ಲೇಖನ
ಬರಗೂರರೆಂಬ ಬೆರಗು
ಮಮತಾ ಅರಸೀಕೆರೆ
ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ.
ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ದೂರದಿಂದ ಗಮನಿಸಿ ಭಾಷಣಗಳನ್ನು ಆಲಿಸುತ್ತಿದ್ದೆ.ನನ್ನ ವೈಚಾರಿಕ ಗುರುಗಳು ಸ್ವಾಮಿಯವರು ಒಮ್ಮೆ ಬಿ.ಆರ್.ರನ್ನು ತಮ್ಮ ಗುರುಗಳೆಂದೂ, ತಮ್ಮ ಅಧ್ಯಯನದ ಸಲುವಾಗಿ ಅವರು ವಹಿಸುತ್ತಿದ್ದ ವಿಶೇಷ ಆಸಕ್ತಿಯನ್ನು, ಪ್ರೀತಿ ಕಾಳಜಿಯನ್ನೂ ವರ್ಣಿಸಿ ತುಂಬು ಮೆಚ್ಚುಗೆಯಿಂದ ಸ್ಮರಿಸುವಾಗ ಸರ್ ಬಗ್ಗೆ ಮತ್ತಷ್ಟು ಅಭಿಮಾನವಾಯ್ತು. ಸ್ವಾಮಿ ಗುರುಗಳ ದೃಷ್ಟಿಯಲ್ಲಿ ಬರಗೂರರಿಗೆ ವಿಶೇಷ ಸ್ಥಾನಮಾನ. ಅದೇ ಭಾವದ ಮುಂದುವರಿಕೆ ನನ್ನಲ್ಲೂ.
ಬಿ.ಆರ್.ಸರ್‌ನ ತೀರಾ ಹತ್ತಿರದಿಂದ ಕಂಡದ್ದು ಶ್ರವಣಬೆಳಗೊಳದಲ್ಲಿ. ನಮ್ಮ ಪರಿಚಯದ ಸ್ನೇಹಿತರೊಬ್ಬರು ಶ್ರವಣಬೆಳಗೊಳದಲ್ಲಿ ಸಿನೆಮಾ ಶೂಟಿಂಗ್ ನೋಡಲು ಆಹ್ವಾನಿಸಿದ್ದರು.ಬರಗೂರರು ಸಿನೆಮಾ ನಿರ್ದೇಶಕರು.
ಸ್ನೇಹಿತರೊಂದಿಗೆ ತೆರಳಿ, ಕೆಲವು ಹೊತ್ತು ಅಲ್ಲಿದ್ದು ಸರ್‌ನ ಕೂಡ ಕ್ಲುಪ್ತವಾಗಿ ಮಾತನಾಡಿಸಿ ವಾಪಸ್ ಬಂದ ನೆನಪು. ನಂತರ ಮಾತನಾಡಲು ಸಿಕ್ಕಿದ್ದು ತೀರಾ ಕಡಿಮೆ.ಒಂದೆರಡು ಕಾರ್ಯಕ್ರಮಗಳಲ್ಲಿ ಪರಿಚಯಿಸಿಕೊಂಡಾಗ ಆತ್ಮೀಯವಾಗಿಯೇ ಮಾತನಾಡಿಸಿದರು. ಸಾಂಸ್ಕೃತಿಕ ವಿಷಯಗಳಿಗಾಗಿ ಆಗಾಗ ನಾನು ಮೆಸೇಜ್ ಮಾಡಿದಾಗ ತಪ್ಪದೇ ಉತ್ತರಿಸುವರು.