ಸಂದಣಿ

ವಿಶೇಷ ಕಥೆ

ಸಂದಣಿ

ಅಶ್ವಥ್

ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ‍ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ ಆಫೀಸ್ ಪ್ರಯಾಣವಾಗಿದ್ದುದು ಈಗ ಎರಡು ಗಂಟೆಗೆ ಬಂದಿರುವುದು ನಿರಾಳವಾಗಿತ್ತು. ಬೆಳಗಿನ ಒಂಭತ್ತರ ಆಫೀಸ್ ಕೆಲಸಕ್ಕೆ ಆರೂವರೆ -ಏಳರ ಹೊತ್ತಿಗೆ ಬೈಕನ್ನು ಹೊಸ್ತಿಲಿನಾಚೆ ಎಳೆದು ರಸ್ತೆಯಲ್ಲಿ ಜಾಗ ಹಿಡಿದುಬಿಡಬೇಕಿತ್ತು. ರಸ್ತೆ ಸೇರುವಾಗ ಹಿಡಿದ ಜಾಗದಿಂದ ಪಟ್ಟುಬಿಡದೇ ಮುಂದೆ ಮುಂದೆ ಹೋಗಿಸಿಲ್ಕ್ಬೋರ್ಡ್ಸರ್ಕಲ್ಲಿನಾಚೆಫ್ಲೈಓವರ್ ಸೇರುವ ಹೊತ್ತಿಗೆ ಆತುರದಲ್ಲಿ ಆದ ಕಾಫಿ, ತಿಂಡಿಯೆಲ್ಲ ಈಗ ಜೀರ್ಣ ಆಗಬಹುದಾ! ಅನ್ನುತ್ತಲೇ ಅನ್ನಚೀಲದೊಳಗೆ ಕುಲುಕುತ್ತಾ ಇರುತ್ತಿತ್ತು. ದಾರಿಮಧ್ಯೆ ಅದೇ ಕೆಲವು ಹಳೆಮುಖಗಳು, ಮತ್ತ್ಯಾವುದೋ ಲಗ್ಗೇಜುಗಾಡಿ, ಕೆಲವೊಮ್ಮೆ ಬಿಎಂಟಿಸಿಯ ಬಸ್ಸುಗಳು, ಟ್ರಾಫಿಕ್ಕುಗಳನ್ನು ಆಗ್ಗಾಗ್ಗೆ ಕೆದಕುತ್ತಾ ಮುಂದೆ ತಳ್ಳುವುದಕ್ಕೆ ಹಾವಿನಾಕಾರದಲ್ಲಿ ಹೊರಳಿಕೊಂಡು ಹೋಗುವ ಸ್ಕೂಟಿಗಳು. ಆಟೋ, ಟ್ಯಾಕ್ಸಿಗಳು. ಹೀಗೆಆವಾಹನದಟ್ಟಣೆಯದೀರ್ಘನೋಟ ಒಂದು ರೀತಿಯ ಹಲಬಗೆಯ ವಾಹನಗಳ ಸೂಪರ್ಮಾರ್ಕೆಟ್ಟಿನ ಹಾಗೆ ಕಾಣುತ್ತಿತ್ತು. ತರಹೇವಾರಿ ಹೊಗೆಪೈಪುಗಳಲ್ಲಿ ಪೆಟ್ರೋಲ್ & ಡೀಸೆಲ್ ಉರಿದುಗುಳುವ ದಟ್ಟಹೊಗೆ ಆ ಓಪನ್ಮಾರ್ಕೆಟ್ನಿಂದ ಸೂಸುವ ಘಾಟಿನಂತಿರುತ್ತಿತ್ತು.

ಅದೊಂದು ದಿನ ಮೋಡ ಕವಿದ ವಾತಾವರಣ, ಇನ್ಯಾವ ಕ್ಷಣದಲ್ಲಾದರೂ ಮಳೆ ಬಂದು ಬಿಡಬಹುದು ಅನಿಸುತ್ತಿದ್ದರಿಂದ ರೈನ್ಕೋಟ್ಹಿಡಿದೇ ಬೈಕ್ ಏರಿದ ಸತೀಶ. ನಿಧಾನವಾಗಿ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ತನ್ನೆರಡೂ ಕಾಲುಗಳನ್ನು ಬೈಕಿನ ಹೆಚ್ಚುವರಿ ಚಕ್ರಗಳ ಹಾಗೆ ಉಜ್ಜುತ್ತಾ ಎಳೆಯುತ್ತಾ ಕೆಲವೊಮ್ಮೆನಾಲ್ಕು ಚಕ್ರ ಕೆಲವೊಮ್ಮೆ ಮೂರು ಮತ್ತೆ ಎರಡು ಹೀಗೆ ಚಕ್ರಗಳ ಬಹುಕೃತ ವೇಷವನ್ನು ಬದಲಾಯಿಸುತ್ತಿರುವಾಗ ಪಕ್ಕದಲ್ಲೇ ಬಂದು ಬೈಕ್ನ ಮುಂದೆ ಮುದ್ದಾದ ಹಾಲುಗಲ್ಲದ ಮಗು, ಅದಕ್ಕೆ ತಕ್ಕನಾದ ಪುಟ್ಟ ಹೆಲ್ಮೆಟ್ಟು ಹೊದ್ದು ಇನ್ನೇನು ನಿದ್ರೆ ಹತ್ತೀತೇನೋ ಅನ್ನುವಂತೆ ತಲೆತೂಗುತ್ತಿತ್ತು.

“ಸಾರ್, ಮಗು ತೂಕಡಿಸೋ ತರ ಕಾಣ್ತಿದೆ ಎಚ್ಚರ ಮಾಡಿ” ಅಂದ ಸತೀಶ.

“ನೋ! ಐ ಆಮ್ಜಸ್ಟ್ಟಯರ್ಡ್” ಅನ್ನುತ್ತಾ ತೊದಲುವ ಮುಖ ನೋಡಿ, ಚೆಂದದ ನಗೆ ಬೀರಿ ಬಲಗೈ ಹೆಬ್ಬೆರಳಿನ ಲೈಕ್ ಒತ್ತುತ್ತಾ ಹಾಗೇ ನೋಡುತ್ತಾ ನಿಂತ.

“ಏನ್ಮಾಡೋದುಸಾರ್… ಈ ಹಾಳಾದ್ಟ್ರಾಫಿಕ್ಕಲ್ಲಿ ನಾನು ಬೇಯೋದಲ್ಲದೇ ದಿನಾವಇವನ್ನೂ ಬೇಯಿಸ್ಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಪಾಪ, ದಿನಾ ಇದೇ ನೋಡಿ ನೋಡಿ ಇದಕ್ಕೇ ಹೊಂದ್ಕೊಂಡಿದ್ದಾನೆ”

ಮಗು ಎಡಕ್ಕೆ ಓರೆಯಾಗುತ್ತ “ಯೆಸ್ಸ್” ಅನ್ನುತ್ತಾ ಕಣ್ಣುಗುಡ್ಡೆ ಮೇಲು ಮಾಡಿ ಬೇಸರಿಸಿಕೊಂಡಿದ್ದರೂ, ಕೈಬೆರಳುಗಳನ್ನು ಪಾರ್ಲೆ ಬಿಸ್ಕೆಟ್ಪ್ಯಾಕ್ನ ಬೇಬಿಯ ಹಾಗೆ ಕಾಣಿಸಿ ಮತ್ತಷ್ಟು ಮುಗ್ಧತೆಯನ್ನು ಹೊರಸೂಸಿತು.

“ಅಯ್ಯೋ ಕಂದಾ! ಕನ್ನಡ ಅರ್ಥಆಗ್ತದೇನೋ? ಎಷ್ಟು ರಿಯಾಕ್ಟ್ ಮಾಡ್ತಾನೆ ನೋಡಿ ! ಎಷ್ಟ್ವಯಸ್ಸು ಸಾರ್?ಎನ್ನುತ್ತಾ ಮುಂದೆ ಸರಿಯುತ್ತಿದ್ದ ಟ್ರಾಫಿಕ್ಕಿಗೆ ಎರಡೂ ಬೈಕುಗಳು ನಿಧಾನವಾಗಿ ಹೊಂದಿಕೊಂಡು ಸಂಭಾಷಣೆ ಮುಂದುವರಿದೇ ಇತ್ತು.

