ಪುಸ್ತಕ ವಿಮರ್ಶೆ

ಪುಟ್ಟ ಗೌರಿ

ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು

ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ,

ಹೊಡೆಯಲೆತ್ತಿರುವ ಕೈ

ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ,

ಎಲೆಲೇ,

ತಡೆಯಿರಿ, ತಡೆಹಿಡಿಯಿರಿ:

ಮಗು ನಗುತ್ತಿದೆ, ಮಗು ಆಡುತ್ತಿದೆ.

              ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ )

ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು ನಮ್ಮ ದುರಂತ, ಮಗುತ್ವದ ಆಸೆಯ ಮುಂಗಾಣ್ಕೆ ಅವರ ದೊಡ್ಡತನ. ‘ಮಗು ಆಡುತ್ತಿದೆ’ ‘ಮಗು ನಗುತ್ತಿದೆ’ ಎನ್ನುವುದು ಇಂದಿಗೆ ಇದೆಯೇ? ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇಂದು ಮಗು ನಗಲು, ಆಡಲು ಒಂದಷ್ಟು ಅವಕಾಶ ಕೊಡಬೇಕಾಗಿದೆ. ಸಮಾಜವೊಂದು ನಿರಂತರವಾಗಿ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಂವಹನಗಳಿಂದ ಬೆಳೆಯುತ್ತಿರುವಾಗ, ಅದನ್ನನುಸರಿಸುವ ಮನುಷ್ಯನ ಅಭಿವ್ಯಕ್ತಿಯಲ್ಲಿ ಬದಲಾಗುತ್ತಾ ಬಹುದೊಡ್ಡ ಅವಕಾಶಗಳನ್ನು ಆಯಾ ಕಾಲದಲ್ಲಿ ಬದುಕುತ್ತಿರುವವರಿಗೆ ಮೇಲಿನ ಅಂಶಗಳು ಹಾದಿ ತೆರೆದು ಕೊಡುತ್ತದೆ. ಅವುಗಳ ಬಳಕೆ ನಮ್ಮ ಯೋಗ್ಯತೆಯ ಪ್ರತೀಕದಂತೆಯೆ; ನಮ್ಮ ಸಮಾಜದ ನಡೆ, ಇತಿ-ಮಿತಿಯನ್ನು ತಿಳಿಸುತ್ತದೆ. ನಮ್ಮೊಳಗಿನ “ಮಗು” ತನವನ್ನು ಆದಷ್ಟು ಕಾಪಿಟ್ಟುಕೊಂಡು ಬದುಕಬೇಕಾದ ಅಗತ್ಯ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳು ಆರಂಬ ಮಾಡಿ, ಮಾಡಲು ಹೊರಟಿರುವ ದೊಡ್ಡ ಕೆಲಸವನ್ನು, ಅದು ಉಂಟುಮಾಡುವ ಪರಿಣಾಮವನ್ನು  ಬಿತ್ತನೆಮಾಡಿ ಪ್ರಯೋಗಿಸಿಯೇ ನೋಡಬೇಕಾದ ಅಗತ್ಯವಿಲ್ಲ. ಊಹಿಸುವ ಒಂದಷ್ಟು ಪ್ರಜ್ಞೆಯಿದ್ದರೆ, ಮುಂಗಾಣ್ಕೆ ಕೈ ಹಿಡಿದಿದ್ದರೆ, ಅಪಾಯಕಾರಿ ಪ್ರಯೋಗಗಳಿಂದ ದೂರ ಉಳಿವಂತೆ ಮಾಡುವಲ್ಲಿ ಬುದ್ದಿ ಭಾವಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ. ಈ ಮುಂಗಾಣ್ಕೆಯ ಆಗಮನಕ್ಕೆ ಬದುಕನ್ನು ಸಹಜವಾಗಿ ಗಮನಿಸುತ್ತಲೇ, ಅದರ ಉಪೋತ್ಪನ್ನವಾದ ಬರಹಗಳ ರಾಶಿಯೂ ಕೈ ಹಿಡಿಯುತ್ತವೆ. ಜೊತೆಗೆ ಎಲ್ಲಾ ಲಲಿತಕಲಾ ಪ್ರಕಾರಗಳೂ ಬದುಕ ಹಸನಾಗಿಸುವ, ಸಹ್ಯಗೊಳಿಸುವ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಗ್ರಹಿಕೆ ಮತ್ತು ಅಯ್ಕೆಗಳಲ್ಲಿ ಬಿದ್ದಿರುವ ಕಂದಕವೇ ಇಂದಿನ ತಲೆಮಾರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಮನುಷ್ಯ ಕೇವಲ ಹೊರ ಆಕಾರಗಳಿಂದ ಮನುಷ್ಯನಾಗಿದ್ದಾನೆ, ಒಳಗೆ ‘ಆ’ ಮನುಷ್ಯತ್ವ ಇದೆಯೇ? ಈ ಪ್ರಶ್ನೆ ಕಾಡುತ್ತಿರುವಾಗ ಕಣ್ಣ ಮುಂದಿನ ಎಳೆಯ ಮಕ್ಕಳಿಗೆ ನಾವು ಕೊಟ್ಟು-ಬಿಟ್ಟುಹೋಗುವುದಾದರೆ ಏನನ್ನು? ಮತ್ತು ಏಕೆ? ಈ ಪ್ರಶ್ನೆಗಳು ಬಹಳವಾಗಿ ಕಾಡುತ್ತದೆ. ಪುಟ್ಟಗೌರಿ ಸಂಕಲನ ‘ಆ’ ಬಿಟ್ಟು ಕೊಟ್ಟುಹೋಗಬೇಕಾದ ಅಂಶಗಳ ಕಡೆಗೆ ಗಮನ ಸೆಳೆಯುವುದರಿಂದಲೇ ಸದ್ಯದ ಒತ್ತಡದಲ್ಲಿ ಮುಖ್ಯ ಎನಿಸುತ್ತದೆ.

