ಅಂಕಣ ಬರಹ
ಪದೇ ಪದೇ ಕಾಡೋದು ಮನುಷ್ಯನ
ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ
ತಲ್ಲಣ ತವಕಗಳು”
ಮಮತಾ ಅರಸೀಕೆರೆ
ಪರಿಚಯ :
ಮಮತಾ ಅರಸಿಕೆರೆ ಕವಯಿತ್ರಿ. ವೃತ್ತಿಯಿಂದ ಶಿಕ್ಷಕಿ. ಚಿಕ್ಕಮಗಳೂರಿನ ಬೆಳವಾಡಿ ಅಪ್ಪನ ಊರು. ತುಮಕೂರು ಅವರ ತಾಯಿಯ ತವರು. ಶಿಕ್ಷಣ ಪಡೆದದ್ದೆಲ್ಲವೂ ಜಾವಗಲ್ ನಲ್ಲಿ. ಶಿಕ್ಷಕ ವೃತ್ತಿಯಲ್ಲಿದ್ದು, ಎಂ.ಎ.ಬಿಎಡ್ ಪಡೆದವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಈಗ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೃತಿಗಳು ಪ್ರಕಟವಾಗಿವೆ. ಕಾವ್ಯ, ಅನುವಾದ ಹಾಗೂ ಮಕ್ಕಳ ೩ ನಾಟಕಗಳು ಎಂಬ ಕೃತಿಗಳನ್ನು ಹೊರ ತಂದಿರುವ ಇವರ ಆಸಕ್ತಿಯ ಕ್ಷೇತ್ರಗಳು ವಿಜ್ಞಾನ, ರಂಗಭೂಮಿ, ಸಂಘಟನೆ, ಸಾಹಿತ್ಯ ಕ್ಷೇತ್ರ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಕವಿತೆ, ಬರಹಗಳು ಪ್ರಕಟವಾಗಿವೆ
ಮುಖಾಮುಖಿಯಲ್ಲಿ ಕವಯಿತ್ರಿ ಮಮತಾ ಅರಸಿಕೆರೆ,
ಕವಿತೆಗಳನ್ನು ಯಾಕೆ ಬರೆಯುತ್ತೀರಿ ?
ಕವಿ ಅನ್ನುವಾಗ ನನಗೆ ಕೆಲವೊಮ್ಮೆ ಸಂಕೋಚವಾಗುತ್ತದೆ. ಬರೆದದ್ದು ಕವಿತೆಗಳಾ? ಅಂತ ಮುಟ್ಟಿ ನೋಡಿಕೊಳ್ಳುವ ಹಾಗೆ. ಆಲೋಚನೆಗಳು ಹಾಳೆಗಿಳಿದಾಗ ಪದ್ಯದ ರೂಪವಾಗುತ್ತದಷ್ಟೆ.
ಕವಿತೆ ಹುಟ್ಟುವ ಘಳಿಗೆ ಯಾವುದು ?
ಕವಿತೆ ಹುಟ್ಟುವ ಸಂದರ್ಭ ಇಂತಿಷ್ಟೆ ಅಂತಿಲ್ಲ. ಸದಾ ಕವಿತೆಯ ಗುಂಗು ನನಗೆ. ಸಮಯಾ ಸಮಯದ ಹಂಗಿಲ್ಲದೆ ಫಳಕ್ಕನೆ ಹೊಳೆವ ಸಾಲುಗಳನ್ನ ಜೋಡಿಸೋದು. ನಂತರ ಧ್ಯಾನಿಸಿ ಸುಧಾರಿಸೋದು. ಬರೆದ ನಂತರ ನೋವೋ ನಲಿವೋ ಜೊತೆಯಾಗುತ್ತದೆ. ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಬರೆಸಿಕೊಳ್ಳುತ್ತಿವೆ
.
ನಿಮ್ಮ ಕವಿತೆಗಳ ವಸ್ತು ಏನು ? ಹೆಚ್ಚಾಗಿ ಕಾಡುವ ಸಂಗತಿಯಾವವು ?
