ಅಂಕಣ ಬರಹ

ಕತೆಗಾರ್ತಿ ಆಶಾ ಜಗದೀಶ್
ಮುಖಾಮುಖಿಯಲ್ಲಿ

“ಹೆಣ್ಣು ನನ್ನ ಬರಹದ ಮೂಲ ಕಾಳಜಿ”

ಕವಿತೆಗಳನ್ನು ಯಾಕೆ ಬರೆಯುತ್ತೀರಿ ?

ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ.

ಕವಿತೆ ಹುಟ್ಟುವ ಕ್ಷಣ ಯಾವುದು ?

ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ ಕವಿತೆಯ ರಚನೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ.

ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?

ಉತ್ತರ: ವಸ್ತು ಇಂಥದ್ದೇ ಇರಬೇಕು ಅಂತೇನೂ ಇಲ್ಲ ನನಗೆ. ಸುತ್ತಲಿನ ಆಗುಹೋಗುಗಳೆಲ್ಲಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವವಳು ನಾನು. ಯಾರದೋ ಸಾವು ಮತ್ಯಾರದೋ ಕಷ್ಟ ಎಲ್ಲವೂ ನನ್ನನ್ನು ಅಳಿಸುತ್ತವೆ. ಒಂದು ಆರ್ಟ್ ಮೂವಿ ಚಾಲು ಆಯಿತೆಂದರೆ ನನ್ನ ಕಣ್ಣೀರು ಕೋಡಿ ಬೀಳುವುದು ಗ್ಯಾರೆಂಟಿ ಎಂದು ಮೊದಲೇ ಹೇಳಿಬಿಡಬಹುದು. ಮತ್ತೆ ಅದರ ಬಗ್ಗೆ ನನಗೆ ಮುಜುಗರವಿಲ್ಲ. ಇನ್ಫ್ಯಾಕ್ಟ್ ಎಷ್ಟೋ ಹೊತ್ತು ಅಥವಾ ಕೆಲ ದಿನಗಳೂ ಅದೇ ಹ್ಯಾಂಗೋವರಿನಲ್ಲಿ ಇರಲು ಬಯಸ್ತೇನೆ ನಾನು. ಆಗ ನನ್ನಲ್ಲಿ ಕವಿತೆಯೊಂದು ಮೊಳಕೆಯೊಡೆಯಬಹುದು. ನೋವು, ಸಂತೋಷ, ಸಿಟ್ಟು, ಅಸಹನೆ, ಕೋಪ….. ಇತ್ಯಾದಿ ಯಾವ ಭಾವವೇ ಆಗಿರಲಿ ಅದರ ಶಿಖರ ಮುಟ್ಟುವ ತೀವ್ರತೆ ನನ್ನನ್ನಾವರಿಸಿದಾಗ ನನ್ನೊಳಗೆ ಕವಿತೆ ಮೊಟ್ಟೆ ಇಡುತ್ತದೆ. ಮತ್ತೆ ಕವಿಯಾದವನು ಅಂತರಂಗದ ದನಿಯಾಗುತ್ತಲೇ ಬಹಿರಂಗದ ಕಿವಿಯಾಗಲೂ ಬೇಕಿರುತ್ತದೆ. ಹಾಗಾಗಿ ಅವನ ಕಾವ್ಯ ಅದೆರಡರಿಂದಲೂ ಪ್ರಭಾವಿಸಲ್ಪಟ್ಟಿರುತ್ತದೆ. ಅದಕ್ಕೆ ನಾನೂ ಹೊರತಲ್ಲ. ಹೆಣ್ಣು ನನ್ನ ಬರಹದ ಮೂಲ ಕಾಳಜಿ ಕಾರಣ ಹೆಣ್ಣು ಹೊರಗಿನಿಂದಷ್ಟೇ ಅಲ್ಲ ಒಳಗಿನಿಂದಲೂ ಹೆಚ್ಚು ಗೊತ್ತಿರುವ ಕಾರಣ ಇರಬಹುದು.

ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?