“ನಾವು ಮೈಸೂರ್ನವರು ಕನ್ನಡ ಅರ್ಥ ಆಗತ್ತೆ. ಬಾಡಿಗೆಮನೆ ನೈಬರ್ಸು, ಡೇಕೇರು ಎಲ್ಲಾ ಸೇರಿ ಇಂಗ್ಲೀಷ್ಮಯ ಆಗಿದೆ. ಅಲ್ಲದೇ ನಾವೂ ಏನು ಕಡಿಮೆಯಾ? ಬೆಳಿಗ್ಗೆ ಬರೋ ಪೇಪರಿಂದ ಹಿಡಿದು ಆಫೀಸ್ಕೆಲಸದಲ್ಲೆಲ್ಲ ಇಂಗ್ಲೀಷಿನವರೇ ಆಗಿ ಹೋಗಿದ್ದೀವಿ, ಎಳೆವಯಸ್ಸಿನಲ್ಲಿ ಹೀಗೇನೇ ಅಲ್ವಾ ಕಲಿಯೋದು”? ಅನ್ನುತ್ತಾ ಬೇಸರದ ಬೆಳಗಿಗೊಂದಿಷ್ಟು ತಿಳಿಯೆನಿಸುವ ಆಪ್ತತೆಯನ್ನು ತೋರಿದರು ತಂದೆ.

ಅಷ್ಟೂ ಹೊತ್ತು ಚಿಂತಾಕ್ರಾಂತನಾಗಿದ್ದ ಪುಟ್ಟಮಗು ಅಚಾನಕ್ಕಾಗಿ ಸಿಕ್ಕ ಸತೀಶನತ್ತ ಹೊರಳಿದ್ದೇ ಅವನ ನವಿರಾದ ಮಾತಿಗೆ ಕಿವಿಗೊಡುತ್ತಾ ಕಣ್ಣು ಹೊರಳಿಸುತ್ತಾ ಪರಿಚಯ ಬೇಕು ಅನ್ನುವಂತೆ “ನೀಯಾರು” ಅಂತು.

” ನಾನೂ ನಿಮ್ಮ ಅಪ್ಪನ ಹಾಗೇ, ನಿತ್ಯ ಟ್ರಾಫಿಕ್ಕಿನೊಳಗೆ ಬೇಯೋವ್ನು” ನಮ್ಮೂರು ಹಳೆಬೀಡು ಹತ್ರ ಹಳ್ಳಿ. ನಿನ್ನಂಗಿದ್ದಾಗ ನಮ್ಮ ಹಳ್ಳಿಯಲ್ಲಿ ಹೇಗಿತ್ತು ಗೊತ್ತಾ ಪುಟ್ಟಾ?” ಅನ್ನುವಷ್ಟರಲ್ಲಿ “ನೈಸ್ ಟಾಕಿಂಗ್ಟುಯೂ ರೀ ನೆಕ್ಸ್ಟ್ಟರ್ನಲ್ಲಿ ಡೇಕೇರ್ಗೆ ಬಿಟ್ಟು ಮತ್ತೆ ಈ ರೋಡ್ನೇ ಸೇರ್ಕೊಬೇಕು” ಅನ್ನುತ್ತಾ ಅಪ್ಪ ಗಾಡಿಯನ್ನು ಬಲಕ್ಕೆ ಹೊರಳಿಸುವುದಕ್ಕೆ ನೋಡುತ್ತಿದ್ದಂತೆ, ಮಗುವಿಗೆ ಮತ್ತೆ ಬೇಸರ ಮಡುಗಟ್ಟಿ “ಐ ವಾಂಟು ಟಾಕ್ಮೋರ್” ಅನ್ನುತ್ತಾ ಗೊಣಗಿದ. ನಿದ್ರೆ ಬಂದೇ ಬಿಟ್ಟಿತು ಅನ್ನುವಂತೆ ತೂಗುತ್ತಲಿದ್ದವನು ಇದ್ದಕ್ಕಿದ್ದ ಹಾಗೆ ಚುರುಕಾಗಿದ್ದು ಕಂಡು, “ನೋಡಿ, ಏನೋ ಪರಿಚಯಕ್ಕೆ ಸಿಕ್ಕರೆ ಸಾಕು, ತಲೆತಿಂತಾನೆ! ಈಗ ನಿದ್ರೆಮಾಡಿಯಾನು ನೋಡಿ ಅಂದಿದ್ದು ನಿಮ್ಮದೇ ತ ಪ್ಪೇನೋ ಅನ್ನೋ ಹಾಗೆ ಮಾಡಿಬಿಟ್ಟಾನು”. ಅನ್ನುತ್ತಾ ಅಪ್ಪ ತಮಾಷೆ ಮಾಡಿದ.

ಇರಲಿ ಬಿಡಿ ಸಾರ್.ಅರ್ಥ ಆಗತ್ತೆ. ಮಕ್ಕಳನ್ನು ಬೆಳೆಸೋಕೆ ಜಾಗ ಅಲ್ಲ ಇದು. ಏನ್ಮಾಡೋದು, ಲೈಫ್ಸ್ಟೈಲೇ ಹಾಗಾಗಿದೆ. ನಮ್ಮ ಕಾಲ ನಮ್ಮ ಮಕ್ಕಳಿಗೆ ಇಲ್ಲ. ಇನ್ನು ಮುಂದೆ ಹೇಗೋ ಎನ್ನುತ್ತಾ ಕಣ್ಣು ಮೇಲು ಮಾಡುವ ಸರದಿ ಈಗ ಸತೀಶನದ್ದಾಗಿತ್ತು.

ರೈಟ್ .ಯಾಕಾದ್ರೂ ಈ ಎಂಜಿನಿಯರಿಂಗ್ ಮಾಡಿದೆನೋ ಅನ್ಸುತ್ತೆ ರೀ ಒಂದೊಂದ್ಸಾರ್ತಿ. ಅಂದ್ಹಾಗೆ ನನ್ನ ಹೆಸರು ಅವಿನಾಶ್, ಇಲ್ಲೇ ವಿಪ್ರೋದಲ್ಲಿರೋದು ಅನ್ನುತ್ತಾ ಬಲಗೈ ಚಾಚಿದರು.

ನಾನು ಸತೀಶ್, ಹನಿವೆಲ್ಲು ಬಟ್ನಾಟ್ಸೋವೆಲ್ಲ್ . ಊರು ನೆನಪಾದ್ರೆ ಎಲ್ಲಾ ಬಿಟ್ಹಾಕಿ ಹೊರಟ್ಹೋಗೋಣ ಅನ್ಸುತ್ತೆ ಏನ್ಮಾಡೋದೇಳಿ ಫಜೀತಿ. ಈಗ ಅಲ್ಲೂ ಏನೂ ಸುಲಭ ಅಲ್ಲ.

ಕರೆಕ್ಟ್.ನಮ್ಮದೂ ಮೈಸೂರ್ಹತ್ರ ಸ್ವಲ್ಪ ಜಮೀನಿದೆ. ನಮ್ಮ ತಾತ ಮಾಡಿಸ್ತಿದ್ರು. ನಾವೆಲ್ಲ ಹುಟ್ಟಿ ಬೆಳೆದಿದ್ದು ಮೈಸೂರಲ್ಲೇ. ಹಳ್ಳಿ ಅಲ್ಲದಿದ್ರೂ, ಇಷ್ಟು ಕೆಟ್ಟ ಪಟ್ಟಣ ಆಗಿರ್ಲಿಲ್ಲ ಬಿಡಿ. ಅನ್ನುತ್ತಾ ಹಳೆಯ ಮೈಸೂರಿನ ನೆನಪಿಗಿಳಿದ ಅವಿನಾಶ್, ನಮ್ಮ ಪುಟ್ಟಂಗೆ ಇವತ್ತು ನಿಮ್ಮ ಜೊತೆ ಮಾತಾಡೋ ಮನಸಾಗಿದೆ. ನೆಕ್ಸ್ಟ್ಕ್ರಾಸ್ತೊಗೊಳ್ತೀನಿ. ಅರ್ಧಗಂಟೆ ಆಗತ್ತೆ ಮಿನಿಮಮ್. ಅಷ್ಟರಲ್ಲೆಲ್ಲ ತೊಂದ್ರೆ ಕೊಟ್ಬಿಡಪ್ಪಾ ಸತೀಶ್ ಅವ್ರಿಗೆ” ಅಂದು ಮತ್ತೆನ ಕ್ಕರು. ಮಗು ಹಿಗ್ಗಿದ.

Orange abstract watercolor. Abstract grunge watercolor background in shades of orange on white royalty free stock photo

” ಇರಲಿ ಬಿಡಿ ಸಾರ್.ಇದರಲ್ಲಿ ತೊಂದ್ರೆ ಏನಿದೆ. ಆದರೆ ರಸ್ತೆಯಲ್ಲಿ ಹೀಗೆ ಟೈಮ್ಪಾಸ್ಮಾಡೋದಕ್ಕೆ ನಗೋದೋ ಅಳೋದೋ ಗೊತ್ತಾಗಲ್ಲ” ಅನ್ನುತ್ತಾ ಮಗುವಿನ ಮುಗ್ಧಮುಖ ನೋಡುತ್ತಾ ಟ್ರಾಫಿಕ್ಕಿನ ಧಾರುಣತೆಯನ್ನೆಲ್ಲವನ್ನು ಇಲ್ಲವಾಗಿಸಿ ಮಗುವಿನೊಂದಿಗೆ ಸಂಭಾಷಣೆಗಿಳಿದ.

