ಮಾತಿನಲ್ಲಿಯೇ ಇದೆ ಎಲ್ಲವೂ…

ಲೇಖನ

ಮಾತಿನಲ್ಲಿಯೇ ಇದೆ ಎಲ್ಲವೂ...

ಪೂಜಾ ನಾಯಕ್

Kindness, Chalk, Handwritten, Word

ನುಡಿದರೆ ಮುತ್ತಿನ ಹಾರದಂತಿರಬೇಕು|

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು|

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು|

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು|

ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ ?

ಇತ್ತೀಚಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಮ್ಮೆಲೇ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಬಸವಣ್ಣನವರ ವಚನದ ಈ ಸಾಲುಗಳು ಥಟ್ಟನೆ ನೆನಪಾಯಿತು. ನೆನಪಾಗುವುದರ ಹಿಂದೆ ಒಂದು ಘಟನೆಯಿದೆ.

             ಅಂದು ಐದರ ಇಳಿ ಸಂಜೆಯ ಹೊತ್ತು. ನಾನು ಮತ್ತು ನನ್ನ ಗೆಳತಿ, ರಸಾಯನಶಾಸ್ತ್ರ ವಿಷಯದ ಪ್ರಾಯೋಗಿಕ ತರಗತಿಗಳನೆಲ್ಲ ಮುಗಿಸಿ, ನಮ್ಮ ಕಾಲೇಜಿನಿಂದ ತುಸುದೂರ ಇರುವ ಬಸ್ಸ್ಟಾಂಡಿಗೆ ನಡೆದು ಬಂದು, ಬಸ್ ಹತ್ತಿ , ಆವತ್ತಿನ ಕಾಲೇಜಿನ ದಿನಚರಿಯನ್ನು ಮೆಲುಕು ಹಾಕುತ್ತಾ ಕುಳಿತಿದ್ದೆವು. ಇನ್ನೇನು, ಬಸ್ ಹೊರಡಲು ಕೆಲವೇ ಕೆಲವು ನಿಮಿಷಗಳು ಬಾಕಿ ಇದೆ ಎನ್ನುವಾಗ, ಬಿಳಿ ಬಣ್ಣದ ಉಡುಪು ತೊಟ್ಟ, ಬೆಳ್ಳನೆಯ ಕೂದಲು, ಸುಕ್ಕುಗಟ್ಟಿದ ಮೈ (ಚರ್ಮ), ಚಪ್ಪಲಿ ರಹಿತ ಪಾದಗಳು, ಒಂದು ಕೈಯಲ್ಲಿ ಊರುಗೋಲು, ಇನ್ನೊಂದು ಕೈಯಲ್ಲಿ ಚೀಲ ಹಿಡಿದು ಒಬ್ಬ ಮುದುಕರು ಇತ್ತ ನಾವು ಕುಳಿತ ಬಸ್ಸಿನೆಡೆಗೆ ನಡೆದು ಬರುತ್ತಿದ್ದಾರೆ. ಆ ಮುದುಕರ ಸಣಕಲು ಜೀವವೇ ಸಾರಿ – ಸಾರಿ ಹೇಳುವಂತಿತ್ತು,