ಈ ಪ್ರಶ್ನೆಗೆ ಉತ್ತರ ಕ್ಲೀಷೆಯಾಗುತ್ತದೇನೋ, ಆದರೂ ಸಾಮಾಜಿಕ ವಿಷಯಗಳೇ ಕವಿತೆಯ ವಸ್ತು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸ್ಪಂದಿಸಿ ಬರೆಯಬೇಕು ಅನ್ನುವ ಅರಿವು ಒಮ್ಮೆ ಮೂಡಿದರೆ ಆ ಜಾಡಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಆ ನಂತರವೂ ವಸ್ತು ವೈವಿಧ್ಯ ಇದ್ದೇ ಇರುತ್ತದೆ, ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು.
ನಿಮ್ಮ ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ?
ತಮಾಷೆ ಅಂದರೆ ಬಾಲ್ಯದಲ್ಲಿ ಪ್ರೌಢಳಂತೆ, ಪ್ರೌಢಳಾದಾಗ ಬಾಲ್ಯದ ಕುರಿತು ಆಲೋಚನೆ ಹೆಚ್ಚು ಕಾಡತೊಡಗಿದ್ದು. ಅವಧಿಯ ಹಂಗಿಲ್ಲ, ಈ ಎರಡೂ ವಿಷಯಗಳು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಶಿಸ್ತಿಲ್ಲ ನನಗೆ!!
ಇವತ್ತಿನ ರಾಜಕಾರಣದ ಬಗ್ಗೆ ನಿಮಗೆ ಏನನಿಸುತ್ತದೆ ?
ಬಹಳ ದಿನಗಳವರೆಗೆ ರಾಜಕೀಯ ಅರ್ಥವೇ ಆಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪಾರದರ್ಶಕ ಆಲೋಚನೆ ನನ್ನದು. ನಂತರದ ದಿನಗಳಲ್ಲಿ ನಿಜದ ಅರಿವಾದಂತೆ ದಂಗಾದೆ. ನಡೆನುಡಿಗೆ ತಾಳಮೇಳವೇ ಇಲ್ಲ. ಆದರ್ಶವೆಂದು ಓದುವ ವಿಚಾರಗಳಿಗೂ ಸಾಮಾಜಿಕ ವ್ಯವಸ್ಥೆಗೂ ಸಂಪೂರ್ಣ ಕೊಂಡಿಕಳಚಿದ ವಾತಾವರಣ. ಹೆಚ್ಚು ಹೇಳದಿರಲು ನನ್ನದೇ ಕಾರಣಗಳಿವೆ. ಇಲ್ಲವೆಂದರೆ ಆ ವಿಷಯವೇ ಪೇಜುಗಟ್ಟಲೇ ತುಂಬೀತು!
ಧರ್ಮ, ದೇವರ ಬಗ್ಗೆ ನಿಮ್ಮ ಅನಿಸಿಕೆಗಳೇನು?
ಧರ್ಮ, ದೇವರು ವೈಯಕ್ತಿಕ ನಂಬಿಕೆಗಳು ಎಂಬುದು ಸರ್ವೇಸಾಧಾರಣ ವಿಷಯ. ಪ್ರಾಮಾಣಿಕತೆ ಪ್ರದರ್ಶಿಸಬೇಕೆಂದರೆ , ಕೆಲವು ದಿನಗಳ ಕಾಲ ದೇವರ ವಿಷಯಕ್ಕೆ ಶ್ರದ್ಧಾಳು ನಾನು. ಧರ್ಮದ ಬಗ್ಗೆ ಅಲ್ಲ. ಕಾಲಕ್ರಮೇಣ ಜಾಗೃತಿಯ ಮಿಂಚು ಹರಿಸಿದ್ದು ನನ್ನ ಮೇಷ್ಟ್ರು ದೇವರ ಹೆಸರಿನ ಸಮೂಹ ಸನ್ನಿಯ ಮೂಲಕ ಜರುಗುವ ಎಷ್ಟೊಂದು ಅವಘಡಗಳು, ಮೋಸಗಳ ಪರಿಚಯವಾಗುತ್ತಾ ದಿಗ್ಭ್ರಮೆಯಾಯಿತು. ಈ ಸಂಚುಗಳನ್ನು ವಿರೋಧಿಸಿದರೆ ಕೋಪಗೊಳ್ಳುವ ಹಿತಾಸಕ್ತಿಗಳು ದೇವರು ಧರ್ಮಗಳ ಮುಖವಾಡಗಳನ್ನು ಪುರಸ್ಕರಿಸುವುದು, ಮಾನ್ಯತೆ ದಕ್ಕಿಸುವ ಬಗ್ಗೆ ಸೋಜಿಗ ನನಗೆ. ಇನ್ನುಳಿದಂತೆ ದೇವರ ನಾಮಧೇಯದ ಮೂಲಕ ಆಯೋಜನೆಗೊಳ್ಳುವ ಸತ್ಕಾರ್ಯಗಳ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ.