ಬಾಲ್ಯದಲ್ಲಿ ಮಕ್ಕಳ ಶಿಕ್ಷಣ ಕುಟುಂಬದಿಂದ ಪ್ರಾರಂಭವಾಗಿ, ಶಾಲೆಯೆಂಬ ವ್ಯವಸ್ಥೆಯಲ್ಲಿ ಒಂದು ವ್ಯವಸ್ಥಿತ ಆಕಾರ ಪಡೆಯುತ್ತಿತ್ತು. ಇಂದಿನ ಶಿಕ್ಷಣ ರಜೆಯ ಮಜೆಯಾಗಿಯಷ್ಟೇ ಉಳಿದಿದೆ ಎನ್ನುವುದು ಮೊದಲ ಸಮಸ್ಯೆ. ಹಿಂದಿನ ತಲೆಮಾರು ತನ್ನ ಬಾಲ್ಯದ ಹೆಚ್ಚು ಸಮಯ ಕಳೆಯುತ್ತಿದ್ದುದು ಶಾಲೆಯ ವಾತಾವರಣದಲ್ಲಿ. ಇಂದು ಮನೆಯ ವಾತಾವರಣ ಬೇಸರವೆನಿಸಿದರೆ ಶಾಲೆಯ ಕಡೆ ಮುಖಮಾಡುವ, ಅದೂ ರಜೆಯಿಲ್ಲದಿದ್ದರೆ ಎನ್ನುವಷ್ಟು ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಬದಲಾಗಿವೆ. ಒಂದೆಡೆ ಕೂರಲಾರದ, ನಿಂತಲ್ಲಿ ನಿಲ್ಲಲಾರದ, ಒಬ್ಬರನ್ನೊಬ್ಬರು ಸಹಿಸಲಾರದ, ಸದಾ ಅನುಮಾನಿಸುವ ಮಟ್ಟದ ಮನಸ್ಥಿತಿಗಳಲ್ಲಿರುವವರಲ್ಲಿ “ಸ್ವತಂತ್ರ”ವನ್ನು ಕುರಿತು ಅಪಾರ ಕಾಳಜಿಯಿದೆ, ಆದರೆ ತಮ್ಮದು “ಸ್ವೇಚ್ಛಾಚಾರ”ವೆಂಬ ಸಣ್ಣ ಗಮನವೂ ಇಲ್ಲ. ಇವುಗಳನ್ನು ಆಲೋಚಿಸವಷ್ಟೂ ನಮಲ್ಲಿ ವ್ಯವಧಾನವಿಲ್ಲ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತಾಡುವ ಕಣ್ಣಿಗೆ, ಕಣ್ಣೆದುರಿನ ಎಳೆಯ ಮಕ್ಕಳ ಬುದ್ದಿ ಭಾವಗಳ ಸಂಬಂಧದಲ್ಲಿ ಆಗಿರುವ ‘ವಿಘಟನೆ’ ಕಾಣುತ್ತಿದ್ದರೂ ಅದಕ್ಕೆ ಕಾರಣ, ಪರಿಹಾರ ಮಾರ್ಗೋಪಾಯಗಳ ಆಲೋಚನೆ ನಮ್ಮೊಳಗೆ ಬಂದೇ ಇಲ್ಲ. ಅಥವಾ ಎಲ್ಲವನ್ನು ಕಂಡೂಕಾಣದ ಜಾಣಕುರುಡರಂತೆ ವರ್ತಿಸುತ್ತಿದ್ದೇವೆ. ಈ ಜಾಣಕುರುಡುತನ ಕಳೆಯದೆ ಉಳಿದ ಹಾದಿ ಕ್ರಮಿಸಲಾರೆವು ಎಂಬುದು ಇನ್ನಾದರೂ ನಮಗೆ ಅರ್ಥವಾಗಬೇಕಿದೆ. “ಉತ್ತರೋತ್ತರ ವಾದ”ಗಳಲ್ಲಿ ಮಿಂದು ಬಂದಿರುವವರಿಗೆ, “ವಿಶ್ವಗುರು” ಪಟ್ಟದ ಕುರ್ಚಿಗೆ “ಟವಲ್” ಹಾಕುವ ಕಾರ್ಯದಲ್ಲಿ ಸದಾನಿರತರಾಗಿರುವ ನಮಗೆ ಮೇಲಿನ ಅಲೋಚನೆ ಮತ್ತು ಕಾಳಜಿಗಳು ಬಾಲಿಷವಾಗಿ ಕಂಡರೆ ಅಶ್ಚರ್ಯವಿಲ್ಲ. ಅದರೆ ಒಂದಂತೂ ಸತ್ಯ – ಆಂತರಿಕವಾಗಿ ಸದೃಢರಾಗದ ಹೊರತು, ಹೊರಗಿನ ಬಲಿಷ್ಟತೆ ಮಾತ್ರ ಜೀವಂತವಾಗಿ ಉಳಿಯುವ ಹಾದಿ ಎಂದು ನಂಬುವುದು, ‘ಕಲ್ಪನೆ’ಯಲ್ಲಿ ನಿಂತು ‘ಸದ್ಯ’ದ ಒತ್ತಡಕ್ಕೆ ಮಾಡುವ ಅಪಾರ ಪ್ರಮಾಣದ ಹಾನಿಗೆ ಹಾದಿ ಮಾಡಿಕೊಡುತ್ತಿದೆ. ಢಾಳಾಗಿ ಕಾಣಿಸುವಷ್ಟು ಸಮಸ್ಯೆ ಇರುವಾಗ, ಒಂದು ಭೂಭಾಗದ ಪರಿಸರ, ನಂಬಿಕೆ, ಆಚರಣೆ, ಅವುಗಳು ಕಟ್ಟಿಕೊಳ್ಳುವ ಕಲ್ಪನೆ ಮತ್ತು ಸೃಷ್ಟಿಸಿಕೊಂಡ ಭಾಷೆ, ಅವುಗಳ ಒಟ್ಟೂ ಮೊತ್ತವಾದ “ಸಂಸ್ಕೃತಿ”ಯ ಆಕಾರ ಇಂದು ಹೇಗಿದೆ? ಇದ್ದರೆ ಅದರ ಕೊಡುಗೆ ಎನು? ಪಲ್ಲಟವಾಗಿದ್ದರೆ ಏಕೆ? ಈ ಪ್ರಶ್ನೆಗಳು ಹೊಕ್ಕದ ಹೊರತು ಮುಂದಿನ ಎಳೆಯ ತಲೆಮಾರಿನ ಕುರಿತು ಸ್ವಲ್ಪವೂ ಯೋಚಿಸಲಾರೆವು. ಈ ಪ್ರಶ್ನೆಗಳು ಕಾಡಲ್ಪಟ್ಟಿರುವ ಕೆಲವರಾದರೂ ಒಂದಷ್ಟು ಆ ಕಡೆಗೆ ಗಮನ ಹರಿಸಿದ್ದಾರೆ. ಅಂತಹವರಲ್ಲಿ ಜಯಲಕ್ಷ್ಮೀ ಎನ್. ಎಸ್. ಕೋಳಗುಂದರೂ ಒಬ್ಬರು, ಅಂತಹಾ ಸಂಕಲನಗಳಲ್ಲಿ “ಪುಟ್ಟಗೌರಿ” ಯೂ ಒಂದು.

ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು ಹೇರಳವಾಗಿ ಬಂದಿದೆ. ರಾಜರತ್ನಂ ರಿಂದ ಹಿಡಿದು ಇತ್ತೀಚೆಗೆ ಮಕ್ಕಳ ಕವಿತೆಗಳ ಸಮಗ್ರದವರೆಗಿನ ಕವಿತೆಗಳು ವ್ಯಾಪ್ತಿ, ವಿಸ್ತಾರ ಮತ್ತೊಂದಷ್ಟು ಸಮಸ್ಯೆಗಳ ಕುರಿತು ಮಾತಾಡುತ್ತದೆ. ಮಕ್ಕಳಿಗಾಗಿ ಬರೆಯುವಾಗ ವಯಸ್ಸಿನ ಮಿತಿ ಇರುತ್ತದೆಯೇ? ಇದ್ದರೆ ಏಕೆ? ಈ ಪ್ರಶ್ನೆಗಳು ಬಹುಮುಖ್ಯವಾದದ್ದು. ಮಕ್ಕಳ ಕವಿತೆಗಳು ಕೇವಲ ಮಕ್ಕಳಿಗಲ್ಲ, “ಮಗು ಮನಸ್ಥಿತಿ” ಯನ್ನು ಕಾಪಿಟ್ಟುಕೊಳ್ಳುವ ಅಗತ್ಯವಿರುವ ಎಲ್ಲರಿಗೂ ಎನ್ನುವುದು ಸ್ಪಷ್ಟ ಉತ್ತರವಾದರೂ, ಆ ಕಾರ್ಯ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹಳ ಮುಖ್ಯ. ಭಾಷೆ, ವಸ್ತು, ರೂಪಗಳು ಮೊದಲ ತಲೆಮಾರಿನಂತೆಯೇ ಇರುವ ‘ಪುಟ್ಟಗೌರಿ’ಯಲ್ಲಿ ಗಮನ ಸೆಳೆಯುವುದು ಕವಿತೆಗಳಲ್ಲಿನ “ಲಯ”. “ಲಯ” ಕಳೆದುಕೊಂಡು ಬದುಕುತ್ತಿರುವವರಿಗೆ “ಲಯ”ವಾಗದಂತೆ “ಲಯ”ದಲ್ಲಿಯೇ “ಬದುಕ ಲಯ”ದ ಕಡೆಗೆ ಗಮನಸೆಳೆಯುವಂತೆ ಈ ಸಂಕಲನವಿದೆ. ಮೇಲಿನ ವಾಕ್ಯದಲ್ಲಿ ಬಳಸಿರುವ “ಲಯ” ಪದವು ಕೇವಲ ವಾಕ್ಯರಚನೆಯ ಆಟಕ್ಕಾಗಿ ಆಲ್ಲ. ಒಮ್ಮೆ ಸಂಕಲನದ ಕವಿತೆಗಳನ್ನು ಗಟ್ಟಿಯಾಗಿ ಓದಿನೋಡಿ “ಲಯ” ಅನುಭವಕ್ಕೆ ಬರುತ್ತದೆ. ಮೇಲಿನ ಅಷ್ಟೆಲ್ಲಾ ‘ಲಯ ಕಾರಣ’ಗಳನ್ನು ಒಳಗಿಟ್ಟುಕೊಂಡು ಬದುಕುತ್ತಿರುವ ನಮಗೆ ಕಾವ್ಯದ ಲಯ ಕಾಣಿಸುವ ಸತ್ಯ ಏನನ್ನು? ಕವಿ ಏಕೆ ಲಯವಿಲ್ಲದ ಬದುಕಿನ ನಡುವೆ, ಮತ್ತೆ ಲಯದ ಕಡೆ ಮುಖಾಮುಖಿಯಾಗಿ ಕಲಾತ್ಮಕ ಅಭಿವ್ಯಕ್ತಿ ಮಾಡುತ್ತಾನೆ/ಳೆ? ಕವಿಯ ಈ ಮನಸ್ಥಿತಿ ಎಂತದ್ದು? ಮತ್ತು ಇದರ ಹಿಂದಿರುವ ಉದ್ದೇಶ ಏನು? ಮೇಲಿನ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಈ ಸಂಕಲನ ತನ್ನ ಕಡೆಗೆ ಸೆಳೆದು ಬೆರಗಾಗಿಸಿ ಮುಖಮಾಡುವಂತೆ ಮಾಡುತ್ತದೆ.