ಉತ್ತರ: ಖಂಡಿತಾ. ಬಾಲ್ಯದ ನೆನಪುಗಳಿಲ್ಲದೇ ನಮ್ಮ ಯಾವ ಪ್ರಕಾರದ ಬರಹವೂ ಸಂಪೂರ್ಣವಾಗಲಿಕ್ಕೇ ಸಾಧ್ಯವಿಲ್ಲ ಎನಿಸುವಷ್ಟು ಅದು ನಮ್ಮ ಬರಹಗಳಲ್ಲಿ ಹಾಸು ಹೊಕ್ಕು. ಇನ್ನು ಹರೆಯ ಎನ್ನುವುದು ಕಲ್ಲನ್ನೂ ಕವಿಯನ್ನಾಗಿಸಿಬಿಡುವ ಕಾಲ. ಅದಕ್ಕೆ ಯಾರೂ ಹೊರತಾಗಲು ಸಾಧ್ಯವಿಲ್ಲ. ಇದೇ ಹಂತದಲ್ಲಿಯೇ ನಮ್ಮ ದೇಹ ಮತ್ತೊಂದು ಹಂತದ ಬೇಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಯ ವೈಪರಿತ್ಯ ನಮ್ಮ ಭಾವಕೋಶವನ್ನು ನಾನಾಥರದ ಪರೀಕ್ಷೆಗೆ ಒಳಗಾಗುವಂತೆ ಮಾಡುತ್ತದೆ. ಇವೆಲ್ಲವೂ ಒಂದಿಡೀ ಬದುಕಿಗೆ ಅಗತ್ಯವಿರುವ ಅನುಭವಗಳು. ನಾವವನ್ನು ಅಗತ್ಯವಾಗಿ ಕಟ್ಟಿಟ್ಟುಕೊಳ್ಳಲೇ ಬೇಕು. ಅದು ಪ್ರೇಮ ಮತ್ತು ಕಾಮದ ಭಾವಗಳು ಬಲಗೊಳ್ಳುವ ಕಾಲವೂ ಹೌದು. ಪ್ರೇಮ ಮತ್ತು ಕಾಮ ನಮ್ಮನ್ನು ಅತ್ಯಂತ ತೀವ್ರವಾಗಿ ತಲ್ಲಣಿಸುವಂತೆ ಕಾಡಬಲ್ಲ ಭಾವಗಳು. ಕವಿಯಾದವನಿಗೆ ಅವು ವರದಾನವೇ ಸರಿ. ಮತ್ತೆ ಪ್ರತಿಯೊಬ್ಬರೂ ಅವಕ್ಕೆ ಈಡಾಗದೇ ಪಾರಾಗುವುದು ಸಾಧ್ಯವಿಲ್ಲ.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಉತ್ತರ : ಹಿಂದಿನಿಂದಲೂ ರಾಜಕೀಯದ ಅಂಗಳದಲ್ಲಿಯೇ ಸಾಹಿತ್ಯ ಪೋಷಣೆ ಪಡೆದು ಬೆಳೆದು ಬಂದಿರುವುದನ್ನು ಕಾಣಬಹುದು. ರಾಜಾಶ್ರಯವಿಲ್ಲದೇ ಕವಿಗಳು ಕಾವ್ಯವನ್ನಷ್ಟೇ ನಂಬಿ ಬದುಕುವ ಸ್ಥಿತಿ ಆಗ ಇರುತ್ತಿರಲಿಲ್ಲ. ಅದರ ನಡುವೆಯೂ ಯಾವ ಆರ್ಥಿಕ ಸಹಾಯವಿಲ್ಲದೆಯೂ ಬರೆದ ಕೆಲವರು ಸಿಗುತ್ತಾರೆ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಸಿಗಬೇಕಾದ ಮಾನ ಮನ್ನಣೆ ಸಿಗದೆ ಹೋಗಿರುವುದು ಕಂಡುಬರುತ್ತದೆ. ಇದು ರಾಜಾಶ್ರಯದ ಬೆಂಬಲವಿಲ್ಲದ್ದು ಕಾರಣ ಎನ್ನುವುದೂ ತಿಳಿದುಬರುತ್ತದೆ. ಆದರೆ ಈಗ ಹಾಗಿಲ್ಲ. ಬಹಳಷ್ಟು ಬರಹಗಾರರು ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಮತ್ತು ಮುಖ್ಯವಾಗಿ ಬರಹವನ್ನೇ ನಂಬಿ ಬದುಕುತ್ತಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇಲ್ಲಿ ಸಾಹಿತ್ಯವನ್ನು ಪ್ರೀತಿಯಿಂದ ಓದುವ ಮತ್ತು ಬರೆಯುವ ಕಾರಣಕ್ಕಾಗಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈಗ ಆಮಿಷಗಳಿಲ್ಲ, ಹೊಗಳು ಭಟ್ಟಂಗಿಗಳಾಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಯಾರಿಗೂ ಇಲ್ಲ. ಆದರೆ ಇಂದಿನ ರಾಜಕೀಯ ಪ್ರಭಾವವೇ ಬೇರೆ. ಮತ್ತದು ಸಾಹಿತ್ಯದ ಮಟ್ಟಿಗೆ ಪೂರಕವಾಗಿದೆ ಅಂತನ್ನಿಸುವುದಿಲ್ಲ ನನಗೆ.

ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಉತ್ತರ : ಧರ್ಮ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗ. ದೇವರು ಎಂದರೆ ನಾವು ತಪ್ಪು ಮಾಡದಂತೆ ಸದಾ ನಮ್ಮನ್ನು ಎಚ್ಚರಿಸುವ ಅರಿವು. ಇದು ನನ್ನ ಸರಳ ನಂಬಿಕೆ. ದೇವರನ್ನು ನಾನು ನಂಬುವುದು ಹೀಗೆ. ತೋರಿಕೆಗೆ ದೇವರ ಮುಂದೆ ಕೂತು ಭಜನೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹಸಿದವನನ್ನ “ಮುಂದೆ ಹೋಗು…” ಎಂದು ಹೇಳಿ ದೇವರ ಮುಂದೆ ನೈವೇದ್ಯಕ್ಕಿಡುವುದು ನನ್ನಿಂದಾಗದ ಕೆಲಸ. ಮನಸ್ಸು ಶುದ್ಧಾವಗಲ್ಲದೆ ಸ್ನಾನ ಮಾಡಿರುವೆ ಎನ್ನುವ ಕಾರಣಕ್ಕೆ ದೇವರ ಎದುರು ಕೂರುವುದು ನನ್ನಿಂದ ಸಾಧ್ಯವಿಲ್ಲ. ದೇವರ ಭಾವಚಿತ್ರವೇ ಒಂದು ಅಗ್ನಿದಿವ್ಯವಿದ್ದಂತೆ. ಅದರ ಕಣ್ಣಿಗೆ ಕಣ್ಣು ಸೇರಿಸಲು ನಿಜಾಯಿತಿ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ನಿಯತ್ತಾಗಿರಬೇಕು. ಹಾಗಿಲ್ಲದೇ ಹೋಗಿ ಕೂತು ಕಣ್ಣುತಪ್ಪಿಸಿ ಕೂತು ಎದ್ದುಬರುವುದು ನನಗಂತೂ ಕಷ್ಟ. ನಾನು ಆಸ್ತಿಕಳು. ಆದರೆ ನನ್ನನ್ನು ಹತ್ತಿರದಿಂದ ನೋಡುವವರು ನಾಸ್ತಿಕಳೆಂದು ತಿಳಿಯಬಹುದು. ಕಾರಣ ಅವರ ನಂಬಿಕೆಗೂ ನನ್ನ ನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ನನ್ನ ದೇವರಿಗೊಂದು ಹೆಸರಿರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ದೇವರಿಗೆ ಜಾತಿ, ಧರ್ಮದ ಹಂಗಿಲ್ಲ. ಅದೊಂದು ಶಕ್ತಿ, ಅದೊಂದು ಬೆಳಕು… ಹಚ್ಚಿಟ್ಟ ದೀಪದ ಜ್ಯೋತಿಯೇ ದೇವರು.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಉತ್ತರ: ಇವತ್ತಿನ ಸಾಂಸ್ಕೃತಿಕ ಪ್ರಪಂಚ ಜಾಗತಿಕ ಮಟ್ಟದಲ್ಲಿ ವೈವೀಧ್ಯಮಯ ಅವಕಾಶಗಳನ್ನು ನಮಗೆ ಮಾಡಿಕೊಡುತ್ತಿದೆ. ಇವತ್ತು ಬರಹಗಾರನಿಗೆ ಸಾಕಷ್ಟು ಸ್ಪೂರ್ತಿ ಇದೆ ಬರೆಯಲಿಕ್ಕೆ. ಯಾವುದೇ ಒತ್ತಡವಿಲ್ಲ. ಆದರೆ ಆಧುನಿಕತೆಯ ವೇಗ ಅವನಲ್ಲಿ ವಿಚಿತ್ರ ಧಾವಂತವನ್ನು ಸೃಷ್ಟಿಸುತ್ತಿದೆ. ಎಲ್ಲವೂ ಇನ್ಸ್ಟಂಟ್ ಆಗುತ್ತಿರುವ ಈ ಹೊತ್ತಿನಲ್ಲಿ ಇನ್ಸ್ಟಂಟ್ ಹೆಸರು, ಪ್ರಸಿದ್ಧಿ, ಗುರುತಿಗಾಗಿ ಅರೆಬೆಂದ ಪದಾರ್ಥವನ್ನು ಬಡಿಸುವ ತರಾತುರಿಯೂ ಬೆಳೆಯುತ್ತಿದೆ. ಸ್ವಾರ್ಥ, ಅಸಹನೆ, ಮೇಲರಿಮೆ, ಕೀಳರಿಮೆ… ಮುಂತಾದ ಕಾರಣಕ್ಕೆ ತಮ್ಮ ಜಾಗಟೆಯನ್ನು ತಾವೇ ಹೊಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಅದರಿಂದ ಪಾರಾಗಿ ಬರೆಯಬೇಕಾಗಿರುವುದು ಸಧ್ಯದ ತುರ್ತು.

ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಉತ್ತರ: ಸಾಂಸ್ಕೃತಿಕ ಕ್ಷೇತ್ರದ ಒಳಗಿನ ರಾಜಕಾರಣ ಭಯ ಹುಟ್ಟಿಸುತ್ತದೆ. ಅರಣ್ಯದ ಯಾವ ಮರವೂ ಒಂದನ್ನೊಂದು ತುಳಿದು ಬೆಳೆಯುವುದಿಲ್ಲ. ಅಲ್ಲಿ ಒಂದು ಸಣ್ಣ ಪೊದೆ ಹೇಗೆ ಸ್ವತಂತ್ರವಾಗಿ ಹಬ್ಬಿ ಬೆಳೆಯುತ್ತದೋ ಹಾಗೆಯೇ ತೇಗ, ಹೊನ್ನೆ, ದೇವದಾರುವಿನಂತಹ ಮರಗಳೂ ಬೆಳೆಯುತ್ತವೆ. ಅಲ್ಲಿನ ಪ್ರತಿಯೊಂದು ಪ್ರಾಣಿಯೂ ಸ್ವಾಭಾವಿಕ ಆಹಾರ ಸರಪಣಿಯನ್ನು ಅನುಸರಿಸಿ ತಮ್ಮ ಬದುಕನ್ನು ತಾವು ಸಾಗಿಸುತ್ತವೆ. ಹಾಗೆ ಬೆಳೆಯಬೇಕು ನಾವು. ಆದರೆ ಇಲ್ಲಿ ಹಾಗಾಗುವುದಿಲ್ಲ. ನಕಾರಾತ್ಮಕ ಬಾಹ್ಯ ಪ್ರೇರಣೆಗಳು, ಪ್ರಭಾವಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಅವುಗಳಿಂದ ಪಾರಾಗಿ ಬರಹವನ್ನು ಮಾಡಬೇಕಾದ ಸವಾಲು ನಮ್ಮ ಮುಂದಿದೆ.

