ಮಕ್ಕಳ ಕಥೆ
ಅವಲಕ್ಕಿ ಪವಲಕ್ಕಿ
ಗಿರೀಶ ಜಕಾಪುರೆ
–
ಅವಲಕ್ಕಿ ಪವಲಕ್ಕಿ
ಕಾಂಚಣ, ಮಿಣಮಿಣ
ಡಾಮ್ ಡೂಮ್ ಟಸ್ ಪುಸ್ಸ
ಕೋಯ್ ಕೊಟಾರ್
ಅವಲಕ್ಕಿ ಪವಲಕ್ಕಿ
‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ.
‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು.
ಚಿಂಟೂಗೆ ಅವಲಕ್ಕಿ ಅಂದರೆ ತುಂಬ ಇಷ್ಟ. ಬೇರೆ ಯಾವ ತಿಂಡಿಯೂ ಅವನಿಗೆ ಸೇರಲ್ಲ, ಅವಲಕ್ಕಿ ಇದ್ದರೆ ಅವನು ಬೇರೇನೂ ಬೇಡಲ್ಲ. ಈಗ ಸಿರಿ ಮೇಡಂ ಅವಲಕ್ಕಿ ಹಾಡು ಹೇಳಿಸಿದ್ದೂ ಅವನಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.
ಮೂರನೇ ಕ್ಲಾಸಿನ ಮಕ್ಕಳಿಗೆ ಅವರ ಕ್ಲಾಸ್‌ಟೀಚರ್ ಶ್ರೀದೇವಿ ಮೇಡಂ ಅವರು ವಾರ್ಷಿಕ ಸ್ನೇಹಸಮ್ಮೇಳನಕ್ಕಾಗಿ ಅವಲಕ್ಕಿ ಪವಲಕ್ಕಿ ಹಾಡಿನ ಪ್ರದರ್ಶನಕ್ಕೆಂದು ಮಕ್ಕಳಿಂದ ಅಂತಿಮ ರಿಹರ್ಸಲ್ ಮಾಡಿಸಿಕೊಳ್ಳುತ್ತಿದ್ದರು. ಊಟದ ಬಿಡುವಿತ್ತು. ಮಕ್ಕಳು ತಮ್ಮ ತಮ್ಮ ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತ ಮಾತಾಡುತ್ತಿದ್ದರು. ಚಿಂಟೂನ ಅಮ್ಮ ಅವನ ಫೆವ್ಹರಿಟ್ ಅವಲಕ್ಕಿ ಕೊಟ್ಟಿದ್ದರು. ರಮಿ ಮಾತ್ರ ಶಾಲೆಯ ಬಿಸಿಯೂಟದ ಅನ್ನ ತಿನ್ನುತ್ತಿದ್ದ. ಚಿಂಟೂ ಅವನಿಗೂ ಸ್ವಲ್ಪ ಅವಲಕ್ಕಿ ಕೊಟ್ಟು, ಅವನಿಂದ ತಾನೂ ಸ್ವಲ್ಪ ಅನ್ನ ಪಡೆದಿದ್ದ.
‘ಯಾಕೋ ರಮಿ, ಸಪ್ಪಗಿದ್ದೀಯಾ?’ ಚಿಂಟೂ ಕೇಳಿದ.
‘ನಾಳೆಯೇ ಗ್ಯಾದರಿಂಗ್ ಅಲ್ವಾ?’
‘ಹೌದು, ಅದಕ್ಕೇನಾಯ್ತು?’
‘ಸಿರಿ ಮೇಡಂ, ಗ್ಯಾದರಿಂಗ್ ಫೀಸ್ ಕೊಡಲು ಹೇಳಿದ್ರು. ನನ್ನಪ್ಪ ಇನ್ನೂ ಫೀಸ್ ಕಟ್ಟಿಲ್ಲ. ಫೀಸ್ ಕಟ್ಟದಿದ್ದರೆ ಗ್ಯಾದರಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಅಂತ ಹೇಳಿದ್ದಾರೆ’ ಎಂದ. ಮುಖ ಇನ್ನಷ್ಟು ಚಿಕ್ಕದಾಗಿತ್ತು.
‘ಹೌದಲ್ವ? ಮತ್ತೆ, ಈಗ ಏನು ಮಾಡೋದು?’ ಚಿಂಟೂ ಕೇಳಿದ.
