ಗಾಂಧಿ ವಿಶೇಷ

ಮಹಾತ್ಮನಿಗೆರಡು ಕವಿತೆಗಳು

ಕವಿತೆ-ಒಂದು


ನಿನ್ನ ಜಯಂತಿಯ ದಿನ
ನಿನ್ನ ನೆನೆಸುವುದು ಕಮ್ಮಿಯಾಗಿ
ಚರ್ಚೆಗಳೇ ಜಾಸ್ತಿಯಾಗಿದ್ದರು
ಬೇಸರಿಸಬೇಡ ಮಹಾತ್ಮಾ
ಸತ್ಯ ಅಹಿಂಸೆಗಳ ಜೊತೆ
ಉಪವಾಸವೂ ಆಯುಧವಾಗಿಸಿದ್ದು
ಹೊರಗಿನವರಿಗೆ ಸ್ಫೂರ್ತಿಯಾದರೂ
ನಮಗದು ಹಿಡಿಸಲಿಲ್ಲ
ನಿನ್ನ ಹುಟ್ಟು ಹಬ್ಬದ ದಿನ
ಕಕ್ಕಸುಗಳ ಉದ್ಘಾಟನೆ
ಕಡ್ಡಾಯವಾಗಿ ಹೆಂಡ ನಿಷೇಧ
ಮಕ್ಕಳ ಕಿವಿ ಹಿಂಡಿ ಆಚರಣೆ ಇಷ್ಟೇ
ನಿನ್ನ ’ಅರ್ಧರಾತ್ರಿಯ ಹೆಣ್ಣೊಬ್ಬಳ’ ಹೇಳಿಕೆಯನ್ನು
ಪರೀಕ್ಷಿಸಲು ಹೋಗಿ
ಬೀದಿ ಕಾಮುಕರ ತೆಕ್ಕೆಯಲ್ಲಿ
ಅದೆಷ್ಟು ಹೆಣ್ಣುಗಳು ಸತ್ತಿರುವರೋ
ಎಪ್ಪತ್ಮೂರು ವರ್ಷವಾಯಿತು
ಎರಡು ಹೊಸ ತಲೆಮಾರು ಬಂತು
ಪಡೆಪಾಟಲು ಇವರಿಗೇನು ಗೊತ್ತು
ವಿಪರೀತ ಸ್ವತಂತ್ರ ಇವರ ಸ್ವತ್ತು
ಈಗಲೂ ಸರಕಾರ ಕೊಡುವ ರಜೆ
ಟಿವಿಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುದ್ದಿ
ನಿನ್ನನ್ನು ನೆನಪಿಸುತ್ತವೇ ಆಗಲಿ
ಸವಲೆನಿಸುತ್ತಿರುವ ನಿನ್ನ ಸೂಕ್ತಿಗಳಲ್ಲ
ನಾವಿಷ್ಟೇ ಮಹನೀಯರನ್ನು
ಅತಿ ಬೇಗ ಮರೆಯುತ್ತೇವೆ
ಖಳನಾಯಕ ಮನಸ್ಸಿನಲ್ಲದ್ದಷ್ಟು
ನಾಯಕನು ಉಳಿಯುವುದಿಲ್ಲ