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಉತ್ತರ: ಸಧ್ಯದ ಕರೋನಾ ಪರಿಸ್ಥಿತಿಯಲ್ಲಿ ಯಾವುದನ್ನೂ ಅರ್ಥೈಸುವುದು, ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಆದರೂ ವಿಶ್ವದ ಮುಂದೆ ಭಾರತದ ಚಲನೆ ಆಶಾದಾಯಕವೆನಿಸುತ್ತಿದೆ.

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?

ಉತ್ತರ: ಖಂಡಿತ ನನಗೆ ಕನಸುಗಳಿಲ್ಲ. ಬರೆಯುವುದು ನನ್ನ ಜರೂರತ್ತು. ಯಾರನ್ನೂ ಮೆಚ್ಚಿಸಲಿಕ್ಕಲ್ಲ. ಯಾರಾದರೂ ಹೊಗಳಿದರೆ ನನಗೆ ವಿಪರೀತ ಮುಜುಗರವಾಗುತ್ತದೆ. ಇನ್ನೊಂದೇ ಒಂದು ಮಾತನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ನನ್ನಿಂದ ಎನ್ನಿಸುವಷ್ಟು. ನಾನು ನನ್ನ ತುಡಿತ, ತುಮುಲ, ಒಳ ಒತ್ತಡವನ್ನ ತಡೆಯಲಾಗದೆ ಬರೆದದ್ದನ್ನು ಸೌಜನ್ಯದಿಂದ ಓದಿ ಪ್ರೀತಿಸುವವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿರುತ್ತದೆ. ಅವರು ನಿಜವಾಗಲೂ ಹೊಗಳಿಕೆಗೆ ಅರ್ಹರು. ಇನ್ನು ಇದುವರೆಗೂ ನಾನೇನು ಬರೆದಿರುವೆನೋ ಅದೆಲ್ಲ ನಾನು ಕನಸುಕಟ್ಟಿ ಬರೆದದ್ದಲ್ಲ. ಹಾಗಾಗಿ ಇನ್ನು ಮುಂದೆಯೂ ಅದು ಹಾಗೇ ನಡೆದುಕೊಂಡು ಹೋಗುತ್ತದೆ. ನನಗೆ ನಿರೀಕ್ಷೆಗಳು ಕಡಿಮೆ. ಹಾಗಾಗಿ ನೋವೂ ಕಡಿಮೆ. ಯಾರಾದರೂ ನ್ಯಾಯವಾಗಿ ಟೀಕಿಸಿದರೆ ಖುಷಿಯಾಗುತ್ತದೆ. ಮತ್ತು ಅನಗತ್ಯ ಟೀಕೆಗಳನ್ನು ತಳ್ಳಿಹಾಕಿ ಮುನ್ನಡೆಯುವುದೂ ಗೊತ್ತು. ನೆನ್ನೆ ನಾಳೆಗಳಿಗಿಂತ ವರ್ತಮಾನದಲ್ಲಿ ಬದುಕುವವಳು ನಾನು. ಈ ಕ್ಷಣ ನಾನೇನು ಮಾಡುತ್ತಿರುತ್ತೇನೋ ಅದನ್ನು ನೂರು ಪ್ರತಿಶತ ನನ್ನ ಸಾಮರ್ಥ್ಯ ಸುರಿದು ಚೊಕ್ಕವಾಗಿ ಮಾಡಿ ಮುಗಿಸಬೇಕು, ಅಷ್ಟೇ ನನ್ನ ಗುರಿಯಾಗಿರುತ್ತದೆ.

ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?