‘ಪುಟ್ಟಗೌರಿ’ ಸಂಕಲನವು ನಲವತ್ತಮೂರು ಕವನಗಳ ಗುಚ್ಛ. ಹೆಸರಿನಲ್ಲಿ ಪುಟ್ಟ ಇದೆಯಷ್ಟೇ, ಸತ್ವದಲ್ಲಿ ಹಿರಿದಾಗಿಯೇ ಇದೆ. ಶಿಕ್ಷಕಿಯಾಗಿರುವ ಕಾರಣದಿಂದ ಕವಯತ್ರಿಗೆ ಮಕ್ಕಳೊಂದಿಗಿನ ಒಡನಾಟ ಮತ್ತು ಅವರ ಭಾಷೆಯ ಜಾಡನ್ನು ಹಿಡಿದು ಭಾವವನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಕಲೆ ಸಹಜವಾಗಿಯೇ ಸಿದ್ದಿಸಿದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಇರಲೇಬೇಕಾದ ಜಾಗೃತಾವಸ್ಥೆ. ಸಂಕಲನದ ಪ್ರತಿಯೊಂದು ಕವನವು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ವಿಶಿಷ್ಟತೆಯನ್ನು ಸಹಜವಾಗಿ ಪಡೆದಿರುವ ರಚನೆಯು, ಕವನಗಳ ಒಳ ಹೊರಗುಗಳ ಬಲ್ಲವರಾದ ಕವಯತ್ರಿಗೆ ಈ ರಚನೆಗಳು ಸವಾಲಿನ ಕೆಲಸ ಆಗಿರಲಾರದು. ಇಲ್ಲಿನ ಕವನಗಳು ಕಲಾತ್ಮಕ ಹೊದಿಕೆ ಹೊದ್ದಿರುವುದು ವಸ್ತು ಮತ್ತು ಭಾಷೆಯ ಮೇಲ್ನೋಟಕ್ಕೆ ತಿಳಿಯುತ್ತದೆ. ಕವನವೊಂದು ಹೀಗೆ ಅಖಂಡರೂಪ ಪಡೆಯಲು ಕವಿ ತನ್ನೆಲ್ಲಗಬಹುದಾದ ಕವನಗಳ ಆವಿರ್ಭಾವಕ್ಕೆ ನನ್ನ ಜೀವಮಾನದ ಕೊನೆಯ ಕವನವೇ ಇದೆಂದು ಭಾವಿಸಿದಾಗ ಮಾತ್ರ ಕುಸುರಿ ಕೆಲಸಗಳು ಸಾಧ್ಯವಾಗುತ್ತದೆ. ಅಂತಹಾ ರಚನೆಗಳು ಇಲ್ಲಿ ಕಣ್ಣಿಗೆ ಕಂಡಿವೆ.

ಸಹಜವಾಗಿಯೇ ಮಕ್ಕಳ ಕವನಗಳು ಹಾಡುವ ಮಟ್ಟನ್ನು ಹೊಂದಿದ್ದಾಗ ಕಂಠಸ್ಥವಾಗುತ್ತವೆ. ನೆನಪಿನಲ್ಲಿ ಉಳಿವುದಕ್ಕೆ ಮುಖ್ಯ ಕಾರಣವೇ ಕವಿ ಬಳಸುವ ಭಾಷೆ. ಭಾಷೆಯೊಂದರಲ್ಲಿನ ವಾಕ್ಯ ರಚನೆಯ ನಿಯಮಗಳನ್ನು ಮುರಿಯುವಿಕೆ ಮತ್ತು ಬೇರೆಯದೇ ಆದ ಕ್ರಮದಲ್ಲಿ ಪದಗಳನ್ನು ಕೂಡಿಸುವಿಕೆ/ಜೋಡಿಸುವಿಕೆಯ ಮೂಲಕ  ಕವನವೊಂದು ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಈ ಮುರಿಯುವಿಕೆಯು ಆಂತರಿಕವಾಗಿ ಕವನವೊಂದರಲ್ಲಿ ಲಯದ ಆವಿರ್ಭಾವಕ್ಕೆ ಕಾರಣವಾಗುತ್ತದೆ. ‘ಲಯ’ ಒಮ್ಮೆ ಸಿದ್ದಿಸಿತೆಂದರೆ ಮಕ್ಕಳ ಮನಸ್ಸನ್ನು ಹೊಕ್ಕು ಕವನವೊಂದು ಸಾರ್ಥಕ್ಯ ಪಡೆದಂತೆ. ಸದ್ಯದಲ್ಲಿ ರಚನೆಯಾಗುತ್ತಿರುವ ಮಕ್ಕಳ ಕವನಗಳನ್ನು ಗಮನಿಸಿದ್ದೇನೆ ಅವು ವಿಸ್ತಾರವಾದ ಬೌದ್ಧಿಕಕ್ರಿಯೆಯ ಅಭಿವ್ಯಕ್ತಿ ಎಂದು ಕೆಲವು ರಚನೆಗಳು ಆಕಾಗ ಪತ್ರಿಕೆಗಳಲ್ಲಿ ಓದಿದಾಗ ಎನಿಸಿದ್ದಿದೆ. ಇದಕ್ಕೆ ಬಹುಮುಖ್ಯ ಕಾರಣವೇ ಮಕ್ಕಳ ಭಾಷಾ ರಚನೆಯನ್ನು ಗಮನಿಸದ ಮತ್ತು ಅವರ ಭಾವಕೋಶವನ್ನು ಪ್ರವೇಶಿದೆ ಇರುವುದೇ ಕಾರಣಗಳಾಗಿದೆ. ಇಲ್ಲಿನ ರಚನೆಗಳು ಆ ಸಮಸ್ಯೆಯಿಂದ ಹೊರಗೆ ಉಳಿದಿರುವುದೇ ವೃತ್ತಿ ಮತ್ತು ತಾಯೊಡಲ ತಲ್ಲಣಗಳು ಇರುವುದರಿಂದ.

ಪುಕ್ಕವ ತಿರುವುತ ರೆಕ್ಕೆಯ ಬೀಸುತ

ಎಲ್ಲಿಗೆ ಹೊರಟೆ ಎಲೆ ನವಿಲೆ

ಗರಿಗಳ ಬಿಚ್ಚಿ ಕುಣಿಯಲು ನೀನು

ಸ್ವರ್ಗವ ಕಾಣುವೆ ನಾನಿಲ್ಲೆ

                                        ( ನವಿಲೇ ನವಿಲೆ )

ನಮ್ಮ ಮನೆಯ ನಾಯಿಮರಿ

ಕದ್ದು ತಿಂತು ಕಾಯಿತುರಿ

                                         ( ಕಳ್ಳ ನಾಯಿ )

ಕವನಗಳಿಂದ ಅಯ್ದ ಸಾಲುಗಳನ್ನೊಮ್ಮೆ ಗಮನಿಸಿ. ಮೊದಲ ಸಾಲಿನಲ್ಲಿ ಬರುವ ಪುಕ್ಕ, ರೆಕ್ಕೆ, ಎಲ್ಲಿಗೆ, ಎಲೆ ಪದಗಳು ಸೃಷ್ಟಿಸುವ ಪ್ರಾಸ ಬಹುಮುಖ್ಯವಾಗುತ್ತದೆ. ಎರಡನೆಯ ಸಾಲನ್ನು ಗಟ್ಟಿಯಾಗಿ ಓದಿದಾಗ ಪಡೆವ ನಿಲುಗಡೆಯು (ಯತಿ) ಸಹಾ ಇಲ್ಲಿ ಮುಖ್ಯವಾಗುತ್ತದೆ. ‘ಎಲ್ಲಿಗೆ ಹೊರಟೆ, ಎಲೆ ನವಿಲೆ’ ಎಂದು ಓದುವಾಗಲೆ ಪ್ರಶ್ನೆಯೊಂದು ಆರಂಭವಾಗಿ ಕಾವ್ಯ ತನ್ನ ಮುಂದಿನ ದಿಕ್ಕನು ಪಡೆಯುತ್ತದೆ. ಮೊದಲಿಗೆ ಈ ಪ್ರಶ್ನೆಯ ಮೂಲಕ ಉಂಟಾದ ಕುತೂಹಲ ಕವನವನ್ನು ಪೂರ್ಣವಾಗಿ ಓದುವಂತೆ ಪ್ರೇರೇಪಿಸಿಬಿಡುತ್ತದೆ. ಎರಡನೆಯ ಉದಾಹರಣೆಯಲ್ಲಿನ ನಾಯಿಮರಿ, ಕಾಯಿತುರಿ ಪದಗಳು ಪಡೆವ ವೇಗವಾದ ಓಟವನ್ನು ಗಮನಿಸಿ. ನಿಲುಗಡೆಯನ್ನು ಬಯಸದ ಸರಾಗ ಓಟ. ನಿಲ್ಲಿಸುವ ಮತ್ತು ವೇಗಪಡೆದುಕೊಳ್ಳುವ ಗುಣಗಳು ಮಕ್ಕಳನ್ನು ಬೇಗ ಗಮನಸೆಳೆದುಬಿಡುತ್ತದೆ. ‘ಕಳ್ಳ ನಾಯಿ’ ಕವನವನ್ನು ಕವಿ ಇನ್ನೊಂದಷ್ಟು ಬೆಳೆಸಬಹುದಾದ ಸಾಧ್ಯತೆಯಿದ್ದರು ಏಕೆ ಬೆಳೆಸಲಿಲ್ಲವೆನ್ನುವುದೇ ಕುತೂಹಲದ ವಿಷಯ. ಇಲ್ಲಿ ಬೆಳವಣಿಗೆ ಪಡೆದಿದ್ದರೆ ಯಶಸ್ವಿ ಕವನಗಳ ಪಟ್ಟಿಯಲ್ಲಿ ಇದೂ ಒಂದು ಸೇರುತ್ತಿತ್ತು.

