ಕವಿತೆ
ವಿಪ್ಲವ
ಚಂದ್ರಪ್ರಭ ಬಿ.
ಇಂದೇಕೊ ಅವ್ವ ನೆನಪಾಗುತ್ತಿದ್ದಾಳೆ…
ಅಪ್ಪನ ಬನಿಯನ್ನು
ತಮ್ಮನ ಚಡ್ಡಿ
ತನ್ನ ಲಂಗವನ್ನು
ಢಾಳಾಗಿ ಬಿಸಿಲಿಗೆ
ಎಲ್ಲೆಂದರಲ್ಲಿ ಒಣಗಲು ಹಾಕುತ್ತಿದ್ದ ಅವ್ವ
ನನ್ನ ಕಂಚುಕವನ್ನು ಒಣ ಹಾಕಲು
ಹುಡುಕುತ್ತಿದ್ದಳು
ಮರೆಯಾದ ಒಂದು ಜಾಗವನು…
ಈಗ ತಾನೆ ಮನೆಗೆ ಮರಳಿದವ
ಲುಂಗಿಯುಟ್ಟು
ಬನಿಯನ್ನೆಂಬ ಮಾಯಕವನು
ಹಗ್ಗಕ್ಕೆ ಇಳಿಬಿಟ್ಟು ಗಾಳಿಗೆ ಮೈಯೊಡ್ಡಿ
ಹಾಯಾಗಿ ನಿಂತುಕೊಂಡುದ ಕಂಡು
ಮತ್ಸರಗೊಳ್ಳುತ್ತೇನೆ ಒಳಗೊಳಗೇ…
ತೆರೆದುಕೊಳ್ಳುತ್ತ ಸಂಜೆಯ ಕೆಲಸಗಳಿಗೆ
ಗಡಿಬಿಡಿಯಲಿರುವ ನನ್ನ ನೋಡಿ
ಗದರುತ್ತಾರೆ ಅತ್ತೆ :
ಅದೆಂತದು ಚೂಡೀ ದಾರ..?
ಉಡಬಾರದೆ ಒಪ್ಪವಾಗಿ ಸೀರೆ…
ನೆಂಟರಿಷ್ಟರು ಬಂದು ಹೋಗುವ ಮನೆ!
ಈ ಚೂಡೀದಾರ ಎನುವ ಮಾಯೆ
ಕೆಲಸ ಕಾರ್ಯದಲಿ ನನಗೆಷ್ಟು ಹಿತ
ಎನ್ನುವುದನು
ಅರಿಯಲಾರರೇಕೆ
ನೆಂಟರು…ಇಷ್ಟರು…
ಅತ್ತೆ…?
ತನ್ನವ್ವನ ಗದರುವಿಕೆ
ಇನಿಯಳ ಗೊಣಗಾಟ ಯಾವುದೂ
ಕೇಳಿಸುವುದೇ ಇಲ್ಲ
ಪತ್ರಿಕೆಯಲಿ ಮುಖ ಹುದುಗಿಸಿರುವ
ನನ್ನವನಿಗೆ!
**********************************