ಶಿಕ್ಷಣ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಅಹವಾಲು ಹೊತ್ತು ಡಿ ಎಸ್ ಈ ಆರ್ ಟಿ ಗೆ ತೆರಳಿದ್ದಾಗ ಪುಸ್ತಕ ಕಮಿಟಿ ಅಧ್ಯಕ್ಷರಾಗಿದ್ದ ಅವರು ಸುಮಾರು ಅವಧಿಯ ಕಾಲ ನಮ್ಮೊಂದಿಗೆ ಮಾತನಾಡಿ ಸಹನೆಯಿಂದ ಆಲಿಸಿ ಸೂಕ್ತ ಪ್ರತಿಕ್ರಿಯೆ ನೀಡಿದಾಗ ಅವರ ಸರಳತೆ, ಸಹೃದಯತೆ ಕಾಳಜಿ ಬಗ್ಗೆ ಖುಷಿಯಾಗಿತ್ತು.ಕೆಲವು ದಿನಗಳ ನಂತರ ಡಿ.ಎಸ್.ಈ.ಆರ್.ಟಿಯಲ್ಲಿಯೇ ಒಂದು ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಸುಧಾರಣೆ ಕುರಿತಂತೆ ಸಲಹೆ ಸೂಚನೆ ನೀಡಲು ಬರಹಗಾರ ಶಿಕ್ಷಕರನ್ನು ಆಹ್ವಾನಿಸಿದ್ದರು.ಪಠ್ಯಪುಸ್ತಕ ಕಮಿಟಿಯಲ್ಲಿ ಬರಹಗಾರರಿದ್ದರೆ ಅದರ ಸ್ವರೂಪ ಮತ್ತಷ್ಟು ಉತ್ತಮವಾಗುತ್ತಿತ್ತೇನೋ ಎಂದ ಅವರ ದೂರದರ್ಶಿತ್ವದ ಮಾತಿನ್ನೂ ನನಗೆ ನೆನಪಿದೆ.
ಸಾಂಸ್ಕೃತಿಕ ನೀತಿಯ ವರದಿಯನ್ನು ಸಿದ್ದಪಡಿಸಿದ್ದು, ಅದರ ಜಾರಿಗೆ ಸಾಂಸ್ಕೃತಿಕ ವಲಯ ಒತ್ತಾಯಿಸುತ್ತಿದ್ದುದನ್ನು ಗಮನಿಸುತ್ತಿದ್ದೆ. ಮತ್ತು ಆ ಸಂಬಂಧ ಕೆಲವು ಸಂದೇಶ ಕಳಿಸಿದ್ದು ಬಿಟ್ಟರೆ ನಂತರ ಅವರ ಸಿನೆಮಾ ಆರಂಭವಾಗುವಾಗ ಮತ್ತೆ ಮೆಸೇಜ್‌ಗಳು. ಸಾಂಸ್ಕೃತಿಕ ವಲಯದ ಕೆಲವು ಅಸಂಬದ್ಧ ನಿರ್ಣಯಗಳಿಂದ ನಮಗೆ ಹತಾಶೆಯಾದಾಗ ಪುನಃ ಸಂಪರ್ಕ ಮಾಡಿದ್ದೆ.ತಡಮಾಡದೇ ಪ್ರತಿಕ್ರಿಯಿಸುತ್ತಿದ್ದ ಅವರ ಸಂವಹನ ಗುಣ ಭರವಸೆ ತುಂಬುತ್ತಿತ್ತು.