ಸಮರ್ಥ್.

ಏನ್ಮಾಡ್ತೀಯಾ ಡೇಕೇರಲ್ಲಿ? ತಿಂಡಿ ಆಯ್ತಾ? ಲಂಚ್ಬಾಕ್ಸ್ನಲ್ಲಿ ಏನಿದೆ?

ಓಯೆಸ್.ಇಡ್ಲಿವಿತ್ಸಕ್ರೆ ಚಟ್ನಿ. ಲಂಚ್ಬಾಕ್ಸ್ನಲ್ಲೂ ಅದೇ.

ನಂಗ್ಬೇಕಿತ್ತಲ್ಲ. ನನ್ನಲಂಚ್ಬಾಕ್ಸ್ತಂದಿಲ್ಲ. ತೊಗೊಳ್ಳಲಾ ಅನ್ನುತ್ತಾ ಕೈಚಾಚಿದ.

“ಹ್ಹಿಹಿ…. ಇದುಸ್ಮಾಲ್ಬಾಕ್ಸ್….” ಅನ್ನುತ್ತಾ ಬ್ಯಾಗನ್ನು ಗಟ್ಟಿಯಾಗಿ ಹಿಡಿದು, ಸಮಾಧಾನಕ್ಕೆನ್ನುವಂತೆ “ಡ್ಯಾಡಿದೂ ಇಲ್ಲ”. ಅಂದ.

ಮಾತು ಹಾಗೇ ಮುಂದುವರಿದು ಹೆಚ್ಚಿನವಪರಿಚಯ ಹೇಳಿಕೊಳ್ಳುತ್ತಾ, ಹಳೆಬೀಡಿನ ನೆನಪುಗಳನ್ನೆಲ್ಲ ಹೊಸದೆನ್ನುವಂತೆ ಮಾಡಿಕೊಂಡು ತನ್ನ ಬಾಲ್ಯದ ಕೆಲವು ತುಣುಕುಗಳನ್ನೆಲ್ಲ ಮಗುವಿನೊಂದಿಗೆ ಹಂಚಿಕೊಳ್ಳುತ್ತಾ, ತನ್ನ ಹಳೆಯ ಗೋಲಿಯಾಟ, ಮರಕೋತಿಆಟ, ಹಳ್ಳಿ, ಹೊಸ, ಮರ, ಹಸು ಹಕ್ಕಿ ಇತ್ಯಾದಿ ಹೊಸಲೋಕವನ್ನೇ ಅವಸರವಸರವಾಗಿ ತೆರೆದಿಡುತ್ತಾ ಸರಿಯುತ್ತಿದ್ದ.

ಪರಿಚಯ ಆಗಿದ್ದು ಖುಷಿಯಾಯ್ತು ಸಾರ್.ನಾನು ಜೆಪಿನಗರದಿಂದ ಹೊರಡೋದು ದಿನಾ… ಮತ್ತೆ ಯಾವಾಗಲಾದರೂ ಸಿಗೋಣ. ಮುಂದಿನ ಕ್ರಾಸ್ಬಂದೇ ಬಿಡ್ತು. ಇಫ್ಯುಡೋಂಟ್ಮೈಂಡ್, ಫೋನ್ನಂಬರ್ಶೇರ್ಮಾಡಿ. ನನ್ನದು ನೈನ್ಡಬಲ್ಎಂಟ್ ಎನ್ನುತ್ತಾ ಒಂದರ ಮಗ್ಗಿ ಶುರು ಮಾಡಿದ.

‘ಶ್ಯೂರ್ಶ್ಯೂರ್ʼ ನಮ್ರೂಮ್ಕೂಡ ಅಲ್ಲೇ ಜೆಪಿನಗರ. ಖಂಡಿತಾ ಸಿಗೋಣ. ಬಾ ಇಂಟರೆಸ್ಟಿಂಗ್ ಇದಾನೆ ಮಗ ಅಂದು ತನ್ನ ಮೊಬೈಲ್ತೆಗೆದು ಅವಿನಾಶ್ಹೇಳಿದ ಒಂದರವಮಗ್ಗಿ ಒತ್ತಿಟ್ಟುಕೊಳ್ಳುತ್ತಾ, ಒಂದುರಿಂಗ್ಮಾಡಿ, ಮಿಸ್ಡ್ಕಾಲ್ ಇದೆ ನೋಡಿ ನಂದು ಅನ್ನುತ್ತಾ ಮಗುವಿಗೆ “ಬಾಯ್!” ಅನ್ನುತ್ತಲೇ… ಅವನನ್ನು ಅಣಕಿಸುವಂತೆ ಮಗು “ಅಂಕಲ್!” ಅಂದ. ಎಲಾ ಇವನಾ? ಒಂದರ್ಧ ಗಂಟೆ ಮಾತಿಗೆ ಎಷ್ಟು

ಪರಿಚಯದವನ ಹಾಗೆ ಆಗಿಬಿಟ್ಟ ಅಂದುಕೊಳ್ಳುತ್ತಲೇ ಸತೀಶ ಟ್ರಾಫಿಕ್ಕಿನ ಉದ್ದನೆಯ ಸಾಲಿನತ್ತ ದೃಷ್ಟಿ ನೆಟ್ಟ.

ಆ ದಿನ ಸಂಜೆ ಮನೆಗೆ ಬರುವಾಗಲೂ ಮತ್ತೆ ಅದೇ ಸಾಲುಗಟ್ಟಿದ ವಾಹನಗಳ ನಡುವೆ ಬೇಯುತ್ತಾ ಬರುವ ದಾರಿಯಲ್ಲಿ ಸಿಕ್ಕ ಪುಟ್ಟ ಗೆಳೆಯನ ನೆನಪು ಮಾಡಿಕೊಳ್ಳುತ್ತಾ ಇನ್ನಷ್ಟು ಬೇಸರವಾದ.

ಆ ರಾತ್ರಿ ಆ ಮಗುವಿನ ನೆನಪಾಗಿ ತಾನು ಮೊದಲು ಕಂಡ ಆ ತೂಕಡಿಸುವಂತಹ ಮುಗ್ದ ಮುಖ ಮತ್ತೆ ದಿಟ್ಟಿಸಿದ ಹಾಗನಿಸಿ ಕಸಿವಿಸಿಗೊಂಡು ದೀರ್ಘವಾಗಿ ಯೋಚನೆಗಿಳಿದ.

ನನ್ನ ಬಾಲ್ಯದ ದಿನಗಳಿಗೂ, ಈ ಮಗುವಿನ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ… ನಮಗೆ ನಿದ್ರೆ ಮಾಡಿಸುವುದಕ್ಕೆ ಮನೆಯಲ್ಲಿ ಹರಸಾಹಸ ಪಡಬೇಕಾಗುತ್ತಿತ್ತು. ಮನೆಯಲ್ಲಿ ಇರಿಸಿಕೊಳ್ಳುವುದೇ ಕಷ್ಟವಾಗಿರುತ್ತಿದ್ದು ಸದಾ ಅಂಗಳ ಬೀದಿ ಹೊಲಗದ್ದೆಗಳ ಕಡೆಯೇ ಆಟವಾಡುತ್ತಾ, ಇದ್ದ ಆ ಹಳ್ಳಿಗೂ, ಬೆಳಗಾದರೆ ಟ್ರಾಫಿಕ್ಕಿನ ಸುಪ್ರಭಾತ, ಮತ್ತೆ ಸಂಜೆ ಅದೇ ಟ್ರಾಫಿಕ್ಕಿನ ಮಂಗಳಾರತಿಯ ನಡುವೆ ಈ ಹೊಸ ತಲೆಮಾರಿನ ಬದುಕು ಎಷ್ಟೊಂದು ವಿಚಿತ್ರವಾಯಿತಲ್ಲ, ಇದಕ್ಕೆ ತಾನೂ ಒಬ್ಬ ಕಾರಣನಾದನಲ್ಲ ಅನಿಸುವಂತಾಯಿತು. ಟ್ರಾಫಿಕ್ಕು , ಜನಜಂಗುಳಿ ನಗರದ ದಟ್ಟಣೆಗಳೆಲ್ಲವೂ