ಇವತ್ತಿನ ಸಾಂಸ್ಕೃತಿಕ ವಾತಾವರಣದ ಬಗ್ಗೆ ಏನನಿಸುತ್ತದೆ ?
ಸಾಂಸ್ಕತಿಕ ವಾತಾವರಣದ ಅಲೆಗಳು ಹೆಚ್ಚಾಗುತ್ತಿದೆ. ಎಲ್ಲಾ ಬಗೆಯ ಕ್ಷೇತ್ರಗಳೂ ಈಗ ಬಹಳಷ್ಟು ಬ್ಯುಜಿಯಾಗಿವೆ. ವರ್ಷಕ್ಕೆ ಒಂದೊ ಎರಡೋ ಸಂಖ್ಯೆಯಲ್ಲಿ ಊರಿಗೊಂದರಂತೆ ಜರುಗುತ್ತಿದ್ದ ಕಾರ್ಯಕ್ರಮಗಳು, ವಾರಕ್ಕೊಂದಾದರೂ ಕಾಣಿಸಿಕೊಳ್ಳುತ್ತಿವೆ, ಅದರದ್ದೇ ಆಯಾಮಗಳನ್ನು ಹೊತ್ತು. ಗುಣಮಟ್ಟ, ಹಿನ್ನೆಲೆ, ಅವುಗಳ ಹಿಂದಿನ ಕಾರಣಗಳು ಬಹಳಷ್ಟಿರಬಹುದು. ಆದರೆ ಶುದ್ಧತೆಯ ಪ್ರಮಾಣವನ್ನ ಕಾಪಾಡಿಕೊಳ್ಳಬೇಕೆನಿಸುತ್ತದೆ. ಹೀಗೆ ಹೇಳಿದರೆ ಶುದ್ಧತೆಯ ಮಾಪಕವೇನು ಅಂತ ಕೇಳಿಯಾರು!
ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
ಈ ಪ್ರಶ್ನೆ ಯಾವತ್ತಿನದೂ ಆಗಿದೆ. ಮುಂದೆಯೂ ಇರುತ್ತದೆ. ಈ ವಲಯದೊಳಗೆ ಸಿಲುಕದಿರುವವರೇ ಕಡಿಮೆ!
ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ?
ಚಲನೆಯ ಬಗ್ಗೆ ಕಾಳಜಿಯಿದೆ ಹಾಗಾಗಿ ಖಂಡಿತಾ ಆತಂಕವಿದೆ. ಕಾತುರವಿದೆ. ಕಾಲ ಕಾಲಕ್ಕೆ ಈ ಬಗ್ಗೆ ಸಾಹಿತ್ಯ ರಚನೆಯಾಗಿದೆ. ಉಗ್ರ ಹಾಗೂ ಸೌಮ್ಯ ಪ್ರತಿಕ್ರಿಯೆಗಳೆರಡೂ ಕಾಣಿಸಿಕೊಂಡಿವೆ. ಸದ್ಯಕ್ಕಂತೂ ಚಲನೆಯ ಮಾದರಿ ಆಶಾದಾಯಕವಾಗಿಲ್ಲ. ಹಿಮ್ಮಖವಲ್ಲದ ಮುಂಚಲನೆ ಮುಖ್ಯವಾಗಬೇಕು. ಆದರೆ ಭರವಸೆ ಕಳೆದುಕೊಂಡಿಲ್ಲ.
ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಆಸಕ್ತಿ ನನಗೆ. ಸಂಘಟನೆಯಲ್ಲಿ ತೊಡಗಿ ಸಾಹಿತ್ಯ ಹಿಂದುಳಿದಿದೆ. ಆದರೆ ಸಂಘಟನಾತ್ಮಕ ಕೆಲಸ ಬಹಳ ಮುಖ್ಯವೆನಿಸುತ್ತದೆ ಆಗಾಗ್ಗೆ. ಬಹಳಷ್ಟು ಬರೆಯಬೇಕೆಂಬ ಅಪಾರ ಸಾಮಗ್ರಿ ಜೊತೆಗಿದೆ. ಸೋಮಾರಿತನ ಜತೆಗೂಡಿ ಹಿನ್ನೆಡೆಯಾಗ್ತಿದೆ!
ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ,ಕಾಡಿದ ಬರಹಗಾರರು ಯಾರು ?
ಸಹಜವಾಗಿಯೇ ವಿಶ್ವಮಾನವತೆಯನ್ನು ಬೋಧಿಸಿದ ಕುವೆಂಪು ನಂತರ ಕಾರಂತರು ಇಷ್ಟವಾಗುತ್ತಾರೆ. ಕನ್ನಡದ ಬಹಳಷ್ಟು ಹಿರಿಯ ಲೇಖಕರನ್ನ ಓದಿದ್ದೇನೆ. ಮಾನವತೆ ಹಾಗೂ ಜೀವಪರವಾಗಿ ಬರೆಯುವ ಎಲ್ಲ ಲೇಖಕರು ಆಪ್ತವಾಗುತ್ತಾರೆ. ಆಂಗ್ಲ ಲೇಖಕರಲ್ಲಿ ನೆರೂಡ, ಚಾರ್ಲ್ಸ್ ಬುಕೋವ್‌ಸ್ಕಿ, ಇನ್ನು ಹಿಂದಿಯಲ್ಲಿ ಪ್ರೇಮ್‌ಚಂದ್ ಇಷ್ಟ,
ಈಚೆಗೆ ಓದಿದ ಕೃತಿಗಳಾವವು ?
ಇಲ್ಲೀವರೆಗೂ ಕೊಂಡ ಪುಸ್ತಕಗಳ ಸಂಖ್ಯೆಗಿಂತ ಕಳೆದ ಆರು ತಿಂಗಳಲ್ಲಿ ತರಿಸಿಕೊಂಡ ಪುಸ್ತಕಗಳ ಸಂಖ್ಯೆ ಅಧಿಕ. ಕೊಡುಗೆಯಾಗಿ ಬಂದವೂ ಹೆಚ್ಚು, ಓದಿದ ಪುಸ್ತಕಗಳ ಪಟ್ಟಿ ಕೊಂಚ ಉದ್ದ ಇದೆ!
ನಿಮಗೆ ಇಷ್ಟವಾದ ಕೆಲಸ ಯಾವುದು ?
ಇಷ್ಟವಾದ ಕೆಲಸ ಪ್ರಯಾಣ ಮಾಡುವುದು. ತಿರುಗಾಟವೆಂದರೆ ನೆಚ್ಚು
ನಿಮಗೆ ಇಷ್ಟವಾದ ಸ್ಥಳಯಾವುದು ?
ನಿರ್ದಿಷ್ಟವಾಗಿ ಹೇಳಬೇಕೆಂದರೆ ಇಷ್ಟವಾದ ಸ್ಥಳ ಸಾಬರಮತಿ ಆಶ್ರಮ. ಒಮ್ಮೆ ಭೇಟಿಯಿತ್ತಿದ್ದೆ. ಪ್ರಕೃತಿ ಮೈದುಂಬಿರುವ ಯಾವುದೇ ಸ್ಥಳ ಮತ್ತು ಮರಳುಗಾಡು ಸದಾ ಕುತೂಹಲಕ್ಕೆ ಕಾರಣವಾಗುತ್ತವೆ
ನಿಮ್ಮ ಪ್ರೀತಿಯ ಸಿನಿಮಾ ಯಾವುದು? ಇಷ್ಟಪಟ್ಟ ಸಿನಿಮಾಗಳಾವವು ?
