“ಬೆಳಕಾಗಲಿ ಬದುಕು”

ಕವಿತೆ

ಬೆಳಕಾಗಲಿ ಬದುಕು

ಪ್ರೊ.  ಚಂದ್ರಶೇಖರ ಹೆಗಡೆ

ಪಲವಿನ್ನೂ ಹಸಿ ಹಸಿಯಾಗಿದೆ

ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ

ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ

ಕಮಟಾಗಿ  ಹಳಸಿಹೋಗುವ ಮುನ್ನ

ಯಾರ ಹೆಸರಿನ ಷರಾ ಬರೆದಿದೆಯೋ 

ಕತ್ತಿಯಂಚಿನಲಿ ಕತ್ತರಿಸಿಕೊಂಡು 

ಹೆಣವಾಗಿರುವ ಜೀವಕೋಶಗಳ ಮೇಲೆ 

ಸಾವೊಂದು ಬದುಕಾಗಿದೆ ನನಗೆ

ಬದುಕೊಂದು ಸಾವಾಗಿದೆ ಕೊನೆಗೆ

ಪಯಣವಿನ್ನು ಯಾರದೋ ಮನೆಗೆ

ನೇತುಹಾಕಿರುವ ಅಂಗಡಿಯೊಳಗೆ 

ಒಡಲುಗೊಂಡದ್ದೆಲ್ಲವೂ ಬಿಕರಿಗೆ

ಕಾಲು ಕೈ ಕಣ್ಣು ತೊಡೆಗಳೆಲ್ಲ

ಮಾಗಿದ ಹಣ್ಣುಗಳ ಬನದ ಬೆಲ್ಲ

ತನುವ ತುಂಬಿಕೊಳ್ಳಿ ಬಾಯಿ ಚಪ್ಪರಿಸಿ

ಮುತ್ತಿಟ್ಟು ನಾಲಿಗೆಯ ಸುಲಿದ ರಸಗಲ್ಲದಲಿರಿಸಿ

ಮುಗಿದು ಹೋಯಿತು ಕತೆಯೆಂದುಕೊಂಡೆ

ಆರಂಭವಿದೆಂದು ಅಂತರಂಗ ತುಂಬಿಕೊಂಡೆ

ಉಸಿರೆಳೆದುಕೊಂಡು ರಸಾಯನ ಕುದಿಸಿ

ಶಾಶ್ವತವಾಗಿರುವಂತೆ ನೆನಹು ಹಸಿ ಹಸಿ

ತುಂಡು ತುಂಡು ದಿಂಡು ಸುಖದ ಗೀರು

ಏರಬೇಡಿ ಇಮ್ಮನದಿ ನಿಂತ ತೇರು

ಮಿಗೆಯಾಗಲಿ ಆಯಸ್ಸು

ಉಂಡು ಮರೆತ ಒಡಲ ಕನಸು

ಅಳುವ ಕಂಡಿಲ್ಲ ಕೊಂದಹರೆಂದು

ನಂಬಿಲ್ಲ ತಕ್ಕುದ ಮಾಡುವನೆಂದು

ಬಯಲಾಗುವುದರಲ್ಲಿಯೇ ಬದಲು

ಬೆಳಕಾಗಲಿ ಬದುಕೆನ್ನುವುದೇ ಮೊದಲು

*********************************

Leave a Reply

Back To Top