ನಾವೇ ಜನರೇ ಮಾಡಿಕೊಂಡಿರುವ ಸ್ವಯಂಕೃತ ಸಮಸ್ಯೆಗಳಲ್ಲವೇ? ಎಲ್ಲರಿಗೂ ಚಂದದ ಬಾಲ್ಯಬೇಕು ಅನ್ನುತ್ತಾ ಇನ್ನೂ ಹಳ್ಳಿ ಯನ್ನೇ ಅವಲಂಬಿಸಿದರೆ ಊರಿನಲ್ಲಿ ಸವಲತ್ತುಗಳೇನೇನೂ ಇಲ್ಲ. ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ಧಾವಂತದಲ್ಲಿ ಚದುರಿಹೋಗಿದ್ದ ಸಣ್ಣಊರುಗಳನ್ನೆಲ್ಲ ಕಲೆಹಾಕಿ ಮಹಾನಗರಗಳನ್ನಾಗಿ ಬೆಳೆಸಿಕೊಂಡು, ಅಲ್ಲಿ ಒಂದಿಷ್ಟು ಆಸ್ತಿ, ಸೈಟು, ಅಪಾರ್ಟ್ಮೆಂಟುಗಳನ್ನೆಲ್ಲ ಮಾಡಿಕೊಂಡು, ಹಣದ ಒಟ್ಟು ಮೊತ್ತವನ್ನು ಮನಸ್ಸಿನಲ್ಲೇ ಲೆಕ್ಕಮಾಡಿಕೊಂಡು ಪ್ರತಿವರ್ಷ ಐಟಿ ಟ್ಯಾಕ್ಸ್ಕಟ್ಟುವಾಗ ಆ ಲೆಕ್ಕ ಮರುಪರಿಶೀಲನೆಯನ್ನೂ ಮಾಡಿಕೊಂಡು ವಿಚಿತ್ರ ಅಂಕಿಸಂಖ್ಯೆಯ ಲೆಕ್ಕದಲ್ಲಿ ಸಿರಿವಂತಿಕೆಯ ನೆಮ್ಮದಿಯೊಳಗೆ ಮುಳುಗಿ ನಿಜದ ನೆಮ್ಮದಿಯ ನೆನಪೂ ಇಲ್ಲದ ಹಾಗಾಗಿದೆ.

ಎಷ್ಟು ಹೊತ್ತು ಯೋಚಿಸಿದರೂ ನಿದ್ರೆ ಹತ್ತದೆ ಹಾಗೇ ಕೂತಲ್ಲೇ ಕೂತಿದ್ದವನಿಗೆ ಊಟ ಮಾಡಿಲ್ಲವೆನ್ನುವುದು ಗೊತ್ತಾಗಿ, ಈಗ ಒಲೆ ಹೊತ್ತಿಸುವ ಮನಸ್ಸಿಲ್ಲದ್ದಕ್ಕೆ ಮನೆಯ ಪಕ್ಕದ ಬೀದಿಯ ಬೇಕರಿ ಬಾಗಿಲು ಮುಚ್ಚುವ ಮೊದಲೇ ಏನಾದರೂ ಸಿಕ್ಕೀತು ಅಂದುಕೊಂಡು ದಾಪುಗಾಲಿಡುತ್ತಾ ಗೇಟು ದಾಟಿದ.

ರಾತ್ರಿ ಒಂದರ ನಂತರವೂ ನಿದ್ರೆ ಬಾರದವನಾಗಿ ತನ್ನ ಬಾಲ್ಯವನ್ನೇ ಮತ್ತೆ ಮೆಲುಕು ಹಾಕಿಕೊಂಡು ಒಂದಿಷ್ಟು ಸಂತೊಷಪಟ್ಟುಕೊಳ್ಳುತ್ತಾ, ಬೆಳಗಿನ ಟ್ರಾಫಿಕ್ಕಿನ ಬಗ್ಗೆ ಮಾಮೂಲಿನಂತೆ ಅಲ್ಲದೇ ಏನೋ ವಿಚಿತ್ರ ಆಯಾಸದ ಭಾವನೆ ಮೂಡಿ ಬೆಳಗಿನ ಆ ಮುಗ್ದ ಮಗುವಿನ ತೂಕಡಿಕೆಗೆ ಪ್ರತಿಕ್ರಯಿಸುವವನಂತೆ ತಾನೂ ತೂಕಡಿಸುತ್ತಾ ಕೂತ.

ಮಾರನೆಯ ದಿನ ಟ್ರಾಫಿಕ್ಕಿನೊಳಗೆ ಬೈಕನ್ನು ಈಜಿಸಿಕೊಂಡು ಆಫೀಸೆಂಬೋ ದಡ ಮುಟ್ಟಿದರೂ ಈ ನೆನಪಿನ ಗುಂಗಿನಿಂದ ಸತೀಶ ಹೊರಬಂದಿರಲಿಲ್ಲ. ಹಿನ್ನೆಲೆಯಲ್ಲಿ ಯೋಚನೆ ಮುಂದುವರಿದೇ ಇತ್ತು.

ಸಮಸ್ಯೆ ಎಲ್ಲಾಗ್ತಾ ಇದೆ?

ನಾವೆಲ್ಲ ವ್ಯವಸ್ಥೆಯನ್ನ ಬೆನ್ನುಹತ್ತಿ ವ್ಯವಸ್ಥೆಯೂ ಇಲ್ಲ, ಕಡೆಗೆ ಹಳ್ಳಿಯ ಸಮೃದ್ಧತೆಯೂ ಇಲ್ಲ ಅನಿಸುವಂತೆ ಎಲ್ಲರೂ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಣಜಮಾವಣೆಯ ವ್ಯಾಪಾರಕ್ಕಿಳಿದು ಬಿಟ್ಟೆವೇ? ಪುಟ್ಟಪಟ್ಟಣಗಳನ್ನು, ನಗರಗಳನ್ನು ಮಹಾನಗರಗಳನ್ನಾಗಿ ದೈತ್ಯಾಕಾರಕ್ಕೆ ಬೆಳೆಸಿದ ಆ ಆಸಕ್ತಿ ಹಳ್ಳಿಗಳನ್ನೂ, ಅಲ್ಲಿನ ಸುತ್ತಲಿನ ಸಣ್ಣಪಟ್ಟಣಗಳನ್ನೂ ವ್ಯವಸ್ಥಿತಗೊಳಿಸಿಕೊಳ್ಳುವುದು ಅಷ್ಟೊಂದುಕಷ್ಟವೇ? ಇಲ್ಲಿ ನಗರಗಳಲ್ಲಿ ನೋಡಿದರೆ ಎಲ್ಲರೂ ಎಲ್ಲರನ್ನೂ ಬೈದುಕೊಳ್ಳುತ್ತಾ, ಕಾರ್ಪೊರೇಷನ್ನವರಿಗೊಂದಿಷ್ಟು ದೂರುತ್ತಾ ಇದ್ದುಬಿಡುತ್ತೇವೆ. ಹೇಗೋ ದೈನಂದಿನ ಸಾಮಾನ್ಯ ವ್ಯವಸ್ಥೆಗಳ ಏರ್ಪಾಡಿಗಾದರೂ ಕಾರ್ಪೊರೇಷನ್ನು, ಎಸ್ಕಾಮ್, ವಾಟರ್ಬೋರ್ಡ್ಗಳೆಲ್ಲ ನೀರು, ವಿದ್ಯುತ್ತು, ಚರಂಡಿ, ಕಸ ವಿಲೇವಾರಿಗಳನ್ನಂತೂ ಹೇಗೋ ಹಾಗೆ ತೂಗಿಸಿ, ಕೊಟ್ಟ ತೆರಿಗೆಗೆ ತಿಪ್ಪೆ ಸಾರಿಸ್ತಾರೆ.

ನಮ್ಮ ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಜಾತಿಜಾಡ್ಯದಿಂದ ಹಿಡಿದು, ಶೀತಕೆಮ್ಮಿಗೂ ಒಂದು ಆಸ್ಪತ್ರೆಗೆ ಹತ್ತಾರು ಮೈಲಿಯಾಚೆಯ ಪಟ್ಟಣಕ್ಕೆ ಹೋಗಿ ಟೋಕನ್ಹಿಡಿದುಕೊಳ್ಳಬೇಕಾದ; ಪ್ರಾಥಮಿಕ ಮಾಧ್ಯಮಿಕ ಶಾಲೆಗಳೆಲ್ಲವಕ್ಕೂ ಹಳದಿವ್ಯಾನುಗಳನ್ನು ಅವಲಂಬಿಸಿಕೊಂಡು, ಅದಕ್ಕೆ ಫೀಸು ಕಟ್ಟುವುದಕ್ಕೆಂದು ತಿಣುಕಾಡುವ; ಬೆಳೆಹೊತ್ತಿನಲ್ಲಿ ಮಳೆಯಿಲ್ಲದೆ ಕೊಯ್ಲಿನ ಹೊತ್ತಿಗೆ ನೆರೆ ಬರುವಂತಹ ಪರಿಸ್ಥಿತಿಯಿದ್ದರೂ, ಹೇಗೋ ಹಾಗೆ ಬೆಳೆದಿದ್ದ ಫಸಲಿಗೂ ಎಷ್ಟೋ ಸಿಕ್ಕಷ್ಟು ಅನ್ನುವ ಹಾಗೆ ಸಂಪಾದನೆ ಮಾಡಿಕೊಂಡು ಪ್ರತಿವರ್ಷ ಮುಂದಿನ ಬೆಳೆ ಸಾಲ, ಅದನ್ನ ಮನ್ನಾ ಮಾಡಬೇಕಾದ ಸರ್ಕಾರ, ಅದರಲ್ಲಿ ಕಮೀಷನ್ನು; ಈ ರೀತಿಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದ ಸತೀಶನ ತಲೆಭಾರವಾಗಿತ್ತು.