‘ಅದೇ ತಿಳೀತಿಲ್ಲ, ಇವತ್ತು ಹೋಗಿ ಅಪ್ಪನಿಗೆ ಮತ್ತೆ ಫೀಸ್ ಕಟ್ಟಲು ಹೇಳುವೆ’ ಎಂದ. ಆಶಾಕಿರಣ ಮೂಡಿತು.
ಅವರು ತಿಂಡಿ ಮುಗಿಸಿ ಕೈತೊಳೆಯುವ ಹೊತ್ತಿಗೆ ಬೆಲ್ ಆಯ್ತು.
ಕ್ಲಾಸ್‌ನಲ್ಲಿ ಸಿರಿ ಟೀಚರ್ ‘ನೋಡಿ ಮಕ್ಕಳೆ, ನಾಳೆ ಎಲ್ಲರೂ ಸಾಯಂಕಾಲ ಗ್ಯಾದರಿಂಗ್ ಸಿದ್ಧತೆಯೊಂದಿಗೆ ಬರಬೇಕು, ನಿಮ್ಮ ತಂದೆ-ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರನ್ನೂ ಕರೆತರಬೇಕು. ನೀವು ಹಾಡೋದು, ಡಾನ್ಸ್ ಮಾಡೋದು ಅವರು ನೋಡಬೇಕು ತಾನೆ? ಸಂಜೆಯ ಟಿಫನ್ ತರೋದು ಮರೀಬಾರದು’ ಎಂದು ಸೂಚಿಸಿದರು.
ಮಕ್ಕಳೆಲ್ಲ ‘ಹೋ.. ಎಸ್ ಟೀಚರ್..’ ಎಂದರು ಹಿಗ್ಗಿನಿಂದ. ರಮಿಯ ದನಿ ಮಾತ್ರ ಕೇಳಿಸಲಿಲ್ಲ.
ಟೀಚರ್ ಮುಂದುವರಿದು ‘ಫೀಸ್ ಕೊಟ್ಟವರಿಗೆಲ್ಲ ಡಾನ್ಸ್ ಯುನಿಫಾರಂ ಕೊಡುತ್ತೇವೆ. ನಿಮ್ಮ ಕ್ಲಾಸ್‌ನಲ್ಲೇ ನೀವು ರೆಡಿ ಆಗಬೇಕು, ಹಾಂ, ಇನ್ನೊಂದು ಮಾತು ಫೀಸ್ ಕೊಡದಿರೋರಿಗೆ ಚಾನ್ಸ್ ಇಲ್ಲ, ತಿಳೀತಾ?’ ಎಂದರು.
ಮತ್ತೆ ಮಕ್ಕಳು ಕೇಕೇ ಹಾಕಿದರು. ರಮಿಯ ಕಣ್ಣು ತುಂಬಿ ಬಂದಿದ್ದವು.
ಶಾಲೆ ಬಿಟ್ಟು ಮರಳಿದ ಕೂಡಲೇ ಚಿಂಟೂ ತಾಯಿಯ ಬಳಿಗೆ ಹೋಗಿ ‘ಅಮ್ಮ, ಇವತ್ತು ನೀನು ಕೊಟ್ಟಿದ್ದ ಅವಲಕ್ಕಿ ತುಂಬಾ ಸಕತ್ತಾಗಿತ್ತು. ಚೂರೂ ಬಿಡದೇ ತಿಂದುಬಿಟ್ಟೆ, ಅಷ್ಟೇ ಅಲ್ಲ ರಮಿಗೂ ಸ್ವಲ್ಪ ಕೊಟ್ಟೆ. ನನ್ನಂತೆ ಅವನಿಗೂ ಅವಲಕ್ಕಿ ತುಂಬಾ ಇಷ್ಟ’ ಎಂದ.
ರಮಿ ವಿಷಯ ಬಂದ ಕೂಡಲೇ ಅವನ ದನಿಯಲ್ಲಿನ ಉತ್ಸಾಹ ಕಡಿಮೆಯಾಗಿತ್ತು, ಅವನ ಕಣ್ಣಲ್ಲಿನ ನೀರು ನೆನಪಾಗಿ ಪಾಪ ಅನಿಸಿತು.
‘ಹೌದಾ, ಗುಡ್, ಜಾಣ ನೀನು. ದಿನಾಲೂ ಟಿಫನ್ ಬಾಕ್ಸ್ ಖಾಲಿ ಮಾಡಬೇಕು, ಚೆನ್ನಾಗಿ ತಿಂಡಿ ತಿನ್ನಬೇಕು, ಆಗ ನೀನು ಸ್ಟ್ರಾಂಗ್ ಆಗೋದು’ ಎಂದಳು ಅಮ್ಮ.
