ಅದಿತಿ

ಕವಿತೆ

ಅದಿತಿ

ಮುರಳಿ ಹತ್ವಾರ್ 

Graphic illustration- colorful abstract faces of modern woman. Vector illustration- colorful abstract faces of modern woman. The graphic can represent modern royalty free illustration

ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:
ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.
ಒಂದಿಷ್ಟೂ ಬಿಸಿಯಾಗಲಿಲ್ಲ ಅದು
ಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನ
ಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ

ಹೇಗೆ ಬಿಸಿಯಾದೀತು? ನಾಜೂಕಿನಿಂದ
ಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.
ಬೇರು ಕಿತ್ತು, ಕೈ-ಕಾಲು ಕೊಯ್ದು,
ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,
ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು.

ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮ
ಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.
ಆಕೆ “ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು,
‘ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ”
ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೆಳದಷ್ಟು.
ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ”
ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ.

ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ.
ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ.
ಕತ್ತಿಯಲಿ ಕೊಚ್ಚಿದ – ನೋವು ಹುಟ್ಟಬಹುದೆಂದು.
ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ:

ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ;
ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದ
ಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ.

ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ,
ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ;
ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡ
ಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ:

ಉಧೋ! ಉಧೋ! ಎನ್ನುತೆದ್ದವು
ನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತು
ಕುದಿಯುತಲಿ – ಕುಣಿಕುಣಿದು ಕಂಪಿಸಿ.
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ
ಎಲ್ಲವೂ ಛಿದ್ರ, ಛಿದ್ರ, ಛಿದ್ರ;
ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ.

ಆ ತುಂಬು ಗರ್ಭದ
ಮೌನದ ಬಸಿರೊಡೆದು
ಹೊಸ ಬೆಳಕೊಂದು ಹುಟ್ಟಿ
ಮತ್ತೆ ಅದಿತಿಯಾಯಿತು!

**********************************

Leave a Reply

Back To Top