ಅಮ್ಮ ಅಮ್ಮ ಅಲ್ಲಿ ನೋಡು

ಹಾರುತಿರುವ ಚಿಟ್ಟೆ

ಅದರ ಹಾಗೆ ನನಗು ಕೂಡ

ರೆಕ್ಕೆ ಎರಡು ಕಟ್ಟೆ

                              ( ಅಲ್ಲಿ ನೋಡು ಚಿಟ್ಟೆ )

ಕವನದಲ್ಲಿನ ರಾಚನಿಕ ವಿನ್ಯಾಸವನ್ನು ಗಮನಿಸಿ. ನಾಲ್ಕು ಪಾದಗಳನ್ನು ಹೊಂದಿದ್ದು ಮೊದಲು, ಮೂರನೆಯ ಪಾದಗಳು ಸಮಾನ ಹನ್ನೆರಡು ಮಾತ್ರೆಗಳಿಂದ ಕೂಡಿದ್ದು, ಎರಡು, ನಾಲ್ಕನೆಯ ಸಾಲು ಒಂಭತ್ತು ಮಾತ್ರೆಗಳಿಂದ ಕೂಡಿದೆ. ಈ ರಚನೆಯಲ್ಲಿನ ಭಾಷೆ ಮತ್ತು ತೀವ್ರತಮ ಓಟಗಳು ಚಿಟ್ಟೆಯ ರೆಕ್ಕೆ ಬಡೆವಂತೆಯೇ ಭಾಸವಾಗುತ್ತದೆ. ಅನಂತರ ಈ ಲಯ ನಿಧಾನಗತಿ ಪಡೆದು ಕಥನಕ್ರಮದ ಕಡೆಗೆ ನಡೆದುಬಿಡುತ್ತದೆ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಇಂತ ರಚನೆಗಳನ್ನು ಮಾಡಬಲ್ಲರು ಎನಿಸಿದೆ. ಮೊದಲು ಕುತೂಹಲ ಅಅನಂತರ ಬೋಧನೆ. ಈ ನಿಯಮದಲ್ಲಿ ಕವನ ಸಾಗುತ್ತದೆ.

ಕಥನಕ್ರಮ ಮಕ್ಕಳ ಕವಿತೆಗಳ ಸಾಮಾನ್ಯ ರಚನಾಕ್ರಮ. ಮಕ್ಕಳ ಕವನಗಳ ಪರಂಪರೆಯಲ್ಲಿ ರಚನೆಯಾಗಿರುವ ಹಲವಾರು ಉದಾಹರಣೆಗಳನ್ನು ಇದಕ್ಕೆ ಸಾಕ್ಷಿಯಾಗಿ ಹೆಕ್ಕಿ ಕೊಡಬಹುದು. ‘ಆ’ ಕವನಗಳಲ್ಲಿ ಒಂದು ಸಾಯುಜ್ಯಸಂಬAಧ ಇರುವುದಕ್ಕೆ ‘ಆ’ ಸಮಾಜದಲ್ಲಿನ ಕುಟುಂಬಗಳಲ್ಲಿದ್ದ ಅವಿಭಜತ ವ್ಯವಸ್ಥೆ ಬಹುಮುಖ್ಯ ಕಾರಣ. ಬದಲಾದ ಕಾಲಮಾನದಲ್ಲಿ ಬದುಕುತ್ತಿರುವ, ಕಾವ್ಯರಚನೆ ಮಾಡುತ್ತಿರುವವರಲ್ಲಿ ಕಥನಕ್ರಮ ಸಹಜವಾಗಿ ಉಂಟಾಗದಿರಲು ವಿಭಜನೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ವಿವರಣೆಗಳನ್ನು ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ವಿಭಜಿತ ಕುಟುಂಬಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಕವಿಯೊಬ್ಬನ ಗಮನ ಮತ್ತು ಎಳೆಯ ತಲೆಮಾರಿಗೆ ತಾನು ದಾಟಿಸಬೇಕಾದ ಮೌಲ್ಯ ಎಂತದ್ದೆನ್ನುವ ಪರಿವೆ ಇರಬೇಕಾದುದು ಬಹುಮುಖ್ಯವಾದದ್ದು. ಸಂಕಲನದಲ್ಲಿರುವ ಎರಡು ಕವನಗಳಾದ ‘ನನ್ನ ದಿನಚರಿ’ ಮತ್ತು ‘ಚಂದಾ ಮಾಮ ಬಾರೋ’ ಗಳಲ್ಲಿರುವ ವಿರೋಧಾಭಾಸವನ್ನೊಮ್ಮೆ ಗಮನಿಸಿ

ರಾತ್ರಿಯ ಹೊತ್ತು ಅಜ್ಜೆಯು ಹೇಳುವ

ಚಂದದ ಕಥೆಯ ಕೇಳುವೆನು

ಅಮ್ಮನು ಹಾಡುವ ಜೋಗುಳ ಕೇಳುತ

ಮಲಗಲು ನಿದಿರೆಗೆ ಜಾರುವೆನು

                                       ( ನನ್ನ ದಿನಚರಿ )

ಇರುಳಿನ ಸಮಯದಿ ಕತೆಗಳ ಹೇಳುವ

ಮುದ್ದಿನ ಅಜ್ಜಿಯು ಮನೆಯಲ್ಲಿಲ್ಲ

ಹೆಗಲಿನ ಮೇಲೆ ಹೊತ್ತು ಮೆರೆಸುವ

ತಾತನು ನಿನ್ನೆಡೆ ಬಂದಾಯ್ತಲ್ಲ

                                   ( ಚಂದಾ ಮಾಮ ಬಾರೋ )

ಕವನಗಳಲ್ಲಿನ ಎರಡು ಭಿನ್ನ ಭಾವಗಳು ಮತ್ತದಕ್ಕೆ ಕಾರಣವಾಗಿರುವ ನಮ್ಮ ಸಮಾಜದಲ್ಲಿನ ಕೌಟುಂಬಿಕ ವ್ಯವಸ್ಥೆಯನ್ನೊಮ್ಮೆ ಗಮನಿಸಲೇ ಬೇಕು. “ರಾತ್ರಿಯ ಹೊತ್ತು ಅಜ್ಜೆಯು ಹೇಳುವ, ಚಂದದ ಕಥೆಯ ಕೇಳುವೆನು” ಎನ್ನುವಲ್ಲಿ ಕವಿತೆ ಉಂಟುಮಾಡುವ ಭಾವ ಕೂಡುಕುಟುಂಬ ಮೂರು ತಲೆಮಾರುಗಳ ಸಹಜ ಸಂವಹನದ ಚಿತ್ರಣವನ್ನು ಸೃಷ್ಟಿಸಿದರೆ, ಅಅನಂತರ ಕವನದಲ್ಲಿನ “ಮುದ್ದಿನ ಅಜ್ಜಿಯು ಮನೆಯಲ್ಲಿಲ್ಲ” ಎನ್ನುವ ಸಾಲು ಶೂನ್ಯಭಾವವನ್ನು ಕಂಡರಿಸುತ್ತಿದೆ. ಅದರ ಜೊತೆಗೇ ಅದೇ ಕವನದಲ್ಲಿನ ಕೊನೆಯ ಸಾಲು “ತಾತನು ನಿನ್ನೆಡೆ ಬಂದಾಯ್ತಲ್ಲ” ಎನ್ನುವುದು ಸಾವಿನ ಅಥವಾ ಪರಿತ್ಯಕ್ತ ವಿಷಾದ ಭಾವವನ್ನು ಹೊಂದಿದೆ.