ಚಿಂಟೂ ‘ಹಾಗಿದ್ದರೆ ನೀನು ದಿನಾಲೂ ನನಗೆ ಅವಲಕ್ಕಿ ಕೊಡು. ಒಂದಲ್ಲ ಎರಡು ಬಾಕ್ಸ್ ಕೊಡು, ಎಲ್ಲ ಖಾಲಿ ಮಾಡುವೆ’ ಎಂದ.
‘ಹಾಗಲ್ಲ ಮರಿ, ಇಷ್ಟ ಎಂದು ಒಂದೇ ಪದಾರ್ಥ ಹೆಚ್ಚು ತಿನ್ನಬಾರದು, ಹೊಟ್ಟೆ ಕೆಟ್ಟುಹೋಗುತ್ತದೆ, ಹೊಟ್ಟೆ ನೋವು ಪ್ರಾರಂಭ ಆದರೆ ನಿನಗೆ ಓದ್ಲಿಕ್ಕೂ ಆಗಲ್ಲ, ಬರೀಲಿಕ್ಕೂ ಆಗಲ್ಲ, ಡಾನ್ಸ್ ಮಾಡ್ಲಿಕ್ಕೂ ಆಗಲ್ಲ..’ ಎಂದರು.
‘ಇಲ್ಲಮ್ಮ, ಏನೂ ಆಗಲ್ಲ, ನೀನು ಸುಮ್ಮನೆ ಹೇಳ್ತಿಯಾ. ನಾಳೆ ನೋಡು ನಾನು ಹೊಸ ಬಟ್ಟೆ ತೊಡ್ಕೊಂಡು ಹೇಗೆ ಡಾನ್ಸ್ ಮಾಡ್ತೀನಿ ಅಂತ. ಆದರೆ, ಪಾಪ ರಮಿ’
‘ಏನಾಯ್ತು ಅವನಿಗೆ?’
‘ಅಮ್ಮ, ಅವರು ಬಹಳ ಬಡವರು. ಅವನಪ್ಪ ಇನ್ನೂ ಗ್ಯಾದರಿಂಗ್ ಫೀಸ್ ಕಟ್ಟಿಲ್ಲ. ಸಿರಿ ಟೀಚರ್ ಫೀಸ್ ಕಟ್ಟಿಲ್ಲ ಅಂದ್ರೆ ಡಾನ್ಸಿಗೆ ಚಾನ್ಸ್ ಇಲ್ಲ ಅಂದ್ರು. ಗೊತ್ತಾ ಅಮ್ಮ, ಅವನಿಗೂ ನನ್ನಂತೆ ಅಲವಕ್ಕಿ ಅಂದರೆ ತುಂಬ ಇಷ್ಟ. ಆದರೆ ಅವನಮ್ಮ ಅವನಿಗೆ ಟಿಫನ್ ಬಾಕ್ಸ್ ಕೊಡಲ್ಲ. ಅವ ಶಾಲೆಯಲ್ಲಿ ಬಿಸಿಯೂಟ ತಿಂತಾನೆ..’ ಎಂದ ಉದಾಸೀನತೆಯಿಂದ.
‘ಹೌದಾ? ಪಾಪ. ಇರಲಿ, ಈಗ ನೀನು ಓದ್ತಾ ಕೂತ್ಕೋ, ನಾನು ಅಡುಗೆ ಮಾಡಬೇಕು’ ಎನ್ನುತ್ತ ಅಮ್ಮ ಒಳಕ್ಕೆ ಹೋದರು. ಅವರ ಹಿಂದೆಯೇ ಚಿಂಟೂ ‘ಅಮ್ಮ, ಪ್ಲೀಸ್ ಅವಲಕ್ಕಿ ಮಾಡು’ ಎಂದ. ಅವನ ದ್ವನಿಯೂ ಅಡುಗೆ ಮನೆ ಸೇರಿತು. ‘ಇಲ್ಲ, ಪಾಪು, ಅವಲಕ್ಕಿ ಬೇಡ, ಪಪ್ಪಾ ಬಂದ್ಮೇಲೆ ಊಟ ಮಾಡುವಿಯಂತೆ’ ಎಂದಳು ಅಮ್ಮ ಒಳಗಿನಿಂದ.
