ಮನಸೆಂಬ ಮರ್ಕಟ

ಕಥೆ

ಮನಸೆಂಬ ಮರ್ಕಟ

ವಾಣಿ ಸುರೇಶ್ ಕೆ.

1200 किमी स्कूटी चलाकर अपने बेटे को वापस लाई दिव्यांग महिला - divyang woman  brought back to her son by driving 1200 km scooty

ಸ್ಕೂಟರ್ ಕೀ , ಬ್ಯಾಗನ್ನು ತೆಗೆದುಕೊಂಡು ಧಾತ್ರಿ ಟಿವಿ ನೋಡುತ್ತಿದ್ದ ಮಗಳು, ಪೇಪರ್ ಓದುತ್ತಿದ್ದ ಗಂಡ, ತಿಂಡಿ ತಿನ್ನುತ್ತಿದ್ದ ಅತ್ತೆಗೆ ಕೇಳಿಸುವಂತೆ ಜೋರಾಗಿ , ” ಇನ್ನು ಮುಂದೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಅಂತ ಡಿಸೈಡ್ ಮಾಡಿದ್ದೇನೆ.ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು  ಪಾಲಿಸಿದರೆ , ನನಗೂ ಆ್ಯಂಗ್ಸೈಟಿ, ಮೈಗ್ರೇನ್‌ ಕಡಿಮೆಯಾಗತ್ತೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಮೆಸೇಜ್ ಮಾಡೋದು, ಫೋನ್

ಮಾಡೋದು ಮಾಡ್ಬೇಡಿ. ಫೋನನ್ನು ಸೈಲೆಂಟ್ ಮೋಡಲ್ಲಿ ಇಡ್ತಾ ಇದ್ದೇನೆ ನಾನು. ಬರ್ಲಾ, ಬೈ” ಎಂದು ಲಿಫ್ಟ್ ಹತ್ತಿದಳು.

      ಸ್ಕೂಟರ್ ಓಡಿಸುತ್ತಿರುವಾಗ ಇವತ್ತು ಮೈ ಮನಸ್ಸು ಹಗುರವಾದಂತೆ ಅನಿಸಿತು ಧಾತ್ರಿಗೆ. ಗೆಳತಿ ಹರಿಣಿ ಹೇಳಿದ್ದು ಎಷ್ಟು ನಿಜ! ತರಗತಿಯಲ್ಲಿ ಪಾಠ ಮಾಡುವಾಗಲೂ ಬರುವ ಮೆಸೇಜ್ ಮತ್ತು ಕಾಲ್ ಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಬ್ಯಾಂಕ್ ಸ್ಟೇಟ್ ಮೆಂಟ್ ತಗೊಂಡು ಬಾ ಇವತ್ತೇ ಲಾಸ್ಟ್ ಡೇಟು ಅನ್ನುವ ಗಂಡ, ದೇವಸ್ಥಾನಕ್ಕೆ ಹೋಗ್ಬೇಕು ಮನೆ ಕೀ ಕಾಣಿಸ್ತಿಲ್ಲ ಅನ್ನೋ ಅತ್ತೆ, ಯಾವತ್ತೋ ಕೊಟ್ಟ ಪ್ರಾಜೆಕ್ಟ್ ವರ್ಕ್ ಮಾಡದೆ ,ಟೀಚರ್ ಕೈಯಲ್ಲಿ ಪನಿಷ್ಮೆಂಟ್ ತಗೊಂಡು ‘ ಇವತ್ತೇ ತಗೊಂಡು ಬಾ’ ಅಂತ ಮಗಳು ಕಳಿಸಿದ ಮೆಟೀರಿಯಲ್ಸ್ ಲಿಸ್ಟ್…. ಇವೆಲ್ಲಾ ಒಂದೊಂದು ಉದಾಹರಣೆ ಅಷ್ಟೇ. ನಾನು ಮಾಡಿದ್ದು ಜಾಸ್ತಿ ಆಯಿತು, ಇನ್ನು ಮುಂದೆ ಮೂವರೂ ಸ್ವಲ್ಪವಾದರೂ ಜವಾಬ್ದಾರಿ ವಹಿಸಿಕೊಳ್ಳಲಿಅಂದುಕೊಳ್ಳುತ್ತಾ ಶಾಲೆ ತಲುಪಿದಳು.