ಈ ಮೇಲಿನ ಕವನಗಳನ್ನು ಸಂಕಲನದಲ್ಲಿ ಜೋಡಿಸಿರುವ ಕವಿಯ ಆಲೋಚನಾ ಕ್ರಮ ಬೆರಗಾಗಿಸುತ್ತದೆ. ಸಂಕಲನದಲ್ಲಿ “ನನ್ನ ದಿನಚರಿ” ಕವನ ಮೊದಲು ಬಂದರೆ, ಅನಂತರದಲ್ಲಿ “ಚಂದಾ ಮಾಮ ಬಾರೋ” ಕವನವಿದೆ. ಸಂಕಲನದಲ್ಲಿ ಹೀಗೆ ಇಟ್ಟಿರುವ ಕಾರಣವೇನು? ಮತ್ತು ಏಕೆ? ಇದರ ಮೂಲಕ ಕವಿ ಹೊಮ್ಮಿಸಲು ಹೊರಟಿರುವ ಭಾವ ಎಂತಹುದು? ಎನ್ನುವುದು ಕಾಡಲು ಪ್ರಾರಂಭ ಮಾಡಿಬಿಡುತ್ತದೆ. ಇದೆಲ್ಲದಕ್ಕೂ ಕಳೆದುಹೋದ ಕಾಲದೊಂದಿಗೆ ಇದ್ದ ಕೂಡುಕುಟುಂಬ ವ್ಯವಸ್ಥೆಯ ಮರುರಚನೆಯ ಹಂಬಲ ಮತ್ತು ಕಾಣೆಯಾದುದರ ಬಗೆಗೆ ಕವಿಯಲ್ಲಿನ ಶೋಕವೇ ಬಹುಮುಖ್ಯ ಕಾರಣವೆನಿಸಿದೆ. ಶೋಕದ ಅಂತರಾಳದಲ್ಲಿರುವ ಕಾಳಜಿ ಮುಂದಿನ ತಲೆಮಾರು ಇಂತಹ ಅಪಾಯದಿಂದ ದೂರಉಳಿವಂತೆ ಮಾಡುವಲ್ಲಿ ಜಾಗೃತವಾಗಿರುವ ಪ್ರಜ್ಞೆಯನ್ನು ತಿಳಿಸುತ್ತ, ಸಮಾಜಮುಖಿಯಾದ ಕೂಡುಕುಟುಂಬವ ವ್ಯವಸ್ಥೆಯ ಕಡೆಗೆ ಮುಖ ಮಾಡುವಂತೆ ಕವಿತೆಗಳ ವಿನ್ಯಾಸ ಸಾರುತ್ತಿದೆ. ಮತ್ತೊಂದು ಆಯಾಮದಲ್ಲಿಯೂ ಪರಿವಿಡಿಯಲ್ಲಿ ಬಂದಿರುವ ಕವನಗಳ ಜೋಡಣೆಯ ಕ್ರಮದ ಹಿಂದೆ ಕೆಲಸ ಮಾಡಿರುವ ಪ್ರಜ್ಞೆಯನ್ನು ಅರ್ಥೈಸುವ ಸಾಧ್ಯತೆಯಿದೆ, ಕುಟುಂಬ ವ್ಯವಸ್ಥೆಯ ಭೂತ ಮತ್ತು ವರ್ತಮಾನಗಳನ್ನು ಏಕಕಾಲದಲ್ಲಿ ಹೀಗಾಗಲು ಕಾರಣವಾದ ವಿಚಿತ್ರ ವ್ಯವಸ್ಥೆಯನ್ನು ಮಗುವಿನ ಅಳಲಿನ ಮೂಲಕ ವ್ಯಂಗ್ಯಮಾಲಾಗುತ್ತಿದೆ. ಈ ಎರಡೂ ಕಾರಣಗಳು ಸದ್ಯಕ್ಕೆ ಬೋಧಿಸುತ್ತಿರುವುದು ಸಹಜೀವನ, ಸಹಬಾಳ್ವೆ ಮತ್ತು ಸಹಜತೆಯನ್ನಲ್ಲದೆ ಮತ್ತಿನ್ನೇನೂ ಅಲ್ಲ. ಕವನ ಸಂಕಲನದ ಪೂರ್ಣವಾಗಿ ಸಂಬAಧಗಳ ಒಳಗೇ ನಡೆವ ಸಂವಾದಗಳ ಚಿತ್ರಣವೇ ಇದೆ. ತಾಯಿ-ಮಗು, ಅಜ್ಜಿ-ಮಗುವಿಂದ ಪ್ರಾರಂಭವಾಗಿ ಕೊನೆಗೆ ಚಂದ್ರ-ಮಗುವಿನ ಹಂತಕ್ಕೆ ತಲುಪಿಬಿಡುತ್ತದೆ. ಇದೊಂದು ಪೂರ್ಣಪ್ರಜ್ಞೆಯ ಆಗಮನದ ಹಂಬಲವನ್ನು ಹೊತ್ತ ಸಂಕಲನವೆನ್ನುವುದರಲ್ಲಿ ಯಾವ ಅನುಮಾನವೂ ನನ್ನಲ್ಲಿಲ್ಲ.

ಕೊನೆಯದಾಗಿ ನನಗೆ ಬಹುಮುಖ್ಯ ಎನಿಸಿರುವ ಎರಡು ಅಂಶದ ಕಡೆಗೆ ಗಮನಸೆಳೆದು ಸಂಕಲನವನ್ನು ಕುರಿತ ಬರವಣಿಗೆಯನ್ನು ಮುಗಿಸುವೆ. ಒಂದು ಪುರಾಣಪ್ರಜ್ಞೆ ಮತ್ತೊಂದು ವಿಜ್ಞಾನ. ಇವು ಮೇಲ್ನೋಟಕ್ಕೆ ವಿರುದ್ಧವಾದದ್ದೆನಿಸಿದೆ. ಅತಾರ್ಕಿಕ ಮತ್ತು ತಾರ್ಕಿಕ, ಭಾವಜಗತ್ತು ಮತ್ತು ವಾಸ್ತವಗಳ ಹಾಗೆ ಕಾಣುತ್ತದೆ. ಈ ಎರಡು ಅಂಶಗಳು ಇಂದಿಗೂ ಮನುಷ್ಯನನ್ನು ಕೈ ಹಿಡಿದು ನಡೆಸುತ್ತಿವೆ. ಪುರಾಣಗಳೆಂದೊಡನೆ ಕಟ್ಟು ಕಥೆಗಳೆನ್ನುವ, ಅತಾರ್ಕಿಕ, ಅವಾಸ್ತವಿಕವೆನ್ನುವ ಅಭಿಪ್ರಾಯ ಬುದ್ದಿಬಲಿತವರಿಂದ ಪ್ರಚಲಿತವಾಗಿದೆ. ಅಲ್ಲೊಂದು ಜನಸಮುದಾಯವೊಂದರ ಬಹುದೊಡ್ಡ ನಂಬಿಕೆ ಕೆಲಸ ಮಾಡಿದೆ, ಬದುಕನ್ನು ಹಸನಾಗಿಸಿದೆ. ಯಾವುದೋ ಕಾಲದ ಕಥೆಗಳಷ್ಟೇ ವಾಸ್ತವವಲ್ಲ ಎಂದು ನಾವು ಒಪ್ಪದಿದ್ದರೂ, ಇಂದಿಗೂ ನಡೆಸುತ್ತಿರುವ ಬದುಕನ್ನು, ನಂಬಿಕೆಯನ್ನೇ ಮುಖ್ಯವಾಗಿಟ್ಟುಕೊಂಡ ಸಮುದಾಯವನ್ನೇ ಕಡೆಗಣಿಸಿ ಕೇವಲವಾಗಿ ಕಾಣುವಂತೆ ಮಾಡುತ್ತದೆ. ಈ ಕೇವಲವಾಗಿ ಕಡಣುವುದು ಸಹಾ ಮನುಷ್ಯನಿಗೆ ಮನುಷ್ಯ ಕೊಡಬೇಕಾದ ಕನಿಷ್ಟ ಮಟ್ಟದ ಗೌರವವನ್ನೂ ಕೊಡಲಾರದೆ ಬದುಕ ನಡೆಸುವ ಕ್ರಮ, ಅಥವಾ ತನ್ನ ನಂಬಿಕೆಯೇ ಸರಿಯೆಂದು ಕಂಡವರ ಮೇಲೆಲ್ಲಾ ಅದನ್ನು ಹೇರುವ ಮಾನಸಿಕ ವಸಾಹತೀಕತಣವಲ್ಲದೆ ಮತ್ತಿನ್ನೇನೂ ಅಲ್ಲ. ಪುರಾಣಗಳು ಪ್ರತಿಹೆಜ್ಜೆಗೂ ಮನುಜಕುಲವನ್ನು ಕಾಪಾಡಿರುವ, ಜೀವಂತವಾಗಿಟ್ಟಿರುವ, ವಿಕಸಿತಗೊಳಿಸಿರುವ ಬಹುಮುಖ್ಯ ಅಂಶ ಎನ್ನುವುದನ್ನು ಮಾತ್ರ ತಳ್ಳಿಹಾಕುವ ಹಾಗಿಲ್ಲ. ಪ್ರಕೃತ ಸಂಕಲನದಲ್ಲಿ ಈ ಅಂಶದ ಕಡೆಗೆ ಗಮನ ಸೆಳೆದ ಎರಡು ಕವನಗಳಿವೆ. ಪುರಾಣಪ್ರತೀಕಗಳನ್ನುಳ್ಳ ಕವನ “ನವಿಲೇ ನವಿಲೇ” ಮತ್ತು ವಿಜ್ಞಾನದ ಕಡೆಗೆ ಗಮನ ಸೆಳೆವ “ನೇಸರ ಪಯಣ” ಕವನಗಳು ಮುಖ್ಯವಾದವು.