ತೀರಾ ಇತ್ತೀಚೆಗೆ ಲಾಕ್‌ಡೌನ್ ಆರಂಭವಾದಾಗ ಎಲ್ಲರೂ ಭೀತಿಯಿಂದ ಗೃಹಬಂಧನದ ರುಚಿ ನೋಡುವಂತಾಯಿತು. ಏಕತಾನತೆ ಹಾಗೂ ಕ್ಲೇಷಗಳನ್ನು ತಾತ್ಕಾಲಿಕವಾಗಿ ಮರೆಸುವ ಸಾಧನವಾಗಿ ಬರಹ ನೆರವಿಗೆ ಬಂದು ಒಂದಷ್ಟು ಕವಿತೆ ಬರೆದು ಹಿರಿಯ ಲೇಖಕರಿಗೆ ಕಳಿಸುವಾಗ ಬಿ.ಆರ್.ಸರ್ ಗು ಕಳಿಸಿದೆ. ಸಕಾರಾತ್ಮಕ ಸ್ಪಂದನೆಯಿಂದ ಹುರಿಗೊಂಡೆ.ಅದೇ ವೇಳೆಗೆ ಕೋಲಾರದ ಗೆಳೆಯರ ಯೋಜನೆಯೊಂದಕ್ಕೆ ಬರಗೂರರನ್ನ ಯೂಟ್ಯೂಬ್ ಚಾನಲ್ ಗೆ ಮೌಖಿಕವಾಗಿ ಪರಿಚಯಿಸುವ ಸದಾವಕಾಶ ದಕ್ಕಿತು. ಆ ಸಂದರ್ಭದಲ್ಲಿ ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ ಅಂತರ್ಜಾಲ ತಡಕಾಡುವಾಗ ದಕ್ಕಿದ್ದು ಅಪಾರ ಸಾಮಗ್ರಿ . ಅಲ್ಲಿಂದ ಶುರುವಾಯಿತು ನನ್ನ ಹುಡುಕುವಿಕೆ.ಅದೆಷ್ಟೊಂದು ದಾಖಲೆಗಳು.ಯೂಟೂಬ್ , ಪತ್ರಿಕೆ, ವಿಕಿಪಿಡಿಯಾದಲ್ಲೆಲ್ಲೆಲ್ಲಾ ಬಹಳಷ್ಟು ಮಾಹಿತಿಗಳು. ಓದುತ್ತಾ, ನೋಡುತ್ತಾ ಅವುಗಳಲ್ಲಿ ಕೆಲವು ತಪ್ಪಿಹೋದಾವೆಂದು ಎಚ್ಚರ ವಹಿಸುವಾಗ ಎಫ್.ಬಿ. ಪೇಜ್ ತೆರೆದು ಅಲ್ಲಿ ಸಂಗ್ರಹಿಸುತ್ತಾ ಹೋದೆ. ಅವರ ಸಾಮಾಜಿಕ ತುಡಿತ, ಸ್ಪಂದನೆ ಇಷ್ಟವಾಗುತ್ತ ಮತ್ತಷ್ಟು ಮಗದಷ್ಟು ಅಭಿಮಾನಿಯಾದೆ.
ಸಮಾಜವನ್ನು,ತನ್ನ ಸುತ್ತಲಿನ ಪ್ರತೀ ಸಂದರ್ಭವನ್ನು ಕುರಿತು ಅವರ ಅಪೂರ್ವ ಒಳನೋಟವುಳ್ಳ ಗ್ರಹಿಕೆ, ಆ ಅರಿವಿನ ವಿಸ್ತಾರ, ಓದಿನ ವ್ಯಾಪ್ತಿ, ಮುಂದ್ಗಾಣಿಕೆ, ಮುಂದಾಲೋಚನೆ ದೂರದೃಷ್ಟಿಯ ಮಾತುಗಳು ನನಗೆ ಬೇರೆಯದೇ ವಿಶ್ವವನ್ನು ಮನಗಾಣಿಸತೊಡಗಿದವು. ಪ್ರತೀ ಕದಲಿಕೆಯನ್ನು ಅವರು ಕಾಣುವ ರೀತಿ, ವಿಮರ್ಶಿಸುವ ಪರಿ, ವಿಶಿಷ್ಟ ಆಯ್ಕೆ, ವಸ್ತು, ಘಟನೆ, ವಾತಾವರಣ, ಮೊದಲಾದವನ್ನ ಕಾಣಬೇಕಾದ ನೋಟದ ಪರಿಚಯ, ಮೊದಲಾದವುಗಳಲ್ಲಿ ಅವರಿಗೆ ಅವರೇ ಸಾಟಿ. ಸೂಕ್ಷ್ಮಾತಿಸೂಕ್ಷ್ಮ ಸ್ವಭಾವದ ಮೇಷ್ಟ್ರು ಎಳೆ ಗರಿಕೆಯ ಚಲನೆಯಲ್ಲೂ ಅದ್ಭುತವನ್ನು ಕಾಣಬಲ್ಲರು.