ಚಿಂಟೂನ ತಂದೆ ಬಂದ ಮೇಲೆ ಊಟ ಮಾಡುವಾಗ ಆತ ‘ಪಪ್ಪಾ, ನಾಳೆ ಗ್ಯಾದರಿಂಗ್ ಇದೆ. ನೀವು ಬರಬೇಕೆಂದು ಸಿರಿ ಟೀಚರ್ ಹೇಳಿದ್ದಾರೆ’ ಎಂದ. ‘ಓಹ್, ಹೌದಾ, ನಾಳೆ ಡಾನ್ಸ್ ಮಾಡ್ತಿಯಾ? ಯಾವ ಹಾಡಿಗೆ?’ ಎಂದು ತಂದೆ ಕೇಳಿದರು. ಚಿಂಟೂ ಅವನ ಫೆವ್ಹರಿಟ್ ‘ಅವಲಕ್ಕಿ ಪವಲಕ್ಕಿ..’ ಹಾಡು ಶುರು ಮಾಡಿದ. ಹಾಡುತ್ತ ‘ಪಪ್ಪಾ, ರಮಿ ನನಗಿಂತ ಚೆಂದ ಡಾನ್ಸ್ ಮಾಡ್ತಾನೆ, ಬಹಳ ಚೆಂದ ಹಾಡ್ತಾನೆ. ಆದರೆ ಪಾಪ..’ ಎಂದ.
ಅಷ್ಟರಲ್ಲಿ ಅವನಮ್ಮ ‘ಈಗ ಹಾಡಿದ್ದು ಸಾಕು, ಊಟ ಮಾಡು’ ಎಂದು ಗದರಿಸಿದರು. ಚಿಂಟೂ ‘ಅಮ್ಮ, ಮರೆತೇ ಹೋಗಿತ್ತು ನೋಡು, ನಾಳೆ ಸಾಯಂಕಾಲದ ತಿಂಡಿಗೆ ಟಿಫನ್ ತರಬೇಕು ಅಂತ ಟೀಚರ್ ಹೇಳಿದಾರೆ, ಅವಲಕ್ಕಿ ಮಾಡು..’ ಎಂದ. ‘ಮತ್ತೆ ಶುರು ಮಾಡಿದಿಯಾ, ಒಂದು ಕೊಡ್ತೀನಿ ನೋಡು ಈಗ’ ಎಂದು ಅಮ್ಮ ಸ್ವಲ್ಪ ಸಿಟ್ಟಾದರು. ಚಿಂಟೂ ಸುಮ್ಮನೆ ಊಟ ಮಾಡಿ ಎದ್ದ.
ಮಲಗಿದರೆ ನಿದ್ರೆ ಬರುತ್ತಿಲ್ಲ. ಪದೇ ಪದೇ ಸಿರಿ ಟೀಚರ್ ಮಾತು ನೆನಪಾಗ್ತಿವೆ, ಮತ್ತೆ ಮತ್ತೆ ರಮಿಯ ಕಣ್ಣೀರೂ ಕೂಡ ಕಣ್ಮುಂದೆ ಬರುತ್ತಿವೆ. ಪಾಪ, ರಮಿ..! ನಾಳೆ ಅವನು ಡಾನ್ಸ್ ಮಾಡುವಂತಿಲ್ಲ, ಅವನಿಗೆ ಹೊಸ ಯುನಿಫಾರಂ ಇಲ್ಲ..!
