ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ವಿಜಯಶ್ರೀ ಹಾಲಾಡಿ

ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!

 ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ?

ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ?

ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು.

ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.

   `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.

  ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು

ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ.

ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ

ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು-

ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.

   ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ.

ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು.

ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.

ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..

 ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.

 ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ.

**************************************************

2 thoughts on “ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

  1. ಉತ್ತಮ ಲೇಖನ. ವಿಜಯ ಶ್ರೀ ಹಾಲಾಡಿ ಮಕ್ಕಳ ಸಾಹಿತ್ಯ ದ ಬಗ್ಗೆ ಚಿಂತನಾತ್ಮಕವಾಗಿ ಬರೆದಿದ್ದಾರೆ…. ನಿಜ ವಾಗಿಯೂ ಯೋಚನೆ ಮಾಡಬೇಕಾದ ವಿಚಾರ…

  2. ವಿಜಯಶ್ರೀಯವರು ವಾಸ್ತವದ ಸತ್ಯವನ್ನು ಚಿಂತನಾತ್ಮಕವಾಗಿ ಹೇಳಿದ್ದಾರೆ. ಚೆನ್ನಾಗಿ ಬರೆದಿದ್ದಾರೆ ಸಾಹಿತ್ಯ ಲೋಕದ ಓದುಗರು ಬರಹಗಾರರು ಎಲ್ಲರೂ ಗಮನಿಸ ಬೇಕಾದ ವಿಷಯ

Leave a Reply

Back To Top