ಕಲಾತ್ಮಕ ಸಿನೆಮಾಗಳು ಇಷ್ಟ. ದಕ್ಷಿಣ ಭಾರತದ ಭಾಷೆಗಳ ಸಿನೆಮಾ, ಬೆಂಗಾಲಿ, ಮರಾಠಿಗಳ ಆಯ್ದ ಸಿನೆಮಾ ನೋಡ್ತೇನೆ. ಇರಾನಿಯನ್ ಮೂವಿಸ್ ಇಷ್ಟಪಟ್ಟು ವೀಕ್ಷಿಸ್ತೇನೆ
ನೀವು ಮರೆಯಲಾರದ ಘಟನೆ ಯಾವುದು ?
ಮುಖ್ಯಪ್ರವಾಹಕ್ಕೆ ವಿರುದ್ಧವಾಗಿ ಈಜುವವರ ಬದುಕಲ್ಲಿ ಮರೆಯಲಾರದ ಅನೇಕ ಘಟನೆಗಳು ಸಂಭವಿಸುತ್ತವೆ. ಹಾಗೇ ನಾನೂ ಹೊರತಾಗಿಲ್ಲ. ಕಹಿ ಸಿಹಿ ಘಟನೆಗಳ ಒಟ್ಟು ಮೊತ್ತ ನನ್ನ ಬದುಕು. ಆಕಸ್ಮಿಕಗಳಿಗೆ ಲೆಕ್ಕವಿಲ್ಲ. ಹಾಗಂತ ವಿಶೇಷ ವ್ಯಕ್ತಿತ್ವ ನನ್ನದಲ್ಲ. ಸರಳ ಸಾಮಾನ್ಯಳಾದರೂ ಸಂದರ್ಭಗಳ ಕಾರಣಕ್ಕೆ ಸಹಜವಾಗಿ ನಾನೆಂದೂ ಬದುಕಲೇ ಇಲ್ಲ ಅನಿಸತ್ತೆ. ಹಾಗಾಗಿ ಸ್ಮರಣೀಯ ಸಂಗತಿಗಳು ಪ್ರಸಂಗಗಳು ಜರುಗುತ್ತಲೇ ಇರುತ್ತವೆ.
ಹೇಳಲೇ ಬೇಕಾದ ಸಂಗತಿಗಳಾವವು ?
ಸಂಘಟನಾತ್ಮಕವಾಗಿ ತೊಡಗಿಕೊಂಡವರ ಬಳಿ ನೂರಾರು ವಿಷಯಗಳಿರುತ್ತವೆ! ಸದ್ಯಕ್ಕೆ ಇಷ್ಟೇ ಹೆಚ್ಚಾಯಿತು. ನಾನೊಬ್ಬಳು ಸಾಮಾನ್ಯ ವ್ಯಕ್ತಿ. ಹೀಗೆ ನೀವು ಪ್ರಶ್ನೆಗಳ ಮುಖಾಂತರ ಸಂದರ್ಶನ ಅಂದಾಗ ಮುಜುಗರವಾಯಿತು. ವಿಶ್ವಾಸಕ್ಕೆ ಶರಣು. ತುಂಬು ವಿನಯ ಹಾಗೂ ನಮ್ರವಾಗಿ ಧನ್ಯವಾದಗಳು. ತುಂಬಾ ಪ್ರೀತಿ
*************************************************************
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಘನತೆಯ ಉತ್ತರಗಳು
ಅಭಿನಂದನೆಗಳು ಮಮತಾ
ಧನ್ಯವಾದ ಸುಧಾ
ತಡವಾಗಿ ನೋಡಿದೆ ಸಾರಿ