ಸುಬ್ರಹ್ಮಣ್ಯನ ಬೆನ್ನಲಿ ಹೊತ್ತು

ಮರೆದ ಮಯೂರನು ನೀನಂತೆ

ಸರಸ್ವತಿ ದೇವಿಗೆ ವಾಹನವಾದ

ನಾಟ್ಯಪ್ರವೀಣನು ನೀನಂತೆ

ಗೋಪಾಲಕನಿಗೆ ಕಿರೀಟವಾಗಿ

ಯಶೋಧೆ ಗರಿಗಳ ಕಟ್ಟಿದಳು

ನಿನ್ನಯ ಚಂದದ ಕುಣಿತಕೆ ಸೋತು

ಕವಿಗಳು ಕಾವ್ಯವ ಕಟ್ಟಿದರು

                                ( ನವಿಲೇ ನವಿಲೇ )

ಅವನಿಯ ಕಾಯುವ ಕಾವಲ ಕಣ್ಣೋ

ಮಾಯಾವೃಕ್ಷದ ಮಾಗಿದ ಹಣ್ಣೊ

                               ( ನೇಸರ ಪಯಣ )

ಈ ಸಾಲುಗಳ ರಚನೆಯ ಹಿಂದೆ ಕೆಲಸ ಮಾಡಿರುವ ಕವಿಯ ಪ್ರಜ್ಞೆಯ ಕುರಿತು ಒಂದಷ್ಟು ಮಾತನಾಡುವುದು ಒಳಿತು. ನವಿಲನ್ನು ಕುರಿತ ಆಕರ್ಷಣೆ ಅದರ ಗರಿಗಳಿಂದಷ್ಟೇ, ಅದರ ದನಿಯಿಂದಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ನವಿಲನ್ನು ವಾಹನವಾಗಿ ಹೊಂದಿರುವ ಮತ್ತು ಅದರ ಗರಿಗಳ ಮೂಲಕ ಸೆಳೆವ ಮೂರು ಪುರಾಣ ಪಾತ್ರಗಾಳನ್ನು ಒಂದಾದ ನಂತರ ಮತ್ತೊಂದನ್ನು ತಂದಿದ್ದಾರೆ. ಮೊದಲನೆಯದು ‘ಸುಬ್ರಹ್ಮಣ್ಯ’ ಮೂರು ಸುತ್ತು ಶಿವ ಪಾರ್ವತಿಯರ ಸುತ್ತಿದ “ಜಾಣತನ”ದ ಪ್ರತೀಕವಾದರೆ, ‘ಸರಸ್ವತಿ’ಯ ವಾಹನವಾಗಿ “ಪುಜ್ಯವಾದ” ನವಿಲು ಮತ್ತು ಕೊನೆಯದು ‘ಕೃಷ್ಣ’ ಮತ್ತವನ ಕಿರೀಟದಲ್ಲಿರುವ ನವಿಲುಗರಿಯನ್ನು ಸಿಕ್ಕಿಸಿದ ತಾಯಿ ‘ಯಶೋಧೆ’ ನಡುವಿನ ಅಪಾರಾವಾದ ಪ್ರೀತಿ ಮತ್ತು ಮಮಕಾರ, ಮಗಿವಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿನ ತಾಯಿಯ ಕಾಳಜಿ. ಅದಕ್ಕೆ ಸಾಕ್ಷಿಯಾಗಿರುವ ‘ನವಿಲುಗರಿ’. ಮೇಲಿನ ಮೂರು ಪುರಾಣಪ್ರತೀಕಗಳ ಮೂಲಕ ಕವಿ ನವಿಲನ್ನು ಅದರ ಗರಿಯನ್ನು ಮಗುವಿನ ದನಿಯಲ್ಲಿ ಕರೆವಂತೆ ಹೇಳುತ್ತಲೇ ಮಕ್ಕಳಲ್ಲಿ ಸೃಷ್ಟಿಸುವ ಪೌರಾಣಿಕ ಕಥೆಯ ಬಗೆಗಿನ ಕುತೂಹಲವನ್ನು ತಿಳಿಸುತ್ತಿದೆ. ಈ ಕಥೆಗಳ ಸತ್ಯಾಸತ್ಯತೆಯನ್ನಳೆವ ಬೌದ್ಧಿಕ ಚಾಕಚಕ್ಯತೆಯ ಕೆಲಸವನ್ನು ಬಿಟ್ಟು ಪ್ರತಿಯೊಂದು ಪುರಾಣಪ್ರತೀಕಗಳಲ್ಲಿನ ಮೂಲಭಾವಕ್ಕೆ ವಾಹಕವಾದ ನವಿಲುಗರಿಯ ಸೌಂದರ್ಯ ಅರಿತರೆ ಸಾಕೆನಿಸಿದೆ. ಈ ಕವನದಲ್ಲಿ ಉಂಟಾಗಿರುವ ಲಯದ ಸಮಸ್ಯೆ ಮುಖ್ಯವಾದದ್ದು. ‘ಸರಸ್ವತಿ’ ಎನ್ನುವಲ್ಲಿನ ಒತ್ತಕ್ಷರ ಕಾವ್ಯದ ಲಯವನ್ನು, ಓಟವನ್ನು ಒಡೆಯುತ್ತದೆ. ಅದರ ಅಗತ್ಯವಿರಲಿಲ್ಲ ‘ಸರಸತಿ’ ಎಂದರೆ ಯಾವ ಸಮಸ್ಯೆಯೂ ಅರ್ಥದಲ್ಲಿ ಆಗುತ್ತಿರಲಿಲ್ಲ. ಜನಪದರ ತ್ರಿಪದಿಯಲ್ಲಿ ಬಂದಿರುವ “… ಸರಸತಿಯೆ ನಮ್ ಗಂಟಾಲ ತೊಡರಾ ಬಿಡಿಸವ್ವಾ / ನಿಂಬಿಯಾ ” ಮತ್ತು “ಸರಸತಿಯಂ ಅಬಲೆಯಂ ಗೋಣ್ಮುರಿಕೊಂಡು ….. ” ಎಂದು ರನ್ನನ ಅಜಿತತೀರ್ಥಕರರ ಪುರಾಣ ತಿಲಕದಲ್ಲಿನ ಪದಪ್ರಯೋಗಳನ್ನು ಗಮನಿಸಿದ್ದರೆ “ಸ್ವ” ಎಂದು ಬರೆದು ಲಯ ಕೆಡುತ್ತಿದ್ದುದು ಕಡಿಮಾಗುತ್ತಿತ್ತು. ಅದೇ ಸಾಲಿನಲ್ಲಿ ಬರುವ “ವಾಹನವಾದ” ಎಂಬುದು “ವಾಹನನಾದ” ಎಂದು ಪುಲ್ಲಿಂಗ ಏಕವಚನ ಬಳಸಿದ್ದರೆ ಭಾಷಾಸೌಂದರ್ಯ ಮತ್ತು ವಾಸ್ತವ ಸತ್ಯಕ್ಕೆ ಆಗಿರುವ ಧಕ್ಕೆ ಕಡಿಯಾಗುತ್ತಿತ್ತು.