     ಧಾತ್ರಿ ಮತ್ತು ಹರಿಣಿ ಹೇಗೆ ಗೆಳತಿಯರಾದರು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ!! ಧಾತ್ರಿ ಮಿತಭಾಷಿಯಾದರೆ, ಹರಿಣಿಯದ್ದು ಮಲೆನಾಡಿನ ಮಳೆಯಂಥ ಮಾತು.ಕೇಳುವ ಎರಡು ಕಿವಿಗಳಿದ್ದರೆ ಸಾಕು ಹರಿಣಿಗೆ, ಮತ್ತೇನೂ ಬೇಕಿಲ್ಲ.ಅದಕ್ಕೇನೇ ಪಾಪದ ಧಾತ್ರಿಯ ಗೆಳೆತನ ಮಾಡಿದ್ದಾಳೆ ಎಂದು ಎಲ್ಲರ ಅಭಿಪ್ರಾಯ.

   ಇವತ್ತು ಫಸ್ಟ್ ಪೀರಿಯಡ್ ಫ್ರೀ ಇದ್ದುದರಿಂದ ಇವರಿಬ್ಬರೂ ಸ್ಟಾಫ್ ರೂಮಿನಲ್ಲಿದ್ದರು. ಹರಿಣಿ ಅಸಹನೆಯಿಂದ ವಾಟ್ಸಾಪ್ ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದನ್ನು ನೋಡಿ ಧಾತ್ರಿ ನೋಟ್ ಬುಕ್ ತಿದ್ದುತ್ತಾ ಕುಳಿತಳು. ಮೆಸೇಜ್ ಕಳಿಸಿ ಧಾತ್ರಿ ಕಡೆಗೆ ತಿರುಗಿದ ಹರಿಣಿ ಮಾತಿಗೆ ಶುರು ಹಚ್ಚಿದಳು ” ನೋಡು, ನನ್ನ ಮಗಳದು ಒಂದು ವಾರದಿಂದ ಒಂದೇ ಹಠ, ನೆಟ್ ಫ್ಲಿಕ್ಸ್ ಬೇಕಂತ. ಈವಾಗ ಸೆಕೆಂಡ್ ಪಿಯುಸಿ ಅವಳು. ಹಾಳುಮೂಳು ಸೀರೀಸ್ ನೋಡಿ ಕೂತ್ರೆ ಓದೋದು ಯಾವಾಗ? ಅವಳ ಅಪ್ಪನೂ ಅವಳ್ಗೇ ಸಪೋರ್ಟು. ಏನು ಬೇಕಾದ್ರೂ ಮಾಡ್ಕೊಳ್ಳಿ ಅಂತ ಗಂಡಂಗೆ ಮೆಸೇಜ್ ಹಾಕ್ದೆ.ತಲೆ ಕೆಟ್ಟು ಹೋಗ್ತಿದೆ ನಂದು” ಧಾತ್ರಿಗೆ ಏನು ಹೇಳಬೇಕೆಂದು ತೋಚಲಿಲ್ಲ.ಅಷ್ಟರಲ್ಲಿ ಹರಿಣಿಗೊಂದು ಕಾಲ್ ಬಂತು.” ಯಾವ ಟೀ ಶರ್ಟ್? ಬ್ಲ್ಯಾಕ್ ಕಲರ್ ಯೂ.ಎಸ್ ಪೋಲೋ ನಾ? ಮೊನ್ನೆ ಇಸ್ತ್ರಿಗೆ ಕೊಟ್ಟು ನಿನ್ನ ಕಪಾಟಿನಲ್ಲಿ ಇಟ್ಟಿದ್ದೇನೆ ನೋಡು.” ಕಾಲ್ ಕಟ್ ಮಾಡಿ ಪುನಃ ಧಾತ್ರಿ ಕಡೆಗೆ ತಿರುಗಿ, ” ಇವತ್ತು ಫೈನಲ್ ಇಯರ್ ಬಿ.ಇ. ಯವರೆಲ್ಲಾ ಸೇರಿ ಪಾರ್ಟಿ ಮಾಡ್ತಾ ಇದ್ದಾರಂತೆ. ಈ ಮಹಾರಾಯ ಈವಾಗ ಎದ್ದು ಶರ್ಟು ಕಾಣಿಸ್ತಿಲ್ಲ ಅಂತೆ! ಇವರಿಗೆಲ್ಲಾ ಕೈ ಕಾಲ ಹತ್ತಿರ ಕೆಲಸ ಮಾಡಿಕೊಟ್ಟು ಅಭ್ಯಾಸ ಆಗಿಹೋಗಿದೆ.ತಲೆ ಕೆಟ್ಟು ಹೋಗ್ತಿದೆ ನಂದು!” ಅಂದಳು. ಧಾತ್ರಿ ಹೇಗೋ ಕಷ್ಟ ಪಟ್ಟು ನಗು ತಡೆದುಕೊಂಡಳು.

