ಸಂಗಾತಿಯೊಡನೆ ನನ್ನ ಪಯಣ

ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ.  ಎಲ್ಲೋ ಕೆಲವರಿಗಷ್ಟೇ ಈ ವಿದ್ಯುನ್ಮಾನದ ಓದುವಿಕೆಗಿಂತ ಅಚ್ಚಾದ ಕಪ್ಪು ಬಿಳುಪಿನ ಸುದ್ದಿಗಳ ಮೇಲೆ ಮಮಕಾರ.  ಹೀಗಿರುವಾಗ ವೆಬ್ ಮ್ಯಾಗಜಿನ್ಗಳು ಪತ್ರಿಕೆಗಳು ಮುಂಚೂಣಿಗೆ ಬರುತ್ತಿರುವುದು ವಿಶಿಷ್ಟವೂ ಅಲ್ಲ ವಿಶೇಷವೂ ಅಲ್ಲ .

“ಕಾಲಾಯ ತಸ್ಮೈ ನಮಃ”  ಎನ್ನುವ ಬದಲಾದ ಪ್ರಪಂಚ ದೆಡೆಗೆ ಸಹಜ ನಡೆ . ಸಂಗಾತಿ ಪತ್ರಿಕೆಯ ಆರಂಭದ ಸಂಪಾದಕೀಯದಲ್ಲಿ ಸಂಪಾದಕರಾದ ಶ್ರೀ ಮಧುಸೂದನ ರಂಗೇನಹಳ್ಳಿ ಅವರು ಹೇಳುವ ಈ ಮಾತುಗಳು ಸಕಾಲಿಕ ಹಾಗೂ ಸಂದರ್ಭೋಚಿತ ..

“ಮೊದಲಿನ ಹಾಗೆ ಪುಸ್ತಕವೊಂದನ್ಮು ಕೈಲಿ ಹಿಡಿದು ಕೂತಲ್ಲೇ ಬೇರು ಬಿಟ್ಟು ಓದುವ ಪುರುಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬ್,  ಫೋನುಗಳ ಮೂಲಕ ಪ್ರಯಾಣ ಮಾಡುತ್ತಾ, ಮನೆ ಕೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.  ಜನರ ಇಂತಹ ಸಾಹಿತ್ಯ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ”

ಹೀಗೆ ರೂಪು ತಳೆದ ಸಂಗಾತಿ ಪತ್ರಿಕೆಗೀಗ ಒಂದು ವರ್ಷ.  ಈ ಸಂತಸದ ಸಂದರ್ಭದಲ್ಲಿ ಪತ್ರಿಕೆ ನಡೆದುಬಂದಿರುವ ಹಾದಿಯನ್ನು ಓದುಗಳಾಗಿ ನಾನು ಗುರುತಿಸಿರುವುದು ಹೀಗೆ.  ಮೊದಲಿಗೆ ನೂರಾರು (ಅಥವಾ ಸಾವಿರ?) ಉದಯೋನ್ಮುಖ ಕವಿಗಳಿಗೆ ಲೇಖಕರಿಗೆ ಗಜಲ್ ಕಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.  ಸಂಗಾತಿಯಲ್ಲಿ ನಮ್ಮ ಕವಿತೆ ಬಂದಿದೆ ಎಂದು ಹೆಮ್ಮೆಯಿಂದ ಲಿಂಕ್ ಪ್ರದರ್ಶಿಸುವವರ ದಂಡೇ ಇದೆ ನನ್ನನ್ನು ಸೇರಿಸಿ.  ನಂತರ ಅಂಕಣ ಬರಹಗಳು . ಹಳೆ ಬೇರು ಹೊಸ ಚಿಗುರು ಎಂಬಂತೆ ಪಾರ್ವತಿ ಐತಾಳರಂತಹ ಹಿರಿಯ ಸಾಹಿತಿಗಳ ಬರಹದ ಸವಿ ಉಣಿಸಿದಂತೆ ಮತ್ತೆ ಹಲ ಕೆಲವರಿಗೆ ಪ್ರಥಮ ಬಾರಿ ಅಂಕಣ ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ . ಹೊಸ ತರಹದ  ಕಥೆ ಕವಿತೆಗಳ ಪ್ರಕಟಣೆ, ವಿಚಾರಪೂರ್ಣ ಲೇಖನಗಳಿಂದ ಪುಸ್ತಕ ಪರಿಚಯಗಳವರೆಗೆ ಪ್ರತಿಭಾನ್ವಿತರ ಪರಿಚಯ, ಸಂದರ್ಶನ ,ಸಂದರ್ಭಾನುಸಾರ ವಿಶೇಷ ಸಂಚಿಕೆಗಳು (ಅಂಬೇಡ್ಕರ್ ಗಾಂಧಿ ಜಯಂತಿ )ಇತ್ಯಾದಿ…… ಏನುಂಟು ಏನಿಲ್ಲ?  ಮೊಗೆದಷ್ಟು ಸಾಹಿತ್ಯದ ಸವಿ ಎಳನೀರು  ಉಣಿಸುವ ಶರಧಿ ನಮ್ಮ ಸಂಗಾತಿ ಪತ್ರಿಕೆ . ಇಲ್ಲಿನ ಅಂಕಣ ಬರಹಗಳ ವಿಶೇಷಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ.