ಸೂರ್ಯನನ್ನು ಕುರಿತು ರಚನೆಯಾದ ಕವನಗಳ ಪಟ್ಟಿಯೇ ಕನ್ನಡದಲ್ಲಿ ಬಹುದೊಡ್ಡದು ಮತ್ತು ಅರ್ಥಸಾಧ್ಯತೆಯಲ್ಲಿ ವಿಸ್ತಾರವಾದದುದು. ಇಲ್ಲಿನ “ನೇಸರ ಪಯಣ” ಕವನದಲ್ಲಿನ ಎರಡು ಸಾಲು ಕಲಾತ್ಮಕವಾಗಿ ಅಭಿವ್ಯಕ್ತಗೊಂಡ ವೈಜ್ಞಾನಿಕ ಸತ್ಯದ ಕಡೆಗೆ ಗಮನ ಸೆಳೆವಂತೆ ಮಾಡುತ್ತದೆ. ಸೂರ್ಯನ ಆಂತರ್ಯದಲ್ಲಿ ನಡೆಯುತ್ತಿರುವ ‘ಹೀಲಿಯಂ’ ಮತ್ತು ‘ಜಲಜನಕ’ ಗಳೊಂದಿಗಿನ ರಾಸಾಯನಿಕ ಕ್ರಿಯೆಯಿಂದ ಬರುತ್ಯಿರುವ ಶಾಖ ಮತ್ತು ಬೆಳಕಿನ ಉಪಯೋಗಗಳು ತಿಳಿದಿದೆ. ಈ ಕ್ರಿಯೆ ಇಂದು ನೆನ್ನೆಯದಲ್ಲ ಕೋಟ್ಯಾಂತರ ವರ್ಷಗಳದೆಂದು, ಸೂರ್ಯನ ಆಂತರ್ಯದಲ್ಲಿ ಬಿಡುಗಡೆಯಾಗುತ್ತಿರುವ ಶಾಖ ಮೇಲೆ ಬಂದು ಭೂಮಿಗೆ ತಲುಪಲು ಕೋಟ್ಯಾಂತರ ವರ್ಷ ತೆಗೆದುಕೊಳ್ಳುತ್ತದೆನ್ನುವುದು ಆಧುನಿಕ ವಿಜ್ಞಾನ ಕೊಟ್ಟಿರುವ ಉತ್ತರವಾಗಿದೆ. ಅದು ವಿಜ್ಞಾನ ಆದರೆ ಕಲೆಯಲ್ಲಿ ಅದನ್ನು ಹೊರಹಾಕುವಾಗಿನ ಕವಿಯಲ್ಲಿನ ವಿಜ್ಞಾನ ಮತ್ತು ಕಲೆ, ಬುದ್ದಿ – ಭಾವಗಳನ್ನು ಸಮಾನವಾಗಿ ಕಾಪಿಟ್ಟುಕೊಳ್ಳುವ ಮತ್ತು ಅಭಿವ್ಯಕ್ತಿಸುವ ಭಾಷಾಕ್ರಮ ಬಹುಮುಖ್ಯವಾದದ್ದಾಗಿರುತ್ತದೆ. “ಮಾಯಾವೃಕ್ಷದ ಮಾಗಿದ ಹಣ್ಣೋ” ಎನ್ನುವಾಗಿನ ಒಟ್ಟಾರೆ ನಮ್ಮ ಬ್ರಹ್ಮಾಂಡದ ಕಲ್ಪನೆ, ಅದರ ಆಯಸ್ಸು, ಅದು ಗೂಢವಾಗಿಯೇ ಬೆಳೆಯುತ್ತಿರುವುದೆನ್ನುವುದಕ್ಕೆ ಕೊಟ್ಟಿರುವ ‘ವೃಕ್ಷ’ ಪ್ರತಿಮೆಯಷ್ಟೇ ಗಾಢವಾಗಿ “ಮಾಗಿದ ಹಣ್ಣೋ” ಎಂದು ಸೂರ್ಯನನ್ನು ಬೆರಗಿನಲ್ಲಿ ಸೂಚಿಸುವ ಪ್ರತಿಮೆ ಸೆಳೆದುಬಿಡುತ್ತದೆ. ಕೆಂಪಾಗಿಯೂ ಇದ್ದಾನೆ, ದಿನೇ ದಿನೇ ಹೀಲಿಯಂ ಜಲಜನಕದ ಪ್ಲಾಸ್ಮಾಕ್ರಿಯೆ ನಡೆದು ಮಾಗುತ್ತಲೂ ಇದ್ದಾನೆನ್ನುವಾಗ ಕವಿಯ ವಿಸ್ತಾರವಾದ ಪ್ರಜ್ಞೆ ಸೆಳೆವುದರ ಜೊತೆಗೆ, ಒಂದು ಅನುಮಾನ ಕಾಡುತ್ತದೆ – ಈ ಸಾಲುನ್ನು ಮಕ್ಕಳಿಗೆ ಅರ್ಥೈಸಲು ಸಾಧ್ಯವಾ? ಮಕ್ಕಳ ಮಾನಸಿಕ ಮಟ್ಟಕ್ಕೆ ಹತ್ತಿರವಾಗುವ ರಚನೆಯಾ ಇದು? ಎನ್ನುವುದು. ಆದರೆ ಈ ಸಾಲಿನ ಹಿಂದೆ ಕೆಲಸ ಮಾಡಿರುವ ಅವರಲ್ಲಿನ ಸೂಕ್ಷ್ಮ ಕುಸುರಿತನ, ಕಲಾತ್ಮಕತೆ, ಭಾಷಾಬಳಕೆ, ಲಯ ವಿನ್ಯಾಸ, ಮಕ್ಕಳಲ್ಲಿ ಕಂಠಸ್ಥವಾಗುವAತೆ ಮಾಡುವ ಕೌಶಲ ಇದೆಲ್ಲವೂ ಈ ಕವನದಲ್ಲಿದೆ. ಇದೊಂದು ಯಶಸ್ವಿ ಅತ್ಯದ್ಭುತ ಪ್ರತಿಮೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. “ಉತ್ತಮಕವಿ ರೂಪಕಗಳಲ್ಲಿ ಮಾತನಾಡುತ್ತಾನೆ” ಎಂಬ ಕವಿಗುರು ಯೇಟ್ಸ್ ನ ಮಾತು ಇಲ್ಲಿ ನೆನಪಾಗುತ್ತದೆ. ಇಡೀ ಸಮುದ್ರವನ್ನೇ ಆಪೋಷಣ ತೆಗೆದುಕೊಂಡAತಹಾ ದೈತ್ಯಸ್ಥಿತಿಯ ಪ್ರತಿಮೆಯಿದು. ಈ ‘ಮಾಗಿದ ಹಣ್ಣೋ’ ಎಂದು ಸೂರ್ಯನಿಗೆ ಹಿಡಿದಿಡುವ ರೂಪಕ ಕವಿಯಲ್ಲಿನ ಗಟ್ಟಿತನ ಸಂಕಲನದ ಇತರ ಸಮಸ್ಯೆಗಳನ್ನು ಮುಚ್ಚಿಹಾಕಿಬಿಡುವಷ್ಟು ಗಾಢವಾದ ಪ್ರಭಾವಳಿಯನ್ನು ಹೊಂದಿದೆ. ಈ ಎರಡೂ ರೂಪಕಗಳು ಒಟ್ಟಿಗೆ ಏಕಕಾಲದಲ್ಲಿ ಸಾಯುಜ್ಯ ಸಂಬಂಧ ಸಾಧಿಸಿಕೊಂಡು ಕವಿತೆಯಲ್ಲಿ ಯಾವ ಧಕ್ಕೆಯೂ ಆಗದೆ ಉತ್ತಮ ಶಬ್ದಚಿತ್ರವಾಗಿ ಸಾಕಾರಗೊಂಡಿದೆ.  ಮೇಲಿನ ಮಾತಿಗೆ ಸಾಕ್ಷಿಯಾಗಿ ಸಂಕಲನದಲ್ಲಿನ ‘ಸೌರಮಂಡಲ’ ಕವನವನ್ನೊಮ್ಮೆ ಗಮನಿಸಿ. ಎಂಟೂ ಗ್ರಹಗಳ ಲಕ್ಷಣ, ಆಕಾರ, ಅವು ಹೊಂದಿರುವ ವಿಶಿಷ್ಟತೆಯನ್ನು ವಿವರಣಾತ್ಮಕವಾಗಿ ಕವನ ಕಟ್ಟಿಕೊಡುತ್ತಾ ಸಾಗುತ್ತಿದೆ. ಈ ಬಿಡಿಸಿಕೊಳ್ಳುವ “ಸೌರಮಂಡಲ” ಕವನದ ವಸ್ತುವಿನ ಸೂತ್ರರೂಪಿಯಾಗಿ “ನೇಸರ ಪಯಣ” ಕವನದ ಮೇಲಿನ ಸಾಲು ಒಂದು ಬೃಹತ್ ಚಿತ್ರವನ್ನು ಕಟ್ಟಿಕೊಡುತ್ತಿದೆ‌.

“ಅಪ್ಪನ ಸೈಕಲ್” ಕವನವು ಕನಸಿನ ಜೊತೆಗೇ ಕನಸಾದ ಅಪ್ಪನ ಕುರಿತು ಸೈಕಲ್ ಅನ್ನು ಮಧ್ಯಸ್ಥಿಕೆಯಾಗಿಟ್ಟು ಮಾತನಾಡುವ ಕವಿತೆ. ನೆನಪಿನಂಗಳದಲ್ಲಿ ಹಸಿರಾಗಿರುವ, ವಾಸ್ತವದಲ್ಲಿ ಇಲ್ಲದ ಅಪ್ಪನ ವೇಗವಾದ ಓಟವನ್ನು ಕುರಿತು ಬೇಸರ ಮತ್ತು ಕನಸಿನಲೂ ಕಾಡುವ ಅಪ್ಪ, ಅವಿನಾಭಾವ ಸಂಬಂಧ ಬೆಸೆದಿರುವ “ಸೈಕಲ್” ಪ್ರತಿಮೆಯಾಗಿ ಹೊಂದಿರುವ ಮನೋವೈಜ್ಞಾನಿಕ ಹಿನ್ನೆಲೆಯ ವಿವರಣೆ ಬಯಸುವ ಕವನವಾಗಿದೆ.

“ಅವಾಂತರ” ಕವಿತೆಯು ಪರಂಪರೆಯ ಕವಿತೆಯೊಂದಕ್ಕೆ ಪರ್ಯಾಯವಾಗಿ ರಚನೆಯಾದಂತಿದೆ. ಅಕಾಲಿಕ ಅಸಹಜ ಮಳೆಯಿಂದಾಗುವ ಅವಾಂತರಕ್ಕೆ ಈ ಕವನದಲ್ಲಿ ವಿಷಾದದಿಂದ ಮಳೆಯನ್ನು ತಿರಸ್ಕರಿಸುವ ದನಿಯನ್ನು ಹೊಂದಿರುವ ಕವನವಾಗಿದೆ. ನಮಗೆಲ್ಲಾ ತಿಳಿದಿರುವ ಪ್ರಖ್ಯಾತ ಶಿಶುಗೀತೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹುಯ್ಯೋ ಹುಯ್ಯೋ ಮಳೆರಾಯ

ಹೂವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ

ಬಾಳೇ ತೋಟಕೆ ನೀರಿಲ್ಲ

ಸಾಲುಗಳಿಗೆ ಸಂಕಲನದಲ್ಲಿನ ಪರ್ಯಾಯ ರಚನೆಯನ್ನು ಗಮನಿಸಿ

ನಿಲ್ಲೋ ನಿಲ್ಲೋ ಮಳೆರಾಯ

ನಿನ್ನಯ ಉಪಟಳ ಸಾಕಾಯ್ತು

ಹೋಗೋ ಹೋಗೋ ಮಳೆರಾಯ

ನಿನ್ನಿಂದೆಲ್ಲಾ ಹಾಳಾಯ್ತು

                                        ( ಅವಾಂತರ )

ಒಟ್ಟಾರೆಯಾಗಿ ಸಂಕಲದಲ್ಲಿನ ಕವನಗಳನ್ನು ಸೂತ್ರರೂಪಿಯಾಗಿ ಹಿಡಿದು ಆರು ಪ್ರಮುಖ ಅಂಶಗಳ ಅಡಿಯಲ್ಲಿ ಗ್ರಹಿಸಬಹುದು.