ಬ್ರೇಕ್ಹೊತ್ತಿನಲ್ಲಿ ಒಂದು ಕಾಫಿ ಹೀರುತ್ತಾ, ಕಳೆದ ತಿಂಗಳಷ್ಟೇ ಅಮೇರಿಕಾದ ಆನ್ಸೈಟ್ಕೆಲಸದಿಂದ ಮರಳಿದ್ದ ಸಹೋದ್ಯೋಗಿ ಮುರಳಿಯ ಜೊತೆ, ಅಮೇರಿಕಾ ಸಮಾಚಾರ ಕೇಳುತ್ತಾ, ಜೊತೆಯಲ್ಲೇ ಇಲ್ಲಿನ ಸಮಸ್ಯೆಗಳನ್ನು ಗೊಣಗಿಕೊಂಡ. ನಿನ್ನೆಯಿಂದ ಆ ಮಗುವಿನ ಮುಖವೇ ಕಾಡುತ್ತಾ ಇದ್ದು ಸಮಸ್ಯೆ ಹೀಗೆಲ್ಲಾ ಇದೆಯೆಂದು ಮುರಳಿಗೆ ವಿವರಿಸುತ್ತಾ, ಅಮೇರಿಕಾದ ಪರಿಸ್ಥಿತಿ ಹೇಗೆ? ಅಲ್ಲಿ ಈ ಸಮಸ್ಯೆಗಳೆಲ್ಲ ಇಲ್ಲವಲ್ಲಾ, ಹೇಗೆ ಅನ್ನುತ್ತಾ ಹೊಸ ಆಲೋಚನೆಗೆ ಇಳಿದ.

ಮುರಳಿಯು ಮಾತಿಗೆ ಸ್ಪಂದಿಸುತ್ತಾ, ಪ್ರಾಬ್ಲಂಗಳು ಅಲ್ಲಿಯೂ ಇರೋದೇನೇ, ಆದರೆ ನಮ್ಮ ತರಹದ ಬೇಸಿಕ್ಪ್ರಾಬ್ಲಮ್ಗಳಲ್ಲ. ಅವರ ಸಮಸ್ಯೆಗಳು ಆ ದೇಶದ, ಆ ಸಂಸ್ಕೃತಿಯ ಹಾಗೇ ಬೇರೆ ತರಹದ ಸಮಸ್ಯೆಗಳು ಅಂದ.

ಅಲ್ಲಿನ ಆಡಳಿತ ಹೆಚ್ಚಿನ ಮಟ್ಟಿಗೆ ವಿಕೇಂದ್ರೀಕೃತವಾಗಿದೆ. ಹಾಗಾಗಿ ಅವರು ಸಣ್ಣಪುಟ್ಟ ಸಮಸ್ಯೆಗಳು ಬರದ ಹಾಗೆ ನೋಡಿಕೊಳ್ಳೋಕೆ ಬೇಕಾದ ಏರ್ಪಾಡುಗಳನ್ನೆಲ್ಲ ಮಾಡಿಕೊಂಡೇ ಇದಾರೆ ಅನ್ನುತ್ತಾ ಅಮೇರಿಕಾದ ವಿಕೇಂದ್ರೀಕೃತ ವ್ಯವಸ್ಥೆಯ ಬಗ್ಗೆ ಒಂದಿಷ್ಟು ಪರಿಚಯಿಸುತ್ತಾ ಹೊರಟ.

ಆಡಳಿತ :ಅದೊಂದೇ ಪರಿಹಾರಕ್ಕೆ ದಾರಿ. ಇಲ್ಲವಾದರೆ ನಮ್ಮ ಸಮಸ್ಯೆಗಳು ಹೀಗೇ ಒಂದರ ನಂತರ ಒಂದು ಬೆಳೆಯುತ್ತಲೇ ಹೋಗ್ತಿರುತ್ತವೆ.

ಅಭಿವೃದ್ಧಿ ಆಗಿರುವ ದೇಶಗಳಲ್ಲಿ ಸರ್ಕಾರ ತ್ವರಿತವಾಗಿ ನಡೆಸುವ ಆಡಳಿತದ ಕಾರ್ಯವೈಖರಿ ಮತ್ತು ಅದರಿಂದ ಉಂಟಾಗುವ ಪರಿಣಾಮಕತೆಯನ್ನು, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಾಣಲಾಗುವುದಿಲ್ಲ. ಇದಕ್ಕೆ ಕಾರಣವೇನಿರಬಹುದು?

ಕಾರಣ ನನಗನಿಸೋದು, ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಒಬ್ಬ ನಾಗರೀಕನು ಫೆಡರಲ್ ಸರ್ಕಾರ ಅಥವಾ ರಾಜ್ಯ ಸರ್ಕಾರಗಳೊಂದಿಗೆ ವ್ಯವಹರಿಸುವುದು ತೀರಾ ಅಪರೂಪ. ಒಬ್ಬ ಪ್ರಜೆ ಹೆಚ್ಚಿನ ವಹಿವಾಟು ನಡೆಸುವುದು ಸ್ಥಳೀಯ ಸರ್ಕಾರಗಳ ಜೊತೆಯಲ್ಲೇ. ಸರ್ಕಾರದೊಂದಿಗೆ ನಡೆಸಬೇಕಾದ ದೈನಂದಿನ ಚಟುವಟಿಕೆಗಳಲ್ಲಿ ಮುಕ್ಕಾಲುಪಾಲು ಸ್ಥಳೀಯ ಸರ್ಕಾರದೊಂದಿಗೆ ಇದ್ದು, ತೆರಿಗೆ ಪಾವತಿ, ಪಾಸ್ಪೋರ್ಟ್, ಅಥವಾ ಪೊಲೀಸ್ ಇಲಾಖೆ, ಕೋರ್ಟ್ ಇತ್ಯಾದಿ ವ್ಯವಹಾರಗಳ ಹೊರತಾಗಿ ಮಿಕ್ಕೆಲ್ಲ ವ್ಯವಹಾರಗಳೆಲ್ಲವೂ ಅವರ ಸುತ್ತಮುತ್ತಲೇ ಇರುವ ಟೌನ್ಷಿಪ್, ಮುನಿಸಿಪಾಲಿಟಿಗಳಂತಹ ಸ್ಥಳೀಯ ಸಂಸ್ಥೆಗಳೊಂದಿಗೇ ನಡೆಸುವುದು. ಇಲ್ಲಿ ಸ್ಥಳೀಯ ಸರ್ಕಾರಕ್ಕೆ ಹೊಂದಿಕೊಂಡ ಇಲಾಖೆಗಳು/ವಿಭಾಗಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುವುದರಿಂದ ಆಡಳಿತದಲ್ಲಿ ಪರಿಣಾಮಕತೆ ಹೆಚ್ಚಾಗಿ ಇರುವುದರಿಂದ ಆಡಳಿತದ ವ್ಯವಹಾರಗಳಲ್ಲಿ ನಾಗರೀಕರಿಗಾಗಲೀ, ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸಮಾಡುವ ನೌಕರರಿಗಾಗಲೀ ಜಂಜಡಗಳೇನೂ ಕಾಣಸಿಗುವುದಿಲ್ಲ.