ಕವಿತೆ ಕಾರ್ನರ್ _ಶ್ರೀ  ಮಧುಸೂಧನ ರಂಗೇನಹಳ್ಳಿ

ಎಲ್ಲಕ್ಕಿಂತ ಹೆಚ್ದು ಕಾದು ಕುಳಿತು ಓದುವ ಈ ಕವಿತೆಯ ಅಡ್ಡಾ ನನಗೆ ತುಂಬಾ ಇಷ್ಟದ್ದು.  ಶ್ರೀ ಮಧುಸೂಧನ ಅವರ ವಿಶಿಷ್ಟ ಕವನಗಳ ರಸಾಸ್ವಾದನೆಯ ಅವಕಾಶ ಕಲ್ಪಿಸುವ ಕವಿತೆ ಕಾರ್ನರ್ ನನ್ನಂತೆ ಇನ್ನಷ್ಟು ಅವರ ಅಭಿಮಾನಿಗಳ ಮೆಚ್ಚಿನ ಮೂಲೆ .

ಹೊತ್ತಾರೆ  _  ಅಮೆರಿಕದ ಇಂಜಿನಿಯರ್ ಅಶ್ವತ್ಥ್ ಅವರ ಅಂಕಣ

ನನಗೆ ನೆನಪಿರುವಂತೆ  ಸಂಗಾತಿಯಲ್ಲಿ ಮೊಟ್ಟ ಮೊದಲ ಅಂಕಣ ಹೊತ್ತಾರೆ . ಹೆಸರಲ್ಲೇ ಒಂಥರಾ ಸೆಳೆತವಿದ್ದ ಈ ಅಂಕಣದಲ್ಲಿ ಲೇಖಕರು ತಮ್ಮ ಬಾಲ್ಯದ ನೆನಪುಗಳ ಖಜಾನೆಯನ್ನೇ ಮೊಗೆಮೊಗೆದು ಸುರಿದು ಬಿಟ್ಟಿದ್ದಾರೆ.  ಹೆಚ್ಚಿನ ಅಂಶಗಳ ಸಾಮ್ಯವಿದ್ದ ವಿಷಯಗಳಿಂದ ಅಪ್ಯಾಯವೆನಿಸಿದ ನಮ್ಮದೇ ಅನುಭವಗಳ ನೆನಪಿನೂರಿಗೇ ಹೋಗಿ ಬಂದಂತೆ ಆಗಿತ್ತು .

ಚೆಂದದ ಅಂಕಣದಿಂದ ಸಂಗಾತಿ ಅಂಕಣ ಬರಹಗಳ ಯಾನದ ಮುನ್ನುಡಿಯಾದ ಹೊತ್ತಾರೆ ತುಂಬಾ ಆತ್ಮೀಯವಾಗಿತ್ತು ಎಂದರೆ ಅತಿಶಯೋಕ್ತಿ ಏನಲ್ಲ .