೦೧. ಪರಂಪರೆಯ ಕಾವ್ಯರಚನಾ ಮಾರ್ಗದ ಮುಂದುವರಿಕೆಯ ಸಾಧ್ಯತೆಯನ್ನು ಕಾಣಿಸಿರುವ ಕವಿತೆಗಳು ಮತ್ತು ಪರಂಪರೆಯಲ್ಲಿ ಬಂದಿರುವ ಮಾರ್ಗಕ್ಕೆ ಉತ್ತರರೂಪೀ ಕವಿತೆಗಳು.

೦೨. ಪುರಾಣಪ್ರತೀಕಯುಕ್ತ ಕವಿತೆಗಳು ಮತ್ತು ವೈಜ್ಞಾನಿಕ ಮನೋಧರ್ಮದ ಕವಿತೆಗಳು.

೦೩. ಭಾವ ಜಗತ್ತು ಮತ್ತು ವಾಸ್ತವವನ್ನು ಚಿತ್ರಿಸಿರುವ ಕವನಗಳು.

೦೪.ಭೂತದ ಪರಿಸರ ಮತ್ತು ವರ್ತಮಾನ ಪರಿಸರದ ಚಿತ್ರಣವನ್ನು ಕೊಡುವ ಕವಿತೆಗಳು.

೦೫. ಜೀವ ಮತ್ತು ನಿರ್ಜೀವ ಜಗತ್ತಿನ ಅಂಶಗಳನ್ನು ವಸ್ತುವಾಗಿ ಹೊಂದಿರುವ ಕವನಗಳು.

೦೬. ಸಮಕಾಲೀನ ತಲ್ಲಣಗಳಿಗೆ ಮುಖಾಮುಖಿಯಾಗಿ ಅದರಿಂದ ಬಿಡುಗಡೆಯನ್ನು ಬಯಸುವ ಕವಿತೆಗಳು.

ಈ ಮೂಲಾಂಶಗಳಿಂದ ಕೂಡಿದ ಕವನಗಳು ಸಮಕಾಲೀನ ಎಳೆಯ ಮಕ್ಕಳಲ್ಲಿನ ಭಾವ ಜಗತ್ತು ಮತ್ತು ವಾಸ್ತವ ಜಗತ್ತನ್ನು ಗ್ರಹಿಸುವಲ್ಲಿ ಸಹಾಯಕವಾಗಿ ಕೆಲಸಮಾಡುತ್ತದೆ. ಕಲಾತ್ಮಕ ಹೊದಿಕೆ ಹೊದ್ದಿರುವುದು ಮತ್ತು ಲಯಾನ್ವಿತವಾಗಿ ಯಶಸ್ವಿ ಅಭಿವ್ಯಕ್ತಿಯನ್ನು ಸಾಧಿಸಿರುವ ಕಾರಣದಿಂದ “ಪುಟ್ಟ ಗೌರಿ” ನನಗಂತೂ ಮುಖ್ಯವಾಗುತ್ತಾಳೆ.

‘ಪುಟ್ಟ ಗೌರಿ’ ಕವನ ಸಂಕಲನವು ಯಶಸ್ವಿ ಎನ್ನುವುದಕ್ಕೆ ಏನು ಬೇಕೋ ಅದೆಲ್ಲವನ್ನು ಒಳಗೊಂಡಿದೆ. ಅಥವಾ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿನ ಪ್ರಮುಖ ಅಂಶಗಳು ಸಂಕಲನದಲ್ಲಿ ಇವೆ. ಹಾಗೆಂದ ಮಾತ್ರಕ್ಕೆ ಸಮಸ್ಯೆಗಳೇ ಇಲ್ಲವೆಂದೇನಿಲ್ಲ, ಕೆಲವು ಕಡೆ ಕವನಗಳಲ್ಲಿ ಲಯದ ಸಮಸ್ಯೆಯಿದೆ, ಅದು ಸಣ್ಣದಷ್ಟೆ. ಅದರಿಂದ ಅರ್ಥಸ್ತರಕ್ಕೇನೂ ಧಕ್ಕೆಯಾಗುವುದಿಲ್ಲ. ಅವುಗಳನ್ನಷ್ಟೇ ಗಮನಿಸಿ ಸಾಕ್ಷಿ ಸಮೇತ ಹಿಡಿದು ಸಾಧಿಸಿದರೂ ಸಂಕಲನವು ಹೊರಹೊಮ್ಮಿಸುತ್ತಿರುವ ಭಾವಕ್ಕೆ, ಅದರ ವ್ಯಾಪ್ತಿಗೆ, ಕವಿತೆಗಳು ಸೃಷ್ಟಿಸಿಕೊಂಡಿರುವ ಪ್ರಭಾವಳಿಗೆ ಯಾವುದೇ ಹಾನಿಯೂ ಉಂಟಾಗುವುದಿಲ್ಲ. ಕನ್ನಡಕ್ಕೊಂದು‌ ಹೊಸದಾದ ಸೂಕ್ಷ್ಮ ಪ್ರತಿಯೆಯನ್ನು ಕೊಟ್ಟ ಕವಿಗೆ ಧನ್ಯವಾದಗಳು. ಸಂಕಲನದ ಕವನಗಳನ್ನೊಮ್ಮೆ ಗಮನಿಸಿ ಇಲ್ಲಿ “ಮಗು ನಗುತ್ತಿದೆ, ಮಗು ಆಡುತ್ತಿದೆ”

***********************************

ಆರ್. ದಿಲೀಪ್ ಕುಮಾರ್

4 thoughts on “ಪುಸ್ತಕ ವಿಮರ್ಶೆ

  1. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಸರ್…
    ಮೂಕ ವಿಸ್ಮಿತಳು…
    ಧನ್ಯವಾದಗಳು..

  2. ತಪ್ಪೊಪ್ಪಿಗೆ – ಶಿವ ಪಾರ್ವತಿಯರನ್ನು ಸುತ್ತಿದ್ದು ಗಣಪ, ಸುಬ್ರಹ್ಮಣ್ಯ ಅಲ್ಲ ಕ್ಷಮಿಸಿ.
    ಈಗ ಆ ಭಾಗದ ವ್ಯಾಖ್ಯಾನ ಸ್ವಲ್ಪ ಬದಲಾಗುತ್ತದೆ – ಜಾಣತನ ಅಂತಿರುವುದು, ದಡ್ಡತನ ಎಂದು ಬದಲಾಯಿಸಿಕೊಳ್ಳಿ. ಕವಿ ಪುರಾಣ ಪ್ರತಿಮೆಯೊಂದರ ಮೂಲಕ ನೇತ್ಯಾತ್ಮಕ ಅನುಸಂಧಾನ ಮಾಡಿ, ಇತ್ಯಾತ್ಮಕ ಹಾದಿಯ ಕಡೆಗೆ ಗಮನ ಸೆಳೆವಂತೆ ಮಾಡುತ್ತಾರೆ – ಎಂದು ಓದಿಕೊಳ್ಳಿ.

  3. ದೀರ್ಘವಾದರೂ ಅತ್ಯುತ್ತಮ ಗ್ರಹಿಕೆಯ ಹದ ವಿಮರ್ಶೆ. ದಿಲೀಪ್ ಆಗಾಗ ಇಲ್ಲಿ ಬರೆಯುತ್ತಿರಿ. ಇದೇ ಸಂಕಲನ ಕುರಿತ ಪರಿಚಯದ ಲೇಖನ ಇವತ್ತೇ ಅವಧಿ ಪ್ರಕಟಿಸಿದೆ.

    ಅಭಿನಂದನೆ ಕವಿಗೆ ವಿಮರ್ಶಕರಿಗೆ ಮತ್ತು ಸಂಗಾತಿಯ ಸಂಪಾದಕರಿಗೆ

    ಹೀಗೆ ಹೊಸಬರ ಬಗ್ಗೆ ನಾವು ನಾವೇ ಬರೆಯದ ಹೊರತು ಅನ್ಯ ಮಾರ್ಗ ಇಲ್ಲ ಮತ್ತು ಆ ಮೂಲಕವಾದರೂ ಹೊಸಬರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡೋಣ.

  4. ಬಿಡುವಾದಾಗ ಬರೆವೆ.
    ಅವರ ಬಹರದಲ್ಲಿನ‌ ಸೂಕ್ಷ್ಮತೆ ಗಮನಿಸಿದರೆ ಅವರು ಹೊಸಬರಲ್ಲ ಈ ಕ್ಷೇತ್ರಕ್ಕೆ ಅನ್ನೋದನ್ನ ಅವುಗಳೇ ತಿಳಿಸುತ್ತಿವೆ.

Leave a Reply

Back To Top