ಕವಿತೆ-ಎರಡು

ನಿನ್ನ ಜನರ ಬಿಡುಗಡೆಗಾಗಿ
ನೀನು ಜೀವ ಕೊಟ್ಟೆ
ನಿರಾಳವಾಗಿ ಉಸಿರಾಡುವವರು
ದಾಸ್ಯದ ಕರಾಳತೆಯ
ಆಳ ತಿಳಿಯದೇ
ನಿನ್ನ ನಿಧನದ ಹಲವಾರು
ವರ್ಷಗಳ ನಂತರ
ನಿನ್ನನ್ನು ಪ್ರಶ್ನಿಸುವಾಗ
ಕೂಡಲಿಗಳಲಿ ಕೂತು
ಮುಗುಳ್ನಗು ಹೊತ್ತು
ಶಿಲಾಮೂರ್ತಿಯಾಗಿ ಉಳಿದೆ
ನಿತ್ಯವೂ ಕೈಗಳಲ್ಲಿ ಕುಣಿಯುವ
ನೋಟುಗಳಲ್ಲಿ ಇಣುಕಿದೆ
ಕೆಲಸವೇ ಮುಂದುವರೆಯದ
ಮಂದಗತಿಯ ಕಚೇರಿಗಳ
ಗೋಡೆಗಳ ಮೇಲೆ
ಬೊಚ್ಚು ನಗೆಯ ಸೂಸುತ್ತ ಕಂಡೆ
ನಿನ್ನ ಜನ್ಮದಿನವನ್ನು
ಒಣದಿನವೆಂದಾಗ
ಹುಬ್ಬು ಗಂಟಿಕ್ಕಿದವರ
ಗೊಣಗಾಟವೂ ಸಹಿಸಿದೆ
ಕೀರ್ತಿಸಿದರೂ
ಕಿರೀಟ ತೊಡಿಸಿದರೂ
ಬಯ್ದರೂ
ಬೇಡದವನೆಂದರೂ
ನಿನ್ನ ನೆನೆಯದೆ
ದಿನ ಕಳೆಯಲಾರದಾಗಿದೆ
ಅದಕ್ಕೆ ನೀನು
ಮಹಾತ್ಮನಾಗಿ ಉಳಿದೆ

********************************************

ಚಂದಕಚರ್ಲ ರಮೇಶ ಬಾಬು

8 thoughts on “

  1. ಮೊದಲನೆಯ ಕವಿತೆಯಲ್ಲಿ ಕೆಳಗಿನಿಂದ ಐದವ ಸಾಲಿನಲ್ಲಿ ಒಂದು ತಪ್ಪಾಗಿದೆ. ಅಲ್ಲಿ ದಯವಿಟ್ಟು “ಸವಕಲೆನಿಸುವ” ಎಂದು ಓದಿಕೊಳ್ಳಿ.‌ ಅಚಾತುರ್ಯದಿಂದ ಆದ ತಪ್ಪಿಗೆ ಪತ್ರಿಕೆಯ ಯಾಜಮಾನ್ಯ ಮತ್ತು ಓದುಗರಿಂದ ಕ್ಷಮೆ ಇರಲಿ.

  2. ಮಹತ್ಮಾ ಗಾಂಧಿ ಜಯಂತಿ ಪ್ರಯುಕ್ತ ಎರಡು ಕವನಗಳು ತುಂಬಾ ಚೆನ್ನಾಗಿವೆ ಸರ್ ಅಭಿನಂದನೆಗಳು

    1. ತುಂಬಾ ಚೆನ್ನಾಗಿದೆ ಅಣ್ಣಾ. ಮಹಾತ್ಮನ ತತ್ವ ವನ್ನು ಅರಿದು ಅನುಷ್ಠಾನಕ್ಕೆ ತರಲೇಬೇಕು.

  3. ತುಂಬಾ ಹೃದ್ಯ ಮತ್ತು ಸಾಮಯಿಕ ರಮೇಶಬಾಬುಸರ್.

  4. ಎರಡೂ ಕವನಗಳನ್ನು ಮೂರು ಸಲ ಓದಿದೆ.ಕವನದ ಭಾವಕ್ಕೆ ಇಳಿಯಲಿಲ್ಲವೇನೋ ಎನಿಸಿತು. ಭಾವ ತಿಳಿದ ಮೇಲೆ ಇದರಲ್ಲಿ ನನಗೇನು ಎಂದೆ. ಆಯಿತು ಬಿಟ್ಟು ಬಿಡು ಎಂದು ಸಮಾಧಾನ ಮಾಡಿಕೊಂಡೆ. ಕವನಕ್ಕೆ ಪ್ರತಿಕ್ರಿಯೆ ಯಾಗಿ ಚೆನ್ನಾಗಿತ್ತು ಎಂದು ಒಂದೇ ಶಬ್ದದಲ್ಲಿ ನುಣುಚಿಕೊಳ್ಳ ಬಹುದಿತ್ತು ಎನಿಸಿತು. ಆದರೂ ಅನಾಥವಾಗಿ ರಸ್ತೆಯಲ್ಲಿ ಬಿದ್ದಿರುವ ಯಾರೋ ನಮ್ಮವರಂತೆ ಈ ಎರಡು ಕವನಗಳು ನನ್ನನ್ನು ಇನ್ನೂ ಕಾಡುತ್ತಲೇ ಇವೆ. ಅಭಿನಂದನೆಗಳು ರಮೇಶ್ ಬಾಬು.