ಶಿವಮೊಗ್ಗ ಜಿಲ್ಲೆಯ ಚಳವಳಿಗಳು ಡಾಕ್ಟರ್ ಸಣ್ಣರಾಮ

ಈ ಅಂಕಣವೂ ತುಂಬಾ ಮಾಹಿತಿಪೂರ್ಣ ಹಾಗೂ ವಿಚಾರ ಪ್ರಚೋದಕವಾಗಿದ್ದು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ತೆರೆದಿಟ್ಟಿತ್ತು

ದಿಕ್ಸೂಚಿ _  ಜಯಶ್ರೀ ಅಬ್ಬಿಗೇರಿ

ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಹ ವಿಚಾರಪೂರ್ಣ ಲೇಖನಗಳ ಮಾಲೆ.  ಹೆಸರಿಗೆ ತಕ್ಕಂತೆ ದಿಕ್ಸೂಚಿಯೇ ಸರಿ ವ್ಯಕ್ತಿತ್ವ ವಿಕಸನದ ಒಂದೊಂದೇ ಅಂಶಗಳನ್ನು ಸುಲಭ ಸರಳ ಭಾಷೆಯಲ್ಲಿ ಮನಸ್ಸಿಗೆ ಮುಟ್ಟುವಂತೆ ವಿವರಿಸುವ ಈ ಅಂಕಣದಿಂದ ತುಂಬಾ ಅನುಕೂಲ ಪಡೆದುಕೊಂಡೆ ನಾನಂತೂ.  ತುಂಬಾ ಇಷ್ಟವಾದ ಕೆಲ ಮಾಲಿಕೆಗಳು “ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ”,  “ಸೋಲಿನ ಸುಳಿಯಲ್ಲಿ ಗೆಲುವಿನ ಹಾದಿ ಇದೆ” , “ತೊಂದರೆ ಕೊಡಬೇಡಿ ಎಂದು ಹೇಳಿಬಿಡಿ” ಎಲ್ಲಾ ಎಷ್ಟೋ ಬಾರಿ ಕೇಳಿದ ವಿಷಯಗಳೇ ಆದರೂ ಇಲ್ಲಿ ಓದುವಾಗ’  “ಹೌದಲ್ವಾ ಇಷ್ಟು ಸುಲಭವಾಗಿ ಮಾಡುವಂಥದ್ದನ್ನು ನಾವೇಕೆ ಪಾಲಿಸಲ್ಲ” ಅನ್ನಿಸುತ್ತೆ. ಎಲ್ಲೋ ನನ್ನ ಹಾಗೆ ಯೋಚಿಸುವವರೂ ಇದಾರಲ್ಲ ಆದರೆ ಮಾಡಬಹುದು ತಪ್ಪಲ್ಲ ಅನ್ನುವ   ಭಾವವನ್ನು ತರುತ್ತೆ. ಸಂಗಾತಿ ಓದುಗರ ಮನ ಸೆಳೆದಿರುವ ಮಾಲಿಕೆಯಿದು. 

ಸಂಪ್ರೋಕ್ಷಣ _  ಅಂಜನಾ ಹೆಗಡೆ

ಸುಂದರ ಭಾವಗಳನ್ನು ಅಂಕಣದ ಚೌಕಟ್ಟಿಗೆ ಹಿಡಿಸುವಂತೆ ಬಂಧಿಸಿ ಚೆಲುವಿನ ಚಿತ್ತಾರದ ರಂಗವಲ್ಲಿ ಹಾಕಿ ಮನ ಮುದಗೊಳಿಸುವ ಭಾವ ಪುಳಕದ ಸಿಂಚನದ ಸಂಪ್ರೋಕ್ಷಣ ಮಾಡಿಸುವುದು ಅಂಜನಾ ಹೆಗಡೆಯವರ ಈ ಅಂಕಣ . ಸಂಗಾತಿಗಾಗಿಯೇ ಮೊದಲ ಬಾರಿ ಅಂಕಣ ಬರೆದ ವಿಶೇಷತೆ ಇವರದು .ಸಂಗಾತಿಯ ಕೊಡುಗೆ ಎಂದರೆ ತಪ್ಪಾಗಲಾರದು.  ಬಣ್ಣದ ಕನಸುಗಳ ಮೋಹಕ ಲೋಕ ತೆರೆದಿಡುವ ಇವರು ಬಣ್ಣಗಳೇ ಇರದಿದ್ದರೆ ಲೋಕ