ಉತ್ತರ: ಒಬ್ಬರೇ ಅಂತ ಹೇಳುವುದು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಓ.ಹೆನ್ರಿ, ಎಮಿಲಿ ಡಿಕಿನ್ಸನ್, ಶೇಕ್ಸ್‌ಪಿಯರ್, ವಿಲಿಯಮ್ ಬ್ಲೇಕ್, ಕೀಟ್ಸ್, ಮಾಯಾ ಏಂಜೆಲೋ… ಮುಂತಾದವರು. ಮತ್ತೆ ಭಾರತೀಯ ಇಂಗ್ಲೀಷ್ ಬರಹಗಾರರಲ್ಲಿ ಅರವಿಂದ್ ಅಡಿಗ, ಚೇತನ್ ಭಗತ್, ಕಮಲಾದಾಸ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್… ಮತ್ತು ಹೆಸರಿಸಲಾದಷ್ಟು ಮಂದಿ ಒಂದೇ ಒಂದು ಕವಿತೆ, ಒಂದೇ ಒಂದು ಕತೆ ಅಥವಾ ಒಂದೇ ಒಂದು ಬರಹವಾಗಿ ನನ್ನ ಓದಿಗೆ ದಕ್ಕಿ ನನ್ನ ಅರಿವನ್ನು ವಿಸ್ತರಿಸಿರುತ್ತಾರೆ. ಅವರೆಲ್ಲರೂ ನನಗೆ ಇಷ್ಟವೇ. ಮತ್ತೆ ಕನ್ನಡದಲ್ಲಿ ನನ್ನನ್ನು ಬಹಳ ಕಾಡಿದವರೆಂದರೆ ಕುವೆಂಪು ತೇಜಸ್ವಿ, ಅನಂತಮೂರ್ತಿ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ….. ಇವರೆಲ್ಲ ಈಗಲೂ ನನ್ನನ್ನು ಕಾಡುವವರೇ. ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಮಂದಿ ಬರಹಗಾರರು ತಮ್ಮ ಗಟ್ಟಿ ಬರಹದಿಂದಾಗಿ ನನಗೆ ಬಹಳ ಇಷ್ಟ.

ಈಚೆಗೆ ಓದಿದ ಕೃತಿಗಳಾವವು?

ಉತ್ತರ: ಇತ್ತೀಚೆಗೆ ಆಲ್ಕೆಮಿಸ್ಟ್ (poulo coelho) ಓದಿದೆ. ಬಹಳ ಇಷ್ಟವಾಯ್ತು. ಈ ಕಾದಂಬರಿಯ ಮೊದಲಲ್ಲಿ ಒಂದು ಸಣ್ಣ ಕತೆ ಬರುತ್ತದೆ. ಅಲ್ಲೊಬ್ಬ ಸಣ್ಣ ವಯಸ್ಸಿನ ಹುಡುಗನಿರುತ್ತಾನೆ. ಅವನು ಬಹಳ ಸುಂದರವಾಗಿರುತ್ತಾನೆ. ಪ್ರತಿನಿತ್ಯ ಅವನೊಂದು ತಿಳಿಗೊಳಕ್ಕೆ ಬರುತ್ತಿರುತ್ತಾನೆ. ಅದರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖುಷಿಪಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವ ಅದೇ ಕೊಳದಲ್ಲಿ ಜಾರಿ ಬಿದ್ದು ಸತ್ತು ಹೋಗುತ್ತಾನೆ. ಕೊಳ ದುಃಖಿತವಾಗುತ್ತದೆ. ಅವನು ಬಿದ್ದ ಜಾಗದಲ್ಲಿ ಸುಂದರವಾದ ಕಮಲವೊಂದು ಹುಟ್ಟಿ ಅರಳುತ್ತದೆ. ಒಮ್ಮೆ ಅತ್ತ ಹೋಗುತ್ತಿದ್ದ ದೇವತೆಗಳು ಕೊಳವನ್ನು ಕೇಳುತ್ತಾರೆ, “ನಿನಗೀಗ ದುಃಖವಾಗುತ್ತಿರಬಹುದಲ್ಲವಾ, ಅವ ಅದೆಷ್ಟು ಸುಂದರವಾಗಿದ್ದ, ಪ್ರತಿನಿತ್ಯ ನಿನ್ನ ಸಮತಲದ ಮೇಲೆ ಬಹಳ ಹತ್ತಿರದಿಂದ ತನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಂಡು ಆನಂದಿಸುತ್ತಿದ್ದ ” ಎಂದು ಕೇಳುತ್ತಾರೆ. ಆಗ ಕೊಳ “ಹುಡುಗ ಸುಂದರನಿದ್ದನಾ? ನಿಜಕ್ಕೂ ನನಗೆ ಗೊತ್ತಿಲ್ಲ. ಅವನು ಪ್ರತಿಬಾರಿ ಕಣ್ಣರಳಿಸಿ ಬಹಳ ಹತ್ತಿರದಿಂದ ನನ್ನನ್ನು ನೋಡುವಾಗ ನಾನು ಅವನ ಕಣ್ಣಲ್ಲಿ ನನ್ನದೇ ಸೌಂದರ್ಯವನ್ನು ಕಂಡು ಬೆರಗಾಗುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ, ಅದು ನನ್ನ ನೋವು” ಎನ್ನುತ್ತದೆ. ಈ ಕತೆ ಅದೆಷ್ಟು ನನ್ನನ್ನು ಕಾಡಿತೆಂದರೆ, ಹೌದಲ್ಲವಾ ನಾವು ಯಾವ ಮಟ್ಟಿಗೆ ತಯಾರಾಗಿದ್ದೇವೆ ಎಂದರೆ ನಮಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬೇಕಾಗೂ ಇಲ್ಲ.