ಕೂದಲು ಸೀಳಿದಂತಹ ಆಂತರಿಕ ಅವಲೋಕನದ ತಾಕತ್ತು ಅವರ ಅಗಾಧ ಶಕ್ತಿ.ಇಷ್ಟೆಲ್ಲ ವಿಷಯವನ್ನ ಅಂತರ್ಜಾಲದ ಮೂಲಕ ಮಾತ್ರ ಪಡೆದ ನನಗೆ ಅವರ ಶಿಷ್ಯ ವರ್ಗದವರ ಮೇಲೆ ಅಸೂಯೆಯಾಗಿದ್ದಂತೂ ಖರೆ.ಯುವ ಸಮುದಾಯವನ್ನು, ಯುವ ಪೀಳಿಗೆಯನ್ನು ಬಿ.ಆರ್.ಸರ್ ಪ್ರೋತ್ಸಾಹಿಸುವ ಪರಿಯ ಬಗ್ಗೆ ಅವರ ಆತ್ಮೀಯರಿಂದಲೇ ತಿಳಿಯಬೇಕು.ಅವರಿಂದ ಸಹಾಯ ಸಹಕಾರ ಪಡೆದಿರುವ ಅಪಾರ ಶಿಷ್ಯ ಬಳಗದ ದಂಡೇ ಇದೆ. ಯೂಟೂಬಿನಲ್ಲಿ ಅವರ ಹಾಗೂ ಅವರ ಪತ್ನಿಯವರ ಆತಿಥ್ಯ ಸತ್ಕಾರಗಳ ಬಗ್ಗೆ ತಿಳಿದು ಅಚ್ಚರಿಯಾಗಿತ್ತು.
ಚಳುವಳಿ, ಸಂಘಟನೆ ಸಾಮಾಜಿಕವಾಗಿ ತೊಡಗಿಸಿಕೊಂಡವರಿಗೆ ಸೃಜನಾತ್ಮಕತೆ ಸಾಧ್ಯವಿಲ್ಲ ಎಂಬುದೊಂದು ಮಾತಿದೆ.ಅದನ್ನ ಸಾರಾಸಗಟಾಗಿ ಸುಳ್ಳು ಎಂದು ಪ್ರತಿಪಾದಿಸಿದವರು ಮೇಷ್ಟ್ರು.ಸಂವೇದನಾಶೀಲ ಬರಹಗಳ ಮೂಲಕ ಎಲ್ಲವನ್ನೂ ಸಮತೂಗಿಸಿ ತೋರಿಸಿದವರು. ಪದ್ಯಗಳ ಮೂಲಕವೂ ನವಿರುತನವನ್ನು ಸೊಗಸಾಗಿ ನಿರೂಪಿಸಿದವರು.ಒಂದು ವಿಷಯವನ್ನು ವಿಂಗಡಿಸಿ ವಿಶ್ಲೇಷಿಸುವುದರ ಮೂಲಕ ಆವಾಹಿಸಿಕೊಳ್ಳುವ ಮಾರ್ಗಗಳನ್ನು ಪರಿಚಯಿಸಿದವರು. ನಾಣೊಂದು ಪದ್ಯದಲ್ಲಿ ಕೊಂಚ ಸಂಘರ್ಷವನ್ನು ಅಡಕಗೊಳಿಸಿದಾಗ ‘ ಸಂವಹನ ಬೀದಿಯಲ್ಲಿ ನಿಂತು ಜಗಳವಾಡಿದಂತಿರಬಾರದು’ಎಂಬ ಮಾತಿನ ಮೂಲಕ ನಯವಾದ ಮಾತಿನ ಪೆಟ್ಟು ಕೊಟ್ಟು ತಿದ್ದಿದವರು.ಸಿನೆಮಾ ಮಾಧ್ಯಮದ ಮೂಲಕ ಅವರು ಸಾಧಿಸಿದ್ದು ಬಹಳ.ಕಲಾತ್ಮಕತೆ ಮೂಲಕ ಸದಭಿರುಚಿಯನ್ನು ಯಥೇಚ್ಚವಾಗಿ ಹಂಚಿದವರು. ಒಂದೊಂದು ಸಿನೆಮಾವು ಕ್ಲಾಸಿಕ್.ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಸಾಕಷ್ಟು ಕೆಲಸಗಳು ಇಂದಿಗೂ ಜನಜನಿತ.ಅವರ ಕತೆಗಳು, ಕವನಗಳು, ಅಂಕಣ ಬರಹಗಳು, ಕಾದಂಬರಿಗಳನ್ನು ಓದುವಾಗಅವರ ಸಂಪೂರ್ಣ ನಿಲುವು ಖಚಿವಾಗುತ್ತದೆ.ಬದ್ಧತೆ, ತಲ್ಲೀನತೆಗೆ ಅವರೇ ಮಾದರಿ.ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಕಾಣಿಸಿದ ಅವರು ತೊಡಗಿಕೊಳ್ಳದ ಕ್ಷೇತ್ರಗಳೇ ಇಲ್ಲವೆನ್ನುವಷ್ಟು ಸಾಧಿಸಿದವರು. ಸ್ವತಃ ಪ್ರಾಧ್ಯಾಪಕರಾಗಿದ್ದು, ಈಗಲೂ ಶೈಕ್ಷಣಿಕ ಸವಾಲುಗಳಿಗೆ ಸಕಾಲದಲ್ಲಿ ಧಾವಿಸಿ ನೀಡುವ ಸಲಹೆಗಳು, ರಾಜಕೀಯವಾಗಿ ಒದಗಿಸುವ ಮಾರ್ಗದರ್ಶನಗಳು ಮುತ್ಸದ್ದಿಯ ಅಸಾಧಾರಣಗುಣದವು. ಇಷ್ಟೆಲ್ಲಾ ಜ್ಞಾನ ದಕ್ಕಿದ್ದೂ ಕೂಡ ಪತ್ರಿಕೆ ಮತ್ತು ಅಂತರ್ಜಾಲದಲ್ಲಿಯೇ.ಇಷ್ಟೆಲ್ಲ ಹೇಳಲು ಅರ್ಹತೆಯಿದೆಯೋ ಇಲ್ಲವೋ, ಸಂಕೋಚ ಮುಜುಗರದಿಂದಲೇ ಹೇಳಬೇಕಾಯಿತು.
ಗ್ರಾಮೀಣ ಹಿನ್ನೆಲೆಯಿಂದ ಬದುಕನ್ನು ರೂಪಿಸಿಕೊಂಡು, ಸತತ ಪ್ರಯತ್ನ ಹಾಗೂ ನಿರಂತರ ಬದ್ಧತೆಯ ಛಲದ ಮೂಲಕ ಅಸಾಮಾನ್ಯ ಚಿಂತಕರಾದ, ಸಾಂಸ್ಕೃತಿಕ ಚಾಲಕರಾದ ಬಿ.ಆರ್.ಮೇಷ್ಟು ಜನ್ಮದಿನ ಅಕ್ಟೋಬರ್ ತಿಂಗಳಿನಲ್ಲಿಯೇ ಬರುತ್ತದೆ. ಈ ಹಿಂದೆ ಅವರ ಬಳಗ ಏರ್ಪಡಿಸಿದ್ದ ‘ಬರಗೂರು-೭೦, ವಿಚಾರ ಸಂಕಿರಣ’ ದಲ್ಲಿ ಪಾಲ್ಗೊಂಡ ಖುಷಿ ನನ್ನದು.ಈಗಲೂ ಇದೇ ಅಕ್ಟೋಬರ್ ೨೯ ರಂದು ಬೆಳಗ್ಗೆ ಅವರ ಶಿಷ್ಯವರ್ಗ ರಾಷ್ಟ್ರೀಯ ವೆಬಿನಾರ್ ಆಯೋಜಿಸಿ ಗುರುಗಳ ಬಗ್ಗೆ ಹಿರಿಯ ಲೇಖಕರಿಂದ ಮಾತನಾಡಿಸಲಿದ್ದಾರೆ.ಶೀರ್ಷಿಕೆ- ನಮ್ಮ ಮೇಷ್ಟ್ರು, ನಮ್ಮ ಹೆಮ್ಮೆ. ಹೆಮ್ಮೆಯ ಸಂಗತಿಯೇ.