ಹೇಗಿರುತ್ತಿತ್ತು ಎಂಬ ಯೋಚನೆಗೆ ಪ್ರಚೋದಿಸುತ್ತಾರೆ ಇವರ ಬರಹಗಳ ಸುಂದರ ಲೋಕದಲ್ಲಿ ವಿಹರಿಸುವುದೇ ಸಂಭ್ರಮದ ವಿಷಯ. ಸಂಗಾತಿಯ ಸಾನ್ನಿಧ್ಯದ ಹಿತ ಹೆಚ್ಚಿಸುವ ಸಂಪ್ರೋಕ್ಷಣ ಸಂಗಾತಿಯ ಆಕರ್ಷಣೆಗಳಲ್ಲೊಂದು

ಮೂರನೇ ಆಯಾಮ _ ಶ್ರೀದೇವಿ ಕೆರೆಮನೆ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಪ್ರಸಿದ್ಧ ಅಂಕಣ ಕರ್ತೆಯಾಗಿರುವ ಶ್ರೀದೇವಿ ಕೆರೆಮನೆಯವರ ಅಂಕಣ ಆರಂಭವಾಗಲಿದೆ ಎಂದಾಗ ಸ್ವಾಭಾವಿಕವಾಗಿಯೇ ನಿರೀಕ್ಷೆ ಹೆಚ್ಚಿತ್ತು . ಅದನ್ನು ಸುಳ್ಳು ಮಾಡದೆಯೇ ವಾರವಾರವೂ ಹೊಸ ಪುಸ್ತಕಗಳ ಸರಕು ತಂದು ನಮ್ಮ ಮುಂದೆ ಜೋಡಿಸಿಡುವ ಈ ಅಂಕಣ ಓದಿನ ಆಸಕ್ತಿಯ ಹರಿವಿಗೆ ದಿಶೆ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು ಕವಿತೆಗಳಿರಲಿ ಕಥೆ ಇರಲಿ ಇವರ ವಿಮರ್ಶೆಯ ನಿಕಷದಲ್ಲಿ ಮತ್ತಷ್ಟು ಹೊಳೆಯುವ ಪರಿ ಓದಿಯೇ ಆಸ್ವಾದಿಸಬೇಕು ಇವರ ಬರಹದಿಂದ ಪ್ರೇರೇಪಿತಳಾಗಿ ಕೆಲ ಪುಸ್ತಕಗಳನ್ನು ಕೊಂಡು ಓದಿದ್ದೇನೆ . ಬೌದ್ಧಿಕ ಹಸಿವಿಗೆ ಬುತ್ತಿ ಒದಗಿಸುವ ಅಂಕಣ ಇದು

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಪಾರ್ವತಿ ಐತಾಳ

ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳ ಪರಿಚಯ ಮಾಡಿಸುವ ಅಂಕಣ.  ಉತ್ತಮ ಅನುವಾದಿತ ಹಾಗೂ ಓದಲೇ ಬೇಕಾದ ಕೃತಿಗಳನ್ನು ಸಂಗಾತಿಯ ಓದುಗರ ಗಮನಕ್ಕೆ ತರುವ ಈ ಅಂಕಣಕಾರ್ತಿ ನಿಜಕ್ಕೂ ಅಭಿನಂದನಾರ್ಹರು . ಶ್ರೇಷ್ಠ ಲೇಖಕಿ ಹಾಗೂ ಅನುವಾದಕಿಯಾದ ಇವರಿಂದ ಮತ್ತಷ್ಟು ಕೃತಿಗಳು ಸಂಗಾತಿಯ ಓದುಗರಿಗೆ ದಕ್ಕಲಿ ಎಂಬ ಅಭಿಲಾಷೆ

ಹೊಸದನಿ ಹೊಸ ಬನಿ _ ಡಿ ಎಸ್ ರಾಮಸ್ವಾಮಿ ಹೆಸರಾಂತ ಕವಿಗಳು ಲೇಖಕರು ಆಗಿರುವ ನಮ್ಮ ಜೀವ ವಿಮಾ ಕುಟುಂಬದವರೇ ಆದ ಶ್ರೀ ಡಿ ಎಸ್ ರಾಮಸ್ವಾಮಿಯವರು ಬರೆಯುವ ಈ ಪುಸ್ತಕ ವಿಮರ್ಶೆಯ ಅಂಕಣ ತುಂಬಾ ಸ್ವಾರಸ್ಯಕರ . ಹಾಗೂ