ನಿಮಗೆ ಇಷ್ಟವಾದ ಕೆಲಸ ಯಾವುದು?

ಉತ್ತರ: ಹಾಡುವುದು, ಬಣ್ಣಗಳ ಜೊತೆ ಆಟ ಆಡುವುದು, ಚಿತ್ರ ಬರೆಯುವುದು, ಕ್ರಾಫ್ಟ್ ಮಾಡುವುದು, ಸುಮ್ಮನೆ ಗೊತ್ತು ಗುರಿ ಇಲ್ಲದೇ ಓದುತ್ತಾ ಕೂರುವುದು, ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಏನಾದರೂ ಕಲಿಸುವುದು, ಅವರಲ್ಲಿ ಸ್ಪೂರ್ತಿ ತುಂಬುವುದು…. ಹೀಗೆ ಒಟ್ಟಿನಲ್ಲಿ ಸುಮ್ಮನೆ ಕೂರಲಿಕ್ಕಂತೂ ನನಗೆ ಸಾಧ್ಯವಿಲ್ಲ. ಏನಾದರೂ ಸರಿ ಮಾಡುತ್ತಲೇ ಇರಬೇಕು ನಾನು. ಜೊತೆಗೆ ಕೌಟುಂಬಿಕ ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ.

ನಿಮಗೆ ಇಷ್ಟವಾದ ಸ್ಥಳ ಯಾವುದು ?

ಉತ್ತರ: ಸಮುದ್ರ ತೀರ ಮತ್ತು ದಟ್ಟ ಕಾಡು. ನಾನು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಂದಿನ ಟ್ರಿಪ್ಪುಗಳಲ್ಲಿ ಬಹಳಷ್ಟು ಸರ್ತಿ ನೋಡಿದ್ದು ಶಾರವತಿ ನದಿ ಮತ್ತು ಅರಬ್ಬೀ ಸಮುದ್ರವನ್ನ. ಹಾಗಾಗಿ ಇಂದಿಗೂ ಅವೇ ನನ್ನನ್ನು ಹೆಚ್ಚು ಆಕರ್ಷಿಸುವುದು.

ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು?

ಉತ್ತರ: ಪಿಂಕ್, ಸೂಪರ್ ಥರ್ಟಿ, ತಾರೆ ಜ಼ಮೀನ್ ಪರ್, ತ್ರಿ ಈಡಿಯಟ್ಸ್, ಆರಕ್ಷಣ್, ಪೀಕೆ, ಕಂಚೆ, ಮಿಥುನಂ, ಪಿಂಜರ್, … ಇಂತಹ ಅನೇಕ ಚಿತ್ರಗಳು ನನಗಿಷ್ಟ.

ನೀವು ಮರೆಯಲಾರದ‌ ಘಟನೆ‌ ಯಾವುದು?