ಫೆಡರಲ್ ಸರ್ಕಾರ,

ರಾಜ್ಯ ಸರ್ಕಾರಗಳ ನಂತರ ಪ್ರದೇಶಕ್ಕೆ ತಕ್ಕಂತೆ ಸ್ಥಳೀಯ ಸರ್ಕಾರಗಳ ವಿಂಗಡಣೆಯಿರುತ್ತದೆ. ರಾಜ್ಯಗಳ ಒಳಪ್ರದೇಶಗಳನ್ನು ಕೌಂಟಿಗಳನ್ನಾಗಿಯೂ ಆಯಾ ಕೌಂಟಿಯ ಒಳಪ್ರದೇಶಗಳು ಟೌನ್ಷಿಪ್ಗಳಾಗಿಯೂ ಮುನಿಸಿಪಾಲಿಟಿಗಳಾಗಿಯೂ ಮರುವಿಂಗಡಣೆಯಾಗಿರುತ್ತವೆ. ಇಂತಹ ಪುಟ್ಟ ಆಡಳಿತವಲಯಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸರ್ಕಾರಿ/ಅರೆಸರ್ಕಾರಿ/ಖಾಸಗಿಯಾಗಿ ನಿರ್ವಹಿಸಲ್ಪಡುವ ವಿಭಾಗಗಳು ಇಲಾಖೆಗಳು ಇಂತಹವು:

ಪೊಲೀಸ್ ಇಲಾಖೆ

ಅಗ್ನಿಶಾಮಕ ಇಲಾಖೆ

ತುರ್ತುಆರೋಗ್ಯ ಸೇವೆಗಳು ಗ್ರಂಥಾಲಯಗಳು

ಸಾರ್ವಜನಿಕ ಕಾಮಗಾರಿ ಇಲಾಖೆ/ಲೋಕೋಪಯೋಗಿ ಇಲಾಖೆ ( PWD)

ಕಟ್ಟಡ & ನಿರ್ಮಾಣ ಹಾಗೂ ಜೋನಿಂಗ್ (ವಲಯನಿರ್ವಹಣೆ) ಇಲಾಖೆಶಾಲೆಗಳುಪಾರ್ಕ್ಗಳು, ವ್ಯಾಯಾಮ ಸೌಕರ್ಯಗಳು ಮತ್ತು ಮನರಂಜನೆ (ಈಜುಕೊಳ, ಸಿನಿಮಾಹಾಲ್ಗಳು, ಒಳಾಂಗಣ/ಹೊರಾಂಗಣ ಆಟದ ಮೈದಾನ ಇತ್ಯಾದಿ ನಿರ್ವಹಣಾ ಇಲಾಖೆ.

ಸ್ಥಳೀಯ ನ್ಯಾಯಾಲಯಗಳು

ರಸ್ತೆ ಅಭಿವೃದ್ಧಿ

ಸಾರ್ವಜನಿಕ ಸುರಕ್ಷತೆ (ಪೊಲೀಸ್ ಅಲ್ಲದ ಅರೆ ಮಿಲಿಟರಿಪಡೆಗಳು )

ನೀರು ಮತ್ತು ನೈರ್ಮಲ್ಯೀಕರಣ (ಚರಂಡಿ, ಕಸವಿಲೇವಾರಿ)

ಹಿರಿಯನಾಗರೀಕರಮೇಲ್ವಿಚಾರಣೆ

ಶವಾಗಾರ/ಸ್ಮಶಾನನಿರ್ವಹಣೆ

ವಸತಿ

ಸಮುದಾಯ ಅಭಿವೃದ್ಧಿ

ಪರಿಸರ ಸಂರಕ್ಷಣೆ.

ಈ ಮೇಲಿನ ಇಲಾಖೆಗಳೆಲ್ಲವುಗಳಿಗೆ ಸ್ಥಳೀಯ ಚುನಾವಣೆಗಳು ನಡೆಯುತ್ತವೆ ಅಲ್ಲದೇ ಆಯಾ ಟೌನ್ಷಿಪ್/ಮುನಿಸಿಪಾಲಿಟಿಗಳು ಸಾಮಾನ್ಯ ನಿಯಮಾವಳಿಗಳನ್ನೊಳಗೊಂಡ ಅಥವಾ ತಮ್ಮದೇ ಪ್ರತ್ಯೇಕ ನಿಯಮಗಳನ್ನೂ ಸೇರಿಸಿಕೊಂಡ ಆಡಳಿತ ವ್ಯವಸ್ಥೆ ಚಾಲನೆಯಲ್ಲಿದ್ದು ಪ್ರತಿ ಇಲಾಖೆಯಲ್ಲೂ ಸಾರ್ವಜನಿಕರಿಗೆ ಮಾಹಿತಿ, ಕುಂದು ಕೊರತೆ ಆಲಿಸಲು, ನಿಭಾಯಿಸಲು ನೌಕರವರ್ಗ, ಚುನಾಯಿತ ಸದಸ್ಯರನ್ನೊಳಗೊಂಡ ಮಂಡಳಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಪ್ರತಿವಾರ ಅಥವಾ ಎರಡುವಾರಕ್ಕೊಮ್ಮೆ ಬೋರ್ಡ್ಮೀಟಿಂಗ್ಗಳನ್ನು ನಡೆಸುವುದು, ಆಯಾ ಇಲಾಖೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಆರ್ಥಿಕವಿವರ, ಕಾಮಗಾರಿಯ ಯೋಜನಾ ಕ್ರಮ, ಆರ್ಥಿಕ ವಿವರ ಇತ್ಯಾದಿಗಳನ್ನು ಕೂಲಂಕುಶವಾಗಿ ಪಾರದರ್ಶಕವಾಗಿ ಚರ್ಚೆ ನಡೆಸಿ ಅಂತಹ ಮೀಟಿಂಗ್ಗಳ ವಿವರಗಳನ್ನು ದಾಖಲು ಮಾಡಿಡುತ್ತಾರೆ. ಯಾವುದೇ ಕಾಮಗಾರಿಯ ವಿವರ ಯಾವುದೇ ನಾಗರೀಕರಿಗೂ ಲಭ್ಯವಾಗುವಂತೆ ಇರಿಸಿರುತ್ತಾರೆ. ಸಾರ್ವಜನಿಕರೂ ಸಹ ಟೌನ್ಹಾಲ್ಮೀಟಿಂಗ್ಗಳಲ್ಲಿ ಭಾಗವಹಿಸುವ, ತಮ್ಮ ಸಲಹೆ, ಸೂಚನೆ& ಅಭಿಪ್ರಾಯಗಳನ್ನು ನೀಡಲು ಅವಕಾಶವಿರುತ್ತದೆ.

ತುಂಬಾ ಪುಟ್ಟದಾದ ಸಮುದಾಯಗಳಾದರೆ ಅಂತಹವುಗಳ ನಡುವೆ ಕೆಲವು ಇಲಾಖೆಗಳು ಹಂಚಿಕೆಯಾಗಬಹುದು. ಅಂದರೆ ಗ್ರಂಥಾಲಯಗಳು, ಶಾಲೆಗಳು, ಅಗ್ನಿಶಾಮಕದಳ ಇತ್ಯಾದಿ ಇಲಾಖೆಗಳು ಪ್ರದೇಶದ ವಿಸ್ತೀರ್ಣ/ಜನಸಂದಣಿಗನುಗುಣವಾಗಿ ಎರಡು ಮೂರು ಸಮುದಾಯಗಳಿಗೆ ಒಂದು ಇಲಾಖೆಯನ್ನು ನೇಮಿಸಿಕೊಂಡಿರಬಹುದು.

ಇಂತಹ ಪ್ರತಿ ಹಂತದ ಸರ್ಕಾರದ ವಿಂಗಡಣೆಗಳೂ ಸಹ ನಾಗರೀಕರಿಗೆ ತೆರಿಗೆ ವಿಧಿಸುವಂತಹ ಅಧಿಕಾರ ಹೊಂದಿವೆ. ಸ್ಥಳೀಯ ಸರ್ಕಾರ ನಡೆಸಲು ಅಗತ್ಯವಿರುವ ಸಂಪನ್ಮೂಲವನ್ನು ಸಂಗ್ರಹಿಸುವುದು ಆಯಾ ಸರ್ಕಾರಿ ವಿಭಾಗದ ಅಗತ್ಯವಾದರೂ ಸಹ, ಖರ್ಚುಗಳ ಮತ್ತು ತೆರಿಗೆ ಸಂಗ್ರಹಗಳ ಬಗ್ಗೆ ಸಾಮಾನ್ಯವಾಗಿ ನಾಗರೀಕರುಚರ್ಚೆನಡೆಸುತ್ತಲೇಇರುತ್ತಾರೆ. ನಾಗರೀಕರು ಪಡೆಯುವ ಸೌಲಭ್ಯಗಳಿಗೂ ಅವರು ಭರಿಸುವ ತೆರಿಗೆಗೂ ನೇರಾನೇರ ಹೋಲಿಕೆ ಮಾಡುವ ಅವಕಾಶವಂತೂ ಇದ್ದೇ ಇರುತ್ತದೆ. ಒಂದು ವೇಳೆ ಯಾವುದೇ ಸವಲತ್ತಿನಲ್ಲಿ ಕುಂದುಕೊರತೆಯಾದರೂ ಅಂದರೆ ಕಸ ವಿಲೇವಾರಿ ಸರಿಯಾಗಿಲ್ಲ, ಪಾರ್ಕ್ಗಳು/ ಆಟದ ಮೈದಾನಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವಂತಹ ಕೊರತೆಗಳನ್ನು ನಾಗರೀಕರು ನೇರವಾಗಿ ಆಯಾ ಇಲಾಖೆಗಳಿಗೆ ದೂರು ನೀಡಿ ಸರಿಪಡಿಸಿಕೊಳ್ಳುವ ಅವಕಾಶಗಳಿರುತ್ತವೆ.

