ಅಂಕಣ ಬರಹ

ದಿ ಲಾಸ್ಟ್ ಲೆಕ್ಚರ್

ದಿ ಲಾಸ್ಟ್ ಲೆಕ್ಚರ್ ( ಆತ್ಮ ಕಥನ ರೂಪದ ಉಪನ್ಯಾಸಗಳು)
ಮೂಲ : ರ‍್ಯಾಂಡಿ ಪಾಶ್ ಕನ್ನಡಕ್ಕೆ : ಎಸ್.ಉಮೇಶ್
ಪ್ರ : ಧಾತ್ರಿ ಪಬ್ಲಿಕೇಷನ್ಸ್
ಪ್ರಕಟಣೆಯ ವರ್ಷ : ೨೦೦೮
ಬೆಲೆ : ರೂ.೧೦೦
ಪುಟಗಳು : ೧೯೩


ಮೂಲಕೃತಿಯ ಅದ್ಭುತ ಜನಪ್ರಿಯತೆಯಿಂದಾಗಿ ಕನ್ನಡಕ್ಕೂ ಬಂದು ಕನ್ನಡದಲ್ಲೂ ಮಾರಾಟ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಅಪಾರ ಯಶಸ್ಸು ಪಡೆದ ಕೃತಿಯಿದು. ಮೂಲ ಲೇಖಕ ರ‍್ಯಾಂಡಿ ಪಾಶ್ ಜಠರದ ಕ್ಯಾನ್ಸರಿನಿಂದ ಪೀಡಿತನಾಗಿ ಇನ್ನು ಕೆಲವೇ ತಿಂಗಳುಗಳಷ್ಟೇ ಬದುಕುವನೆಂದು ವೈದ್ಯಕೀಯ ವರದಿ ಬಂದಾಗ ಅಮೆರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದವರು ಆತನ ಅಂತಿಮ ಉಪನ್ಯಾಸಕ್ಕೆ ಒಂದು ಅವಕಾಶ ಮಾಡಿಕೊಡುತ್ತಾರೆ. ಆ ಸಂದರ್ಭದಲ್ಲಿ ರ‍್ಯಾಂಡಿ ಪಾಶ್ ಒಂದು ಗಂಟೆ ಕಾಲ ತನ್ನ ಬಾಲ್ಯದ ಕನಸುಗಳು, ಅನುಭವಗಳು, ಘಟನೆಗಳು, ತನ್ನ ತಂದೆ ತಾಯಿಗಳ ಉದಾತ್ತ ಗುಣಗಳು, ಅವರೊಂದಿಗಿನ ಕೌಟುಂಬಿಕ ಬದುಕಿನಲ್ಲಿ ತಾನು ಅನುಭವಿಸಿದ ಸಂತಸ, ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ತಾನು ಮಾಡಿದ ಕೆಲಸಗಳು, ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ, ಜೈ ಎಂಬ ಹೆಣ್ಣನ್ನು ತನ್ನ ೩೭ನೆಯ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆಕೆಯೊಂದಿಗಿನ ಸಂತಸಭರಿತ ದಾಂಪತ್ಯ ಜೀವನ, ಮೂವರು ಎಳೆಯ ಮಕ್ಕಳಾದ ಡೈಲಾ, ಲೋಗನ್ ಮತ್ತು ಛೋಲೆಯೊಂದಿಗಿನ ಸುಂದರ ಸಾಂಸಾರಿಕ ಬದುಕು, ತನ್ನ ಮಕ್ಕಳಿಗೆ ಆದರ್ಶ ತಂದೆಯಾಗಲು ಆತ ಪಟ್ಟ ಶ್ರಮ, ಕ್ಯಾನ್ಸರ್ ಇದೆ ಎಂಬುದು ತಿಳಿದಾಗ ಉಂಟಾದ ಆಘಾತ, ತಳಮಳ ಮತ್ತು ತಲ್ಲಣ, ಪ್ರೀತಿಸುವ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಬೇಕಲ್ಲ ಎಂಬ ನೋವು, ಆದರೂ ತಾನಿಲ್ಲದ ಕೊರತೆ ಮಕ್ಕಳನ್ನು ಕಾಡಬಾರದು ಎಂಬ ಕಾಳಜಿಯಿಂದ ಅವರೊಂದಿಗೆ ಖುಷಿಯಿಂದ ಆಡಿದ ಎಲ್ಲ ಕ್ಷಣಗಳನ್ನೂ ವೀಡಿಯೋದಲ್ಲಿ ಸೆರೆ ಹಿಡಿದದ್ದು-ಹೀಗೆ ಹಲವಾರು ವೈಯಕ್ತಿಕ ಸಂಗತಿಗಳನ್ನು ಕುರಿತು ತಮ್ಮ ಉಪನ್ಯಾಸದಲ್ಲಿ ವಿಸ್ತರಿಸುತ್ತಾರೆ. ಲೇಖಕರ ಆತ್ಮಕಥನದ ರೀತಿಯಲ್ಲಿರುವ ಈ ಎಲ್ಲ ಮಾತುಗಳು ಈ ಕೃತಿಯಲ್ಲಿ ದಾಖಲಿಸಲ್ಪಟ್ಟಿವೆ. ಆತನ ಒಂದೊಂದು ಮಾತುಗಳೂ ಅವುಗಳಲ್ಲಿ ಕಾಣುವ ತಾತ್ವಿಕ ಮೌಲ್ಯಗಳಿಂದ ಬೆರಗು ಹುಟ್ಟಿಸುತ್ತವೆ.


ಸಾವನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ತಾನು ತೊರೆದು ಹೋಗುತ್ತಿರುವ ಕುಟುಂಬಕ್ಕೆ ತನ್ನ ಅಗಲುವಿಕೆಯಿಂದ ಯಾವ ತೊಂದರೆಯೂ ಆಗಬಾರದೆಂದು ಅವರೆಲ್ಲರನ್ನೂ ಮಾನಸಿಕವಾಗಿ ಸಿದ್ಧಪಡಿಸುವ ರ‍್ಯಾಂಡಿಪಾಶರವರ ಧೈರ್ಯ ಮತ್ತು ಆತ್ಮವಿಶ್ವಾಸಗಳು ಅಪ್ರತಿಮವಾಗಿವೆ. ಹಾಗೆಯೇ ಆತನ ಪರಿಸ್ಥಿತಿಯ ಚಿತ್ರಣವು ಮನಕದಡುತ್ತದೆ. ಸ್ವತಃ ಲೇಖಕರೇ ಸಾವನ್ನೆದುರಿಸುವ ಸಂದರ್ಭದಲ್ಲಿ ನೀಡಿದ ಅಂತಿಮ ಉಪನ್ಯಾಸದಲ್ಲಿ ಮಂಡಿಸಿದ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಸಾವು ಸನ್ನಿಹಿತವಾದ ವ್ಯಕ್ತಿಯ ದಿಟ್ಟ ಮನೋಭಾವವನ್ನು ಬಹಳ ಸುಂದರವಾಗಿ ಚಿತ್ರಿಸುತ್ತದೆ. ಎಸ್.ಉಮೇಶ್ ಅವರ ಅನುವಾದ ಸರಳವಾಗಿದ್ದು ನಯವಾಗಿ ಓದಿಸಿಕೊಂಡು ಹೋಗುತ್ತದೆ.

**************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top