ಅವರ ವಿಮರ್ಶೆಯ ಹೊಳಹುಗಳನ್ನು ಅವಲಂಬಿಸಿ ನಡೆದರೆ ಹೊಸ ಬರಹಗಾರರಿಗಂತೂ ಉತ್ತಮ ಮಾರ್ಗದರ್ಶನ .ಉದಯೋನ್ಮುಖ ಕವಿ ಲೇಖಕರ ಪುಸ್ತಕ ಪರಿಚಯ ಮಾಡಿಕೊಡುವ ಈ ಅಂಕಣವಂತೂ ತಪ್ಪದೇ ಓದಿಸಿಕೊಂಡು ಹೋಗುವ ಗುಣ ಹೊಂದಿದೆ . ಮುಂದೊಂದು ದಿನ ನನ್ನ ಕವನ ಸಂಕಲನವೂ ಈ ಅಂಕಣದಲ್ಲಿ ವಿಮರ್ಶೆಯಾಗುವ ಪುಣ್ಯ ಪಡೆಯಲಿ ಎಂಬ ದೂ(ದು)ರಾಸೆಯೂ ಇದೆ .

ಕಬ್ಬಿಗರ ಅಬ್ಬಿ_  ಮಹಾದೇವ ಕಾನತ್ತಿಲ

ವೃತ್ತಿಯಲ್ಲಿ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತ್ಯ ಸಂಗೀತದ ಅಭಿಮಾನಿಯಾಗಿ ಮೆಟೀರಿಯಲ್ ಸೈನ್ಸ್ ನ ತತ್ವಗಳೊಂದಿಗೆ ರಸಾನುಭೂತಿಯ ಸ್ವಾದವನ್ನು ಪ್ರತಿವಾರ ಉಣಬಡಿಸಿ ಕಬ್ಬಿಗರ ಅಬ್ಬಿಯಲ್ಲಿ ಮೀಯುವ ಅವಕಾಶ ಮಾಡಿಕೊಡುವ ಈ ಅಂಕಣ ನಾನು ತಪ್ಪದೆ ಓದುವ ಅಂಕಣಗಳಲ್ಲೊಂದು . ವಾಸ್ತವದ ವಿದ್ಯಮಾನಗಳೊಂದಿಗೆ ಕವಿಕಲ್ಪನೆಯ ಬೆಸುಗೆಯನ್ನು ಮಾಡಿ ಅದಕ್ಕೆ ತಕ್ಕ ಕಾವ್ಯ ಕವನ ಪರಿಚಯದೊಂದಿಗೆ ಹೊಸ ವಿಸ್ಮಯ ಪ್ರಪಂಚದ ಅನಾವರಣ ಮಾಡುವುದಷ್ಟೇ ಅಲ್ಲ ಕವಿ ಮನಸ್ಸುಗಳನ್ನು ಆ ವಿಶ್ವ ಪರ್ಯಟನೆಗೆ ಜೊತೆಯಲ್ಲೇ ಕೊಂಡೊಯ್ಯುವ ಅದ್ಭುತ ಅನನ್ಯ ಬರವಣಿಗೆ ಇವರದು.  ಕವಿತೆ ಬರೆಯಬೇಕೆನ್ನುವವರೆಲ್ಲಾ  ಓದಲೇಬೇಕಾದ ಲೇಖನ ಮಾಲೆ ಇದು.

ಒಂದು ಲಕ್ಷ ಓದುಗರನ್ನು ತಲುಪಿರುವ ಸಂಗಾತಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಸಂಗಾತಿಯ ಪೋಸ್ಟ್ಗಳಿಗೆ  ಕಾಮೆಂಟ್ಸ್ ಮಾಡುವರು ಇನ್ನಷ್ಟಿ ಹೆಚ್ಚಾಗಬೇಕು .ತಮ್ಮ ತಮ್ಮ ಸಾಮಾಜಿಕ ಜಾಲತಾಣದ ವರ್ಗಗಳಲ್ಲಿ ಸಂಗಾತಿಯನ್ನು ಹೆಚ್ಚೆಚ್ಚು ಪರಿಚಯಿಸಿ ಎಂಬುದು ಓದುಗಳಾಗಿ ನನ್ನ ಕಳಕಳಿಯ ಮನವಿ.