  5. ಮಹಾತ್ಮಾ ಗಾಂಧಿ ಅವರ ತತ್ವಗಳನ್ನು ರೂಢಿಸಿಕೊಳ್ಳದೆ, ಬರೀ ಔಪಚಾರಿಕವಾಗಿ ಅವರ ಜಯಂತಿಯನ್ನು ಆಚರಿಸುವ ವಿಪರ್ಯಾಸವನ್ನು ಬಿಂಬಿಸುವ ಕವಿತೆಗಳು ಬಹಳ ಸತ್ವಯುತವಾಗಿವೆ. ‘ ವಿಪರೀತ ಸ್ವಾತಂತ್ರ್ಯ’ ದಿಂದ- ಸ್ವಾತಂತ್ರ್ಯದ ಬೆಲೆ ಅರಿಯದೆ, ಜವಾಬ್ದಾರಿರಹಿತ ವರ್ತನೆಗಳಿಂದ ಸಂಭವಿಸುತ್ತಿರುವ ಪ್ರಸಕ್ತ ವಿದ್ಯಮಾನಗಳ ಸೂಕ್ಷ್ಮ ಉಲ್ಲೇಖ ಕವಿತೆಗಳಲ್ಲಿದೆ. ಮಂದ ಗತಿಯಲ್ಲಿ ಸಾಗುವ ಸರ್ಕಾರಿ ಕಚೇರಿಗಳಲ್ಲಿ ನೇತು ಹಾಕಿದ ಮಹಾತ್ಮಾ ಗಾಂಧಿ ಅವರ ಭಾವಚಿತ್ರದಿಂದ , ಬಾಪೂಜಿ ಅವರು ಇಣುಕಿ ನೋಡುವ ವಿಷಯವನ್ನು ವಿಡಂಬನಾತ್ಮಕವಾಗಿ ಕವಿ ‘ ಅವಲೋಕನಾರ್ಥವಾಗಿ’ ಎತ್ತಿ ತೋರಿದ್ದಾರೆ. ಇಂದು ಗಾಂಧಿ ಜಿ ಅವರನ್ನು ನೆಪ ಮಾತ್ರಕ್ಕೆ ನೆನೆಯದೆ, ಅವರು ಹೇಳಿದ ಶಾಂತಿ ಪಾಠವನ್ನು ಅನುಷ್ಠಾನಕ್ಕೆ ತರುವ ತುರ್ತು ಇಂದಿನ ಸಂದರ್ಭದಲ್ಲಿ ಬಹಳವಾಗಿ ಇದೆ.
    ಇವೆಲ್ಲವುದರ ಮನವರಿಕೆ ಮಾಡಿಕೊಡುವ ಕವಿತೆಗಳನ್ನು ರಚಿಸಿದ ರಮೇಶ್ ಬಾಬು ಅವರಿಗೆ ಅಭಿನಂದನೆಗಳು

  6. ಮೊದಲನೇ ಕವನ ಗಾಂಧಿಯವರ ದಾರಿಯ ಅವಲೋಕನ ಮಾಡಿದರೆ, ಎರಡನೆಯ ಕವನ ಗಾಂಧಿಯವರ ಚಿತ್ರಪಟಕ್ಕೆ ಕಂಡ, ಸ್ವಾತಂತ್ರ್ಯೋತ್ತರ ಭಾರತದ ಸಮಾಜದ ನಡೆಯ ವಕ್ರಗತಿಗಳನ್ನು ಒರೆಗೆ ಹಚ್ಚುತ್ತವೆ.
    ಎರಡೂ ಉತ್ತಮ ಕವನಗಳು.
    ಅಭಿನಂದನೆಗಳು ರಮೇಶ್ ಬಾಬು ಅವರೇ.

Leave a Reply

Back To Top