“ಇವರು ಜೋರಾಗಿ ಗಾಳಿ ಬಂದರೆ ತೂರಿ ಹೋಗುವರು” ಎಂದು. ಅವರನ್ನು ನೋಡಿದ ಯಾರಿಗಾದರೂ ಸರಿಯೇ, ಒಂದು ಕ್ಷಣ ಹಾಗೆ ಅನಿಸದೇ ಇರಲಿಕ್ಕಿಲ್ಲ.ಅವರಿಗಾಗಲೇ ಬಹಳ ವಯಸ್ಸಾಗಿದ್ದಿರಬೇಕು. ಅವರು ನಡೆಯಬೇಕಾದರೆ ಯಾರಾದರೂ ಕೈ ಹಿಡಿದುಕೊಳ್ಳಬೇಕಿತ್ತು ಇಲ್ಲವೇ ಊರುಗೋಲು, ಎರಡರಲ್ಲಿ ಒಂದು ಬೇಕೇ ಬೇಕು . ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಕಿವಿಯೂ ಅಷ್ಟಕ್ಕಷ್ಟೇ. ಸುಮಾರು ನನ್ನ ಪ್ರಕಾರ ಎಂಭತ್ತರ ಮುದಿ ಜೀವದ ಅವರು ಹೇಗೋ ಅಲ್ಲಿ ಇಲ್ಲಿ ಹಿಡಿದುಕೊಂಡು ಹರಸಾಹಸಮಾಡಿ ಬಸ್ ಹತ್ತಿದವರೆ, ಮುಂಭಾಗದಲ್ಲಿನ ಖಾಲಿ ಸೀಟ್(ಆಸನ) ನಲ್ಲಿ ಚೀಲವನ್ನಿರಿಸಿಕೊಂಡು ಕುಳಿತುಕೊಂಡರು. ಇವರು ಈ ವಯಸ್ಸಿನಲ್ಲಿ, ಎಲ್ಲಿಗೆ ಹೋಗುತ್ತಿದ್ದಾರಪ್ಪಾ ಎಂದು ನನಗೆ ಅಚ್ಚರಿಯಾಯಿತು. ಆ ಮುದುಕರು ಕುಳಿತುಕೊಂಡ  ಎರಡೇ ಎರಡು ನಿಮಿಷಕ್ಕೆ, ಬಸ್ಸಿನ ಹಿಂಬಾಗಿಲಿನ ಕಡೆಯಿಂದ ಮಹಿಳಾ ನಿರ್ವಾಹಕಿ (ಕಂಡೆಕ್ಟರ್) ಟಿಕೆಟ್ ಟಿಕೆಟ್ ಎನ್ನುತ್ತಾ ಬರಹತ್ತಿದಳು. ಟಿಕೆಟು ಕೊಡುತ್ತಾ ಬರುತ್ತಿದ್ದ ಅವಳ ಕಣ್ಣ ದೃಷ್ಟಿ ಎಲ್ಲಿಯೂ ವಕ್ರೀಭವನವಾಗದೆ ನೇರವಾಗಿ ಮುಂಭಾಗದ ಆಸನದಲ್ಲಿ ಕುಳಿತಿರುವ ಈ ಮುದುಕರ ಮೇಲೆ ಬಿತ್ತು. ಅವಳ ದೃಷ್ಟಿ ಬೇರೆಲ್ಲಿಯೂ ಬೀಳದೆ ಮುಖ್ಯವಾಗಿ ಇವರ ಮೇಲೆಯೇ ಬೀಳಲು ಕಾರಣ,

ಮುದುಕರು ಮಹಿಳಾ ಸೀಟ್ನಲ್ಲಿ ಕುಳಿತಿದ್ದಾರೆ!….

ಅವರನ್ನು ನೋಡಿದ್ದೆ ತಡ, ದರ-ದರನೆ ಬಿರುಗಾಳಿಯಂತೆ ಅವರತ್ತ  ಬಂದವಳೆ ಹೇಳಿದಳು…..

” ಏನಾಯ್ಯಾ, ಕಣ್ ಕಾಣ್ಸಂಗಿಲ್ಲೆನ್ ನಿನಗೆ? ಹಿಂದಕ್ಕ್ ಹೋಗ್ ಕುಂಡ್ರು” ಎಂದು.

ಅಬ್ಬಾ! ವಯಸ್ಸಿನಲ್ಲಿ ಅಷ್ಟು ಹಿರಿಯರಾದವರಿಗೆ ಈ ರೀತಿಯಾದ ಸಂಭೋದನೆಯೇ? ನಾನು ಮತ್ತು ನನ್ನ ಗೆಳತಿ ನಾಗಶ್ರೀ, ಆಕೆಯಾಡಿದ ಒಂದು ಮಾತಿಗೆ ಬೆಚ್ಚಿ ಬೆರಗಾಗಿ ಹೋದೆವು. ಈಕೆಯಾಡಿದ ಮಾತಿನಿಂದಾಗಿ ಆ ಮುದುಕರಿಗೆ ಅತೀವ ದುಃಖವೂ ಹಾಗೆಯೇ ಸ್ವಲ್ಪ ಮಟ್ಟಿಗೆ ಅವರ ಮೂಖದಲ್ಲಿ  ಭಯ ಆವರಿಸಿದಂತೆ ನನಗೆ ಕಂಡವು. ಆದರೆ ಅವರಿಗೆ ಈ ಮಹಿಳಾ ಕಂಡೆಕ್ಟರ್ ತನ್ನನ್ನು ಈ ರೀತಿ ಗದರಿಸಿಕೊಂಡು ಮಾತನಾಡಿದ್ದು ಯಾಕೆ ಎಂದು ತಿಳಿಯುವ ಕುತೂಹಲ  ಉಂಟಾಗಿ ಕೇಳಿದರು, “ತಾಯಿ, ನಿನ್ನ ಮಾತು ನನಗೆ ಆಶ್ಚರ್ಯ ತಂದಿದೆ. ಯಾಕೆಂದರೆ ನಾನೇನು ಅಂತಹ ತಪ್ಪು ಮಾಡಿದೆ? ಈ ರೀತಿ ಗುಡುಗುತ್ತಿರುವೆಯಲ್ಲ ಏನು ಕಾರಣ?” ಎಂದು. ಅದಕ್ಕೆ ಆಕೆ,

