ಕವಿತೆ
ದುಃಖ
ಚಂದ್ರಿಕಾ ನಾಗರಾಜ್ ಹಿರಿಯಡಕ
ಅಯ್ಯೋ
ಒಡೆದು ಬಿಡು
ಹೆಪ್ಪು ಗಟ್ಟಿರುವ ದುಃಖವ ಎಷ್ಟು
ಹೊತ್ತು ಹೊರಲಿ
ಉಬ್ಬಿರುವ ಗಂಟಲ ಎಷ್ಟೆಂದು ಸಮಾಧಾನಿಸಲಿ
ಅಡರಿರುವ ಕತ್ತಲ
ಬೆಳಕೆಂದು ಕಂಗಳಿಗೆಷ್ಟು ನಂಬಿಸಲಿ
ಹರಿದು, ಒಡೆದು
ಕಡಲಾಗಿಸು
ಹರಿಯಲಿ
ಕಪ್ಪು ನೆತ್ತರು
ಹಾಳು ನೆತ್ತರು
ಬಸಿದಿಟ್ಟ ಒಲವ
ಸುಡು ಸುಡುವ
ಆಟದಲಿ
ಕೈ ಸುಟ್ಟಿದ್ದಲ್ಲ
ಕರಟಿ ಹೋಗಿದೆ
ಬದುಕು
ಒಂದಷ್ಟು ಬವಣೆಗಳ ರಾಶಿ
ಇನ್ನೊಂದಷ್ಟು ಖುಷಿ
ಸತ್ತು ಸತ್ತು ನರಳುತಿದೆ
ಎದೆ ಎತ್ತರಕ್ಕೆ ಬೆಳೆದು ನಿಂತಿದೆ
ಇಲ್ಲ ಭಾವಗಳೆತ್ತರವ ಮೀರುತಿದೆ
ಅಪನಂಬಿಕೆಯೆಂಬೋ ಅರ್ಥಹೀನತೆಗೆ
‘ನೀನು’ ಎಂಬ
ನಾಮಕರಣ ಮಾಡಿ
ಸಿಹಿ ಹಂಚುವುದಿಲ್ಲ
ಅಯ್ಯೋ
ಒಡೆದು ಬಿಡು
ಹಂಚಿ ಹೋಗಲಿ
ಕಹಿಯ ಒಗರೆಲ್ಲಾ
ಆತ್ಮೋದ್ಧಾರದ ಸಣ್ಣ ಬೆಳಕೊಂದು
ಹಾಯಲಿ
ಕದವಿಕ್ಕದ
ಎದೆಯಂಗಳದ ತುಂಬೆಲ್ಲಾ
************************
Wah Wah!!!!
ಧನ್ಯವಾದ