ಇಂತಹ ಸ್ಥಳೀಯ ಸರ್ಕಾರಗಳಿಗೆʼಶಿಕ್ಷಣʼ (ಪದವಿಪೂರ್ವದವರೆಗಿನಶಿಕ್ಷಣ, ಉನ್ನತ ಶಿಕ್ಷಣಕ್ಕೆ ಯೂನಿವರ್ಸಿಟಿಗಳ ನಿರ್ವಹಣೆ ಆಯಾ ರಾಜ್ಯಸರ್ಕಾರದ ಮಟ್ಟದಲ್ಲಿ ನಡೆಯುತ್ತದೆ) ಅತಿ ದೊಡ್ಡ ಇಲಾಖೆ ಯಾಗಿರುತ್ತದೆ. ಸಾಧಾರಣವಾಗಿ ಇಂತಹ ಸ್ಥಳೀಯ ಸರ್ಕಾರಿ ಇಲಾಖೆಯ ಬಜೆಟ್ಟಿನಲ್ಲಿ ಶಿಕ್ಷಣದ ಬಜೆಟ್ಟು ನಾಲ್ಕನೇ ಒಂದು ಭಾಗವನ್ನು ಆವರಿಸಿರುತ್ತದೆ.

ಮನೆಕಂದಾಯ, ಪಾರ್ಕಿಂಗ್ಶುಲ್ಕ, ನೀರಿನ ಶುಲ್ಕ, ಕಸವಿಲೇವಾರಿ ಶುಲ್ಕ, ಚರಂಡಿ ನೀರಿನ ಶುದ್ದೀಕರಣ& ವಿಲೇವಾರಿಶುಲ್ಕ ಇತ್ಯಾದಿಗಳೆಲ್ಲವನ್ನೂ ಸ್ಥಳೀಯ ಸರ್ಕಾರಗಳೇ ಸಂಗ್ರಹಿಸುತ್ತವೆ. ಇದೇ ಅಲ್ಲದೇ ಸ್ಥಳೀಯ ಸರ್ಕಾರಗಳು ಲೈಸಿನ್ಸ್ಗಳನ್ನು ಒದಗಿಸುವ ಮೂಲಕ (ಹೊಟೇಲ್, ರೆಸ್ಟೋರೆಂಟ್ಗಳಿಗೆ, ಸ್ಥಳೀಯವ್ಯಾಪಾರಮಳಿಗೆಗಳಿಗೆ) ಆದಾಯವನ್ನು ಸಂಗ್ರಹಿಸುತ್ತವೆ. ಫೆಡರಲ್ (ಒಕ್ಕೂಟ) ಮತ್ತು ರಾಜ್ಯಸರ್ಕಾರಗಳ ಅನುದಾನಗಳೂ ಆಯಾ ಇಲಾಖೆಗಳಿಗೆ ಕಾಮಗಾರಿಗಳ ಆಧಾರದ ಮೇಲೆ ದೊರೆಯುತ್ತಿರುತ್ತವೆ. ಲಾಟರಿ ಇತ್ಯಾದಿ ಹೆಚ್ಚುವರಿಆದಾಯದಮೂಲಗಳುಆಯಾರಾಜ್ಯಗಳಮಟ್ಟದಲ್ಲಿಇವೆ. ಸ್ಥಳೀಯಆಡಳಿತದಆದಾಯಮತ್ತುಬಜೆಟ್ನಮೂರುತಿಂಗಳು/ಆರುತಿಂಗಳು/ಪ್ರತಿವರ್ಷದಪರಾಮರ್ಶೆಗಳುಕಡ್ಡಾಯವಾಗಿನಡೆಯುತ್ತವೆ.

ಸ್ಥಳೀಯಸರ್ಕಾರಗಳುಆಹಾರ, ಉಡುಪು, ಮದ್ಯ, ಸಿಗರೇಟ್ಇತ್ಯಾದಿಐಶಾರಾಮಿಚಟಗಳಮೇಲೆತೆರಿಗೆವಿಧಿಸಬಹುದಾದರಬಗ್ಗೆನಿರ್ಧಾರಮಾಡುವಅಧಿಕಾರವನ್ನುಹೊಂದಿರುತ್ತವೆ.

ಭಾರತದಲ್ಲಿ ಸರ್ಕಾರಿ ಆಡಳಿತ, ಒಕ್ಕೂಟಸರ್ಕಾರ, ನಂತರದ ಹಂತದಲ್ಲಿ ರಾಜ್ಯಸರ್ಕಾರ, ಅದರ ನಂತರದ ಹಂತದಲ್ಲಿ ಮಹಾನಗರಸಭೆ, ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು/ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಾಗಿ ವಿಂಗಡಣೆಯಾಗಿದೆ. ಮಹಾನಗರಸಭೆ, ಬ್ಲಾಕ್ಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಂಗಡಣೆಗಳೂ ಪಂಚಾಯತ್  ರಾಜ್ಯ ವ್ಯವಸ್ಟೆಯಡಿ.

ಭಾರತದಲ್ಲಿ ಆಡಳಿತವು ದಿನೇದಿನೇ ಕೇಂದ್ರೀಕೃತವಾಗುತ್ತಲೇ ಹೋಗುತ್ತಿದೆ. ಒಕ್ಕೂಟ ಸರ್ಕಾರವೇ ಆದರೂ ಇಂದಿನ ದಿನಗಳಲ್ಲಿ ಕೇಂದ್ರಸರ್ಕಾರ ಎಂದೇ ಗುರುತಿಸಿಕೊಳ್ಳುವಂತಹ ನಮ್ಮ ಭಾರತ ಸರ್ಕಾರವೇ ಬಹುಪಾಲು ಇಲಾಖೆಗಳನ್ನು ಒಳಗೊಂಡು ರಾಜ್ಯಸರ್ಕಾರಕ್ಕೆ ತಕ್ಕಮಟ್ಟಿನ ಅಧಿಕಾರ ಇದೆಯಾದರೂ ಕೇಂದ್ರದ ಮೇಲಿನ ಅವಲಂಬನೆಯೇ ಹೆಚ್ಚಾಗಿದೆ. ತೆರಿಗೆಯ ನಿರ್ಧಾರಗಳಲ್ಲಿ ಯಾವುದೇ ಅಧಿಕಾರ ರಾಜ್ಯ ಅಥವಾ ಸ್ಥಳೀಯ ಸರ್ಕಾರಗಳಿಗೆ ಉಳಿದುಕೊಂಡಿಲ್ಲ.

ಭೌಗೋಳಿಕವಾಗಿ ಒಕ್ಕೂಟ ಸರ್ಕಾರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾಸದಸ್ಯರು (ಎಂ.ಪಿ) ಮತ್ತು ರಾಜ್ಯಸರ್ಕಾರದಲ್ಲಿ ವಿಧಾನಸಭಾಸದಸ್ಯರು (ಎಂ.ಎಲ್.ಎ) ಮಾತ್ರ ಹೆಚ್ಚಿನ ಅಧಿಕಾರ ಹೊಂದಿರುವವರಾಗಿದ್ದು, ಪಂಚಾಯಿತಿ ರಾಜ್ಯ  ವ್ಯವಸ್ಟೆ

ಬರೀ   ನಾಮಕಾವಸ್ಥೆ ಅನ್ನುವಂತಾಗಿದೆ. ನಗರಸಭೆ, ತಾಲ್ಲೂಕು/ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರಿದ್ದರೂ ಸಹ ಇವರಿಗೆ ಹೊಂದಿಕೊಂಡಂತಹ ಅಧಿಕಾರಗಳಾಗಲೀ ಆಡಳಿತದ ನಿಯಮಾವಳಿಗಳಾಗಲೀ ಏನೇನೂ ಪರಿಣಾಮವಿಲ್ಲದಿರುವುದು ಗಮನಕ್ಕೆ ಬಾರದ ವಿಚಾರವೇನೂ ಅಲ್ಲ. ಸರ್ಕಾರದ ಆಡಳಿತದ ವೈಫಲ್ಯತೆಗೆ ಇದು ಅತಿ ಮುಖ್ಯ ಕಾರಣಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಣ್ಣಪುಟ್ಟಕೆಲಸಗಳಿಗೂ ಎಂಎಲ್ಎ, ಜಿಲ್ಲಾಧಿಕಾರಿಗಳು ಅಸ್ತು ಅನ್ನುವುದನ್ನೇ ಕಾಯಬೇಕಾದ ಪರಿಸ್ಥಿತಿಯಿರುವಾಗ ಆಡಳಿತ ಪರಿಣಾಮಕಾರಿಯಾಗುವುದಾದರೂ ಹೇಗೆ?