” ಮ್ಯಾಗ್ ಏನ್ ಬರ್ದಾರ್ ಅಂದ್ ನೋಡಿಯೇನ? ಮಹಿಳಾ ಸೀಟ್ನಲ್ಲಿ ಯಾಕ್ ಕುಂತಿ? ಎದ್ದು ಹಿಂದ್ ನಡಿ ” ಎಂದಳು.

ಆಗ ಮುದುಕರು ಹೇಳಿದರು,

” ನಾನು ಮೇಲೆ ಬರೆದಿರುವುದನ್ನು ನೋಡಿಲ್ಲ ಹಾಗೆಯೇ ನಾನು ಓದಲು ತಿಳಿದವನಲ್ಲ ತಾಯಿ ” ಎಂದು ಮೆಲ್ಲಗೆ ನುಡಿದರು. ಅದಕ್ಕೆ ಆಕೆ,

“ಈಗ ನಾನು ಓದಿ ಹೇಳಿದ್ನಲ್ಲ, ಎದ್ದೋಗು”. ಎಂದಳು. ಆಗ ಅವರು, ಸಣ್ಣ ಧ್ವನಿಯಲ್ಲಿ ಹೇಳಿದರು

“ಅಮ್ಮಾ, ನನಗೆ ಬೆನ್ನಿನ ಆಪರೇಷನ್ ಆಗಿದೆ. ಹಿಂದೆ ಕುಳಿತರೆ ಬಸ್ ಬ್ರೇಕ್ ಹಾಕಿದಾಗ, ಜಂಪ್ ಆದಾಗ ತೊಂದರೆ ಆಗುತ್ತೆ. ಹಾಗಾಗಿ ಮುಂಭಾಗದಲ್ಲಿ ನಾನು ಕುಳಿತಿರುವೆ” ಎಂದು. ಆ ವೃದ್ಧರು ಹೇಳುವ ರೀತಿ, ಅವರ ಸ್ಥಿತಿ ನೋಡಿದರೆ ಅಳು ಒತ್ತರಿಸಿ ಬರದ ಜನರಿರಲು ಸಾಧ್ಯವೇ ಇಲ್ಲ. ಆದರೂ ಆಕೆ ನಿಷ್ಕರುಣಿಯಂತೆ ನುಡಿದಳು,