ಬರಗೂರರ ಬಳಗ, ಅಭಿಮಾನಿಗಳು, ಅವರ ಅನುಯಾಯಿಗಳ ಸಂಖ್ಯೆ ಅಪಾರ. ಅವರ ಕುರಿತು ಅದೆಷ್ಟೋ ಪಿ.ಎಚ್.ಡಿ.ಗಳಾಗಿವೆ. ಬರಹಗಳು, ಲೇಖನಗಳು ಬಂದಿವೆ. ಆ ಮಟ್ಟಕ್ಕಲ್ಲದಿದರೂ ಕಿರು ಅಭಿಮಾನಿಯಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದೆ ಕೆಲವೇ ಪದಗಳಲ್ಲಿ ಗ್ರಹಿಕೆಗೆ ದಕ್ಕಿದಂತೆ ದಾಖಲಿಸಲು ಯತ್ನಿಸಿರುವೆ.
**************************************
ಫೋಟೊ ಆಲ್ಬಂ
ವಾಹ್…ಆಪ್ತ ಬರಹ. ನಿಜ, ಮಾನ್ಯ ಬರಗೂರರ ಬಗೆಗೆ ಓದಿದಷ್ಟು, ತಿಳಿದಷ್ಟೂ ಕಡಿಮೇನೇ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಅಂತ:ಕರಣದ ತಂಪಿನರಿವಾಗದಿರದು. ದೂರದ ಮುಂಬೈನಲ್ಲಿರುವ ನನ್ನ ಎಂದೂ ಕಂಡಿರದೆ, ಕೇಳಿರದಿದ್ದರೂ, ನನ್ನ ಮೊದಲ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಹಾರೈಸಿದ್ದರಿಂದಲೇ ನಾನಿವತ್ತು ‘ಕವಿತೆ’ ತರಹ ಬರೆಯಲು ಸಾಧ್ಯವಾಯಿತು.
ಸಾಂಸ್ಕೃತಿಕ ಲೋಕದ ಅಸಲಿ ಲೆಜೆಂಡ್ ಅವರು. ವಂದನೆಗಳು ತಮಗೆ.
ಆತ್ಮೀಯವಾದ,ಸಹಜ,ನೇರ ಹೃದಯದ ಮಾತುಗಳಿಂದ ಮಾಸ್ತರನ್ನು ಅಖಂಡವಾಗಿ ಹಿಡಿಯುವ ನಿಮ್ಮ ಈ ಪ್ರಯತ್ನ ಶ್ಲಾಘನೀಯ ಮಮತ.ವ್ಯಕ್ತಿ ಸಮಾಜದ ಶಕ್ತಿಯಾದ ಜೀವಂತ ಚೈತನ್ಯ ಚಿಲುಮೆ ಬರಗೂರು ಮಾಸ್ತರು.ಅವರ ಹೆಸರು ಕೇಳಿದರೆ ಸಾಕು ಮನಸ್ಸಿಗೆ ಬರುವ ಮೊದಲ ಮಾತು ‘ಕನ್ನಡಪ್ರಜ್ಞೆ’ ಎಂಬುದು..ನಮ್ಮ ನಡುವಿನ ಸಾಂಸ್ಕೃತಿಕ ಪ್ರಜ್ಞೆ ಅವರು.ವಾಸ್ತವದ ಘಟನೆಗಳಿಗೆ ಅವರು ಸ್ಪಂದಿಸುವ ರೀತಿಯೇ ಅವರ ಸಾಮಾಜಿಕ ಕಳಕಳಿಯನ್ನು ತೋರಿ,ನಮಗೂ ಮಾರ್ಗದರ್ಶನ ನೀಡುತ್ತದೆ. ಲೇಖನ ಮನದಾಳ ಮಾತುಗಳ ಹೆಕ್ಕಿ ಪೋಣಿಸಿದಂತಿದೆ. ಖುಷಿಯಾಯಿತು ಓದಿ.