ಇನ್ನು ಪತ್ರಿಕೆ ಹೆಚ್ಚು ಜನರನ್ನು ಮುಟ್ಟಬೇಕಾದರೆ ಇನ್ನಷ್ಟು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳ ಅಂದರೆ ಕಥೆಗಳು ಕಾದಂಬರಿಗಳು ಥೀಮ್ ಬರಹ ಕವಿತೆಗಳು ಸ್ಪರ್ಧೆಗಳು ಆಯೋಜಿಸಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.  ಓದುಗರ ಒಳ್ಳೆಯ ಕಾಮೆಂಟ್ಗಳನ್ನು

ಪ್ರಕಟಿಸಬಹುದು .

ಕುವೆಂಪು ಅವರು ಒಂದೆಡೆ ಹೇಳುತ್ತಾರೆ “ಪತ್ರಿಕೋದ್ಯಮ ಉದ್ಯೋಗದ ಅಥವಾ ಲಾಭದ ಮಟ್ಟಕ್ಕಿಳಿದು ‘ಪತ್ರಿಕೋದ್ಯೋಗಿ’ಯಾಗದಿರುವುದೊಂದು ಶುಭ ಚಿಹ್ನೆ.. ಉದ್ಯೋಗದ ಅಥವಾ ಲಾಭದ ಯೋಚನೆ ಸುಳಿಯಿತೆಂದರೆ ಶಾಸ್ತ್ರೀಯವಾಗಿ ನಿಷ್ಪಕ್ಷಪಾತವಾಗಿ ಉದ್ಯಮವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ” (ಕುವೆಂಪು _ ಲೇಖನ ಪತ್ರಿಕಾ ಮನೋಧರ್ಮ).

ಈ ಮಾತನ್ನು ಪುಷ್ಟೀಕರಿಸುವಂತಹ ಕಾರ್ಯ ಸಂಗಾತಿಯದು.  ಸಾಹಿತ್ಯ ಬೆಳೆಸುವ ಹಾಗೂ ಕನ್ನಡ ಪರ ಸೇವೆಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡಿರುವ ನಿಸ್ವಾರ್ಥ ಮನೋಭಾವದ ಸಂಗಾತಿಗೆ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಅಭಿನಂದನೆಗಳು  .

ಸಂಗಾತಿಯ ಸಾಹಿತ್ಯ ಸಾಂಗತ್ಯ ಕನ್ನಡಿಗರೆಲ್ಲರಿಗೂ ಹೆಚ್ಚಾಗಲಿ, ಎಲ್ಲರ ಹೃದಯ ಮುಟ್ಟಲಿ . ಪತ್ರಿಕೆಯ ಪರಿಧಿ ಇನ್ನಷ್ಟು ವಿಸ್ತಾರಗೊಳ್ಳಲಿ ಮೇರು ಮುಟ್ಟಲಿ ಎಂಬ ಆಶಯ .  ಈ ರಥದ ಸಾರಥಿಯಾಗಿರುವ ಶ್ರೀ  ಮಧುಸೂದನ್ ಅವರಿಗೆ ಹೃದಯಾಂತರಾಳದ ವಂದನೆ ಮತ್ತು ಅಭಿನಂದನೆಗಳು.

                        ಸಂಗಾತಿಯ ಆಭಿಮಾನಿ ಓದುಗಳು

                            

ಸುಜಾತಾ ರವೀಶ್

.