“ಹೋಗಯ್ಯಾ, ಏನಾದ್ರು ಒಂದು ಕಾರಣ ಕೊಟ್ ಬುಟ್ರೆ ನಾನು ಸುಮ್ಕೆ ಬುಟ್ ಬುಡ್ತಿನಿ ಅಂದ್ಕೊಂಡಿದ್ಯಾ? ನಿನ್ ಅಂತವರ್ನ ಎಷ್ಟ್  ಜನರ್ ನೋಡಿಲ್ಲ, ಎದ್ದೋಗ್-ಎದ್ದೋಗ್. ನಿನ್ನ ಪುರಾಣ ಎಲ್ಲ ಕಡೆಗೆ. ನೀನ್ ಹಿಂದ್ ಬಂದು ಕುಳ್ಳೋವರೆಗೆ ನಾನ್ ಟಿಕೆಟ್ ಕೊಡಂಗಿಲ್ಲ” ಎಂದು ತ್ರಿವಿಕ್ರಮನಂತೆ ಛಲತೊಟ್ಟು, ಆತನನ್ನು ಹೇಗಾದರೂ ಮಾಡಿ ಹಿಂದೆ ಕುಳ್ಳಿಸಿಯೇ ತೀರುವೆ ಎಂದು ಪಟ್ಟು ಹಿಡಿದು ಅಲ್ಲಿಯೇ ಕಂಬ ಹಿಡಿದು ನಿಂತೇ ಬಿಟ್ಟಳು. ಆ ಮುದುಕರು,” ಈಕೆಯ ಬಳಿ ವಾದ ಮಾಡಿ ಕಂಠ ಶೋಷಣೆ ಮಾಡಿಕೊಳ್ಳುವುದಕ್ಕಿಂತ ಸುಮ್ಮನಾಗುವುದೇ ಲೇಸು” ಎಂದು ತಮ್ಮ ಪಾಡಿಗೆ ತಾವು ಕುಳಿತುಕೊಂಡರು. ಈಕೆಗೆ ಸಮಾಧಾನವೇ ಆಗಲಿಲ್ಲ ಯಾಕೆಂದರೆ ಅವರು ಇವಳ ಮಾತಿಗೆ ಸ್ಪಂದಿಸದೆ ಮೌನದ ಮೊರೆ ಹೋಗಿದ್ದಾರೆ ಎಂದು . ಮಹಾಭಾರತದಲ್ಲಿ, ದ್ರೌಪದಿಯು ಕೀಚಕನ ಉಪಟಳವನ್ನು ತಾಳಲಾರದೇ ತನ್ನ ಕಷ್ಟವನ್ನು, ತನಗೆ ಆದ ಅವಮಾನವನ್ನು ಹೇಳಿಕೊಳ್ಳಲು ಭೀಮನಲ್ಲಿ ಬಂದಾಗ ಆತ ಏನೂ ಮಾತನಾಡದೆ ಕೆಲಕಾಲ ಸುಮ್ಮನಿದ್ದ. ಆಗ ಆತನನ್ನು ಹೇಗೆ ಮೂದಲಿಸಿ ಮಾತಿಗೆ ಸ್ಪಂದಿಸುವಂತೆ ಮಾಡಿದ್ದಳೋ, ಇವಳು ಹಾಗೆಯೇ ಮುದುಕರನ್ನು ಕೆಣಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಸಿಟ್ಟನ್ನು ಬಡಿದೆಬ್ಬಿಸಿ ಮಾತಿಗೆ ಅಣಿಗೊಳಿಸಿದಳು. ಅವರಿಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಚಿತ್ರವಿಚಿತ್ರ ವಾದಗಳನ್ನು ಮಾಡಿ, ಬಸ್ಸಿನಲ್ಲಿ ದೊಡ್ಡ ಗಲಾಟೆ ಎಬ್ಬಿಸಿಬಿಟ್ಟಳು ನಿರ್ವಾಹಕಿ. ಇದನ್ನು ಕಂಡು ಗಾಬರಿಗೊಂಡ ಉಳಿದ ಕೆಲ ಬಸ್ ಸಿಬ್ಬಂದಿಗಳು, ಕೆಲ ಪ್ರಯಾಣಿಕರು, ಜಗಳವನ್ನು ನಿಲ್ಲಿಸಲು ಮುಂದೆ ಬಂದರು.