ಉತ್ತರ: 2014. ಅದು ನನ್ನ ಮೊದಲ ಪುಸ್ತಕ ಮೌನ ತಂಬೂರಿ ಹೊರಬಂದ ವರ್ಷ. ಅಲ್ಲಿಯವರೆಗೂ ಸಾಹಿತ್ಯಪ್ರಪಂಚಕ್ಕೆ ನಾನೆಂದರೆ ಏನೊಂಚೂರೂ ಗೊತ್ತಿರದ ನಾನು ಪುಸ್ತಕವೆಂಬ ಟಿಕೆಟ್ ಹಿಡಿದು ಎಂಟ್ರಿಗೋಸ್ಕರ ಕಾದು ನಿಂತಿದ್ದೆ. ಸ್ವಾಗತ ಸಿಕ್ಕಿತು. ಮತ್ತು ಇಲ್ಲಿಯವರೆಗೂ ನಡೆದ ದಾರಿಯನ್ನು ಹಿಂತಿರುಗಿ ನೋಡಿದರೆ ಯಾವ ರಿಗ್ರೆಟ್ಸ್ ಇಲ್ಲ ಅಲ್ಲಿ. ಮತ್ತೆ ಅದೆಷ್ಟೋ ಒಳ್ಳೆಯ ಸಾಹಿತ್ಯಬಂಧುಗಳು, ಹಿರಿಯರು ಸಿಕ್ಕರು. ಅವರ ಹಾರೈಕೆ ನನ್ನದಾಯಿತು. ಎಡವಿದಾಗಲೂ ಹೆಗಲು ಕೊಟ್ಟು ನಡೆಸುವ ಎದೆಗೊತ್ತಿಕೊಂಡು ಪ್ರೀತಿಸುವ ಗೆಳೆಯರು ಸಿಕ್ಕರು. ಅವರೆಲ್ಲರಿಗೂ ನಾನು ಋಣಿ. ಇದೊಂದು ಸುಕೃತವೇ ಸರಿ. ಈ ಕ್ಷಣ ನನಗೆ ಯಾತಕ್ಕಾಗಿ ನಾನು ಬರೆಯಬೇಕಿದೆಯೋ ಅದರ ಅವಶ್ಯಕತೆ ನನಗೆ ಅರ್ಥವಾಗಲಿ ಎನಿಸುತ್ತಿದೆ. ಹೆಣ್ಣು ನನ್ನ ಮೂಲ ಕಾಳಜಿ ಎಂದು ಮೊದಲೇ ಹೇಳಿದೆ. ಅದರ ಬಗ್ಗೆಯೂ ತಳ ಮಟ್ಟದ ಚಿಂತನೆ ನಡೆಸಬೇಕಿದೆ. ಸಾಹಿತ್ಯ, ಬೌದ್ಧಿಕತೆ ಎನ್ನುವುದೆಲ್ಲಾ ನಮ್ಮಂತಹ ಓದಿದ, ಸುಶಿಕ್ಷಿತರ ಪಾಲಿನ ಊಟ. ಆದರೆ ಈಗಲೂ ಅನಕ್ಷರಸ್ಥ ಸಾಮಾನ್ಯ ಜನರ ಬದುಕು ಬವಣೆ ಸಾಮಾಜಿಕ ಕಷ್ಟಗಳಿಗೆ ಹೊರತಾಗಿಲ್ಲ. ಎಲ್ಲೊ ಒಂದು ಬದುಕು , ಒಂದು ಜೀವ ನಮ್ಮ ಬರಹದಿಂದ ಉಳಿಯುತ್ತದೆ, ಬದಲಾಗುತ್ತದೆ, ಎಂದರೆ ಅದಕಿಂತ ಸಾರ್ಥಕತೆ ಬೇರೊಂದಿಲ್ಲ. ಮತ್ತು ಬರಹಗಾರನೊಬ್ಬನ ಸಾಮಾಜಿಕ ಜವಾಬ್ದಾರಿ ಅದು. ಸಾಹಿತ್ಯ ರಚನೆ ಸಾಹಿತ್ಯಕ್ಕಾಗಿಯೇ ಆದರೂ, ಅದು ಹೇಳ ಹೊರಡುವ ವಿಚಾರ ಕನಿಷ್ಟ ಒಬ್ಬರ ಬದುಕಿಗೆ ಸ್ಪೂರ್ತಿಯಾಗಬೇಕು. ನೊಂದ ಒಂದು ಮನಸ್ಸಿಗೆ ಸಾಂತ್ವನವಾಗಬೇಕು.

***********************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Leave a Reply

Back To Top