                               

ಸಂಗಾತಿ ಎಂಬ ಪದವು ಸಾಂಗತ್ಯದಿಂದ ಬಂದಿತೆಂದು ಕಾಣುತ್ತದೆ.  ಸ್ನೇಹಕ್ಕೂ ಸಾಂಗತ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಸ್ನೇಹದ ವ್ಯಾಪ್ತಿ ಚಿಕ್ಕದು. ಸಾಂಗತ್ಯದ್ದು ಹಾಗಲ್ಲ. ಅದರ ನಿಘಂಟುವಿನ ಅರ್ಥ ಹೊಂದಾಣಿಕೆ, ಸಾಮರಸ್ಯ ಎಂದು ಕಾಣುತ್ತದೆ. ಅಂದರೆ ಒಂದು ತರದ ಪರಸ್ಪರ ಗೌರವ, ಮರ್ಯಾದೆ ಕೊಟ್ಟು ತೊಗೊಳ್ಳುವುದು. ಅದು ಸಂಪಾದಕರ ಸಂದೇಶಗಳಲ್ಲಿ ಕಾಣುತ್ತದೆ. ಬರಹಗಾರರ ಬಗ್ಗೆ ಅವರು ತೋರುವ ಸೌಜನ್ಯವೇ ಸಂಗಾತಿಯ ಉಸಿರು. ನಾನು ಈ ಒಂದೆರಡು ತಿಂಗಳಿಂದ ಮಾತ್ರ ಸಂಗಾತಿಯ ಸಂಗಾತಿಯಾಗಿದ್ದರೂ, ನನ್ನ ಬಗ್ಗೆ ಪತ್ರಿಕೆಯವರು ತೋರಿದ ಆದರ ಮರೆಯಲಾರದ್ದು. ಅದೇ ಪತ್ರಿಕೆಯ ಜನಾನುರಾಗದ ಅಡಿಪಾಯವಾಗಿದೆ. ಮುಂದೆ ಪತ್ರಿಕೆಯ ಅಂತರ್ವಸ್ತು. ಅನೇಕ ಸಾಹಿತ್ಯದ ವಿಷಯಗಳನ್ನುಣ ಬಡಿಸುವ ಪತ್ರಿಕೆಯವರ ತವಕ ಪತ್ರಿಕೆಯನ್ನು ಸಾಹಿತ್ಯದ ಕಾಮನಬಿಲ್ಲಾಗಿಸಿದೆ ಎಂದರೆ ತಪ್ಪಗಲಾರದು.

ನಿಜಕ್ಕೂ ಪತ್ರಿಕೆಯ ಮೊದಲನೆಯ ವಾರಿಷಿಕೋತ್ಸವ ಈ ತಿಂಗಳ ಇಪ್ಪತ್ತರಂದು ಅಂತ ನೋಡಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಂದು ವರ್ಷದ ಈ ಕೂಸಿನಲ್ಲಿ ಅದೆಷ್ಟು ಪ್ರಬುದ್ಧತೆ ಕಾಣುತ್ತದೆ ಎನ್ನಿಸಿದ್ದಂತೂ ಹೌದು. ನಮ್ಮ ಹೈದರಾಬಾದಿನಲ್ಲಿ ಈ ವಾರ ಸುರಿದು ಜನಜೀವನವನ್ನು ಮತ್ತು ನಮ್ಮ ನೆಂಟರಿಷ್ಟರಿಗೆ ಕೊಟ್ಟ ಅನಾನುಕೂಲತೆಯಿಂದ ನನ್ನ ಲೇಖನ ಸ್ವಲ್ಪ ಮೊಟುಕುಗೊಳಿಸಬೇಕಾಗಿ ಬಂದಿದೆ ಬಿಟ್ಟರೆ ಇಲ್ಲಾಂದರೆ ಇನ್ನೂ ತುಂಬಾ ಬರೆಯುವುದಿತ್ತು.