      ಅಷ್ಟರಲ್ಲಿ ಹರಿಣಿಯ ಫೋನಿಗೆ ಠಣ್ ಅಂತ ಒಂದು ಮೆಸೇಜ್ ಬಂತು. ಧಾತ್ರಿ ನೋಟ್ಸ್ ತಿದ್ದುತ್ತಿದ್ದರೂ ಹರಿಣಿಯ ಟೈಪಿಂಗ್ ಸ್ಪೀಡ್ ನೋಡಿ ಏನೋ ಸೀರಿಯಸ್ ವಿಷಯ ಇರಬೇಕೆಂದುಕೊಂಡಳು.ಐದು ನಿಮಿಷ ಮಾತುಕತೆಯಾದ ಮೇಲೆ ಪುನಃ ಹರಿಣಿ ಇವಳ ಕಡೆ ತಿರುಗಿ , ” ನಿನ್ನೆ ನಮ್ಮನೆಯೋರು ಆಫೀಸ್ ನಿಂದ ಬರ್ತಾ ಜಲೇಬಿ ತಗೊಂಡು ಬಂದಿದ್ರು. ಮಾವ ಹೈ ಶುಗರ್ ಪೇಷಂಟ್ ಆದ್ರೂ ಎರಡು ಜಲೇಬಿ ತಿಂದ್ರು!! ಅದಕ್ಕೆ ನಮ್ಮತ್ತೆ ಸಪೋರ್ಟ್ ಬೇರೆ. ಇದನ್ನೇ ನನ್ನ ಓರಗಿತ್ತಿಗೆ ಹೇಳಿದ್ದು ಈವಾಗ.ಇವ್ರಿಗೆ ಹೆಲ್ತ್ ಅಪ್ಸೆಟ್ ಆದ್ರೆ ನಾನೇ ನೋಡಿಕೊಳ್ಬೇಕು ತಾನೇ? ನಂಗಂತೂ ತಲೆ ಕೆಟ್ಟು ಹೋಗ್ತಿದೆ ಕಣೇ.”

     ಈವಾಗ ಧಾತ್ರಿ ಜೋರಾಗಿ ನಕ್ಕಳು! ಆಶ್ಚರ್ಯದಿಂದ ನೋಡುತ್ತಿದ್ದ ಹರಿಣಿಗೆ, ” ನಿನ್ನೆ ನೀನು ನನಗೆ ಒಂದು ದೊಡ್ಡ ಭಾಷಣ ಮಾಡ್ದೆ, ನಾವು ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬಾರದು ಅಂತ.ಇವತ್ತು ನೀನು ಮಾಡ್ತಿರೋದು ಏನು?” ಎಂದು ಕೇಳಿದಳು. ಹರಿಣಿ  “ಇನ್ನೇನು ಮಾಡ್ಲಿ ನಾನು?” ಅನ್ನುವಷ್ಟರಲ್ಲಿ ಬೆಲ್ ಹೊಡೆಯಿತು. ಮುಂದಿನ ಕ್ಲಾಸಿಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೊರಟ ಧಾತ್ರಿಗೆ ಹರಿಣಿ, ” ನೀನು ಇವತ್ತು ಮೊಬೈಲ್ ತರಲಿಲ್ವಾ?” ಎಂದು ಕೇಳಿದಳು. ” ತಂದಿದ್ದೇನೆ. ಆದ್ರೆ ನಿನ್ನ ಭಾಷಣದಿಂದ ಪ್ರಭಾವಿತಳಾಗಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇನೆ.” ಎಂದು ನಗುತ್ತಾ ತರಗತಿಯ ಕಡೆಗೆ ಹೊರಟಳು. ” ಅಂತೂ ಒಬ್ಬರಾದ್ರೂ ನನ್ನ ಮಾತಿಗೆ ಬೆಲೆ ಕೊಟ್ರಲ್ಲಾ ” ಎಂದು ಗೊಣಗುತ್ತಾ ಹರಿಣಿಯೂ ಹಿಂಬಾಲಿಸಿದಳು.

*******************************************

2 thoughts on “ಮನಸೆಂಬ ಮರ್ಕಟ

Leave a Reply

Back To Top