ಮರುದಿನ, ಚಿಂಟೂ ತನ್ನ ತಂದೆ ತಾಯಿಯೊಂದಿಗೆ ಗ್ಯಾದರಿಂಗ್ ಶುರುವಾಗುವದಕ್ಕೂ ಅರ್ಧ ಗಂಟೆ ಮೊದಲು ಶಾಲೆ ತಲುಪಿದ. ಭರ್ಜರಿ ವೇದಿಕೆ ಸಿದ್ಧವಾಗಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಡ್ರೆಸ್ ಮಾಡಿಕೊಂಡು ಸಿದ್ಧರಾಗುತ್ತಿದ್ದರು. ಇವರು ಬಂದಿದ್ದನ್ನು ಗಮನಿಸಿದ ಸಿರಿ ಟೀಚರ್ ಬಳಿಬಂದು ‘ಬೇಗ ಬಾ ಚಿಂಟೂ, ನೀನು ರೆಡಿಯಾಗಬೇಕು. ಪ್ಯಾರೆಂಟ್ಸ್ ನೀವು ಹೋಗಿ ಹಾಲ್‌ನಲ್ಲಿ ಕುಳಿತುಕೊಳ್ಳಿ’ ಎಂದು ಅವರು ಚಿಂಟೂನನ್ನು ಕರೆದುಕೊಂಡು ಹೋದರು. ಅಪ್ಪ-ಅಮ್ಮಳತ್ತ ಕೈಬೀಸಿ ಚಿಂಟೂ ಡ್ರೆಸಿಂಗ್ ರೂಂನೊಳಗೆ ಹೋದ. ಅವನ ಕಣ್ಣುಗಳು ರಮಿಯನ್ನು ಹುಡುಕುತ್ತಿದ್ದವು. ಎಲ್ಲರೂ ಬಂದಿದ್ದರು. ಆದರೆ ರಮಿ ಮಾತ್ರ ಕಾಣಲಿಲ್ಲ. ಚಿಂಟೂ ಅಲ್ಲಿಂದ ಹೊರಬಂದು ಶಾಲೆಯ ಆವರಣದಲ್ಲೆಲ್ಲ ಹುಡುಕಿದ. ರಮಿ ಎಲ್ಲೂ ಇರಲಿಲ್ಲ. ಮರಳಿ ಡ್ರೆಸಿಂಗ್ ರೂಂಗೆ ಹೊರಟ.
ವಾಟರ್ ಟ್ಯಾಂಕ್ ಹಿಂಬದಿಯಲ್ಲಿ ಯಾರೋ ಬ್ಯಾಗ್‌ಗೆ ತಲೆಯಿಟ್ಟು ಕುಳಿತಂತೆ ಅನಿಸಿತು. ಹೋಗಿ ನೋಡಿದ.
‘ಅರೆ, ರಮಿ, ಇಲ್ಯಾಕೆ ಕುಳಿತಿರುವೆ? ಬಾ ಒಳಗೆ’
‘ಬೇಡ ಚಿಂಟೂ, ನನಗೆ ಹೊಟ್ಟೆ ನೋಯ್ತಿದೆ’
‘ಸುಮ್ಮನೆ ಏನೇನೋ ಹೇಳಬೇಡ, ನಡೀ’
‘ಇಲ್ಲ, ನಿಜಕ್ಕೂ ಹೊಟ್ಟೆ…’ ಎಂದ. ಅವನ ಕಣ್ಣು ತುಂಬಿದ್ದವು.
ಚಿಂಟೂ ಅವನ ಕೈಹಿಡಿದುಕೊಂಡು ಒತ್ತಾಯದಿಂದ ಡ್ರೆಸಿಂಗ್ ರೂಂನೊಳಗೆ ಕರೆದುಕೊಂಡು ಹೋದ. ಎದುರಿಗೆ ಸಿರಿ ಟೀಚರ್ ನಿಂತಿದ್ದರು. ರಮಿಯ ಕಣ್ಣುಗಳು ನೆಲವನ್ನೇ ನೋಡುತ್ತಿದ್ದವು. ಚಿಂಟೂ ‘ಟೀಚರ್, ಟೀಚರ್, ನನಗೆ ಹೊಟ್ಟೆ ನೋವಾಗ್ತಿದೆ. ಬಹಳಷ್ಟು ಅವಲಕ್ಕಿ ತಿಂದಿದ್ದೆ. ಈ ನೋವಲ್ಲಿ ನನಗೆ ಡಾನ್ಸ್ ಮಾಡೋಕೆ ಆಗಲ್ಲ. ನೀವು ನನ್ನ ಯುನಿಫಾರಂ ರಮಿಗೆ ಕೊಡಿ. ಅವನು ಡಾನ್ಸ್ ಮಾಡಲಿ. ನಾನು ಮುಂದೆ ಕೂತು ನೋಡ್ತೆನೆ’ ಎಂದ. ಟೀಚರ್‌ಗೆ ಏನೋ ವಿಷಯ ಇದೆ ಎಂಬುದು ಅರ್ಥ ಆಯ್ತು. ‘ಏನಾಯ್ತು ಚಿಂಟೂ, ನಿಜಕ್ಕೂ ಹೊಟ್ಟೆ ನೋವಾ?’ ಎಂದು ಕೇಳಿದರು. ರಮಿಯ ಕಣ್ಣಲ್ಲೂ, ಚಿಂಟೂನ ಕಣ್ಣಲ್ಲೂ ನೀರೂರಿದ್ದವು.