ಕರ್ನಾಟಕದಲ್ಲಿಯ ಕನ್ನಡ ಪತ್ರಿಕೆಗಳಲ್ಲಿ ಹೊರನಾಡ ಕನ್ನಡಿಗರ ಪರವಾಗಿ ನನ್ನದೊಂದು ವಿನಂತಿ ಇದೆ. ಹೊರನಾಡಲ್ಲಿದ್ದು ನಾವು ಕನ್ನಡಮ್ಮನ ಸೇವೆ ಮಾಡುತ್ತಿರುವವರು. ನಮ್ಮ ಭಾಷೆ ಬರದ ಈ ಊರುಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕನ್ನಡವನ್ನು ಉಳಿಸುವಷ್ಟು ದೊಡ್ಡ ಕೆಲಸವಲ್ಲದಿದ್ದರೂ ಕನ್ನಡದ ಜೊತೆ ನಮ್ಮನ್ನು ಗುರುತಿಸಿಕೊಂಡು ಇಲ್ಲಿಯವರಿಗೂ ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇವೆ. ಆದಕಾರಣ ಹೊರನಾಡ ಕನ್ನಡಿಗರಿಂದ ಯಾವುದಾದರೂ ಬರಹ ಬಂದಲ್ಲಿ ಪತ್ರಿಕೆಗಳವರು, ಅದರ ನಾಣ್ಯತೆ ಸಮರ್ಪಕವಾಗಿ ಕಂಡಲ್ಲಿ, ಪ್ರಕಟಣೆ ಮಾಡುವುದು ವಿಳಂಬ ಮಾಡಬಾರದು. ಕನ್ನಡ ನಾಡಿನ ಪತ್ರಿಕೆಗಳಲ್ಲಿ ನಮ್ಮ ಹೆಸರುಗಳನ್ನು ಕಾಣುವಾಗ ನಮಗಾಗುವ ಸಂತೋಷ ಅಷ್ಟಿಷ್ಟಲ್ಲ. ಮತ್ತೊಮ್ಮೆ ನಮ್ಮ ನಾಡನ್ನು ಹೊಕ್ಕು ಬಂದ ಅನುಭೂತಿ ಪಡೆಯುತ್ತೇವೆ. ಎಲ್ಲೋ ದೂರವಿದ್ದರೂ ನಾವು ನಮ್ಮವರ ಜೊತೆ ಇದ್ದೇವೆ ಎನ್ನುವ ಭಾವನೆ ನಮ್ಮನ್ನು ಇನ್ನೂ ಬರೆಯಲು ಪ್ರೋತ್ಸಹಿಸುತ್ತದೆ. ಈ ನಿಟ್ಟಿನಲ್ಲಿ “ಸಂಗಾತಿ” ಪತ್ರಿಕೆ ನಮಗೆ ತುಂಬಾ ಪ್ರೋತ್ಸಾಹ ಕೊಟ್ಟಿದೆ ಎನ್ನಬಹುದು. ಅದಕ್ಕಾಗಿ ನಾನಂತೂ ತುಂಬಾ ಆಭಾರಿ. ನನ್ನ ಪ್ರಬಂಧಗಳಿಗೆ ನನ್ನ ಸ್ನೇಹಿತರಲ್ಲದೆ ಇತರೆ ಓದುಗರ ಕಮೆಂಟ್ ಕಂಡಾಗ ನಾನು ಸಹ ಒಬ್ಬ ಪರಿಣಾಮಕಾರಿ ಬರಹಗಾರ ಎನಿಸಿ ತುಂಬಾ ಆನಂದವಾಗುತ್ತದೆ.

ಈ ರೀತಿ ತನ್ನ ವೈವಿಧ್ಯ ವಿಷಯಗಳಿಂದ ಸಾಹಿತ್ಯದ ಹೂರಣ ಒದಗಿಸುತ್ತಿರುವ “ ಸಂಗಾತಿ” ಗೆ ಮೊದಲ ವರ್ಷಾಚರಣೆಯ ಶುಭಾಶಯಗಳನ್ನು ಹೇಳುತ್ತಾ, ಪತ್ರಿಕೆ ಕನ್ನಡಿಗರ ಕಣ್ಮಣಿಯಾಗಲಿ ಎಂದು ಹಾರೈಸುತ್ತೇನೆ.

********************************

ಚಂದಕಚರ್ಲ ರಮೇಶ ಬಾಬು

One thought on “ಸಂಗಾತಿಯೊಡನೆ ನನ್ನ ಪಯಣ

  1. ಸಾಂಗತ್ಯ ಪದದ ವಿಶಾಲತೆಯನ್ನು ಚೆನ್ನಾಗಿ ತಿಳಿಸಿದ್ದಲ್ಲದೇ ,ಹೊರನಾಡ ಕನ್ನಡ ಬರಹಗಾರರ ಪ್ರತಿನಿಧಿಯಾಗಿ ಭಾವನೆಗಳನ್ನು ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದೀರಿ.

Leave a Reply

Back To Top