ಆತನಿಗೆ ಹಿಂದೆ ಹೋಗಿ ಕುಳಿತುಕೊ ಎಂದರೆ ಹೋಗುತ್ತಿಲ್ಲ. ಹಾಗೆಯೇ ನನಗೆ, ಬಾಯಿಗೆ ಬಂದ ಹಾಗೆ ಹೇಳುತ್ತಿದ್ದಾನೆ ಎಂದು ಮೊಂಡುವಾದವನ್ನು ಮಂಡಿಸಿ, ಆ ವೃದ್ಧರ ಮಾತುಗಳನ್ನೆಲ್ಲಾ ತಿರುಚಿ – ತಿರುಚಿ ಅವರಿಗೆ ಒಪ್ಪಿಸಿದಳು. ನಾನೇನು ಹೇಳಿಲ್ಲ ಸ್ವಾಮಿ ಆಕೆಗೆ. ನನ್ನ ಪರಿಸ್ಥಿತಿಯನ್ನು ಹೇಳಿದರೂ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ಹಿರಿಯರಲ್ಲಿ ಹೇಗೆ ಮಾತನಾಡಬೇಕೆಂಬ ಕನಿಷ್ಠ ಸೌಜನ್ಯತೆಯನ್ನು ಆಕೆ ಹೊಂದಿಲ್ಲ. ಇಲ್ಲಿ ಕುಳಿತ ಯಾರಿಗಾದರೂ ಕೇಳಿ ಸ್ವಾಮಿ ಬೇಕಾದರೆ ಆಕೆ ಎಷ್ಟು ಕೆಟ್ಟ- ಕೆಟ್ಟ ಮಾತನಾಡಿದ್ದಾಳೆ ನನಗೆ ಎಂದು ಮುದುಕರು ಗೋಗರೆದರು. ಅವರೆಲ್ಲ ಅವಳದೇ ತಪ್ಪಿದೆ ಎಂದು ತಿಳಿದಿದ್ದರೂ, ಅವಳ ಪರ ವಹಿಸಿ ಮಾತನಾಡಿದರು. ಅದ್ಯಾಕೆ ಅವಳ ಪರ ವಾದ ಮಾಡಿದರೋ ಏನೋ ನನಗೆ ಗೊತ್ತಿಲ್ಲ. ಅವಳು ಮಾತನಾಡುವ ಪರಿ ನೋಡಿ ಅವರಿಗೂ ಹೆದರಿಕೆ ಹುಟ್ಟಿತೋ ಏನೋ ಅಥವಾ ಈಕೆ ಬಸ್ಸಿನಲ್ಲಿ ದೊಡ್ಡ ರಂಪಾಟ ಮಾಡುವಳೆಂದು, ಇವಳದ್ದೆ ಸರಿ ಎಂದು ವಾದಿಸುವುದು ಒಳಿತು ಎಂದು ಹಾಗೆ ಮಾಡಿದರೋ ಏನೋ. ಆ ವೃದ್ಧರಿಗೆ, ನಿಮ್ಮದು ಪೂರ್ತಿ ತಪ್ಪಿದೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿ, ಅಷ್ಟೂ ಜನ ಸೇರಿ ಹಿಂದೆ ಹೋಗಿ ಕುಳಿತುಕೊಳ್ಳಲು ಆದೇಶ ಮಾಡಿದರು. ಅದಕ್ಕೆ ಮುದುಕರು ಹೇಳಿದರು

“ಸೌಜನ್ಯದಿಂದ ಒಂದೇ ಬಾರಿ ಹೇಳಿದರೆ ಸಾಕಾಗಿತ್ತು, ನೂರು ಬಾರಿ ಈ ರೀತಿ ಹೇಳುವುದಕ್ಕಿಂತ. ನನ್ನ ಕಷ್ಟ ಏನೇ ಇದ್ದರೂ ಸಹಿಸಿಕೊಂಡು ಹಿಂದೆ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ಈಕೆ ನನ್ನ ಮೇಲೆ ಇಷ್ಟು ಆರೋಪ ಮಾಡಿ, ಹಿರಿಯರ ಬಳಿ ಯಾವ ರೀತಿ ಮಾತನಾಡುವುದು ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಅಜ್ಞಾನಿಯಂತೆ ವರ್ತಿಸಿದ್ದಾಳೆ. ನೀವೆಲ್ಲರೂ ಸುಳ್ಳಿನ ಪರವಾಗಿ ಮಾತನಾಡಿದಿರಿ. ಇರಲಿ ಬಿಡಿ ನಾನೇ ಹಿಂದೆ ಹೋಗಿ ಕುಳಿತುಕೊಳ್ಳುವೆ ಎಂದು ಅತ್ತ ಕಡೆ ಸಾಗುತ್ತಾ ಒಳಗೊಳಗೆ ಹೀಗೆ ಗೊಣಗಿದರು “ಛೇ, ಸತ್ಯವೆಂಬುದು ನನ್ನನ್ನು ಸಂಕಷ್ಟದಿಂದ ಪಾರುಮಾಡಲು ಶಕ್ತವಾಗಲಿಲ್ಲ. ಸತ್ಯವೆಂಬುದು ನಿರರ್ಥಕ”. ನೊಂದ ಮುದುಕರ ಬಾಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಭ್ಯ , ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? ” ಸತ್ಯವೆಂಬುದು ನಿರರ್ಥಕವಾದದ್ದು”. ನಮಗೂ ಒಮ್ಮೊಮ್ಮೆ ಹೀಗೆ ಅನಿಸುತ್ತದಲ್ಲವೇ?ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!

ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ,  ಸುಳ್ಳಿನ ಘರ್ಜನೆಯಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದ ಮಾರ್ಗದ ಮೂಲಕ ಗೆಲುವನ್ನು, ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಸತ್ಯಕ್ಕೆ ಬೆಲೆಯೇ ಇಲ್ಲ ಎನ್ನಿಸಿ ಬಿಡುತ್ತದೆ. ಆದರೆ ಅದು ಸರಿ ಅಲ್ಲ. ಸುಳ್ಳು, ದೀಪಾವಳಿಯಲ್ಲಿ ಪುಟ್ಟ ಮಕ್ಕಳು ಹಚ್ಚುವ ಸುರ್-ಸುರ್ ಕಡ್ಡಿ (ನಕ್ಷತ್ರ ಕಡ್ಡಿ) ಇದ್ದ ಹಾಗೆ. ಅದು ನಾನಾ ರೀತಿಯ ಬಣ್ಣದ ಕಿರಣಗಳನ್ನು ಹೊರ ಸೂಸಿ ಕಣ್ಣು ಕುಕ್ಕಿಸುವಾಗ ತುಂಬಾ ಮನಮೋಹಕವಾಗಿ ಕಾಣಿಸುತ್ತದೆ. ಆದರೆ ಅದು ಕಣ್ಣು ರೆಪ್ಪೆ ಮಿಟುಕಿಸುವುದರ ಒಳಗಾಗಿ ಮಾಯವಾಗುತ್ತದೆ. ಕಡೆಗೆ ಮತ್ತದೇ ಅಂಧಕಾರ. ಸತ್ಯ, ದೇವರ ಮುಂದೆ ಹಚ್ಚಿದ ನಂದಾದೀಪವಿದ್ದಂತೆ. ಅದು ಕಣ್ಣು ಕುಕ್ಕಿಸುವುದಿಲ್ಲ, ಆದರೆ ಬಹಳ ಕಾಲ ಜೀವಿಸುವಂಥದ್ದು, ನೆಮ್ಮದಿ ನೀಡುವಂಥದ್ದು. ಹಾಗೆಯೇ ಇನ್ನೊಂದು ಬಹು ಮುಖ್ಯವಾದುದೆಂದರೆ ನಾವು ಇನ್ನೊಬ್ಬರಲ್ಲಿ ಮಾತನಾಡುವ ರೀತಿ ಮತ್ತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಿಕೆ. ಅದಕ್ಕಾಗಿ ಬಹು ದೊಡ್ಡ ತ್ಯಾಗ ಮಾಡುವುದೇನು ಬೇಕಿಲ್ಲ. ನಮ್ಮ ಒಂದಿಷ್ಟು ಗೌರವಯುತ ಸವಿಮಾತು, ಸಹಕಾರ ಸಾಕು ಪಡೆದವರ, ನೀಡಿದವರ ಬದುಕಿಗೆ ಕ್ಷಣಕಾಲದ ಕೃತಾರ್ಥತೆ ಮತ್ತು ಖುಷಿಯನ್ನು ನೀಡುವುದಕ್ಕೆ. ಇದೇ ಅಲ್ಲವೇ ನಮಗೆ ಬೇಕಾದದ್ದು ಕೂಡ? ಬೇಕಾದದ್ದನ್ನು ಪಡೆಯಲು ಎಲ್ಲೆಲ್ಲೋ ಹುಡುಕುತ್ತಾ ಹೋಗಬೇಕೆಂದೇನಿಲ್ಲ.         ಮಾತಿನಲ್ಲಿಯೇ ಇದೆ ಎಲ್ಲವೂ……

***********************************

2 thoughts on “ಮಾತಿನಲ್ಲಿಯೇ ಇದೆ ಎಲ್ಲವೂ…

  1. ನಿಮ್ಮ‌‌‌ ಲೇಖನಾ ತುಂಬಾ ಚೆನ್ನಾಗಿದೆ ಮೇಡಂ….
    ಲೇಖನದ ಕೊನೆಯಲ್ಲಿ ಹೇಳಿರುವ ಮಾತುಗಳು ಸತ್ಯವಾದವು.

    ಧನ್ಯವಾದಗಳು….

Leave a Reply

Back To Top