‘ಇಲ್ನೋಡು, ರಮಿಯ ತಂದೆ ಫೀಸ್ ಕೊಡದಿದ್ದರೂ ಪರವಾಗಿಲ್ಲ. ಅವನಿಗಾಗಿಯೂ ನಾನು ಯುನಿಫಾರಂ ತಂದಿದ್ದೇನೆ. ಅವನೂ ತೊಟ್ಟುಕೊಂಡು ರೆಡಿಯಾಗಲಿ, ನೀನು ರೆಡಿಯಾಗು. ಬನ್ನಿ ಬೇಗ, ಬೇಗ’ ಎನ್ನುತ್ತ ಇಬ್ಬರನ್ನೂ ಸೆಳೆದು ಅಪ್ಪಿಕೊಂಡರು. ಮೂವರ ಕಣ್ಣು ತುಂಬಿದ್ದರೂ ತುಟಿಗಳಲ್ಲಿ ನಗು ಅರಳಿತ್ತು.
ವೇದಿಕೆ ಕಾರ್ಯಕ್ರಮ ಪ್ರಾರಂಭವಾಯ್ತು. ಒಂದೊAದಾಗಿ ಪ್ರದರ್ಶನ ಜರುಗಿದವು. ಮೂರನೇ ಕ್ಲಾಸಿನ ಸರದಿ ಬಂತು. ಮಕ್ಕಳೆಲ್ಲ ವೇದಿಕೆಗೆ ಬಂದರು. ಹಾಡಿನ ಯುನಿಫಾರಂನಲ್ಲಿ ಮಕ್ಕಳು ತುಂಬ ಮುದ್ದಾಗಿ ಕಾಣುತ್ತಿದ್ದರು. ಹಾಡು ಶುರುವಾಯ್ತು.
ಅವಲಕ್ಕಿ ಪಲವಲಕ್ಕಿ
ಕಾಂಚಣ, ಮಿಣಮಿಣ
ಡಾಮ್ ಡೂಮ್ ಟಸ್ ಪುಸ್
ಕೋಯ್ ಕೊಟಾರ್
ಅವಲಕ್ಕಿ ಪವಲಕ್ಕಿ
ಮಕ್ಕಳು ಬಲು ಉತ್ಸಾಹದಿಂದ ಕುಣಿದರು. ರಮಿ ಎಲ್ಲರಿಗಿಂತ ಚೆಂದ ಕುಣಿದ. ಅವನಿಗಿಂತ ಚೆಂದ ಎನ್ನುವಂತೆ ಚಿಂಟೂ ಕುಣಿದ. ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಕುಣಿತ ಕಂಡು ಸಿರಿ ಟೀಚರ್‌ಗೂ ಆನಂದ. ಹಾಡು ಮುಗಿದ ಕೂಡಲೇ ಎಲ್ಲರೂ ವೇದಿಕೆಯಿಂದ ನಿರ್ಗಮಿಸಿದರು. ರಮಿ ಬಹಳ ಹಿಗ್ಗಿನಲ್ಲಿದ್ದ. ಅಷ್ಟರಲ್ಲಿ ಅವನಿಗೆ ತಾನು ಮನೆಯಿಂದ ಬರುವಾಗ ಅಮ್ಮ ಕೊಟ್ಟಿದ್ದ ಟಿಫನ್ ಬಾಕ್ಸ್ ನೆನಪಾಯ್ತು. ‘ಏಯ್ ಚಿಂಟೂ, ಬಾ ಇಲ್ಲಿ. ಇವತ್ತು ನನ್ನಮ್ಮ ಟಿಫನ್ ಕಟ್ಟಿದ್ದಾಳೆ, ಬಾ ತಿನ್ನೋಣ’ ಎನ್ನುತ್ತ ಕೂಗಿದ. ಕೂಡಲೇ ಚಿಂಟೂ ಅವನ ಬಳಿ ಬಂದ. ಟಿಫನ್ ತೆರೆದು ನೋಡಿದರೆ ಅದರಲ್ಲಿಯೂ ‘ಅವಲಕ್ಕಿ..’..ಓಹ್…!!
ಮತ್ತೆ ಶುರುವಾಯ್ತು…
ಅವಲಕ್ಕಿ, ಪವಲಕ್ಕಿ
ಕಾಂಚಣ, ಮಿಣಮಿಣ
ಡಾಮ್ ಡೂಮ್ ಟಸ್ ಪುಸ್
ತುಂಬಾ ಚೆನ್ನಾಗಿದೆ!!