ದಾರೆ ಅವು ಸ್ವರಚಿತ ವೋ  ಆಯ್ಕೆಯೋ ನಾ ಕಾಣೆ ತುಂಬಾ ಸೊಗಸಾಗಿದೆ  ಅದ್ದೂರಿಯಾಗಿ ಬಳಕೆಯಾಗಿವೆ.

ಏನಿದೆ ಹ್ಯಾಟ್ಸಾಫ್ ನಿಮಗೆ ನಿಮ್ಮ ಮನೋಸಾಮರ್ಥ್ಯದ ನಿರೂಪಣಾ ಶೈಲಿಗೆ ಭಾವಾಭಿವ್ಯಕ್ತಿಗೆ ಪಾತ್ರ ಪೋಷಣೆಗೆ ಸನ್ನಿವೇಶ ಸೃಷ್ಟಿಗೆ.

ಕಾದಂಬರಿ ಅದ್ವಿತೀಯ ವಾಗಿದೆ ಎಲ್ಲರೂ ಆನಂದದಿಂದ ಒಪ್ಪಿಕೊಳ್ಳುವಂತೆ ಅಪ್ಪಿಕೊಳ್ಳುವಂತೆ ಇದೆ .ಯಶಸ್ವಿಯಾಗಿದೆ ಒಂದೇ ಗುಕ್ಕಿಗೆ ಓದಿಸಿಕೊಳ್ಳುತ್ತದೆ . ಸೊಗಸಾದ ಸಂಭಾಷಣೆ ಇದೆ

ಅತ್ಯುತ್ತಮ ಶೃಂಗಾರದ ಸನ್ನಿವೇಶಗಳಿವೆ.  ನಿಮಗೆ ಅಭಿನಂದನೆಗಳು.

ವನಜಾ ಸುರೇಶ್ ಹಾಸನ

Leave a Reply

Back To Top