ಒಂದು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಕೇಂದ್ರ, ರಾಜ್ಯಸರ್ಕಾರಗಳು ಪಡುತ್ತಿರುವ ಪಾಡು ಕಣ್ಣೆದುರಲ್ಲಿ ಇದೆ. ಶಿಕ್ಷಣದ ಖಾಸಗೀಕರಣ ವಿಪರೀತವಾಗಿದೆ. ಆರೋಗ್ಯವಂತೂ ಖಾಸಗಿಯಲ್ಲದಿದ್ದರೆ ಪರಿಣಾಮಕಾರಿಯಲ್ಲವೇನೋ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಗರೀಕರ ಗಮನವಂತೂ ಬಹುತೇಕ ವಿಧಾನಸಭೆ, ಲೋಕಸಭೆ ಚುನಾವಣೆಗಳ ಮೇಲೆ, ಅಲ್ಲಿ ಏರ್ಪಾಡಾಗುವ ದೊಡ್ಡಪಕ್ಷಗಳ ಸರ್ಕಾರಗಳ ಮೇಲೆಯೇ ಕೇಂದ್ರೀಕೃತವಾಗಿ ಹೋಗಿದೆ. ಇದೇ ಮುಂದುವರೆದರೆ ಆಡಳಿತದ ಪರಿಣಾಮಕತೆಯನ್ನು ನಿರೀಕ್ಷಿಸುವುದರಲ್ಲಿ ಏನೂ ಅರ್ಥವಿರುವುದಿಲ್ಲ.

ನಾಗರೀಕರಿಗೆ ದಿನನಿತ್ಯದ ಅಗತ್ಯಸೇವೆಗಳು ಆಯಾ ಪ್ರದೇಶಗಳಿಗೆ, ಪರಿಸರಗಳಿಗೆ ಅನುಗುಣವಾಗಿ ಸ್ಥಳೀಯ ಮಟ್ಟದಲ್ಲಿಯೇ ವಿಲೇವಾರಿಯಾಗಬೇಕಾಗಿರುವಾಗ ಇಂತಹ ಅಗತ್ಯಸೇವೆಗಳನ್ನು ಜಾರಿಗೆ ತರುವ ಯೋಜನೆಗಳು, ಕಾರ್ಯಕ್ರಮಗಳು, ನಿರ್ಧಾರಗಳನ್ನು ಕೈಗೊಳ್ಳುವವರು ವಿಧಾನಸಭೆ, ಲೋಕಸಭೆಗಳಲ್ಲಿರುವವರಾದರೆ ಅಲ್ಲಿರಬಹುದಾದ ಆಡಳಿತದ ಪರಿಣಾಮಕತೆಯನ್ನು ಊಹಿಸುವುದು ಕಷ್ಟವಲ್ಲ.

ಭಾರತದಲ್ಲಿ ಒಟ್ಟು  2,55,528 ಗ್ರಾಮಪಂಚಾಯಿತಿಗಳಿವೆ. 4520 ನಗರಪಾಲಿಕೆಗಳಿವೆ. 654 ಜಿಲ್ಲಾಪಂಚಾಯಿತಿಗಳಿವೆ. 6824 ತಾಲ್ಲೂಕು ಪಂಚಾಯಿತಿಗಳಿವೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 33,157 ಗ್ರಾಮಪಂಚಾಯಿತಿಗಳಿವೆ. 281 ನಗರಪಾಲಿಕೆಗಳಿವೆ. 30 ಜಿಲ್ಲಾಪಂಚಾಯಿತಿಗಳಿವೆ. 227 ತಾಲ್ಲೂಕು ಪಂಚಾಯಿತಿಗಳಿವೆ.

ಈ ಎಲ್ಲಾ ಸಂಸ್ಥೆಗಳ ಆಡಳಿತದಲ್ಲಿ ಸುಧಾರಣೆಯಾಗುವಂತಾದರೆ, ರಾಜ್ಯ ಮತ್ತು ಕೇಂದ್ರಸರ್ಕಾರಗಳ ಮೇಲಿನ ಹೊಣೆ ಮತ್ತು ಅವಲಂಬನೆಗಳು ಕಡಿಮೆಯಾಗಬಹುದು. ತೆರಿಗೆ ಕೇಂದ್ರೀಕರಣದಿಂದ ಈಗಾಗಲೇ ಕರ್ನಾಟಕ, ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಸಿಗದೇ ಪರಿತಪಿಸುವ ಹಂತಕ್ಕೆ ತಲುಪಿಯಾಗಿದೆ. ನಾಗರೀಕರಿಗೆ ದೊರೆಯಬೇಕಾದ ಮುಕ್ಕಾಲುಪಾಲು ಸವಲತ್ತುಗಳನ್ನು ಸ್ಥಳೀಯ ಸಂಸ್ಥೆಗಳು ನಿಭಾಯಿಸಬೇಕಾಗಿದ್ದರೂ ಅವುಗಳ ಕಾರ್ಯ ನಿರ್ವಹಣೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಇವೆಲ್ಲವನ್ನೂ ಸರಿಪಡಿಸಬೇಕಾದರೆ ಪಂಚಾಯತ್ ರಾಜ್  ವ್ಯವಸ್ಥೆ ಬಲಗೊಳ್ಳಬೇಕು.

ಆಡಳಿತ ವಿಕೇಂದ್ರೀಕರಣವಾಗಬೇಕು. ಸ್ಥಳೀಯ ಆಡಳಿತ ಹೆಚ್ಚು ಸಬಲವಾಗಬೇಕು. ಕನಿಷ್ಟ ಪಕ್ಷ ನಮ್ಮ ಭೌಗೋಳಿಕ ವ್ಯಾಪ್ತಿಯಲ್ಲಿರುವ ಸ್ಥಳೀಯ ಪಂಚಾಯಿತಿಯ ಅಧಿಕಾರ ಎಷ್ಟಿದೆ, ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇದೆಯೇ ಅಥವಾ ಹೆಸರಿಗಷ್ಟೇ ಇದೆಯೇ, ಏನೆಲ್ಲ ಕೆಲಸಗಳಾಗಿವೆ, ಯೋಜನೆಗಳಿವೆ, ಮುಂದೆ ಏನೇನು ಆಲೋಚನೆಗಳಿವೆ ಎನ್ನುವ ನಿಟ್ಟಿನಲ್ಲಿ ಎಲ್ಲ ನಾಗರೀಕರೂ ಯೋಚಿಸುವುದಾದರೆ ಮುಂದೆ ಆಡಳಿತದಲ್ಲಿ ಸ್ವಲ್ಪವಾದರೂ ಸುಧಾರಣೆ ಕಾಣಿಸಬಹುದೇನೋ.

ಸತೀಶನ ಕಾಫಿ ಬ್ರೇಕ್ ಒಂದು ದೊಡ್ಡ ಸೆಷನ್ನೇ ಆದಂತಾಗಿ, ಅಷ್ಟೊಂದು ಬದಲಾವಣೆಯೆಲ್ಲ ನಮ್ಮಲ್ಲಿ ಬರಬೇಕಾದರೆ ಇನ್ನೂ ಎಷ್ಟು ಕಾಲ ಸವೆಸಬೇಕಾದೀತೋ, ಅದೆಷ್ಟು ಮಕ್ಕಳು ಇನ್ನೂ ಬೈಕು, ಕಾರುಗಳ ಸೀಟುಗಳಲ್ಲಿ ಕುಳಿತು ತೂಕಡಿಸುತ್ತಾ ಬಾಲ್ಯವನ್ನು ಸಾಗಿಸಬೇಕೋ ಅಂದುಕೊಳ್ಳುತ್ತಾ ತನ್ನ ಡೆಸ್ಕ್  ಕಡೆ ಹೆಜ್ಜೆಯಿಡುತ್ತಾ, ಫೋನ್ತೆಗೆಯುತ್ತಾ,

“ಈ ವೀಕೆಂಡಲ್ಲಿ ಬಿಡುವಿದ್ರೆ, ಸಿಕ್ಸ್ ಕ್ರಾಸ್ನ ಶಾಂತಿಸಾಗರದಲ್ಲಿ ಕಾಫಿಗೆ ಸಿಗೋಣ್ವಾಸಾರ್? ಪಕ್ಕದಲ್ಲೇ ಪಾರ್ಕ್ ಇದೆ. ನಿಮ್ಮ ಪುಟ್ಟನ ಜೊತೆ ಒಂದಷ್ಟು ಹೊತ್ತು ಹರಟೆ ನಡೆಸಬಹುದು” ಅನ್ನುತ್ತಾ ಮೆಸೇಜಿನ ಸೆಂಡ್   ಗುಂಡಿ ಒತ್ತಿದ.

*************************************************************

Leave a Reply

Back To Top